Friday, April 03, 2009

ಮಳೆ ಕೊಯಿಲು ಅಮೇರಿಕದಲ್ಲಿ ಅಪರಾಧ

ಹೌದು. ಅಮೇರಿಕದಲ್ಲಿ ಕೆಲವು ರಾಜ್ಯಗಳಲ್ಲಿ ಮಳೆ ನೀರು ಕೊಯಿಲು ಕಾನೂನು ಬಾಹಿರ. ಹೊಳೆ ನೀರಿಗೆ ದೊಣ್ಣೆ ನಾಯಕ ಎನ್ನುವ ಅಮೇರಿಕದ ಕೆಲವು ರಾಜ್ಯಗಳ ಕಾನೂನುಗಳು ಭಲೇ ಮಜವಾಗಿದೆ. ಹಾಗಾಗಿ ಹಂಚಿಕೊಳ್ಳೋಣ ಅನ್ನಿಸಿತು


ಕೊಲರಾಡೊ ರಾಜ್ಯದಲ್ಲಿ ಪ್ರತಿ ಮಳೆಗೂ Kris Holstrom ಅಪರಾಧಿಯಾಗುತ್ತಾರೆ. ಕಾನೂನು ಉಲ್ಲಂಗಿಸಲು ಅವರು 200 ಲೀಟರ್ ಬಾರಲುಗಳನ್ನು ಉಪಯೋಗಿಸುತ್ತಾರೆ. ಈ ಪಾತ್ರೆಗಳಲ್ಲಿ ಹಿಡಿದ ಕರಗುವ ಹಿಮ ಹಾಗೂ ಮಳೆನೀರಿನಿಂದ ಅವರ ಪುಟ್ಟ ತರಕಾರಿ ತೋಟಕ್ಕೆ ನೀರಾವರಿ.

ಕ್ರಿಸ್ ಅವರು ಮಳೆಗೆ ಪಾತ್ರೆ ಹಿಡಿಯುವುದು ಜಗತ್ತಿನ ಹಲವೆಡೆ ಪರಿಸರವಾದಿಗಳು ಅನುಸರಿಸುತ್ತಿರುವ ಪ್ರಾಚೀನ ಸಂಪ್ರದಾಯ. ದೊರೆಯುವ ಮಳೆನೀರು ಮತ್ತು ಹಿಡಿಯುವ ಪಾತ್ರೆ ಅನುಸರಿಸಿ ಅವರವರ ಸಾಮರ್ಥ್ಯ ಅಗತ್ಯಗಳಿಗೆ ಹೊಂದಿಕೊಂಡು ಹಿಡಿಯುತ್ತಾರೆ. ಬಿಸಿಲಿಗೆ ಆವಿಯಾಗುವುವ ಅಡಚಣೆಯೊಂದಿಗೆ ಈ ತರ್ಲೆ ಸರಕಾರಿ ಕಾನೂನುಗಳು ತಡೆಯೊಡ್ಡುತ್ತವೆ.

ರಾಜ್ಯದ ಕಾನೂನು ಪ್ರಕಾರ ಮಳೆ ನೀರು ಅವರದಲ್ಲ. ನೂರು ವರ್ಷಗಳ ಹಿಂದೆ  ಹೊಳೆ ನೀರಿನ ಹಕ್ಕು ಹಂಚುವಾಗ ಪಡಕೊಂಡವರಿಗೆ ಸೇರಿದ್ದು. ಕ್ರಿಸ್ ಅವರಿಗೆ ರಾಜ್ಯದ ಕಾನೂನಿನ ಬಗೆಗೆ ಅವರಿಗೆ ಗುಮಾನಿ ಇತ್ತು. ಕಳೆದ ವರ್ಷ ಮಳೆ ನೀರು ಕೊಯಿಲಿನ ಪಾಠ ಮಾಡುವಾಗ ಸಂಬದ ಪಟ್ಟ ಅಧಿಕಾರಿಗಳ ಸಂಪರ್ಕಿಸಿ ಕೇಳಿದರು. ಮಳೆ ನೀರು ಕೊಯಿಲು ಈ ರಾಜ್ಯದಲ್ಲಿ ಕಾನೂನು ಬಾಹಿರ ಎನ್ನುವ ಉತ್ತರ ಸಿಕ್ಕಿದರೂ ಅವರಿಗೆ ದಂಡ ವಿಧಿಸುವ ಸಾದ್ಯತೆ ಇಲ್ಲವಂತೆ.

ಪ್ರಪಂಚದ ಎಲ್ಲೆಡೆ ಅಧಿಕಾರಿಗಳ ಧಿಮಾಕು ಒಂದೇ ತೆರನಾದುದು. ನೂರು ವರ್ಷ ಹಿಂದಿನ ಕಡತ ತೆಗೆಯುತ್ತಾರೆ. ಎಲ್ಲವೂ ಸಣ್ಣಮಟ್ಟಿನಲ್ಲಿಯೇ . ಪ್ರಾರಂಬ. ಪ್ರತಿ ಹನಿಯೂ ಅಮೂಲ್ಯ ಮತ್ತು ಕಣಿಯಿಂದ ತೋಡಿಗೆ, ತೋಡಿನಿಂದ ನದಿಗೆ ಎಂಬಂತೆ ನದಿಯ ಹರಿವಿಗೆ ಸಹಾಯಕ. ಒಬ್ಬರು ಮಳೆನೀರು ಹಿಡಿಯಲು ಸುರುವಿಟ್ಟರೆ ಇನ್ಯಾರಿಗೋ ಸೇರಿದ ಸೊತ್ತನ್ನು ಅಪಹರಿಸಿದಂತೆ ಅನ್ನುತ್ತಾರೆ ಅಲ್ಲಿನ ಸಂಬಂದ ಪಟ್ಟ ಅಧಿಕಾರಿಗಳು. ಕೊಲರಾಡೋ ರಾಜ್ಯದ ಅಧಿಕಾರಿಗಳ ಮಟ್ಟಿಗೆ ಸಂಗ್ರಹಿಸಿದ ಮಳೆ ನೀರು ಮಲೀನ ನೀರು. ಹುಲ್ಲು ಹಾಸು ಶೌಚಾಲಯದಲ್ಲಿ ಫ್ಲಶ್ ಮಾಡಲಷ್ಟೇ ಒಕೆ ಎನ್ನುವುದು ಅವರ ಹೇಳಿಕೆ.

ಕುಶಿಯ ವಿಚಾರ ಅಂದರೆ ಅಮೇರಿಕದಲ್ಲಿ ದೇವೆ ಗೌಡರಿಗೂ ನಮ್ಮಂತಹ ಜನಸಾಮಾನ್ಯರಿಗೂ ಒಂದೇ ಕಾನೂನು. ಅಲ್ಲಿನ ರಾಜ್ಯ ಮಟ್ಟದ ರಾಜಕಾರಣಿ ಶಾಸಕರಾದ ಕ್ರಿಸ್ ಹೋಮರ್ ಪರಿಸರ ಸ್ನೇಹಿ ಮನೆ ಕಟ್ಟಿದರು. ಪೂರ್ತಿ ಸೌರ ಶಕ್ತಿಯಲ್ಲಿ ನಿರ್ವಹಿಸುವ ಈ ಮನೆಯಲ್ಲಿ ಮಳೆ ನೀರು ಕೊಯಿಲು ಅಳವಡಿಸಲು ಸಾದ್ಯವಾಗಲಿಲ್ಲ. ಬಿದ್ದ ಮಳೆಯಲ್ಲಿ ಶೇಕಡಾ 97 ಇಂಗುತ್ತದೆ ಹೊರತು ಕಾಲುವೆಗೆ ಹರಿಯುವುದಿಲ್ಲ ಎನ್ನುವ ಮಾಹಿತಿಯೊಂದಿಗೆ ಕಳೆದ ವರ್ಷ ಮಳೆ ನೀರು ಕೊಯಿಲು ಕಾನೂನು   ರಾಜ್ಯದ ಶಾಸನ ಸಭೆಯಲ್ಲಿ  ಮಂಡಿಸಿದರೂ ಅನುಮೋಧನೆ ದೊರಕದೆ ಸೋತರು. ಈ ಸರಳ ವ್ಯವಸ್ಥೆ ಕಾನೂನು ಬಾಹಿರ ಎನ್ನಲು ಆಶ್ಚರ್ಯವಾಗುತ್ತದೆ ಎಂದವರು ಹೇಳುತ್ತಾರೆ.

ಅಂದ ಹಾಗೆ ಅಮೇರಿಕದ ಟೆಕ್ಸಾಸ್ ಪ್ರಾಂತ್ಯದಲ್ಲಿ ಒಬ್ಬರು ಮಳೆ ನೀರನ್ನು ಸಂಗ್ರಹಿಸಿ ಮೋಡದ ತಾಜಾ ಪಾನಿಯ ಎಂದು ಮಾರುತ್ತಾರಂತೆ. ಶ್ರೀ ರಿಚರ್ಡ್ ಅಮೇರಿಕದ ಪ್ರಥಮ ಮಳೆ ನೀರು ಬಾಟಲಿಗೆ ತುಂಬಿಸುವ ಮಾರಾಟಗಾರ.

http://www.truthout.org/031909EA

1 comment:

Govinda Nelyaru said...

ಅಶೋಕವರ್ಧನರು athree.wordpress.com ಪ್ರೀತಿಯಿಂದ ಕಳುಹಿಸಿದ ಪ್ರತಿಕ್ರಿಯೆ

ಪ್ರಿಯ ಗೋವಿಂದಾ
ಹೊಳೆ ನೀರಿಗೆ ದೊಣ್ಣೇ ನಾಯಕನ ಅಪ್ಪಣೆಯೇ ಎನ್ನುವಲ್ಲಿ "ಅಗತ್ಯವಿಲ್ಲ" ಎನ್ನುವುದು ಅಧ್ಯಾಹಾರ. ಆದರೆ ಈ ಲೇಖನ ಅಪ್ಪಣೆ "ಪಡೆಯಬೇಕು" ಎನ್ನುವಂತಿದೆ. ಬೀರ್ಬಲನನ್ನು ಸೋಲಿಸಲು ಅಕ್ಬರ್ ಹುಟ್ಟಾ ಲಂಚಕೋರನೊಬ್ಬನಿಗೆ ಸಮುದ್ರದ ಅಲೆಗಳನ್ನು ಲೆಕ್ಕ ಹಾಕುವ ಕೆಲಸ ಕೊಟ್ಟನಂತೆ. ಮತ್ತೆ ಮರೆಯಲ್ಲಿ ನಿಂತು ನೋಡುವಾಗ ಈತ ನಾವಿಕರನ್ನು ಹಿಡಿದು ರಾಜಾಜ್ಞೆಗೆ ದಕ್ಕೆ ಬರುವಂತೆ ಅಲೆಗಳನ್ನು ಹೆಚ್ಚುಕಡಮೆ ಮಾಡುವ ಅಪರಾಧದ ಮೇಲೆ ವ್ಯಾಜ್ಯ ಹೂಡುವುದಾಗಿ ಬೆದರಿಸಿ ಲಂಚ ಹೊಡೆಯುವುದು ಕಂಡನಂತೆ! ಲಂಚದ ಬಗ್ಗೆ ಇರುವ ಸಾಮಾನ್ಯಿಕರಣ ಮೀರಿ ನೋಡುವಾಗ ಸುರಿಯುವ ಮಳೆ ಮಾತ್ರವಲ್ಲ, ಹರಿಯುವ ನೀರು ಮಾತ್ರ ಅಲ್ಲ. ಇದ್ದಲ್ಲೇ ತುಳುಕುವ ಅಲೆಗೂ ಶಾಸನ ಬಾಧ್ಯತೆ ತರಬಹುದು ಎಂದೂ ಕಾಣಿಸಿದ್ದು ವಿಶೇಷ! ಯಾರಿಗ್ಗೊತ್ತು, ನಾಳೆ ನಮ್ಮಲ್ಲೂ ನೀರು ಹಿಡಿದುಕೊಂಡದ್ದಕ್ಕೆ ಅಥವಾ ನಮ್ಮಲ್ಲೆ ಇಂಗುವಂತೆ ಮಾಡಿದ್ದಕ್ಕೆ `ಜಲಾನಯನ ಪ್ರದೇಶ ವ್ಯತ್ಯಸ್ತಗೊಳಿಸಿದ' ಹೆಸರಿನಲ್ಲಿ ದಂಡ ಬಿದ್ದರೆ ಆಶ್ಚರ್ಯವಿಲ್ಲ. ಪ್ರತಿ ಅಂಗಳಕ್ಕೂ ಮಳೆ ಮಾಪನ ಯಂತ್ರ ಇಟ್ಟು ಪಡೆದ ಮಳೆನೀರಿಗೆ ಬಿಲ್ಲು ಬರುವುದು ಅಸಂಭವವಲ್ಲ.
ಅಶೋಕವರ್ಧನ
--------
Athree Book Center
+91-824-2425161
athree.wordpress.com