Wednesday, June 25, 2008

ಅಮೇರಿಕದಲ್ಲಿಂದು ಅಡಿಕೆ ಹಾಳೆ ತಟ್ಟೆ

ಅಮೇರಿಕದ ಒಂದು MBA ವಿದ್ಯಾರ್ಥಿ ತನ್ನ project work ಗೆಂದು ಕೊಳೆತು ಗೊಬ್ಬರವಾಗಬಲ್ಲ ಪರಿಸರಕ್ಕೆ ಕನಿಷ್ಟ ಹಾನಿ ಉಂಟುಮಾಡುವ ಪರಿಸರ ಸ್ನೇಹಿ ತಟ್ಟೆಯ ಹುಡುಕಾಟದಲ್ಲಿ ಕೊನೆಗೆ ತಲಪಿದ್ದು ದಕ್ಷಿಣ ಬಾರತಕ್ಕೆ. ವಿದ್ಯಾರ್ಥಿಗಳು ಕಾಟಾಚಾರಕ್ಕೆ ಎನ್ನುವ ಬದಲು ಕಷ್ಟ ಪಟ್ಟು project work ಮಾಡಿದರೆ ಮುಂದಿನ ಜೀವನಕ್ಕೆ ಪೂರಕ ಎನ್ನುವುದಕ್ಕೆ ಇನ್ನೊಂದು ಉದಾಹರಣೆ. ಅಡಿಕೆ ಹಾಳೆ ತಟ್ಟೆ ಬಗೆಗೆ ಮಂಡಿಸಿರುವ ಅವನ ಪ್ರಬಂದಕ್ಕೆ ಲಕ್ಷಾಂತರ ಡಾಲರ್ ಹರಿದು ಬಂತು. ಎಂಬತ್ತು ಲಕ್ಷ ರೂಪಾಯಿಗೂ ಹೆಚ್ಚು ಬಹುಮಾನ ಹಾಗೂ ಸಹಾಯದನ ಲಬಿಸಿದ ಈ ವಿದ್ಯಾರ್ಥಿ ಹಾಳೆ ತಟ್ಟೆಯನ್ನು ಬಾರತದಿಂದ ತರಿಸಿ ಮಾರಾಟ ಮಾಡಲೂ ಪ್ರಾರಂಬಿಸಿದ.



ಇಂದು ಅಮೇರಿಕದಲ್ಲಿ ಒಂಬತ್ತಿಂಚು ಚೌಕದ ಹಾಳೆ ತಟ್ಟೆಯ ಚಿಲ್ಲರೆ ಮಾರಾಟ ಬೆಲೆ ಕೇವಲ ನಲುವತ್ತು ರೂಪಾಯಿ. ನಮ್ಮಲ್ಲಿ ಒಂದೂವರೆ ರೂಪಾಯಿಗೆ ಚಿಕ್ಕ ಪುಟ್ಟ ಹಾಳೆ ತಟ್ಟೆ ತಯಾರಕರು ಮಾರಾಟ ಮಾಡುವ ಈ ತಟ್ಟೆ ಅಮೇರಿಕ ತಲಪುವಾಗ ಡಾಲರ್ ಲೆಕ್ಕದ ಬೆಲೆಗೆ ಮಾರಾಟವಾಗುತ್ತದೆಯಂತೆ. ಪ್ರಕಟಣೆಯಲ್ಲಿ ಮಾಲು ಬಾರತದ್ದು ಎನ್ನುವ ವಿಚಾರ ಸಾದ್ಯವಾದಷ್ಟು ಅಡಗಿಸಿದ್ದಾರೆ. ಬದಲಾಗಿ South East Asia ಎನ್ನುತ್ತಾರೆ. ಇದೊಂದು ಉತ್ತಮ ವ್ಯವಹಾರ ಸಾದ್ಯತೆಯೆಂದು ಅನಿಸುತ್ತದೆ.


ಅಮೇರಿಕದ ಪೂರ್ವ ಕರಾವಳಿಯಲ್ಲಿ ಸಾವಯುವ ಕೃಷಿ ಸಾಮುಗ್ರಿ ಹಂಚುವುದರಲ್ಲಿ Paul Keene ಎಂಬವರು ಸ್ಥಾಪಿಸಿದ walnut acres ಬಹಳ ಪ್ರಸಿದ್ದವಾಗಿತ್ತು. ಬಾರತದಲ್ಲಿ ಕೆಲವು ಕಾಲ ಕಳೆದ ಇವರನ್ನು ಆಮೇರಿಕದಲ್ಲಿ ಸೈಕಲಿಸುವಾಗ ಗೆಳೆಯರೊಂದಿಗೆ ಇವರಲ್ಲಿಗೆ ಹೋಗುವ ಅವಕಾಶ ಸಿಕ್ಕಿ ಮಾತನಾಡಿಸಿದ್ದೆ. 1998 ರಲ್ಲಿ ನಾನು ಅಮೇರಿಕಕ್ಕೆ ಹೋಗುವಾಗ ಇವರಿಗೆ ತೋರಿಸಲು ಒಂದಷ್ಟು ಹಾಳೆ ತಟ್ಟೆಗಳ ತಗೊಂಡು ಹೋಗಿದ್ದೆ. ಆದರೆ Paul ಅವರು ವ್ಯವಹಾರದಿಂದ ಆಗ ನಿವೃತ್ತರಾದ ಕಾರಣ ತೋರಿಸಲು ಸಾದ್ಯವಾಗಿರಲಿಲ್ಲ. ಜಾಗತೀಕರಣದ ಪ್ರಬಾವವೋ ಎಂಬಂತೆ Walnut Acres ಇಂದು ಇತಿಹಾಸಕ್ಕೆ ಸೇರಿದೆ. ಇತರ ಸಾವಯುವ ಗೆಳೆಯರಿಗೆ ತೋರಿಸಲು ನನ್ನ ಆರೋಗ್ಯ ಸಮಸ್ಯೆಗಳು ಅಡ್ಡವಾದವು.ಇಪ್ಪತೈದು ವರ್ಷಗಳಿಂದ ನಮ್ಮಲ್ಲಿ ತಯಾರಾಗುತ್ತಿರುವ ಅಡಿಕೆ ಹಾಳೆ ತಟ್ಟೆ ಅಮೇರಿಕದಲ್ಲಿನ್ನೂ ಅಪರಿಚಿತ ಎನ್ನುವಾಗ ಆಶ್ಚರ್ಯವಾಗುತ್ತದೆ.
ಹೆಚ್ಚಿನ ಮಾಹಿತಿ:




4 comments:

Sushrutha Dodderi said...

ಕಳೆದ ಬಾರಿ ಅಜ್ಜನ ಮನೆಗೆ ಹೋದಾಗ ಅಲ್ಲಿ ನನಗೊಂದು ಅಚ್ಚರಿ ಕಾದಿತ್ತು. ಪ್ರತಿ ಬಾರಿ ಹೋದಾಗ ಅಕ್ಕಪಕ್ಕದ ಮನೆ ಹೆಂಗಸರು ಅಲ್ಲಿಗೆ ಬರುವುದು, ನನ್ನ ಅತ್ತೆಯರ ಜೊತೆ ಕತೆ ಹೊಡೆಯುವುದು, ಟೀವಿ ಧಾರಾವಾಹಿಗಳ ಬಗ್ಗೆ ಮಾತಾಡುವುದು ಇತ್ಯಾದಿಗಳನ್ನೆಲ್ಲ ಬಿಟ್ಟು ಪೂರ್ತಿ ವ್ಯವಹಾರ ಮಗ್ನರಾಗಿಬಿಟ್ಟಿದ್ದರು! ಅಲ್ಲಿ ಕತೆ ಹೊಡೀಲಿಕ್ಕೆ ಯಾರಿಗೂ ಸಮಯವೇ ಇರಲಿಲ್ಲ. ಫುಲ್ ಬ್ಯುಸಿ!

ವಿಷಯ ಏನಪ್ಪಾ ಅಂದ್ರೆ, ಅಜ್ಜನ ಮನೆ ಅಂಗಳದಲ್ಲೊಂದು ಅಡಿಕೆ ಹಾಳೆ ತಟ್ಟೆ ಮಾಡುವ ಯಂತ್ರ ಬಂದು ಕೂತಿತ್ತು. ದಕ್ಷಿಣ ಕನ್ನಡ ಜಿಲ್ಲೆಯವರಾದ ಡಾ. ರಮೇಶ್‍ಚಂದ್ರ ಎಂಬುವವರೊಬ್ಬರು ಊರಿಗೆ ಬಂದು, ಹೆಂಗಸರನ್ನೆಲ್ಲಾ ಕಲೆಹಾಕಿ ಮೀಟಿಂಗ್ ಮಾಡಿ, ಮಶೀನ್ ಹೊಂದಿಸಿಕೊಟ್ಟು, ಹಾಳೆ ತಟ್ಟೆ ಮಾಡಲು ಹಚ್ಚಿ ಹೋಗಿದ್ದರು. ವಾರ-ಹದಿನೈದು ದಿನಕ್ಕೊಮ್ಮೆ ಬಂದು ಅವರು ಸಿದ್ದ ತಟ್ಟೆಗಳನ್ನು ಸಂಗ್ರಹಿಸಿಕೊಂಡು ಹೋಗುವರು. ಹೆಂಗಸರೆಲ್ಲಾ ಬೆಳಗ್ಗೆಯಿಡೀ ತೋಟದಲ್ಲಿ ಅಡ್ಡಾಡಿ, ಹಾಳೆ ಸಂಗ್ರಹಿಸಿ, ಅದನ್ನು ನೆನೆಸಿಟ್ಟು, ಮಧ್ಯಾಹ್ನದ ಮೇಲೆ ಇಲ್ಲಿ ಸೇರಿ, ಮಶೀನಿಗೆ ಹಾಳೆ ಕೊಟ್ಟು, ಕತ್ತರಿಸಿ, ಚಂದ ಪ್ಯಾಕ್ ಮಾಡಿ, ಹೆಸರು ಬರೆದು, ಲೆಕ್ಕ ಬರೆದು, ಅದನ್ನು ಸಂಗ್ರಹಿಸಲು ಬರುವವರೊಂದಿಗೆ ವ್ಯವಹರಿಸಿ.... ನನಗೆ ಅಚ್ಚರಿಯೋ ಅಚ್ಚರಿ!

ಅಂದು ಸಂಗ್ರಹಿಸಲು ಬಂದ ರಮೇಶ್‍ಚಂದ್ರರೊಂದಿಗೂ ನಾನು ಮಾತನಾಡಿದೆ. ತುಂಬಾ ಬುದ್ಧಿವಂತರಂತೆ ಕಾಣಿಸಿದ ಅವರು ನನ್ನೊಂದಿಗೆ ಚೆನ್ನಾಗಿ ಮಾತಾಡಿದರು. ತಮ್ಮ ಕಾರ್ಯ ನಿರ್ವಹಣೆಯ ಬಗೆ, ಅದನ್ನು ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾವು ಮಾರುತ್ತಿರುವುದು, ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಡಾಕ್ಟರ್ ವೃತ್ತಿ ಬಿಟ್ಟು ಬಂದು ಅವರು ಇದರಲ್ಲಿ ತೊಡಗಿಕೊಂಡಿರುವುದನ್ನು ನೋಡಿದರೇ ಇದರಲ್ಲಿರುವ ಲಾಭವನ್ನು ಯಾರಾದರೂ ಗ್ರಹಿಸಬಹುದಿತ್ತಾದರೂ, ಅದಕ್ಕೆ ಇಷ್ಟೊಂದು ಬೆಲೆಯಿದೆ ಅಂತ ಅಂದುಕೊಂಡಿರಲಿಲ್ಲ. ನಿಮ್ಮ ಲೇಖನ ಓದಿ ತಿಳಿದುಕೊಂಡಂತಾಯಿತು.

ಅಡುಗೆ ಮಾಡಿಯಾದಮೇಲೆ ಉಳಿಯುವ ಸಮಯವನ್ನು ಬರೀ ಕತೆ ಹೊಡೆಯುತ್ತಾ, ಟೀವಿ ನೋಡುತ್ತಾ, ಅವರಿವರ ಬಗ್ಗೆ ಮಾತಾಡುತ್ತಾ ಕಳೆಯುತ್ತಿದ್ದ ಹೆಂಗಸರಿಗೆ ಇಂಥದ್ದೊಂದು ಕೆಲಸ ಕೊಟ್ಟು, ಅವರಿಗೆ ವ್ಯವಹಾರ ಪ್ರಜ್ಞೆ ಕಲಿಸಿ, ಜೊತೆಗೇ ನಾಲ್ಕು ಕಾಸು ಸಂಪಾದಿಸಿಕೊಳ್ಳುವ ದಾರಿಯನ್ನೂ ಮಾಡಿಕೊಟ್ಟಿರುವ ರಮೇಶ್‍ಚಂದ್ರರನ್ನು ನಾನು ಅಭಿನಂದಿಸಿದೆ. ನಾವೆಲ್ಲಾ ಬಾಳೆ-ಹಾಳೆ ಬಿಟ್ಟು ಪ್ಲಾಸ್ಟಿಕ್ ಕಪ್ಪು, ತಟ್ಟೆಗಳಲ್ಲಿರುವ ಗಂಧಕ ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತಿರುವ ಈ ಕಾಲದಲ್ಲಿ ಅಮೇರಿಕಾದಲ್ಲಿ ಇವಕ್ಕೆ ಬೇಡಿಕೆ ಬರುತ್ತಿರುವುದು ಎಂಥಾ ವಿಪರ್ಯಾಸವೋ!

Govinda Nelyaru said...

ಬೇಕಾದಷ್ಟು ಅಡಿಕೆ ಹಾಳೆಯನ್ನು ಸಂಗ್ರಹಿಸುವುದೇ ದೊಡ್ಡ ತಲೆನೋವಿನ ವಿಚಾರ. ಈಗ ತಯಾರಿ ವಿಕೇಂದ್ರಿಕರಣ ಆಗಿ ಹಳ್ಳಿ ಹಳ್ಳಿಗಳಿಗೂ ತಲಪಿದ್ದು ಬಹಳ ಸಂತಸದ ವಿಚಾರ. ರಪ್ತು ಮಾಡುವ ದೊಡ್ಡ ತಯಾರಕರಿಗೆ ಈ ಹೆಜ್ಜೆ ಅನಿವಾರ್ಯ ಕೂಡ. ಇಲ್ಲವಾದರೆ ಸಂಗ್ರಹಿಸಿ ಕೊಡುವ ಮದ್ಯವರ್ತಿ ಹಾಳೆಯ ಗುಣಮಟ್ಟದ ವಿಚಾರದಲ್ಲಿ ಮೋಸ ಮಾಡುತ್ತಾನೆ. ಮುಂದೆ ಇನ್ನೂ ಹೆಚ್ಚಿನ ಪಾಲನ್ನು ಈ ಕೃಷಿಕರು ಹಾಗೂ ತಳಮಟ್ಟದ ತಯಾರಕರು ಪಡಕೊಳ್ಳುವ ದಿನ ಬರಲೆಂದು ಹಾರೈಸೋಣ. ನಿಮ್ಮ ಅಭಿಪ್ರಾಯಕ್ಕೆ ಕೃತಜ್ನತೆಗಳು.

Unknown said...

ನಿಜ. ಆದರೆ ಬೆಕ್ಕಿನಕೊರಳಿಗೆ ಗಂಟೆ ಕಟ್ಟುವರ್ಯಾರು ಅನ್ನುಉವ ಸಮಸ್ಯೆಯೂ ಜತೆಯಲ್ಲಿ ಇದೆ. ಅಡಿಕೆ ಬೆಳೆಗಾರರು (ಎಲ್ಲರೂ ಅಲ್ಲ) ಬೇರೆಯವರು ಕಷ್ಟಪಟ್ಟು ನಮಗೆ ಕಾಸು ಬರಬೇಕು ಎನ್ನುವ ತತ್ವಕ್ಕೆಇಳಿದಿದ್ದಾರೆ. ಕ್ಯಾಂಪ್ಕೋ ಅನ್ನೋ ಸಂಸ್ಥೆಯಲ್ಲಿ ಇನ್ನೂ ಶೇಕಡಾ ೬೦ ರಷ್ಟು ಅಡಿಕೆ ಬೆಳೆಗಾರರು ಶೇರು ಹಣ ಹಾಕಿಲ್ಲ. ಅಡಿಕೆ ಹಾಳೆ ಮಷಿನ್ ಅಲ್ಲಲ್ಲಿ ಇದೆಯಾದರೂ ಹಾಳೆಯ ಕೊರತೆಯಿಂದ ತುಕ್ಕು ಹಿಡಿಯುತ್ತಿದೆ.
ನಿಮ್ಮ ಕಾಳಜಿ ಶ್ರಮಕ್ಕೆ ಧನ್ಯವಾದಗಳು.

ಆರ್ಶ

Anonymous said...

Nice Blog.When I set out reading the latest post my cherished memories of good old ADIKE KRISHI days began bugging me!

Thanks Govind
Prakruthi P Bhat