Tuesday, October 27, 2009

ನ್ಯೂ ಯೋರ್ಕಿನಲ್ಲಿ ಜೇನು ಪೆಟ್ಟಿಗೆ ಇಟ್ಟ ಯಶವಂತ ಡಾಕ್ಟ್ರು



ಗಗನಚುಂಬಿ ಕಟ್ಟಡಗಲೇ ತುಂಬಿರುವ ನ್ಯೂ ಯೋರ್ಕ್ ಪಟ್ಟಣ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರದಲ್ಲಿ ಜೇನು ಗೂಡಿಗೆ ಅವಕಾಶವೇ ಇಲ್ಲ. ಹೀಗಿರುವಾಗ ಡಾ ಯಶವಂತ್ ಚಿತಾಲ್ಕರ್ ಎಂಬ ಮನಶಾಸ್ತ್ರಿಗಳ ಟೆರೇಸಿನ ಚಿತ್ರ ನನಗೆ ಕಂಡಾಗ ಆಶ್ಚರ್ಯವಾಯಿತು. ಚಿತ್ರದಲ್ಲಿ ಕಾಣುವಂತೆ ಅವರಲ್ಲಿ ಹಲವು ಬಗೆಯ ಗಿಡಗಳು ಮಾತ್ರವಲ್ಲ ಎರಡು ಜೇನು ಗೂಡುಗಳೂ ಇವೆ.

ಇದೀಗ ಜೇನು ನೊಣಗಳು ಮೊಬೈಲ್ ಟವರಿನಿಂದಾಗಿ ಗೂಡಿಗೆ ವಾಪಾಸಾಗದೆ ನಾಶವಾಗುತ್ತಿರುವ ಸುದ್ದಿ ಮದ್ಯೆ ಅಮೇರಿಕದ ಪಟ್ಟಣಗಳಲ್ಲಿ ಜೇನು ಸಾಕುವ ವಿಚಾರ ಕೇಳಿ ಕುಶಿಯಾಯಿತು. ಸಾಲು ಮನೆಯಲ್ಲಿ ವಾಸಿಸುವ ಇವರ ವಸತಿಯ ಮೇಲೆ ತರಕಾರಿ ಹಾಗೂ ಜೇನು ಸಾಕಣೆ ಸ್ಪೂರ್ತಿದಾಯಕ ವಿಚಾರ.

ಪಟ್ಟಣ ಕೃಷಿ ಮುಖ್ಯವಾಗಿ ತರಕಾರಿ ಬೆಳೆಯುವುದು ಕನ್ನಡ ಓದುಗರಿಗೆ ಹೊಸ ವಿಚಾರವಲ್ಲ. ಹಾಸನದಲ್ಲಿ ಡಾ| ವಿಜಯ ಅಂಗಡಿ ಮತ್ತು ಬೆಂಗಳೂರಿನಲ್ಲಿ ಶ್ರೀಮತಿ ಅನುಸೂಯ ಶರ್ಮ ಇದರ ಮಾಡಿ ಪ್ರಚರಿಸುತ್ತಿದ್ದಾರೆ. ಅದರೆ ಜೇನು ಗೂಡು ???

ಸ್ವಲ್ಪ ಸಮಯ ಹಿಂದೆ ಅಲ್ಲೊಂದು ಗೂಡಿನಲ್ಲಿ ಜೇನು ನೊಣಗಳು ಸಾಲಾಗಿ ಗೂಡಿಗೆ ಬರುವುದು ಹೋಗುವುದು ಕಂಡ ಯಶವಂತ್ ಡಾಕ್ಟ್ರು ಅದರ ಸಮ್ಮೋಹನಕ್ಕೆ ಒಳಗಾದರು. ಅವರು ಗೂಡು ಇಟ್ಟುಕೊಳ್ಳುವುದೆಂದರೆ ಹಾರುವ ಕೀಟಗಳು ನನಗೆ ದರ್ಮಾರ್ಥವಾಗಿ ಆಹಾರೋತ್ಪನ್ನ ತರುತ್ತವೆ. ಪಟ್ಟಣದಲ್ಲಿದ್ದುಕೊಂಡೇ ಕೃಷಿಕನಾಗಿರಲು ಸಾದ್ಯ ಎನ್ನುತ್ತಾರೆ. ಕಳೆದ ಚಳಿಗಾಲದಲ್ಲೊಂದು ತರಗತಿಯಲ್ಲಿ ಬಾಗವಹಿಸಿದ ಡಾ ಚಿತಾಲ್ಕರ್ ಈಗ ಎರಡು ಜೇನು ಕುಟುಂಬಗಳ ಒಡೆಯರು.

ಅಲ್ಲಿ ವಾಸವಾಗಿರುವ ಜಿಮ್ ಫಿಸ್ಚರ್ ಕಳೆದ ವರ್ಷ ಜೇನು ಸಾಕಣೆ ತರಗತಿ ಏರ್ಪಡಿಸಿದ್ದರು. ಅನಂತರ ಸುಮಾರು ಮೂವತ್ತು ಗೂಡುಗಳು ಹೆಚ್ಚಲು ಅದು ಪ್ರೇರಕ. ಮೇಷ್ಟ್ರು ಶಿಷ್ಯರೂ ಜತೆಗೂಡಿ ಸಹಕಾರಿ ಸಂಘಕ್ಕೆ ಅಡಿಗಲ್ಲು ಹಾಕಿದ್ದಾರೆ. ಉಪಕರಣಗಳ ಜತೆಯಾಗಿ ಖರೀದಿ ಮತ್ತು ಜೇನು ಮಾರಾಟ ಅವರ ಚಿಂತನೆಯಲ್ಲಿದೆ. ಪಟ್ಟಣಗಳಲ್ಲಿ ಜೇನು ಸಾಕಲು ನೆರೆಹೊರೆಯವರದೇ ಕಿರಿಕಿರಿ. ಯಾರೂ ಜೇನು ಗೂಡುಗಳ ಸಮೀಪ ವಾಸಿಸಲು ಇಷ್ಟಪಡುವುದಿಲ್ಲ. ಜೇನು ನೊಣಗಳ ಬಗೆಗೆ ಮನದಾಳದಲ್ಲಿರುವ ಮೂಢ ನಂಬಿಕೆಗಳೇ ಕಾರಣ ಎನ್ನುತಾರೆ ಫಿಸ್ಚರ್ ಮಾಷ್ಟ್ರು.

ಪಟ್ಟಣದಲ್ಲಿ ಪಾರ್ಕುಗಳ ಗಿಡ ಮರಗಳ ಸನೀಹ ಇದ್ದರೆ ಮಾತ್ರ ಜೇನು ಗೂಡುಗಳು ಪ್ರಯೋಜನಕಾರಿಯಾಗಬಹುದು ಎಂದು ನಿಕ್ ಕಾಲ್ಡರೋನ್ ಎನ್ನುವ ಕೀಟಶಾಸ್ತ್ರಿ ಮೇಷ್ಟ್ರು ಹೇಳುತ್ತಾರೆ. ನಮ್ಮ ಸುತ್ತಲೂ ಪರಿಸರ ಜೀವಂತವಾಗಿರಬೇಕಾದರೆ ಗಿಡಮರಗಳು ಇರಬೇಕು. ಅವುಗಳಿಗೆ ಪರಾಗಸ್ಪರ್ಷ ಮಾದುವ ಜೀವಿಗಳ ಅಗತ್ಯ ಇರುತ್ತದೆ. ಗೂಡುಗಳಿಗೆ ಅಪಾಯವಿದ್ದರೆ ಮಾತ್ರ ಜೇನು ಕೊಣಗಳು ಕಚ್ಚುತ್ತವೆ. ಗೂಡಿನಿಂದ ದೂರವಿರುವಾಗ ಹೆಚ್ಚಾಗಿ ಕಚ್ಚುವುದಿಲ್ಲ ಎನ್ನುತ್ತಾರೆ ಕಾಲ್ಡೆರೋನ್.

ಅಂದ ಹಾಗೆ ಡಾಕ್ಟ್ರು ಜೇನು ಸಾಕುವ ಸುದ್ದಿ ಯಾರಿಗೂ ಹೇಳಬೇಡಿ. ಯಾಕೆಂದರೆ ನ್ಯೂಯೋರ್ಕ್ ಪಟ್ಟಣದಲ್ಲಿ ಜೇನು ಸಾಕಣೆ ಕಾನೂನು ಬಾಹಿರ. ನಿಗದಿತ ದಂಡ ಎರಡು ಸಾವಿರ ಡಾಲರ್ ಅಂದರೆ ಒಂದು ಲಕ್ಷ ರೂಪಾಯಿ. ಇದನ್ನು ನ್ಯಾಯಬದ್ದ ಗೊಳಿಸಲು ಪ್ರಯತ್ನಗಳಾಗುತ್ತಿವೆಯಂತೆ.

ಇತ್ತೀಚಿನ ದಿನಗಳಲ್ಲಿ ಕೀಟ ಬಾದೆ ಹಾಗೂ ನೊಣಗಳು ದಿಕ್ಕು ತಪ್ಪಿ ಗೂಡಿಗೆ ವಾಪಾಸಾಗದ ನಿಗೂಡ ಸಮಸ್ಯೆಯಿಂದಾಗಿ ಇತರ ಕಡೆಗಳಂತೆ ಅಮೇರಿಕದಲ್ಲೂ ಜೇನು ಸಂತತಿ ನಾಶವಾಗುತ್ತಿದೆ. ಜತೆಯಲ್ಲಿ ಬಿನ್ನವಾದ ಕಾರಣಗಳಿಗೆ ಈಗ ಅಲ್ಲಿ ಪಟ್ಟಣದಲ್ಲಿ ಜೇನು ಸಾಕಣೆ ಜನಪ್ರಿಯವಾಗುತ್ತಿದೆಯಂತೆ. ಜೇನು ನೊಣ ವಿರಳವಾದರೆ ಅಹಾರ ಬೆಳೆಗಳಿಗೆ ಪರಾಗ ಸ್ಪರ್ಷ ಹೇಗೆ ಎಂದು ಚಿಂತಿತರಾದವರೂ ಇದ್ದಾರೆ. ಅವರ ಕೈತೋಟದ ಬೆಳೆಗಳು ಅಬಿವೃದ್ದಿ ಹೊಂದಲು ಜೇನು ಸಾಕುವವರಿದ್ದಾರೆ.

ಹತ್ತು ವರ್ಷಗಳಿಂದ ಜೇನು ಸಾಕುವ ನ್ಯೂ ಯೋರ್ಕಿನ ನಾಗರಿಕರೊಬ್ಬರ ಗಿಡಗಳಲ್ಲಿ ಹೂಗಳು ದಾರಾಳವಾಗಿದ್ದರೂ ಕಾಯಿ ಕಚ್ಚುತ್ತಿರಲಿಲ್ಲ. ತೋಟಗಾರಿಕೆ ಇಲಾಖೆಯವರಲ್ಲಿ ವಿಚಾರಿಸಲು ಇಲ್ಲಿ ಪರಾಗಸ್ಪರ್ಶಕ್ಕೆ ಕೀಟಗಳು ಇಲ್ಲ ಎನ್ನುವ ಉತ್ತರ ಬಂತು. ಅದನ್ನು ಕೇಳಿ ಅವರು ಜೇನು ಸಾಕಣೆ ಪ್ರಾರಂಬಿಸಿದರು. ಈಗ ಕುಶಿಯಾಗಿದ್ದಾರೆ.

ಸೈಕಲ್ ಪ್ರವಾಸದ ಸಮಯದಲ್ಲಿ ಅಮೇರಿಕದಲ್ಲಿ ಹೊವಾರ್ಡ್ ಪಾರ್ಕ್ಸ್ ಎನ್ನುವ ಮಿತ್ರರೊಬ್ಬರು ಸುಮಾರು ಇಪ್ಪತ್ತು ಅಡಿ ಉದ್ದ ಇಪ್ಪತ್ತು ಅಡಿ ಅಗಲದಲ್ಲಿ ಸುಮಾರು ಮೂವತ್ತು ಜೇನು ಕುಟುಂಬಗಳ ಸಾಕುತ್ತಿದ್ದರು. ಎಲ್ಲವೂ ಎರಡು ಕುಟುಂಬಗಳಿರುವ ಉಪ್ಪರಿಗೆ ಪೆಟ್ಟಿಗೆಗಳು. ಗೂಡಿನ ಪ್ರವೇಶ ದ್ವಾರದಲ್ಲಿ ಬೇರೆ ಬೇರ್ ಬಣ್ಣದಲ್ಲಿ ವಿವಿಧ + / - ಚಿಹ್ನೆಗಳು. ಜೇನು ನೊಣಗಳು ಅದನ್ನು ಗುರುತಿಸಿ ತಮ್ಮ ವಸತಿಗೆ ಹಿಂತಿರುಗುತ್ತವೆ ಎಂದಾಗ ನನಗೆ ಸೋಜಿಗ ಊಂಟುಮಾಡಿತ್ತು.





ಈಗ ಅಮೇರಿಕದ ಅದ್ಯಕ್ಷ ಒಬಾಮ ಅವರ ಬಿಳಿ ಮನೆ ಹುಲ್ಲು ಹಾಸಿನಲ್ಲೂ ಪ್ರಥಮ ಬಾರಿಗೆ ಜೇನು ಗೂಡಿದೆ. ಈ ಸಲ ಸುಮಾರು ನೂರು ಪೌಂಡ್ ಜೇನು ಸಿಗಬಹುದು. ಅದುದರಿಂದ ಬಿಳಿ ಮನೆ ಉಪಯೋಗಕ್ಕೆ ಮಾತ್ರವಲ್ಲ ಬಂದ ಗಣ್ಯ ಅತಿಥಿಗಳಿಗೆ ಉಡುಗರೆಯಾಗಿ ಕೊಡಲೂ ಸಾಕು ಎನ್ನುತಾರೆ ಅಲ್ಲಿನ ನಿರ್ವಾಹಕರು.  

1 comment:

Anonymous said...

ಪ್ರಿಯ ಗೋವಿಂದಾ
ನನ್ನದೇನಿದ್ದರೂ ಜೇನು ತಿನ್ನುವ ಸಾಧನೆ ಮಾತ್ರ. ಮೀರಿದರೆ ೧೯೮೦ರಲ್ಲಿ ಕೊಡಂಜೆಕಲ್ಲಿನ ನೆತ್ತಿಯಲ್ಲಿ ಸತತ ನಾಲ್ಕು ಗಂಟೆ ಹೆಜ್ಜೇನಿನಿಂದ ಕಡಿಸಿಕೊಂಡ, ಕಾಡಿಸಿಕೊಂಡ ಅನುಭವ - ಮಧುಚುಂಬನ. ಈ ಯಶವಂತ ಡಾಕ್ಟ್ರು ಕನ್ನಡಿಗರೇ? ನಿನ್ನ ಅವರ ಸಂಬಂಧ? ನನ್ನ ಲೆಕ್ಕದಲ್ಲಿ ಬ್ಲಾಗ್ ಅರೆಖಾಸಗಿ ಮಾಧ್ಯಮ. ವಿಷಯಕ್ಕೆ ಸಂಬಂಧಿಸಿದಂತೆ ಯಾರೂ ಆತ್ಮಕಥಾನಕವನ್ನು ಓದುಗರನ್ನು ಹಿಡಿದಿಟ್ಟುಕೊಳ್ಳುವ ಮಿತಿಯಲ್ಲಿ ಹೇಳಿದರೆ ಅಪರಾಧವಾಗದು. ಇದನ್ನೇ ನಾನು ಲದ್ದಕ್ಕಿನ ನೀರಯೋಗಿ ಕುರಿತೂ ನಿನ್ನಲ್ಲಿ ಕೇಳಬೇಕೆಂದಿದ್ದೆ. ಅಂತರ್ಜಾಲದ ನಿನ್ನ ವಿಶ್ವಯಾನ ಹೀಗೇ ಅವಿರತ ಸಾಗಲಿ.
ಅಶೋಕವರ್ಧನ