Wednesday, May 28, 2008

ಒಂದು ಕಾಫಿಯ ಕಥೆ

Switerland ನಲ್ಲಿ ಆಗ ಚಳಿಗಾಲ ಕೊನೆಗೊಂಡಿರಲಿಲ್ಲ. ಎಲ್ಲೆಲ್ಲೂ ಹಿಮ. ಜೀವಮಾನದಲ್ಲೇ ಮೊದಲ ಬಾರಿ ಹಿಮ ಕಂಡ ನನಗೆ ಹೊಸ ಅನುಬವ. ಪರ್ವತ ದಾರಿ ಹಿಮದಿಂದ ಮುಚ್ಚಿದ್ದ ಕಾರಣ ನಾನು ನನ್ನ ರಥ ಸಮೇತ ರೈಲಿನಲ್ಲಿ Gottardo ಊರು ತಲಪಿ Youth Hostel ನಲ್ಲಿ ಉಳಕೊಂಡೆ. ಸಂಪೂರ್ಣ ಸುರಂಗ ಮಾರ್ಗದ ಈ ರೈಲಿನ ಪ್ರಯಾಣಕ್ಕೆ ಹಾಸಲು - ನನಗೆ ೪.೯೫ ಶೀಲಿಂಗ್ ಮತ್ತು ಸೈಕಲಿಗೆ ಬರ್ತಿ ೫ ಶೀಲಿಂಗ್, ಅಂದರೆ ನನಗಿಂತ ಸೈಕಲಿಗೇ ಚೂರು ಜಾಸ್ತಿ. ಮರುದಿನ ಎದ್ದು ಅಲ್ಲಿ ಉಪಹಾರ ಮುಗಿಸಿ ನನ್ನಲ್ಲಿದ್ದ ಎಲ್ಲ ಬಟ್ಟೆ ನನ್ನ ಮೈಗೇರಿಸಿ ಹೊರಟೆ. ಮುಂದಿನ ದಾರಿ ಪೂರ್ತಿ ಇಳಿಜಾರು. ಪುಣ್ಯವಶಾತ್ ವಾಹನಗಳಿಗೆಲ್ಲ ಪ್ರತ್ಯೇಕ ರಸ್ತೆಯಾದ ಕಾರಣ ಈ ಮಾರ್ಗ ಪೂರ್ತಿ ನನಗೆ ಎಂಬಂತಿತ್ತು. ಸುಮಾರು ೨೦ ನಿಮಿಷ ಕಳೆಯುವಾಗ ಹಿಮದ ಪ್ರದೇಶ ಕಳೆದಿತ್ತು. ಅಲ್ಲೊಂದು ಊರು. ಚಳಿಯಲ್ಲಿ ದೇಹ ಮರಗಟ್ಟಿತ್ತು. ಬೆರಳಗಳು ಸಲಿಸಾಗಿ ಬಗ್ಗುತ್ತಿರಲಿಲ್ಲ. ಚಳಿಯಿಂದ ಒಮ್ಮೆ ಸುದಾರಿಸಿಕೊಳ್ಳುದು ಅನಿವಾರ್ಯ ಅನಿಸಿತು. ಪ್ರವಾಸಿಗೆ ಅಪರಿಚಿತ ಊರಿನಲ್ಲಿ ತೆರೆದಿರುವ ಬಾಗಿಲು ಹೋಟೆಲ್ ಮಾತ್ರ. ಚಳಿ ಎಂದು ಯಾರದೋ ಮನೆ ನುಗ್ಗುವಂತಿಲ್ಲ. ಪ್ರಯಾಸದಿಂದ ಕೈಚೀಲ ಮತ್ತು ಹೆಚ್ಚುವರಿ ಬಟ್ಟೆ ಕಳಚಿದೆ. ಅಷ್ಟರಲ್ಲಿ ಹುಡುಗಿಯೊಬ್ಬಳು ಬಂದು will you have a cup of coffee ಎಂದಾಗ ಸ್ವರ್ಗ ಕೈಗೆಟಕುವ ಅನುಭವ. It will be very nice ಎಂದೆ. ಹತ್ತು ನಿಮಿಷದಲ್ಲಿ ಪುಟ್ಟ ಲೋಟದಲ್ಲಿ ಹಾಲು ಸಕ್ಕರೆ ಹಾಕದ ಡಿಕಾಕ್ಷನ್ , ಹಾಲಿನ ಪುಟ್ಟ ಪೊಟ್ಟಣಗಳು ಮತ್ತು ಸಕ್ಕರೆ ಬಿಲ್ಲೆಗಳು ತಂದಿಟ್ಟಳು. ಕಾಫಿ ಕುಡಿದಾಗ ಬಿಲ್ ಬಂತು. ಆ ಕ್ಷಣದಲ್ಲಿ ನನಗನಿಸಿದ್ದು ಮೊದಲೇ ಬಿಲ್ ಬರುತ್ತಿದ್ದರೆ ಪ್ರಾಯುಶ: ಕಾಫಿ ಬೇಕಾಗುತ್ತಿರಲಿಲ್ಲ. ಬಿಲ್ ನೋಡಿ ಮೈ ಬಿಸಿಯಾಗುತಿತ್ತು. ಕಾಫಿ ಚಾ ಕುಡಿಯುವ ಹವ್ಯಾಸ ಇರದ ನಾನು ನನ್ನ ಇಡಿ ಒಂದು ವರುಷದ ಪ್ರವಾಸದಲ್ಲಿ ಒಮ್ಮೆ ಮಾತ್ರ ಕಾಫಿ ಹಣ ಕೊಟ್ಟು ಕುಡಿದದ್ದು. ಹಣ ತೆತ್ತು ಹೊಸ ಉತ್ಸಾಹದಿಂದ ಸೈಕಲ್ ಏರಿದೆ.

Thursday, May 22, 2008

ಮನೆಗೆ ಆದಾರವಾಗುವವನಿಗೆ ಶಾಪ ವಿಮೋಚನೆಯಿಲ್ಲ

ಶ್ರೀಪಾದ ಹೆಗಡೆಯವರ 2008 ಮಾರ್ಚ್ ತಿಂಗಳ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಮನೆಯಲ್ಲುಳಿದವ ಹಿಂದುಳಿಯಬೇಕೆ ಸಕಾಲಿಕ ಹಾಗೂ ಅರ್ಥಪೂರ್ಣ. ಹಲವು ಮಜಲುಗಳನ್ನು ಒಳಗೊಂಡ ಬರಹ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಮನದಲ್ಲೇಳುವ ಪ್ರಶ್ನೆಗಳಿಗೆ ಪ್ರಾಯೋಗಿಕ ಪರಿಹಾರಗಳು ದೊರಕದೆ ನಮ್ಮನ್ನು ಮತ್ತಷ್ಟು ಗೊಂದಲಕ್ಕೆ ಈಡು ಮಾಡುತ್ತದೆ.

ಹಳ್ಳಿಯ ಬದುಕೆಂದರೆ ಕೃಷಿ ಮಾತ್ರವಲ್ಲ ನಮ್ಮ ಸಂಸ್ಕೃತಿ ಪರಂಪರೆಯೊಂದಿಗೆ ಹಾಸು ಹೊಕ್ಕಾದ ಜೀವನ ಪದ್ದತಿಯ ಅಳಿವು ಉಳಿವಿನ ಪ್ರಶ್ನೆಯಾಗಿರುತ್ತದೆ. ಬದಲಾವಣೆ ಜಗದ ನಿಯಮ ಎಂದರೂ ಕಳೆದ ಹತ್ತು ವರ್ಷಗಳಲ್ಲಿ ಹಿಂದೆಂದೂ ಕಂಡರಿಯದ ಊಹನಾತೀತ ಬದಲಾವಣೆ ಕಾಣುತ್ತಿದ್ದೇವೆ. ದಿನಕ್ಕೊಂದು ಕಾನೂನು ಎನ್ನುವಾಗ ಈ ದೀರ್ಘ ಕಾಲಮಿತಿಯ ವಿಚಾರಕ್ಕೆ ಸುಲಬವಾಗಿ ಉತ್ತರ ಕಂಡುಕೊಳ್ಳಲು ಕಷ್ಟಸಾದ್ಯ. ಮೊದಲಿಗೆ ವ್ಯಕ್ತಿಯೊಬ್ಬ ಯಾಕಾಗಿ ಮತ್ತು ಯಾರಿಗಾಗಿ ಹಳ್ಳಿಯಲ್ಲಿ ಉಳಿಯಬೇಕು ಎನ್ನುವುದರ ವಿಮರ್ಷೆ ಆಗಬೇಕು.

ಮನೆದೇವರಿಗೆ ತಮ್ಮ ಪರವಾಗಿ ಪೂಜೆ ಸಲ್ಲಿಸಲೋ ? ಕಣಿಲೆ ಉಪ್ಪಿನಕಾಯಿ ಪುನರ್ಪುಳಿ ಸಿಪ್ಪೆ ಕಾಲಕಾಲಕ್ಕೆ ಒದಗಿಸಲೋ ? ತಮ್ಮ ಸಂಸ್ಕೃತಿ ಪರಂಪರೆಗಳ ಜೀವಂತವಿರಿಸಿ ತಳಮಟ್ಟದ ಬೇರು ಉಳಿಸಿಕೊಳ್ಳಲು ಕೊಂಡಿಯಾಗಿರಲೋ ? ಹಳ್ಳಿ ಮನೆ ಒಂದು ಪ್ರವಾಸಿ ತಾಣವಾಗಿ ಕುಟುಂಬದವರಿಗೆ ಉಳಿಸಿಕೊಳ್ಳಲೋ ? ಒಟ್ಟಿನಲ್ಲಿ ಪಟ್ಟಣದಲ್ಲಿರುವವರ ಅನುಕೂಲಕ್ಕೆ ಮಾತ್ರವೋ ಅಥವಾ ನೈಜ ಕಾಳಜಿಯೋ ? ಎಲ್ಲರೂ ವ್ಯಕ್ತಿಗತವಾಗಿ ಕಾರ್ಯಮುಖರಾಗಿರುವಾಗ ಒಬ್ಬನನ್ನು ಮನೆತನಕ್ಕಾಗಿ ಸಮಾಜಕ್ಕಾಗಿ ಬಲಿ ಕೋಡಲು ಪ್ರರೇಪಿಸುವುದು ಸರಿಯಲ್ಲ.

ಪರಂಪರೆ ಉಳಿಯಲೇ ಬೇಕಾದರೆ ಸಮಾಜದ ದೋರಣೆ ಬದಲಾಗಬೇಕು. ಹಳ್ಳಿ ಮನೆ ವ್ಯವಸ್ಥೆಗೆ ಹೆಗಲು ಕೊಟ್ಟವನ ಪರೀಸ್ಥಿತಿ ಗಾಳಿಪಟಕ್ಕೆ ಆಕಾರ ಕೊಟ್ಟ ಕಡ್ಡಿಯಂತೆ ದೂರದಿಂದ ಗೋಚರಿಸದು. ಅದೇ ರೀತಿ ಇವನ ಪಾತ್ರವೂ ನೇಪಥ್ಯಕ್ಕೆ ಸರಿಯುವುದು ಬೇಸರದ ವಿಚಾರ. ಈ ಯುವಕ ಯುವತಿಯರ ಸಬಲಿಕರಣ ಇಂದಿನ ತುರ್ತು ಅಗತ್ಯ.

ಎಳೆಪ್ರಾಯದ ಅಲೆದಾಟದಲ್ಲಿ ಪ್ರಪಂಚದ ಹಲೆವೆಡೆ ಜನರ ಮನೋಬಾವ ಸಮೀಪದಿಂದ ನೋಡಲು ನನಗೆ ಅವಕಾಶವಿತ್ತು. ಪ್ರತಿಯೊಬ್ಬರ ಜೀವನದೃಷ್ಟಿ ದೋರಣೆಗಳು ಅವರು ಬೆಳೆದ ಹಾಗೂ ವಾಸಿಸುವ ಪರಿಸರವ ಹೊಂದಿಕೊಂಡು ರೂಪಿಸಲ್ಪಡುತ್ತದೆ. ಹಳ್ಳಿಯಲ್ಲಿರುವವರಿಗೆ ಕೂಡು ಕುಟುಂಬ ಸಹಜೀವಿಗಳೂ ಸೇರಿದಂತೆ ಸಮುಗ್ರ ದೃಷ್ಟಿ ಹೊಂದಿದ್ದರೆ ನಗರದಲ್ಲಿರುವವರ ಕಾಳಜಿ ಗಂಡ ಹೆಂಡತಿ ಮಕ್ಕಳಿಗೆ ಸಿಮಿತವಾಗಿರುತ್ತದೆ. ತನ್ನ ಇತಿಮಿತಿಯ ಅರಿವಿನಲ್ಲಿಯೇ ಸಾದ್ಯವಾದುದಕ್ಕೆ ತೃಪ್ತಿಪಟ್ಟುಕೊಂಡು ತನ್ನ ಮನೆಯವರ ಬಗೆಗೆ ಸುತ್ತಲಿನವರ ಬಗೆಗೆ ಕಾಳಜಿ ಇಟ್ಟು ಮನಶಾಂತಿ ನೆಮ್ಮದಿಯಿಂದ ಬಾಳಲು ಆಶಿಸುವ ರೈತ ಹುಡುಗ ಕೊನೆಗೆ ತನ್ನ ಪರೀಸ್ತಿತಿ ಅರಿತು ಕಂಗೆಡುತ್ತಾನೆ.

ಹಳ್ಳಿಗಳು ಖಾಲಿಯಾಗುತ್ತಿರುವುದು ನಮ್ಮಲ್ಲಿ ಮಾತ್ರವಲ್ಲ, ಅದೊಂದು ಜಾಗತಿಕ ಸಮಸ್ಯೆ. ಇಲ್ಲಿ ಮುಖ್ಯವಾಗಿ ಕೃಷಿ ಅವಲಂಬಿ ಕುಟುಂಬಗಳಲ್ಲಿ ಅಸ್ತಿ ಹಕ್ಕು ಅನ್ನುವ ಕಾನೂನು ಹಳ್ಳಿಯಲ್ಲಿ ಉಳಿಯುವವನನ್ನು ಬಹಳಷ್ಟು ಶೋಷಿಸುತ್ತದೆ. ಪರಿಣಾಮವಾಗಿ ಇಂದು ಯಾರೂ ಹಳ್ಳಿಯಲ್ಲಿ ಉಳಿಯಲು ಒಪ್ಪ್ಪುವುದಿಲ್ಲ. ಪಟ್ಟಣದಲ್ಲಿ ಇರುವ ಸೊತ್ತು ಹಳ್ಳಿಯ ಹಣದ ಮೂಲವಾದರೂ ವೈಯುಕ್ತಿಕ ಎನಿಸುತ್ತದೆ. ಹಳ್ಳಿಯಲ್ಲಿ ಎಲ್ಲರಿಗೂ ಸಮಪಾಲು ಎನ್ನುವ ದ್ವಿಮುಖ ದೋರಣೆ ಆಚರಣೆ ಕಾಣುತ್ತೇವೆ. ಬಂದುಗಳು ಬಂದಣಿಕೆಗಳಾಗಿ ಮೂಲ ಮನೆಯೇ ನಾಶವಾಗುವುದು ನಮ್ಮೆದುದುರು ಕಾಣುವ ವಿಚಾರ. ಹಳ್ಳಿಯಲ್ಲಿ ನೊಗ ಹೊತ್ತವನ ನಡುಪ್ರಾಯದ ಸಮಸ್ಯೆಗಳು ಸೂಕ್ಶ್ಮವಾಗಿ ಅವಲೋಕಿಸುತ್ತಿರುವ ನಂತರದ ಜನಾಂಗದವರಲ್ಲಿ ಬವಿಷ್ಯದ ಬಗೆಗೆ ಗಲಿಬಿಲಿ ಉಂಟು ಮಾಡುತ್ತದೆ.

ಅಮೇರಿಕದಲ್ಲಿ ಪದವಿಪೂರ್ವ ಶಿಕ್ಷಣ ಪೊರೈಸುವ ಸನ್ನಿವೇಶದಲ್ಲಿ ಶಿಕ್ಷಕ ರಕ್ಷಕ ಹಿತಚಿಂತಕರ ಅನೌಪಚಾರಿಕ ಸಲಹಾತ್ಮಕ ರಕ್ಷಣಾ ಜಾಲ ನಿರ್ಮಿಸಲ್ಪಡುತ್ತದೆ. ಎಲ್ಲರೂ ಸೇರಿ ಚರ್ಚಿಸುತ್ತಾರೆ. ಅದೊಂದು ಆ ವ್ಯಕ್ತಿಯ ಶ್ರೇಯೋಭಿವೃದ್ದಿಗೆ ಪೂರಕವಾಗುವ ಅನುಕರಣೀಯ ವಿದಾನ. ಇಲ್ಲಿ ಅನಿವಾರ್ಯವಾಗಿ ಮನೆಯಲ್ಲೊಂದು ಜನ ನೆಲೆನಿಲ್ಲಬೇಕು ಎಂದು ತೀರ್ಮಾನ ಕೈಗೊಳ್ಳುವ ಸಂದರ್ಬದಲ್ಲಿ ಎಲ್ಲರೂ ಹಿತಚಿಂತಕರೆಂದು ತೋರ್ಪಡಿಸುತ್ತಾ ಈ ಪೆದ್ದನನ್ನು ಮರಹತ್ತಿಸುತ್ತಾರೆ.

ಶ್ರೀಪಾದ ಹೆಗಡೆಯವರು ಹೇಳುವಂತೆ ಮದುವೆ ಮಾಡುವಾಗಲೇ ಅವರ ಹಕ್ಕಿನ ಇತ್ಯರ್ಥಮಾಡಿ ಕಳುಹಿಸ ಬೇಕಾದೀತೇನೊ ಅನ್ನುವ ವಿಚಾರ ಪ್ರಆಯೋಗಿಕವಲ್ಲ. ಅಸಹಾಯಕ ಅನಾಥ ಬಾವನೆ ಮನೆಮಾಡಿರುವಂತಹ ಮದುಮಗಳಲ್ಲಿ ಅವಳ ಸಂಪೂರ್ಣ ಹಕ್ಕು ಬರೆದು ಕೊಡುವಂತೆ ಹೇಳಲು ಯಾರಿಗೂ ಮನಸು ಬಾರದು. ಸ್ವಂತ ಸಹೋದರಿಯಿಂದ ಸಮಸ್ಯೆ ಬರಬಹುದೆಂಬ ದೂರಾಲೋಚನೆ ಯಾರಿಗೂ ಇರುವುದಿಲ್ಲ. ಅದೊಂದು ಬೇಲಿ ಹಾಕದ ನಿರ್ಲಕ್ಷಿತ ಗಡಿ. ಸಮಸ್ಯೆ ಬಂದಾಗ ಪರಿತಪಿಸುವುದೊಂದೇ ದಾರಿ.

ಅವಿಭಕ್ತ ಕುಟುಂಬದಲ್ಲಿ ಮನೆಯ ಯಜಮಾನ ಸತ್ತಾಗ ಅರ್ಥಾತ್ ಮಹಾಭಾರತ ಜರಗುತ್ತದೆ. ಅಧಿಕಾರ ಬದಲಾವಣೆ ಎಂದೂ ಶಾಂತಿಯುತವಾಗಿ ಸೌಹಾರ್ದತೆಯಲ್ಲಿ ಜರಗುವುದಿಲ್ಲ. ಹಲವೆಡೆ ಕುಟುಂಬದ ಯಜಮಾನನ ಒತ್ತಡಕ್ಕೆ ತಲೆ ಬಾಗಿ ಹಳ್ಳಿಗೆ ವಾಪಾಸಾದವ ನಂತರ ಜೀವನವಿದೀ ತನ್ನನ್ನು ಶಪಿಸಿಕೊಳ್ಳುವ ಪರೀಸ್ಥಿ ಉಂಟಾಗುತ್ತದೆ. ಯಜಮಾನರ ಸಾವಿಗೆ ಕಾದ ಜನ ಸಮಾನಾಸಕ್ತರ ವೇದಿಕೆ ನಿರ್ಮಿಸಿಕೊಳ್ಳುತ್ತಾರೆ. ಎಲ್ಲಾರೂ ಹಕ್ಕು ಸ್ಥಾಪನೆಗೆ ಮುಸುಕುಕಿನೊಳಗೆ ಹೋರಾಡಿ ಹೊಸ ಸಮೀಕರಣ ಏರ್ಪಡಿಸಿಕೊಳ್ಳುತ್ತಾರೆ. ಹಲವು ಸ್ವಾರ್ಥಿಗಳು ಹಿತಚಿಂತಕರೆನ್ನುವ ನೆಲೆಯಲ್ಲಿ ಈ ಚರ್ಚೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ತನ್ನು ನಡು ಪ್ರಾಯದ ವರೆಗಿನ ಆಯುಸ್ಸು ಕುಟುಂಬಕ್ಕಾಗಿ ತೇಯ್ದ ವ್ಯಕ್ತಿಗೆ ಒಂದೇ ಮತವಾಗಿ ಅಲ್ಪಸಂಖ್ಯಾತನಾಗುತ್ತನೆ. ಅವನಿಗೆ ಇತರ ಜೀವನವಕಾಶಗಳು ಮುಚ್ಚಿಕೊಂಡು ಅಳಿವು ಉಳಿವಿನ ಅನ್ನದ ಪ್ರಶ್ನೆಯಾಗುತ್ತದೆ. ಪಾಲುದಾರರು ಎನ್ನುವವರಿಗೆ ಸಿಕ್ಕರೆ ಪಾಯಸ ಅಷ್ಟೇ.

ಮನೆಯಲ್ಲಿ ನಡೆದು ಬಂದ ದಾಖಲೆಗಳ ಬಗೆಗೆ ಸ್ಪಷ್ಟ ದಾಖಲೆಗಳಿದ್ದರೂ ಅವು ಹೆಚ್ಚಾಗಿ ಪಟ್ಟಣದಲ್ಲಿರುವ ಬಹುಮತಕ್ಕೆ ಅನುಕೂಲವಲ್ಲದ ರೀತಿಯಲ್ಲಿರುವ ಕಾರಣ ಅವುಗಳು ಉಪಯೋಗಕ್ಕೆ ಬರುವುದಿಲ್ಲ. ಮೀಟರ್ ಲೆಕ್ಕ ದನಿಗೆ (ನಾವು ಹಣ ಕೊಡುವಾಗ ಮಾತ್ರ ) ಎಂದು ರಿಕ್ಷವಾಲರು ಹೇಳುವಂತಾಗುತ್ತದೆ.

ಮೊದಲೇ ಕಾನೂನು ರೀತ್ಯಾ ಒಪ್ಪಂದ ಮಾಡಿಕೊಳ್ಳೋಣ ಎಂದರೆ ಹಲವು ವ್ಯವಹಾರಿಕ ಹಾಗೂ ಕಾನೂನು ರೀತ್ಯಾ ತೊಡಕುಗಳು. ಕೃಷಿಕನಲ್ಲದ ವ್ಯಕ್ತಿ ದೇಶದ ಹಲವು ಬಾಗದಲ್ಲಿ ಕೃಷಿ ಬೂಮಿ ಖರೀದಿ ಮಾಡುವಂತಿಲ್ಲ. ಹಲವರಿಗೆ ತೇರಿಗೆ ಇತ್ಯಾದಿ ಪರೋಕ್ಷ ಅನುಕೂಲಕ್ಕೆ ಕೃಷಿ ಭೂಮಿ ಮೇಲೆ ಕಣ್ಣಿರುತ್ತದೆ. ಹಾಗಾಗಿ ಕೃಷಿಕ ಹಣೆಪಟ್ಟಿ ಕಳದುಕೊಳ್ಳಲು ಹಲವರು ತಯಾರು ಇರುವುದಿಲ್ಲ. ಪರಿಮಿತಿ ಕಾನೂನು ಹಲವು ಕಡೆ ಸಮಸ್ಯೆ ತಂದೊಡ್ಡುತ್ತದೆ.

ಅಳಿಯಕಟ್ಟು ಸಮಾಜದಲ್ಲಿ ಹುಡುಗರು ಹಳ್ಳಿಯಲ್ಲಿ ಉಳಿದರೂ ತಾನು ಇಲ್ಲಿಂದ ಬಿಟ್ಟು ಹೆಂಡತಿ ಮನೆಗೆ ಹೋಗುವವನೆಂಬ ಬಾವನೆಯಲ್ಲಿ ಕೃಷಿ ಅಭಿವೃದ್ದಿಯಲ್ಲಿ ಹೆಚ್ಚಿನ ಆಸಕ್ತಿ ತೋರದಿರುವುದುಂಟು. ಅದುದರಿಂದ ಎಲ್ಲರಿಗೂ ಸಮಪಾಲು ಶೇಷ ಮಾತ್ರ ತನಗುಳಿಯುವುದು ಎನ್ನುವ ಚಿಂತೆನೆ ಕೃಷಿ ಕುಟುಂಬದ ಹುಡುಗರನ್ನು ನಿರುತ್ಸಾಹಗೊಳಿಸಿದರೆ ಕನ್ಯಾಪಿತೃಗಳನ್ನು ಬೆದರಿಸುತ್ತದೆ. ಇಲ್ಲಿ ಸಮಾಜವನ್ನು ಸರಿದಾರಿಗೆ ತಂದರೆ ಮಾತ್ರ ಸಂಸ್ಕೃತಿ ಪರಂಪರೆಗಳು ಉಳಿದಾವು.

ಇವರಲ್ಲೂಟ ಅವರ ಪರ ಆಟ ಮಾಡುವ ಬಹಳ ಜನ ತಂದೆ ತಾಯಂದಿರು ನಮ್ಮಲ್ಲಿದ್ದಾರೆ. ಮೊನ್ನೆ ಅವನು ಪೇಟೆಯಿಂದ ಬರುವಾಗ ನಶ್ಯ ತರಲಿಲ್ಲ ಎನ್ನುವುದೇ ಮನೆಯಲ್ಲೊಂದು ಸಮಸ್ಯೆ ಹುಟ್ಟಿಸಲು ಸಾಕು. ಈ ರೀತಿ ಮನೆ ಒಡೆಯಲು ಸಂಪರ್ಕ ಕ್ರಾಂತಿ ಉಂಟು ಮಾಡಿದ ದೂರವಾಣಿ ತನ್ನದೇ ಕೊಡುಗೆ ಸಮರ್ಪಿಸುತ್ತದೆ. ಕಣ್ಣು ತಪ್ಪಿಸಿ ಮಾಡುವ ಈ ಕರೆಗಳಿಂದ ಕಾಡುವ ಅಪರಾದಿ ಪ್ರಜ್ನೆ ತಂದೆ ತಾಯಿಗೆ ಮನೆಯಲ್ಲಿರುವವನ ಮೇಲೆ ಅವನಿಗೆ ಅರಿವೇ ಇಲ್ಲದೆ ಸಿಟ್ಟು ಅಸಹನೆಗೆ ದಾರಿ ಮಾಡಿಕೊಡುತ್ತದೆ. ಪಟ್ಟಣದಲ್ಲಿರುವ ಮಕ್ಕಳ (ಅ) ನೈತಿಕ ಬಾಯಿ ಮಾತಿಗೆ ಸಿಮಿತವಾಗುವ ಬೆಂಬಲ ಸೌಹಾರ್ದತೆ ಕದಡಿ ವಾಪಾಸು ಬಾರದ ಸ್ಥಿತಿ ತಲಪಿಸುತ್ತದೆ. ಈ ಸಂಪರ್ಕದಿಂದ ಪ್ರಪಂಚದ ಯಾವುದೇ ಮೂಲೆಯಿಂದ ಕಿಡಿ ಹಚ್ಚಲು ಮತ್ತು ಉರಿಯುತ್ತಿರುವ ಬೆಂಕಿಗೆ ನಿರಂತರ ಇಂದನ ಪೊರೈಸಲು ಸಾದ್ಯವಾಗುತ್ತದೆ.

ಮಗ ಸೊಸೆ ಯಾ ಮಗಳು ಅಳಿಯನ ಜತೆ ಇರಬಹುದು. ಹಿರಿಯ ನಾಗರೀಕರಲ್ಲಿ ದೂರುಗಳು ಇದ್ದೇ ಇರುತ್ತವೆ. ಇವರ ತಕರಾರಿಗೆ ಕಿವಿಕೊಡಲು ಸಮಯಸಾದಕರು ಸುತ್ತುಮುತ್ತಲೂ ಇದ್ದು ತೆರೆಮರೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ದೂರದಲ್ಲಿರುವ ಮಕ್ಕಳು ತಪ್ಪು ಮಾಡುವುದಿಲ್ಲ ಎನಿಸುವ ಹಿರಿಯರಿಗೆ ಅವರ ಕೊಡುಗೆಯೂ ಶೂನ್ಯ ಎನ್ನುವುದು ಗೋಚರಿಸುವುದಿಲ್ಲ. ದೂರದಲ್ಲಿರುವವ ಸಂಶಯಾತೀತ ಎನಿಸಿಕೊಂಡರೆ ಸಮಸ್ಯೆಗೆ ಅಡಿಗಲ್ಲು ಹಾಕಿದಂತೆ.

ಮನೆಯಲ್ಲಿ ಉಳಿಯುವವನ ಬವಣೆ ತಪ್ಪಿಸಲು ಕಷ್ಟಸಾದ್ಯ. ಗ್ರಾಮೀಣ ಜನರ ನೋವುಗಳಿಗೆ ಪಟ್ಟಣಕೇಂದ್ರಿತ ಮಾದ್ಯಮದ ಹಾಗೂ ಸಮಾಜದ ಸ್ಪಂದನ ಬಹಳ ಕಡಿಮೆ. ಹಳ್ಳಿಮನೆ ವಿಚಾರಕ್ಕೆ ತಲೆಹಾಕುವ ಪ್ರತಿಯೊಬ್ಬನೂ ತನ್ನ ಕೊಡುಗೆಯೇನು ಎನ್ನುವುದರ ಬಗೆಗೆ ಆತ್ಮಶೋಧನೆ ಮಾಡಿಕೊಳ್ಳಬೇಕು. ಇತಿಹಾಸ ಅವಲೋಕಿಸಿದರೆ ಮುಂದುವರಿದ ದೇಶಗಳು ಈ ಹಂತ ದಾಟಿ ಬಂದಂತಿದೆ.
ಜಾರುದಾರಿಯಲ್ಲಿರುವ ಕೃಷಿಕ ಸಮಾಜ ಇನ್ನೂ ನಿರ್ಣಾಯಕ ಹಂತ ದಾಟಿಲ್ಲ. ಒಗ್ಗಟ್ಟಿನಲ್ಲಿ ಪ್ರಯತ್ನಿಸಿದರೆ ಪುನಶ್ಚೇತನ ಸಾದ್ಯವೆಂದು ಅನಿಸುತ್ತದೆ. ಎತ್ತು ಪ್ರಯತ್ನಿಸಿದರೆ ಸಾಲದು, ಹಸುವೂ ಸಹಕರಿಸಬೇಕು ಎನ್ನುವ ಆಂಗ್ಲ ಬಾಷೆಯಲ್ಲೊಂದು ಮಾತಿದೆ. ಬೂಮಿಯ ಫಲವತ್ತತೆ ಬಗೆಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ಸಾವಯುವ ಕೃಷಿ ಪುಸ್ತಕಗಳಲ್ಲಿ ಈ ಮಾತು ಕಂಡುಬರುತ್ತದೆ.

ಹಳ್ಳಿಯ ಬದುಕು ಸಹನೀಯ ಆದಷ್ಟು ಮದುವೆ ಮಾರುಕಟ್ಟೆಯಲ್ಲಿ ಕೃಷಿಕನ ಮೌಲ್ಯ ಏರುತ್ತದೆ ಮತ್ತು ಪರಂಪರೆ ಉಳಿಯುವ ಸಾದ್ಯತೆ ಹೆಚ್ಚಾಗುತ್ತದೆ. ಅದಕ್ಕೆ ಸಮಾಜ ಬಾಂದವರಿಂದ ಸಹಾಯ ಬಾಯುಪಚಾರಕ್ಕೆ ಸಿಮಿತಗೊಳ್ಳದೆ ಪ್ರವಾಹದ ವಿರುದ್ದ ಈಜಲು ಪ್ರಶ್ನಾತೀತ ನೈತಿಕ ಬೆಂಬಲವಾಗಬೇಕು.

ಸಮಸ್ಯೆ ಪರಿಹಾರಕ್ಕೆ ಲಕ್ಷಣ ನೋಡಿ ಮದ್ದು ಅರೆದರೆ ಯಾವ ಪ್ರಯೋಜನವೂ ಇಲ್ಲ. ಮೂಲ ಕಾರಣ ಹುಡುಕಿ ಪರಿಹಾರೋಪಾಯ ಕೈಗೊಳ್ಳಬೇಕು. ಎಲ್ಲರೂ ನೀರೆರೆದರೆ ಗಡಿಗೆಯಲ್ಲಿ ಹಾಲು ತುಂಬುವುದು ಅಸಾದ್ಯ.

Wednesday, May 21, 2008

ನಾನೂ ಮತ ಹಾಕಿದೆ

ನಮ್ಮದು ಹೇಳಿ   ಕೇಳಿ  ಪ್ರಪಂಚದ  ಅತಿ  ದೊಡ್ಡ   ಪ್ರಜಾಪ್ರಬುತ್ವ.   
ಆದರೆ   ಈ  ವ್ಯವಸ್ಥೆಯನ್ನು    ನಿಜಕ್ಕೂ ಅರ್ಥಹೀನವಾಗುವ ರೀತಿ   
ನಮ್ಮನ್ನೊ  ಆಳುತ್ತಿರುವ      ಈ ರಾಜಕಾರಣಿಗಳು ಮಾಡಿ    ಬಿಟ್ಟಿದ್ದಾರೆ.   
ಈ ಸಲದ ಮತದಾನಕ್ಕೆ  ಸ್ವಲ್ಪ  ಮೊದಲು       ಯಾರೋ   ಒಬ್ಬರು  
ಅನಾಮಿಕ ಕಾನೂನು  ತಜ್ನರು       ಕ್ರಮ ಸಂಖ್ಯೆ ೪೯ ಓ ಎಂಬ
೧೯೬೧ ಚುನಾವಣಾ ಕಾನೂನಿನ ಅಂಶವನ್ನು   ಕಡತಗಳ  ಮದ್ಯೆಯಿಂದ  
ಅಗೆದು  ಹೊರ ತೆಗೆದರು.   ಇದರ ಪ್ರಕಾರ ನಮಗೆ  ಚುನಾವಣೆಗೆ  ನಿಂತಿರುವ    
ಎಲ್ಲ     ಅಬ್ಯರ್ಥಿಗಳ   
ತಿರಸ್ಕರಿಸುವ    ಹಕ್ಕು
  ಇರುತ್ತದೆ.   
ಹಿಂದೆ  ಯಾವ  ಚಿಹ್ನೆಗೂ ಮತ ಒತ್ತದಿದ್ದರೆ ಅದು  ಕುಲಗೆಟ್ಟ ಮತವೆಂದು
ಪರಿಗಣಿಸಲ್ಪಡುತಿತ್ತು.    ಈ  ವಿಚಾರ  ಜನಸಾಮಾನ್ಯರಿಗೆ  
ತಲಪಲು  ನಲುವತ್ತೈದು  ವರುಷ ಬೇಕಾದವು.    ಆಗ  ಮತದಾರನನ್ನು  
ಚುನಾವಣೆ  ಸಮಯ  ಹೊರತು  ಪಡಿಸಿ    ತೀರಾ  ಸಲೀಸಾಗಿ  ಕಾಣುವ  ನಮ್ಮ    
ರಾಜಕಾರಣಿಗಳಿಗೆ  ಬಿಸಿ  ಮುಟ್ಟಿಸುವ  ಅವಕಾಶ  ದೊರಕುತ್ತದೆ.   ಹೀಗೆ  ನಾನು  
ಈ   ಪ್ರಕಾರ  ಮತದಾನ ಮಾಡದೆಯೇ  ಮತದಾನ  ಮಾಡಿದೆ.  

ಮತದಾರನನ್ನು  ಸಂಪೂರ್ಣ    ಮರೆತು  ಈ  ಜನನಾಯಕರು  ಯಾ  
ಜನಸೇವಕರು    ತಮ್ಮ   ಸ್ವಾರ್ಥ   ಸಾದನೆಯಲ್ಲೇ   ತೊಡಗಿಕೊಂದಿರುತ್ತಾರೆ.  ಗಣಿ ದನಿಗಳಲಾರಿಗಳು  ರಾಜ್ಯದ  ಹೆದ್ದಾರಿಗಳ  ನಾಶಮಾಡುವಾಗಲಿ  ಕುಮಾರಸ್ವಾಮಿ  
ತನ್ನ  ಕ್ಷೇತ್ರಕ್ಕೆ  ಸಾವಿರ  ಕೋಟಿ  ಖರ್ಚು  ಮಾಡುವಾಗಲಿ  ಚಕಾರ  ಎತ್ತದ  
ಈ  ನಮ್ಮ  ಪ್ರತಿನಿಧಿಗಳು  ತಮ್ಮ  ಸಂಬಳಬತ್ತೆ  ಏರಿಸುವಾಗ   
ಕೈ ಎತ್ತುವ   ಸೇವೆ  ಸಲ್ಲಿಸುತ್ತಾರೆ.

 ನನಗೆ  ಮತವಿರುವುದು    ಸಾವಿರದ ಮುನ್ನೂರು  ಚಿಲ್ಲರೆ  ಮತವಿರುವ  ಹಾಗೂ  
ನಮ್ಮ  ಮನೆಯಿಂದ  ಆರು  ಕಿಲೋಮೀಟರ್  ದೂರವಿರುವ    ಒಕ್ಕೆತ್ತೂರು  ಶಾಲೆ  
ಮತದಾನಕೇಂದ್ರದಲ್ಲಿ.     
  ಸಂಜೆ  ನಾಲ್ಕಕ್ಕೆ  ಹೋದರೆ  ಸುಮಾರು  ೪೫ ನಿಮಿಷ  
ಕಾಯಬೇಕಾಯಿತು.  
  ನಾನೊಬ್ಬ  ಮತದಾನ  ಮಾಡಿದರೂ  ಯಂತ್ರದ  ಗುಂಡಿ  ಒತ್ತದೆ  
ಅವರ  ಖಡತದಲ್ಲಿ  ಒಂದರ  ಬದಲು  ಎರಡು  ರುಜು  ಹಾಕಿ  ಬಂದವನು.  ಅಲ್ಲಿದ್ದ     ಮತಕಟ್ಟೆ  ಅದಿಕಾರಿಗಳಿಗೆ  ನನ್ನಂತಹವರು   ಹೊಸತು.    ಅವರಿಗೆ  
ನನ್ನ  ಮಾತಿಗೆ  ಗಲಿಬಿಲಿ  ಉಂಟಾಗಿ  ಬೆರಳಿಗೆ ಗುರುತಿನ  ಶಾಯಿ  
ಲೇಪಿಸಲೇ  ಮರೆತು  ಹೋಯಿತು.

ಪುತ್ತೂರು  ವಿದಾನಸಭಾ  ಕ್ಷೇತ್ರದಲ್ಲಿ  ಒಕ್ಕೆತ್ತೂರು  ಕೇಂದ್ರ  ಕ್ರಮಾಂಕ  ಒಂದು.  
ಈ  ಕಡತದಲ್ಲಿ  ದಾಖಲಾಗಿರುವ  ಮತವನ್ನು  ಮೊತ್ತ  ಮೊದಲು  ಲೆಕ್ಕಕ್ಕೆ  
ತೆಗೆದುಕೊಳ್ಳುವ  ಕಾರಣ  ಪ್ರಾಯುಷ:   ಎಲ್ಲ  ಅಬ್ಯರ್ಥಿಗಳಿಗೆ  ವಿರೋದವಾಗುವ  
ನನ್ನ  ಮತ  ಮೊದಲು  ದಾಖಲಾಗುತ್ತದೆ.  ಎಣಿಕೆ  ಕೇಂದ್ರದಲ್ಲಿ  ಕುಳಿತ     ಎಲ್ಲರೂ  
ಈ  ವ್ಯಕ್ತಿಯನ್ನು     ಅವಲಕ್ಷಣ  ಎಂದು  ಉಗಿಯಲೂ  ಬಹುದು.  

ಈ  ಮತಗಳನ್ನು  ಹೇಗೆ  ಲೆಕ್ಕಕ್ಕೆ  ತೆಗೆದುಕೊಳ್ಳುತ್ತಾರೆ  ಎನ್ನುವುದು  
ಇನ್ನೂ  ಅಸ್ಪಷ್ಟ.  ಶೇಕಡಾ  ೫೦ ಕ್ಕಿಂತ  ಹೆಚ್ಚು  ಬಂದರೆ  ಮರು ಚುನಾವಣೆ  ಅಥವಾ    
ಗೆದ್ದ  ಹಾಗೂ  ಸೋತ  ಅಬ್ಯರ್ಥಿಗಳ  ನಡುವಿನ  ವ್ಯತ್ಯಾಸಕ್ಕಿಂತ  ಹೆಚ್ಚು  
ಬಂದರೆ   ಮರುಚುನಾವಣೆ  ಎನ್ನುವ  ವಿಚಾರ  ಮುಂದೆ     ನ್ಯಾಯಾಲಯದ  
ಕಟ್ಟೆಯಲ್ಲಿ  ತೀರ್ಮಾನ  ಆಗಬೇಕಾಗಬಹುದು.  ಅಂತೂ  ಗೊಂದಲಕ್ಕೆ  ಖಂಡಿತಾ  ಅವಕಾಶ.  

ಈ  ರೀತಿ  ಮತದಾನ  ಮಾಡಿದರೆ    ನಮ್ಮ    ಮತ  ಗುಟ್ಟಾಗಿ  ಉಳಿಯದೆ   
ಸಾರ್ವಜನಿಕ  ತಿಳುವಳಿಕೆಗೆ  ಒಳಪಟ್ಟಿರುವುದು  ಒಂದು  ಋಣಾತ್ಮಕ  ವಿಚಾರ.  
ಇದನ್ನು  ಮತದಾನ  ಯಂತ್ರದಲ್ಲಿ  ಅಳವಡಿಸಬೇಕೆಂಬ  ಕೂಗು  ಸರಕಾರ  ಹಾಗೂ  
ಉನ್ನತ  ಕೋರ್ಟಿಗೆ  ಇನ್ನೂ  ತಲಪಿಲ್ಲ.   ಮುಂದಿನ  ಮತದಾನಕ್ಕೆ  ಅಳವಡಿಸಬಹುದೇನೊ ?