Friday, June 05, 2009

ರಾಜ್ಯ ಗ್ರಾಹಕರ ವೇದಿಕೆಗೊಂದು ನಿಷ್ಪ್ರಯೋಜಕ ಯಾತ್ರೆ.

ನನ್ನ ರಿಲಿಯನ್ಸ್ ಫೋನಿನ ಸಮಸ್ಯೆ ತೀರಾ ಗೊಜಲಾಗಿತ್ತು. ನನ್ನ ದೂರವಾಣಿಯ ಸಮಸ್ಯೆಯನ್ನು ಅವರು ಕೊಟ್ಟ ಹಿಂಸೆಯನ್ನೂ ಮಂಗಳೂರಿನ ಗ್ರಾಹಕ  ನ್ಯಾಯಾಲಯ ಗುರುತಿಸಿದರೂ ಅವರಿಗೂ ಸಂಪೂರ್ಣ ಚಿತ್ರಣ ದೊರಕಿರಲಿಲ್ಲ. ಹೊಸ ಟವರ್ ಹಾಕಿದಾಗೆಲ್ಲ  ತಾಂತ್ರಿಕ  ಸಮಸ್ಯೆಗಳಿಂದಾಗಿ    ನನ್ನ ದೂರವಾಣಿ ಸ್ಥಬ್ದವಾಗುವುದನ್ನೂ ಅವರು ತಿಂಗಳುಗಟ್ಟಲೆ ಪರಿಹಾರ ಕೈಗೊಳ್ಳದಿರುವುದನ್ನೂ ಗುರುತಿಸಿತ್ತು. ಅದುದರಿಂದ ರಿಲಿಯನ್ಸ್  ಕಂಪೇನಿ  ಎರಡು ಸಾವಿರ ದಂಡ ಹಾಗೂ ಒಂದು ಸಾವಿರ ಕೋರ್ಟು ಖರ್ಚು ಕೊಡಬೇಕೆಂದು ತೀರ್ಮಾನಿಸಿತು.



ನನ್ನ ಹಣ ಇರುವಾಗಲೇ ರಿಲಿಯನ್ಸ್  ಕಂಪೇನಿ  ಉದ್ದೇಶಪೂರ್ವಕವಾಗಿ ಸಂಪರ್ಕ ಕಡಿತ ಮಾಡಿದ್ದನ್ನು ಗುರುತಿಸಿರಲಿಲ್ಲ. ಈ ಸಮಸ್ಯೆಗೆ   ಅವರ  ದೋಶಪೂರಿತ   ಕಂಪ್ಯೂಟರ್ ತಂತ್ರಾಂಶ   ಹಾಗೂ  ಹೊಣೆ ಅರಿಯದ   ಉದ್ಯೋಗಿಗಳೇ  ಕಾರಣ.   ಜುಲೈ ತಿಂಗಳಿನಲ್ಲೂ ಜತೆಗಿರುವ ಆಗಸ್ತ್ ಬಿಲ್ಲಿನಂತೆ ಕಟ್ಟಬೇಕಾದ ಮೊತ್ತ ಹಾಗೂ ಕೊನೆಯ ದಿನಾಂಕ ನಮೂದಿಸದ ಬಿಲ್ ಬಂದಿತ್ತು. ಕೊನೆಗೆ  ಇದ್ದಕ್ಕಿದ್ದಂತೆಯೇ  148 ರೂಪಾಯಿ ಕಟ್ಟಿ ಎಂದು ದೂರವಾಣಿ ಅದೇಶ ಮಾತ್ರವಲ್ಲ  ನನ್ನ   ಸಂಪರ್ಕವನ್ನು    ಕತ್ತರಿಸಿಯೇ ಬಿಟ್ಟರು.  ನಾನು  ಬಾಕಿ  ಉಳಿಸಿಕೊಂಡಿಲ್ಲವೆಂದು  ಸ್ಪಷ್ಟವಾಗಿಯೇ   ಹೇಳಿದ್ದೆ.   ನಾನು 200 ರೂಪಾಯಿ ಕಟ್ಟಿದ ನಂತರ ಸಂಪರ್ಕ ಸರಿಪಡಿಸಿದರು.  ಯಾವುದೇ ರೀತಿ  ಲೆಕ್ಕ  ಮಾಡಿದರೂ  ಈ  148 ರೂಪಾಯಿ  ಒಪ್ಪುವಂತಿರಲಿಲ್ಲ.




ಈ  ಉದ್ದೇಶಪೂರ್ವಕ  ಸಂಪರ್ಕ   ಕಡಿತದ  ರುಜುವಾತಾಗಿ     ರಿಲಿಯನ್ಸ್  ಕಂಪೇನಿ  ಕಳುಹಿಸಿದ  SMS  ದಾಖಲಿಸಿದ  ವಿಡಿಯೋ ಅಂದರೆ ಹೆಚ್ಚಿನ ಸಾಕ್ಷಿ ಸಮೇತ ಬೆಂಗಳೂರಿನಲ್ಲಿರುವ ರಾಜ್ಯ ವೇದಿಕೆಗೆ ಮೇಲ್ಮನವಿ ಸಲ್ಲಿಸಿದೆ. ಮಂಗಳೂರಿನಲ್ಲಿ ತೀರ್ಪಿನ ಕಾಪಿ ಸಿಗುವಾಗಲೇ ವಿಳಂಬ.  ತೀರ್ಪು  ಅಂತರ್ಜಾಲದಲ್ಲಿ  ಲಭ್ಯವಾಗುವಾಗಲೇ  ಇಪ್ಪತ್ತು  ದಿನ  ಕಳೆದಿತ್ತು.    ಜತೆಗೆ ನಾನಿರುವ ಹಳ್ಳಿಯಿಂದ ಮಂಗಳೂರಿಗೆ ಹೋಗಲು ಸಮಸ್ಯೆ. ಈ ವಿಳಂಬವನ್ನು ಕ್ಷಮಿಸಿ ನನ್ನ ಮೇಲ್ಮನವಿ ಪರಿಗಣಿಸಲು ಕೋರಿ ಅರ್ಜಿ ಹಾಕಿದ್ದೆ. ಅರ್ಜಿ ಹಾಕಿದ ನಂತರ ಸಿಕ್ಕ ಸ್ನೇಹಿತರು ರಾಜ್ಯ ಗ್ರಾಹಕ   ವೇದಿಕೆಯ ಬರೇ ಕಳಪೆ ಫಲಿತಾಂಶವನ್ನು ತಿಳಿಸಿದರೂ ನಾನು ಅಶಾವಾದಿಯಾಗಿದ್ದೆ.

ಮೇಲ್ಮನವಿಗೆ 69 ದಿನ ವಿಳಂಬವಾದ ನಿಮ್ಮ ಅರ್ಜಿ ಪರಿಗಣಿಸಲು ಸಾದ್ಯವಿಲ್ಲ.  ನಿಮಗೆ ಸಿಕ್ಕ  ಪರಿಹಾರ ಸಾಕೆಂದು ತೀರ್ಮಾನಿಸಿದ್ದೇವೆ.  ಎಂದು  ತೀರ್ಪಿನ ಪ್ರತಿ   ನನಗೆ  ಇತ್ತೀಚೆಗೆ   ದೊರಕಿತು. ಉದ್ದೇಶಪೂರ್ವ ಕಡಿತವು  ತಾಂತ್ರಿಕ ತೊಂದರೆಯಿಂದ ಬಿನ್ನ  ಎಂದು  ರಾಜ್ಯ ವೇದಿಕೆಗೆ ಅರ್ಥವಾಗಲಿಲ್ಲ.     ಜಿಲ್ಲಾ ವೇದಿಕೆಯಲ್ಲಿ ನಿಮಗೆ ದೊರೆತ ಪರಿಹಾರ ನ್ಯಾಯಬದ್ದವಾಗಿರುವ ಕಾರಣ ಪುನಹ ಪರಿಶೀಲನೆ ಅಗತ್ಯವಿಲ್ಲ ಎಂದು ಮಾರ್ಚು 5 ರಂದು ನ್ಯಾಯಮೂರ್ತಿ ಚಂದ್ರಶೇಖರಯ್ಯನವರ ಅದ್ಯಕ್ಷತೆಯ ಪೀಠ ಕೊಟ್ಟ  ತೀರ್ಪಿನ ಕಾಪಿ 72 ದಿನ ವಿಳಂಬವಾಗಿ ಅಂಚೆಗೆ ಹಾಕಲ್ಪಟ್ಟಿತು.
 

ತಮಾಷೆ ಎಂದರೆ ಆ ಲಕೋಟೆಯಲ್ಲಿ ಮುದ್ರಿಸಲ್ಪಟ್ಟ ದ್ಯೇಯವಾಕ್ಯ  ನನಗೆ  ಇದನ್ನು  ಓದಿ  ಹೇಗೆ ಪ್ರತಿಕ್ರಿಯಿಸುವುದೆಂದು ಅರ್ಥವಾಗುತ್ತಿಲ್ಲ. .


ನಮ್ಮ ಹಕ್ಕುಗಳ ಕಾಯಬೇಕಾದವರೇ ನಿರ್ಲಕ್ಷಿಸಿದರೆ ಯಾರಲ್ಲಿ ಹೇಳುವುದು ? ಈಗ ನಾನು ರಾಜ್ಯ ಗ್ರಾಹಕ ವೇದಿಕೆಯ   ಕಾರ್ಯ  ವೈಖಿರಿ  ಪ್ರತಿಭಟಿಸಲೋ ಅಲ್ಲ ಮೂಲ ಸಮಸ್ಯೆ ರಿಲಿಯನ್ಸ್ ಬಗ್ಗೆ ದೆಹಲಿಯಲ್ಲಿರುವ ಗ್ರಾಹಕ ರಾಷ್ಟ್ರೀಯ ವೇದಿಕೆಯ ಸಂಪರ್ಕಿಸಲೋ ಅನ್ನುವ ಗೊಂದಲದಲ್ಲಿದ್ದೇನೆ. ಆದರೆ ಇಷ್ಟು ಹಣ ದಂಡ ಮಾಡಿದ್ದು ಸಾಕು ಎನ್ನುವ ಹಿತೈಷಿಗಳ ಮಾತನ್ನೂ ಮೀರುವಂತಿಲ್ಲ.

ಈಗ ಬಂದ ಸುದ್ದಿ ಪ್ರಕಾರ ನ್ಯಾಯಮೂರ್ತಿ ಚಂದ್ರಶೇಖರಯ್ಯ ನಿವೃತ್ತಿಯಾಗಿದಾರೆ. ಹೊಸತಾಗಿ ನ್ಯಾಯಮೂರ್ತಿ ಕೆ. ರಾಮಣ್ಣ ಅವರು ನೇಮಕಗೊಂಡಿದ್ದಾರೆ. ಅಂತೂ ಗ್ರಾಹಕರು ಬಚಾವ್ ಅನಿಸಿತು. 17,130 ರಲ್ಲಿ 16,710 ಸಮಸ್ಯೆಗಳ ಪರಿಹರಿಸಿದ್ದೇವೆ ಅಂದರೆ ಶೇಕಡಾ 97 ಅನ್ನುತ್ತಾರೆ ನಿವೃತ್ತಿಯ ದಿನ ನ್ಯಾಯಮೂರ್ತಿ ಚಂದ್ರಶೇಖರಯ್ಯ. ಎಲ್ಲವನ್ನೂ ನನ್ನ ಕಡತ ವಿಲೆವಾರಿ ಮಾಡಿದಂತೆ ಮಾಡಿದ್ದಾರೆ ಅಂತಾದರೆ  ....................  ಇಂತಹ ತೀರ್ಪುಗಳಿಂದ ರಿಲಯನ್ಸ್ ನಂತಹ   ಕಂಪೇನಿಗಳು ಕೋಟಿಗಟ್ಟಲೆ   ಬಾಚಿ ಮೂರು ಸಾವಿರ ಪರಿಹಾರ ಕೊಟ್ಟು ನಿರಾಂತಕವಾಗಿರುತ್ತದೆ.

ಗ್ರಾಹಕ ನ್ಯಾಯಾಲಯ ಈ   ರೀತಿಯ  ದೋರಣೆ ಹೊಂದಿದ್ದರೆ  ನಾವು  ಗ್ರಾಹಕ  ನ್ಯಾಯಾಲಯ ಬಾಗಿಲು  ತಟ್ಟುವುದೇ  ಮೂರ್ಖತನವಾಗುತ್ತದೆ.    ನ್ಯಾಯ  ಬಹಳ  ದುಬಾರಿಯೆನಿಸುತ್ತದೆ.   ಈ ಬಗೆಗೆ   ನಾವು  ಮಾಡುವ  ಖರ್ಚಿನ  ಶೇಕಡ ಹದಿನೈದು   ಸಹಾ  ತುಂಬಿ ಕೊಡದ   ಇವರ  ಚಿಲ್ಲರೆ  ಪರಿಹಾರ ಯಾವ  ಪ್ರಯೋಜನವೂ  ಇಲ್ಲ.  ಇದರಿಂದ  ಜನರಿಗೆ  ತಪ್ಪು  ಸಂದೇಶ  ರವಾನೆಯಾಗುತ್ತದೆಯೆಂದು  ಅವರು  ಅರ್ಥ ಮಾಡಿಕೊಳ್ಳಬೇಕು.   ಬಿಡಿ.  ಅವರಿಗೆ  ಸರಕಾರದಿಂದ  ಸಂಬಳ  ಬರುತ್ತದೆ.
 
ಇಪ್ಪತೈದು ವರ್ಷ ಹಿಂದೆ ಬೆಂಗಳೂರಿನಲ್ಲೊಂದು ಸಂಚಾರಿ ಪೋಲಿಸರಿಂದ ನನ್ನ ಮೇಲೊಂದು ಚಿಲ್ಲರೆ ಕೇಸ್. ಆಗ ಒಬ್ಬ ಸಹೃದಯಿ ಪೋಲಿಸ್ ಪೇದೆ ಹೇಳಿದ ಮಾತು  – ನ್ಯಾಯಾಲಯ ತೀರ್ಮಾನಿಸಿದ ದಂಡವನ್ನು  ತೆಪ್ಪಗೆ ಕಟ್ಟಿ  ಹೋಗಿ. ನೀವು ತಪ್ಪು  ಮಾಡದೆಯೇ  ಇರಬಹುದು.  ಹಾಗೆಂದು  Contest ಮಾಡಿದರೆ ನಮಗೇನು ಕಷ್ಟವಿಲ್ಲ. ಸರಕಾರ ನಮ್ಮ ಓಡಾಟಕ್ಕೆ ಸಂಬಳ ಕೊಡುತ್ತದೆ. ನೀವು  ಮಾತ್ರ  ಜೇಬಿನಿಂದ   ನಿಮ್ಮ  ಹಣ   ಖರ್ಚು ಮಾಡಬೇಕು.

No comments: