Sunday, July 06, 2008

ನಿಮ್ಮ ಮಗಳನ್ನು ಪದವೀದರ ಕೃಷಿಕನಿಗೆ ಕೊಡುವಿರಾ ?

ಬೆಂಗಳೂರಿನಿಂದ ಪ್ರಕಟವಾಗುವ ಹವ್ಯಕ ಪತ್ರಿಕೆಯ 2008 ಫೆಬ್ರವರಿ ತಿಂಗಳ್ಲಿ ಪ್ರಕಟವಾದ ಈ ಶತಮಾನದ ಕೊನೆಯಲ್ಲಿ ಹಳ್ಳಿಯಲ್ಲಿ ಹವ್ಯಕರು ಇಲ್ಲವಾದರೆ ? ಎನ್ನುವ ಲೇಖನಕ್ಕೆ ಇದು ಪ್ರತಿಕ್ರಿಯೆ ಬರಹ. ಅಡಿಕೆ ಪತ್ರಿಕೆಯ ಅದುವೇ ಸಮಯ ಪ್ರಕಟವಾದ ಹಿರಿಯ ಹವ್ಯಕರಿಂದ ಬರೆಯಲ್ಪಟ್ಟ ಲೇಖನದಲ್ಲೂ ಇಲ್ಲೂ ಹಲವಾರು ಸಮಾನ ಅಂಶಗಳಿರುವ ಕಾರಣ ನನ್ನ ಪ್ರತಿಕ್ರಿಯೆಯಲ್ಲೂ ಕೆಲವಂಶ ನನ್ನ ಮೆ 22 ರ ಬ್ಲೋಗ್ ಮನೆಗೆ ಆಧಾರವಾಗಿರುವವನಿಗೆ ಶಾಪವಿಮೋಚನೆಯಿಲ್ಲ ಬರಹದಲ್ಲೂ ಕಾಣಬಹುದು.

ಹಳ್ಳಿಯಲ್ಲಿರುವ ಹೆಚ್ಚಿನ ಹವ್ಯಕರು ಕೃಷಿ ಅವಲಂಬಿತರು. ಬಹು ಪಾಲು ಜನ ಅನಿರೀಕ್ಷಿತ ಕ್ಷಣದಲ್ಲಿ ಆಸ್ತಿ ಪಾಲಿನ ವಿಚಾರದಲ್ಲಿ ಹೊಡೆತ ತಿಂದವರು. ಹಾಗಾಗಿ ಕೃಷಿಕರ ಅನಿಸಿಕೆಗಳ ಬಗ್ಗೆ ಪಟ್ಟಿ ಮಾಡುತ್ತಾ ಸಾಗುವೆ.

ಪ್ರತಿ ದಿನವೂ ಎಂಬಂತೆ ಹಳ್ಳಿಯಲ್ಲಿರುವ ಆಸ್ತಿ ಮಾರಿ ಪಟ್ಟಣ ಸೇರುತ್ತಿರುವ ಹವ್ಯಕರ ಸಂಖ್ಯೆ ಹಾಗೂ ಹಳ್ಳಿಗಳಲ್ಲಿ ಏರುತ್ತಿರುವ ಮದುವೆಯಾಗದ ಹುಡುಗರ ಸಂಖ್ಯೆ ಕಂಡು ನಾನು ಉಲ್ಲೇಖಿಸಿದ ಲೇಖನ ರೂಪುಗೊಂಡಿರಬಹುದು. ಇಂದು ನಿಜವಾಗಿ ನಮ್ಮ ಮುಂದಿರುವ ಪ್ರಶ್ನೆ -ಹವ್ಯಕರು ಒಂದು ಸಮಾಜವಾಗಿ ಉಳಿಯುವರೋ ? ನಶಿಸುವರೋ ? ಎನ್ನುವುದು ಹೆಚ್ಚು ಸಮಂಜಸ ಹೊರತು ಹಳ್ಳಿಯಲ್ಲಿ ಅನ್ನುವುದು ಅಪ್ರಸ್ತುತ ಎಂದು ನನಗೆ ಅನ್ನಿಸುತ್ತದೆ. ಒಂದು ಲೆಕ್ಕದಲ್ಲಿ ಕೆಲವು ದಶಕಗಳಲ್ಲಿ ಜನಸಾಗರದ ಮದ್ಯೆ ಪ್ರತ್ಯೇಕತೆ ಸಂಪೂರ್ಣ ಕಳಕೊಂಡ ಹವ್ಯಕರ ಸ್ಥಿತಿ ಅವಿಲಿನಲ್ಲಿರುವ ತರಕಾರಿಯಂತೆ ಅಗಲೂ ಬಹುದು.

ಹಳ್ಳಿಯಲ್ಲಿರುವ ಹುಡುಗರಿಗೆ ಮದುವೆಯಿಲ್ಲ ಎನ್ನುವ ಬಹುಕಾಲದ ಹೇಳಿಕೆ ಕಂಡು ರೋಸಿ ಹೋಗಿ ಈ ಪ್ರತಿಕ್ರಿಯೆ. ನೈಜ ಸಮಸ್ಯೆಯ ಅರಿಯುವ ಗೊಡವೆಗೆ ಹೋಗದೆ ಒಂದೇ ಮುಖದ ಹಲವು ಲೇಖನಗಳು ಪ್ರಕಟವಾಗಿವೆ. ಇದಕ್ಕೆ ನಮ್ಮ ಸಮಾಜದ ಊರ ಹೊರಗಿರುವ ಸಂಬಂದಿಗಳು ಪ್ರಮುಖ ಕಾರಣ ಎನ್ನುವುದು ನಂಬಲು ಸಾದ್ಯವಾಗದ ಕಟು ಸತ್ಯ. ಕುಟುಂಬದ ಸಂಪನ್ಮೂಲಗಳು ಬಹುಕಾಲದಿಂದ ಪಟ್ಟಣಾಬಿಮುಖವಾಗಿ ಚಲಿಸುತ್ತಿವೆಯಾದರೂ ಪರೀಸ್ಥಿತಿ ಇಷ್ಟು ಕೆಟ್ಟದಾಗಿರಲಿಲ್ಲ. ಈಗ ಹಳ್ಳಿವಾಸಿಗೆ ಉಳಿದವರ ಸೇವೆ ಮಾಡಿ ಮಾಡಿ ಲಂಗೋಟಿ ಉಳಿಸಿಕೊಳ್ಳಲು ಪರದಾಡುವ ಪರೀಸ್ಥಿತಿ.

ಲೇಖನದಲ್ಲಿ ಚರ್ಚಿಸಿದಂತೆ ಸಹಪಂಕ್ತಿ ಸಮಾಜದಿಂದ ಹುಡುಗಿಯನ್ನು ತರುವುದು ಸಮಸ್ಯೆ ಬಗೆ ಹರಿಸದು. ಇದರಿಂದ ಕೊಳುಯುತ್ತಿರುವ ಸಮಾಜಕ್ಕೆ ಸುಗಂದ ಪೂಸಿದಂತಾಗುವುದು ಅಷ್ಟೆ. ಮಾದ್ವರಿಗೆ ತಾವು ಹವೀಕರಿಂದ ಬಿನ್ನ ಅನ್ನುವ ಬಾವನೆ ಇರುವಾಗ ಹಲವಾರು ಹೊಸ ಬಗೆಯ ಸಮಸ್ಯೆಗಳು ಖಂಡಿತಾ ಈ ನವ ದಂಪತಿಗಳನ್ನು ಬಾದಿಸುತ್ತದೆ. ಅವನಿಗೆ ಸಹಪಂಕ್ತಿ ಸಮಾಜದ ಹೆಣ್ಣು ತರುವ ಎಂದು ಇತರರಿಗೆ ಹೇಳಲು ಹಕ್ಕಿದೆ ಎಂದು ನನಗನ್ನಿಸುವುದಿಲ್ಲ. ಹಾಗೆಂದು ನಾನು ಅಂತರ್ಜಾತಿ ವಿವಾಹದ ವಿರೋದಿಯೇನಲ್ಲ. ಆದರೆ ಏನೂ ತ್ಯಾಗ ಮಾಡದ ಇತರರಿಗಾಗಿ ಒಬ್ಬ ವ್ಯಕ್ತಿ ಮನೆಯ ಉಳಿವಿಗಾಗಿ ಎನ್ನುವ ನೆಪದಲ್ಲಿ ಬಲಿಪಶುವಾಗುವುದು ನನಗೆ ಸಮ್ಮತವಲ್ಲ. ಅಷ್ಟಕ್ಕೂ ಇತರ ಸಮುದಾಯದಿಂದ ಮದುವೆಯಾಗಿ ಹಳ್ಳಿಯಲ್ಲಿ ಸಾದಿಸುವುದು ಏನು ?? ಮತ್ತು ಯಾರಿಗಾಗಿ ?? ಎನ್ನುವ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ.

ಪರಂಪರೆ ಉಳಿಯ ಬೇಕಾದರೆ ಸಮಾಜದ ದೋರಣೆ ಬದಲಾಗಬೇಕು ಹೊರತು ಇನ್ನೊಂದು ತಲೆಮಾರಿನ ಹುಡುಗರನ್ನು ಹರಿಕೆ ಕುರಿ ಮಾಡುವುದರಲ್ಲಿ ಅರ್ಥವಿಲ್ಲ. ಸಾಮಾಜಿಕ ಬದ್ದತೆ ಇರುವ ಎಳೆಯ ವಯಸ್ಸಿನವರ ದ್ವನಿ ಬಲೀಷ್ಟವಾದಾಗ ನಿರ್ಣಾಯಕ ಶಕ್ತಿಗಳು ಇವರ ಸಮಸ್ಯೆ ಅಲಿಸುವಾಗ ಸಮಸ್ಯೆ ಪರಿಹಾರವಾಗಬಹುದು. ಈ ಯುವಕ ಯುವತಿಯರ ಸಬಲಿಕರಣ ಇಂದಿನ ತುರ್ತು ಅಗತ್ಯ ಹೊರತು ಇತರ ಸಮಾಜದ ಹುಡುಗಿಯನ್ನು ತರುವುದಲ್ಲ.

ಮನೆ ದೆವರು ಊರ ದೇವಸ್ಥಾನ ಸಂಸ್ಕೃತಿ ಪರಂಪರೆ ಬಗೆಗೆ ಬೊಗಳೆ ಬಿಡುವ ಜನರು ಕಾರ್ಯಕ್ರಮದಲ್ಲಿ ಉತ್ಸವ ಮೂರ್ತಿಗಳಾಗಿ ಕಂಗೊಳಿಸುತ್ತರೆ. ಬದ್ದತೆ ವರ್ತನೆಯಲ್ಲಿರಬೇಕು ಹೊರತು ತೋರ್ಪಡಿಕೆಯಲ್ಲಿ ಅಲ್ಲ. ಇಲ್ಲಿರುವವನಿಗೆ ಅತ್ಮಗೌರವ ಅಡವಿಡುವ ಪರೀಸ್ಥಿತಿ. ತರವಾಡು ಮನೆಗೆ ಆದಾರವಾಗಿದ್ದಾನೆ ಎಂದು ಅಬಿಮಾನದ ಬದಲು ಮೂದಲಿಕೆ ಕೇಳುವ ಅವನ ಜೀವನ ನರಕ.

ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿರುವ ಸ್ವಯಂ ಘೋಷಿತ ದೈವಿ ಶಕ್ತಿಗಳು ಸಹಾ ನಮ್ಮ ಹವ್ಯಕ ಸಂಸ್ಕೃತಿಗೆ ಪರಂಪರೆಗೆ ಮಾರಕ. ಆಕರ್ಷಕವಾಗಿ ಹೊರ ನೋಟ ಹೊಂದಿದ ಆದರೆ ಸಾಂಪ್ರದಾಯಕ ಶಿಷ್ಯ ವರ್ಗ ಇಲ್ಲದ ಇವು ತಮ್ಮ ಪ್ರಬಾವ ಹೆಚ್ಚಿಸಿಕೊಳ್ಳಲು ಹಲವಾರು ಆಟಗಳನ್ನು ಆಡುತ್ತವೆ. ಕ್ರೈಸ್ತ ಮತ್ತು ಇಸ್ಲಾಂ ಮತ ಪ್ರಚಾರಕರಿಗೆ ಬಿನ್ನವಲ್ಲದ ಇವುಗಳ predatory ದೋರಣೆ ನಮ್ಮ ಗುರು ಪೀಠಕ್ಕೆ ಮಾತ್ರವಲ್ಲ ಸಂಸ್ಕೃತಿ ಪರಂಪರೆಗೂ ಮಾರಕ. ಮನೆಯಲ್ಲಿರುವವಳಿಗಿಂತ ಇವಳೇ ಹೆಚ್ಚು ಅಕರ್ಷಕ ಎಂದು ಬಾವಿಸಿದಂತಾಗುತ್ತಿದೆ ನಮ್ಮವರ ವರ್ತನೆ.


ಕೆಲವು ಸಮಯದ ಹಿಂದೆ ವಿಶ್ವವಿದ್ಯಾನಿಲಯದ ಸಂಶೋದನ ವಿಧ್ಯಾರ್ಥಿಯೊಬ್ಬರು ವಂಶಶಾಹಿಗಳ ಬಗೆಗೆ ಅಧ್ಯಯನ ಮಾಡಲು ಹವ್ಯಕರನ್ನು ಆಯ್ದುಕೊಂಡಿಇದ್ದರು. ಕಾರಣ ಹವ್ಯಕರಲ್ಲಿ ಸಂಕರವಾದುದು ಕಡಿಮೆ. ಆದರೆ ಇನ್ನು ಮುಂದೆ ಹವ್ಯಕ ಜನಾಂಗ ಉಳಿಯ ಬೇಕಾದರೆ ಹಳ್ಳಿಯಲ್ಲಿ ಬೇರುಮಟ್ಟದಲ್ಲಿ ಪ್ರಯತ್ನಿಸಿದರೆ ಮಾತ್ರ ಸಾದ್ಯ. ಪಟ್ಟಣಗಳಲ್ಲಿ ಹವ್ಯಕೇತರ ಜತೆ ನಡೆಯುವ ಮದುವೆ ಪ್ರಮಾಣ ಶೇಕಡವಾರು ಹೆಚ್ಚುತ್ತಲಿದೆ. ಹೆಚ್ಚಿನ ವಿಧ್ಯಾಬ್ಯಾಸ ಮತ್ತು ಉನ್ನತ ಉಧ್ಯೋಗ ಇವೆರಡೂ ಇಂದಿನ ಜನಾಂಗದ ಯುವಜನರನ್ನು ಹವ್ಯಕ ಸಮಾಜದಿಂದ ದೂರ ಮಾಡುತ್ತಿವೆ. ಸಹ ಉಧ್ಯೋಗಿಗಳ ಸಹಪಾಠಿಗಳ ನಡುವೆ ನಡೆಯುವ ಮದುವೆ ಹೆಚ್ಚುತ್ತಲಿದೆ. ಅದುದರಿಂದ ಹೊಸ ಗಾಳಿ ಬೀಸದ ಹಳ್ಳಿಗಳಲ್ಲಿ ಮಾತ್ರ ಕೆಲವು ಹವ್ಯಕ ಕುಟುಂಬಗಳು ಈ ಶತಮಾನದ ನಡುವಿನಲ್ಲಿ ಕಾಣಸಿಗಬಹುದು.

ಹವಾಮಾನ ಬೆಳೆ ಬೆಲೆ ಕೂಲಿಯಾಳುಗಳ ತೊಳಲಾಡುತ್ತಿರುವ ರೈತ ಸುದ್ದಿಯಾಗುವುದೇ ಇಲ್ಲ. ರೈತನಾದವನು ರಾತ್ರಿ ವಿಧ್ಯುತ್ ಕಾಯುತ್ತಾ ನಿಶಾಚರನಾದರೆ ಪಟ್ಟಣದಲ್ಲಿರುವ ಪಾಲುದಾರ ಈ ವರ್ಷ ಮನೆಯಿಂದ ಎಷ್ಟು ಕೀಳಬಹುದೆಂದು ಕನಸು ಕಾಣುತ್ತಾ ಸುಖ ನಿದ್ರೆಯಲ್ಲಿರುತ್ತಾನೆ. ನಾಲ್ಕುಎಕ್ರೆ ಅಡಿಕೆತೋಟವ್ದವನಿಗಿಂತ ಪಟ್ಟಣದಲ್ಲಿ ನಾಲ್ಕು ಚಕ್ರದ ಆಮ್ಲೇಟು ಗಾಡಿಯವ ಚೆನ್ನಾಗಿ ಜೀವನ ನಡೆಸುತ್ತಾನೆ. ಮಕ್ಕಳನ್ನು ಪಾರ್ಕಿಗೆ ಹೇಂಡತಿಯನ್ನು ಸಿನೆಮಕ್ಕೆ ಕರೆದೊಯ್ಯಲು ಅವನಿಗೆ ಬಿಡುವು ಇರುತ್ತದೆ. ಕೃಷಿಯೆಂದರೆ ಹೈನುಗಾರಿಕೆಯೆಂದರೆ ಬಿಡುವಿನ ಕಲ್ಪನೆಯಿರದ ನಿರಂತರ ಒತ್ತಡದ ಉದ್ಯೋಗ. ಪಟ್ಟಣದಲ್ಲಿರುವ ಸಂಬಂದಿಗಳು ಹೆಚ್ಚು ಸಹಕರಿಸಿದರೆ ಹಳ್ಳಿಯಲ್ಲಿರುವವನ ಜೀವನ ಉತ್ತಮವಾಗಿರಲು ಸಾದ್ಯ.

ಹಳ್ಳಿಯಲ್ಲಿರುವವನ ಮಕ್ಕಳಿಗೆ ಪಟ್ಟಣದ ಮಕ್ಕಳ ಜೀವನ ಅವಕಾಶಗಳು ತೆರೆದುಕೊಳ್ಳುವುದಿಲ್ಲ. ಸಂಬಂದಿಕರ ಮಾತ್ರವಲ್ಲ ಮನೆಮಂದಿಯ ಅಬಿಮಾನದ ಕಣ್ಣೆಲ್ಲ ಊರ ಹೊರಗಿರುವವನ ಮತ್ತು ಅವನ ಮಕ್ಕಳ ಮೇಲೆ ಎಂಬ ವಿಚಾರದಿಂದ ಹಳ್ಳಿಯಲ್ಲಿವವನಿಗೆ ಬಂದನದಲ್ಲಿರುವ ಅನುಭವ. ಅದುದರಿಂದ ಮಕ್ಕಳ ವಿದ್ಯಬ್ಯಾಸದ ಮತ್ತು ಅವರು ವಾಪಾಸು ಹಳ್ಳಿಗೆ ಹಿಂತಿರುಗದ ನೆಪದಲ್ಲಿ ಬಹುಪಾಲು ಜನ ಹವ್ಯಕರು ಮುಂದೆಯೂ ಪಟ್ಟಣ ಸೇರಲಿದ್ದಾರೆ. ಒಂದು ಲೆಕ್ಕದಲ್ಲಿ ಹಳ್ಳಿಯಲ್ಲಿರುವುದರ ವಿರುದ್ದ ಎಲ್ಲರೂ ಮತ ಚಲಾಯಿಸುತ್ತಿದ್ದಾರೆ. ಹೆಚ್ಚು ಜನ ಪಟ್ಟಣ ಸೇರಿದಂತೆ ಪ್ರತ್ಯೇಕತೆ ಉಳಿಸಿಕೊಳ್ಳುವ ಸಾದ್ಯತೆ ಕ್ಷೀಣಿಸುತ್ತದೆ. ಜಾತಿಯೊಳಗಿನ ಬಾವನಾತ್ಮಕ ಸಂಬಂದಗಳು ಸಡಿಲವಾಗುತ್ತಾ ಹೋಗುತ್ತದೆ.

ಸಾಮಾನ್ಯವಾಗಿ ಹಳ್ಳಿಮನೆಯಲ್ಲಿ ಜರಗುವ ನಿರ್ಣಾಯಕ ಸಭೆಯಲ್ಲಿ ಸಮಸ್ಯೆಗಳ ಹೆಚ್ಚು ಅರಿವು ಇರುವ ಹಳ್ಳಿ ಮನೆಯ ಉಸ್ತುವಾರಿಯ ಸ್ಥಾನ ಕಾಫಿ ಚಾ ಸರಬರಾಜು ಮಾಡಿ ಮೂಲೆಯಲ್ಲಿ ಕೈ ತಟ್ಟಿ ನಿಲ್ಲುವುದಾಗಿರುತ್ತದೆ. ಬೆಂಗಳೂರಿನಲ್ಲಿರುವವರ ಅಮೇರಿಕದಲ್ಲಿರುವವರ ಬದಲಾಗಿ ಮನೆಯ ಉಸ್ತುವಾರಿಯ ಅದ್ಯಕ್ಷತೆಯಲ್ಲೇ ಈ ಸಭೆಗಳು ನಡೆಯ ಬೇಕು. ಆಗ ನಮ್ಮ ಸಮಾಜದ ಚೇತರಿಕೆ ಸಾದ್ಯ.

ನಿಜ ಹೇಳಿ ನೀವು ನಿಮ್ಮ ಮಗಳನ್ನು ಹಳ್ಳಿಯಲ್ಲಿರುವ ಕೂಡು ಕುಟುಂಬದ ಆಸ್ತಿ ನೋಡಿಕೊಳ್ಳುತ್ತಿರುವ ಪದವೀದರ ಕೃಷಿಕನಿಗೆ ಕೊಡುವಿರಾ ? ಹವ್ಯಕ ಸಮಾಜ ಉಳಿಯಲು ನಿಮ್ಮ ಪಾಲಿನ ಅಳಿಲು ಸೇವೆಗೆ ತಯಾರಿದ್ದಿರೋ ?





`

No comments: