Wednesday, September 24, 2008

ಹೀಗೊಂದು ಸೌರ ಶಕ್ತಿ ಚಾಲಿತ ಶೀತಕ



 ಸೌರಶಾಖವನ್ನೇಕೆ   ನಮ್ಮ   ಶೀತಕ   ಅನುಸರಿಸ ಬಾರದೆನ್ನುವ ಯೋಚನೆ ನನಗೆ ಮೊದಲು ಬಂದಿತ್ತು.  ಸೀಮೆ ಎಣ್ಣೆ ದೀಪ ಉರಿಸಿ ತಂಪಾಗಿಸುವ ಪುರಾತನ ಕಾಲದ ಫ್ರಿಡ್ಜ್ ಗಳು ಬಹಳ ಹಿಂದೆ ನೋಡಿದ್ದೆ. ಸುಮಾರು ನಲುವತ್ತು ವರ್ಷ ಹಿಂದೆ ಯಂತ್ರ ಚಾಲಿತ ಫ್ರಿಡ್ಜ್ ಗಳು ಬರುವ ವರೆಗೆ ಅವುಗಳು ಜನಪ್ರಿಯವಾಗಿದ್ದವು. ಕ್ರಮೇಣ ಅವುಗಳ ತಯಾರಿ ನಿಂತು ಅವುಗಳೆಲ್ಲ ಮೂಲೆ ಪಾಲಾದವು.

ಇದರ  ತಂತ್ರಜ್ನಾನ   ಹೊಸತಲ್ಲ.  ಇಂದಿನ    ಫ್ರಿಡ್ಜುಗಳು  ತುಂಬಾ  ವಿದ್ಯುತ್  ಅಪೇಕ್ಷಿಸುವ  ಯಂತ್ರಾವಲಂಬಿಯಾಗಿದೆ.  ಯಂತ್ರದ  ಮೂಲಕ  ಒತ್ತಡ  ಹೆಚ್ಚಿಸುವ  ಬದಲಿಗೆ  ಶಾಖ ಮೂಲಕ  ಹೆಚ್ಚಿಸುವ  ಕ್ರಿಯೆ  ಸರಳ.   ನೂರು  ವರ್ಷ ಹಿಂದೆ  ಅಗ್ಗದ  ಪೆಟ್ರೋಲ್   ವಿದ್ಯುತ್  ವಾಹನ  ಅವಿಶ್ಕಾರ  ತಡೆಗಟ್ಟಿದಂತೆ  ನಲುವತ್ತು  ವರ್ಷ    ಹಿಂದೆ  ಅಗ್ಗದ  ವಿದ್ಯುತ್  ಈ  ಸರಳ  ಶೀತಕಗಳನ್ನು  ಮಾರುಕಟ್ಟೆಯಿಂದ  ಓಡಿಸಿತು  ಅನ್ನಬಹುದು. 

ಇತ್ತೀಚೆಗೆ    ಅಮೇರಿಕದ ಸಾನ್ ಜೋಸ್ ವಿಶ್ವವಿದ್ಯಾಲಯದ ಚುರುಕು ಮೆದುಳುಗಳೆಲ್ಲ ಸೇರಿ ಇಂತಹ ಸೂರ್ಯನ ಶಾಖ ಬಳಸಿ ಮಂಜುಗಡ್ಡೆ ತಯಾರಿಸುವ ಯಂತ್ರ ರೂಪಿಸುವುದರಲ್ಲಿ ಸಫಲರಾಗಿದ್ದಾರೆ. ಯಾವುದೇ ಚಲಿಸುವ ಬಾಗಗಳಿಲ್ಲದ ಅದು ಬರೇ ಒಂದು ರಸಾಯನಿಕ ಕ್ರಿಯೆಯಲ್ಲಿ ಮಂಜುಗಡ್ಡೆ ಉತ್ಪಾದನೆ ಮಾಡುತ್ತದೆ.

ಉಬ್ಬಿನ ಪ್ರತಿಫಲಿಸುವ ಹಲಗೆಯನ್ನು ಉಪಯೋಗಿಸಿ ಬೆಳಕು ಮತ್ತು ಶಾಖವನ್ನು ಕೊಳವೆ ಮೇಲೆ ಕೇಂದ್ರೀಕರಿಸುವುದರಿಂದ ಇದರಲ್ಲಿ ತುಂಬಿಸಿರುವ ದ್ರಾವಣ ಅನಿಲ ರೂಪಕ್ಕೆ ಪರಿವರ್ತನೆಯಾಗುತ್ತದೆ. ಸೂರ್ಯ ಮುಳುಗಿದ ನಂತರ ಒತ್ತಡದ ವ್ಯತ್ಯಾಸದಿಂದಾಗಿ ಈ ಅನಿಲ ರೂಪ ವಿಪರೀತ ಶಾಖವನ್ನು ಕಳಕೊಳ್ಳುವ ಮೂಲಕ ತಣ್ಣಗಾಗಿಸಿ ಇದರಲ್ಲಿ ಸುಮಾರು ಆರು  ಕಿಲೊ ಐಸ್ ತಯಾರಾಗುತ್ತದೆ. ಈ ದ್ರವ  ತಣ್ಣಗಾಗುವಾಗ   ೧೦೪  ಡಿಗ್ರಿ ಫಾರಿನ್ ಹೀಟ್ ಅಂದರೆ ಸುಮಾರು ೪೦ ಡಿಗ್ರಿ ಸೆಂಟಿಗ್ರೇಡ್ ದಾಟಿದ ನಂತರ  ವೇಗವಾಗಿ ಶಾಖವನ್ನು ಕಳಕೊಳ್ಳುವ ಕಾರಣ ಇದು ಉಷ್ಣವಲಯದಲ್ಲೂ ಕೆಲಸ ಮಾಡಲು ಸಾದ್ಯ. ಯಾವುದೇ ಚಲಿಸುವ ಬಾಗಗಳಿಲ್ಲದ ಕಾರಣ ಹಾಳಾಗುವ ಸಾದ್ಯತೆಗಳು ಅತ್ಯಲ್ಪ.   ಪೈಪು ತೂತಾಗದಂತೆ ನೋಡಿಕೊಂಡರೆ ಸೈ.


ಮನೆಯಲ್ಲಿ ಆಹಾರ ಪದಾರ್ಥಗಳ ಮತ್ತು ವೈದ್ಯಕೀಯ ಲಸಿಕೆಗಳ ಮದ್ದುಗಳ ಬಹುಕಾಲ ಇಟ್ಟುಕೊಳ್ಳಲು ಇದು ಸಹಾಯ ಆಗಬಹುದು. ವಿದ್ಯುತ್ ಶಕ್ತಿ ಲಬ್ಯವಾಗದ ಸ್ಥಳಗಳಲ್ಲೂ ಇದು ಚೆನ್ನಾಗಿ ಕೆಲಸ ಮಾಡಬಲ್ಲದು. ನಮ್ಮಲ್ಲಿರುವಂತೆ ದಿನಕ್ಕೆ ಎಂಟು ಘಂಟೆ ವಿದ್ಯುತ್ ಕಡಿತ ಇರುವಲ್ಲಿಗೂ   ಬಹಳ   ಉಪಯುಕ್ತ.    ವಿಪರ್ಯಾಸ ಎಂದರೆ ನಮ್ಮಂತೆ ಹಳ್ಳಿಗರ ಮನೆಯಲ್ಲಿ ಅತಿ ಹೆಚ್ಚು ವಿದ್ಯುತ್ ಬಳಸುವುದು ಶೀತಕವೇ.   ಇದಿಲ್ಲವಾದರೆ  ನಾವು  ಮನೆ ಬಳಕೆ    ವಿದ್ಯುತ್  ಮಟ್ಟಿಗೆ   ಸ್ವಾವಲಂಬಿಗಳು.

No comments: