Thursday, October 02, 2008

ಗೊಬ್ಬರದ ರಾಶಿಯಲ್ಲಿ ಕಾರ್ಯ ನಿರತ ಹಂದಿಗಳು

ಅಮೇರಿಕದಲ್ಲಿರುವ ಗೆಳೆಯ ಎರಿಕ್ ಬೇಸಾಯಕ್ಕಾಗಿ ಕುದುರೆಗಳ ಸಾಕುವ ಸಾವಯುವ ರೈತ. ಈ ಕುದುರೆ ಗೊಬ್ಬರದ ಕಂಪೋಸ್ಟ್ ರಾಶಿಯನ್ನು ಅಗಾಗ ತಿರುವಿ ಹಾಕುವ ಕೆಲಸವನ್ನು ಎರಡು ಹಂದಿಗಳಿಗೆ ವಹಿಸಿಕೊಟ್ಟಿದ್ದಾನೆ.  ಈ  ಕೆಲಸವನ್ನು ಅಲ್ಲಿನ ರೈತರು  ಸಾಮಾನ್ಯವಾಗಿ    ಇಂತಹ ಯಂತ್ರ ಮೂಲಕ ಮಾಡುತ್ತಾರೆ.


ಎರಿಕ್ ನಮ್ಮ ಸಬ್ಬಲಿನಂತಹ ಚೂಪಾದ ಉಪಕರಣದಲ್ಲಿ ಗೊಬ್ಬರದ ರಾಶಿಯಲ್ಲಿ ತೂತು ಮಾಡಿ ಅದರಲ್ಲಿ ಜೋಳದ ಕಾಳುಗಳ ಸುರಿಯುತ್ತಾನೆ. ಈ ಕಾಳುಗಳ ತಿನ್ನುವ ಆಸೆಯಲ್ಲಿ ಹಂದಿಗಳು ಇಡೀ ರಾಶಿಯನ್ನು ಅಡಿಮೇಲು ಮಾಡುತ್ತವೆ. ಈ ಮಾದರಿಯನ್ನು   ಸಲಾಟಿನ್ ಎಂಬ ರೈತನ ಅವಿಷ್ಕಾರ   ಎನ್ನುತ್ತಿದ್ದ ಎರಿಕ್.  ಕೆಲವು ಬಾರಿ    ನಾಲ್ಕು  ಅಡಿ  ಆಳದ  ವರೆಗೆ  ಅಗೆಯುವ  ಕಾರ್ಯನಿರತ  ಹಂದಿಗಳ  ಬಾಲ   ಮಾತ್ರ  ಗೋಚರಿಸುತ್ತದೆ   ಎನ್ನುವರು  ಸಲಾಟಿನ್. 

ನಾನೂ ಹಲವು ಸಲ ಹಂದಿ ಆವರಣ ಹೊಕ್ಕು ಈ ಜೋಳ ಕಾಳನ್ನು ಅಡಗಿಸುವ ಕೆಲಸ ಮಾಡಿದ್ದೇನೆ. ಹಂದಿಗಳ ವರ್ತನೆ ಹೆಚ್ಚೇನು ಅರಿಯದ ನನಗೆ ಅವು ನನ್ನಿಂದಲೇ ಕಸಿದುಕೊಳ್ಳುವುದೋ ಎನ್ನುವ ಸಂಶಯ. ನಾವು ತೂತು ಮಾಡಿ ಅಡಗಿಸಿ ಹೊರಬರುವ ವರೆಗೆ ತಾಳ್ಮೆಯಿಂದ ಕಾಯುವ ಹಂದಿಗಳು ನಂತರ ರಾಶಿ ಅಡಿಮೇಲು ಮಾಡುವ ಕೆಲಸಕ್ಕೆ ಸುರುಮಾಡುತ್ತವೆ.




ಅಲ್ಲಿ ತೀರಾ ಬಡವರಿಗೆಂದು ಸೂಪ್ ಕಿಚನ್ ಎನ್ನುವ ದರ್ಮಾರ್ಥ ಊಟ ಮತ್ತು ರಾತ್ರಿ ಉಳಿಯುವ ವ್ಯವಸ್ಥೆ ಚರ್ಚು ಮತ್ತು ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತವೆ. ಹಲವು ತಿಂಗಳು ಸಾಕಿದ ಈ ಹಂದಿಗಳನ್ನು ಎರಿಕ್ ಅವರಿಗೆ ದಾನ ಮಾಡುತ್ತಾನೆ. ಇವರಿಗೆ ಹಂದಿ ಸಾಕಣೆಯಲ್ಲಿ ಕೈಗೊಡಿಸುವ ಅಂಗಡಿಯೊಂದು ಹಂದಿಗಳಿಗೆ ಹಾಕಲೆಂದು ವಾಯಿದೆ ದಾಟಿದ ಹಾಲು ಇತ್ಯಾದಿಯನ್ನು ದರ್ಮಾರ್ಥವಾಗಿ ಕೊಡುತ್ತದೆ.

ಹಂದಿ ಸಾಕಣೆಯಲ್ಲಿ ಸಿಮೆಂಟು ನೆಲದ ಮೇಲೆ ಮತ್ತು ಗೊಬ್ಬರದ ಮೇಲೆ ಎರಡು ವಿದಾನಗಳನ್ನೂ ಅನುಸರಿಸುವವರಿದ್ದಾರೆ. ಯುರೋಪಿನ ಫಾರ್ಮು ಒಂದರಲ್ಲಿ ಸಿಕ್ಕ ಗೆಳೆಯ ಹೇಳಿದ ಮಾತು pig is the only animal that is born toilet trained ಕೇಳಿ ನನಗೆ   ಮೊದಲು   ಆಶ್ಚರ್ಯವಾಗಿತ್ತು.   ಬುದ್ದಿಯೂ ಚುರುಕು. ನಾವು ಗಲೀಜು ಪ್ರಾಣಿ ಎನ್ನುವ   ಹಂದಿ   ಸಿಮೆಂಟು ನೆಲದ ಮೇಲೆ ಸಾಕಿದರೆ ಆವರಣದ ಒಂದು ಮೂಲೆಯಲ್ಲಿ ಮಾತ್ರ ಗಲೀಜು ಮಾಡುತ್ತದೆ. ಸಾಕಣೆ ಸುಲಭ  ಎನ್ನುತ್ತಾರೆ  ಅನುಭವಿಗಳು.

ಈ ಸಲದ ಅಡಿಕೆಪತ್ರಿಕೆಯಲ್ಲಿ ಹಂದಿ ಹಾಗೂ ದನಗಳ ಸಾಕುವ ರೈತರ    ಬಗೆಗೆ ಲೇಖನ ಕಂಡಾಗ ಇವೆಲ್ಲ ನೆನಪಾಯಿತು. ಆದರೆ ಈಗ ಎಲ್ಲರೂ ದ್ರವರೂಪ  ಗೊಬ್ಬರ ತೋಟಕ್ಕೆ ಹರಿಸುವ ಕಾರಣ    ಈ ಮಾದರಿ ನಮಗೆ ಪ್ರಾಯೋಗಿಕವಲ್ಲ.

2 comments:

Unknown said...

wow super idea

ಯಜ್ಞೇಶ್ (yajnesh) said...

ತುಂಬಾ ಒಳ್ಳೆ ಐಡಿಯಾ!!!