Saturday, September 06, 2008

ಪರದೇಶದಲ್ಲಿ ರೂಪಾಯಿ ಲೆಕ್ಕಾಚಾರ

ವಾರಗಳ   ಹಿಂದೆ  ಓದಿದ   ಆಗಸ್ತು  ೧೪ರ    ವಿಜಯ ಕರ್ನಾಟಕದ ಅಂಕಣದಲ್ಲಿ  ಪ್ರಕಟವಾದ   ವಿಶ್ವೇಶ್ವರ ಭಟ್ಟರ ಲೇಖನದಲ್ಲೊಂದು ವಾಕ್ಯ ಮನಸಿಗೆ ಕಿರಿಕಿರಿ ಉಂಟು ಮಾಡುತ್ತಲೇ  ಇದೆ.  ಈ    ವಾಕ್ಯ ಬಾರತೀಯರ ಮನೋಬಾವವನ್ನು ಮೂದಲಿಸುವಂತಿದೆ.   ಅಲ್ಲಿನ  ವಾತಾವರಣ   ಖರ್ಚಿಗೆ   ಪ್ರರೇಪಿಸುತ್ತದೆ.   ರೂಪಾಯಿ  ಲೆಕ್ಕ  ಬೇಡ  ಎನ್ನುವ  ಈ ಮಾತು ನನಗೆ   ಹೊಸತಲ್ಲ. ಪರದೇಶಗಳಲ್ಲಿ ಹಲವು ಬಾರಿ    ಹೇಳಿಸಿಕೊಂಡಿದ್ದೇನೆ.   ಅದುದರಿಂದ ಇನ್ನೊಂದು ಮುಖ ಪರಿಚಯಿಸಲು ಪ್ರಯತ್ನಿಸುವೆ.


ಇದೊಂದು ಪರಂಪರೆಯ ಮಾತು. ಮೂಲ ಹೀಗಿದ್ದಿರಬಹುದು. ವಿದ್ಯೆಗೋ ಕೆಲಸಕ್ಕೊ ನಂತರ ಹೋದವರಿಗೆ ಮೊದಲಿಗರ ಹಿತವಚನ. ಖರ್ಚಿನ ಮೇಲೆ ಬಹಳ ಯೋಚನೆ ಬೇಡ , ಉಪವಾಸ ಇರಬೇಡ ಎನ್ನುವ ತಾತ್ಪರ್ಯ. ಕ್ರಮೇಣ ಹಿರಿ ಗುರುಗಳ ಕಾಲದಲ್ಲಿ ಪ್ರವಚನ ಸಮಯದಲ್ಲಿ ಬೆಕ್ಕನ್ನು ಪಾತ್ರೆಯಡಿ ಮುಚ್ಚಿಡಲಾಗುತಿತ್ತು ಎನ್ನುವ ಆಚರಣೆಯ ಅನುಕರಣೆ ಎಂಬಂತಾಗಿದೆ. ಈಗಂತೂ ಹೋದ ಪ್ರತಿಯೊಬ್ಬನೂ ಕೇಳುವುದು ಕಡ್ಡಾಯ.

ಗೆಳೆಯರು ಸಂಬಂದಿಕರು  ಅಲ್ಲಿನ  ಅತಿಥೇಯರು    ದೊಡ್ದ ಮನಸ್ಸು ಮಾಡುವುದು ಬೇರೆ ನಮ್ಮ ವೈಯುಕ್ತಿಕ ಖರ್ಚಿಗೆ ನಾವಾಗಿ ಅವರಿವರಲ್ಲಿ ಕೈಯೊಡ್ಡುವುದು ಬೇರೆ. ಬಾರತದ ಹೊರಗೆ ಮುಕ್ಕಾಲು ಆದಾಯ ಇಲ್ಲವಾದಲ್ಲಿ ಪ್ರತಿ ಪೈಸವನ್ನೂ ನಾವು ಲೆಕ್ಕ ಮಾಡುವುದೇ ಸರಿ. ಇದರರ್ಥ ಲೇಖನದಲ್ಲಿ ಕಾಣುವ ನಮ್ಮವರು ಮಾಡಬಹುದಾದ ಚೌಕಾಶಿಯನ್ನು ಒಪ್ಪುತ್ತೇನೆ ಎಂದಲ್ಲ. ವಿದ್ಯೆಗೋ ಕೆಲಸದ ಪ್ರಯುಕ್ತವೋ ಮೊದಲು ಹೋದ ಶ್ರೀಯುತ ಭಟ್ರಿಗೆ ಅಲ್ಲಿ ಹಣ ದಾರಾಳ ಖರ್ಚು ಮಾಡುವ ಅಗತ್ಯ ಅವಕಾಶ ಇದ್ದಿರಬಹುದು. ಅದುದರಿಂದ ಆ ದೋರಣೆ ಸಮಂಜಸ ಎನಿಸುತ್ತದೆ.

ನಾನು ಇಪ್ಪತ್ತೆರಡು ವರ್ಷ ಹಿಂದೆ ಸೈಕಲು ಪ್ರವಾಸದ ಬಾಗವಾಗಿ ರೋಮ್ ಪಟ್ಟಣದಲ್ಲಿ ಯುವ ಹಾಸ್ಟೇಲಿಗೆ ಹೋದೆ. ದಿನಕ್ಕೆ ಹತ್ತು ಸಾವಿರ ಲಿರಾ ಎಂದರು. ನಾನು ಅಂದಿನ ವರೆಗೆ ಸಾವಿರ ಮಿಕ್ಕಿದ ಹಣ ಅಪ್ಪನ ಅನುಮೋದನೆ ಇಲ್ಲದೆ ಖರ್ಚು ಮಾಡಿದ್ದಿರಲಿಲ್ಲ. ಅಲೋಚನೆ ಮಾಡಿದರೆ ಅದು ನೂರು ರೂಪಾಯಿ ಚಿಲ್ಲರೆ. ಆದರೆ ಮೊದಲು ಕೇಳುವಾಗ ನಿಜಕ್ಕೂ ಗಲಿಬಿಲಿ. ಅಂದು ನಮಗೆ  ಕಾನೂನು  ಪ್ರಕಾರ   ಕೊಂಡೊಯ್ಯಲು ಅವಕಾಶ ಇದ್ದುದು ಐದು ನೂರು ಡಾಲರ್ ಗುಣಿಸು ಹನ್ನೆರಡು ಅಂದರೆ ಕೇವಲ ಆರು ಸಾವಿರ ರೂಪಾಯಿ ಮಾತ್ರ. ಇಂದಿನಂತೆ ನಾಲ್ಕು ಲಕ್ಷ ರೂಪಾಯಿ ಮೌಲ್ಯ ಪರದೇಶಕ್ಕೆ ಸಲೀಸಾಗಿ ಕೊಂಡೊಯ್ಯುವಂತಿರಲಿಲ್ಲ. ಸ್ವಾಬಾವಿಕವಾಗಿ ಪೈಸ ಪೈಸವನ್ನೂ ಲೆಕ್ಕಿಸುವ ಅಗತ್ಯ.  ನಾನು  ವಾಪಾಸು  ಬರುವಾಗ  ನನ್ನಲ್ಲಿ  ಉಳಿದುದು  ಚಿಲ್ಲರೆ  ಹಣ.    ದುಂದು ವೆಚ್ಚ  ಮಾಡಿದರೆ  ಊರು  ತಲಪುತ್ತಿರಲಿಲ್ಲ. 

ಈ  ಹಣ   ಪರಿವರ್ತನಾ ವಿಚಾರಕ್ಕೆ   ಇನ್ನೊಂದು  ಮುಖವಿದೆ.     ಇತ್ತೀಚೆಗೆ ಎರಡು ಲಕ್ಷ ಚಿಲ್ಲರೆ ವಿಮಾನಕ್ಕೆ ಸುರಿದು ನಮ್ಮವರು ಬಂದಿದ್ದರು ಅಮೇರಿಕದಿಂದ.   ಸಹೋದರಿಯ ಬೇಟಿಗೆ ಬೆಂಗಳೂರಿಗೆ  ಹೋಗಲು ಕೆಲವು  ಸಾವಿರ ಖರ್ಚು  ಆಗಬಹುದು   ಎಂದು ಮನಬಿಚ್ಚಿ ಗೊಂದಲದಿಂದ ಮಾತಾಡಿದರು ವರ್ಷಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿ ಮಿಕ್ಕಿ ಸಂಪಾದಿಸುವ ಈ ಅಮೇರಿಕದ ಕುಳ.  ಕೊನೆಗೂ ಅಷ್ಟು ಖರ್ಚಿಗೆ ಮನಸೊಪ್ಪಲಿಲ್ಲ.  ಅವರ ಇಲ್ಲಿನ ವರ್ತನೆಯನ್ನು ಶ್ರಿ ಭಟ್ಟರು ಪ್ರಶ್ನಿಸುವುದು  ಹೆಚ್ಚು   ಉಚಿತ   ಹೊರತು ಅಲ್ಲಿ ನಮ್ಮ ವರ್ತನೆಯನ್ನಲ್ಲವೆಂದು ಅನಿಸುತ್ತದೆ.  ಬಾರತದಲ್ಲಿ  ಹೆಚ್ಚೆಂದರೆ  ವರ್ಷಕ್ಕೆ ಒಂದೆರಡು ಲಕ್ಷ ರೂಪಾಯಿ ಸಂಪಾದಿಸುವ ಬೂಪ ಸ್ವಾಬಿಮಾನ ಉಳಿಸಿಕೊಂಡು ಅಮೇರಿಕದಲ್ಲೊ ಯುರೋಪಿನಲ್ಲೊ ದಾರಾಳ ಖರ್ಚು ಮಾಡುವಂತಿಲ್ಲ.

ಅವರು ಲೇಖನದಲ್ಲಿ ಬರೆದಂತಹ ಇಲ್ಲಿಗೆ ಬರುವ ಪ್ರತಿ ಪ್ರವಾಸಿಯೂ ಆ ದೇಶದ ರಾಯಬಾರಿ ಎಂಬ ಪರದೇಶಿಯರ ಮಾತಿಗೆ ಅನುಗುಣವಾಗಿ ನಡೆದುಕೊಂಡಿದ್ದೇನೆ ಎಂದು ನಾನು ದೈರ್ಯವಾಗಿ ಹೇಳಬಲ್ಲೆ. ನನ್ನಂತೆ ನೂರಾರು ಜನ  ಬಾರತೀಯರು  ಎಲ್ಲೂ ಅನುಚಿತವಾಗಿ ನಡೆದುಕೊಂಡಿರಲಿಕಿಲ್ಲ. ಲೇಖನದಲ್ಲೊಂದು ದುಂದು ಖರ್ಚಿಗೆ ಪ್ರೆರಣೆಯೊ ಎನಿಸುವ ಮಾತು ಮಾತ್ರ ನನಗೆ ಸರಿ ಕಾಣಲಿಲ್ಲ.   ಮೊದಲ  ಬಾರಿಗೆ  ಸಮುದ್ರದಾಟುವವರು  ಈ  ಲೇಖನದಲ್ಲಿರುವ     ವಾಕ್ಯಗಳ  ಅಕ್ಷರವನ್ನೂ   ಬಿಡದೆ   ಓದಿ  ಚಿಂತಿತರಾಗುವ    ಸಾದ್ಯತೆ  ಕಂಡು  ಬರೆಯೋಣ  ಅನಿಸಿತು.

No comments: