ಸೈಕಲ್ ಒಂದು ಸ್ವಾವಲಂಬನೆಯ ಪ್ರತೀಕ. ಸೈಕಲ್ ಸವಾರನಾದ ನನಗೆ ಸಾದ್ಯವಾದಷ್ಟು ಸ್ವಾವಲಂಬನೆಯ ಹಂಬಲ. ಹಿಂದೆ ಹಲವಾರು ಜನ ಪರದೇಶದ ಯಾತ್ರಿಕರು ಅವರ ಪ್ರವಾಸದ ಖರ್ಚನ್ನು ವಿವಿದ ರೀತಿಯಲ್ಲಿ ಸಂಪಾದಿಸಿಕೊಂಡ ವಿಚಾರ ಪುಸ್ತಕಗಳಲ್ಲಿ ಪತ್ರಿಕೆಗಳಲ್ಲಿ ಓದಿದ್ದೆ. ಪತ್ರಿಕೆಗಳಿಗೆ ಪ್ರವಾಸ ಕಥನ ಬರೆದು ಆ ಹಣದಲ್ಲೇ ಪ್ರವಾಸದ ಖರ್ಚು ಸುದಾರಿಸಿದವರು ಇದ್ದಾರೆ. ಯಾರಾದರೂ ಕೈಗಾರಿಕೆಗಳೋ ವ್ಯಾಪಾರಸ್ಥರೋ ಪ್ರಾಯೋಜಕರು ಸಿಕ್ಕರೆ ಅವರು ಪ್ರವಾಸದ ಒಂದಂಶ ಖರ್ಚು ಬರಿಸುವುದೂ ಉಂಟು. ಆದರೆ ಯಾರೂ ತಮಗೆ ಪ್ರಯೋಜನ ಇಲ್ಲದೆ ಸಹಾಯ ಮಾಡುವುದಿಲ್ಲವೆಂದು ಮನಗಂಡಿದ್ದೆ. ಆಗ ನಮ್ಮಲ್ಲಿ ವಿದೇಶಿ ವಿನಿಮಯ ಕಾನೂನುಗಳು ಕಠೀಣವಾಗಿದ್ದ ಕಾಲ. ಹಾಗಾಗಿ ಇಲ್ಲಿಂದ ಹಣದ ವ್ಯವಸ್ಥೆ ಕಷ್ಟವೆಂದು ಕ್ರಮೇಣ ನನಗೆ ಅರ್ಥವಾಯಿತು.
ನನ್ನ ಪ್ರವಾಸದ ಖರ್ಚು ಯಾವ್ಯಾವ ರೀತಿಯಲ್ಲಿ ಉಳಿಸಬಹುದು ಅಥವಾ ಸಂಪಾದಿಸಬಹುದೆಂಬ ಆಲೋಚನೆಯಲ್ಲಿ ಮುಳುಗಿದ್ದೆ. ಆ ಸಮಯದಲ್ಲಿ ಶ್ರೀ ಪಡ್ರೆಯವರನ್ನು ಸಂಪರ್ಕಿಸಿ ಪ್ರವಾಸ ಕಥೆಯನ್ನು ವಾರಪತ್ರಿಕೆಗಳಿಗೆ ಮಾರಿ ಹಣ ಸಂಪಾದಿಸುವ ಸಾದ್ಯತೆಗಳ ಬಗ್ಗೆ ಚರ್ಚಿಸಿದ್ದೆ. ನಾನು ಲೇಖನ ಹಾಗೂ ಚಿತ್ರಗಳ ಕಳುಹಿಸಿದರೂ ಪತ್ರಿಕೆಯವರು ಹಣವನ್ನು ನೇರವಾಗಿ ಪರದೇಶದಲ್ಲಿ ಪ್ರಯಾಣಿಸುತ್ತಿರುವ ನನಗೆ ಕಳುಹಿಸುವ ಸಾದ್ಯತೆ ಇಲ್ಲ. ಮೇಲಾಗಿ ನಮ್ಮ ಪತ್ರಿಕೆಗಳು ಕೊಡುವ ಚಿಲ್ಲರೆ ಸಂಬಾವನೆಗೋಸ್ಕರ ಅವರ ಹಿಂದೆ ಹೋಗುವುದು ವ್ಯರ್ಥ ಎಂದು ಕೊನೆಗೆ ತೀರ್ಮಾನಿಸಿದೆ. ಪರದೇಶದಲ್ಲಿರುವಾಗ ನನ್ನಲಿರುವ ಪ್ರತಿ ರೂಪಾಯಿಯೂ ಅಮೂಲ್ಯ ಆಗಿರುವಾಗ ಪತ್ರಿಕೆಗಳಿಗೋಸ್ಕರ ಶ್ರಮ ಮತ್ತು ಹಣ ಎರಡೂ ಖರ್ಚು ಮಾಡುವುದರಲ್ಲಿ ಪ್ರಯೋಜನವಿಲ್ಲವೆಂದು ಅನ್ನಿಸಿತು.
ಅನಂತರದ ಒಂದು ವರುಷದ ಪ್ರವಾಸ ಮುಗಿಸಿ ಊರಿಗೆ ಬಂದ ನಾನು ನನ್ನ ಪಾಡಿಗೆ ಓಡಾಡಿಕೊಂಡಿದ್ದೆ. . ನಾನು ವಾಪಾಸಾದ ಸುಳಿವು ಸಿಕ್ಕ ಶ್ರೀ ಪಡ್ರೆಯವರು ನಮ್ಮಲ್ಲಿಗೆ ಬಂದು ಈ ಲೇಖನ ಬರೆದು ಸುಧಾಕ್ಕೆ ಕಳುಹಿಸಿದರು. ನನಗೆ ಆಗ ಬಾಯಿ ತೆರೆಯಲೂ ಅಳುಕು. ಕಾರಣ ಹಲವಾರು ಜನ ದಕ್ಷಿಣ ಬಾರತದ ಅದರಲ್ಲೂ ಕರ್ನಾಟಕದ ಹುಡುಗರು ಸೈಕಲು ಪ್ರವಾಸದ ನೆಪದಲ್ಲಿ ಯುರೋಪ್ ಅಮೇರಿಕಕ್ಕೆ ಹೋಗಿ ಅಲ್ಲಿ ಉಳಕೊಂಡ ಉದಾಹರಣೆ ಕೇಳಿದ್ದೆ ಹಾಗೂ ಕುರುಹುಗಳ ಕಂಡಿದ್ದೆ. ಅದರಿಂದಾಗಿ ಅನಂತರ ನನ್ನಂತಹವರು ಹೋದಲ್ಲೆಲ್ಲ ಸಂಶಯ ದೃಷ್ಟಿ ಎದುರಿಸಬೇಕಾಗುತ್ತದೆ. ನಾನು ವಾಪಾಸು ಬಾರತಕ್ಕೆ ಹೋಗುವವ ಎಂದರೆ ಯಾರೂ ನಂಬದ ಪರೀಸ್ಥಿತಿಯನ್ನು ಅವರು ಉಂಟುಮಾಡಿದ್ದರು. ಹಾಗಾಗಿ ನನ್ನ ಹೆಜ್ಜೆ ಅನುಸರಿಸಿ ಇನ್ನಷ್ಟು ಜನ ಉತ್ತಮ ಬವಿಷ್ಯ ಅರಸಿಕೊಂಡು ಹೋಗುವವರು ಸೈಕಲ್ ನೆಪವಾಗಿಸುವುದು ನನಗೆ ನಿಜಕ್ಕೂ ಬೇಡವಾಗಿತ್ತು.
ಹೋದಲ್ಲೆಲ್ಲ ಅಲ್ಲಿನ ಜನ ಅಪರಿಚಿತನಾದ ನನಗೆ ಕೊಟ್ಟ ಅತಿಥಿ ಸತ್ಕಾರದಿಂದಾಗಿ
ಪ್ರಪಂಚದಲ್ಲಿ ಎಲ್ಲೆಡೆ ನಮಗಿನ್ನೂ ಪರಿಚಯವಾಗದ ಗೆಳೆಯರಿದ್ದಾರೆಎನ್ನುವ ಮಾತನ್ನು ಒಬ್ಬ ಬಾರತೀಯನಾಗಿ ಕನ್ನಡಿಗನಾಗಿ ನಮ್ಮವರ ಎದುರು ಹೇಳುವ ಕರ್ತವ್ಯ ನನಗಿದೆಯೆಂದೂ ಅನಿಸುತಿತ್ತು. ಹೀಗೆ ಸುಧಾ ನನ್ನ ಪ್ರವಾಸದ ಬಗೆಗೊಂದು ಶ್ರೀಪಡ್ರೆಯವರ ಸಚಿತ್ರ ಲೇಖನ ಪ್ರಕಟಿಸಿತು.
ಈ ಲೇಖನದಿಂದಾಗಿ ಊರ ಪರವೂರ ಹಲವಾರು ಜನ ನನ್ನ ಗುರುತಿಸಿದರು. 6ನೇಯ ತರಗತಿಯ ಗಣಿತ ಪಠ್ಯಪುಸ್ತಕದಲ್ಲಿ ಸರಾಸರಿಗೆ ಉದಾಹರಣೆ ಕೊಡುವಾಗ ಗೋವಿಂದ ಬಟ್ ಸೈಕಲಿಸಿದ್ದು ದಿನಕ್ಕೆ ಸರಾಸರಿ 80 ಕಿಲೋಮೀಟರ್ ಎಂದಿತು. ಬಲಗೈ ಹಬ್ಬೆರಳಿನ ತುದಿ ಅಂಶ ಜಪಾನಿನಲ್ಲಿ ತುಂಡಾಗಿ ಉಳಿದ ಸುದ್ದಿ ನಾನು ನೈಸರ್ಗಿಕ ಕೃಷಿಕ ಫುಕೋಕರನ್ನು ಕಂಡು ಬಂದಿರುವುದನ್ನು ಸಾರಿತು. ಜನರ ಗಮನ ನನ್ನ ಮೇಲೆ ಬಿದ್ದು ಸಾಕಷ್ಟು ತೊಂದರೆಯನ್ನೂ ಅನುಬವಿಸಿದ್ದೇನೆ. ನೋಡಲೆಂದು ಪಡಕೊಂಡ ಫೋಟೊಗಳನ್ನು ಕೈಚಳಕದಲ್ಲಿ ಎದುರೆದುರೇ ಜೇಬಿಗಿಳಿಸಿದವರಿದ್ದಾರೆ. . ಓದಲೆಂದು ಕೊಂಡುಹೋದ ಸಾವಯುವ ಕೃಷಿ ಪುಸ್ತಕಗಳ ನಾನು ಪುನ: ಕಂಡಿಲ್ಲ. ಈ ಪ್ರವಾಸದಿಂದ ನನ್ನ ದೃಷ್ಟಿಕೋನ ವಿಶಾಲವಾಯಿತು ಮತ್ತು ನಾನು ಈಗ ಪ್ರಪಂಚದ ಹಲವು ಮೂಲೆಗಳಲ್ಲಿ ವೈಯುಕ್ತಿಕವಾಗಿ ಬಲ್ಲ ಗೆಳೆಯರಿದ್ದಾರೆ ಎನ್ನಬಹುದು.
No comments:
Post a Comment