Wednesday, February 16, 2011

ಬೆಂಬಲ ವಾಹನದೊಂದಿಗೆ ೧೩೫ ಕಿಮಿ ಸವಾರಿ

ದಿನಕ್ಕೆ  ನೂರ  ಐವತ್ತೈದು ಕಿಮಿ  ಸೈಕಲಿಸಿದ ನನಗೆ    ಇನ್ನೂರು  ಕಿಮಿ ದಾಟುವ  ಆಸಕ್ತಿ  ಮನದೊಳಗಿತ್ತು. ಸಮಯಕ್ಕೆ   ಸರಿಯಾಗಿ   ಅತ್ಮೀಯರಾದ ಶಂಕರಣ್ಣ   ಅವರ ನಾನೊ ಕಾರಿಗೊಂದು   inverter  ಅಳವಡಿಸಿ  ಬೆಂಬಲ  ವಾಹನವಾಗಿ     ಜತೆಗೂಡುವ   ಅಬಿಪ್ರಾಯ  ಮುಂದಿಟ್ಟರು.  ಹಾಗೆ   ನಮ್ಮ   ಪ್ರಯಾಣ  ತೀರ್ಮಾನವಾಗುವಾಗಲೇ  ತಮ್ಮ  ಮೋಹನ  ಬರುತ್ತಾನೋ  ಕೇಳುತ್ತೇನೆಂದು   ಅವರ  ಸಂಚಾರವಾಣಿಗೆ  ಕರೆ ಮಾಡಿದರು.

ಎಲುಬು  ನೋವಿನಿಂದಾಗಿ   ಚಳಿ  ಬಗ್ಗೆ  ಅಳಕುತ್ತಾ   ಬೆಳಗ್ಗೆ  ಆರು ಘಂಟೆಗೆ  ಮೂರು ಪದರ  ಬಟ್ಟೆ  ದರಿಸಿ ದೀಪ  ಉರಿಸಿಕೊಂಡು   ಮನೆಯಿಂದ ಹೊರಟೆ.  ಟ್ರೈಕಿಗೆ ಅಳವಡಿಸಿದ ಮಾಪಕ  ಮಳೆಗೆ  ಹಾಗೂ   ಚಳಿಗೆ  ತರಲೆ ಮಾಡುವ ಕಾರಣ   ಬಿಸಿಲೇರುವ ತನಕ ಅದರ ಸಂಪರ್ಕ ತಪ್ಪಿಸಿದೆ.  ಹಾಗೆ  ಮೊದಲ ಹತ್ತು ಕಿಮಿ ದೂರವನ್ನು    ಜಿಪಿಎಸ್   ಅಳೆದರೂ  ಅಲ್ಲಿ    ಉಪಯೋಗವಾದ   ಬಾಟರಿ  ಶಕ್ತಿ ಮಾಹಿತಿ  ಅಲಭ್ಯವಾಯಿತು.     ನೇರಲಕಟ್ಟೆ  ಬಳಿ ಹೆದ್ದಾರಿ  ಅಗೆದು ಹಾಕಿರುವುದರಿಂದ ಒಳ ರಸ್ತೆಯಲ್ಲಿ     ಬೆಂಗಳೂರು  ಹೆದ್ದಾರಿಗೆ  ಸೇರಿದೆ. 



ಉಪ್ಪಿನಂಗಡಿಗೆ   ಶಂಕರಣ್ಣ   ಮೋಹನರ  ತಂಡ  ತಲಪುವಾಗ  ನಾನು ತಿಂಡಿ ತಿಂದು  ಹೊಟೇಲಿನಿಂದ  ಹೊರಬರುತ್ತಿದ್ದೆ.   ಅಷ್ಟರ ವರೆಗೆ  ಉಪಯೋಗಿಸಿದ  ಬಾಟರಿ  ನಾನೊದಲ್ಲಿ ಚಾರ್ಜಿಗಿಟ್ಟು  ಅವರು ತಿಂಡಿಗೆಂದು    ಹೊಟೇಲಿಗೆ ಹೋದರೆ    ನಾನು  ತ್ರಿಚಕ್ರ ಏರಿ  ನೆಲ್ಯಾಡಿ ದಿಕ್ಕಿನಲ್ಲಿ ಸಾಗಿದೆ.  ಸ್ವಲ್ಪ  ದೂರದಲ್ಲಿ    ಸಿಕ್ಕಿದ ದಿನಕರ್  ನಮಗೆ   ದಾರಿ ಮಾರ್ಗದರ್ಶನ  ಮಾಡಿ ಕೊಕ್ಕಡದೆಡೆಗೆ  ಚಲಿಸಿದರೆ ನಾವು  ದರ್ಮಸ್ಥಳ  ದಾರಿ ಹಿಡಿದೆವು.  ದರ್ಮಸ್ಥಳ  ಸೇರುವ   ಸ್ವಲ್ಪ    ಮೊದಲು   ಶಂಕರಣ್ಣ   ಚಾರ್ಜರ್ ವೈರ್ ಬಿಸಿಯಾಗಿದೆ, ನಿರೀಕ್ಷಿತ  ಮಟ್ಟದಲ್ಲಿ  ಆಗುತ್ತಿಲ್ಲವೆಂದಾಗ   ನನಗೆ   ಲಕ್ಷಣ  ಚೆನ್ನಾಗಿಲ್ಲವೆನಿಸಿತು. 

ಗುರುವಾಯನಕೆರೆ  ದಾಟುವಾಗ   ನನಗೆ  ಇಪ್ಪತ್ತು ವರ್ಷ  ಹಿಂದಿನ  ಪರಿಚಯದ   ರಂಜನ್ ರಾಯರ ನೆನಪು.  ಆಗ  ನಮ್ಮ ಬೆನ್ನಟ್ಟಿದ   ಟಿವಿ  ಚಿತ್ರಣದವರೊಬ್ಬರು   ಸಂದರ್ಶನ  ಅಪೇಕ್ಷಿಸಿದರು.   ರಂಜನ್ ಅವರು ಊರಲ್ಲಿದ್ದಾರೆಂಬುದು   ನಾನು  ತಪ್ಪು ಅರ್ಥ ಮಾಡಿಕೊಂಡರೂ   ಶ್ರೀಮತಿ ವಿದ್ಯಾ ನಾಯಕ್  ನನಗೆ  ಬಾಟರಿ  ಚಾರ್ಜ್  ವ್ಯವಸ್ಥೆಮಾಡಿಕೊಟ್ಟರು.  ಅಲ್ಲಿ      ಟಿವಿಯ  ಛಾಯಾಗ್ರಾಹಕರು  ತಮ್ಮ    ಪತ್ರಿಕಾ ವರದಿಗಾರ   ಮಿತ್ರರನ್ನು   ಕರೆಸಿ  ಒಂದು  ಸಂದರ್ಶನವನ್ನೂ   ಮಾಡಿಸಿದರು.  ಮಧ್ಯಾಹ್ನದೊಳಗೆ   ನಾವು ಸಾಕಷ್ಟು ಸಮಯ  ಕಳಕೊಂಡಿದ್ದು     ಇನ್ನೂರು  ಕಿಮಿ  ದಾಟುವ   ಗುರಿಯಿಂದ   ನಾವು  ಹಿಂದೆ ಸರಿಯುವುದು  ಅನಿವಾರ್ಯವಾಯಿತು.  ಅಷ್ಟರೊಳಗೆ     ಶಂಕರಣ್ಣ   ಸರಿಪಡಿಸಿದ  ಕಾರಿನಲ್ಲಿದ್ದ      ಇನ್ವರ್ಟರ್  ಬಾಟರಿ   ಚಾರ್ಜ್ ಮಾಡುತ್ತಿದ್ದರೂ   ನಾವು  ರಾತ್ರಿಯಾಗುವುದರ  ಮೊದಲು  ಗೂಡು  ಸೇರುವ  ತೀರ್ಮಾನ    ಮಾಡಿಯಾಗಿತ್ತು. 

ಈ  [ನಮ್ಮ ಟಿವಿ ]  ಚಿತ್ರಕರಣದವರು  ಬೈಕೇರಿ  ಕೆಲವು ಕಿಮಿ  ನಮ್ಮನ್ನು  ಹಿಂಬಾಲಿಸಿದ್ದರೆ  ಉಜ್ರೆಯಲ್ಲಿ  ಸ್ಟುಡಿಯೊದವರೊಬ್ಬರು  ಕೆಮರ  ಹಿಡಿದುಕೊಂಡು ಬಸ್ಸು  ಏರಿದ್ದರು.    ರೀತಿ  ಕುತೂಹಲದಿಂದ   ಹಿಂಬಾಲಿಸುವ  ವಿಚಾರ ನನಗೆ ಮಾಮೂಲಾಗಿ ಬಿಟ್ಟಿದೆ.  ಆದರೆ  ಗುರಿ ಮರೆಯುವಷ್ಟು  ಅವರಿಗೆ  ವಿವರಿಸುತ್ತಾ ಕೂರಬಾರದೆನ್ನುವ  ಎಚ್ಚರಿಕೆಯನ್ನೂ  ವಹಿಸುತ್ತೇನೆ.   
  

ಹಾಗೆ  ವೇಣೂರಲ್ಲಿ  ಊಟ / ಗೋಮಟೇಶ್ವರ  ಪ್ರತಿಮೆ    ಪಕ್ಕದ   ರಸ್ತೆಯಲ್ಲಿ  ತ್ರಿಚಕ್ರ ನಿಲ್ಲಿಸಿ  ಪೋಟೊ  ತೆಗೆದೆ.  ನಂತರ  ಮಣಿಹಳ್ಳ ರಸ್ತೆಯಾಗಿ  ಬಂಟ್ವಾಳ   ಮೂಲಕ  ಊರಿಗೆ.  ವೇಣೂರು  ಮಣಿಹಳ್ಳ  ರಸ್ತೆ ಸಪೂರವಾಗಿದ್ದು  ಕಡಿದಾದ  ಏರು ಇಳಿವಿನಿಂದ ಕೂಡಿದ್ದರೂ   ಟ್ರೈಕ್ ಚಾಲನೆ ಮಜವಾಗಿತ್ತು.    ಯಥಾಪ್ರಕಾರ ಕಲ್ಲಡ್ಕದ ಕೆಟಿ ಹೋಟೆಲಿನಲ್ಲೊಂದು  ಚಾ. 

ನಮ್ಮ ಉದ್ದೇಶಿತ   ೨೦೦ ಕಿಮಿ   ದೂರ  ಸಾದ್ಯವಾಗದಿದ್ದರೂ  ಮೋಹನರ  ಚಾಲನೆ ಸಮಯ  ಶಂಕರಣ್ಣ  ಕೆಮರದೊಂದಿಗೆ   ಕೂತಿದ್ದರಿಂದ   ವಿಡಿಯೊ   ಚಿತ್ರಗಳು  ಲಭ್ಯವಾದವು.  ಇಲ್ಲಿ  ಕ್ಲಿಕ್ಕಿಸಿದರೆ    ಐದು ವಿಡಿಯೋ ಚೂರುಗಳಿವೆ.     ದಿನವೂ  ದಾರಿಯಲ್ಲಿ  ಸಿಗುವ    ಹಲವಾರು ಜನ  ಅವರವರ    ಕೆಮರದಲ್ಲಿ  ಮೊಬೈಲಿನಲ್ಲಿ   ನನ್ನ    ಹಾಗೂ   ಟ್ರೈಕಿನ   ಚಿತ್ರಣ  ಮಾಡಿದರೂ  ನಮಗೆ  ಅದು  ದೊರಕುವುದಿಲ್ಲ.  ಇಂದಿನ  ಚಾಲನೆಯಲ್ಲಿ  ಅತಿ  ಹೆಚ್ಚು  ಚಿತ್ರಣ  ದೊರತದ್ದು   ಸಂತಸದ  ವಿಚಾರ.  ನಾನು  ಒಬ್ಬನೇ  ಹೋದಾಗ   ಟ್ರೈಕಿನಲ್ಲಿದ್ದುಕೊಂಡು ತೆಗೆದ ಚಿತ್ರಗಳು   ಕೆಮರ ಹಿಂದಿರುವ   ಟ್ರೈಕ್  ಹಾಗೂ   ನನ್ನನ್ನು ತೆರೆಮರೆಯಲ್ಲಿಯೇ  ಉಳಿಸುತ್ತದೆ.



ಆರು ಘಂಟೆ  ಸಮಯದಲ್ಲಿ   ನೂರ ಮೂವತ್ತೈದು ಕಿಮಿ  ಕ್ರಮಿಸಿದ್ದೇವೆ.   ಚಾರ್ಜಿಂಗ್ ಗೊಂದಲ ಒತ್ತಡದಿಂದಾಗಿ    ಒಂದೆಡೆ  [ ಬೆಳ್ತಂಗಡಿಯಲ್ಲಿ]  ಜಿಪಿಎಸ್  ಚಾಲನೆ ಮಾಡಲು    ಮರೆತಿದ್ದೆ.  ಸುಮಾರು  ಸಾವಿರದ  ಐದು ನೂರು  ವಾಟ್ಸ್  ಶಕ್ತಿ ಬಾಟರಿಯಿಂದ    ಬಳಕೆ.  ವೇಗವಾಗಿ  ಸಾಗಲು  ಮಾಡಿದ   ಪ್ರಯತ್ನ   ಹಾಗೂ  ಕಡಿದಾದ  ಏರು ರಸ್ತೆ    ಬಾಟರಿ ಬಳಕೆಯನ್ನು   ಹೆಚ್ಚಿಸಿತು.              

1 comment:

Pejathaya said...

ಸಪೋರ್ಟ್ ವಾಹನ ಇದ್ದರೆ ಹತ್ತಾನೆ ಬಲ!