ಅಂದು ಪ್ರಪಂಚಕ್ಕೊಂದು ಸುತ್ತು ಸೈಕಲಿಸುವಾಗ ನನಗೆ ಸಂಪರ್ಕ ಅವಕಾಶಗಳು ಬಹಳ ಕಡಿಮೆಯಿತ್ತು. ಮನೆಯವರೊಡನೆ ಆಗಾಗ ಪತ್ರಗಳು ವಿನಿಮಯವಾದರೂ ಊರ ಪತ್ರಗಳಲ್ಲಿ ಬರೇ ಹಳೆಯ ಸುದ್ದಿಗಳೇ ತುಂಬಿರುತಿತ್ತು ಎಂದರೂ ಸರಿ. ನಾನು ಹೋಗುವ ದಾರಿ ವೀಸಾ ಸಿಕ್ಕಿ ನಿರ್ದಾರಿತವಾದ ತಕ್ಷಣ ನನ್ನಪ್ಪನಿಗೆ ಪತ್ರಿಸಿ ಆಯಾ ಊರಿನ ವಿಳಾಸ ಮತ್ತು ತಲಪುವ ದಿನ ತಿಳಿಸುತ್ತಿದ್ದೆ. ಅವರು ಮುಂದಾಗಿ ಬರೆದ ಪತ್ರ ಆ ಊರಿನಲ್ಲಿ ನನಗೆ ಕಾಯುತ್ತಿತ್ತು. ಮೊದಲಾಗಿ ಸಂಪರ್ಕಿಸಿದ ಸ್ಥಳೀಯರು ಇದ್ದರೆ ಸುಲಭ. ಇಲ್ಲವಾದರೆ ಗುರುತು ಹಾಜಿರು ಪಡಿಸಿ ಆ ಊರಿನ ನಿರ್ದಿಷ್ಟ ಅಂಚೆ ಕಛೇರಿ ಅಥವಾ ಅಮೇರಿಕನ್ ಎಕ್ಷ್ ಪ್ರೆಸ್ಸ್ ಪ್ರವಾಸಿ ಹಣದ ಕಛೇರಿಗಳನ್ನು ಅವಲಂಬಿಸುತ್ತಿದ್ದೆ. ಅದು ಹಕ್ಕಿಗೆ ಗುಂಡು ಇಡುವಂತೆ ಮುಂದಾಗಿ ತಲಪಿದರೆ ಮಾತ್ರ ನನಗೆ ದೊರಕುವುದು. ಅಂತೂ ಹೆಚ್ಚಿನ ಪತ್ರ ಬರೆದು ಮೂರು ನಾಲ್ಕು ವಾರ ಕಳೆದು ನಾನು ಓದುತ್ತಿದ್ದೆ.
ಹೊರಹೋಗುವಾಗ ಒಂದಷ್ಟು ಹದಿನೈದು ಪೈಸೆಯ ಅಂಚೆ ಕಾಗದ ಒಯ್ದಿದ್ದೆ. ರಾಯಬಾರಿ ಕಛೇರಿಗಳ ಸಿಬಂದಿಗೆ ಒಂದು ಸೌಲಬ್ಯ ಇರುತ್ತದೆ -ಸರಕಾರಿ ಟಪಾಲಿನೊಟ್ಟಿಗೆ ಅವರ ವೈಯುಕ್ತಿಕ ಪತ್ರಗಳ ಬಾರತಕ್ಕೆ ರವಾನೆ. ಇದರ ಸುಳಿವು ಸಿಕ್ಕ ನಾನು ಹಲವು ಸಲ ಊರಿಗೆ ರಾಯಬಾರಿ ಕಛೇರಿಗಳ ಮೂಲಕ ಸರಕಾರಿ ಅದಿಕೃತ ಚೀಲದಲ್ಲಿ ರವಾನಿಸಿದ್ದುಂಟು. ಅದನ್ನು ವಿದೇಶಿ ಸಚಿವಾಲಯದ ಸಿಬ್ಬಂದಿ ದೆಹಲಿಯಲ್ಲಿ ಅಂಚೆಗೆ ಹಾಕುತ್ತಾರೆ. ಆದರೆ ಮಾಮೂಲಿ ಪ್ರವಾಸಿ ಊರುಗಳ ರಾಯಬಾರಿ ಕಛೇರಿಗಳಲ್ಲಿ ಅದಿಕಾರ ದರ್ಪ ತೋರಿಸಿ ಇದಕ್ಕೆ ನಿರಾಕರಿಸುವವರೂ ಇರುತ್ತಾರೆ. .
ಅಮೇರಿಕದ ಗ್ರಾಮೀಣ ಪ್ರದೇಶದಲ್ಲಿ ಪತ್ರವನ್ನು ಅಂಚೆಗೆ ಹಾಕುವುದೊಂದು ಸಾಹಸ. ಅಲ್ಲಿ ಸಾರ್ವಜನಿಕ ಅಂಚೆ ಪೆಟ್ಟಿಗೆಗಳು ಕಡಿಮೆ. ಪ್ರತಿ ಮನೆಯ ಮುಂದೆ ಅವರವರ ವೈಯುಕ್ತಿಕ ಅಂಚೆ ಪೆಟ್ಟಿಗೆಯಿದ್ದು ಅಂಚೆಯಾಳು ಬಂದು ಇವರಿಗಿರುವ ಪತ್ರಗಳ ಹಾಕಿ ಅದರಲ್ಲಿರುವ ಪತ್ರಗಳ ಪಡಕೊಂಡು ಮುಂದೆ ಹೋಗುತ್ತಾರೆ. ನಾನು ಹಾಗೆ ಯಾರದೋ ಪೆಟ್ಟಿಗೆಯಲ್ಲಿ ಹಾಕಿದರೆ ಅಂಚೆಯಾಳಿನ ಬದಲು ಮನೆಯವರ ಕೈಗೆ ಸಿಕ್ಕರೆ ಅದನ್ನು ಎಸೆದು ಬಿಟ್ಟಾರೆಂದು ಅಳುಕು. ಹಾಗೆ ದೂರ ದೂರದಲ್ಲಿರುವ ಅಂಚೆಪೆಟ್ಟಿಗೆಯ ಹುಡುಕಾಟ ಅನಿವಾರ್ಯ.
ಹಲವು ಜನ ನನ್ನ ಅತಿಥೇಯರು ನಾನು ದಾಟಿ ಮುಂದೆಹೋದ ಅನಂತರ ನಮ್ಮ ಮನೆಗೆ ಪತ್ರಿಸಿದ್ದಾರೆ. ನಿಮ್ಮ ಹುಡುಗ ನಮ್ಮಲ್ಲಿದ್ದು ಈಗ ಮುಂದೆ ಹೋಗಿದ್ದಾನೆ. ಅವನ ಅರೋಗ್ಯ ಒಕೆ. ಅಗತ್ಯವಿದ್ದರೆ ನಮ್ಮ ಸಹಾಯ ಲಬ್ಯ ಎಂದು ಅವನಿಗೆ ಗೊತ್ತು. ಆದರೆ ಅವನಿಗೆ ನಮ್ಮ ಸಹಾಯವಿಲ್ಲದೆ ನಿಬಾಯಿಸಲು ಸಾದ್ಯವೆಂದು ನಮಗೆ ವಿಶ್ವಾಸವಿದೆ ಎನ್ನುವ ಪತ್ರ ನಮ್ಮ ಮನೆಯವರಿಗೆ ಕೊಟ್ಟ ದೈರ್ಯ ಅಪಾರ. ಕೆಲವು ಕಡೆ ಅತಿಥೇಯರು ನನ್ನಲ್ಲಿ ಬೇಕಾದರೆ ನಮ್ಮಲ್ಲಿಂದ ನಿನ್ನ ಮನೆಗೆ ಫೋನಿಸು ಎನ್ನುವ ದಾರಾಳತನ ತೋರಿದರೂ ನಿಮ್ಮ ಕೊಡುಗೆಗೆ ದನ್ಯವಾದ ಆದರೆ ನಮ್ಮ ಮನೆಯಲ್ಲಿ ಫೋನಿಲ್ಲ ಎಂದು ನಯವಾಗಿ ತಿರಸ್ಕರಿಸಬೇಕಾಗಿತ್ತು.
ಊರಲ್ಲಿ ಹಲವಾರು ಗೆಳೆಯರು ನನ್ನ ಕಳಿಸಿಕೊಡುವುದಕ್ಕೆ ಸಹಾಯ ಮಾಡಿದ್ದರು. ಅವರಿಗೂ ಆಗಾಗ ಪತ್ರಿಸಲು ಯೋಚಿಸುತ್ತಿದ್ದೆ. ಅಂಚೆ ವೆಚ್ಚ ದುಬಾರಿ ಎನ್ನುವುದು ತಡೆಯಾಗಿತ್ತು. ಆಗ ಒಂದು ಸಾಮೂಹಿಕ ಪತ್ರ ತಯಾರು ಮಾಡಿ ಅದನ್ನು ಕ್ಷೆರಾಕ್ಷ್ ಮಾಡಿಸಿ ಎಲ್ಲಕ್ಕೂ ಕೊನೆಗೂ ಮೊದಲಿಗೂ ವೈಯುಕ್ತಿಕವಾಗಿ ನಾಲ್ಕು ಮಾತು ಮತ್ತು ವಿಳಾಸ ಗೀಚಿ ಒಟ್ಟಿಗೆ ಊರಿಗೆ ಪಾರ್ಸೆಲ್ ಕಳುಹಿಸುತ್ತಿದ್ದೆ. ನಮ್ಮಪ್ಪ ಅದಕ್ಕೆ ಆಂಚೆ ಚೀಟಿ ಅಂಟಿಸಿ ಅಂಚೆಗೆ ಹಾಕುತ್ತಿದ್ದರು. ಇಂದಾದರೆ ಬ್ಲೋಗ್ ಬರೆದರೆ ಸಾಕಿತ್ತು. ಪಿಜ್ಜಾ ತಿಂದದ್ದು ಜೀರ್ಣವಾಗುವಾಷ್ಟರಲ್ಲಿ ಸುದ್ದಿ ಎಲ್ಲರಿಗೂ ತಿಳಿಯಲು ಸಾದ್ಯ. ಇದರಿಂದ ಸಾಕಷ್ಟು ಪ್ರಚಾರ ಹಾಗೂ ಅಗತ್ಯದ ಸಹಾಯ ಲಬಿಸುತಿತ್ತು.
ಇಪ್ಪತ್ತು ವರ್ಷ ಹಿಂದಿನದಕ್ಕೂ ಇಂದಿಗೂ ಹೋಲಿಸಿದರೆ ಸಂಪರ್ಕ ವಿಚಾರದಲ್ಲಿ ಜಗತ್ತು ಬಹಳಷ್ಟು ಮುಂದುವರಿದಿದೆ. ಈಗ ಒಂದು ಕಮೆರಾ, ಲಾಪ್ ಟೋಪ್ ಮತ್ತು ಮೊಬೈಲ್ ಫೋನ್ ಇದ್ದರೆ ಪ್ರಪಂಚದ ಹೆಚ್ಚಿನ ಜಾಗಗಳಿಂದ ನಿರಂತರ ಪತ್ರ ವ್ಯವಹಾರ ಮಾತ್ರವಲ್ಲ ಮಾತನಾಡಲು ಹಾಗೂ ಪೊಟೊ ಕಳಿಸಲು ಸಾದ್ಯ. . ಹೆಚ್ಚಿನ ಎಲ್ಲ ದೇಶಗಳ ಸಿಮ್ ಬಾರತದಲ್ಲೇ ಸಿಗುತ್ತದೆ. ಅದುದರಿಂದ ಸಂಪರ್ಕಕ್ಕೆ ಇಲ್ಲೆಯೇ ಅಡಿಪಾಯ ಹಾಕಬಹುದು. ಆದರೆ ಬಾರತದಲ್ಲಿಯೇ ಉಳಿದೆಡೆಯ ಕೆಲವು ಸಿಮ್ ಕಾಶ್ಮೀರದಲ್ಲಿ ಕೆಲಸ ಮಾಡುವುದಿಲ್ಲ ಎನ್ನುವ ರೀತಿಯ ಪರಿಮಿತಿಯ ಸುಳಿವುಗಳಿಗೆ ನಾವು ಕಣ್ಣಿಡಬೇಕಾಗುತ್ತದೆ.
ಸೈಕಲು ಪ್ರವಾಸಿಗೆ ಪುಟ್ಟದಾದರೂ ಕಂಪ್ಯುಟರ್ ಹೊರುವುದು ಕಷ್ಟ ಮತ್ತು ಅಪಾಯಕಾರಿ. ಆಗ ಸಹಾಯಕ್ಕೆ ಬರುವಂತಹ ಸೈಬರ್ ಕೇಫ್ ಈಗ ಹೆಚ್ಚಿನ ಎಲ್ಲ ದೇಶಗಳಲ್ಲೂ ಕಾಣಸಿಗುತ್ತದಂತೆ. ಚೀನಾದಲ್ಲಿ ಸೈಬರ್ ಕೇಫ್ ಕಿಬೋರ್ಡ ಎಷ್ಟು ಗಲೀಜೆಂದರೆ ಗ್ಲೌಸ್ ಹಾಕ್ಕೊಳ್ಳೋದು ಉತ್ತಮ ಎನ್ನುತ್ತದೆ ಪ್ರವಾಸಿ ಮಾಹಿತಿ. ಆದರೂ ಸೌಲಬ್ಯಗಳು ಸಿಗುತ್ತವೆ ಎನ್ನುವುದು ಬದಲಾವಣೆಯ ಲಕ್ಷಣ. ಸೈಕಲ್ ಪ್ರವಾಸ ಎಂದರೆ ತುಳಿಯುವುದು ಅಗತ್ಯವಾದರೂ ಉಳಿದ ವಿಚಾರಗಳು ಬಹಳ ಮುಂದುರಿದುದು ಸಂತಸದ ವಿಚಾರ.
Tuesday, July 22, 2008
Subscribe to:
Post Comments (Atom)
3 comments:
Tumba olle article...Nimma pravasada bagge..hecchina vichaaragalige kaayutiddeve..:)
ಸರ್ , "ಹಳ್ಳಿಯಿಂದ" ತುಂಬಾ ಚೆನ್ನಾದ ಸುದ್ದಿ ಬರೆಯುತ್ತೀರಿ.
It is quite interesting to read the blog. Sittig in a remote village and accesing the world through blog really shows how we have changed and how world has changed us. Do write about your bycycle tour.
Post a Comment