Wednesday, September 23, 2009

ಪೋಕ್ರಾನ್ 2 ಟುಸ್ ಆದರೂ



ಈಗೊಂದು ವಾರದಿಂದ ದಿನವೂ ಪೋಕ್ರಾನ್ ಬಗೆಗೆ ಪತ್ರಿಕೆಗಳಲ್ಲಿ ಎರಡು ಸಾಲು ಮೀಸಲು. ಹತ್ತು ವರ್ಷ ಹಿಂದೆ ವಾಜಪೆಯಿ ಸಿಡಿಸಿದ ಅಣು ಪಟಾಕಿ ಯಶಸ್ವಿಯಾಗಿತ್ತೋ ಟುಸ್ ಎಂದಿತ್ತೋ ಎನ್ನುವುದು ನಮಗೆ ಎಂದೂ ತಿಳಿಯಲು ಸಾದ್ಯವಿಲ್ಲ. ರಾಷ್ಟ್ರೀಯ ಭದ್ರತೆ ನೆಪದಲ್ಲಿ ಎಲ್ಲವೂ ಗುಪ್ತ ಹಾಗೂ ತೆರೆಮರೆಯ ಆಟ. ಪೋಕ್ರಾನ್ ೨ ರಲ್ಲಿ ಸ್ಫೋಟಗೊಂಡ ಬಾಂಬು ಬರೇ ೨೫ ಕಿಲೋ ಟನ್ ಶಕ್ತಿ ಹೊರಹಾಕಿದೆ ಎನ್ನುತ್ತಾರೆ ಆಗ ಪಾಲ್ಗೊಂಡಿದ್ದ ವಿಜ್ನಾನಿ ಆರ್ ಸಂತಾನಂ. ಛೀ. ಛೀ ಅಲ್ಲವೇ ಅಲ್ಲ, ಅಲ್ಲಿ ೪೫ ಕಿಲೊ ಟನ್ ಶಕ್ತಿ ಉತ್ಪನ್ನವಾಗಿದೆ ಎಂದು ಸರಕಾರದ ಅಧಿಕೃತ ವಕ್ತಾರರ ಅಭಿಮತ. ನಮ್ಮ ಮಾಜಿ ರಾಷ್ಟ್ರಪತಿ ರಾಕೇಟು ವಿಜ್ನಾನಿ ಕಲಾಂ ಸಾಹೇಬರೂ ಪರೀಕ್ಷೆ ಯಶಸ್ವಿ ಎನ್ನುತ್ತಾರೆ. ಈಗ ಚರ್ಚೆಯಾಗುತ್ತಿರುವ ಕಾರಣ ಏನೆಂದರೆ ಇಪ್ಪತ್ತೈದು ಆದರೆ ಚೀನಾ ಪಾಕಿಸ್ತಾನವನ್ನು ಬೆದರಿಸಲು ಸಾಲದು. ನಲುವತ್ತೈದು ನಮ್ಮ ಘನಸ್ತಿಗೆಗೆ ಅಗತ್ಯ ಎನ್ನುತ್ತದೆ ಅಂದಿನ ಹಾಗೂ ಇಂದಿನ ಬಾರತ ಸರಕಾರ.

 ಅಮೇರಿಕ ಹಿರೋಶಿಮದ ಮೇಲೆ ಹಾಕಿದ ಒಂದು ಲಕ್ಷ ಜನರನ್ನು ಕೊಂದ ಬಾಂಬು ಬರೇ ಹದಿನೈದು ಕಿಲೋಟನ್ ಸ್ಪೋಟ ಉಂಟುಮಾಡಿದ್ದು. ನಾಗಸಾಕಿ ಮೇಲೆ ಹಾಕಿದ ಬಾಂಬು ಚೂರು ದೊಡ್ಡದು – ಇಪ್ಪತ್ತೊಂದು ಕಿಲೋ ಟನ್ ಸ್ಫೋಟ. ಆದರೆ ಏನು ಮಾಡುವುದು, ಅದು ಜನವಿರಳ ಊರಾದುದರಿಂದ ಬರೇ ಎಂಬತ್ತು ಸಾವಿರ ಜನ ಸತ್ತರು. ಹಾಕಿದಲ್ಲಿ ಜನ ಇರುತ್ತಿದ್ದರೆ ಹತ್ತು ಲಕ್ಷ ಜನರನ್ನೂ ಕೊಲ್ಲುವ ಸಾಮರ್ಥ್ಯ ಅದು ಹೊಂದಿತ್ತು. ನಮಗೀಗ ಐದು ಲಕ್ಷ ಜನವನ್ನಾದರೂ ಕೊಲ್ಲುವ ಬಾಂಬಿನ ಬಯಕೆ.

ಮೊನ್ನೆ  ನಮ್ಮ  ವಾಯು ದಳದ  ವಿಮಾನದಿಂದ  ಎಲ್ಲೋ ಉದುರಬೇಕಾಗಿದ್ದ ಬಾಂಬು ಎಲ್ಲೋ ಉದುರಿ ರಾಜಸ್ಥಾನದ ಲಕ್ಷಾಂತರ ಜನರಿಗೆ ನೀರುಣಿಸುವ ಇಂದಿರಾ ಗಾಂಧಿ ನಾಲೆ ಹಾನಿಯಾಗದೆ ಇರುವುದು ರಾಷ್ಟ್ರೀಯ ಪುಣ್ಯ ಎನ್ನಬಹುದು. ಸುಮಾರು ಇಪ್ಪತ್ತೈದು ಕಿಮಿ ದೂರದಲ್ಲಿ ಈ ಬಾಂಬಿನ ಗುರಿಯಾಗಿತ್ತು  ಅದುದರಿಂದ ಈ ಅಣು ಬಾಂಬು ಐದು ಲಕ್ಷ ಜನರನ್ನು ಕೊಲ್ಲುವ ಗುರಿ ಪೂರ್ತಿ ಗಡಿಯಾಚೆಯೋ ಅನ್ನುವುದು ಅನುಮಾನ. ಈ ವರ್ಷ ಗುರಿ ತಪ್ಪಿ ಬಾಂಬು ಉದುರುವುದು ಇದು ಮೂರನೇಯ ಬಾರಿ. ಅರು ತಿಂಗಳು ಹಿಂದೆ ಬಾಂಬು ಉದುರಿ ಬೆಳೆ ಕಳಕೊಂಡ ಮನೆಗೆ ಹಾನಿಯಾದ ರೈತರಿಗೆ ಇನ್ನೂ ಪರಿಹಾರ ವಿತರಣೆಯಾಗಿಲ್ಲ.
ಮೇರಾ ಭಾರತ್ ಮಹಾನ್



 ಶುಕ್ರವಾರ ೨೫ ಸೆಪ್ಟಂಬರ್ -ಬಾಲಂಗೋಚಿ

ಪೋಖ್ರಾನ್ ಸ್ಫೋಟದ ಬಗೆಗೆ ಇಂದಿನ ಪತ್ರಿಕೆಯಲ್ಲಿ ಅನಿಲ್ ಕಾಕೋಡ್ಕರ್ ನಾಗಸಾಕಿ ಅಣು ಬಾಂಬಿನ ಒಂಬತ್ತು ಪಾಲು ಶಕ್ತಿಯುತವಾದ ಬಾಂಬು ತಯಾರಿಸಲು ನಮಗೆ ತಾಕತ್ ಇದೆಯೆಂದು ಸ್ಪಷ್ಟ ಪಡಿಸಿದ್ದಾರೆ. ಈ ಬಗೆಗೆ ಯಾರಿಗೂ ಅನುಮಾನ ಬೇಡ.  

ನಾನು ಅಪಘಾತವಾಗಿ ಆಸ್ಪತ್ರೆಯಲ್ಲಿ ಮಲಗಿದ್ದ ದಿನಗಳಲ್ಲಿ ಅಮೇರಿಕದಲ್ಲಿ ವಾಸ್ತವ್ಯ ಇರುವ ಸಂಬಂದಿಕರು ಬಂದಿದ್ದರು. ಅಂದಿನ ಅದ್ಯಕ್ಷ ಬುಷ್ ಬಾರತದ ಬಗೆಗೆ ಕೆಣಕುವ ಮಾತುಗಳಾಡುತ್ತಿದ್ದ ಕಾಲ. ನನ್ನ ಅರೈಕೆ ನೋಡಿಕೊಳ್ಳುತ್ತಿದ್ದ ಸದಾ ತಮಾಷೆ ಮಾತುಗಳನ್ನು ಆಡುತ್ತಿದ್ದ ಡಾ| ತುಳಸಿದಾಸಣ್ಣ ಅಗ ಹೇಳಿದ್ದರು – ನಾವು ಜತೆಯಾಗಿ ಬಾಂಬು ಹಾಕಿದರೆ ನಿಮ್ಮ ಬುಷ್ ಸಹಾ ಓಡಿಹೋದಾನು. ಈ ಬಗೆಗೆ ಅನುಮಾನ ಬೇಡ.

1 comment:

author said...

ನಿಮ್ಮ ಬ್ಲಾಗ್ ನ್ನು ತುಂಬಾ ದಿನಗಳಿಂದ ಓದುತ್ತಿದ್ದೇನೆ. ಮುಖ್ಯವಾದ ಕಾರಣ, ತಾವು ದಕ್ಷಿಣಕನ್ನಡ ದಲ್ಲಿ ಅಡಿಕೆ ಕೃಷಿ ಮಾಡುತ್ತಿದ್ದೀರೆಂದು. ಪ್ರಪಂಚವನ್ನು ಸೈಕಲ್ ನಲ್ಲಿ ಸುತ್ತಿದುದೂ ಕಾರಣ ಹೌದು. ನಿಮಗಿರುವ ಜೀವನಾಸಕ್ತಿ, ಯಾವುದೊ ಲಿಂಕ್ ನಿಂದ ನಿಮ್ಮ ಬ್ಲಾಗ್ ಗೆ ಬಂದ ನನಗೆ RSS subscribe ಮಾಡಿಕೊಳ್ಳಬೇಕು ಈ ಬ್ಲಾಗ್ ಗೆ ಎನ್ನಿಸಿತು. ಮಾಡಿಕೊಂಡೆ.

ಅದಾದ ನಂತರ, ರೀಡರ್ನಲ್ಲಿ, ಸುಮಾರು ತಮ್ಮ ಎಲ್ಲ ಲೇಖನಗಳನ್ನು ಓದಿದ್ದೇನೆ.

ನನಗೆ ಅನ್ನಿಸಿದ್ದು. ತಾವೇಕೆ ದಕ್ಷಿಣ ಕನ್ನಡದ ಕೃಷಿಯ ಬಗ್ಗೆ, ಅಲ್ಲಿಯ ಜನಜೀವನದ ಬಗ್ಗೆ, ತಮ್ಮ ಪ್ರಪಂಚ ಸುತ್ತಿದ ಸಾಹಸದ ಬಗ್ಗೆ ಜಾಸ್ತಿ ಜಾಸ್ತಿ ಲೇಖನಗಳನ್ನು ಬರೆಯಬಾರದು? ಫಸ್ಟ್ ಹ್ಯಾಂಡ್ ಇನ್ಫಾರ್ಮೇಶನ್ ಇರುವ ಲೇಖನಗಳು ಓದುಗನಿಗೆ ಕೊಡುವ ಸೌಮ್ಯವಾದ ತಿಳುವಳಿಕೆಯ ಹರವು ಬೇರೆ. ಅದರ ಮಜ ಬೇರೆ. ಆ ರೀತಿಯ ಲೇಖನಗಳನ್ನು ಬರೆದರೆ ತಮಗೂ ಖುಷಿ ಸಿಗುವುದದಲ್ಲಿ, ಲೇಖಕನಿಗೂ, ಓದುಗನಿಗೂ ಇಬ್ಬರಿಗೂ win-win situation.

ಯೋಚಿಸಿ. ಧನ್ಯವಾದಗಳು.