Saturday, September 20, 2008

ಸಾಗಾಣಿಕೆ ಅನುಕೂಲ ಸೈಕಲುಗಳು


ನಮ್ಮಲ್ಲಿ  ಯಾಕಿಲ್ಲ  ಎನ್ನುವ   ಪಟ್ಟಿಗೆ  ಸೇರಿಸುವಂತಹ   ವಸ್ತು   ಸಾಗಾಣಿಕೆ  ಸೈಕಲುಗಳು.      ಬಾರತದಲ್ಲಿ    ಇಂದು ಕೆಲವು ಕೋಟಿ ರೂಪಾಯಿ ಕ್ರಯದ  ವಿಲಾಸಿ   ಕಾರುಗಳು  ಮತ್ತು   ನೂರಾರು ಬಗೆಯ    ದ್ವಿಚಕ್ರ ವಾಹನಗಳು ನಮ್ಮ ಮಾರುಕಟ್ಟೆಯಲ್ಲಿಸಿಗುತ್ತದೆ.      ಆದರೆ ಹಲವಾರು ಉಪಯುಕ್ತ    ಸರಳ   ಮಾದರಿಗಳು ನಮ್ಮಲ್ಲಿ ಮುಖತೋರಿಸಲೇ ಇಲ್ಲ.    ಗ್ರಾಮೀಣ ಪ್ರದೇಶದಲ್ಲಿ ಉಪಯುಕ್ತ ಎನಿಸಬಹುದಾದ ಸಕಲ ದಾರಿ ಸಂಚಾರಿ ಸದಾಸಂ ಮತ್ತು   ಈ  ಹಿಂಬಾಗ  ಉದ್ದವಾದ  ಸೈಕಲುಗಳು   ಉತ್ತಮ  ಉದಾಹರಣೆ. 

ಸೈಕಲು    ತಯಾರಿ    ಬಗೆಗಿನ ವಿಚಾರಗಳೆಲ್ಲ ನಮ್ಮ ದೇಶದಲ್ಲಿ ನಿಂತ ನೀರಾಗಿದೆ. ಲುದಿಯಾನದಲ್ಲೂ ಮದ್ರಾಸಿನಲ್ಲೂ ಇರುವ ನಮ್ಮ ಸೈಕಲ್ ತಯಾರಕರು ಬ್ರಿಟೀಷರು ಬಿಟ್ಟು ಹೋದ ಅಚ್ಚಿನಲ್ಲೇ ಇಂದಿಗೂ   ಸೈಕಲುಗಳ ತಯಾರಿಸಿ ಮಾರುತ್ತಿದ್ದಾರೆ.    ಗಾತ್ರದಲ್ಲಿ ವಿವಿದತೆ ಕಂಡುಬಂದರೂ    ವಿನ್ಯಾಸದಲ್ಲಿ ಇಲ್ಲವೇ ಇಲ್ಲ.  ಇಷ್ಟೊಂದು  ಸರಳ ಬದಲಾವಣೆ  ನಮ್ಮ  ತಯಾರಕರು  ಅಳವಡಿಸಿಲ್ಲ  ಎನ್ನುವಾಗ   ಅಸಹಾಯಕ     ಹತಾಶೆ  ಬಾವನೆ  ಮೂಡುತ್ತದೆ. 

ಒಂದಷ್ಟು ತಂತ್ರಾಂಶದಲ್ಲಿ ಕೆಲಸ ಮಾಡುವ ಆಸಕ್ತ ಹುಡುಗರು ಪರದೇಶಗಳಿಂದ ಹಗುರವಾದ ಅತ್ಯಾದುನಿಕ ಸೈಕಲ್ ತರಿಸಿ ಮಾರಾಟ ಮಾಡಿ ಹೊಸ ನೀರ ಹರಿವಿಗೆ ಪ್ರಯತ್ನಿಸುತ್ತಿದ್ದಾರೆ ಆಂದರೂ ಸಹಾ ಅವರ ಪ್ರಬಾವ ಪಟ್ಟಣಗಳಿಗೆ ಸಿಮಿತ. ಆ ದುಬಾರಿ ಸೈಕಲುಗಳು ಹಳ್ಳಿಗರ ಜನಸಾಮಾನ್ಯರ ಕೈಗೆಟಕುವಂತೆಯೂ ಇಲ್ಲ.


ನಮಗೆ    ಉಪಯೋಗವಾಗಬಹುದಾದ   ಸೈಕಲುಗಳು  ಎಲ್ಲೋ  ತಯಾರಾಗುತ್ತದೆ  ಎನ್ನುವುದು  ಸಂತಸದ  ಸುದ್ದಿ.    ಪರದೇಶಗಳಲ್ಲಿ ಅಮೇರಿಕದಿಂದ ಹಿಡಿದು   ಅಫ್ರಿಕದ  ವರೆಗೆ ಹೊಸ ತರದ ಸಾಗಾಣಿಕೆ ಸೈಕಲುಗಳ ಅವಿಷ್ಕರಣೆ ಹಾಗೂ ಉಪಯೋಗ ಸಾಗಿದೆ.   ಈ ಸೈಕಲುಗಳು  ಆಸನದ  ಹಿಂದಿನ  ಬಾಗ    ಸ್ವಲ್ಪ   ಉದ್ದವಾಗಿದ್ದು ಹೆಚ್ಚು ಸಾಮಾನು ಹಾಕಲು ಉಪಯುಕ್ತ.     ಕಬ್ಬಿಣದ ಕೊಳವೆಗಳ ಬದಲಿಗೆ ಬಿದುರಿನ ಕೋಲುಗಳ ಉಪಯೋಗಿಸುವುದರಲ್ಲೂ    ಆಫ್ರಿಕದಲ್ಲಿ     ಸಫಲರಾಗಿದ್ದಾರೆ.  


ಈ  ಮಾದರಿ  ಹೊಸ    ಸೈಕಲುಗಳು ತಯಾರಿಗೆ  ಹೆಚ್ಚು  ಕಬ್ಬಿಣದ  ಕೊಳವೆಗಳ  ಉಪಯೋಗದಿಂದ   ಇನ್ನೂರು ರೂಪಾಯಿ ದುಬಾರಿ    ಆಗಬಹುದು.    ನಮ್ಮಲ್ಲಿ     ಸಂಪ್ರದಾಯಿಕ  ಸೈಕಲು  ಮಾರುಕಟ್ಟೆ   ದೊಡ್ಡ  ತಯಾರಕರ  ಹಿಡಿತದಲ್ಲಿದೆ.  ಇದು  ಅಂತರ್ಜಾಲದಲ್ಲಿ  ಮಾರಾಟ  ಆಗುವ  ಸಾಮಾನು  ಅಲ್ಲ.    ಇವುಗಳಲ್ಲಿ ಹೆಚ್ಚು ಸಾಮಾನು ಕೊಂಡೊಯ್ಯಬಹುದು.   ಇನ್ನೂರು  ಕಿಲೊ  ಸಾಮಾನು  ಅಥವಾ  ಮೊರು  ಜನ  ಹೊರುವ  ಮಾದರಿಗಳಿವೆಯಂತೆ.     ಸೈಕಲುಗಳ ಉಪಯೋಗಿಸುವ ಸಣ್ಣ ವ್ಯಾಪಾರಿಗಳು ವಿತರಕರು ನಿತ್ಯವೂ ಉಪಯೋಗಿಸುವವರು  ಹಲವರು   ಪುಟ್ಟ ದ್ವಿಚಕ್ರಕ್ಕೆ ಬಡತಿ ಹೊಂದಿದ್ದರಾದರೂ ಇನ್ನೂ ಸಾಕಷ್ಟು ಜನ ಸೈಕಲಿಗೆ ಅಂಟಿಕೊಂಡಿದ್ದಾರೆ.     ಅವರಿಗೆಲ್ಲ ಈ ಸೈಕಲುಗಳು ನಮ್ಮಲ್ಲೂ     ಜೋಡಣೆಯಾದರೆ ಬಹಳ ಉಪಯೋಗವಾಗಬಹುದು.

No comments: