ಇತ್ತೀಚೆಗೆ ಬೆಲೆ ಏರಿಕೆ ಪ್ರಬಾವ ಎಲ್ಲ ವಲಯದಲ್ಲೂ ಕಂಡುಬರುತ್ತಿದೆ. ಆಡಳಿತ ಪಕ್ಷದ ಪ್ರಣಾಳಿಕೆ ಪ್ರಕಾರ ಹಾಲಿನ ಬೆಲೆ ಎರಡು ರೂಪಾಯಿ ಏರಿಕೆಯ ಆಶ್ವಾಸನೆ ನೀಡಲಾಗಿತ್ತು. ಬಳಕೆದಾರರಿಗೆ ಈ ಹೊರೆ ವರ್ಗಾಯಿಸಲು ಚಿಂತನೆ ನಡೆಸಿ ಅವರು ಬೇಸರ ಪಟ್ಟುಕೊಂಡಾರು ಎಂದು ತಡೆ ಹಿಡಿಯಲಾಗಿದೆ. ಈ ಏರಿಕೆ ಆಡಳಿತ ಪಕ್ಷದ ಕೊಡುಗೆಯಲ್ಲ ಏರುತ್ತಿರುವ ಸಾಕಣೆ ಖರ್ಚನ್ನು ಸರಿದೂಗಿಸುವ ರೈತನ ಹಕ್ಕಿನ ಹಣ. ಈಗ ಹಾಲು ಉತ್ಪಾದನೆಯ ಖರ್ಚು ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ರೈತನ ಕೊಬ್ಬು ಕರಗುತ್ತಲೇ ಇದೆ.
ಪ್ರಪಂಚದ ಉಳಿದೆಡೆ ಹಾಲು ಎಷ್ಟಕ್ಕೆ ಮಾರಲ್ಪಡುತ್ತದೆ ಎಂದು ಗಮನಿಸಲು ಈಗ ಯಡ್ಯುರಪ್ಪನಿರುವ ಅಮೇರಿಕದಲ್ಲಿ ಗ್ರಾಹಕರಿಗೆ ಹಾಲಿನ ಬೆಲೆ ಸುಮಾರು ಲೀಟರೊಂದಕ್ಕೆ ನಲುವತ್ತು ರೂಪಾಯಿ ದಾಟಿದೆ ಎಂಬ ವಿಚಾರ ಕಂಡು ಬಂತು .
ನಾನೂ ಗೊಬ್ಬರದ ಆಸೆಯಲ್ಲಿ ದನ ಸಾಕುವ ಮತ್ತು ನಮ್ಮೂರ ಹಾಲಿನ ಸೊಸೈಟಿಗೆ ಹಾಲು ಹಾಕುವ ಮೊರ್ಖ. ಅವರು ಮಾರುವ ಹಿಂಡಿಗಳನ್ನು ಮಾತ್ರ ಬಳಸುವುದಿಲ್ಲ. ಪಟ್ಟಣದಲ್ಲಿ ಸಿಗುವ ಸಿದ್ದ ಪಶು ಆಹಾರವನ್ನು ನಾನು ತಿರಸ್ಕರಿಸುವುದಕ್ಕೆ ಕಾರಣ ವಿಷಪೊರಿತ ಹತ್ತಿ ಬೀಜದ ಹಿಂಡಿ ಹಾಗೂ ಅಗ್ಗದ ಪ್ರೊಟೀನ್ ಎಂದು ಬಳಸುವ ಯುರಿಯಾ. ಇವೆರಡನ್ನೂ ನಮ್ಮಲ್ಲಿ ಪಶು ಆಹಾರದಲ್ಲಿ ದಾರಾಳ ಬಳಸುತ್ತಾರೆ. ಹನ್ನೆರಡು ವರ್ಷಗಳಿಂದ ನಾನು ರಾಗಿ ಹುಡಿ, ಜೋಳದ ಹುಡಿ, ಗೋದಿ ಬೂಸ, ಎಳ್ಳಿಂಡಿ ಇತ್ಯಾದಿಗಳನ್ನು ತಂದು ಮಿಶ್ರಣ ಮಾಡಿ ಬಳಸುತ್ತೇವೆ. ಎಂಟಾಣೆಯಿಂದ ಒಂದು ರೊಪಾಯಿ ಕಿಲೋವೊಂದಕ್ಕೆ ಹೆಚ್ಚುವರಿ ಖರ್ಚು. ಸಾಕಣೆ ದುಬಾರಿಯಾದರೂ ಹಸುಗಳ ಆರೋಗ್ಯದ ಮಟ್ಟಿಗೆ ಉತ್ತಮ ಫಲಿತಾಂಶ.
ಎರಡು ವರ್ಷ ಹಿಂದಿನ ವರೆಗೆ ಹಲವು ವರ್ಷಗಳ ಕಾಲ ನನ್ನಲ್ಲಿ ಹಿಂಡಿ ಮಿಶ್ರಣಕ್ಕೆ ಅಂದಾಜು ಎಂಟು ರೂಪಾಯಿ ತಗಲುತಿದ್ದು ಈಗ ಇದು ಹದಿಮೂರರನ್ನು ದಾಟಿದೆ. ಒಂದು ಲೀಟರ್ ಹಾಲಿಗೆ ಸರಿಸುಮಾರು ಅರ್ಧ ಕಿಲೊ ಹಿಂಡಿ ಅಗತ್ಯವೆಂದು ಪರಿಗಣಿಸಬಹುದು. ಹಾಗಾಗಿ ಈಗಿನ ಲೀಟರೊಂದಕ್ಕೆ ಎರಡು ರೂಪಾಯಿ ಹೆಚ್ಚಳ ಹಿಂಡಿಯ ಕ್ರಯ ಹೆಚ್ಚಳವನ್ನೂ ತುಂಬಿಕೊಡದು. ಆದರೆ ಹಸು ಸಾಕಣೆಗೆ ಇತರ ಖರ್ಚುಗಳೂ ಇರುತ್ತವೆ. ಕೆಲಸಗಾರರನ್ನು ಹಳ್ಳಿಗಳಲ್ಲಿ ಹುಡುಕುವುದೇ ಸಾಹಸ.
ಒಂದು ವರ್ಷ ಹಿಂದೆ ಬಾರತದಲ್ಲಿ ಬಹಳ ಬದಲಾವಣೆಗಳಾಗುತ್ತಿವೆ ಎನ್ನುವ ಲೇಖನ ಹಿಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಬರೆದ ಅಮೇರಿಕದಲ್ಲಿ ರಾಯಬಾರಿ ಕಛೇರಿಯ ಅಧಿಕಾರಿಗೆ ನಾನು ಪ್ರಯೋಜನವಾಗುತ್ತಿರುವುದು ಪಟ್ಟಣಗಳಿಗೆ ಎಂದು ಅವರ ಬರಹದ ತಿರುಳನ್ನು ಪ್ರಶ್ನಿಸಿ ಪತ್ರಿಸಿದ್ದೆ. ಅದಕ್ಕವರು ಬದಲಾವಣೆಯನ್ನು ಅಮುಲ್ ಮಾದರಿ ಹಾಲಿನ ಕ್ರಾಂತಿ ಹಳ್ಳಿಗಳ ತಲಪಿದೆ ಎಂದು ಉದಾಹರಿಸಿ ಉತ್ತರಿಸಿದರು. ಪ್ರತ್ಯುತ್ತರವಾಗಿ ಹಾಲಿನ ಸೊಸೈಟಿಯಿಂದ ಪ್ರಯೋಜನ ಪಟ್ಟಣಿಗರಿಗೆ ಬೆಳಗಿನ ಲೋಟದ ಚಾ-ಕ್ಕೆ ಬೆರೆಸಲು ಕಡಿಮೆ ದರದ ಹಾಲು ಸಿಗಲು ಹೊರತು ಹಳ್ಳಿಗರ ಉದ್ದಾರಕ್ಕೆ ಖಂಡಿತ ಅಲ್ಲವೆಂದಿದ್ದೆ.
ಆಹಾರವನ್ನಾಗಿ ಇದೇ ಹಿಂಡಿ ಉಪಯೋಗಿಸಿ ಸಾಕುವ ಕೋಳಿಗಳ ಉತ್ಪನ್ನಗಳಿಗೆ ಜಾಗತಿಕ ವಿದ್ಯಮಾನಗಳ ಅನುಸರಿಸಿ ಶೇಕಡಾ ಐವತ್ತರಷ್ಟು ಕ್ರಯ ಏರಿದೆ. ಆದರೆ ಹಾಲಿಗೆ ಶೇಕಡಾ ಹದಿನೈದರ ಇನ್ನೂ ಕಾರ್ಯಗತವಾಗದ ಆಶ್ವಾಸನೆ ಮಾತ್ರ. ಮುಖ್ಯವಾದ ಕಾರಣ ಹಾಲು ಪೊರೈಕೆ ನಿಲ್ಲಿಸಿ ಪ್ರತಿಭಟಿಸುವ ಚೈತನ್ಯ ಮತ್ತು ಒಗ್ಗಟ್ಟು ಹೈನುಗಾರರಲ್ಲಿ ಇಲ್ಲ. ನಮ್ಮಲ್ಲಿ ರೈತರ ಸೇವೆ ಹೆಸರಿನಲ್ಲಿ ಹಾಲಿನ ಸೊಸೈಟಿ ಎಂಬ ಸರಕಾರಿ ಕೃಪಾಪೋಷಿತ ಸಂಸ್ಥೆ ಹಾಲಿನ ಮಾರುಕಟ್ಟೆಯಲ್ಲಿ ಸ್ಪರ್ದೆಯನ್ನು ಅವಕಾಶವನ್ನೀಯದೆ ರೈತರ ಶೋಷಣೆ ಮಾಡುತ್ತದೆ.
ಜರ್ಮನಿಯಲ್ಲಿ ಇಂದು ಹಾಲಿಗಿಂತ ಬೀರು ಅಗ್ಗ. ನಮ್ಮಲ್ಲಿ ಕೋಲ ಎಂಬ ಬಣ್ಣದ ನೀರು ಸಹಾ ಹಾಲಿಗಿಂತಲೂ ದುಬಾರಿ. ಇತರ ದೇಶಗಳ ಸ್ಪರ್ದಾತ್ಮಕ ಮಾರುಕಟ್ಟೆಯಲ್ಲಿ ಹಾಲಿನ ಬೆಲೆ ಹಾಲೂಡುವ ದನಗಳ ಸಂಖ್ಯೆಯನ್ನು ನಿರ್ದರಿಸುತ್ತದೆ. ಮಾಂಸದ ಬೆಲೆ ಏರಿದರೆ ತತ್ಕಾಲಿಕವಾಗಿ ಹಾಲಿನ ಪೊರೈಕೆ ಕಡಿಮೆಯಾಗುವುದುಂಟು. ನಮ್ಮಲ್ಲಿರುವಂತೆ ಹನ್ನೆರಡು ರೂಪಾಯಿಗೆ ಮಾರಲು ರಾಜಕೀಯ ಕಾರಣಗಳಿಂದಾಗಿ ರೈತನ ಮೇಲೆ ಒತ್ತಡ ಇದ್ದರೆ ಹಾಲು ಅಲ್ಲಿನ ಮಾರುಕಟ್ಟೆಯಿಂದಲೇ ಮಾಯವಾಗುವುದು ಖಚಿತ.
Monday, September 01, 2008
Subscribe to:
Post Comments (Atom)
3 comments:
ಭಟ್ರೆ
ಉತ್ತಮ ಲೇಖನ. ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಇದು ಪ್ರಕಟವಾಗಬೇಕಾಗಿತ್ತು. ಆದರೆ ಅವುಕ್ಕೆ ಇಂಥಹ ವಿಚಾರಗಳನ್ನು ಹಾಕಲು ಪುರುಸೊತ್ತಿಲ್ಲ.
krushikana nijavada bavaneyannu teredittiddiri. shreeshaum heluvante rajya mattada patrikege kalisi.
ಪ್ರಿಯ ಶೀಶಂ ಮತ್ತು ಜಗದೀಶ ಶರ್ಮರೇ,
ಪ್ರೀತಿ ಇಟ್ಟು ನೀವು ಬರೆದ ಪ್ರತಿಕ್ರಿಯೆಗೆ ದನ್ಯವಾದಗಳು.ನಿಜ. ರಾಜ್ಯ ಮಟ್ಟದ ಪತ್ರಿಕೆಗೆ ಕಳುಹಿಸಬಹುದಾಗಿತ್ತು. ಆದರೆ ಪತ್ರಿಕೆಗಳಿಗೆ ಮಾಹಿತಿ ನಿಖರತೆ ಪ್ರಶ್ನಾತೀತವಾಗಿರ ಬೇಕು. ಬಾಷೆ ಸರಳ ಹಾಗೂ ಸ್ವಚ್ಚವಾಗಿರಬೇಕು. ಸಂಪಾದಕರ ಮರ್ಜಿಗೆ ಅನುಗುಣವಾಗಿರಬೇಕು. ಸಮಯಕ್ಕೆ ಮುಂದಾಗಿ ಇದನ್ನು ತಲಪಿಸಬೇಕು. ಇದು ಮುಮ ಅಮೇರಿಕದಲ್ಲಿ ಇರುವಾಗಲೇ ತಲಪಿ ಪ್ರಕಟವಾದರೆ ಚೆನ್ನ. ಇಷ್ಟೆಲ್ಲ ಅಡಚಣೆಗಳ Computer ಎದುರು ಹೆಚ್ಚು ಹೊತ್ತು ಕೂರಲೂ ಸಹಾ ಸಾದ್ಯವಾಗದ ನನ್ನ ದುರ್ಬಲ ದೇಹ ದಾಟಲು ಸಾದ್ಯವಾಗುವುದಿಲ್ಲ.
ಉಳಿದೆಲ್ಲ ಕೃಷಿಯುತ್ಪನಗಳ ಬೆಲೆ ಏರಿದರೂ ಹಾಲಿಗೆ ಖರೀಧಿ ಬೆಲೆ ಹನ್ನೆರಡೇ ರೂಪಾಯಿ. ಇಂದು ಹಾಲು ಸಂಗ್ರಹ ಮತ್ತು ವಿತರಣೆ ಸಹಕಾರಿ ಸಂಘಗಳ ಮೇಲಿನ ಸರಕಾರಿ ಕಪಿ ಮುಷ್ಟಿಯಿಂದಾಗಿ ರೈತರು ಸೊರಗುತ್ತಿದ್ದಾರೆ.
ವಂದನೆಗೆಳೊಂದಿಗೆ
ಗೋವಿಂದ
Post a Comment