Tuesday, May 05, 2009

ರೈತರು ಉರಿಸುವ ಬೆಳೆ ತ್ಯಾಜ್ಯ ಬಾರತದ ಮೇಲೊಂದು ಬೊಕ್ಕೆ

ಇದೇನು ಬಾರತದ ಭೂಪಟದಲ್ಲಿ ಬೊಕ್ಕೆ ಎದ್ದಂತಿದೆಯಲ್ಲ ಎಂದು ಕೊಂಡೆ. ಮುಂದಕ್ಕೆ ಓದುವಾಗ ತಿಳಿದ ವಿಚಾರ, ಇವು ಪಂಜಾಬಿನ ರೈತರು ಬೆಳೆ ಕೊಯಿಲಾದ ನಂತರ ಗದ್ದೆಗೆ ಬೆಂಕಿ ಹಾಕಿರುವುದನ್ನು ಅಮೇರಿಕದ ನಾಸಾ ಬಿಡುಗಡೆ ಮಾಡಿದ ಈ ಚಿತ್ರದಲ್ಲಿ ಕೆಂಪು ಚುಕ್ಕಿಯಿಂದ ಗುರುತಿಸಲಾಗಿದೆ. ನಮ್ಮಲ್ಲಿ ಇಂತಹ ಪದ್ದತಿಯೊಂದು ಚಾಲ್ತಿಯಲ್ಲಿದ್ದು ಈಗ ಕಣ್ಮರೆಯಾಗಿದೆ. ಪಂಜಾಬಿನಿಂದ ದಕ್ಷಿಣ ಪೂರ್ವಕ್ಕೆ ಮಂಜು ಮುಸುಕಿದಂತಿದ್ದು ಗಂಗಾ ನದಿಯೇ ಮರೆಯಾಗಿದೆ. ಹೊಗೆ ಮತ್ತು ಡೀಸೆಲ್ ವಾಹನವೂ ಸೇರಿದಂತೆ ನಗರ ಪ್ರದೇಶದ ಮಲೀನತೆ ಈ ಬಿಳಿ ಹೊಗೆಗೆ ಕಾರಣವಿರಬಹುದು.

                                                                
ನಮ್ಮ ಕರಾವಳಿ ಪ್ರದೇಶದಲ್ಲಿ ಮೊದಲು ಮೇವಿಗಾಗಿ ಹುಲ್ಲು ಬೆಳೆಸುವ ಪರಿಪಾಠ ಇರಲಿಲ್ಲ. ಆಗ ಗುಡ್ಡದಲ್ಲಿ ತನಷ್ಟಕೆ ತಾನೆ ಬೆಳೆಯುವ ಮುಳಿ ಹುಲ್ಲು ಕೆಲವು ತಿಂಗಳ ಮೇವಿನ ಅವಶ್ಯಕಥೆ ಪೂರೈಸುತಿತ್ತು. ಮುಳಿ ಹುಲ್ಲು ಹುಲ್ಲು ಕತ್ತರಿಸಿದ ನಂತರ ಗುಡ್ಡಕ್ಕೆ ಬೆಂಕಿ ಹಾಕುವ ಸಂಪ್ರದಾಯ. ಉಳಿಕೆ ಬೇರು ಕಸವೆಲ್ಲ ಸುಟ್ಟು ಮುಂದಿನ ವರ್ಷ ಚಿಗುರಲು ಸಹಾಯಕ ಎನ್ನುವ ಚಿಂತನೆಯಿಂದ ಈ ಪರಿಪಾಠ ನಡೆದು ಬಂದಿತ್ತು. ಈಗ ಕೆಲಸದಾಳುಗಳ ಅಲಭ್ಯತೆ, ಗುಡ್ಡದಲ್ಲಿ ಕೃಷಿ ಮಾಡಿರುವ ಕಾರಣ ಈ ಸಂಪ್ರದಾಯ ಇತಿಹಾಸಕ್ಕೆ ಸೇರಿದೆ.


ಆಂದು ಮುಳಿ ಹುಲ್ಲು ಬಹಳ ಅಮೂಲ್ಯ ಮೇವಾಗಿತ್ತು. ಒಮ್ಮೆ ನಮ್ಮ ಅಜ್ಜ ಹೊರಗೆ ಹೋಗಿದ್ದವರು ಸಂಜೆ ತಡವಾಗಿ ಮನೆಗೆ ಬಂದವರೇ ಯಾರೋ @$&% ಮಕ್ಕಳು ಮುಳಿ ಗುಡ್ಡಕ್ಕೆ      ಬೆಂಕಿ ಹಾಕಿದ್ದಾರೆ ಎಂದು ಬೈದು ನಂತರ ಈ ವರ್ಷದಲ್ಲಿ ಮೇವಿನ ಕೊರತೆ ಉಂಟಾಗುತ್ತದೆ ಎಂದು ಪೇಚಾಡಿಕೊಂಡರಂತೆ. ರಾತ್ರಿ ಊಟದ ಸಮಯಕ್ಕಾಗುವಾಗಲೂ ಮನೆಯ ಮಕ್ಕಳು ನಾಪತ್ತೆ. ಹುಡುಕಾಡುವಾಗ ಮನೆಯ ಮೂಲೆಯಲ್ಲಿ ಅಡಗಿ ಕುಳಿತ ಮಕ್ಕಳು ನಾವು ಚಂದ ನೋಡಲು ಮುಳಿ ಹುಲ್ಲಿಗೆ ಬೆಂಕಿ ಹಾಕಿದ್ದು, ನಂತರ ನಂದಿಸಲು ಪ್ರಯತ್ನಿಸಿದರೂ ಸಾದ್ಯವಾಗಲಿಲ್ಲ ಎನ್ನುತ್ತಾ ಅಡಗಿಕೂತಲ್ಲಿಂದ ಹೊರಬಂದರಂತೆ.

ಬಾರತದ ಕೆಲವು ಪ್ರದೇಶದಲ್ಲಿ ಇಂದಿಗೂ ಬೆಳೆ ಕೊಯಿಲಾದ ನಂತರ ಹೊಲಕ್ಕೆ ಬೆಂಕಿ ಇಡುವ ಸಂಪ್ರದಾಯ. ಶಿವಮೊಗ್ಗದ ಪ್ರಫುಲ್ಲಚಂದ್ರರಂತಹ ಅನುಭವಸ್ಥ ರೈತರು ಇದರಿಂದ ನಷ್ಟವೇ ಹೊರತು ಲಾಭವಿಲ್ಲ ಎಂದರೂ ಈ ಪದ್ದತಿ ಮಾಸಿಲ್ಲ. ಪರೀಸರ ಮಾಲಿನ್ಯ, ಹವಾಮಾನ ವ್ಯತ್ಯಾಸ ಮತ್ತು ಸಂಪನ್ಮೂಲಗಳ ದ್ವಂಸವಾಗುವ ಕೃತ್ಯ ನಮ್ಮ ರೈತರು ಬಿಡುವುದು ಉತ್ತಮ.

ಈ ಸುಳಿವಿನ ಮೂಲ ವ್ಯಾಪಾರಿ ಹಡಗು ಕಾಪ್ಟನ್ ವೇಲು ಎಂಬವರ ಬ್ಲೋಗ್ ಬರಹ. ಹಲವು ವಿಚಾರಗಳ ಬಗೆಗೆ ವೇಲು ಚೆನ್ನಾಗಿ ಬರೆಯುತ್ತಾರೆ. ಹುಡುಕುತ್ತ ಹೋದಂತೆ ಇದರ ಮೂಲ ಪುಟವೂ ಸಿಕ್ಕಿತು.

No comments: