Saturday, May 30, 2009

ಮಳೆ ಕೊಯಿಲಿಗೆ ಪೂರಕ ಚಿಕಾಗೊದ ಹಸಿರು ಓಣಿ

ಮಳೆಗಾಲ ಇನ್ನೇನು ಪ್ರಾರಂಬವಾಗಲಿದೆ. ಹಾಗೆ ಮಳೆನೀರಿನ ಸದುಪಯೋಗದ ಬಗೆಗೆ ಚಿಂತನೆ ಸಾಗಿದೆ. ದಿನ ಕಳೆದಂತೆ ನೀರಿನ ಪರೀಸ್ಥಿತಿ ಗಂಬೀರವಾಗುತ್ತಿದೆ. ಮಳೆ ಸಹಾ ಮುಂಚಿನಂತೆ ಮಳೆಗಾಲದ ಉದ್ದಕ್ಕೂ ಹಂಚಿ ಬೀಳದೆ ಒಮ್ಮೆಲೆ ಉದುರಿಸಿ ಮುಂದಕ್ಕೆ ನಡೆಯುತ್ತದೆ. ನೀರು ಬಿದ್ದಲ್ಲಿ ಇಂಗುವುದರ ಬದಲು ನೇರವಾಗಿ ಹರಿದು ಸಮುದ್ರ ಸೇರುತ್ತದೆ. ನೀರಿನ ಬೇಡಿಕೆ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದ್ದುದರಿಂದ ನೀರು ಇಂಗಿಸುವುದು ಹೆಚ್ಚೆಚ್ಚು ಅನಿವಾರ್ಯವೆನಿಸುತ್ತದೆ.

ಸುಸ್ಥಿರ ಜನಜೀವನಕ್ಕೆ ಪೂರಕವಾಗುವಂತಹ ಪಟ್ಟಣದಲ್ಲಿ ಮಳೆನೀರು ಕೊಯಿಲಿನ ಸುದ್ದಿ ಅಮೇರಿಕದಿಂದ ಬಂದಿದೆ. ಶಂಖದಿಂದ ಬೀಳುವುದೇ ತೀರ್ಥ ಎಂಬಂತೆ ನಮಗೆ ಹೊಸ ಚಿಂತನೆಗಳು ಅಮೇರಿಕದಿಂದಲೇ ಬರಬೇಕು. ಹೆಚ್ಚಿನ ದೊಡ್ಡ ಪಟ್ಟಣಗಳು ಇಂದು ಅಪಾರ ವಿದ್ಯುತ್ ಖರ್ಚು ಮಾಡಿ ಐವತ್ತರಿಂದ ನೂರು ಕಿಮಿ ದೂರದಿಂದ ನೀರನ್ನು ತರಿಸಿಕೊಳ್ಳುತ್ತಿವೆ. ಅದುದರಿಂದ ಪ್ರತಿಯೊಂದು ಜಲಮಟ್ಟ ಏರುವಂತಹ ಪ್ರಯತ್ನಗಳು ಖಂಡಿತ ಪ್ರಯೋಜನಕಾರಿ.

ಪ್ರಪಂಚದ ಅತಿ ದೊಡ್ಡ ಪಟ್ಟಣಗಳಲ್ಲಿ ಒಂದಾದ ಚಿಕಾಗೋ ಪಟ್ಟಣದ ಹಸಿರು ಓಣಿ ಯೋಜನೆ ಒಂದು ಹೊಸತಾದ ದಿಕ್ಕು ಸೂಚಕ ಎನ್ನಬಹುದು.
.

ಎರಡು ವರ್ಷ ಹಿಂದೆ ಪ್ರಾರಂಬವಾದ ಈ ಯೋಜನೆಯಲ್ಲಿ ಈಗಾಗಲೇ ಎಂಬತ್ತು ಗಲ್ಲಿಗಳು ಅಭಿವೃದ್ದಿ ಹೊದಿವೆಯಂತೆ. ಗಲ್ಲಿ ರಸ್ತೆಗಳಲ್ಲಿ ನೀರು ಇಂಗಿಸುವಂತಾದರೆ ಮಳೆಗಾಲದಲ್ಲಿ ಚರಂಡಿ ಉಕ್ಕಿ ಹರಿದು ನೆರೆ ಬರುವುದನ್ನು ತಡಗಟ್ಟಬಹುದು.

ಇಲ್ಲಿನ ಹಸಿರು ಚಿಂತನೆ ಹಲವು ವಿಚಾರಗಳ ಒಳಗೊಂಡಿದೆ. ಪಟ್ಟಣಗಳಲ್ಲಿ ಕತ್ತಲು ಓಡಿಸುವ ಪ್ರಯತ್ನದಲ್ಲಿ ಮೇಲ್ಮುಖ ಮಾಡಿದ ದೀಪಗಳಿಂದಾಗಿ ಆಕಾಶದಲ್ಲಿನ ನಕ್ಷತ್ರಗಳೇ ಅಗೋಚರ. ಈ ನಿಟ್ಟಿನಲ್ಲಿ ದಾರಿದೀಪದ ಬೆಳಕು ನೆಲಕ್ಕೆ ಸಿಮಿತವಾಗುವಂತೆ ಮೇಲೆ ಸಾಗದಂತೆ ಪ್ರಯತ್ನ ಮಾಡಲಾಗುತ್ತಿದೆ.   ಪಟ್ಟಣದಲ್ಲಿ ಕಾಂಕ್ರೀಟ್ ಹಾಗೂ ಟಾರ್ ಕವಚ ಶಾಖವನ್ನು ಹೀರಿ  ಶಾಖ ದ್ವೀಪಗಳಾಗುತ್ತವೆ.  ಜೀವನ ಹೆಚ್ಚು ಅಸಹನೀಯವಾಗುತ್ತದೆ. ಎಸಿ ಫಾನ್ ಉಪಯೋಗ ಹೆಚ್ಚುತ್ತದೆ. ಬದಲಾಗಿ ಭೂಮಿಯ ಮೇಲ್ಮೈ ಶಾಖ ಪ್ರತಿಫಲಿಸುವಂತಾದರೆ ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲೂ ಪ್ರಯತ್ನ ಸಾಗಿದೆ.

ಮಳೆಯ ಸ್ವರೂಪ ಬದಲಾಗುತ್ತಲೇ ಇದೆ. ನಮ್ಮಲ್ಲಿ ಮಳೆದಿನಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಮುಂಚೆ ಆರು ನೂರು ಘಂಟೆ ಮಳೆ ಬರುತ್ತಿದ್ದರೆ ಈಗ ಮುನ್ನೂರು ಘಂಟೆಗಳಲ್ಲೇ ಲೆಕ್ಕಾಚಾರದ ಮಳೆ ಸುರಿಯುತ್ತಿದೆ. ಮಳೆ ನೀರು ಇಂಗುವ ಸಾದ್ಯತೆಗಳು ಕಡಿಮೆಯಾಗಿ ನೇರವಾಗಿ ತೋಡುಗಳಿಗೆ ಹರಿಯುತ್ತವೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಕಡೆಗಳಲ್ಲಿ ಕುಂಭದ್ರೋಣ ಮಳೆಗಳ ಸುದ್ದಿ ಸಾಮಾನ್ಯ. ಕೆಲವು ಉದಾಹರಣೆಗಳೆಂದರೆ






ಜುಲೈ ೨೦೦೭ ಕೇರಳದಲ್ಲಿ ಸುರಿದ ಕುಂಭದ್ರೋಣ ಮಳೆ ೩೦೦೦೦ ಜನರನ್ನು ಸ್ಥಳಾಂತರಗೊಳಿಸಿತು. ಅದೇ ವರ್ಷ ಹಿಮಾಚಲ ಪ್ರದೇಶದಲ್ಲಿ ೧೫೦ ಕ್ಕೂ ಹೆಚ್ಚು ಜನ ಮಳೆಯಿಂದಾಗಿ ಮೃತ ಪಟ್ಟರು.

ನಮ್ಮ ಪಟ್ಟಣಗಳಲ್ಲಿ ಕಾಲುದಾರಿಗಳಿಗೆ ಸಿಮೆಂಟು ಇಟ್ಟಿಗೆ ಹಾಸುವುದು ಹೆಚ್ಚುತ್ತಲಿರುವಾಗ ಮಳೆನೀರು ಭೂಮಿಗಿಳಿಯುವುದು ಕಡಿಮೆಯಾಗುತ್ತಲಿದೆ. ಹೀಗಿರುವಾಗ   ಚಿಕಾಗೊದಲ್ಲಿಯಲ್ಲಿರುವಂತಹ  ಸುಸ್ಥಿರ   ಚಿಂತನೆ ನಮ್ಮಲ್ಲೂ ಬೇಗನೆ ಬರಲಿ. ಮುಂದಿನ  ದಿನಗಳಲ್ಲಿ ಹಾಸುಗಲ್ಲುಗಳು ಮಳೆನೀರು ಇಳಿಯಲು ಅವಕಾಶ ಮಾಡಿ ಕೊಟ್ಟು ಜಲಮಟ್ಟ ಹೆಚ್ಚಲು ಸಹಾಯಕವಾದರೆ ಚೆನ್ನ. ಕೆಳಗೆ ಕೊಟ್ಟಿರುವ  ಕೊಂಡಿಯಲ್ಲಿ ಲಭ್ಯವಾಗುವ  ಚಿಕಾಗೊ  ಬಗೆಗಿನ   ಕೈಪಿಡಿ  ಚೆನ್ನಾಗಿದೆ.  

http://egov.cityofchicago.org/webportal/COCWebPortal/COC_EDITORIAL/GreenAlleyHandbook.pdf

http://www.downtoearth.org.in/cover.asp?foldername=20090315&filename=news&sid=47&sec_id=9

No comments: