Monday, September 14, 2009

ವಂಚಕರು ವಂಚಕರೇ ತ್ಯಾಗಿಗಳಲ್ಲ.

ಸಮಾಜಕ್ಕೆ ಮೋಸ ಮಾಡಿದ ವಂಚಕರು ವಂಚಕರೇ. ಪತ್ರಿಕೆ ಓದುವಾಗ ಅಂದದ ಮುಖದ ಹಿಂದಿರುವ ವಂಚನೆ ಕಥೆ ನೆನಪಾಯಿತು. ಯಾವುದಾದರು ದುಷ್ಟ ವ್ಯಕ್ತಿಯನ್ನು ಹೊಗಳಿದರೆ ತಪ್ಪಾಗಿ ಚಿತ್ರಿಸಿದರೆ ಬೇಸರವಾಗುತ್ತದೆ. ಪ್ರಜಾವಾಣಿಯಲ್ಲಿ ಮುಂದಿರುವ ವಾಕ್ಯಗಳನ್ನು ಕಂಡು ಹಾಗೆಯೇ ಆಯಿತು.


 ಪಾಕಿಸ್ತಾನದಲ್ಲಿ ಸಕ್ಕರೆ ಕೊರತೆ ಹೆಚ್ಚುತ್ತಿರುವಂತೆ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ತಮ್ಮ ಮನೆಯಲ್ಲಿ ಸಿಹಿ ತಿನಿಸುಗಳನ್ನು ತಯಾರಿಸದಂತೆ ಸ್ವಯಂ ನಿಷೇಧ ಹೇರಿಕೊಂಡಿದ್ದಾರೆ. ಪತ್ನಿ ಫೌಜಿಯಾ ಗಿಲಾನಿ ಅವರ ಮನವಿ ಮೇರೆಗೆ ಪ್ರಧಾನಿ ತಮ್ಮ ಮನೆಯ ಅಡುಗೆಭಟ್ಟರಿಗೆ ಸಿಹಿ ತಿನಿಸು ತಯಾರಿಸದಂತೆ ಆದೇಶಿಸಿದ್ದಾರೆ. ಆದರೆ ಈ ನಿರ್ಧಾರಕ್ಕೆ ಪ್ರಧಾನಿ ಸಿಬ್ಬಂದಿಯಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಸಕ್ಕರೆ ಬಿಕ್ಕಟ್ಟು ಪರಿಹಾರವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಎನ್ನುವ ವರದಿ ಪ್ರಜಾವಾಣಿ ಪ್ರಕಟಿಸಿತು.  

ಪ್ರದಾನಿಯ ಪತ್ನಿ ಫೌಜಿಯಾ ಗಿಲಾನಿ ಹಿಂದೆ ತಮ್ಮ ಕಂಪೇನಿಗಳಿಗೆ ಬಹು ದೊಡ್ಡ ಸಾಲವನ್ನು ಪಡೆದು ಚಿಕ್ಕಾಸು ಹಿಂತಿರುಗಿಸದೆ ಕಳೆದ ವಾರವಷ್ಟೇ ಸಾಲ ಮುನ್ನಾ ಮಾಡಿಸಿಕೊಂಡವರು. ನ್ಯಾಯಾಲಯಕ್ಕೆ ಹಾಜರಾಗದ ಅವರಿಗೆ ಇದಕ್ಕಾಗಿ ಅವರ ಅನುಪಸ್ಥಿತಿಯಲ್ಲಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲ್ಪಟ್ಟಿತ್ತು. ಆದರೆ ಮಾದ್ಯಮಗಳಿಗೆ ಇವರು ದೇಶಕ್ಕೆ ಮಾದರಿಯಾಗಲು ಸಿಹಿತಿಂಡಿ ವರ್ಜಿಸಿದವರು ಎನ್ನುವುದೇ ಸುದ್ದಿಯಾಗುತ್ತದೆ.  



ಶ್ರೀಸಾಮಾನ್ಯನ ಮಟ್ಟಿಗೆ ಪಾಕಿಸ್ಥಾನದಲ್ಲಿ ಇಂದು ಸಕ್ಕರೆ ಕನ್ನಡಿಯೊಳಗಿನ ಗಂಟಾಗಿದೆ ಎನ್ನುವುದಕ್ಕೆ ಅಲ್ಲಿನ ಪತ್ರಿಕೆಯ ಇಲ್ಲಿರುವ ಎರಡು ಚಿತ್ರಗಳು ಸಾಕ್ಷಿ. ಸಕ್ಕರೆ ಉದ್ಯಮ ಸರಕಾರವನ್ನು ತನ್ನ ಹಿಡಿತದಲ್ಲಿರಿಸಿಕೊಂಡು ಪರೀಸ್ಥಿತಿಯನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದೆಯಂತೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಕ್ರಯ ಏರಿದರೂ ಇಳಿದರು ಅದನ್ನು ಚೆನ್ನಾಗಿ ಬಳಸಿಕೊಳ್ಳುವ ಈ ವರ್ಗ ಜನರನ್ನು ಚೆನ್ನಾಗಿ ಹಿಂಡುತ್ತವೆ.

ಉಚ್ಚ ನ್ಯಾಯಾಲಯ ಸಕ್ಕರೆ ಬಿಡುಗಡೆ ಮಾಡಲು ಆದೇಶಿಸಿದರೂ ಕ್ಯಾರೆ ಮಾಡದ ಗೋದಾಮುಗಳ ಮೇಲೆ ದಾಳಿ ಅನಿವಾರ್ಯವಾಗಿದೆ. ಹಬ್ಬದ ಕಾಲದಲ್ಲಿ ಸಕ್ಕರೆ ದುಬಾರಿ ಎಂದು ಜನರೆಲ್ಲ ಪರಿತಪಿಸುತ್ತಿದ್ದರೆ ಸರಕಾರದ ವಿಚಾರಣೆ ಮುಗಿಯಲು ಹತ್ತು ದಿನ ಬೇಕಂತೆ. ಅಷ್ಟರಲ್ಲಿ ಹಬ್ಬ ಮುಗಿದುಹೋಗಿರುತ್ತದೆ.  

ಪಾಕಿಸ್ಥಾನದಲ್ಲಿ ರಾಜಕೀಯ ತೂಕ ಉಳ್ಳವರು ಬಾಂಕ್ ಸಾಲ ಹಿಂದಿರುಗಿಸುವುದು ಅಪರೂಪ. ಠೇವಣಿಗಳಿಗೆ ಸೇಕಡಾ ಐದು ಬಡ್ಡಿ ಕೊಡುವ ಪಾಕಿಸ್ತಾನಿ ಬಾಂಕುಗಳು ಸಾಲಗಳಿಗೆ ಹತ್ತೊಂಬತ್ತರ ಬಡ್ಡಿ ವಿಧಿಸುತ್ತದೆ. ನಮ್ಮಲ್ಲಿ ಬಾಂಕುಗಳು ನಿರ್ವಹಿಸಲು ಸಾಲಗಳ ಮತ್ತು ಠೇವಣಿಗಳ ಮದ್ಯೆ ಬಡ್ಡಿಯಲ್ಲಿ ಶೇಕಡ ನಾಲ್ಕು ಐದು ವ್ಯತ್ಯಾಸ ಇರುವುದು ಸಾಮಾನ್ಯ. ಇಸ್ಲಾಂ ಬಡ್ಡಿ ವ್ಯವಹಾರ ನಿಷೇಧಿಸುತ್ತದೆ ಎನ್ನುತ್ತಾ ನಮ್ಮಲಿನ ಮೂರು ಪಾಲು ಬಡ್ಡಿ ವ್ಯತ್ಯಾಸದಲ್ಲಿ ಪಾಕಿಸ್ತಾನಿ ಬಾಂಕುಗಳು ನಿರ್ವಹಿಸುತ್ತವೆಯಂತೆ. ಅಪಾರ ಲಾಭವು ಈ ರಾಜಕೀಯ ಪುಡಾರಿಗಳ ಸಾಲ ಸರಿದೂಗಿಸಲು ಸಹಾಯ ಮಾಡುತ್ತದೆ.  

ಇಂದೀಗ ಪಾಕಿಸ್ತಾನದಲ್ಲಿ ಆ ತಾಲಿಬಾನರಿಗಿಂತ ಈ ರಾಜಕಾರಣಿ, ವರ್ತಕ, ಉದ್ಯಮಿಗಳಂತಹ ಆಂತರಿಕ ದಗಾಕೋರರೇ ಹೆಚ್ಚು ಅಪಾಯವೋ ಅನ್ನುವ ಸಂಶಯ ಬರುತ್ತಿದೆಯಂತೆ. ನಮ್ಮಲ್ಲೂ ದೇಶದ, ಸಮಾಜದ ಮಟ್ಟಿಗೆ ಇದು ನಿಜ ಅನಿಸುತ್ತದೆ. ಕೆಲವು ಹೆಸರುಗಳ ಬದಲಾಯಿಸಿದರೆ ಗಡಿಯಾಚೆಗಿನ ಈ ಕಥೆಗಳು ಕರ್ನಾಟಕಕ್ಕೆ ಬಾರತಕ್ಕೆ ಚೆನ್ನಾಗಿ ಅನ್ವಯಿಸುತ್ತದೆ. ಅದುದರಿಂದ ಇದನ್ನು ಬರೆಯುವ ಆಸಕ್ತಿ ಉಂಟಾಯಿತು.

No comments: