Saturday, October 06, 2012

ರಸ್ತೆಗಳ ಕಾರುಗಳಿಂದ ಮುಕ್ತಗೊಳಿಸೋಣ !!

ನಮ್ಮ  ಸಮಾಜ  ಇಂದು ಭ್ರಮಾಲೋಕದಲ್ಲಿದೆ.   ಕಾರುಗಳ   ಗುಲಾಮಗಿರಿಗೆ  ಎಲ್ಲರೂ   ಒಳಪಟ್ಟಿದ್ದೇವೆ.    ಪರದೇಶಗಳ  ಸಹಾಯದಿಂದ  ತಯಾರುವ ಕಾರುಗಳನ್ನು   ಪರದೇಶಿ ಇಂದನ  ಬಳಸಿ  ಕಾರುಗಳ    ಓಡಿಸುವುದು  ಹೆಮ್ಮೆಯ  ಸಂಕೇತ  ಅನ್ನುವುದೇ ಯೋಚಿಸಿ ನೋಡಿದರೆ    ಮುಜುಗರದ  ವಿಚಾರ.  ಇಂದು   ಸಾರ್ವಜನಿಕ  ಸೊತ್ತಾದ  ರಸ್ತೆಯನ್ನು   ಕಾರು  ಎಂಬ   ವೈಯುಕ್ತಿಕ  ಸೊತ್ತು   ಸಮಾಜಕ್ಕೆ  ಅರಿವೇ  ಆಗದಂತೆ    ಆತಿಕ್ರಮಿಸುತ್ತಿದೆ.   ಪರಿಣಾಮವಾಗಿ   ರಸ್ತೆ ಇರುವುದೇ  ಕಾರುಗಳಿಗಾಗಿ  ಎನ್ನುವ  ಬಾವನೆ ಸಮಾಜ  ಹೊಂದಿರುವುದು ಬೇಸರದ  ವಿಚಾರ.  

ಕೊಳ್ಳುಬಾಕ  ಸಂಸ್ಕೃತಿಯ  ಪ್ರಮುಖ  ಬಾಗಗಳಾದ  ಟಿವಿ  ಮೊಸೈಕಲು ಮೊಬೈಲುಗಳು  ಸಮಾಜವನ್ನು  ಪ್ರಜ್ನೆರಹಿತವಾಗಿ   ಭ್ರಮಾಲೋಕದತ್ತ ದೂಡುತ್ತಿವೆ.  ಜನ    ಕಾರು ಕೊಳ್ಳಲು,  ನಡೆಸಲು   ತಮ್ಮ ದುಡಿಮೆಯ  ಬಹು ಪಾಲು  ಹಣವನ್ನು  ವಿನಿಯೋಗಿಸುತ್ತಿದ್ದಾರೆ.   ಸರಕಾರಗಳು ಕಾರು ಓಡಾಟ  ಸುಗಮಗೊಳಿಸಲು  ಎನ್ನುವ  ನೆಪದಲ್ಲಿ   ರಸ್ತೆಗಾಗಿ  ಬಹುಪಾಲು ಹಣವನ್ನು  ಪೋಲು ಮಾಡಿತ್ತಿದೆ.   ಕಾರು  ದಟ್ಟಣೆಯಿಂದಾಗಿ    ಪರಿಸರ ಮಾಲಿನ್ಯ,  ರಸ್ತೆಯಲ್ಲಿ ತಡೆಯಿಂದಾಗಿ  ಸಮಯ ಪೋಲು ಇತ್ಯಾದಿ ಹಲವಾರು    ಸಮಸ್ಯೆಗಳು.   ವರ್ಷದಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ  ಹೆಚ್ಚು  ಜನ  ರಸ್ತೆ ಅಪಘಾತದಲ್ಲಿ  ಸತ್ತು  ಪ್ರಪಂಚದಲ್ಲಿಯೇ  ಅತಿ ಹೆಚ್ಚು  ರಸ್ತೆ ಅಪಘಾತದಲ್ಲಿ  ಸಾಯುವ  ದೇಶವೆನ್ನುವ ಕುಖ್ಯಾತಿ   ನಮ್ಮದು.     ಅರ್ಥಾತ್  ಒಂದು  ರೀತಿಯಲ್ಲಿ  ಕಾರಿಗಾಗಿ ನಾವು ಎನ್ನುವ  ಸ್ಥಿತಿ  ತಲಪಿದ್ದೇವೆ. 




ರಸ್ತೆಗಳ  ಮುಕ್ತಗೊಳಿಸೋಣ  ಹೋರಾಟ    ಇಂದು ನಿನ್ನೆಯದಲ್ಲ.  ಬಹಳ ಹಿಂದೆಯೇ  ಅದರ    ಕಿಡಿ ಹತ್ತಿದೆ.  ಆದರೆ  ಲಾಭದೆಡೆ  ಮುಖ ಮಾಡಿ ಕೂತ     ಸರಕಾರ  ಹಾಗೂ ಮಾದ್ಯಮಗಳು  ಸದಾ  ಕಾರು ಕಂಪೇನಿಗಳ  ಬೆಂಬಲಕ್ಕಿದ್ದು  ತಕ್ಷಣ  ಅವರ ನಿಯಂತ್ರಣದಲ್ಲಿರುವ     ಅಗ್ನಿಶಾಮಕದಳದ ಉಪಯೋಗ  ಪಡಕೊಳ್ಳುತ್ತಾರೆ.   ಅದುದರಿಂದ   ಈ  ಚಳುವಳಿಯೂ   ಅಣ್ಣಾ  ಹಜಾರೆ  ಸತ್ಯಾಗ್ರಹದಂತಾಗಿ   ಜಯ  ಸಾದಿಸಲಿಲ್ಲ. 

ಜಿ ಎಸ್ ಜಯದೇವರು  ತಮ್ಮ ಪುಸ್ತಕ    ಹಳ್ಳಿಹಾದಿಯಲ್ಲಿ   ಭ್ರಷ್ಟಾಚಾರ    ಜನರು ಒಪ್ಪಿಕೊಳ್ಳುವ    ವಿಚಾರ   ಹೇಳುತ್ತಾರೆ  - ಪ್ರತಿಯೊಬ್ಬರ  ಮನಸ್ಸಿನಲ್ಲೂ  ತಾವೂ  ಸಹ  ಇಂತಹ ಲಾಭದಾಯಕ  ಸ್ಥಾನಕ್ಕೆ  ಏರಿಕೊಂಡು  ಅಧಿಕಾರ ಅಂತಸ್ತು ಹಣ  ಎಲ್ಲವನ್ನೂ  ಗಳಿಸಬೇಕೆಂದು  ಭಾವಿಸುತ್ತಾರೆ. ಇದು ಬಹುಸಂಖ್ಯಾತ  ಬಾರತಿಯರ  ಕನಸು.  ಇಂತಹ ಕನಸನ್ನು ಕಾಣುತ್ತ  ಇದು ಸಾದ್ಯವಾಗದೆ ತಮಗೆ    ಇರುವುದರಿಂದ ವಿಫಲತೆಯ ಅತೃಪ್ತಿಯಲ್ಲಿ  ಯಾರೊ  ಒಬ್ಬ  ಮಾನ  ಮರ್ಯಾದೆ  ಮೈಚಳಿ ಬಿಟ್ಟು  ಮೆಲೇರಿದರೆ  ಅಬಿಮಾನದ  ಮಹಾಪೂರವನ್ನೇ  ಹರಿಸುತ್ತಾರೆ.  ತಮ್ಮ  ’ಕನಸನ್ನು   ಅವನು ನನಸು ಮಾಡಿದ ’   ಎಂದು ಅಂತರಂಗದಲ್ಲಿ ಅವನನ್ನು ಮೆಚ್ಚುತ್ತಾರೆ.  ಹಾಗಾಗಿ    ರಾಜಕೀಯದ  ಹೊಲಸಿನ ಬಗ್ಗೆ  ಅಸಹ್ಯವಾಗಲಿ, ಪ್ರತಿರೋದವಾಗಲಿ  ಇಂದು ಕಂಡು ಬರುತ್ತಿಲ್ಲ.    

 ಬಹುಕಾಲದಿಂದ  ಸಮಾಜಕ್ಕೆ  ಕಾರುಗಳ  ಬಗೆಗೆ  ಈ  ರೀತಿ  ಅಭಿಮಾನ  ಉಂಟೆಂಬ   ಬಾವನೆ  ನಾನು ಹೊಂದಿದ್ದೇನೆ.  ಎಲ್ಲರೂ   ಮುಂದೊಂದು ದಿನ  ಮಾರುತಿ ಸಾಂಟ್ರೊ  ಯಜಮಾನರಾಗುವವರೇ.  ನನಗೆ   ಜ್ಞಾನೋದಯವಾಗಲು     ಪ್ರಮುಖ  ಕಾರಣ - ಸ್ವಾವಲಂಬನೆ ಸಂಕೇತವಾದ  ಸೈಕಲಿನ ಬಗೆಗೆ  ಕೊರೆಯುವ  ಹುಚ್ಚು. :-)          ಕಾರುಗಳು  ಹೇಗೆ  ಸಮಾಜವನ್ನು  ಇಷ್ಟೊಂದು ಗುಲಾಮಗಿರಿಗೆ    ಒಳಪಡಿಸಿತೆಂದು  ವಿವರಿಸಲು  ಮುಖ್ಯ  ಮೈಲುಗಲ್ಲುಗಳಾದ  ವ್ಯಕ್ತಿಗಳ ಸನ್ನಿವೇಶಗಳ   ಸ್ಥೂಲ  ಚಿತ್ರಣ  ಮುಂದೆ   ಕೊಡುತ್ತೇನೆ.  

ಕಾರುಗಳು   ಇಷ್ಟೊಂದು  ಜನಪ್ರಿಯವಾಗಲು  ಅಮೇರಿಕದ   Miller McClintock  ಎಂಬವನ    ಕೊಡುಗೆ ಅಪಾರ.  ಮೂಲತ  ಸ್ಟಾನ್ಪೋರ್ಡಿನಲ್ಲಿ  ಇಂಗ್ಲೀಷು  ಮೇಸ್ಟ್ರಾದ  ಈ  ಬುದ್ದಿಜೀವಿ    ಸುಮಾರು  ವಾಹನ ಸಂಚಾರ   ಮಾಹಿತಿ  ಸಂಗ್ರಹಿಸಿ    ಹಾವರ್ಡ್ ನಲ್ಲಿ  ಈ  ವಿಷಯದಲ್ಲಿ  ಪ್ರಥಮ  ಪಿಚ್ಚಡಿ  ಎನಿಸಿಕೊಂಡವ.  ಮುಂದೆ  ಟ್ರಾಫಿಕ್  ಇಂಜಿನಿಯರುಗಳ  ಪಿತಾಮಹ.  

ಕಳೆದ  ಶತಮಾನದ   ದ್ವಿತೀಯ   ದಶಕದ  ಪ್ರಥಮಾರ್ಧದಲ್ಲಿ       ವಾಹನಗಳೆಂದರೆ ಅತಿ ಹೆಚ್ಚು  ಮಾನವ  ಜೀವನಕ್ಕೆ ಹಾನಿ ಉಂಟು ಮಾಡುವ ವಸ್ತು  ಎಂದು  ಫ್ರೌಡ  ಲೇಖನ  ಬರೆದಾತ.   ಲಾಸ್ ಎಂಜಲಸ್ ಸೇರಿದಂತೆ ಹಲವು ಪಟ್ಟಣಗಳು  ಇವನನ್ನು  ಸಲಹೆಗಾರನಾಗಿ   ಬಳಸಿಕೊಂಡವು.    ರಸ್ತೆ ಅಗಲ  ಮಾಡುವುದರಿಂದ  ಹೆಚ್ಚು ಹೆಚ್ಚು  ವಾಹನಗಳ  ಆಕರ್ಶಿಸಿ  ಚಾಲನೆ  ಮೊದಲಿನಷ್ಟೇ  ಗೊಜಲಾಗಿರುತ್ತದೆ.   ರಸ್ತೆಗಳಲ್ಲಿ  ಕಾರುಗಳ  ಬದಲು  ಟ್ರಾಮುಗಳ     ಚಾಲನೆಗೆ ಅನಿರ್ಬಂದಿತ ಓಡಾಟಕ್ಕೆ    ಹೆಚ್ಚು   ಪ್ರಾಶಸ್ತ್ಯ  ಕೊಡಬೇಕು  ಎಂದಲ್ಲ   ಬರೆದಾತ   ಇವನು.   ಆ  ಕಾಲದಲ್ಲಿಯೇ   ತುಂಬಾ ಮಕ್ಕಳ  ಬಲಿ ತೆಗೆದುಕೊಂಡ  ಕಾರುಗಳ    ಬಗೆಗೆ    ಜನರ ಮನಸ್ಸಿನಲ್ಲೂ  ಒಲುಮೆಯಿರಲಿಲ್ಲ.     ಆದರೆ     ಕಾರು ತಯಾರಕರು  ತುಂಬಾ  ಕಾರುಗಳ ತಯಾರಿಸುತ್ತಿದ್ದಾರಲ್ಲಾ  !!!

ಆಗ    ಈ  ಮಿಲ್ಲರ್     ಮಹಾತ್ಮ  ಸ್ಟೂಡ್ ಬೇಕರ್    ಕಂಪೇನಿಯ   ಸಂಪರ್ಕಕ್ಕೆ  ಬಂದ.    ಅವನ ವರ್ತನೆ   ಇಂದಿನ  ಪರೀಸ್ಥಿತಿಗೆ    ಹೋಲಿಸುವುದಾದರೆ   ಬಿಜೆಪಿಯಿಂದ  ಕಾಂಗ್ರೇಸಿಗೆ   ನೆಗೆದು  ಸೊನಿಯಾ  ಜಪ  ಪ್ರಾರಂಬಿಸಿದಂತಾಯಿತು.      ತಕ್ಷಣ  ಅವನ  ವಾದಸರಣಿಯೆಲ್ಲ  ಬದಲಾವಣೆ ಹೊಂದಿತು.  ಪಟ್ಟಣಗಳ  ರಚನೆ  ಕಾರು ಬಳಕೆಗೆ ಅನುಗುಣವಾಗಿರಬೇಕು.  ಆಗ  ಕಾರಿನ ಯಜಮಾನ  ಬಹಳ  ಸಮಯ ಉಳಿಸಲು    ಹಾಗೂ  ಕಾರ್ಯವೆಸಗಲು ಅನುಕೂಲವಾಗುತ್ತದೆ  ಎಂದ.     ಕಾಲೇಜುಗಳಲ್ಲಿ    ಸ್ಟುಡ್ ಬೇಕರ್  ಕಂಪೇನಿ  ಸಹಾಯದಿಂದ  ಐನೂರಕ್ಕೂ  ಹೆಚ್ಚು  ಮರಿ ಇಂಜೀನಿಯರುಗಳು  ತಯಾರಾದವು.  ಇದೊಂದು    ಕೈಗಾರಿಕೆಗಳು  ಬುದ್ದಿಜೀವಿಗಳ  ತಮ್ಮ  ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ  ಪಾಠ  ಕಲಿತ  ನಿರ್ಣಾಯಕ  ತಿರುವು. 





೧೯೧೯ರಲ್ಲಿ  ಅಮೇರಿಕದ  ರಾಜದಾನಿಯಿಂದ  ಸುಮಾರು ಎಂಬತ್ತು ಮಿಲಿಟರಿ  ಲಾರಿಗಳು ೪೮೦೦    ಕಿಮಿ  ದೂರದಲ್ಲಿರುವ   ಪಶ್ಚಿಮ  ಕರಾವಳಿಯತ್ತ  ಹೊರಡುತ್ತವೆ.  ಏಳುತ್ತಾ  ಬೀಳುತ್ತಾ  ದಾರಿಗಡ್ಡವಾದ ಸೇತುವೆಗಳ  ರಿಪೇರಿ ಮಾಡುತ್ತಾ  ಈ ಪಟಲಾಂ  ೬೨   ದಿನಗಳ  ತರುವಾಯ  ಗುರಿಮುಟ್ಟುತ್ತದೆ.    ಆಗ  ಅದರಲ್ಲಿ ಪುಡಿ ಅಧಿಕಾರಿಯಾಗಿದ್ದ ಐಸೆನ್ ಹೂವರ್ ಮುಂದೆ ಅಮೇರಿಕದ  ಅದ್ಯಕ್ಷನಾಗುತ್ತಾನೆ.   ಈ  ಮದ್ಯೆ  ಈತನಿಗೆ  ಎರಡನೇ   ಮಹಾಯುದ್ದದಲ್ಲಿ   ಹೀಟ್ಲರ್  ಮಹರಾಯ   ರಾಜರಸ್ತೆಗಳ   ಉಪಯುಕ್ತತೆ  ಪಾಠ ಮಾಡಿದ್ದ.   ಹಾಗೆ   ಐಸೆನ್ ಹೂವರ್  ಅಮೇರಿಕ  ದೇಶದಾದ್ಯಂತ   ಸಾಗಾಣಿಕೆಗೆ  ಅನಿವಾರ್ಯವಾದ  ಉತ್ತಮ  ರಸ್ತೆಗೆ  ಅಡಿಪಾಯ ಹಾಕುತ್ತಾನೆ.   




ಈ  ಕಾರು  ಗುಲಾಮಗಿರಿಗೆ  ಕಟ್ಟಡ ವಿನ್ಯಾಸಗಾರರೂ  ತಮ್ಮ  ಕೊಡುಗೆ ಇತ್ತಿದ್ದಾರೆ.  Walter Gropius  /   Le Corbusier   ಮುಂತಾದ   ಹಲವಾರು ಪ್ರಖ್ಯಾತ   ವಿನ್ಯಾಸಗಾರರು  ತಮ್ಮ  ಪಟ್ಟಣಗಳ   ಹಾಗೂ   ಕಟ್ಟಡಗಳ  ಕಾರುಗಳಲ್ಲಿ  ಅಗಮಿಸುವರಿಗೆ  ಅನುಕೂಲವಾಗಲೆಂದು  ನಿರ್ಮಿಸಿದರು.  ಇವರನ್ನು ಮಾದರಿಯೆಂದು  ಒಪ್ಪಿದ  ಉಳಿದ  ವಿನ್ಯಾಸಗಾರರೂ   ಮನೆಯಲ್ಲೊಂದು ಕಾರು ಉಂಟೆಂದು  ಪರಿಗಣಿಸಿ  ಕಾರು ಖರೀದಿಗೆ  ಹಾಗೂ  ಅದರಲ್ಲೇ  ತಿರುಗಾಟಕ್ಕೂ   ಪರೋಕ್ಷ   ಒತ್ತಡ  ಹಾಕಿದರು.    



   
ಹೆಚ್ಚು ಕಾರುಗಳ  ತಯಾರಿಕೆಗೆ ಹೆಚ್ಚು ಜನರಿಗೆ  ಕೆಲಸ ಕೊಡುವುದು   ಹಾಗೂ   ಅದು   ಅಭಿವೃದ್ದಿಗೆ  ಪೂರಕ   ಎಂದು  ಇತರ  ದೇಶಗಳ  ಪುಡಾರಿಗಳಿಗೆ ಮನವರಿಕೆ ಮಾಡಿಕೊಟ್ಟಿರುವುದು  ಹೀಟ್ಲರ್  ಮಹಾಶಯ. ಜರ್ಮನಿಯಲ್ಲಿ ೧೯೩೨ರಲ್ಲಿ     ೩೩೦೦೦ ಜನ ೧ ಲಕ್ಷ  ನಾಲ್ಕು  ಸಾವಿರ  ಕಾರು ತಯಾರಿಸಿದರೆ  ಮೂರು ವರ್ಷ  ಅನಂತರ  ಒಂದು ಲಕ್ಷ  ಜನ  ಕೆಲಸ ಮಾಡಿ  ಮುರೂವರೆ  ಲಕ್ಷ  ಕಾರುಗಳ  ತಯಾರಿಸಿದರು.   ವೈಯುಕ್ತಿಕವಾಗಿ    ಅವನನ್ನು ಉಗಿದರೂ  ಅವನ  ಅಪಾರ   ಬುದ್ದಿವಂತಿಕೆ   ಎಲ್ಲ ದೇಶಗಳೂ ಇಂದು   ಅನುಬವಿಸುತ್ತಿದೆ,  ಅನುಸರಿಸುತ್ತಿದೆ.  ಅವನದೊಂದು   ಅರ್ಥಪೂರ್ಣ  ಹೇಳಿಕೆ  ಹೀಗಿದೆ.  “Through clever and constant application of propaganda, people can be made to see paradise as hell, and also the other way round, to consider the most wretched sort of life as paradise.” Adolf Hitler

ವಾಹನಗಳ  ಗೂಂಡಾಗಿರಿ  ಅರಿವಿರುವ    ನನಗೆ  ರಸ್ತೆಗಳಿರುವುದು  ಯಾರಿಗಾಗಿ ಎನ್ನುವ    ಗೊಂದಲ  ಹೊಸತಲ್ಲ.  ಆದರೆ   ಆರು ತಿಂಗಳು ಹಿಂದೆ ಒಂದು ಅಪಘಾತಕ್ಕೆ ಸಿಲುಕಿದ ನಂತರ  ನನ್ನೂರಿನ   ಜನರ  ವರ್ತನೆ  ಅಘಾತ ಉಂಟು ಮಾಡಿತು.  ಸೇರಿದ  ಗೂಂಡಾ  ಜನರ  ವರ್ತನೆ   ದಾರಿ ತಪ್ಪಿ ಬಂದ ಮೊಸೈಕಲಿಗನ    ಸಮರ್ತಿಸುವಂತಿತ್ತು.  ನೀವು  ಸೈಕಲಿಗಾಗಿ  ಲಕ್ಷ  ರೂಪಾಯಿ ಖರ್ಚು ಮಾಡಿರಬಹುದು, ಅದನ್ನು ತಪ್ಪು  ದಾರಿಯಲ್ಲಿ ಬಂದು   ಪುಡಿ ಮಾಡಿದ್ದಕ್ಕೆ   ಅವನು   ಒಂದೆರಡು ಸಾವಿರ  ಕೊಡುತ್ತಾನೆ  ಎನ್ನುತ್ತಾರೆ    ಸೇರಿದ  ಗೂಂಡಾಗಳು.   

ನಿಜಕ್ಕೂ  ನೋಡಿದರೆ  ಒಬ್ಬ  ಸೈಕಲು ಸವಾರನನ್ನು  ನೀನಾದರೂ  ಸೈಕಲಿನಲ್ಲಿ ಪ್ರಯಾಣ  ಮಾಡಿ  ವಾಹನದಟ್ಟನೆ, ಮಲೀನತೆ  ಕಡಿಮೆ ಮಾಡಿದೆಯಲ್ಲ  ಎನ್ನುವ  ಬಾವನೆಯಲ್ಲಿ  ವಾಹನ ಚಾಲಕ ನಗುಮುಖದಿಂದ ಸ್ವಾಗತಿಸಬೇಕು.  ಆದರೆ  ಇವನೆಲ್ಲಿಂದ ಬಂದ ಶನಿ  ಎನ್ನುವ   ಬಾವನೆ  ಹೆಚ್ಚು  ಫಾಶನ್  ಆಗಿರುವುದು  ಮಾನವ  ಜನಾಂಗದದ  ದುರದೃಷ್ಟ. 



ಕಾರುಗಳ  ಗುಲಾಮಗಿರಿಯಿಂದ  ಹೊರಬರಲು ಪ್ರಯತ್ನಿಸೋಣ.  ರಸ್ತೆಗಳಿರುವುದು  ನಾಗರಿಕರಿಗೆ ಹೊರತು  ವಾಹನಗಳಿಗಲ್ಲ  ಎನ್ನುವ   ಮಾತು ನ್ಯೂಯೊರ್ಕ್  ಮೆಯರ್  ಬ್ಲೂಮ್ ಬೆರ್ಗ್  ಇತ್ತೀಚೆಗೆ   ಘೋಷಿಸಿದ್ದರು.    ನಮ್ಮ  ಸೌಜನ್ಯರಹಿತ  ವರ್ತನೆಗೆ  ಕಾರಣ  ನಮ್ಮಲ್ಲಿನ     ಶೀಘ್ರ  ಬೆಳವಣಿಕೆಯೂ  ಹೌದು.  ಮೊಬೈಲ್  ಆಗಲಿ  ವಾಹನಗಳಾಗಲಿ ದೊರಕುವ ಮೊದಲು ಅರಿವು ಮೂಡಬೇಕಾಗಿತ್ತು.   ಇನ್ನಾದರೂ  ಎಚ್ಚೆತ್ತುಕೊಳ್ಳುವರೆಂದು  ಹಾರೈಕೆ. 

ಕೊನೆ ಮಾತು :  ಈಗ  ಹತ್ತು ತಿಂಗಳಿಂದ  ನಾನು ಕಾರು ಚಾಲನೆಯಿಂದ  ದೂರವಿದ್ದೇನೆ.  ನಡೆಯುವುದು, ಸೈಕಲು ಹಾಗೂ  ಸಾರ್ವಜನಿಕ  ಸಾರಿಗೆ ಉಪಯೋಗದಲ್ಲಿ  ಹಳ್ಳಿಯಲ್ಲಿದ್ದರೂ     ಸುದಾರಿಸಬಹುದೆಂಬ  ದೈರ್ಯ  ಬಂದಿದೆ.  ರಾತ್ರಿ ತಿರುಗಾಟ  ಇತ್ಯಾದಿ  ಸಾದ್ಯವಾಗದಿದ್ದರೂ  ಅನಿವಾರ್ಯ  ಓಡಾಟಕ್ಕೆ  ತೊಂದರೆಯಾಗಿಲ್ಲ.  ಈ ಪರ್ಯಾಯಗಳ  ಬಗೆಗೆ   ಮುಂದೆ ಬರೆಯುತ್ತೇನೆ.     

1 comment:

ashoka vardhana gn said...

ನಮ್ಮನೆ ಓಣಿಯಲ್ಲಿ ಹಿರಿಯ ವಕೀಲರೊಬ್ಬರು ದಾರಿಯನ್ನು ದುರುಪಯೋಗಪಡಿಸಿದಾಗ ಅವರಿಗೇ ದೂರುಕೊಟ್ಟೆ "ಮಳೆಗಾಲದಲ್ಲಿ ನೀರು ನಿಂತು ನಡೆಯುವುದಕ್ಕಾಗುವುದಿಲ್ಲ." ಉತ್ತರ "ನಮ್ಮ ದಾರಿಯಲ್ಲಿ ನಡೆಯುವವರಿಲ್ಲ, ಕಾರುಗಳದ್ದೇ."
ಅವರ ಎದುರು ಮನೆಯವರದು ಇನ್ನೊಂದು ವರಸೆ - ಮೂರು ನಾಲ್ಕು ನಾಯಿ ಸಾಕಿದ್ದಾರೆ. ಅವರಂಗಳದ ಸುಂದರ ಹುಲ್ಲ ಹಾಸು, ಕಾಂಕ್ರೀಟು ಪಾತು ಗಲೀಜಾಗದಂತೆ ನಾಯಿಗಳನ್ನು ಶಿಸ್ತು ಬದ್ಧವಾಗಿ ಬೆಲ್ಟ್ ಹಾಕಿ ಹಿಡಿದುಕೊಂಡೇ ದಾರಿಗೆ ತಂದು ಹೇಲಿಸುತ್ತಾರೆ; ಮತ್ತರ್ಥ ಅದೇ, ಇಲ್ಲಿ ನಡೆಯುವವರಿಲ್ಲ ಅಥವಾ ಇರಬಾರದು!
ಶೋಕವರ್ಧನ