Saturday, October 10, 2009

ಪ್ರವಾಸಿ ಸುರಕ್ಷತೆ ಮಟ್ಟಿಗೆ ಜಪಾನಿನಲ್ಲಿ ತಲೆ ನೋವಿಲ್ಲ.

ನಾ ಕಂಡ ದೇಶಗಳಲ್ಲಿ ಪ್ರವಾಸಿಗೆ ಹೆಚ್ಚು ನಿರ್ಭಯವಾಗಿ ಓಡಾಡಲು ಸಾದ್ಯವಿರುವುದು ಕನಿಷ್ಟ ಅಪಾಯಕಾರಿ ಜಪಾನ್ ಅನ್ನಬಹುದು. ಕಳ್ಳರ ಹಾವಳಿ ಇಲ್ಲ. ಅದಕ್ಕೊಂದು ರುಜುವಾತು ಎಂದರೆ ನಾನು ಜಪಾನು ತಲಪಿದ ಮೊದಲ ರಾತ್ರಿ ನಿದ್ರಿಸಿದ್ದು ರಸ್ತೆ ಪಕ್ಕದಲ್ಲಿರುವ ಜನ ಸಾಗುವ ಮೇಲು ಸೇತುವೆಯಲ್ಲಿ.

ಟೋಕಿಯೊ ಪಟ್ಟಣದ ಒಳಗಿರುವ ಹನೆಡಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಸಂಜೆಯಾಗಿತ್ತು. ಹೊರಬಂದು ಸೈಕಲ್ ಏರಿದೆ. ೫೫೦ ಕಿಮಿ ದೂರದ ಒಸಕಾ ನನ್ನ ಗುರಿಯಾಗಿತ್ತು. ಕವಸಾಕಿ ಯೊಕೊಹೊಮ ಊರುಗಳು ಕಳೆಯಿತು. ಕತ್ತಲಾಯಿತು. ಜನದಟ್ಟಣೆ ಕಡಿಮೆಯಾಗಲಿಲ್ಲ. ಸಾಮಾನ್ಯವಾಗಿ ರಾತ್ರಿ ನಿದ್ರಿಸಲು ದಾರಿಹೋಕರಿಗೆ ಪಕ್ಕನೆ ಕಣ್ಣಿಗೆ ಬೀಳದಂತಹ ಜಾಗ ಆರಿಸಿಕೊಳ್ಳುತ್ತಿದ್ದೆ. ಅಂದು ಅಂತಹ ಜಾಗ ಕಾಣಲಿಲ್ಲ. ನನಗೆ ಅಪರಿಚಿತ ಹೊಸ ಪರಿಸರ. ವಿಪರೀತ ಸುಸ್ತಾಗಿತ್ತು. ಹಾಗೆ ಒಂದು ಮೇಲು ಸೇತುವೆ ಮೇಲೆ ನನ್ನ ಮಲಗುವ ಚೀಲ ಬಿಡಿಸಿದೆ.

ನಿದ್ರೆ ಬರುವ ವರೆಗೂ ದಾರಿಯಲ್ಲಿ ಸಾಗುವ ಜನರ ವರ್ತನೆ ಗಮನಿಸುತ್ತಿದ್ದೆ. ಯಾರೂ ನನ್ನ ಬಗೆಗೆ ಕುತೂಹಲ ತೋರಿಸಿದಂತೆ ಕಾಣಲಿಲ್ಲ. ದೀರ್ಘ ವಿಮಾನ ಪ್ರಯಾಣದಿಂದ ಸುಸ್ತಾದ ಕಾರಣ ಚೆನ್ನಾಗಿ ನಿದ್ದೆ ಬಂತು. ಬೆಳಕು ಹರಿಯುವಾಗ ಎದ್ದೆ. ಸೈಕಲು ಏರಿ ಪ್ರಯಾಣ ಮುಂದುವರಿಸಿದೆ. ಆ ರಾತ್ರಿ ನನ್ನ ಇಡೀ ಪ್ರವಾಸದಲ್ಲಿ ಹೆಚ್ಚು ಜನ ಕಾಣುವ ಪ್ರದೇಶದಲ್ಲಿ ನಾನು ನಿದ್ದೆಮಾಡಿದ್ದು.

ಮುಂದೆಯೂ ಜಪಾನಿನಲ್ಲಿ ರಸ್ತೆ ಪಕ್ಕದಲ್ಲಿ, ಗದ್ದೆಗಳ ನಡುವಿನ ಹಾದಿಯಲ್ಲಿ ನನ್ನ ಪುಟ್ಟ ಡೇರೆ ಬಿಡಿಸಿ ಮಲಗುವ ಚೀಲದಲ್ಲಿ ನಿದ್ರಿಸಿದ್ದೇನೆ. ಪೆಟ್ರೋಲ್ ಪಂಪ್ ಶೌಚಾಲಯವನ್ನೂ ಉಪಯೋಸಿದ್ದೇನೆ ಎಂದು ಅಸ್ಪಷ್ಟ ನೆನಪು

ಜಪಾನು ಎಂದರೆ ನಾಲ್ಕು ಮುಖ್ಯ ದ್ವೀಪಗಳು. ಹೊಕೈಡೊ ಹೊಂಶು ಶಿಕೋಕು ಕ್ಯುಶು. ನಾನು ಹೊಂಶುನಲ್ಲಿರುವ ಟೋಕಿಯೊದಲ್ಲಿಳಿದು ಸೈಕಲಿನಲ್ಲಿ ೫೫೦ ಕಿಮಿ ದೂರದ ಒಸಕಾ ವರೆಗೆ ಸೈಕಲು ತುಳಿದೆ. ಪುಜಿ ಪರ್ವತದ ಸಮೀಪ ಸಾಗುವ ಪರ್ವತ ರಸ್ತೆ. ಅಲ್ಲಿಂದ ಶಿಕೋಕು ದ್ವೀಪದಲ್ಲಿರುವ ಟಕಮಟ್ಸು ಎಂಬಲ್ಲಿಗೆ ಫೆರಿ ಪ್ರಯಾಣ. ಅಲ್ಲಿ ಈಗ ಸೇತುವೆ ಆಗಿದೆಯಂತೆ. ಅಲ್ಲಿಂದ ಮಟ್ಸುಯಾಮ ವರೆಗೆ ಸೈಕಲು. ಕೊನೆಗೆ ಮಟ್ಸುಯಾಮದಿಂದ ಪುಕೋಕ ವಿಮಾನ ನಿಲ್ದಾಣದ ಹತ್ತಿರವಿರುವ ಕ್ಯುಶು ದ್ವೀಪದಲ್ಲಿರುವ ಕಿಟಕಾಯಿಶು ಎಂಬಲ್ಲಿಗೆ ಫೆರಿ. ಹೀಗೆ ಜಪಾನಿನಲ್ಲಿ ಎರಡು ಬಾರಿ ಫೆರಿ ಉಪಯೋಗಿಸಿ ಸಮುದ್ರ ದಾಟಿದೆ. ಎರಡೂ ನಾಲ್ಕಾರು ಘಂಟೆ ಪ್ರಯಾಣ.

ನನಗೆ ಬಂದಿಳಿಯುವಾಗ ಮಸನೋಬು ಫುಕೋಕ ಎಂಬ ರೈತರ ಹೆಸರು ಮತ್ತು ಸಮೀಪದ ಮಟ್ಸುಯಾಮ ಪಟ್ಟಣದ ಹೆಸರು ಮಾತ್ರ ಗೊತ್ತಿದ್ದರೂ ಹುಡುಕುವುದರಲ್ಲಿ ಸಫಲನಾದೆ. ಅಷ್ಟು ಕನಿಷ್ಟ ಮಾಹಿತಿಯೊಂದಿಗೆ ನಾನು ಹೊರಟಿದ್ದೆ ಎನ್ನುವುದರ ಯೋಚಿಸುವಾಗ ಇಂದು ಅಶ್ಚರ್ಯವಾಗುತ್ತದೆ. ನಾನು ಹುಡುಕ ಹೊರಟ ಫುಕೋಕರು ಮಟ್ಸುಯಾಮ ಪಟ್ಟಣದ ಸಮೀಪದ ಇಯೊ ಎಂಬ ಹಳ್ಳಿಯಲ್ಲಿ ವಾಸ.



ಫುಕೋಕರ ಮನೆಯ ಆವರಣ ಹೊಕ್ಕಾಗ ನನಗೊಂದು ಪರಿಚಿತ ಪರಿಸರದ ಅನುಭವ. ನಮ್ಮಲ್ಲಿ ಹಳೆ ಮನೆಗಳಲ್ಲಿರುವಂತೆ ಆವರಣ ಗೋಡೆಗೆ ಒಂದು ನಡೆದು ಒಳಹೋಗುವ ಬಾಗಿಲು. ಅದಕ್ಕೊಂದು ಪುಟ್ಟ ಮಾಡು. ಮನೆಯ ಎದುರೊಂದು ಎರಡು ಮಾಡಿನ ಮುಖಮಂಟಪವಿರುವುದು ಚಿತ್ರದ ನಡು ಬಾಗದಲ್ಲಿ ಕಾಣುತ್ತದೆ. ಕಟ್ಟಿದ ಶೈಲಿ ಬಿನ್ನವಾಗಿದ್ದರೂ ಹೋಲಿಕೆ ಕಂಡಂತಾಯಿತು.

ಅಲ್ಲಿನ ಜನ ಬಹಳ ವಿನಯವಂತರು ಆದರೂ ನಾನು ಎನ್ನಲು ಎದೆ ಬದಲು ಮೂಗು ತೋರಿಸುವ ಕೈ ಸನ್ನೆ ಗೊಂದಲ ಉಂಟುಮಾಡುತ್ತದೆ. ವಂದನೆ ಎಂದರೆ ಬಾಗುವುದು ಎರಡು ಸಲಕ್ಕೆ ಸಿಮಿತಗೊಳಿಸದೆ ನಾವು ಪುನಃ ಬಗ್ಗಿದರೆ ಅವರೂ ಬಗ್ಗುತ್ತಾರೆ. ಇಂಗ್ಲೀಷ್ ಅರಿವು ಕಡಿಮೆ. ನೀವು ಅವರಲ್ಲಿಗೆ ಹೋದರೆ ಪದ ಹುಡುಕಲು ಅವರ ಡಿಕ್ಷನರಿ ಹೊರಬರುತ್ತದೆ.

ಒಮ್ಮೆ ಒಂದು ಮನೆಯಲ್ಲಿ ಕುಡಿಯುವ ನೀರು ಬಾಟಲಿಗೆ ತುಂಬಿ ಕೊಡಬಹುದೋ ? ಕೇಳಿದೆ. ಹಸುರು ಚಾ ಹಾಕಿ ಕೊಡಲೇ ಎಂದರು. ನನಗೆ ಹಾಗೆಂದರೆ ಏನೆಂದು ಕಲ್ಪನೆ ಇಲ್ಲವಾದರೂ ಒಪ್ಪಿದೆ. ನಾನು ಹಾಲು ಸಕ್ಕರೆ ಹಾಕಿದ ಚಾ ಕೊಡುತ್ತಾರೆ ಅಂದುಕೊಂಡಿದ್ದೆ. ನಮ್ಮಲ್ಲಿ ಕುದಿಸುವಾಗ ಮುಡಿವಾಳದ ಬೇರು ಬೆರೆಸಿದಂತಹ ನೀರಿಗೆ ಹೋಲುವಂತದ್ದು ಜಪಾನಿನವರ ಹಸುರು ಚಾ.

ಜಪಾನಿನಲ್ಲಿ ಬ್ರೆಡ್ ಬದಿಯ ತುಂಡುಗಳನ್ನು ಅಂಗಡಿಯಲ್ಲಿ ಮಾರುವ ಪಾಕೇಟುಗಳಿಗೆ ಹಾಕುವುದಿಲ್ಲ. ಬೇಕರಿಗಳ ಬಳಿ ಹೋದರೆ ನಮಗೆ ಈ ಬದಿಯ ತುಂಡುಗಳ ಬಹಳ ಅಗ್ಗವಾಗಿ ಪಡಕೊಳ್ಳಲು ಸಾದ್ಯ. ಇದೂ ನನ್ನ ಹಣ ಉಳಿಸಲು ಸಹಾಯ ಮಾಡಿತು. ತುಂಬಾ ದುಬಾರಿ ದೇಶವಾದ ಜಪಾನಿನಲ್ಲಿ ಕನಿಷ್ಟ ಖರ್ಚಿನಲ್ಲಿ ಸುದಾರಿಸಿದೆ.

1 comment:

Anonymous said...

ಪ್ರಿಯ ಗೋವಿಂದಾ ನೀನು ಏಕಲವ್ಯ ಆದ ಕಥೆಯೂ ಇಲ್ಲೇ ಬರಬೇಡವೇ? ನಿನ್ನ ಪ್ರವಾಸ ಕಥನ ಕಾಲಾನುಕ್ರಮವಾಗಿ ನೀನು ಬರೆದದ್ದೂ ನೋಡಿಲ್ಲ, ಹೇಳಿದ್ದೂ ಕೇಳಿಲ್ಲ.ಆದರೆ ಪುರಾಣಪುರುಷ ಗಣಪತಿಯಂತಲ್ಲದೆ, ಗಾದೆಮಾತಿನ ಪ್ರಥಮ ಚುಂಬನಕ್ಕೂ ಹೋಗದೆ ನಿನ್ನ ದಂತಭಗ್ನವಾದ ಕಥೆ ಮತ್ತು ಏಕಲವ್ಯ ಭಕ್ತಿ ಎರಡು ಸಷ್ಟ ನೆನಪಿದೆ :-)
ಅಶೋಕ ವರ್ಧನ