Tuesday, October 20, 2009

ಕಡಲತೀರದಲ್ಲಿ ಸದಾಸಂ



ಕಡಲ ತೀರದಲ್ಲಿ ಸದಾಸಂ (ಸಕಲ ದಾರಿ ಸಂಚಾರಿ) ಚಲಾಯಿಸುವುದು ಒಂದು ಅದ್ಬುತ ಅನುಭವ. ಅಂಗಳದಲ್ಲಿ ತೊಟದಲ್ಲಿ ಇನ್ನೂರು ಅಡಿ ನೇರ ದಾರಿ ಸಿಗದ ನಮಗೆ ಉದ್ದವಾದ ಸಮುದ್ರ ತೀರ ಬಹಳ ಕುಶಿಕೊಡುತ್ತದೆ. ಇದರಿಂದ ಮಕ್ಕಳು ಅನಿಲ ಸುನಿಲರು ತುಂಬಾ ಸಂತಸ ಪಟ್ಟರು. ಸವಾರಿ ಮಾತ್ರವಲ್ಲ ಹಲವು ಕಸರತ್ತುಗಳ ಅಬ್ಯಾಸ ಮಾಡಲು ಅವಕಾಶ ಮಾಡಿಕೊಡುತ್ತದೆ.

ಸೊಮೇಶ್ವರ ಕಡಲ ತೀರಕ್ಕೆ ನಮ್ಮ ಮನೆಯಿಂದ ಐವತ್ತು ಕಿಲೋಮೀಟರ್. ಹಿಂದಿನ ದಿನವೇ ಸದಾಸಂ ಮಾರುತಿ ವಾನಿನೊಳಗೆ ಹಾಕಿದ ಕಾರಣ ಬೆಳಗ್ಗೆ ಬೇಗನೆ ಹೊರಡಲು ಸಾದ್ಯವಾಯಿತು. ದಾರಿಯಲ್ಲೊಂದು ತಿಂಡಿ ನಿಲುಗಡೆ. ೦೯೩೦ಕ್ಕೆ ಸಮುದ್ರ ತೀರ ತಲಪಿದೆವು. ತಲಪಿದ ಕೂಡಲೇ ವಾಹನದಿಂದ ಇಳಿಸಿ ಸವಾರಿ ಪ್ರಾರಂಬಿಸಿದೆವು.

ಸದಾಸಂ ಚಕ್ರಗಳು ಮರಳಲ್ಲಿ ಸ್ವಲ್ಪ ಮಟ್ಟಿಗೆ ಹೂತು ಹೋಗುತ್ತವೆ. ಅದರಿಂದಾಗಿ ಇಂಜಿನ ವೇಗ ಸದಾ ಹೆಚ್ಚಿರುವ ಕಾರಣ ಅದಕ್ಕೆ ಘಾಟಿ ರಸ್ತೆಯ ಅನುಭವವಾಗುತ್ತದೆ. ಅಂದರೆ ಹೆಚ್ಚು ಒತ್ತಡ ಇರುತ್ತದೆ. ಪೆಟ್ರೋಲ್ ತುಂಬುವಾಗ ಮಾತ್ರ ಅದಕ್ಕೆ ಬಿಡುವು ಕೊಡಲು ನಮಗೆ ಸಾದ್ಯವಾದದ್ದು. ತಣಿಯಲು ಸ್ವಲ್ಪ ಅವಕಾಶ ಕೊಡೋಣ ಎಂದರೆ ಒಬ್ಬ ಸವಾರ ವಾಪಾಸಾಗುವಾಗ ಮತ್ತೊಬ್ಬ ತಯಾರಾಗುತ್ತಿದ್ದ.

ಮರಳರಾಶಿ ಏರುವಾಗ ವೇಗ ಇದ್ದರೆ ಉತ್ತಮ. ದಿಬ್ಬಗಳ ಏರಲಾಗದೆ ಸೋತಾಗ ಅಥವಾ ಸಮತಟ್ಟಾದರೂ ತಡೆ ಉಂಟಾದಾಗ ಚಕ್ರಗಳು ಮರಳು ಒಕ್ಕುವುದರಲ್ಲಿ ತೊಡಗುತ್ತದೆ. ಆಗಲೇ ಆದರೆ ವಿರುದ್ದ ದಿಕ್ಕಿನಲ್ಲಿ ಗೇರು ಬದಲಾಯಿಸಿ ಚಲಿಸಿದರೆ ಹೂತಲ್ಲಿಂದ ಎದ್ದುಬರುತ್ತದೆ. ಬದಲಾಗಿ ಮತ್ತೂ ಒತ್ತಡ ಹಾಕಿದರೆ ಐದು ಸೆಕುಂಡಿನಲ್ಲಿ ಅರ್ಧ ಚಕ್ರ ಮರಳಲ್ಲಿ ಹೂತು ಹೋಗುತ್ತದೆ. ಹೆಚ್ಚು ಹೂತು ಹೋದಲ್ಲಿ ಎತ್ತಿ ಮೇಲಿಡ ಬೇಕಾಗುತ್ತದೆ.

ಇದಕ್ಕಿಂತ ಮೊದಲು ಒಂದೇ ದಿನದಲ್ಲಿ ಇಷ್ಟು ಎಡೆಬಿಡದೆ ಸದಾಸಂ ಉಪಯೋಗಿಸಿರಲಿಲ್ಲ. ಬಿಟ್ಟು ಬಿಟ್ಟು ಉಪಯೋಗ ದಿನದಲ್ಲಿ ಅತಿ ಹೆಚ್ಚೆಂದರೆ ಒಂದೂವರೆ ಘಂಟೆ ಇರಬಹುದು. ನಮ್ಮ ದೈನಂದಿನ ಉಪಯೋಗ ಅಷ್ಟೇ. ಈ ಪ್ರಯೋಗಕ್ಕೆ ಆತ್ಮೀಯರಾದ ಕಾಂತಿಲದ ಮೋಹನ ಅವರ ಟ್ಯೂನಿಂಗ್ ಬಹಳ ಸಹಕಾರಿಯಾಗಿತ್ತು.

ಸದಾಸಂ ವೇಗವಾಗಿ ಸಮುದ್ರ ತೀರದಲ್ಲಿ ಸಾಗುವಾಗ ವಾಹನದ ಮೇಲೂ ಸ್ವಲ್ಪ ಮಟ್ಟಿಗೆ ನಮ್ಮ ಮೇಲೂ ಮರಳ ಸಿಂಚನವಾಗುತ್ತದೆ. ಉಳಿದ ವಿಚಾರ ಪರವಾಗಿಲ್ಲ, ಚೈನ್ ಮೇಲೆ ಕೂರುವ ಮರಳು ಅದರನ್ನು ಕೊರೆಯಲು ಪ್ರಾರಂಬಿಸುತ್ತದೆ. ಅದುದರಿಂದ ನಮ್ಮ ಮೂರುವರೆ ಘಂಟೆ ಸವಾರಿಯಲ್ಲಿ ಸ್ವಲ್ಪ ಚೈನ್ ಉದ್ದ ಬಂದಿದೆ ಅನಿಸುತ್ತದೆ.

ಮರಳಲ್ಲಿ ಅಡ್ಡ ಬಿದ್ದರೂ ಮೂಳೆ ಪುಡಿಯಾಗುವ ಸಾದ್ಯತೆ ಕಡಿಮೆ. ಅದುದರಿಂದ ನಮಗೆ ವೇಗವಾಗಿ ದೇಹದ ಬಾರವನ್ನು ಮುಂದಕ್ಕೆ ಹಾಕಿ ಅಂದರೆ ನಿಂತುಕೊಂಡು ಚಡಾವು ಏರುವುದು ಮುಂತಾದವುಗಳ ಅಬ್ಯಾಸ ಮಾಡಲು ನಮಗೆ ಸಲೀಸಾಯಿತು. ಚಡ್ಡಿ ದರಿಸಿದ ಹುಡುಗರು ಬಹುಪಾಲು ಸಮಯ ಹೆಲ್ಮೆಟ್ ಧರಿಸಿರಲಿಲ್ಲ. ಸುರಕ್ಷಿತತೆ ಮಟ್ಟಿಗೆ ಉದ್ದ ಪಾಂಟು ಹಾಕುವುದು ಹೆಲ್ಮೇಟ್ ಧರಿಸುವುದು ಉತ್ತಮ.

ಮದ್ಯಾಹ್ನ ಒಂದೂವರೆ ಸಮೀಪಿಸುವಾಗ ಹೊರಡುವ ಆಲೋಚನೆ ಬಂದಾಗ - ಸುನಿಲ ತಂದು ವೇಗವಾಗಿ ತಿರುಗಿಸಿ ನಿಲ್ಲಿಸಿದಾಗ ಚೈನ್ ಕಳಚಿಕೊಂಡಿತು.  ಅದನ್ನು ಸರಿಪಡಿಸಿದೆ. ಸ್ಟಾರ್ಟ್ ಮಾಡಲು ಪ್ರಯತ್ನಿಸಿದರೆ ಪ್ರತಿಕ್ರಿಯೆ ಇಲ್ಲ. ಸಮಸ್ಯೆ ಪರಿಹರಿಸುವ ಉತ್ಸಾಹದಿಂದ ಹೆಚ್ಚು ಹಸಿವೆ ಆಯಾಸ ಎರಡೂ ಬಾದಿಸುತಿತ್ತು. ವಾಪಾಸು ಬರುವಾಗ ದಾರಿಯಲ್ಲಿ ಸ್ಥಳೀಯ ತಂತ್ರಜ್ನ ಇಸುಬು ಹತ್ತಿರ ಸಮಸ್ಯೆ ಹುಡುಕು ಮಾರಾಯ ಎಂದರೆ ಫ್ಯೂಸ್ ಹೋಗಿದೆ ಎಂದರು.











3 comments:

Anonymous said...

ಪ್ರಿಯ ಗೋ.
ನಾವೆಲ್ಲಾ ಇನ್ನೂ ಸಾಂಪ್ರದಾಯಿಕ ಆರೋಹಣ ಅಥವಾ ಸವಾರಿ (ಬೈಕು ಕಾರು ಇತ್ಯಾದಿ)ಶೈಲಿಯಲ್ಲೇ ಇರುವಾಗ (ನಿನ್ನ ವೈಯಕ್ತಿಕ ಮಿತಿಗಳನ್ನು ಮರೆತು) ನಿನ್ನ ಬಗ್ಗೆ ಹೊಟ್ಟೆಕಿಚ್ಚಾಗುತ್ತದೆ. ಮೊನ್ನೆ ನಾನು ಬಿದ್ದೆದ್ದು ವಾಪಾಸಾಗುವಾಗ ಅನಂತಾಡಿಯನ್ನು ಸುಮಾರು ಹತ್ತೂವರೆ ಗಂಟೆಗೆ ದಾಟುವಾಗ ನನ್ನ ಗಾಯ ನೋವಿನೊಡನೆಯೂ ನಿನ್ನಲ್ಲಿಗೆ ನುಗ್ಗಿ ಒಮ್ಮೆ ಸದಾಸಂ ನೋಡಿಬಿಡಬೇಕೆಂದು, ಬಿಡಬೇಕೆಂದೂ ಭಾರೀ ಮನಸ್ಸಾಯ್ತು. ಆದರೆ "ನಮ್ಮ ಈ ಸುರ್ಪದಲ್ಲಿ ಅಲ್ಲಿಗೆ ಹೋಗಿ, ನೋಡಿ, ಮಾತಾಡಿಯಾಗುವಾಗ ಊಟದ ಸಮಯವೂ ಆಗುತ್ತದೆ. ಅವರಿಗೆ ಅನಾವಶ್ಯಕ ......" ಎಂದ ಅಮ್ಮಾವ್ರ ಏಕೈಕ ವಾದ ಮಾತ್ರ ನಾನು ಮನ್ನಿಸಿ, ಬರಲಿಲ್ಲ. ನಿನ್ನ ಹೆಚ್ಚಿನ ಪ್ರಯೋಗಗಳಿಗೂ ಸೇರಿದಂತೆ ನಮ್ಮ ಶುಭಾಶಯಗಳು.
ಅಶೋಕವರ್ಧನ

Govinda Nelyaru said...

ಪ್ರಿಯ ಅಶೋಕರೇ,
ಮೊನ್ನೆ ನಿಮಗೆ ಕಳುಹಿಸಲು ಪ್ರಯತ್ನಿಸಿ ಸೋತ ಚಲಿಸುವ ಚಿತ್ರಗಳನ್ನು ಬ್ಲೋಗಿಗೆ ಹಾಕಿಸಿದ್ದೇನೆ. ನನ್ನ ಅಂತರ್ಜಾಲ ಸಂಪರ್ಕದಲ್ಲಿ ಇದು ಸಾದ್ಯವಾಗದ ಕಾರಣ ವಿಳಂಬವಾಯ್ತು. ನೀವು ನಮ್ಮಲ್ಲಿಗೆ ಅಂದು ಸೀದಾ ಬರಬಹುದಾಗಿತ್ತು. ಆದರೆ ಆ ದಿನ ನರಕಚದುರ್ದಶಿ ಶನಿವಾರ ಆಗಿದ್ದರೆ ಅಂದು ನಾವು ಸೋಮೇಶ್ವರದಲ್ಲಿದ್ದೆವು.
ಪ್ರತಿಕ್ರಿಯೆ ದನ್ಯವಾದಗಳು.
ಗೋವಿಂದ

Unknown said...

ಸದಾಸಂ ಸವಾರಿ ನೋಡಿ ನನಗೂ ಹೊಟ್ಟೆ ಉರಿ ತಡೆಯದಾಗಿದೆ. ನಮಗೆಲ್ಲ ಆ ಭಾಗ್ಯವಿಲ್ಲ. ಆದರೆ ಗೋ ಭಟ್ಟರ ಮೂಲಕ ನಾನೂ ಅನುಭವಿಸಿದ್ದಕೆ ತ್ಯಾಂಕ್ಸ್.