ಆಫ್ರಿಕದ ಕಿನ್ಯಾದಲ್ಲೊಂದು ಹೊಸ ಪ್ರಯೋಗ. ಮಂಗಗಳಿಗಾಗಿ ತೂಗುಸೇತುವೆ. ಹಿಂದೆ ರಾಮಾಯಣ ಕಾಲದಲ್ಲಿ ಹನುಮಂತ ಸಮುದ್ರವನ್ನು ಲಂಗಿಸಿದ್ದರೂ ಈಗಿನ ಕೋತಿಗಳಿಗೆ ಆ ಕೌಶಲ್ಯವಿಲ್ಲ. ಕಾಡಿನಲ್ಲಿರುವ ರಸ್ತೆಗಳು ಪ್ರಾಣಿಗಳ ಸಂಚಾರಕ್ಕೊಂದು ಸವಾಲು. ಹೆಚ್ಚಿನ ಕಡೆ ಗಮನವಿಡಿ ಫಲಕಗಳು ಮಾತ್ರ ಕಂಡುಬರುತ್ತವೆ. ಪರಿಣಾಮ ಸಾವಿರಾರು ಪ್ರಾಣಿಗಳ ಸಾವು.
ತೂಗು ಸೇತುವೆ ಎಂದಾಕ್ಷಣ ನಮಗೆ ನೆನಪಾಗುವುದು ನೂರಾರು ಸೇತುವೆಗಳ ಸರದಾರ ಸುಳ್ಯದ ಗಿರೀಶ್ ಬಾರದ್ವಜರ ಹೆಸರು. ಇದು ಗಿರೀಶರ ಸೇತುವೆಯೂ ಅಲ್ಲ, ಹೊಳೆಯನ್ನು ದಾಟಲು ಹಳ್ಳಿಗರು ಉಪಯೋಗಿಸುವುದೂ ಅಲ್ಲ. ಕಿನ್ಯಾದಲ್ಲಿ ಬಹಳ ವಾಹನ ಸಂದಣಿ ಇರುವ ಹೆದ್ದಾರಿಯಲ್ಲಿ ಮಂಗಗಳ ಉಪಯೋಗಕ್ಕಾಗಿಯೇ ನಿರ್ಮಾಣವಾದ ಆಕಾಶ ಮಾರ್ಗ.
ಅಫ್ರಿಕದ ಪೂರ್ವ ಕರಾವಳಿಯಲ್ಲಿರುವ ಕಿನ್ಯಾ ದೇಶದ ಎರಡನೇಯ ಮುಖ್ಯ ಪಟ್ಟಣ ಮೊಂಬಸ. ಇದು ಪ್ರಮುಖ ಬಂದರು ಮತ್ತು ಪ್ರವಾಸಿ ತಾಣ. ಪಕ್ಕದಲ್ಲಿಯೇ ಡಿಯಾನಿ ಸಮುದ್ರ ತೀರ. ಅಲ್ಲಿ ಸಮುದ್ರ ತಟದಲ್ಲಿಯೇ ಹಲವಾರು ಹೋಟೇಲುಗಳಿದ್ದು ಪ್ರವಾಸೋದ್ಯಮ ಪ್ರಮುಖ ವ್ಯವಹಾರ. ಇಪ್ಪತ್ತ ನಾಲ್ಕು ವರ್ಷ ಹಿಂದೆ ವಿದ್ಯುತ್ ಗುತ್ತಿಗೆದಾರರ ಜತೆಗೆ ಕೆಲಸ ಮಾಡುತ್ತಿದ್ದ ಗೆಳೆಯ ಶೇಖರ್ ಜತೆ ನಾನು ಈ ಪ್ರದೇಶಕ್ಕೆ ಬೇಟಿ ಇತ್ತಿದ್ದೆ.
ಕಿನ್ಯಾದ ಅತ್ಯಂತ ಸುಂದರ ಅಂಗೋಲನ್ ಕೊಲೊಬಸ್ ಮಂಗಗಳು ಈ ಕಾಡಿನಲ್ಲಿ ಮಾತ್ರ ಕಾಣ ಸಿಗುವಂತದ್ದು. ಈಗ ಇಲ್ಲಿ ಬರೇ ೩೦೦ ಮಂಗಗಳು ಉಳಿದುಕೊಂಡಿವೆ. ಈ ಅವನತಿಯ ಅಂಚಿನಲ್ಲಿರುವ ಮಂಗಗಳು ರಸ್ತೆ ದಾಟುವಾಗ ವಾಹನದಡಿಯಲ್ಲಿ ಸಿಲುಕಿ ಸಾಯುವುದು ಅಲ್ಲಿನವರಿಗೆ ನುಂಗಲಾರದ ತುತ್ತು. ಜನರಿಗೆ ಇವುಗಳ ಬಗೆಗೆ ಅರಿವು ಮೂಡಿಸುವುದು, ಅಲ್ಲಲ್ಲಿ ರಸ್ತೆ ಫಲಕ ಅಳವಡಿಕೆ – ಹೀಗೆ ಹಲವಾರು ಪ್ರಯೋಗಗಳ ನಂತರ ತಯಾರಾಯಿತು ಈ ಆಕಾಶ ಸೇತುವೆ ಯೋಜನೆ.
ಅಲ್ಲಿ ಮೊರು ಪ್ರಬೇದದ ಮಂಗಗಳು ಕಾಣಸಿಗುತ್ತವಂತೆ. ನಾಚಿಕೆ ಹಾಗೂ ಬೆದರು ಸ್ವಾಬಾವದ ಈ ಅಂಗೋಲನ್ ಕೊಲಬಸ್ ಮಂಗಗಳು ಮೊದಲು ಈ ಸೇತುವೆಗಳಿಂದ ದೂರವಿದ್ದವು. ಇತರ ಎರಡು ಜಾತಿಗಳ ಮಂಗಗಳು ಮೊದಲು ಕುತೂಹಲ ಮತ್ತು ಅಗತ್ಯಕ್ಕೆ ಈ ಸೇತುವೆ ಉಪಯೋಗಿಸಿದವು. ಕ್ರಮೇಣ ಇತರ ಮಂಗಗಳ ಮೇಲ್ಪಂಕ್ತಿ ಅನುಸರಿಸಿ ಈ ಆಕಾಶ ಸೇತುವೆಯ ಉಪಯೋಗಕ್ಕೆ ಕೊಲಬಸ್ ಮಂಗಗಳೂ ಸುರುಮಾಡಿದವು. ಈಗ ವಾಹನದಡಿಗೆ ಸಿಕ್ಕಿ ಸಾಯುವ ಮಂಗಗಳ ಸಂಖ್ಯೆ ನಗಣ್ಯ. ಸುಮಾರು ಇಪ್ಪತ್ತು ಸಾವಿರ ರೂಪಾಯಿ ಖರ್ಚಿನಲ್ಲಿ ಒಂದೇ ದಿನದಲ್ಲಿ ಸೇತುವೆ ತಯಾರು. ಈಗ ಅಲ್ಲಿ ಇಂತಹ ಇಪ್ಪತ್ತ ಮೂರು ಸೇತುವೆಗಳಿವೆಯಂತೆ.
ಎಲ್ಲ ಮಂಗಗಳೂ ಈ ಮಾದರಿ ಉಪಯೋಗಿಸುವುದಿಲ್ಲವಂತೆ. ಪಕ್ಕದ ದ್ವೀಪ ಜಾಂಜಿಬಾರಿನಲ್ಲಿ ಈ ಪ್ರಯೋಗ ಸಂಪೂರ್ಣ ವಿಫಲ. ಅಲ್ಲಿನ ಬಿನ್ನ ಉಪಜಾತಿಯ ಕೊಲೊಬಸ್ ಮಂಗಗಳು ಆಕಾಶ ಸೇತುವೆಗಳ ಉಪಯೋಗ ಕಲಿಯಲೇ ಇಲ್ಲ. ಮಂಗಗಳಲ್ಲೂ ಪೆದ್ದು ಜಾತಿಯವು ಇದೆ ಎಂದಾಯಿತು.
2 comments:
ಒಳ್ಳೇ ಐಡಿಯಾ!!! ವಿಬಿನ್ನವಾಗಿ ಯೋಚಿಸಿ ಕಾರ್ಯರೂಪಕ್ಕೆ ತಂದಿದ್ದಾರೆ.ನಮ್ಮಲ್ಲಿಯಾಗಿದ್ದರೇ ಹತ್ತು ಹದಿನೈದು ಹಂಪುಗಳನ್ನು ಹಾಕುತ್ತಿದ್ದರು.
ಜಾಂಜಿಬಾರಿನಲ್ಲಿ ಇರೋ ಮಂಗಗಳು ಕೆಲವು ದಿನಗಳಲ್ಲಿ ಹೊಂದಿಕೊಳ್ಳಬಹುದು. ನಮ್ಮಲ್ಲಿ ಜಾನುವಾರುಗಳು ಮೊದ ಮೊದಲು ರಸ್ತೆಯಲ್ಲಿ ವಾಹನ ಬಂದರೆ ದಿಕ್ಕಾಪಾಲಾಗಿ ಓಡುತ್ತಿದ್ದವು. ಈಗ ಎಷ್ಟು ಹಾರನ್ ಮಾಡಿದರು ಏಳೋದೇ ಇಲ್ಲ!!!
ಪ್ರಿಯ ಯಜ್ನೇಶ್
ನಿಜ ನೀವು ಹೇಳಿದಂತೆ ಹಂಪ್ ಹಾಕಿ ನಮ್ಮ ಬೆನ್ನುಲುಬು ಪುಡಿಯಾಗುವಂತೆ ಗಾಡಿಗಳು ಬೇಗ ಲಟಾರಿ ಆಗುವಂತೆ ಮಾಡುತ್ತಿದ್ದರು. ಅಲ್ಲಿ ತುಂಬ ಯುರೋಪಿಯನ್ ಪ್ರವಾಸಿಗಳು ಓಡಾಡುವ ಜಾಗವಾದುದರಿಂದ ಈ ಯೋಜನೆ ಕಾರ್ಯಗತವಾದುದು ಇರಲೂ ಬಹುದು.
ಜಾಂಜಿಬಾರಿನ ಮಂಗಗಳಿಗೆ ತರಬೇತಿ ಮಾದುವಂತಹ ಮಂಗಗಳು ಅಲ್ಲಿಲ್ಲದ ಕಾರಣ ಯೋಜನೆ ವಿಫಲವಾಗಿರಬಹುದು ಅನ್ನಿಸುತ್ತದೆ.
Post a Comment