ಸ್ವಿಟ್ಸರ್ ಲಾಂಡಿನಲ್ಲಿ ರೈಲು ನಿಲ್ದಾಣದಲ್ಲಿ ವಿದೇಶಿ ವಿನಿಮಯ ವ್ಯವಹಾರ ಅಂದರೆ ಹಣ ಪರಿವರ್ತನೆ ಸೌಲಬ್ಯ ಇರುತ್ತದೆ. ಹಾಗೆ ಇನ್ನೇನು ಜರ್ಮನಿ ಗಡಿಯೊಳಗೆ ದಾಟುತ್ತೇನೆ ಅನ್ನುವಾಗ ಅಲ್ಲಿದ್ದ ರೈಲು ನಿಲ್ದಾಣಕ್ಕೆ ನುಗ್ಗಿದೆ. ನನ್ನಲ್ಲಿರುವ ಸ್ವಿಸ್ ಹಣ, ಪರಿವರ್ತನ ಶುಲ್ಕ ಮತ್ತು ಅಪೇಕ್ಷಿಸುವ ಜರ್ಮನಿಯ ಹಣದ ಮೊತ್ತ, ಹೀಗೆ ಎಲ್ಲ ಲೆಕ್ಕಾಚಾರವನ್ನು ಹಣದ ಜತೆ ರೈಲು ನಿಲ್ದಾಣದ ಕಿಟಿಕಿಯ ಎದುರಿದ್ದ ಆ ಕಾರಕೂನರ ಮುಂದಿಟ್ಟೆ.
ನನ್ನ ವರ್ತನೆಗೆ ಅವರು ಆಶ್ಚರ್ಯಚಕಿತರಾಗಿ ನನ್ನನ್ನು ನೋಡಿದರು. ಪ್ರಾಯುಷ: ಈ ರೀತಿಯ ಕರಾರುವಕ್ಕಾದ ವ್ಯವಹಾರ ಅವರಿಗೆ ಹೊಸದು. ಅದೊಂದು ಬಹಳ ದೊಡ್ಡ ಮೊತ್ತವಾಗಿರಲಿಲ್ಲ. ಆಗ ನಾನು ನನ್ನ ಕಥೆ ಚುಟುಕಾಗಿ ಹೇಳಿದೆ. ಬಾರತದಿಂದ ಬಂದದ್ದು, ಸೈಕಲಿಸುತ್ತಿದ್ದೇನೆ, ಗಡಿ ದಾಟಿದ ನಂತರ ಚಿಲ್ಲರೆ ನಾಣ್ಯಗಳನ್ನು ಬಾಂಕಿನವರು ಪಡಕೊಳ್ಳುವುದಿಲ್ಲ, ನಾನು ನೆನಪಿಗೋಸ್ಕರ ಸ್ವಲ್ಪ ಚಿಲ್ಲರೆ ಕೊಂಡೊಯ್ಯುತ್ತೇನೆ, ಹೆಚ್ಚು ಕೊಂಡೊಯ್ಯಲು ನನಗೆ ಹೊರಲು ಕಷ್ಟ ಮತ್ತು ಅಷ್ಟು ಹಣವೂ ನನಗೆ ಅಮೂಲ್ಯ ಎಂದು ನನ್ನ ವಿಚಾರ ಅವನ ಮುಂದಿಟ್ಟೆ. ವ್ಯವಹಾರ ಮುಗಿಯಿತು. ಹೊರ ಬಂದು ಸೈಕಲೇರಿದೆ.
ಜರ್ಮನಿ ಗಡಿ ಸಮೀಪಿಸುವಾಗ ಪಕ್ಕದಲ್ಲೊಂದು ಕಾರು ನಿದಾನಿಸಿತು. ಅದರಲ್ಲಿದ್ದ ಇಬ್ಬರು ಐವತ್ತು ದಾಟಿದ ಮಹಿಳೆಯರಲ್ಲಿ ಒಬ್ಬರು ಒಂದು ನೋಟನ್ನು ನನ್ನೆಡೆಗೆ ಚಾಚಿದರು. ನಾನು ಅರ್ಥವಾಗದೆ ಗಲಿಬಿಲಿಗೊಂಡಾಗ ಅವರು ಭಾನ್ ಹೋಫ್ ಅಂದರೆ ಜರ್ಮನ್ ಬಾಷೆಯಲ್ಲಿ ರೈಲು ನಿಲ್ದಾಣ ಎಂದು ಹೇಳುತ್ತಾ ಹಿಂಬದಿಗೆ ಕೈ ಸನ್ನೆ ಮಾಡಿದರು. ಆಗ ಚಿತ್ರ ಸ್ಪಷ್ಟವಾಯಿತು. ಇವರೂ ಆಗ ರೈಲು ನಿಲ್ದಾಣದಲ್ಲಿದ್ದರು. ನಾನು ಈಚೆ ಬಂದ ನಂತರ ಅಲ್ಲಿ ನನ್ನ ಬಗೆಗೆ ಮಾತುಕಥೆಯಾಗಿರಲೂ ಬಹುದು. ನನ್ನ ಸಂಬಾಷಣೆ ಕೇಳಿ ಸಹಾಯ ಮಾಡುವ ಮನಸ್ಸಾಗಿ ಈ ಹಣದ ನೋಟನ್ನು ನನ್ನೆಡೆಗೆ ಚಾಚಿದ್ದರು. ನೋಟು ನನ್ನ ಕೈ ಸೇರಿತು ಎಂದಾಕ್ಷಣ ವೇಗ ಹೆಚ್ಚಿಸಿ ಹೊರಟು ಹೋದರು.
ಅನಿರೀಕ್ಷಿತ ಕಡೆಯಿಂದ ನಮಗೆ ಸಿಗುವ ಸಹಾಯದ ಬಗೆಗೆ ಇದೊಂದು ಉತ್ತಮ ಉದಾಹರಣೆ. ಈ ಘಟನೆಯ ನೆನಪಿಗಾಗಿ ನೋಟನ್ನು ಜೋಪಾನವಾಗಿರಿಸಿದ್ದೇನೆ. ನನ್ನ ಪ್ರವಾಸ ಸುಗಮವಾಗಿ ನೆರವೇರಲು ಇಂತಹ ಹಲವಾರು ಮನಸ್ಸುಗಳೇ ಕಾರಣ. ಅಂದ ಹಾಗೆ ಪ್ರವಾಸ ಕೊನೆಯಾಗುವಾಗ ನನ್ನಲ್ಲಿ ಹಲವು ದೇಶಗಳ ಸುಮಾರು ಅರ್ಧ ಕಿಲೊ ನಾಣ್ಯಗಳು ಶೇಖರವಾಗಿತ್ತು.
Saturday, November 01, 2008
Subscribe to:
Post Comments (Atom)
1 comment:
Nice gesture by the Swiss ladies
Post a Comment