Saturday, June 06, 2009

ಅಲ್ಪಸಂಖ್ಯಾತರಿಂದ ಆರಿಸಲ್ಪಟ್ಟ ದೊರೆಗಳು.

 ಮೊನ್ನೆ  ಭಾನುವಾರ   ಪಕ್ಕದ  ಊರು  ವಿಟ್ಲಕ್ಕೆ  ಹೋಗಿದ್ದೆ.   ವಾಪಾಸಾಗುವಾಗ   ಹೊಸ  ಸಂಸದರ  ವಿಜಯಯಾತ್ರೆ.  ಸುಮಾರು  ಮುಕ್ಕಾಲು  ಘಂಟೆ  ರಸ್ತೆ  ನಿಲುಗಡೆಯಾಗಿ  ನನ್ನ  ವಿಳಂಬಿಸಿದ  ಈ  ಯಾತ್ರೆಯ  ಔಚಿತ್ಯವನ್ನು  ಯೋಚಿಸಹತ್ತಿದೆ.   ಜನಸಂಖ್ಯೆಯ  ಶೇಕಡ ಅರುವತ್ತು  ಮಾತ್ರ  ಮತದಾರರು,  ಅದರಲ್ಲಿ  ಶೇಕಡ ಅರುವತ್ತು  ಮತದಾನ  ಮಾಡುವವರು, ಅದರಲ್ಲಿ  ಶೇಕಡ  ನಲುವತ್ತೋ  ನಲುವತ್ತೈದೊ   ಮತ  ಪಡೆದು   ಗೆದ್ದ  ಅಭ್ಯರ್ಥಿ  ವಿಜಯಿ  ಎನಿಸಿಕೊಳ್ಳುತ್ತಾನೆ.    ಅಂದರೆ   ಸುಮಾರು  ಶೇಕಡ  ಹದಿನೈದರಿಂದ  ಇಪ್ಪತ್ತು  ಜನರಿಂದ  ಅನುಮೋದಿಸಲ್ಪಟ್ಟ  ವ್ಯಕ್ತಿಯ ವಿಜಯಯಾತ್ರೆ   ಅವನ  ಬೆಂಬಲಿಸದಿರುವ    ಬಹುಸಂಖ್ಯಾತರಿಗೆ  ತೊಂದರೆ  ಕೊಡುವುದು  ಸರಿಯೋ ?     ಸಂಜೆ  ಅಂದಿನ  ವಿಜಯ ಕರ್ನಾಟಕ    ಓದುವಾಗ  ಕಂಡ  ಚಿತ್ರ   ನನ್ನ  ಚಿಂತನೆಯನ್ನು  ಅನುಮೋದಿಸಿದಂತಾಯಿತು. 
 

ಈಗೀಗ ಚುನಾವಣೆ ಬರೇ ಅರ್ಥಹೀನವಾಗಿದೆ. ಈಗ ಪ್ರತಿಯೊಂದು ಚುನಾವಣೆಯಲ್ಲಿ ಮತಗಟ್ಟೆಗೆ ಬರುವ ಮತದಾರರ ಸಂಖ್ಯೆ ಕುಸಿಯುತ್ತಲೇ ಇದೆ. ನೂರ ನಲುವತ್ತೈದು ಜನಪ್ರತಿನಿಧಿಗಳು ಶೇಖಡ ಇಪ್ಪತ್ತಕ್ಕೂ ಕಡಿಮೆ ಕ್ಷೇತ್ರದ ಮತದಾರರ ಬೆಂಬಲ ಪಡಕೊಂಡು ಲೋಕ ಸಭೆ ಪ್ರವೇಶಿಸಿದ್ದಾರೆ. ಇವರಲ್ಲಿ ವಿಶಿಷ್ಟ ಸ್ಥಾನ ಪಡೆದವರು ಬೀಹಾರದ ಕಮಲ ಪಕ್ಷದ ಸಂಸದ ಭೋಲ ಸಿಂಗ್. ಸುಮಾರು ಇಪ್ಪತ್ತೈದುಲಕ್ಷ ಜನಸಂಖ್ಯೆ ಇರುವ ಬೀಹಾರದ ನಾವಾಡ ಕ್ಷೇತ್ರದಿಂದ ಗೆದ್ದ ಭೋಲ ಸಿಂಗ್ ಪಡಕೊಂಡ ಮತ ಕೇವಲ ಒಂದು ಲಕ್ಷ ಮೂವತ್ತು ಸಾವಿರ. ಯಾಕೆ ಮತದಾರರು ಮತದಾನದಲ್ಲಿ ಪಾಲ್ಗೊಳ್ಳುತ್ತಿಲ್ಲವೆನ್ನುವುದು ಎಲ್ಲ ದೇಶಗಳಲ್ಲೂ ಯಕ್ಷ ಪ್ರಶ್ನೆ.

ಅಮೇರಿಕದ ಬಾಗವಾದ ಹೊನೊಲುಲುವಿನಲ್ಲಿ ಕಡೆದ ವಾರ ಸ್ಥಳೀಯ ಸಂಸ್ಥೆ ಮತದಾನ ನಡೆಯಿತು. ಜನರ ಅನುಕೂಲಕ್ಕಾಗಿ ಪೋನ್ ಅಥವಾ ಅಂತರ್ಜಾಲ ಮೂಲಕ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಈ ಹೊಸ ಬಗೆಯ ಮತದಾನಕ್ಕೆ ಆರ್ಥಿಕ ಕಾರಣವೂ ಇದ್ದು ಸುಮಾರು ಐವತ್ತು ಲಕ್ಷ ರೂಪಾಯಿ ಉಳಿತಾಯವಾಗಿತ್ತು ಅನ್ನುತ್ತಾರೆ ಅಲ್ಲಿನ ಅಧಿಕಾರಿಗಳು. ಎಲ್ಲ ಮತದಾರರಿಗೂ ಅಂಚೆ ಮೂಲಕ ಮಾಹಿತಿ ಜತೆಗೆ ಅವರ ಗುಪ್ತ ಕ್ರಮಾಂಕವನ್ನು ತಲಪಿಸಲಾಗಿತ್ತು. ಪರಿಣಾಮ ಮಾತ್ರ ನಿರಾಶದಾಯಕ. ಬರೇ ಏಳು ಸಾವಿರ ಜನ ಮತದಾನ ಮಾಡಿದ್ದರು. 

 

ಜನ ಪ್ರತಿನಿಧಿಗಳ ಕೆಲಸ ಸುಲಭ ಎಂದು ನಾನು ಹೇಳುತ್ತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲಲು ಅರ್ಥಹೀನ ಕೊಡುಗೆಗಳನ್ನೆಲ್ಲ ಘೋಷಿಸಿ ಜನರ ಅಪೇಕ್ಷೆಗಳ ಹೆಚ್ಚಿಸಿದ್ದಾರೆ. ಜನರ ಅಪೇಕ್ಷೆ ಅನ್ನುವಾಗ ಗಮನ ಸೆಳೆಯುವ ಸುದ್ದಿ – ಸರಕಾರವೇ ಮಕ್ಕಳನ್ನು ಸಾಕಬೇಕು ಅನ್ನುತ್ತಿದ್ದಾನೆ ಒಬ್ಬ ಅಮೇರಿಕನ್. ಅಲ್ಲೊಬ್ಬ ಹನ್ನೊಂದು ವರ್ಷದಲ್ಲಿ 11 ಹೆಂಗಸರಲ್ಲಿ ಪಡೆದ ತನ್ನ 21 ಮಕ್ಕಳನ್ನು ಸಾಕಲು ಹಣವಿಲ್ಲ ಸರಕಾರ ಸಾಕಬೇಕು. ಅವನಿಗೀಗ ಬರೇ 29 ವರ್ಷವಾಗಿದ್ದು ಮಕ್ಕಳು ಸಾಕು ಎನಿಸಿದೆಯಂತೆ.  

No comments: