Saturday, October 03, 2009

ವಿದೇಶದಲ್ಲಿ ಹಣ ಬದಲಾವಣೆ.

ಅರೋಹಣ ತಂಡ    ಜತೆ ಪಶ್ಚಿಮ ಘಟ್ಟದ ಗುಡ್ಡವೊಂದರಲ್ಲಿ ಹೆಜ್ಜೆ ಹಾಕುತ್ತಿದ್ದೆ. ಅಂದು ಪರಿಚಯವಾದ ಹೊಸ ಗೆಳೆಯರು ನನ್ನ ಮುಂಚಿನ ವರ್ಷದ ಸೈಕಲು ಪ್ರವಾಸದ ಬಗೆಗೆ ಕುತೂಹಲದಿಂದ ವಿಚಾರಿಸುತ್ತಿದ್ದರು. ಪ್ರಶ್ನೋತ್ತರ ಸಂಬಾಷಣೆ ನಮ್ಮದೇ ಸಾಗುತ್ತಿದ್ದು ಉಳಿದವರು ನಡೆಯುತ್ತಾ ಕಿವಿಗೊಡುತ್ತಿದ್ದರು.

ಪರದೇಶದ ಹೆಚ್ಚಿನ ಹಣ ಎಲ್ಲ ಕಡೆಗಳಲ್ಲಿ ಚಲಾವಣೆ ಆಗುತ್ತದೆ. ಆದುದರಿಂದ ಆಯಾ ಊರಿನ ಹಣಕ್ಕೆ ಬದಲಾವಣೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ವಾಪಾಸು ಬರುವಾಗ ನನ್ನಲ್ಲಿ ಆರೇಳು ದೇಶಗಳ ನೋಟುಗಳಿದ್ದವು. ನಾವು ಕೊಡುವ ದರಕ್ಕೂ ಪಡಕೊಳ್ಳುವ ದರಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ ಮತ್ತು ಬಾಂಕಿನ ಶುಲ್ಕ ಪ್ರತ್ಯೇಕ. ಹೀಗೆ ಆಯಾ ದೇಶದಲ್ಲಿ ಬೇಕಾದಷ್ಟು ಮಾತ್ರ ಹೊರತು ಅನಗತ್ಯವಾಗಿ ಹಣವನ್ನು ಬದಲಾವಣೆ ಮಾಡಬಾರದು ಎಂದು ಹೇಳಿದೆ.

ಉದಾಹರಣೆ ಕೊಡುವುದು ನನ್ನದೊಂದು ಕೆಟ್ಟ ಚಾಳಿ. ಇದಕ್ಕೆ ಉದಾಹರಣೆಯಾಗಿ ಆಚಾರಿ ಹತ್ತಿರ ಚಿನ್ನ ಕೊಟ್ಟ ಹಾಗೆ ಎಂದುಬಿಟ್ಟೆ. ಪ್ರತಿ ಸಲವೂ ಶೇಕಡ ಐದರಷ್ಟು ನಮ್ಮ ಸಂಪತ್ತು ಕರಗುತ್ತದೆ ಎನ್ನುವ ವಿಚಾರ ಅರ್ಥಮಾಡಿಸುವುದು ನನ್ನ ಉದ್ದೇಶವಾಗಿತ್ತು.   ಆಗ  ಅಶೋಕವರ್ಧನರು ಮದ್ಯೆ ಬಾಯಿ ಹಾಕಿ ಕೇಳಿದರು. ಅವರು ಏನು ಮಾಡುತ್ತಾರೆ ಗೊತ್ತಾ ? ಇಲ್ಲವೆಂದು ಉತ್ತರಿಸಿದೆ. ಆಗ ಅಶೋಕವರ್ಧನರು ಹೇಳಿದರು ಆಚಾರರು ಮಂಗಳೂರಿನಲ್ಲಿ ಚಿನ್ನದ ಅಂಗಡಿ ಇಟ್ಟಿದ್ದಾರೆ. ನನ್ನ ಪರೀಸ್ಥಿತಿ ………..

2 comments:

ಅಶೋಕವರ್ಧನ said...
This comment has been removed by a blog administrator.
ಅಶೋಕ ವರ್ಧನ said...

ಆಡುಮಾತಿನ ಇಂಥಾ ಮುಜುಗರಗಳು ಸಾರ್ವಜನಿಕದಲ್ಲಿ ಹೆಚ್ಚು ವ್ಯವಹರಿಸುವವರಿಗೆ ಸಹಜವಿರುತ್ತವೆ. ಅಂದ ಮಾತ್ರಕ್ಕೆ ಅವು ಸುಳ್ಳಾಗಬೇಕಿಲ್ಲ. ಇದು ಪರಸ್ಪರ ತಿಳುವಳಿಕೆಯ ಮಟ್ಟದಲ್ಲಿ ಕೇವಲ ಕ್ಷಮೆ ಕೇಳುವುದರೊಡನೆ ಮುಗಿಯಬಹುದು, ಇನ್ನಷ್ಟು ಇಂಥಾ ‘ಜೋಕು’ಗಳನ್ನು ಹೇಳುವುದರೊಡನೆ ನಗೆಯ ಹೊಳೆ ಹರಿಸಲೂ ಬಹುದು. ಈ ಜಾತಿವಾಚಕ ಸಾಮಾನ್ಯೀಕರಣಗಳು, ಹಾಸ್ಯಗಳು ಗಲ್ಲಿಗೊಂದು ಮಠ, ಸ್ವಾಮಿ ಉದ್ಭವಿಸುತ್ತಿರುವ ನವಜಾಗೃತಿಯಲ್ಲಿ ನಮ್ಮನ್ನು ಹೆಚ್ಚೆಚ್ಚು ‘ಜಾತೀವಾದಿ’ಗಳನ್ನಾಗಿಸುತ್ತಿರುವುದು ಸಾಮಾಜಿಕವಾಗಿ ದೊಡ್ಡ ದುರಂತ.

ಮೂವತ್ತು ನಲ್ವತ್ತು ವರ್ಷಗಳ ಹಿಂದೆ ಕೇವಲ ಅನುಕರಣ ಶಬ್ದದ ಪಾಠಕ್ಕಾಗೆ ಲಟಪಟ ಆಚಾರಿ ಎಂದ ಕಾರಂತರ, ಕಾದಂಬರಿಯ ಯಾವುದೋ ಸನ್ನಿವೇಶದಲ್ಲಿ ಸಹಜವಾಗಿ ಬಂದ ‘ಬೇಲೆ ಇಜ್ಯಾಂತಿನ....’ ಎಂದು ಬಳಸಿದ ಕಾದಂಬರಿಕಾರ ಮಾಲಿಂಗ ಭಟ್ಟರ, ‘ಮಹಮ್ಮದ್ ದ ......’ ಎಂದ ಪತ್ರಿಕೆಯ, ನೂರಾರು ದಸರಾದ ದೇವರ ವೇಷಗಳ, ಮೊನ್ನೆ ಮೊನ್ನೆ ಮಕ್ಕಳ ಪಾದರಕ್ಷೆಗಳ ಡಬ್ಬಿಯ ಮೇಲೆ ಗಣೇಶನ ಚಿತ್ರ ಬಂದದ್ದರ ವಿರುದ್ಧ ಎಲ್ಲಾ ಎದ್ದ ವಿಪರೀತ ಪ್ರತಿಭಟನೆಗಳು ಒಟ್ಟಾರೆ ನಮ್ಮನ್ನು ಎಲ್ಲಿಗೆ ಒಯ್ಯುತ್ತವೆ ಎಂದು ಹೆದರಿಕೆಯಾಗುತ್ತದೆ.

ಶ್ರೀದೇವಿ ಬಾರ್, ಗಣೇಶ ಬೀಡಿಗಳು, ಶ್ರೀ ಕೃಷ್ಣ ಊಟದ ಓಟೇಲು, ಮಹಾಲಕ್ಷ್ಮಿ ಫೈನಾನ್ಸ್, ಶ್ರೀರಾಮ್ ಚಿಟ್ಸ್ (cheats?) ಮುಂತಾದವರೆಲ್ಲ ಬದಲಾಗುವ ಕಾಲದ ನಿರೀಕ್ಷೆಯಲ್ಲಿರೋಣ :-(
ಅಶೋಕ ವರ್ಧನ