ಹವ್ಯಕ ಪತ್ರಿಕೆಯ 2008 ಫೆಬ್ರವರಿ ತಿಂಗಳಲ್ಲಿ ಪ್ರಕಟವಾದ ಈ ಶತಮಾನದ ಕೊನೆಯಲ್ಲಿ ಹಳ್ಳಿಯಲ್ಲಿ ಹವ್ಯಕರು ಇಲ್ಲವಾದರೆ ? ಎನ್ನುವ ಲೇಖನಕ್ಕೆ ಪ್ರತಿಕ್ರಿಯೆ ಬರಹವನ್ನು ಬರೆದು ಸದ್ರಿ ಪತ್ರಿಕೆಗೆ ಕಳುಹಿಸಿದ್ದೆ. ಉಳಿದರೆ ಹಳ್ಳಿಯಲ್ಲಿ ಮಾತ್ರ ಎಂಬ ಅರ್ಥದಲ್ಲಿ ನಾನು ಪ್ರತಿಕ್ರಿಯೆ ಬರಹ ಬರೆದು ರವಾನಿಸಿ ಹದಿನೈದು ದಿನಗಳಾದರೂ ಯಾವ ಪ್ರತಿಕ್ರಿಯೆಯೂ ಇಲ್ಲದಿದಿರುವುದು ನೋಡಿ ಅವರಿಗೊಂದು ಒಂದು ನೆನಪೋಲೆ ಕಳುಹಿಸಿದೆ. ಅದರಲ್ಲೊಂದಷ್ಟು ಪೂರಕ ಮಾಹಿತಿ ಬರೆದಿದ್ದೆ. ನಂತರವೂ ಈ ಬಗ್ಗೆ ಅವರಿಂದ ಯಾವ ಉತ್ತರವೂ ಇಲ್ಲದ ಕಾರಣ ನನ್ನ ಬರಹ ಅವರ ಪ್ರಕಟಣಾ ಮಾನದಂಡಗಳಿಗೆ ಅನುಗುಣವಾಗಿಲ್ಲವೆಂದು ತಿಳಿದು ಇಡೀ ವಿಚಾರವನ್ನು ಮರೆತು ಬಿಟ್ಟಿದ್ದೆ.
ನಾಲ್ಕು ತಿಂಗಳು ಕಳೆದು ಅದು (?) ಹವ್ಯಕ ಪತ್ರಿಕೆಯ ಜುಲಾಯಿ ತಿಂಗಳ ಸಂಚಿಕೆಯಲ್ಲಿ ಪ್ರಕಟವಾದಾಗ ನಾನು ನಿಜಕ್ಕೂ ಮೈ ಪರಚಿಕೊಳ್ಳುವಂತಾಗಿದೆ. ಅದು ಪ್ರಕಟವಾದ ಲೇಖನಕ್ಕೆ ನನ್ನ ಪ್ರತಿಕ್ರಿಯೆ ಅನ್ನುವುದೇ ಉಲ್ಲೇಖವಿಲ್ಲ. ಪ್ರತಿಕ್ರಿಯೆ ಬರಹವು ಚರ್ಚಿತ ವಿಚಾರವನ್ನು ಮುಂದುವರಿಸಿಕೊಂಡು ಹೋಗುವ ಕಾರಣ ಇದರಲ್ಲಿ ಹಿನ್ನೆಲೆಗೆ ಹೆಚ್ಚು ಗಮನಕೊಡುವುದಿಲ್ಲ. ತಲೆಬರಹ ಹಾಗೂ ತಿರುಳು ಎರಡಕ್ಕೂ ಕತ್ತರಿಪ್ರಯೋಗವಾಗಿ ಸಂಪೂರ್ಣ ಬಿನ್ನ ರೂಪ ಪಡೆದು ಕೊನೆಗೆ ಉಳಿದದ್ದು ನನ್ನ ಕೆಲವು ಟಿಪ್ಪಣಿಗಳ ಪೋಣಿಸಿದ ಒಂದು ಸರಮಾಲೆಯಷ್ಟೇ. ವೈಯುಕ್ತಿಕವಾಗಿ ನನ್ನ ಪರಿಚಯವಿಲ್ಲದ ಕಾರಣ ಸಂಪಾದಕರಿಗೆ ಹದಿನೈದು ದಿನ ಅನಂತರ ಬರೆದ ನೆನಪೋಲೆಯ ಬಾಗವಾಗಿ ನನ್ನ ಹಿನ್ನೆಲೆ, ಪೂರಕ ಮಾಹಿತಿ ಹಾಗೂ ನಂತರ ಅಳಿಸಬೇಕಾದ ಕೊಂಡಿಗಳು ಪ್ರಕಟವಾಗಿ ಮುಖ್ಯ ವಿಚಾರವೇ ಮರೆಯಾಗಿದೆ. ಇದು ಹಣ್ಣಿನ ತಿರುಳನ್ನು ಬಿಸಾಡಿ ಬಿಟ್ಟು ಸಿಪ್ಪೆಯನ್ನು ಬಡಿಸಿದಂತಾಗಿದೆ.

ಒಂದು ಕಾಲದಲ್ಲಿ ಮಾದ್ಯಮಗಳಲ್ಲಿ ಬರುವ ವಿಚಾರಗಳು ನಂಬಲರ್ಹವಾಗಿತ್ತು. ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಹಾಗೂ ಟಿವಿ ಮಾದ್ಯಮಗಳು, ಮಾಲಿಕರಿಗೆ ಬೇಕಾದವರಿಗೆ ಹೆಚ್ಚು ಪ್ರಚಾರ, ಮಾಲಿಕರ ಸಹ ಒಡೆತನದಲ್ಲಿರುವ ಇತರೆ ಕಂಪೆನಿಗಳ ತಯಾರಿಕೆಗಳಿಗೆ ಒತ್ತು ನೀಡುವುದು, ಸಂಪಾದಕರಿಗೆ ಇಷ್ಟವಾದವರಿಗೆ ಅಥವಾ ಅವರ ಸಾಧನೆಗಳಿಗೆ ಹೆಚ್ಚು ಒತ್ತು ನೀಡುವುದು - ಹೀಗೆಲ್ಲ ಕಸರತ್ತು ಮಾಡಿ ಓದುಗ ದೊರೆಗೆ ಉಣಬಯಸುವುದು ತಂಗಳನ್ನ ಮಾತ್ರ. ಅಧ್ಯಯನಾ ಪ್ರವೃತ್ತಿಯ ಕೊರತೆಯೂ ಇಂದಿನ ಪತ್ರಿಕೋದ್ಯೋಗಿಗಳಲ್ಲಿ ಹೆಚ್ಚುತ್ತಿದ್ದು ಅವರ ಜ್ಞಾನದ ಮಟ್ಟ ಕುಸಿಯುತ್ತಿದೆ. ಅಸಂಬದ್ದ ಸುದ್ದಿಗಳು ನುಸುಳುವುದುಂಟು. ಹೀಗಾಗಿ ಪರ್ಯಾಯ ಪತ್ರಿಕೋದ್ಯಮ ಎನಿಸಿಕೊಳ್ಳುವ ಬ್ಲೊಗ್ ಪ್ರಪಂಚ ಪ್ರಸ್ತುತವಾಗುತ್ತದೆ.

ನಮಗೇಕೆ ಈ ಬ್ಲೋಗ್ ಪ್ರಪಂಚ ಪ್ರಸ್ತುತ ಎನ್ನುವ ವಿಚಾರ ಮೊನ್ನೆಯಷ್ಟೆ ಒಬ್ಬರಿಗೆ ಬರೆದಿದ್ದೆ. ಸ್ವಾರ್ಥ ಹಿತಾಸಕ್ತಿಗೆ ತಮ್ಮನ್ನು ಮಾರಿಕೊಡ ಮುಖ್ಯ ಸುದ್ದಿ ವಾಹಿನಿಗೆ ಪರ್ಯಾಯವಾದ ಜನರ ಮದ್ಯೆ ಸಂಪರ್ಕಕ್ಕೆ ಮಾದ್ಯಮವೂ ಹೌದು. ಬ್ಲೋಗಿನಲ್ಲಾದರೆ ಹಂಚಲು ಅರ್ಹವಾದ ನಮ್ಮ ಅನಿಸಿಕೆಗಳು ವಿಷಯದ ಬಗ್ಗೆ ಏನನ್ನೂ ಅರಿಯದ ಉಪಸಂಪಾದಕನಿಂದ ಕಸದ ಬುಟ್ಟಿ ಸೇರುವ ಸಾದ್ಯತೆ ಇರುವುದಿಲ್ಲ. ಪತ್ರಿಕೆಗಳಂತೆ ಇಲ್ಲಿ ಜಾಗದ ಕೊರತೆ ಇಲ್ಲ. ಸಂಪಾದಕರ ಅಂಕುಶ ಕತ್ತರಿಗಳಿಲ್ಲ. ಬರೆಯಬೇಕೆನಿಸಿದ್ದನ್ನು ನೇರವಾಗಿ ಜಾಲತಾಣದಲ್ಲೇ ದಾಖಲಿಸುವುದರಿಂದ ಬರೆದು ಅದು ಪ್ರಕಟವಾಗುವ ಮಧ್ಯದ ಸಮಯ ಉಳಿತಾಯವಾಗುತ್ತದೆ. ತಿಂಗಳುಗಳು ಕಳೆದು ಅಂಗಛೇದನವಾದ ಲೇಖನ ಪ್ರಕಟವಾಗುವುದಲ್ಲ. ಬರಹಕ್ಕೆ ಸಂಬಂಧಿಸಿದಂತೆ ಛಾಯಾಚಿತ್ರಗಳಿದ್ದರೆ ಅವುಗಳನ್ನೂ ಜಾಲತಾಣಕ್ಕೆ ಸೇರಿಸಬಹುದು. ಈ ಮಾದ್ಯಮದಲ್ಲಿ ಮಾಹಿತಿನಿಯಂತ್ರಣ ಜನರ ಕೈಯಲ್ಲಿದ್ದು ಸಮಾಜಕ್ಕೆ ಹೆಚ್ಚು ಉಪಯುಕ್ತವೆನಿಸುವ ಸಾದ್ಯತೆ ಇದೆ. ಅದುದರಿಂದ ಎಲ್ಲರೂ ಪರಸ್ಪರ ಕೈಚಾಚಲು ಪ್ರಯತ್ನಿಸೋಣ.
ಪತ್ರಕರ್ತರು ವಯೋವೃದ್ದ ಜರ್ಮನ್ ಅದಿಕಾರಿಯನ್ನು ಬಂದಿಸಿದ ರೋಚಕ ಕಥೆ ಓದಲು ಕೆಳಗಿರುವ ಕೊಂಡಿಗಳು
No comments:
Post a Comment