Thursday, November 05, 2009

ರಾಮಜ್ಜನ ಉಯಿಲು ಎನ್ನುವ ವಿಡಿಯೋ ಪ್ರಸಂಗ

ದೆಹಲಿ ಉಚ್ಚ ನ್ಯಾಯಾಲಯ ಕಳೆದ ತಿಂಗಳು ವಿಡಿಯೋಕೃತ ಉಳಿಲು ಕಾನೂನುಬದ್ದ ಎಂದು ತೀರ್ಪು ಕೊಟ್ಟಿದೆ. ಅಕ್ಷರಗಳಲ್ಲಿ ಸ್ಫಷ್ಟವಾಗಿ ಬರೆದರೂ ಶ್ರೀಯುತರು ಸತ್ತ ನಂತರ ಸಾವಿರ ಸಂಶಯಗಳು ಮೇಲೇಳುತ್ತವೆ. ಇದು ಇನ್ನೂ ಹೆಚ್ಚು ಸ್ಪಷ್ಟ. ಇದರಿಂದ ನಮ್ಮಲ್ಲಿಗೆ ಹಲವು ತಕರಾರು ಬರುವುದು ತಪ್ಪಬಹುದು ಎಂದು ನ್ಯಾಯಾಲಯ ಅಬಿಪ್ರಾಯ ಪಟ್ಟಿದೆ. ಉಳ್ಳವರಿಗೆ ಇದೊಂದು ಹೊಸ ಅದ್ಬುತವಾದ ಅವಕಾಶ. ಸಹಸ್ರ ಚಂದ್ರ ದರ್ಶನ ಷಷ್ಟಿ ಪೂರ್ತಿ ಕಾರ್ಯಕ್ರಮ ಇತ್ಯಾದಿಗಳಿಗೆ  ಹೊಸತಾಗಿ  ಸೆರ್ಪಡೆಯಾಗ ಬಹುದಾದ ಆಡಂಬರದ ಕಾರ್ಯಕ್ರಮ ಉಳಿಲು ಓದುವುದು. ಇಂತಹ  ಕಾರ್ಯಕ್ರಮಗಳ ಕೊರತೆ  ಇದೆ  ಎನ್ನುವುದು ಕೆಲವರ ಅಬಿಪ್ರಾಯ.  

ಅಜ್ಜಿಯನ್ನು ಪಕ್ಕದಲ್ಲಿ ಕೂರಿಸಿಕೊಂಡ ಅಜ್ಜ ಉಯಿಲು ಓದುವ ಕಾರ್ಯಕ್ರಮಕ್ಕೆ ಮಕ್ಕಳು ಮೊಮ್ಮಕ್ಕಳನ್ನೆಲ್ಲ ಪರ ಊರಿಂದ ಪರದೇಶಗಳೀಂದ ಕರೆಸಬಹುದು. ದುಡ್ಡೇ ದೊಡ್ಡಪ್ಪ ಅನ್ನುವ ಈ ಕಾಲದಲ್ಲಿ ಎಲ್ಲರಿಗೂ ತಮ್ಮ ಪಾಲು ಎಷ್ಟು ಖಚಿತಪಡಿಸಿಕೊಳ್ಳುವ ತವಕ ಇರುವುದು ಸಹಜ. ನನ್ನ ಮಾತು ಮೀರಿ ಅವಳ ಜತೆ ಓಡಿಹೋದ ಮಗನಿಗೆ ಐವತ್ತೆಕ್ರೆ ಎಕ್ರೆ ತೋಟ ಎಂದ ತಕ್ಷಣ ಹಿಮ್ಮೇಳದ  ಚೆಂಡೆ   ಒಮ್ಮೆ ಚುರುಕಾಗುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮ ನೆಪದಲ್ಲಿ ಕದ್ರಿ ಗೋಪಾಲನಾಥರನ್ನೋ ಕಟೀಲು ಮೇಳವನ್ನೋ ಕರೆಸಬಹುದು. ನಮ್ಮ ಚಿಕ್ಕಪ್ಪನ ಮೃತ್ಯು ಪತ್ರ ತಯಾರಿ ದಿನ ಗುರುಕಿರಣ ಬಂದು ಹಾಡಿದ್ದ ಎಂದು ಹೆಮ್ಮೆಯ ವಿಚಾರ ಆಗಬಹುದು. ಇನ್ನೂ ಶ್ರೀಮಂತರಾದರೆ ಶಾರುಖ್ ಕುಣಿದ ಎಂದು ಹೇಳಿಕೊಳ್ಳಬಹುದು. ಕಾರ್ಯಕ್ರಮವನ್ನೇ ಸಿಂಗಾಪುರದಲ್ಲಿ ಮಾಡುವ ಬಗೆಗೆ ಚಿಂತಿಸಬಹುದು. ವಿಡಿಯೋದವರು ಪತ್ರಿಕೆಗಳಲ್ಲಿ ನಾವು ಅದರಲ್ಲಿ ಹೆಚ್ಚು ಸಮರ್ಥರು ಎಂದು ಈ ಬಗ್ಗೆ ಜಾಹಿರಾತು ಕೊಡಬಹುದು. ಅಡಿಗೆಯವರೂ ಶಾಮಿಯಾನದವರೂ ನಾವು ಈ ಕಾರ್ಯಕ್ರಮ ನಿರ್ವಹಿಸಬಲ್ಲೆವು ಎಂದು ದ್ವನಿ ಸೇರಿಸಬಹುದು.

ಈ ಕಾರ್ಯಕ್ರಮದ ಒಂದು ಉಪಕಾರವೆಂದರೆ ಅವರು ಸತ್ತ ನಂತರ ಉತ್ತರಾದಿಕಾರಿಗಳು ದೊಣ್ಣೆ ಹಿಡಿದುಕೊಂಡು ಕಾದಾಡುವ ಸಾದ್ಯತೆ ಕಡಿಮೆ. ಎಲ್ಲರಿಗೂ ಅವರ ಪಾಲಿನ ಬಗೆಗೆ ಖಚಿತವಿರುತ್ತದೆ. ಅಪ್ಪ ನನ್ನ ಹೆಸರಿನಲ್ಲಿ ಐದು ಕೋಟಿ ಇಟ್ಟಿದ್ದಾನಲ್ಲ ಅದನ್ನು ಕೊಡು ಎಂದು ಪ್ರೀತಿಯ ಮಗಳು ಸಹೋದರರ ಜತೆ ಜಗಳಕ್ಕೆ ನಿಲ್ಲುವ ಅವಕಾಶ ಇರುವುದಿಲ್ಲ. ಹೆರಿಗೆಗೆ ಮೊದಲು ಸ್ಕಾನ್ ಮಾಡಿ ಮಗು ಹೆಣ್ಣೊ ಗಂಡೋ ಎಂದು ಖಚಿತಪಡಿಸಿಕೊಂಡಂತೆ ಈ ಕಾರ್ಯಕ್ರಮ ನೆರವೇರಿದರೆ ಎಲ್ಲರಿಗೂ ಯಜಮಾನರ ಸಾವಿನ ಅನಂತರ ತಮ್ಮ ಪಾಲಿನ ಬಗೆಗೆ ಕುತೂಹಲ ಉಳಿಯುವುದೂ ಇಲ್ಲ.

3 comments:

ಆಹ್! ಶೋಕವರ್ಧನ said...

ಪ್ರಿಯ ಗೋ

ಅಂತೂ ಅಭಯನ ವೃತ್ತಿರಂಗ (ಸಿನಿಮಾ ನಿರ್ದೇಶನ) ವಿಸ್ತರಿಸುತ್ತಿದೆ ಎನ್ನು :-)
ಹಾಗೇ ಲಿಖಿತ ದಾಖಲೆಯ ಜವಾಬ್ದಾರಿ ಹಂಚಿಹೋಗುತ್ತಿದೆ ಎನ್ನುವುದು ನನಗೆ (ಪುಸ್ತಕ ವ್ಯಾಪಾರಿ) ಖಂಡಿತಾ ಕುಶಿ ಕೊಡುವುದಿಲ್ಲ :-(

ಆಹ್! ಶೋಕವರ್ಧನ

S. M.Pejathaya said...

ಗೋವಿಂದರೇ!
ನನ್ನ ನೋಂದಣಿತ ಲಿಖಿತ ಉಯಿಲನ್ನೊಮ್ಮೆ ವೀಡಿಯೋ ಕ್ಯಾಮೆರಾದ ಇದುರು ಓದಿ, ಲಾಯರ "ಓದುವ ಕಷ್ಟದ ನಿವಾರಣೆ " ಮಾಡುವ ದಿಶೆಯಲ್ಲಿ ಪ್ರಯತ್ನಿಸುತ್ತೇನೆ.
ಉತ್ತಮ ಮಾಹಿತಿಗೆ ಧನ್ಯ ವಾದಗಳು.
ವಂದನೆಗಳು
ಕೇಸರಿ ಪೆಜತ್ತಾಯ

Unknown said...

ನಮಸ್ತೇ ಸರ್, ಶ್ರೀ ಪೆಜತ್ತಾಯ ಅವರಿಂದ ನಿಮ್ಮ ಬ್ಲಾಗಿಗೆ ಪ್ರವೇಶ ದೊರೆಯಿತು. ಹಳ್ಳಿಯಿಂದ ಎಂಬ ಹೆಸರೇ ನನ್ನ ಮಟ್ಟಿಗೆ ಒಮ್ಮೆ ನಿಂತು ಒಳ ಬಂದು ನೋಡಿ ಹೋಗು ಎನ್ನುವಂತಿದೆ. ನಿಮ್ಮ ಅದಮ್ಯಚೈತನ್ಯಕ್ಕೆ ನನ್ನ ನಮಸ್ಕಾರಗಳು. ಬ್ಲಾಗ್ ಕೂಡಾ ಚೆನ್ನಾಗಿದೆ. ಇನ್ನು ಮುಂದೆಯೂ ಅನುಸರಿಸಲಿದ್ದೇನೆ. ಧನ್ಯವಾದಗಳು