ಸ್ವಿಜರ್ ಲಾಂಡ್ ಬರುವ ತಿಂಗಳು ಮಾರ್ಚ್ ಏಳರಂದು ಜನಾಭಿಮತ ಸಂಗ್ರಹಿಸಲು ಮತದಾನ ಮಾಡುತ್ತದೆ. ಈ ವಿಚಾರಕ್ಕೆ ಜನಬೆಂಬಲ ದೊರೆತರೆ ಪ್ರತಿ ಜಿಲ್ಲೆಯಲ್ಲೂ ಸಾಕು ಪ್ರಾಣಿ ಹಿತಕಾಯುವ ಸರಕಾರಿ ವಕೀಲರ ನೇಮಕಕ್ಕೆ ಕಾರಣವಾಗುತ್ತದೆ. ಇಂದು ನಾಯಿ ಬೆಕ್ಕುಗಳ ವಿಚಾರ ಮತದಾನಕ್ಕೆ ಹೊರಟಿರುವ ಸ್ವಿಜರ್ಲಾಂಡಿನಲ್ಲಿ ಹೆಂಗಸರಿಗೆ ಮತದಾನದ ಹಕ್ಕು ದೊರಕಿದ್ದೇ ೧೯೭೧ ರಲ್ಲಿ ಅಂದರೆ ಈಗ ಮತದಾನದ ಹಕ್ಕು ಸಿಕ್ಕಿ ಬರೇ ಮೂವತ್ತೊಂಬತ್ತು ವರ್ಷಗಳಾದವು.
ಈಗಾಗಲೇ ಸ್ವಿಜರ್ಲಾಂಡಿನಲ್ಲಿ ಮರ್ಯಾದೆಯಲ್ಲಿ ಜೀವಿಸುವ ಹಕ್ಕು ಮೀನ್ಮನೆಯಲ್ಲಿರುವ ಕೆಂಪು ಮೀನುಗಳಿಗೂ ಪೆಟ್ಟಿಗೆಯಲ್ಲಿರುವ ಗಿನಿ ಪಿಗ್ ಗಳಿಗೂ ಲಭಿಸಿದೆ. ಇಂದು ಜಾರಿಯಿರುವ ಕಾಯಿದೆ ಪ್ರಕಾರ ಸಂಘಜೀವಿಯಾದ, ಗುಂಪಿನಲ್ಲಿ ವಾಸಿಸುವ ಗೊಲ್ಡ್ ಫಿಶ್ ಗಳನ್ನು ಒಂಟಿಯಾಗಿರಿಸುವಂತಿಲ್ಲ. ಅವುಗಳ ಮೀನ್ಮನೆಗಳು ನಾಲ್ಕು ಬದಿಯೂ ಪಾರದರ್ಶಕವಾಗಿರುವಂತಿಲ್ಲ. ನಾಯಿ ಸಾಕಲಿಚ್ಚಿಸುವವರು ನಾಲ್ಕು ಘಂಟೆ ಪಾಠ ಹೇಳಿಸಿಕೊಂಡನಂತರ ಸಾಕಲು ಅನುಮತಿ ಪಡೆಯುತ್ತಾರೆ. ಬರುವ ತಿಂಗಳು ನಡೆಯುವ ಪ್ರಜಾನಿರ್ಧಾರದಲ್ಲಿ ಜನ ಬೆಂಬಲ ದೊರೆತರೆ ಪ್ರತಿ ಜಿಲ್ಲೆಯೂ ವಕೀಲರನ್ನು ನೇಮಿಸಬೇಕಾಗುತ್ತದೆ.
ಪ್ರಾಣಿ ದೌರ್ಜನ್ಯ ಅಪವಾದ ಎದುರಿಸುವ ಅಪರಾದಿಗಳು ವಕೀಲರನ್ನು ನೇಮಿಸಿಕೊಳ್ಳಬಹುದಾಗಿದೆ. ಆದರೆ ಪ್ರಾಣಿಗಳು ಇಂದಿನ ಪರೀಸ್ಥಿತಿಯಲ್ಲಿ ವಕೀಲರ ನೇಮಿಸಿಕೊಳ್ಳುವಂತಿಲ್ಲ. ಸುದ್ದಿ ಗೋಷ್ಟಿಯಲ್ಲಿ ಮಾತನಾಡುತ್ತಾ ಅಂಟೋನ್ ಗೋತ್ಚಲ್ ಎನ್ನುವ ವಕೀಲರು ಅಂತಹ ಸಂದರ್ಭ ನನ್ನ ಪ್ರವೇಶವಾಗುವುದು ಎನ್ನುತ್ತಾರೆ. ಇವರು ಝೂರಿಚ್ ಜಿಲ್ಲೆಯ ಪ್ರಾಣಿಗಳ ವಕೀಲರಾಗಿ ೨೦೦೭ರಲ್ಲಿ ನೇಮಿಸಲ್ಪಟ್ಟರು. ತಮ್ಮ ವಾದ ಮಂಡಿಸಲು ಕೋರ್ಟಿಗೆ ಪ್ರಾಣಿಗಳು ಹಾಜರಾಗಬೇಕಾಗಿಲ್ಲ. ನಮ್ಮ ಗೋತ್ಚಲ್ ವಕೀಲರು ಅವುಗಳ ಪರವಾಗಿ ವಾದಿಸುತ್ತಾರೆ.ಈ ಪ್ರಯೋಗವನ್ನು ದೇಶಾದ್ಯಂತ ಹರಡಲು ಈಗಾಗಲೇ ಒಂದು ಲಕ್ಷಕ್ಕೂ ಮಿಕ್ಕಿ ಸಹಿ ಸಂಗ್ರಹಿಸಲಾಗಿದೆ.
ಅಲ್ಲಿ ಇದು ಕಾನೂನಾಗಿ ಜಾರಿಗೆ ಬಂದರೆ ಯುರೋಪ್ ಅಮೇರಿಕವನ್ನು ಕುರಿಮಂದೆಯಂತೆ ಹಿಂಬಾಲಿಸುವ ನಮ್ಮ ದೇಶವೂ ಅನುಸರಿಸಬಹುದಾಗಿದೆ. ನಮ್ಮ ಜನಪ್ರತಿನಿಧಿಗಳು ಅನುಮೋದಿಸುವ ವಿಚಾರದಲ್ಲಿ ಖಂಡಿತ ಕೈ ಎತ್ತುತ್ತಾರೆ. ಹೆಮ್ಮೆಯಿಂದ ನನ್ನ ಮಗ ನಾಯಿಬೆಕ್ಕುಗಳ ಡಾಕ್ಟ್ರು ಎನ್ನುವ ದಾಟಿಯಲ್ಲಿಯೇ ಆಗ ನಮ್ಮ ಹುಡುಗ ನಾಯಿ ವಕೀಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲ ಬರಬಹುದು. ಪಶು ವೈದ್ಯ ಮನೋಹರ ಉಪಾದ್ಯರ ಚಿಕಿತ್ಸಾಲಯ ಪಕ್ಕದಲ್ಲಿ ನಾಯಿ ವಕೀಲರ ಕಛೇರಿ ಇದ್ದರೆ ಸುಲಭ. ಒಂದು ಕಡೆ ಹೋದರೆ ಎರಡು ಕೆಲಸವೂ ಆದಂತೆ.
ಒಮ್ಮೆ ಸಾಕು ಪ್ರಾಣಿಗಳಿಗೆ ವಕೀಲರ ನೇಮಿಸುವ ಹಕ್ಕುಗಳು ಲಬಿಸಿದರೆ ಅನಂತರ ಹೊಸ ತರದ ವ್ಯಾಜ್ಯಗಳು ಸುರುವಾಗಬಹುದು. ಹತ್ತು ವರ್ಷ ವಿದೇಯನಾಗಿ ಯಜಮಾನನ ಸೇವೆ ಮಾಡಿದ ನಾಯಿ ಎಂಟು ವರ್ಷ ಯಜಮಾನತಿಗೆ ಸಂಗಾತಿಯಾಗಿದ್ದ ಬೆಕ್ಕುಗಳು ಆಸ್ತಿ ಪಾಲಿಗಾಗಿ ಕೋರ್ಟ್ ಬಾಗಿಲು ತಟ್ಟಬಹುದು. ಅನಿಲ ಬಾವಿ ಮೇಲೆ ಕಣ್ಣಿಟ್ಟಿರುವ ಅಂಬಾನಿ ಕುಟುಂಬದ ನಾಯಿಗಂತೂ ಜೆತ್ಮಲಾನಿ ( ಬದುಕಿದ್ದರೆ ) ವಕೀಲರಾಗಲು ಸಿದ್ದವಾಗುವುದು ಖಚಿತ.
Tuesday, February 16, 2010
Subscribe to:
Post Comments (Atom)
1 comment:
ಈ ವನ್ಯ ಪ್ರಾಣಿವರ್ಗಕ್ಕೆ ನಿನ್ನಲ್ಲಿ ವಕೀಲ ಇದ್ದನಾ? ಅಲ್ಲಿ ಶಿಶಿಲಲ್ಲಿ ವರ್ಷಾವರ್ಷಾ ಆನೆ ‘ದೂರು’ಗಳು ನಮ್ಮ ವಿಷ್ಣುಗೋಖಲೆಯವರ ತೋಟದಲ್ಲಿ ಆಗುತ್ತಲೇ ಇರುತ್ತದೆ. ಈಗಷ್ಟೇ ಹೊಸ ದೂರು ನೊಂದಾಯಿಸಿದವನು ಒಬ್ಬ ಸಲಗರಾಯನಮ್ತೆ. ರಾತ್ರಿ ಹತ್ತು ಗಂಟೆಗೆ ಡೊಂಕು ಬಾಲದ ನಾಯಕರು "ಭೋ ಪರಾಕ್, ಭೋ ಪರಾಕ್" ಎಂದು ಘೋಷಿಸುವಾಗಲೇ ಇವರಿಗೆ ತಿಳಿದದ್ದಂತೆ. ಆತ ಎಂದಿನ ಅಬ್ಬರತಾಳವೇನೂ ಹಾಕದೆ ಒಂದಷ್ಟು ಬಾಳೆ ತಿಂದು, ತೆಂಗಿನ ಮರವೊಂದನ್ನು ನೆಲದಲ್ಲಿ ಮಲಗಿಸಿಟ್ಟು, ಗದ್ದೆಯಲ್ಲಿ ಪೈರಿನ ಹದ ಪರೀಕ್ಷೆ ಮಾಡಿಯಾಗುವಷ್ಟರಲ್ಲಿ ಗೋಖಲೆಯವರಾದಿ ಜಯಘೋಷ, ಬೆಡಿ, ಗಾಳಿಗುಂಡು ಯಥಾನುಶಕ್ತಿ ಹಾಕಿದ ಮೇಲೆ ಸುಮ್ಮಾನದಿಂದ ನಡೆದುಹೋದನಂತೆ. ಆದರೆ ಮತ್ತೆ ರಾತ್ರಿ ಮತ್ತೆ ಅಷ್ಟೇ ತಣ್ಣಗೆ ನುಗ್ಗಿ ಮತ್ತಷ್ಟು ಕಳೆ (ಕಾದಿನ ಮಧ್ಯ ತೋಟ ಕಳೆಯಲ್ಲವೇ?) ಕಳೆದು ಹೋದನಂತೆ. Elephant corridor, ಅಕ್ರಮ ಸಕ್ರಮ, ಅಭಿವೃದ್ಧಿ, ಜೀವ ವೈವಿಧ್ಯ ಮುಂತಾದ ಶಬ್ದಗಳಿಗೆಲ್ಲಾ ಈಗ ಸಲಗನ ದೃಷ್ಟಿಯಲ್ಲಿ ಅರ್ಥ ಕಂಡುಕೊಂಡು ವಕಾಲತ್ತು ಮಾಡುವವರು ಬೇಕಾಗಿದ್ದಾರೆ. ಹ್ಹೇಂಗೆ ಸಿಕ್ಕುಗಾ ಗೋವಿಂದಣ್ಣಾ?
ಕಾಡಿನ ವಕೀಲ
Post a Comment