Saturday, September 13, 2008

ಕರೆಯುತ್ತಿದ್ದಾರೆ ಶೌಚಾಲಯಕ್ಕೆ


ಜಪಾನಿನಲ್ಲಿ ಕಳೆದ ಶತಮಾನದ ವರೆಗೂ ರೈತರು ರಸ್ತೆ ಪಕ್ಕದಲ್ಲಿ ಶೌಚಾಲಯ ನಿರ್ಮಿಸುತ್ತಿದ್ದರಂತೆ. ನಮ್ಮಲ್ಲಿ ಖಾಸಗಿ ಬಸ್ಸುಗಳಿಗೆ ಜನರನ್ನು ಕರೆಯುವಂತೆ ಕರೆಯುತ್ತಿದ್ದರೋ ಎನ್ನುವುದು ಖಚಿತವಲ್ಲವಾದರೂ ಉಪಯೋಗಿಸಿದರೆ ಖಂಡಿತ ಸಂತೋಷ ಪಡುತ್ತಿದ್ದರಂತೆ.

ನನ್ನ ಸೈಕಲ್ ಪ್ರವಾಸದ ಮೊದಲು ಹಲವಾರು ದೇಶಗಳ ಬಗೆಗೆ ಪ್ರವಾಸಿ ಮಾಹಿತಿ   ಸಂಗ್ರಹಿಸಿದ್ದೆ. ಅಲ್ಲಿರುವಾಗ ಕೃಷಿ  ಸಂಬಂದಿತ  ವಿಚಾರಗಳ    ಬಗೆಗೂ ಕಣ್ಣಿಡುತ್ತಿದ್ದೆ. ಜಪಾನು ಸಾವಿರಾರು ವರ್ಷಗಳಿಂದ ಒಂದೇ ಜಾಗದಲ್ಲಿ ನಿರಂತರವಾಗಿ ಕೃಷಿ ಕೈಕೊಳ್ಳುತ್ತಿರುವ ದೇಶವಾದುದರಿಂದ ಅವರದು ಫಲವತ್ತತೆ ಉಳಿಕೊಳ್ಳುವ ಮಾದರಿ ಎನ್ನುವುದು ಸ್ಪಷ್ಟ. ಈ ದಾರಿ ಬದಿಯ ಶೌಚಾಲಯಗಳು ದಾರಿಹೋಕರಿಗೆ ಉಪಯೋಗ ಎನ್ನುವುದಕ್ಕಿಂತ ಹೆಚ್ಚು ತಮಗೆ ಗೊಬ್ಬರ ಸಿಗಲಿ ಎನ್ನುವ ಸ್ವಾರ್ಥ ಚಿಂತನೆ. ಹಾಗೆಯೇ ಮನೆಗೆ ಬಂದ ಅತಿಥಿಗಳು ತಮ್ಮ ಶೌಚಾಲಯ ಉಪಯೋಗಿಸದೆ ಇದ್ದರೆ ಸಿಟ್ಟೆ ಬರುತ್ತಿತ್ತಂತೆ.   ನಮ್ಮಲ್ಲಿ ಈಗ ಸೆಗಣಿ ಕುರಿ ಕೋಳಿ ಗೊಬ್ಬರ ಲಾರಿಯಲ್ಲಿ ಸಾಗಿಸುವಂತೆ ಮಲವನ್ನು ಪಟ್ಟಣಗಳಿಂದ ಗಾಡಿಯಲ್ಲಿ ತುಂಬಿ ಸಾಗಿಸುತ್ತಿದ್ದರು.  ಸಿರಿವಂತರ ಆಹಾರದಲ್ಲಿ ಹೆಚ್ಚು ಪೊಷಕಾಂಶ ಎನ್ನುವ ನೆಲೆಯಲ್ಲಿ ಹೆಚ್ಚಿನ ಮೌಲ್ಯ.

ಪ್ರಯಾಣ ಮಾಡುತ್ತೀರಾ ? ಸಂತೋಷ, ಒಮ್ಮೆ ಶೌಚಾಲಯಕ್ಕೆ ಹೋಗಿ ಬನ್ನಿ ಎನ್ನುವ ಮಾತು ಈಗ ಸ್ವೇಡನಿನಲ್ಲಿ  ವ್ಯಾಪಕವಾಗಿ   ಕೇಳಿ ಬರುತ್ತಿದೆ. ಈಗ ಸ್ವೇಡನ್ ದೇಶದ ಹಲವು ಮುನಿಸಿಪಾಲಿಟಿಗಳು ಕೊಳಚೆಯಿಂದ ಅನಿಲ ಉತ್ಪಾದನೆ ಕೈಗೊಳ್ಳುತ್ತಿದೆಯೆಂದು ಇತ್ತೀಚಿನ ಸುದ್ದಿ. ಅಲ್ಲಿನ ಕಾರು ಬಸ್ಸುಗಳ ಮಾತ್ರವಲ್ಲ ರೈಲುಗಾಡಿಯನ್ನು ಸಹಾ ಈ ಅನಿಲ ಚಲಿಸುವಂತೆ ಮಾಡುತ್ತವೆ. ನೈಸರ್ಗಿಕ ಅನಿಲದಿಂದ ಚಲಿಸುವ ವಾಹನಗಳು ಯಾವುದೇ ಬದಲಾವಣೆ ಇಲ್ಲದೆ ಈ ಕೊಳಚೆ ಗಾಸ್ ಬಳಸಬಹುದು.
                                                                              
ಕೆಲವೆಡೆ ನೈಸರ್ಗಿಕ ಅನಿಲವನ್ನು ಗ್ರಾಹಕರಿಗೆ ಕೊಂಡೊಯ್ಯುವ ಕೊಳವೆಯನ್ನೇ ಬಳಕೆ. ಗಾಸ್ ಪಂಪಿನಲ್ಲಿ ಒತ್ತಡೀಕರಿಸಿ ಕಾರಿನಲ್ಲಿರುವ ಜಾಡಿಗೆ ತುಂಬುತ್ತಾರೆ. ಒಂದು ಕಾರು ಪಂಪಿನಲ್ಲಿ ಗಾಸ್ ತುಂಬಿಸಿತು ಎಂದಾಕ್ಷಣ ಅಷ್ಟೇ ಗಾಸ್ ಕೊಳವೆ ಜಾಲಕ್ಕೆ ಸೇರಿಸುತ್ತಾರೆ. ವಾಹನ ಬಳಸುವ ಇಂದನವನ್ನು ಪೂರ್ತಿ ಕೊಳಚೆಯಿಂದ ತಯಾರಾದ ಗಾಸ್ ತುಂಬಿಕೊಡಲೆಂಬ ಚಿಂತನೆ.

ಪ್ರತಿಯೊಬ್ಬರು ಇಡೀ ವರ್ಷದಲ್ಲಿ ಫ್ಲುಷ್ ಮಾಡೋದರಲ್ಲಿ ಉತ್ಪತ್ತಿಯಾದ ಗಾಸ್ ಸುಮಾರು ೧೨೦ ಕಿಲೋಮೀಟರ್ ನಮ್ಮ ಹಡಗಿನಂತಹ ಕಾರುಗಳು ಓಡಿಸಲು ಸಾಕು ಎಂದು ಅಲ್ಲಿನ ಅಬಿಯಂತರರು ಹೇಳುತ್ತಾರೆ. ಮೇಲ್ನೋಟಕ್ಕೆ ನಮ್ಮ ಪುಟ್ಟ ಕಾರುಗಳು ಇನ್ನೂರು ಕಿಲೋಮೀಟರ್ ಚಲಿಸಬಹುದು ಅನ್ನಿಸುತ್ತದೆ. ಕಾರಿನ ಹೊಗೆ ನಳಿಗೆ ಉಗುಳುವುದು ವಾಸನೆರಹಿತ ಕಡಿಮೆ ಮಲೀನತೆಯ ಹೊಗೆ. ಸ್ಥಳೀಯ ಇಂದನ, ಕಡಿಮೆ ಮಲೀನತೆ, ಹೀಗೆ ಹಲವು ಉಪಯೋಗ. ಉಳಿಕೆ ವಸ್ತುವನ್ನು ಗೊಬ್ಬರವಾಗಿ ಬಳಕೆ.

ನಾಲ್ಕು ಜನರಿರುವ ನಮ್ಮ ಮನೆಯಲ್ಲಿ ವರ್ಷಕ್ಕೆ ಎಂಟು ನೂರರಿಂದ ಸಾವಿರ ಕಿಲೋಮೀಟರ್ ಕಾರು ಓಡಿಸುವಷ್ಟು ಗಾಸ್ ನಿರೀಕ್ಷಿಸಬಹುದು. ಒತ್ತಡೀಕರಿಸುವುದು ಇಂದಿನ ದಿನಗಳಲ್ಲಿ ದುಬಾರಿ. ನಮ್ಮಲ್ಲಿ ಕಣ್ಣೆದುರು ಪೋಲಾಗುವ ಇನ್ನೊಂದು ಇಂದನ ಮೂಲವಾದ ಸೌರ ವಿದ್ಯುತ್ ಸೇರಿಸಿದರೆ ಓಡಾಟದ ಮಟ್ಟಿಗೆ ಖಂಡಿತ ಸಂಪೂರ್ಣ ಸ್ವಾವಲಂಬನೆಗೆ ಸಾದ್ಯ.  ಸದ್ಯಕ್ಕೆ ವಿಚಾರ ಲೆಕ್ಕಾಚಾರಕ್ಕೆ ಸಿಮಿತ. ಇದರ   ವಿವರಗಳು  ಇನ್ನೊಮ್ಮೆ.

No comments: