ನಿನ್ನೆ ಬೆಳಗ್ಗೆ ನನ್ನ ಸಂಚಾರವಾಣಿಗೆ ಪೈಲೂರರಿಂದ ಒಂದು ಸುದ್ದಿ ಬಂತು. ೯೫ ವರ್ಷ ವಯಸ್ಸಾಗಿದ್ದ ಫುಕುವೋಕರು ಎರಡು ದಿನ ಹಿಂದೆ ಹೋಗಿ ಬಿಟ್ಟರಂತೆ. ಓದಿದ ತಕ್ಷಣ ನನ್ನ ಮನಸ್ಸು ಇಪ್ಪತ್ತೆರಡು ವರ್ಷ ಹಿಂದಕ್ಕೋಡಿತು.
ನಾನು ಫುಕುವೋಕರ ಒಂದು ಹುಲ್ಲಿನ ಕ್ರಾಂತಿ ಓದುವಾಗ ನನ್ನ ಸೈಕಲು ಯಾತ್ರೆಯ ತಯಾರಿಯಲ್ಲಿದ್ದೆ. ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಷೆ ಓದಿ ಅಂಚೆ ಮೂಲಕ ಪುಸ್ತಕವನ್ನು ತರಿಸಿ ಓದಿದೆ. ಬಹಳ ಪ್ರಬಾವಿತನಾದೆ ಎನ್ನಬಹುದು. ಆಗ ವರ್ಷದೊಳಗೆ ಅವರನ್ನು ಕಾಣುತ್ತೇನೆ ಎಂದು ಕನಿಸಿನಲ್ಲೂ ಯೋಚಿಸಿರಲಿಲ್ಲ. ಅಫ್ರಿಕಾ ಮೂಲಕ ಯೋರೋಪ್ ಮತ್ತು ವಾಪಾಸು ಎನ್ನುವುದು ನನ್ನ ಮೂಲ ಯೋಜನೆಯಾಗಿತ್ತು.
ಜಪಾನಿನ ಟೋಕಿಯೊದಲ್ಲಿ ಬಂದಿಳಿದಾಗ ಅವರ ಪುಸ್ತಕದಲ್ಲಿ ಹಿಂದೆ ಓದಿದ ಮತ್ಸುಯಾಮ ಪಟ್ಟಣದ ಸಮುದ್ರ ತೀರ ಎಂದಷ್ಟೆ ಸುಳಿವು. ಆದರೂ ಒಂಬೈನೂರು ಕಿಲೋಮೀಟರ್ ಸೈಕಲ್ ತುಳಿದು ಮತ್ಸುಯಾಮ ತಲಪಿ ವಿಚಾರಿದಾಗ ಅವರ ವಾಸ್ತವ್ಯ ಪಟ್ಟಣದ ಹೊರವಲಯದ ಇಯೋ ಎಂಬ ಊರೆಂದು ತಿಳಿಯಿತು. ಅಂತೂ ಹೋಗಿ ಬಾಗಿಲು ತಟ್ಟಿದೆ. ಎದುರಿಗೊಂಡರು.
ಹೆಚ್ಚೇನು ಮಾತುಕಥೆಯ ಮೊದಲೇ ತಮ್ಮ ಸೈಕಲು ಏರಿ ಹಿಂಬಾಲಿಸಲು ಹೇಳಿದರು. ಸುಮಾರು ಎರಡು ಕಿಮಿ ದೂರದ ಗುಡ್ಡದ ಬುಡದಲ್ಲಿ ಸೈಕಲನ್ನು ಗೋಡೆಗೆ ಒರಗಿಸಿದರು. ಮುಂದಿನದು ಕಾಲು ನಡುಗೆ. ಅಲ್ಲಿ ಹಲವು ಕುಟೀರಗಳು. ಆವಾಗ ಅವರ ಗುರುಕುಲ ಬರಿದಾಗಿತ್ತು. ಹಾಗಾಗಿ ನಾನು ಏಕಾಂಗಿಯಾಗಿ ವಾಸ್ತವ್ಯ.
ಆ ವರ್ಷ ಅವರು ಬತ್ತ ಬಿತ್ತನೆ ಅನಂತರ ಅಮೇರಿಕಕ್ಕೆ ಹೋಗಿದ್ದರಂತೆ. ಹಾಗಾಗಿ ನಿರ್ವಹಣೆ ಇಲ್ಲದೆ ಗದ್ದೆ ತುಂಬಾ ಕಳೆಗಳಿದ್ದವು. ಫಸಲು ನಿರ್ಣಯಿಸಲು ಕಷ್ಟ ಎನ್ನುವಂತಿತ್ತು. ಗುಡ್ಡದಲ್ಲಿ ಮಾತ್ರ ಕಿತ್ತಳೆ ಮರಗಳ ನಡುವೆ ನಾವು ಅಗೆದಲ್ಲೆಲ್ಲ ಮೂಲಂಗಿ ಲಬಿಸುತ್ತಿದ್ದವು. ಪಾತ್ರೆ ತೊಳೆಯುವಲ್ಲಿ ನೀರು ನಿಲ್ಲುವುದರ ತಪ್ಪಿಸಲು ಕಾಲುವೆ ಮಾಡಿದಾಗ ಅಡುಗೆಗೆ ದಾರಾಳ ಮೂಲಂಗಿ ಲಬಿಸಿತು. ಅವರ ಮಿಶ್ರ ಕೃಷಿಯಲ್ಲಿ ಒಟ್ಟು ಬೆಳೆ ಖಂಡಿತ ಹೆಚ್ಚು. ಆಗ ಜತೆಗೆ ಒಬ್ಬ ಇಂಗ್ಲೀಷ್ ಬಲ್ಲ ಜಪಾನಿನ ಯುವಕನಿದ್ದನೆಂದು ನೆನಪು.
ದೀಪದ ಅಡಿಯಲ್ಲಿ ಕತ್ತಲೆ ಎನ್ನುವಂತೆ ಮಗ ಮಸಾತೊ ಆಗ ದಾರಾಳ ರಸಾಯನಿಕಗಳನ್ನು ಬಳಸುತ್ತಿದ್ದ. ಇನ್ನು ರಸಾಯನಿಕಕ್ಕೆ ವಿದಾಯ ಎಂದು ಇಂದು ಆಶ್ವಾಸನೆ ಕೊಟ್ಟಿದ್ದಾನೆ ಎಂದು ಫುಕುವೋಕರು ಅಲ್ಲಿಗೆ ಬಂದ ಮಹಿಳೆಯೊಬ್ಬರಲ್ಲಿ ಹೇಳಿಕೊಂಡಿದ್ದರು. ಆ ಬಗ್ಗೆ ಅವರಿಗೆ ನೋವಿದ್ದಂತೆ ಕಂಡಿತು.
ಪ್ರತ್ಯೇಕವಾಗಿ ಕೃಷಿ ಮಾಡುತ್ತಿದ್ದ ಅವರ ಮಗ ಮಸಾತೋ ಅವರ ಜತೆ ಅವರ ತೋಟಕ್ಕೆ ಹೋಗಿದ್ದೆ. ಅಲ್ಲಿ ಖಾಲಿ ಇದ್ದ ಯಂತ್ರ ಚಲಾಯಿಸಿ ಬಲಗೈ ಹೆಬ್ಬೆರಳು ತುಂಡಾಗಿ ಏಕಲವ್ಯ ಗುರುದಕ್ಷಿಣೆ ಸಲ್ಲಿಸಿದಂತಾಯಿತು ನನ್ನ ಕಥೆ. ಯಂತ್ರ ಚಾಲಿತ ಗರಗಸದಲ್ಲಿ ಪುಟ್ಟದೊಂದು ಅಪಘಾತವಾಗಿ ಆ ಬೆರಳಿನ ಹೊಲಿಗೆ ತೆಗೆಯುವ ವರೆಗೆ ನಾನು ಅಲ್ಲಿರಬೇಕಾಯಿತು.
ಅವರ ಹೆಚ್ಚಿನ ಅಲೋಚನೆಗಳಿಗೆ ನಾನು ಒಪ್ಪಿದರೂ ಪಶು ಸಂಗೋಪನೆ ಅಂದರೆ ಕೋಳಿ ಹಸುಗಳಿಗೆ ಮೇವು ಕೊಡುವುದರ ವಿರೋದಿಸುವ ಅವರ ವಾದ ಒಪ್ಪಲು ಸಾದ್ಯವಿಲ್ಲ. ದನ ಸಾಕಿದುದರಿಂದ ಬಾರತ ಮರುಬೂಮಿಯಾಯಿತು ಎಂದು ಬರೆದ ಅವರೊಡನೆ ಈ ಬಗ್ಗೆ ಚರ್ಚಿಸಲು ಆಸಕ್ತಿಯಿದ್ದರೂ ಸಾದ್ಯವಾಗಿರಲಿಲ್ಲ.
ಬಾರತಕ್ಕೆ ಬೇಟಿ ಕೊಡಲೂ ಅವರಿಗೆ ಬಹಳ ಆಸಕ್ತಿ ಇತ್ತು. ಈ ವಿಚಾರ ನಾನು ಬಾರತದಲ್ಲಿ ಅವರ ಪುಸ್ತಕ ಪ್ರಕಟಿಸಿದವರನ್ನೂ ಸೇರಿದಂತೆ ಹಲವರಲ್ಲಿ ಪ್ರಸ್ತಾಪಿಸಿದ್ದೆ. ಕೊನೆಗೆ ಅವರನ್ನು ಬಾರತಕ್ಕೆ ಬರಮಾಡಿಕೊಂಡದ್ದು ಸಾವಯುವ ವಲಯದಲ್ಲಿ ಹೆಚ್ಚು ಗುರುತಿಸಿಕೊಳ್ಳದ ಕಲಕತ್ತಾ ಮೂಲದವರಾದುದರಿಂದ ನನಗೆ ಮಾಹಿತಿ ದೊರಕುವಾಗ ಬಹಳ ತಡವಾಗಿತ್ತು. ಬೆಂಗಳೂರಿಗೆ ಬಂದ ಅವರನ್ನು ಬೇಟಿಯಾಗುವ ಅವಕಾಶ ತಪ್ಪಿ ಹೋಗಿತ್ತು.
ಅವರು ಬರೇ ಕೃಷಿ ಚಿಂತಕರಲ್ಲ ಅವರೊಂದು ಬಹುಮುಖ ಪ್ರತಿಭೆ. ಕೃಷಿ ಬಗೆಗೆ ಮಾತ್ರವಲ್ಲ ತತ್ವಜ್ನಾನದ ಪುಸ್ತಕಗಳನ್ನೂ ಬರೆದಿದ್ದರು. . ಜಪಾನಿ ಬಾಷೆಯಲ್ಲಿ ಅವರು ಬರೆದ ತತ್ವಶಾಸ್ತ್ರ ಪುಸ್ತಕ ಅಲ್ಲಿನ ಪದವಿ ತರಗತಿಗೆ ಪಠ್ಯ ಪುಸ್ತಕವಾಗಿತ್ತಂತೆ. ಅದರ ಇಂಗ್ಲೀಷ್ ಪ್ರಕಟನೆಗೆ ಅವರು ಉತ್ಸುಕರಾಗಿದ್ದರೂ ಅವರ ಇಂಗ್ಲೀಷ್ ಪ್ರಕಾಶಕರಿಗೆ ಅದು ಮಾರಾಟವಾಗುವ ದೈರ್ಯ ಇದ್ದಂತಿರಲಿಲ್ಲ. ಬಿಡುವಿನಲ್ಲಿ ನಮ್ಮ ಚುಟುಕಿನ ಜಪಾನಿ ರೂಪವಾದ ಹೈಕು ಬರೆಯುತ್ತಿದ್ದರು. ನಾನು ನಾವು ಕೊಳೆರೋಗಕ್ಕೆ ಬೊರ್ಡೋ ದ್ರಾವಣ ಸಿಂಪಡಿವುದಾಗಿ ಹೇಳಿದಾಗ ಪರವಾಗಿಲ್ಲ ಎಂದಿದ್ದರು.
ನನ್ನ ಪ್ರವಾಸದಲ್ಲೊಂದು ಕೊಂಡಿಯಾದ ಮತ್ತು ನಂತರದ ಹಲವು ಪ್ರಯೋಗಗಳಿಗೆ ಸ್ಪೂರ್ತಿಯಾದ ಅಗಲಿದ ಈ ಹಿರಿಯ ಚೇತನಕ್ಕೆ ನನ್ನ ನಮನಗಳು.