Monday, September 28, 2009

ಅಂದು ಸೈಕಲನ್ನೂ ಹೀಗೆ ಭದ್ರಪಡಿಸುತ್ತಿದ್ದೆ.





ಜಾಲದಲ್ಲಿ ಈ ಚಿತ್ರ ನೋಡಿದಾಗ ನನ್ನ ಸೈಕಲು ಪ್ರವಾಸದ ದಿನಗಳು ನೆನಪಾದವು. ಸೈಕಲನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗಬೇಕಾದ ಸಂದರ್ಬಗಳಲ್ಲಿ ನಾನು ಹೆಚ್ಚಾಗಿ ಈ ರೀತಿಯ ಕಂಬಗಳನ್ನೇ ಅವಲಂಬಿಸಿ ಭದ್ರಪಡಿಸುತ್ತಿದ್ದೆ . ಅಂಗಡಿಗೆ ಬಾಂಕಿಗೆ ಇತ್ಯಾದಿ ಆಗಾಗ ಹೋಗಬೇಕಾಗುತಿತ್ತು. ಬೀಗದಿಂದ ಎದುರಿನ ಚಕ್ರವನ್ನು ಕಂಬಕ್ಕೆ ಬಿಗಿದ ನಂತರ ಆರಾಮವಾಗಿ ಬಿಟ್ಟು ಹೋಗಿ ಕೆಲಸ ಮುಗಿಸಿ ಬರಲು ಸಾದ್ಯವಾಗುತಿತ್ತು. ಸೈಕಲು ಮಾತ್ರವಲ್ಲ ಅದರಲ್ಲಿದ್ದ ಚೀಲಗಳನ್ನೂ ಯಾರೂ ಮುಟ್ಟಿರಲಿಲ್ಲ.

ಈ ಚಿತ್ರ ಗಮನ ಸೆಳೆಯಲು ಇನ್ನೊಂದು ಕಾರಣ ಅಪಘಾತದ ಅನಂತರ ನಾಲ್ಕು ತಿಂಗಳು ಮಲಗಿ ಎದ್ದು ಈ ರೀತಿಯ walker ಉಪಯೋಗಿಸಿ ಪುನಹ ನಡೆಯಲು ಕಲಿತೆ. ಇದೊಂದು ಅಮೂಲ್ಯ ಪಾಠವನ್ನು ಕಲಿಸಿತು. ಮೂವತ್ತು ವರ್ಷ ನಡೆದವನಿಗೆ ನಾಲ್ಕು ತಿಂಗಳು ಮಲಗಿದರೂ ಪುನಹ ನಡೆಯಲು ದೇಹದ ಸಮತೋಲನ ಕಾಪಾಡಲು ಮರೆತುಹೋಗಿರಬಹುದು ಎಂದು ಮೊದಲು ಅನ್ನಿಸಿರಲಿಲ್ಲ. ಆದರೆ ನಡೆಯಲು ಇದು ಬಹಳ ಉಪಯುಕ್ತವೆನಿಸಿತು.

ನಡೆಯುವುದು ಮರೆತಂತೆ ಮಾತೃ ಬಾಷೆ ಬಗೆಗೊಂದು ಅನುಭವ. ಜರ್ಮನಿಯ ಹಾಂಬರ್ಗ್ ಪಟ್ಟಣ ದಾಟುವಾಗ ದಾರಿಯಲ್ಲಿ ಕಂಡ ಬಾರತದ ರಾಯಭಾರಿ ಕಛೇರಿಗೆ ಹೋಗಿದ್ದೆ - ಒಂದು ಬಾರತದ ಭೂಪಟ ಪಡಕೊಳ್ಳುವ ಉದ್ದೇಶವಿತ್ತು. ಹೊರಡುವಾಗ ನನ್ನಲ್ಲಿ ಭೂಪಟ ಇದ್ದರೂ ಎಲ್ಲಿಯೋ ಕಳಕೊಂಡಿದ್ದೆ. ನಿಮ್ಮೂರು ಎಲ್ಲಾಯಿತು ಎಂದವರಿಗೆ ಬೆರಳುಗಳ V ಆಕಾರದಲ್ಲಿ ತೋರಿಸಿ ಇದು ದಕ್ಷಿಣ ಬಾರತ. ಇದು ಪೂರ್ವ ಕರಾವಳಿಯಲ್ಲಿರುವ ಮದ್ರಾಸ್. ಇದು ಪಶ್ಚಿಮ ಕರಾವಳಿಯ ಮಂಗಳೂರು . ಅಲ್ಲಿಗೆ ಸಮೀಪ ನಮ್ಮೂರು ಎಂದು ಉತ್ತರಿಸುತ್ತಿದೆ.

ಆಗ ಹಾಂಬರ್ಗ್ ಪಟ್ಟಣದಲ್ಲಿ ನಮ್ಮೂರ ಪ್ರವಾಸಿಗಳು ವಿರಳ ಅಂತ ಕಾಣುತ್ತದೆ. ತುಂಬಾ ಅತ್ಮೀಯವಾಗಿ ಚಾ ಕೊಟ್ಟು ಉಪಚರಿಸಿದರು. ಅಲ್ಲಿ ನಮ್ಮ ಜಿಲ್ಲೆಯವರೇ ಆದ ಮೂಡಬಿದರೆಯವರು ಇಬ್ಬರು ಕೆಲಸಮಾಡುತ್ತಿದ್ದರು. ಅವರು ಸಂತೋಷ ಪಟ್ಟು ಕನ್ನಡ ಹಾಗೂ ತುಳುವಿನಲ್ಲಿ ಮಾತನಾಡಿದರು. ನಾನು ತಡವರಿಸಿದೆ. ತಿಂಗಳುಗಟ್ಟಲೆ ಇಂಗ್ಲೀಷ್ ಮಾತ್ರ ಉಪಯೋಗಿಸಿದ ಕಾರಣ ನನಗೆ ಪಕ್ಕನೆ ಕನ್ನಡದಲ್ಲಿ ತುಳುವಿನಲ್ಲಿ ಉತ್ತರಿಸಲು ಸಾದ್ಯವಾಗಲಿಲ್ಲ.

ತಿಂಗಳ ಅನಂತರ ನಾನು ಸಲೀಸಾಗಿ ನಡೆಯಲು ಪ್ರಾರಂಬಿಸಿದಾಗ ವಾಕರ್ ಅಟ್ಟ ಸೇರಿತು. ದಾರಾಳ ಸಂಪತ್ತು ಉಳ್ಳ ಸಂಬಂದಿಯೊಬ್ಬರು ಇದನ್ನು ಕೇಳಿ ಕೊಂಡು ಹೋದರು. ಅನಂತರ ಹಿಂತಿರುಗಿಸಲೇ ಇಲ್ಲ. ಹೆಚ್ಚಿನವರಿಗೆ ಇದರ ಉಪಯೋಗ ನನ್ನಂತೆ ತಾತ್ಕಾಲಿಕ. ಬೇರೆ ಪರಿಚಿತ ಬಡವರು ತಾತ್ಕಾಲಿಕವಾಗಿ ಉಪಯೋಗಿಸಲು ಕೇಳಿದಾಗ ನಾನು ಇಲ್ಲವೆನ್ನಬೇಕಾಯಿತು. ಎರವಲು ಪಡೆದವರು ಉಪಯೋಗಿಸಿದ ಅನಂತರ ಹಿಂತಿರುಗಿಸುವ ಸೌಜನ್ಯ ತೋರಿಸದೆ ಹೋದದ್ದು ಬಹಳ ಮನಸ್ಸಿಗೆ ನೋವಾಯಿತು.

No comments: