Sunday, November 01, 2009

ತೂಗು ಸೇತುವೆಗೆ ಅಧಾರ ಕಲ್ಪಿಸಿದ ಗಾಳಿಪಟ

ನಾನು ಬಹಳ ಪ್ರೀತಿಸುವ ಹವ್ಯಾಸಗಳಲ್ಲಿ ಗಾಳಿಪಟ ಬಿಡುವುದು ಒಂದು. ಹಿಂದೆ ಪಣಂಬೂರಿನಲ್ಲಿ ಗಾಳಿಪಟ ಉತ್ಸವ ಆದಾಗ ಗಾಳಿಪಟ ಖರೀದಿಸಿ ತಂದು ವಾರಗಟ್ಟಲೆ ಮಕ್ಕಳ ಸೇರಿಸಿಕೊಂಡು ಬಿಡುತ್ತಾ ಸಂತಸ ಪಟ್ಟಿದ್ದೆವು. ಈಗ ಮದ್ರಾಸಿನಲ್ಲಿ ಗಾಳಿ ಪಟ ಬಿಟ್ಟರೆ ಸಾವಿರ ರೂಪಾಯಿ ದಂಡ ಮೂರು ತಿಂಗಳು ಜೈಲು ಸುದ್ದಿ ಓದುವಾಗ ಮದ್ರಾಸಿನ ಮಕ್ಕಳ ಬಗೆಗೆ ಮರುಕ ಉಂಟಾಗುತ್ತದೆ. ಸಂಪೂರ್ಣ ನಿಷೇದಿಸುವ ಬದಲು ಕಡಲ ತೀರದಲ್ಲಾಗಲಿ ನಿರ್ದಿಷ್ಟ ಆಟದ ಮೈದಾನದಲ್ಲಾಗಲಿ ಬಿಡಬಹುದೆಂದು ಕಾನೂನು ಮಾಡಬಹುದಾಗಿತ್ತು.

ಸಮಸ್ಯೆ ಇರುವುದು ಇನ್ನೊಬ್ಬರ ಗಾಳಿಪಟದ ದಾರ ಕತ್ತರಿಸಲೆಂದು ಗಾಳಿಪಟ ಬಿಡುವ ನೂಲಿಗೆ ಗಾಜಿನ ಪುಡಿ ಲೇಪನ. ಇದರ ವಿರೋದ ಪ್ರಚಾರಾಂದೋಲನ ಕೈಗೊಂಡು ಮಕ್ಕಳ ಮನ ಪರಿವರ್ತನೆ ಮಾಡಬೇಕು ವಿನಾ ಗಾಳಿ ಪಟವನ್ನೇ ಕಾನೂನು ಬಾಹಿರ ಮಾಡುವುದು ಸರಿಯೆನಿಸುವುದಿಲ್ಲ. ಕಡಿದು ಹೋದ ದಾರ ದಾರಿಗೆ ಅಡ್ಡವಾಗಿದ್ದು ಇನ್ನೊಬ್ಬರಿಗೆ ತೊಂದರೆ ಉಂಟು ಮಾಡುವುದಿಲ್ಲ ಎನ್ನುವುದನ್ನೂ ಖಚಿತ ಪಡಿಸಿಕೊಳ್ಳಬೇಕು. ನಿಮ್ಮ ಕ್ರಿಯೆಯ trickle down effect ಗೂ ನೀವು ಹೊಣೆ ಎನ್ನುವ ವಿಚಾರ ಮನದಟ್ಟುಮಾಡಬೇಕು. ಇದು ಜೀವನದ ಒಂದು ಮುಖ್ಯ ಪಾಠ.

ನಾನು ಅಪಘಾತದಲ್ಲಿ ಒಳಗಾದ ಹಾರು ರೆಕ್ಕೆಯಾಗಲಿ ಅಥವಾ ವಿಮಾನವಾಗಲಿ ಹೇಗೆ ಹಾರುತ್ತದೆಂದು ವೈಜ್ನಾನಿಕವಾಗಿ ವಿವರಿಸಲು ಗಾಳಿಪಟವೇ ಪ್ರಥಮ ಹಾಗೂ ಸರಳ ಉದಾಹರಣೆ. ಗಾಳಿ ಪಟ ಬಿಡುವುದೆಂದರೆ ಪ್ರತಿ ಕ್ಷಣವೂ ಚುರುಕಾಗಿರಬೇಕಾಗುತ್ತದೆ. ಮಾದರಿ ವಿಮಾನ ಹಾರಿಸುವಂತೆ ಗಾಳಿ ಪಟವೂ ಆ ಕ್ಷಣದಲ್ಲಿ ಹೇಗೆ ಹಾರುತ್ತಿದೆ ಎನ್ನುವುದರ ಗಮನಿಸಿ ನಿಯಂತ್ರಿಸುತ್ತಾ ಇರಬೇಕಾಗುತ್ತದೆ.

ನೂರ ಐವತ್ತು ವರ್ಷ ಹಿಂದೆ ಅಮೇರಿಕ ಕೆನಡ ದೇಶಗಳ ಗಡಿಯಲ್ಲಿರುವ ನೈಗರಾ ಜಲಪಾತದ ಮೇಲೆ ಪ್ರಥಮ ಸೇತುವೆ ಕಟ್ಟುವಾಗ ಮೊದಲು ಹಗ್ಗವನ್ನು ಈ ಕಡೆಯಿಂದ ಆ ಕಡೆಗೆ ಕಟ್ಟುವ ಬಗೆ ಹೇಗೆ ಎನ್ನುವುದರ ಪ್ರಶ್ನೆ ಉಂಟಾಗಿತ್ತಂತೆ. ಎರಡು ದೇಶಗಳ ನಡುವೆಯಿದ್ದ ಎಂಟು ನೂರು ಅಡಿ ಅಗಲದ ಕಣಿವೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಮೊದಲ ಹಗ್ಗ ಎಳೆಯುವುದು ದೊಡ್ಡ ಸವಾಲಾಗಿತ್ತು. ದೋಣಿ ಉಪಯೋಗಿಸುವಂತಿರಲಿಲ್ಲ. ವಿಮಾನ ಎನ್ನುವ ಕಲ್ಪನೆ ಇಲ್ಲದ ಕಾಲ. ಬಿಲ್ಲು ಬಾಣ ಉಪಯೋಗಿಸೋಣ ಎಂದರೆ ಬಾಣ ಎಸೆಯುವುದಕ್ಕಿಂತ ಹೆಚ್ಚು ದೂರವಿತ್ತು. ಅಗ ಸೇತುವೆ ವಿನ್ಯಾಸ ಮಾಡುವ ತಂತ್ರಜ್ನ ಚಾರ್ಲ್ಸ್ ಎಲ್ಲೆಟ್ ಒಂದು ಗಾಳಿ ಪಟ ಹಾರಿಸುವ ಸ್ಪರ್ದೆ ಏರ್ಪಡಿಸಿದರು.

ಪ್ರಪಾತದ ಒಂದು ಬದಿಯಿಂದ ಆಚೆ ಬದಿಗೆ ತಲಪಿ ಕೈಗೆಟಕುವಂತೆ ಪ್ರಥಮ ಬಾರಿ ಗಾಳಿ ಪಟ ಹಾರಿಸಿದವನಿಗೆ ಐದು ಡಾಲರ್ ಬಹುಮಾನ ಘೋಷಿಸಿದರು. ೧೮೪೯ ರಲ್ಲಿ ಈ ಐದು ಡಾಲರ್ ಚಿಕ್ಕ ಮೊತ್ತವಾಗಿರಲಿಲ್ಲ. ಕೆನಡದ ಬದಿಯಿಂದ ಗಾಳಿಪಟ ಹಾರಿಸಿದ ಹೊಮನ್ ನಾಶ್ ಎನ್ನುವ ಅಮೇರಿಕದ ಹತ್ತು ವರ್ಷದ ಹುಡುಗ ಈ ಸ್ಪರ್ದೆಯಲ್ಲಿ ಗೆದ್ದ. ಗಾಳಿ ಬೀಸುವುದು ಕೆನಡದ ಬದಿಯಿಂದ ಎಂಬ ಕಾರಣಕ್ಕೆ ಹೊಳೆಯನ್ನು ದೋಣಿಯಲ್ಲಿ ದಾಟಿ ಪೂರಕವಾಗಿರುವ ಗಾಳಿಗೆ ಕಾದಿದ್ದನಂತೆ. ಆವನು ತಗ್ಗಿನಲ್ಲಿ ಹಾರಿಸಿದ ಗಾಳಿ ಪಟವನ್ನು ಅಮೇರಿಕದ ಬದಿಯಲ್ಲಿ ಹಿಡಿಯಲು ಸಾದ್ಯವಾಯಿತು.

ಅನಂತರ ನಿರ್ಮಿಸಲಾದ ಏಳು ನೂರ ಅರುವತ್ತ ಎರಡು ಅಡಿ ಉದ್ದ ಮತ್ತು ಎಂಟು ಅಡಿ ಅಗಲದ ತೂಗು ಸೇತುವೆ ಸಾದ್ಯವಾದುದು ಹೋಮನ್ ನಾಶ್ ನ ಗಾಳಿಪಟದಿಂದ. ಗೆದ್ದ ಹೋಮನ್ ನಾಶ್ ಎಂಬತ್ತು ವರ್ಷ ಅನಂತರ ಆತನ ಸಾವಿನ ವರೆಗೂ ಈ ಬಗೆಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದನಂತೆ. ಹಾಗೆ ಮೊದಲು ಗಾಳಿ ಪಟದ ಹಗ್ಗದ ಆದಾರದಲ್ಲಿ ಗಟ್ಟಿಯಾದ ಹಗ್ಗ ಎಳೆದರು. ನಂತರ ಹೆಚ್ಚು ತೋರದ ಹಾಗೂ ಬಾರವಾದ ಸರಿಗೆ ಎಳೆಯುತ್ತಾ ಹೋಗಿ ಅನಂತರ ತೂಗು ಸೇತುವೆಯನ್ನು ಆಧರಿಸುವ ಕಬ್ಬಿಣದ ಹಗ್ಗವನ್ನೂ ಎಳೆಯಲಾಯ್ತು.

ಒಂದು ಚಿಕ್ಕ ಹಗ್ಗ ಎಂತಹ ಬೃಹತ್ ಸೇತುವೆಯಾಗಿ ಬದಲಾವಣೆ ಹೊಂದಿತೋ ಹಾಗೆಯೇ ಚಿಕ್ಕ ಚಿಂತನೆ ನಮ್ಮ ಕನಸುಗಳ ನನಸಾಗಿಸುತ್ತದೆ. ಪ್ರತಿ ಸಲ ಯೋಚಿಸಿದಾಗ ಚಿತ್ರ ನಮಗೆ ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತದೆ. ಆದರೆ ಹಾರಾಡುವ ಗಾಳಿಪಟಕ್ಕೆ ಸಿಮಿತಗೊಳಿಸುವ ಹಗ್ಗದ ಆದಾರವಿದೆ. ಚಿಂತನೆಯನ್ನು ಸಿಮಿತಗೊಳಿಸುವುದು ನಮ್ಮ ಅಲೋಚನೆ ಸಾಮರ್ಥ್ಯ ಹಾಗೂ ಸಾದಿಸುವ ಹಸಿವು ಮಾತ್ರ.

5 comments:

S.M.Pejathaya said...

ಗೋವಿಂದರೇ!
ಇಂದಿನ ವಿಮಾನ ಇಲ್ಲದ ಆ ಕಾಲದಲ್ಲಿ ಗಾಳಿಪಟ ನಯಗಾರಾ ಜಲಪಾತದ ಆಚೆಬದಿಗೆ ದಾರ ದಾಟಿಸಿತು!
ಮಂತ್ರಿಮಹೋದಯರನ್ನು ಕೇಳಿ! ಹೆಲಿಕಾಪ್ಟರ್ ಉಪಯೋಗಿಸ ಅಬಾರದಿತ್ತೇ ಅನ್ನುತಾರೆ!

ವಂದನೆಗಳು
ಪೆಜತ್ತಾಯ

Anonymous said...
This comment has been removed by a blog administrator.
ಅಶೋಕವರ್ಧನ said...

ಪ್ರಿಯ ಗೋವಿಂದಾ
ಹೆಚ್ಚು ಹಾನಿಕಾರಕಗಳಿಗೆ ಲೈಸೆನ್ಸ್ ಕೊಡುತ್ತಾರೆ (ಕುಡಿತ, ಧೂಮಪಾನ, ವ್ಯಭಿಚಾರಕ್ಕಿನ್ನೇನು ಸದ್ಯದಲ್ಲೇ ಬಂದೀತು ಇತ್ಯಾದಿ)ಕಡಿಮೆಯವಕ್ಕೆ ನಿಷೇಧ - ನಿಜಕ್ಕೂ ವಿಪರ್ಯಾಸ.

ಕಿಲಾಡಿರಂಗ ಸಿನೇಮಾದಲ್ಲಿ ಅಣ್ಣಾವ್ರು ವೈರಿ ರಾಜನ ಕೋಟೆಯಮೇಲೆ ಲಗ್ಗೆ ಹಾಕುವುದೇ ಗಾಳಿಪಟಕ್ಕೆ ತನ್ನನ್ನು ಬಂಧಿಸಿಕೊಂಡು, ನೋಡಿದ್ಯಾ?
ನನ್ನ ಬೆಂಗಳೂರು ಬಾಲ್ಯದಲ್ಲಿ ಎರಡನೆಯ ಮಾಳಿಗೆಯ ಮೇಲಿನಿಂದ ನಾನು ಹಳೇಪೇಪರ್ ಬಳಸಿ ಮಾಡಿ, ಹಾರಿಸುತ್ತಿದ್ದ ಒಂಟಿ, ಜಂಟಿ (ಮೂರು ನಾಲ್ಕರವರೆಗೂ ಮಾದಿದ ನೆನಪು)ಪಟಗಳ ನೆನಪು ಮರುಕಳಿಸಿತು. ಬಾಲಕ್ಕೆ ಭಾರದ ಎಂಥದ್ದೋ ಗುಚ್ಛ ಹೊತ್ತು ಬರುತ್ತಿದ್ದ ಲಾಂಡಾ ಪಟ ಗೋತಾ ಹೊಡೆಸಿ ನನ್ನ ಪಟ ಮುಗಿಸಲು ಪ್ರಯತ್ನಿಸಿದವರ ನೆನಪಿದೆ. ಯಾವುದೋ ಕಡಿಮೆ ಗಾಳಿಯ ದಿನದಂದು ರೌಡಿಗಂಗ (ಸುಮಾರು ನನ್ನದೇ ಪ್ರಾಯದ ಕೊಳಚೆಪ್ರದೇಶದ ಹುಡುಗ) ಮೂರ್ನಾಲ್ಕಡಿ ದಪ್ಪ ದಾರಕ್ಕೆ ಎರಡು ಕೊನೆಗೆ ಸಣ್ಣ ಕಲ್ಲು ಕಟ್ಟಿ,ಹೊಟ್ಟೆಬಂದ ನನ್ನ ದಾರಕ್ಕೆ ಎಸೆದು, ಇನ್ನೆಲ್ಲೋ ನೆಲಮುಟ್ಟಿದ್ದನ್ನು ಕದ್ದೊಯ್ದದ್ದು ಇಂದಿಗೂ ಮಾಸದ ದುಖದ ನೆನಪು. ಇಂಥ ಒಂದು ಆಯಾಮಕ್ಕೇ ಮೋಸಮಾಡುವ ಸರ್ಕಾರೀ ಫರ್ಮಾನು ಶುದ್ಧ ಮೂರ್ಖತನ. ಶೀತಕ್ಕೆ ಮೂಗುಕೊಯ್ಯುವ ಜಾಣತನ!
ಇಂತು ವಿಶ್ವಾಸಿ
ಅಶೋಕವರ್ಧನ

ಸುಪ್ತದೀಪ್ತಿ said...

ನಮಸ್ಕಾರ ಗೋವಿಂದ ಭಟ್ರೆ,
ಗಾಳಿಪಟದ ವಿಚಾರ ವೈಚಾರಿಕವಾಗಿದೆ.
ಮಕ್ಕಳಿಗಿರುವ ಇಂಥ ಸಣ್ಣ ಸಣ್ಣ ಹಾನಿಕಾರಕವಲ್ಲದ ಖುಷಿಗೂ ನಿಷೇಧ ಮಾಡುವ ಸರಕಾರ ಇನ್ನೆಂಥ ಅಭಿವೃದ್ಧಿ ಮಾಡೀತು?
ಗಾಳಿಪಟವನ್ನು ಹಾರಿಸಲೇಬಾರದು ಅನ್ನುವುದಕ್ಕಿಂತಲೂ ದಾರ ಕತ್ತರಿಸಿ ಗಾಳಿಯಲ್ಲಿ ಎತ್ತಲೋ ಹೋಗುವಂತೆ ‘ಹಾರಿಬಿಡಬಾರದು’ ಎನ್ನಲಿ ಬೇಕಾದರೆ. ಹಾಗೆ ಹೋಗುವ ಪಟಗಳು ಎಲೆಕ್ಟ್ರಿಕ್ ತಂತಿಗಳಿಗೆ ಸಿಕ್ಕಿಕೊಂಡು ಅನಾಹುತಕ್ಕೆ ದಾರಿಯಾಗುತ್ತವೆ.
ಆಜ್ಞೆಗಳಿಗೆ ಪ್ರಜ್ಞೆಯಿರಲೆಂದು ಆಶಿಸೋಣ.

rangamarakini said...

here is good news for chennai boys and girls. the police commissioner has clarified that they have not banned the flying and sale of kites, but only threds which were pasted with glass piecies.
ranga marakini