Sunday, May 24, 2009

ಮಳೆಗಾಲದಲ್ಲಿ ಊರುಗೋಲಾದ ಸದಾಸಂ

ಸಕಲದಾರಿ ಸಂಚಾರಿ, ಸದಾಸಂ ನಮ್ಮಲ್ಲಿಗೆ ಬಂದು ಈಗ ಎರಡು ವರ್ಷ  ಪೂರ್ತಿಯಾಗಲು  ಒಂದು ಮಳೆಗಾಲ ಮಾತ್ರ ಬಾಕಿ. ಮಳೆಗಾಲದಲ್ಲೂ ಬೇಸಿಗೆಯಲ್ಲೂ ಉಪಯೋಗದ ಮಟ್ಟಿಗೆ ಸಾಕಷ್ಟು ಅನುಭವಗಳಾದವು. ನಾನು ಚೀನಾದಿಂದ ಸದಾಸಂ ತರಿಸುವಾಗ ಆಗಸ್ಟ್ ಮೊದಲ ವಾರವಾಗಿತ್ತು. ಮಳೆಗಾಲದ ಅಬ್ಬರ ಕಡಿಮೆಯಾಗಲು ಸುರುವಾಗಿತ್ತು. ಅದುದರಿಂದ ಆ ವರ್ಷ ಸದಾಸಂನ ಮಳೆಗಾಲದ ಉಪಯೋಗದ ಬಗ್ಗೆ ಸಂಪೂರ್ಣ ಅನುಭವ ನನಗೆ ಸಿಕ್ಕಿರಲಿಲ್ಲ. ಉಪಕಾರ ಅನಿಸಿತ್ತು. ಅಷ್ಟೇ
.

ಇಲ್ಲಿ ಮಳೆಗಾಲವನ್ನು ಪ್ರತ್ಯೇಕಿಸಿ ಹೇಳುವ ಕಾರಣ ಕಳೆದ ಹಲವು ವರ್ಷಗಳಲ್ಲಿ ಮಳೆಗಾಲದಲ್ಲಿ ನಾನು ತೋಟಕ್ಕೆ ಹೋದದ್ದು ಬಹಳ ಕಡಿಮೆ.  ಬೇಸಿಗೆಯಲ್ಲಿ  ಓಡಾಟಕ್ಕೆ   ಸಹಾಯ  ಮಾಡುವ  ಮಾರುತಿ  ಒಮ್ನಿ  ಮಳೆಗಾಲದಲ್ಲಿ  ಹೂತುಹೋಗುವ  ಕಾರಣ   ಸೋಲುತ್ತದೆ.   ಮಳೆಗಾಲದಲ್ಲಿ ಬಾದಿಸುವ ಕೊಳೆ ರೋಗ ತಡೆಯಲು ಮುಂಜಾಗ್ರತೆ ಔಷದಿ ಸಿಂಪರಣೆ ಅಡಿಕೆ ಕೃಷಿಕನ ಮಟ್ಟಿಗೆ ಅತಿ ಮುಖ್ಯ ವಿಚಾರ. ಕೊಳೆರೋಗದ ಸಿಂಪರಣೆ ಬಗೆಗೆ ನನಗೆ ಕೆಲಸದಾಳುಗಳು ಹೇಳಿದ್ದೇ ಸುದ್ದಿ. ನಮ್ಮಲ್ಲಿ ಇದು ನಿರ್ಲಕ್ಷಿತವಾಗಿ ರೋಗಕ್ಕೆ ಅಲ್ಲಲ್ಲಿ ಅಡಿಕೆ ಮರಗಳು ಸತ್ತವು. ತೋಟದ ನೈಜ ಸ್ಥಿತಿ ಅರಿಯಲು ಸಂಪೂರ್ಣ ಪರಾವಲಂಬನೆಯಿಂದಾಗಿ ಅಸಮರ್ಪಕ ಸಿಂಪರಣೆಯಿಂದಾಗಿ ನಾನು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಬವಿಸಿದೆ.

ಮಳೆಗಾಲದಲ್ಲಿ ಬೀಸುವ ಗಾಳಿಗೆ ಅಡಿಕೆ ಗೊನೆ ಭಾರಕ್ಕೆ ಮುರಿದುಬೀಳುವುದು ಮತ್ತು ಅಡಿಕೆ ಮೇಲಿನ ತೇವಾಂಶ ಒಣಗದೆ ಕೋಳೆರೋಗಕ್ಕೆ ತುತ್ತಾಗುವುದು ತೋಟದಲ್ಲಿರುವ ಅತ್ಯುತ್ತಮ ಮರಗಳೇ. ಈ ರೀತಿ ಅಂಗಚ್ಚೇದನವಾದ ತೋಟವನ್ನು ಇದ್ದು ಪ್ರಯೋಜನವಿಲ್ಲವೆಂದು ಒಂದಂಶವನ್ನು ಕಡಿಸಿದೆ.  ಕೃಷಿ  ಮುಂದುವರಿಸುವ  ಬಗೆಗೆ  ಗಂಬೀರ  ಚಿಂತನೆ  ನಡೆಸುವಂತಹ  ಸನ್ನಿವೇಶ  ನನ್ನ  ಮುಂದಿತ್ತು.

ಹಿನ್ನೆಲೆ ಹೀಗಿರುವಾಗ ನಾನು ಸದಾಸಂ ತರಿಸಿದ್ದೇ ಮಳೆಗಾಲದಲ್ಲಿ ತೋಟಕ್ಕೆ ಹೋಗಲು. ಅದುದರಿಂದ ಕಳೆದ ವರ್ಷ ಮಳೆ ಪ್ರಾರಂಬವಾಗಲು ಕಾಯುತ್ತಲಿದ್ದೆ. ಕಳೆದ ವರುಷ ಜೂನ್ ಸುರುವಿನ ವಾರ   ಕೋಳಿ ಜ್ವರ ಅನ್ನುವ ಮಾರಿ ಬಂದು ಮೊದಲೇ ದುರ್ಬಲನಾದ ನನ್ನನ್ನು ಸಾಕಷ್ಟು ಸೋಲಿಸಿತು. ಅದರೂ ಅಗತ್ಯಕ್ಕೆ ತಕ್ಕಷ್ಟು ಹೋಗಲು ಸಾದ್ಯವೂ ಆಯಿತೆನ್ನಿ.

ಈಗ ಮಳೆಗಾಲದಲ್ಲೂ ತೋಟದಲ್ಲಿ ಕೆಸರಿನಲ್ಲಿ ಹೂತು ಹೋಗಿ ಬಾಕಿಯಾದರೆ ಅನ್ನುವ ಅಂಜಿಕೆ ಇಲ್ಲವೇ ಇಲ್ಲ. ಎರಡೂ ಚಕ್ರಗಳು ಜತೆಯಾಗಿಯೇ ತಿರುಗುವ ಕಾರಣ ಎಂತಹ ಕೆಸರಿನಿಂದಲೂ ಎದ್ದು ಬರುತ್ತದೆ. ಹಾಗೆ ಅಗಾಗ ತೋಟಕ್ಕೆ ದೈರ್ಯದಿಂದ ಹೋಗಿ ಬರಲು ಸದಾಸಂ ಬಹಳ ಸಹಾಯ ಮಾಡುತ್ತಿದೆ. ನಮ್ಮ ತೋಟದಲ್ಲಾಗುವ ಕೆಲಸದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ.

ನನ್ನಲ್ಲಿ ಹಲವರಿಂದ ಕೇಳಲ್ಪಡುವ ಪ್ರಶ್ನೆ ಈಗ ಸದಾಸಂ ಬಂದು ಅದರಿಂದ ಕೃಷಿ ನಿರ್ವಹಣೆ ಉತ್ತಮಗೊಂಡು ಲಾಬ ಎನಿಸುತ್ತದೋ ? ನನ್ನ ಮುಖ್ಯ ಬೆಳೆಯಾದ ಅಡಿಕೆ ಬಹುವಾರ್ಷಿಕ ಬೆಳೆ. ನಿರ್ವಹಣೆಯಲ್ಲಿಸೋತು ಸುಮಾರು ಅರ್ಧದಷ್ಟು ತೋಟವನ್ನು ಕಳಕೊಂಡದ್ದು ವಾಪಾಸು ಪಡಕೊಳ್ಳಲು ಅಸಾದ್ಯ. ನನಗನಿಸುವಂತೆ ಈಗ ಉಳಿದಿರುವುದನ್ನು ಉಳಿಸಿಕೊಳ್ಳಲು ನಂಬಲರ್ಹವಾದ ಊರುಗೋಲಾದ ಸದಾಸಂನಿಂದ ಖಂಡಿತ ಸಹಾಯವೆನಿಸುತ್ತದೆ.

No comments: