ಸೈಕಲಿನ ಮೇಲೆ ಅಪಾರ ಬರವಸೆ ಇಟ್ಟುಕೊಂಡಿರುವ ನನಗೆ ಅತಿ ಹೆಚ್ಚೆಂದರೆ ದಿನಕ್ಕೆ ಎಷ್ಟು ದೂರ ತ್ರಿಚಕ್ರದಲ್ಲಿ ಹೋಗಬಹುದೆಂಬ ವಿಚಾರ ತಿಳಿಯುವ ಕುತೂಹಲ. ಇಪ್ಪತೈದು ವರ್ಷ ಹಿಂದೆ ಮಾಮೂಲಿ ಸೈಕಲಿನಲ್ಲಿ ದಿನಕ್ಕೆ ಇನ್ನೂರು ಕಿಮಿ ಹೋದದ್ದುಂಟು. ಅದು ಬೆನ್ನು ಪುಡಿಯಾಗುವ ಮೊದಲು. ತ್ರಿಚಕ್ರದಲ್ಲೂ ಇನ್ನೂರು ಕಿಮಿ ದಾಟುವ ದೈರ್ಯವಿದ್ದರೂ ಮಾಡಿ ತೋರಿಸಿಲ್ಲವಲ್ಲ ಒಂದೆಡೆ ವೇಗದ ಗರಿಷ್ಟ ಮಿತಿ ಇಪ್ಪತ್ತು ಇಪ್ಪತ್ತೆರಡು ಕಿಮಿ. ಮತ್ತೊಂದೆಡೆ ಭದ್ರತೆ ಕಾರಣಕ್ಕಾಗಿ ಹೆಚ್ಚಾಗಿ ಹಗಲಿನಲ್ಲಿಯೇ ಪ್ರಯಾಣಿಸಬೇಕಾದ ಅವಶ್ಯಕತೆ.
ಹಿಂದಿನ ಪ್ರಯತ್ನದಲ್ಲಿ ಬೆನ್ನೆಲುಬಾಗಿದ್ದ ಶಂಕರಣ್ಣ ಮೊಹನರೂ ಉತ್ಸಾಹ ತೋರಿದರು. ಹಾಗೆ ದಾರಿ ಬಗೆಗೆ ಹುಡುಕಾಟ ಪ್ರಾರಂಬಿಸಿದೆ. ಮಕ್ಕಳಿಗೆ ರಜೆಯಾದ ಕಾರಣ ಅವರೂ ಜತೆ ಸೇರಿದರು. ಹಿಂದೂಮ್ಮೆ ಯೋಚಿಸಿದ್ದ ಚಾರ್ಮಾಡಿ ಘಾಟಿ ಏರುವುದೆಂದು ತೀರ್ಮಾನಿಸಿದೆವು. ಹೋದ ದಾರಿಯಲ್ಲಿಯೇ ವಾಪಾಸು ಬರುವ ಬದಲಿಗೆ ಸಮಯ ಸಾಕಷ್ಟು ಇದ್ದರೆ ಶಿರಾಡಿಯಲ್ಲಿ ಇಳಿಯುವುದೆಂದೂ ಸೂಚಿಸಿದೆ.
ಒಂದು ಘಾಟಿಯಿಂದ ಇನ್ನೊಂದರ ಮದ್ಯೆ ಸುಮಾರು ನಲುವತ್ತು ಕಿಮಿ ದೂರ ಇರುವುದೂ ನಮಗೊಂದು ಸವಾಲಾಗಿತ್ತು. ಹಿಂದಿನ ದಿನ ಮದ್ಯಾಹ್ನ ಹದಿನೈದು ವರ್ಷಗಳಿಂದ ಬೇಟಿ ಮಾಡದ ಆತ್ಮೀಯ ಸಹಪಾಠಿ ಮಿತ್ರ ರವಿಗೆ ರಿಂಗಿಸಿದೆ. ಅಲ್ಲಿಂದ ಬಂದ ಸುದ್ದಿ ಉತ್ಸಾಹಕ್ಕೆ ತಣ್ಣೀರು ಎರಚುವಂತದ್ದು. ಈಗ ಮದ್ಯಾಹ್ನ ಮಳೆ ಬರುತ್ತಿದೆ ಮತ್ತು ಮೂಡಿಗೆರೆ ಸಕಲೇಶಪುರ ರಸ್ತೆ ಚೆನ್ನಾಗಿಲ್ಲ ಎರಡೂ ನನಗೆ ಪೂರಕವೆನಿಸುವ ಸುದ್ದಿಯಲ್ಲ. ಆದರೂ ಮಳೆ ಬಂದರೆ ಮಳೆ ಕೋಟು ಇದೆಯಲ್ಲ. ಮುಂದಿರುವುದು ಮಳೆಗಾಲ ಹಾಗೂ ತಂಡದವರಿಗೆ ಇನ್ನೊಮ್ಮೆ ಅನುಕೂಲಕರ ಬಿಡುವು ಸಿಗುವುದು ಖಚಿತವಲ್ಲ. ಹೇಗಾದರೂ ಸುದಾರಿಸುವ ದೈರ್ಯದಲ್ಲಿ ಯೋಜನೆ ಮುಂದುವರಿಸಿದೆ.
ಮೊದಲೇ ಯೋಜನೆ ಹಾಕಿದಂತೆ ಐದು ಘಂಟೆಗೆ ಸರಿಯಾಗಿ ಮನೆಯಿಂದ ಹೊರಟೆ.
ಯಾವಗಲೂ ನನ್ನ ಬೆನ್ನಟ್ಟುವ ನಮ್ಮೂರ ನಾಯಿಗಳು ಇನ್ನೂ ನಿದ್ದೆಯಲ್ಲಿದ್ದ ಕಾರಣ ಪ್ರಶಾಂತ ವಾತಾವರಣ. ಮುಖ್ಯರಸ್ತೆಗೆ ತಲಪುವಾಗ ಇನ್ನೂ ಕತ್ತಲು. ಹೊಂಡಗುಂಡಿಗಳಿಂದ ಕೂಡಿದ ಹೆದ್ದಾರಿಯಲ್ಲೇ ಮಾಣಿ ಕಡೆಗೆ ಹೋದೆ. ಅನಂತರ ರಸ್ತೆ ಚೆನ್ನಾಗಿತ್ತು. ಬೆಂಗಳೂರಿಂದ ಬರುವ ವಾಯುವೇಗದಿಂದ ಸಾಗುವ ರಾತ್ರಿ ಬಸ್ಸುಗಳು ಕೆಲವೊಮ್ಮೆ ನನ್ನ ಕಣ್ಣುಕುಕ್ಕಿದರೂ ಪರಿಚಿತ ರಸ್ತೆಯಾದ ಕಾರಣ ಸಮಸ್ಯೆಯಾಗಲಿಲ್ಲ. ಆರು ಘಂಟೆಗೆ ಸುಮಾರು ಇಪ್ಪತ್ತು ಕಿಮಿ ದೂರದ ಉಪ್ಪಿನಂಗಡಿಯಲ್ಲಿ ತಂಡದ ಉಳಿದವರು ಎಲ್ಲಿದ್ದಾರೆ ಎಂದು ಸಂಚಾರವಾಣಿಗೆ ಕಿವಿಗೊಟ್ಟೆ.
ಉಪ್ಪಿನಂಗಡಿಯಲ್ಲಿ ಎರಡು ಸಾದ್ಯತೆಗಳು ನಮ್ಮ ಮುಂದಿದ್ದವು. ಗುರುವಾಯನಕೆರೆ ಮೂಲಕ ಸಾಗುವ ರಿಪೇರಿಯಲ್ಲಿರುವ ಮಾಮೂಲಿ ರಸ್ತೆ ಮತ್ತು ಕಡಿದಾದ ಏರುಗಳಿರುವ ಬೇಳಾಲು ಮೂಲಕದ ಹೊಸ ರಸ್ತೆ. ಶಂಕರಣ್ಣನ ಮತ ಬೆಳಾಲು ರಸ್ತೆಗೆ. ಅದನ್ನು ಸಮ್ಮತಿಸಿ ನಾನು ಆ ಪ್ರಕಾರ ತಿರುಗಿದೆ. ರಸ್ತೆ ಚೆನ್ನಾಗಿದೆ, ಅಗಲವೂ ಇದೆ. ಆದರೆ ಕೆಲವು ಮುಖ್ಯವಾಗಿ ಹೊಳೆಯಿಂದಲೇ ಏರುವ ಚಡಾವು ಬಹಳ ಕಡಿದಾಗಿತ್ತು. ನಾನು ಹಿಂದಿನ ದಿನ ಬಾಟರಿ ಬಾಳ್ವಿಕೆ ಹೆಚ್ಚಿಸಲು ಸಹಾಯ ಮಟ್ಟವನ್ನು ಇಪ್ಪತ್ತೆರಡು Ah ನಿಂದ ಹದಿನೆಂಟಕ್ಕೆ ಇಳಿಸಿದ್ದೆ. ಪರಿಣಾಮವಾಗಿ ನನ್ನ ಕಾಲಿನ ಮಾಂಸಖಂಡಗಳಿಗೆ ಸಾಕಷ್ಟು ಒತ್ತಡ ಹಾಕಿತು. ಅರ್ದ ದಾರಿ ತಲಪುವಾಗ ಉಳಿದವರು ನಾನಿರುವಲ್ಲಿಗೆ ಬಂದು ತಲಪಿದರು. ಎರಡರಲ್ಲಿ ಹೆಚ್ಚು ನಿಶಕ್ತಿಯಾಗಿದ್ದ ಬಾಟರಿಯನ್ನು ಕಾರಿನಲ್ಲಿ ಚಾರ್ಜಿಗಿಟ್ಟೆವು.
ಉಜ್ರೆಯಲ್ಲಿ ಹಿಂದಿನ ದಿನವೇ ಅಗತ್ಯವಾದರೆ ದಿನಕರರ ಸಂಬಂದಿಕರ ಮನೆಯಲ್ಲಿ ಚಾರ್ಜು ಸಹಾಯ ಕೋರಿದ್ದೆ. ಶಂಕರಣ್ಣ ಯಾರ ಮನೆಗೂ ಹೋಗುವುದು ಬೇಡ ಮಾತಾಡುತ್ತಾ ತಡವಾಗುತ್ತದೆ ಎಂದರು. ನನಗೆ ಪೂರ್ತಿ ಕಾರಿನಲ್ಲಿಯೇ ಚಾರ್ಜಾಗುವುದು ಸಾಕೋ ? ಗೊಂದಲ. ಜತೆಗೆ ಬಳಲಿದ ನನ್ನ ಕಾಲಗಂಟುಗಳಿಗೆಲ್ಲ ಸ್ವಲ್ಪ ವಿರಾಮ ಸಿಕ್ಕರೆ ಒಳ್ಳೆಯದು ಅನಿಸುತಿತ್ತು. ಹಾಗೆ ಹೋಟೇಲಿನಲ್ಲಿ ತಿಂಡಿ ತಿನ್ನುವ ಹೊತ್ತಿಗೆ ಅಲ್ಲಿ ಚಾರ್ಜ್ ಆಗಲೆಂದು ಒತ್ತಾಯಿಸಿದೆ. ಹಾಗೆ ಉಜ್ರೆಯಲ್ಲಿ ಸುಮಾರು ಒಂದೂ ಕಾಲು ಘಂಟೆ ತಿಂಡಿ ಹಾಗೂ ಚಾರ್ಜಿಗೆಂದು ವಿರಾಮ.
ಒಂಬತ್ತೂ ಮುಕ್ಕಾಲಕ್ಕೆ ಉಜ್ರೆ ಬಿಟ್ಟೆವು. ಚಾರ್ಮಾಡಿ ಅನಂತರ ಸುಮಾರು ಮೂರು ಸಾವಿರ ಅಡಿ ಏರುವ ಘಾಟಿ ರಸ್ತೆ. ಬುಡದಲ್ಲಿ ಚಾರ್ಜ್ ತುಂಬಿದ ಬಾಟರಿ ಅಳವಡಿಸಿದೆವು. ಅನಂತರ ಸುನಿಲ ಬಾಟರಿ ಬದಲಾವಣೆ ಪರಿಚಾರಕನಾಗಿ ನೇಮಕಗೊಂಡ. ರಸ್ತೆ ಗುಣಮಟ್ಟ ಮತ್ತು ಇತರ ವಾಹನಗಳ ವರ್ತನೆ ಪ್ರೋತ್ಸಾಹದಾಯಕವಾಗಿತ್ತು. ಹಲವರು ನಿದಾನಿಸಿ ಪ್ರೋತ್ಸಾಹಿಸುವ ಚಿಹ್ನೆಯಾಗಿ ಹೆಬ್ಬೆಟ್ಟು ತೋರಿಸುತ್ತಾ ಇದ್ದರು. ಉತ್ತರಿಸೋಣ ಅಂದರೆ ನನ್ನ ಹೆಬ್ಬೆಟ್ಟು ಜಪಾನಿನಲ್ಲಿ ಆದ ಅಪಘಾತವೊಂದರಿಂದಾಗಿ ಮುಕ್ಕಾಲು ಇಂಚು ಕಿರಿದಾಗಿದೆ. ಘಾಟಿ ರಸ್ತೆ ತುಂಬಾ ಚೆನ್ನಾಗಿತ್ತು. ಬಾಟರಿ ಸಹಾಯಕ ಚೆನ್ನಾಗಿ ಬೆಂಬಲ ಕೊಟ್ಟಿತು. ಒಂದೇ ಮಟ್ಟದಲ್ಲಿ ಶ್ರಮ ಹಾಕುತ್ತಿದ್ದು ಸಲೀಸಾಗಿ ಮೇಲೇರುತ್ತಿರುವುದು ಮತ್ತೂ ತುಳಿಯಲು ಕುಶಿ ಕೊಡುತ್ತಾ ಇತ್ತು.
ಮದ್ಯಾಹ್ನ ಹನ್ನೆರಡೂ ಕಾಲಕ್ಕೆ ಕೊಟ್ಟಿಗೆಹಾರ ತಲಪಿದೆವು. ಘಾಟಿರಸ್ತೆಯಲ್ಲಿ ಒಮ್ಮೆ ಸಂಚಾರವಾಣಿಗೆ ಸಿಗ್ನಲ್ ಎಟಕಿದಾಗ ಗೆಳೆಯ ರವಿಗೆ ಸಂದೇಶ ಕಳುಹಿಸಿದ್ದೆ – ಕೊಟ್ಟಿಗೆಹಾರಕ್ಕೆ ಹದಿನೆಂಟು ಕಿಮಿ ಉಂಟು. ಒಂದೂಕಾಲು ಘಂಟೆಯಲ್ಲಿ ತಲಪುತ್ತೇವೆ. ಹಾಗೆ ಸಮಯಕ್ಕೆ ಸರಿಯಾಗಿ ತಲಪಿಯೂ ಇದ್ದೆವು. ಒಂಬತ್ತೂ ಮುಕ್ಕಾಲಕ್ಕೆ ಉಜ್ರೆಯಿಂದ ಹೊರಟು ಅಲ್ಲಿಂದ ಮೂರು ಸಾವಿರ ಅಡಿ ಎತ್ತರ ಹಾಗೂ ಮೂವತ್ತೆಂಟು ಕಿಮಿ ದೂರದಲ್ಲಿರುವ ಕೊಟ್ಟಿಗೆಹಾರಕ್ಕೆ ಎರಡೂವರೆ ಘಂಟೆ ಪ್ರಯತ್ನದಲ್ಲಿ ಸಾಗಿದ್ದೆ. ಶಕ್ತಿಯ ಬಳಕೆ ನನ್ನ ನಿರೀಕ್ಷೆಯೊಳಗಿತ್ತು ಎನ್ನುವುದರಿಂದಲೂ ನನ್ನ ಪ್ರಯತ್ನಕ್ಕೆ ಭಾರಿ ಸಮದಾನ ತಂದಿದೆ ಎನ್ನಬಹುದು.
ಮುಂದಿನ ದಾರಿ ಹಾಗೂ ಊಟದ ಬಗೆಗೆ ರವಿ ಹತ್ತಿರ ಕೊಟ್ಟಿಗೆಹಾರದಲ್ಲಿ ವಿಚಾರಿಸಲು ಮುಂದೆ ಮೂಡಿಗೆರೆಯ ಪಕ್ಕದಲ್ಲಿ ಮುಂದಿನ ರಸ್ತೆ ತಿರುವು. ಹಾಗೆ ಮೂಡಿಗೆರೆಯಲ್ಲಿಯೇ ಊಟ ಮಾಡೋಣ. ಇಲ್ಲಿ ಚೆನ್ನಾಗಿಲ್ಲ ಎಂದ ರವಿ. ಹಾಗೆ ಒಂದು ಘಂಟೆಗೆ ಮೂಡಿಗೆರೆ ಹೊರವಲಯದ ರಸ್ತೆ ಬದಿಯ ಗಾರೇಜಿನಲ್ಲಿ ಟ್ರೈಕ್ ಬಾಟರಿ ಚಾರ್ಜಿಗಿಟ್ಟು ನಾನು ಅವರ ಕಾರು ಹತ್ತಿದೆ. ಅವರು ಮುಂಚಿನ ದಿನ ಮಳೆ ಬಂದಿತ್ತು. ಇಂದು ಬರಲೂ ಬಹುದು ಎಂದರೂ ನಮಗೆ ಮಳೆ ತಡೆಯುಂಟು ಮಾಡಲಿಲ್ಲ.
ಮೂಡಿಗೆರೆಯಿಂದ ಜನ್ನಾಪುರ ಮೂಲಕ ಹನಬಾಳ ವರೆಗಿನ ರಸ್ತೆ ಪೂರಾ ಹಾಳು. ಕೆಲವು ಕಡೆಗಳಲ್ಲಿ ರಸ್ತೆಯೇ ಇರಲಿಲ್ಲ. ತುಂಬಾ ಹೊಂಡಗುಂಡಿಗಳು. ಹನಬಾಳಿನಲ್ಲಿ ನನ್ನ ತಂಡದವರಲ್ಲಿ ಹೇಳಿದೆ - ನನ್ನ ಹಾಗೂ ತ್ರಿಚಕ್ರದ ನಟ್ ಬೋಲ್ಟ್ ಎಲ್ಲ ಪರೀಕ್ಷೆ ನಡೆಸಿದಂತಾಯಿತು. ಹನಬಾಳ ಸಕಲೇಶಪುರ ರಸ್ತೆ ತೃಪ್ತಿಕರವಾಗಿದ್ದು ನಾಲ್ಕೂ ಕಾಲಕ್ಕೆ ಸರಿಯಾಗಿ ಮಂಗಳೂರ ಹೆದ್ದಾರಿ ತಲಪಿದೆವು.
ಘಾಟಿ ಇಳಿಯುವುದು ರೊಮಾಂಚನ ಅನುಭವವಾದರೂ ನಾನು ವೇಗಕ್ಕೆ ನಿಗಾ ವಹಿಸಬೇಕಾದುದು ಅನಿವಾರ್ಯ – ನನ್ನ ತ್ರಿಚಕ್ರಕ್ಕೆ ಬ್ರೇಕಿರುವುದು ಮುಂದಿನ ಎರಡು ಚಕ್ರಕ್ಕೆ ಮಾತ್ರ. ಎರಡನ್ನೂ ಒಟ್ಟಿಗೆ ಅದುಮದಿದ್ದರೂ ಜಾರುವ ಸಾದ್ಯತೆ ದಾರಾಳ. ಮಳೆಯ ಲಕ್ಷಣಗಳು ಇದ್ದರೂ ನಮಗೆ ತೊಂದರೆಯಾಗಲಿಲ್ಲ. ಸರಿಸುಮಾರು ಮೂವತ್ತೈದು ಕಿಮಿ ವೇಗದಲ್ಲಿ ಚಾಲನೆ. ತಿರುವುಗಳಗಲ್ಲಿ ನುಣುಪಾದ ಅಲ್ಲಲ್ಲಿ ಜಲ್ಲಿ ಹುಗಿದ ಹೊಸದಾಗಿ ಹಾಸಿದ ಡಾಮರು ಪದರ. ಜಾರುವುದೋ ? ಅದರ ಬಗೆಗೆ ಸ್ವಲ್ಪ ಗೊಂದಲ. ಕತ್ತಲಾಯಿತು ಎನ್ನುವಾಗ ಘಾಟಿ ರಸ್ತೆ ಮುಗಿಸಿ ಶಿರಾಡಿ ತಲಪಿದ್ದೆವು.
ಸುಮಾರು ದೂರ ಇಳಿಜಾರು ರಸ್ತೆಯಲ್ಲಿ ಶೀತ ಹವೆಯಲ್ಲಿ ಕಾಲುಗಳ ಸುಮ್ಮನೆ ಪೆಡಲ್ ಮೇಲಿಟ್ಟ ಕಾರಣ ಕಾಲುಗಳು ಮರಗಟ್ಟಿದ್ದವು. ಅದು ಸರಿಯಾಗಲು ನನ್ನ ನಿಯಂತ್ರಣಕ್ಕೆ ಬರಲು ಸ್ವಲ್ಪ ಸಮಯ ಹಾಗೂ ದೂರ ಬೇಕಾಯಿತು. ನನ್ನ ಮಾಪಕಕ್ಕೆ ಚಳಿ ಹಿಡಿದು ಅದು ನಿರ್ವಹಣೆಯಲ್ಲಿ ವಿಫಲವಾಯಿತು. ಅದರ ಸಂಪರ್ಕ ಕಿತ್ತು ಹಾಕಿದೆ. ರಸ್ತೆ ಹೊಂಡಗಳಿಲ್ಲದೆ ಉತ್ತಮವಾಗಿ ಇದ್ದುದೂ ನನಗೆ ಸಹಾಯಕವಾಯಿತು.
ನೆಲ್ಯಾಡಿ ಮುಟ್ಟುವಾಗ ಸರಿಯಾಗಿ ಕತ್ತಲು. ತುಂತುರು ಮಳೆ ಪ್ರಾರಂಬ. ಆದರೂ ಮುಂದುವರಿಸಿದೆ. ಇಲ್ಲಿಯೇ ಎಲ್ಲಾದರು ಪರಿಚಿತರಲ್ಲಿ ತ್ರಿಚಕ್ರ ಇಟ್ಟು ಹೊಗೋಣ ಎಂದು ಅನಿಲನ ಸಲಹೆ. ಟ್ರೈಕ್ ಹಾಗೂ ನಾನು ಕಾಣುವುದೇ ಇಲ್ಲ. ಮಳೆ ಹಾಗೂ ಕತ್ತಲಿನಲ್ಲಿ ಮುಂದುವರಿಯುವಾಗ ಅಗೋಚರವಾಗಿರುವ ನನ್ನ ಬಗೆಗೆ ಶಂಕರಣ್ಣನಿಗೆ ಆತಂಕ. ವಾಹನ ಚಾಲಕರು ಪಕ್ಕನೆ ಕಲ್ಪಿಸ್ಕೊಳ್ಳಲು ಸಾದ್ಯವಾಗದೆ ಹೊಂಡಕ್ಕೋ ಇತರ ವಾಹನಗಳ ಮೇಲೆಯೊ ಅಥವಾ ನನ್ನ ಮೇಲೆ ಅವರ ವಾಹನ ನುಗ್ಗಿಸಬಹುದು. ಸ್ವಲ್ಪ ಅಮಲಿನಲ್ಲಿದ್ದ ಚಾಲಕನಾದರೆ ಟ್ರೈಕ್ ಅಡಿಗೆ ಹಾಕಿದ್ದೂ ಗೊತ್ತಾಗದಿರಬಹುದು - ತೀರಾ ಅಪಾಯಕರ ಸನ್ನಿವೇಶ. ನನಗಿದು ಸನ್ನಿವೇಶ ಸವಾಲೆನಿಸಿ ಬಹಳ ಹಠ ಕಟ್ಟಿ ತುಳಿದೆ. ಗೋಳಿತೊಟ್ಟು ಉಪ್ಪಿನಂಗಡಿ ಮದ್ಯೆ ಕನಿಷ್ಟ ಹತ್ತು ಬಾರಿಯಾದರೂ ಸೈಕಲಿಸಿರುವ ನಾನು ಖಂಡಿತ ಅಂದು ನನ್ನ ಮಟ್ಟಿಗೆ ಹೊಸ ದಾಖಲೆ ಸ್ಥಾಪಿಸಿರುತ್ತೇನೆ. ಮೋಹನರು ನಾನೊ ಚಾಲನೆಯೊಂದಿಗೆ ನನ್ನ ದಾರಿಗೆ ಸಾದ್ಯವಾದಷ್ಟು ಬೆಳಕೂ ಬೀರಿದರು.
ಮುಂದೆ ಗೋಳಿತೊಟ್ಟಿನಲ್ಲಿ ರಸ್ತೆಬದಿಯಲ್ಲಿದ್ದ ಮಣ್ಣು ರಾಶಿ ಕರಗಿ ಇಳಿಜಾರು ರಸ್ತೆಯಲ್ಲಿ ಸುಮಾರು ದೂರ ಕೆಸರು ಪದರವಿದ್ದಲ್ಲಿ ಕಾರುಗಳೆರಡು ಗುದ್ದಿಕೊಂಡದ್ದು ನೋಡಿ ಶಂಕರಣ್ಣ ಮತ್ತೂ ಕಂಗಾಲು. ವೈದ್ಯರು ಸದಾ ರೋಗಿಗಳ ಮದ್ಯೆ ಇರುವಂತೆ ಇವರಿಗೆ ಅಪಘಾತ ಹಾಗೂ ಪೆಟ್ಟಾದ ವಾಹನಗಳ ಸುದ್ದಿ ಚಿರಪರಿಚಿತ. ಉಪ್ಪಿನಂಗಡಿ ತಲಪುವಾಗ ಅವರೂ ತ್ರಿಚಕ್ರವನ್ನು ಇಲ್ಲೆ ಹೋಟೆಲ್ ಪಕ್ಕ ಇಟ್ಟು ಹೋಗುವ, ನಾನು ಮಾತಾಡುತ್ತೇನೆ ಎಂದರು.
ಮುಂದಿನ ಪುತ್ತೂರು ರಸ್ತೆಯಲ್ಲಿ ವಾಹನದಟ್ಟಣೆ ಕಡಿಮೆ. ಹಾಗೆ ಮುಂದಿವರಿಯುವ ಮತ್ತು ನಿಮ್ಮ ಕಾರ್ಯಗಾರದಲ್ಲಿ ತ್ರಿಚಕ್ರವನ್ನು ಇಡುವ ಎಂದು ಅವರನ್ನು ಒಪ್ಪಿಸಿದೆ. ವಾಹನ ವಿರಳವಾದ ದಾರಿಯಾದ ಕಾರಣ ನನಗೆ ಅನುಕೂಲವಾಯಿತು. ಏರಿಳಿತ ತಿರುವುಗಳು ಹೆಚ್ಚಿದ್ದ ಕಾರಣ ಕೆಲವೊಮ್ಮೆ ನನ್ನ ಮಿಣುಕು ದೀಪದಲ್ಲಿಯೇ ಮುಂದುವರಿಯ ಬೇಕಾಯಿತು. ಬೊಳುವಾರು ವೃತ್ತ ತಲಪುವಾಗ ಜಾತ್ರೆ ಪ್ರಯುಕ್ತ ಪುತ್ತೂರ ಮಹಾಲಿಂಗೇಶ್ವರ ಸವಾರಿ ಹೊರಟಿದ್ದರು. ಮೆರವಣಿಗೆ ಮುಂದಿನ ತುದಿ ಮಾತ್ರ ಅಲ್ಲಿಗೆ ತಲಪಿದ ಕಾರಣ ನಮಗೆ ವಿಳಂಬವಾಗಲಿಲ್ಲ. ರಾತ್ರೆ ಎಂಟೂವರೆಗೆ ಟ್ರೈಕಿನಿಂದಿಳಿದು ಕೈಕಾಲು ಬೆನ್ನುಗಳ ಸರಿಮಾಡಿಕೊಂಡೆ.
ಹನ್ನೊಂದು ಕಾಲು ಘಂಟೆಯಲ್ಲಿ ೨೩೦ ಕಿಮಿ ಚಾಲನೆ ಮಾಡಿದ್ದೆ. ಸರಾಸರಿ ವೇಗ ಘಂಟೆಗೆ ೨೦.೪ ಕಿಮಿ. ಇಲ್ಲಿ ಕ್ಲಿಕ್ಕಿಸಿದರೆ ನಾನು ಸಾಗಿದ ದಾರಿ ನಕ್ಷೆ ತೆರೆದುಕೊಳ್ಳುತ್ತದೆ.
ಮರುದಿನ ಒಮ್ನಿಯಲ್ಲಿ ಪುತ್ತೂರಿಗೆ ಹೋಗಬೇಕಾಯಿತು. ಅಲ್ಲಿ ನೋಡುವಾಗ ನನಗೆ ಗಾಬರಿ - ಹಿಂದಿನ ಚಕ್ರ ಗಾಳಿ ಖಾಲಿಯಾಗಿ ಕೂತಿದೆ. ಹಿಂದಿನ ಚಕ್ರ ಬಿಡಿಸಲು ಬದಲಾಯಿಸಲು ಸುಲಭವಲ್ಲ. ಗೇರ್, ಚೈನ್ ಮತ್ತು ನನ್ನ ಚೀಲ ಸುಲಭವಾಗಿ ಕೆಲಸ ಮಾಡದಂತೆ ಅಡ್ಡಗಟ್ಟುತ್ತದೆ. ಹಾಗೆ ಒಮ್ನಿಯಲ್ಲಿ ಹಾಕಿ ತ್ರಿ ಚಕ್ರ ಮನೆಗೆ ತಂದೆ. ಬಿಡಿಸಿ ನೋಡುವಾಗ ಒಂದು ಬಹು ಸಣ್ಣ ತೂತು ಕಂಡಿತು. ಆಗಾಗ ಗಾಳಿ ಹಾಕಿ ಮುಂದೆ ಸಾಗ ಬಹುದಾಗಿದ್ದ ಪರೀಸ್ಥಿತಿ. ಆದರೆ ದಾರಿಯಲ್ಲಿ ಸಮಸ್ಯೆಯಾಗದಿರುವುದು ಒಳ್ಳೆಯದಾಯಿತು ಅನ್ನೋಣ.
ಕತ್ತಲ ದಾರಿ, ಮಳೆ ಹಾಗೂ ವಾಹನ ದಟ್ಟಣೆ ಇರುವ ಹೆದ್ದಾರಿ – ಮೂರೂ ಸೇರಿರುವ ಸನ್ನಿವೇಶ ಇನ್ನು ಮುಂದೆ ತ್ರಿಚಕ್ರ ಚಾಲನೆ ಇಲ್ಲವೇ ಇಲ್ಲ. ಇದು ಪ್ರಯತ್ನ ಸಾಹಸ ಎನ್ನುವ ಬದಲು ಮೂರ್ಖತನವಾಗುತ್ತದೆ. ಇದು ಈ ಪ್ರವಾಸದ ಪ್ರಮುಖ ಪಾಠ. ಜತೆಯಲ್ಲಿ ಬೆಂಬಲ ವಾಹನವಿದ್ದರೆ ನಮಗೆ ಬರೇ ಚಾರ್ಜಿಗಾಗಿ ಎಲ್ಲೂ ನಿಲ್ಲಬೇಕಾಗಿಲ್ಲ.