Tuesday, April 07, 2009

ವಿರೂಪಗೊಂಡ ಲೆನಿನ್ ಹಾಗೂ ಮಹಿಷಾಸುರ ವಿಗ್ರಹಗಳು

ಎಪ್ರಿಲ್ ಒಂದರ ಆಚರಣೆ ಎಂದರೆ ಅವರಿವರ ಮೂರ್ಖನನ್ನಾಗಿಸುವ ದಿನ. ಕೆಲವೊಮ್ಮೆ ತಮಾಷೆ ಮಾತ್ರವಲ್ಲ ಅತಿರೇಖಕ್ಕೂ ಹೋಗುವುದುಂಟು. ಮೊನ್ನೆ ರಶ್ಯದಲ್ಲಿ ನಡೆದ ಕಿತಾಪತಿ ನನ್ನ ಗಮನ ಸೆಳೆಯಿತು. ಇಂತಹ ಪೋಕರಿ ಕಿತಾಪತಿಗಳು ಅಲ್ಲಿ ಮಾಮೂಲಿಯಂತೆ. ನಮ್ಮಲ್ಲಿ ಹಳ್ಳಿಗಳಲ್ಲಿ ಇಂತಹ ಕಾರುಬಾರು ಶಿವರಾತ್ರಿಯಂದು ನಡೆಯುವುದು ಸಾಮಾನ್ಯ.


ಸೈಂಟ್ ಪೀಟರ್ಸ್ ಬರ್ಗ್ ಪಟ್ಟಣದ ಪುಂಡು ಹುಡುಗರು ಮುನ್ನೂರು ಗ್ರಾಂ ಸ್ಪೋಟಕವನ್ನು ಎಲ್ಲಿಂದಲೋ ಸಂಪಾದಿಸಿದರು. ಮುಖ್ಯ ರೈಲು ನಿಲ್ದಾಣದ ಪಕ್ಕದಲ್ಲಿರುವ ಉಕ್ಕಿನ ಲೆನಿನ್ ಪ್ರತಿಮೆಗೆ ಇದನ್ನು ಅಳವಡಿಸಿ ಬೆಳಗಿನ ಜಾವ ನಾಲ್ಕು ಘಂಟೆಗೆ ಸ್ಪೋಟಿಸಿ ಎಪ್ರಿಲ್ ಒಂದರ ಸ್ವಾಗತ ಕೋರಿದರು. ಅಂದು ಬೆಳಗ್ಗೆ ರೈಲು ನಿಲ್ದಾಣದ ಪ್ರಯಾಣಿಕರೆಲ್ಲ ಈ ತೂತಾದ ಹೊಸ ರೂಪದ ಲೆನಿನ್ ಪ್ರತಿಮೆಯನ್ನು ಕಂಡರು.

ಇದನ್ನು ಓದಿದಾಗ ಮನಸ್ಸು ನಲುವತ್ತು ವರ್ಷ ಹಿಂದಕ್ಕೋಡಿತು. ಇದಕ್ಕೆ ಹೋಲುವಂತಹ ಕಿತಾಪತಿ ನನ್ನನ್ನು ಅತಿಯಾದ ಮುಜುಗರಕ್ಕೆ ಒಳಮಾಡಿತ್ತು. .
                                                                
ನಾನಾಗ ಮೈಸೂರಿನ ವಸತಿ ಶಾಲೆಯೊಂದರಲ್ಲಿ ಐದನೇಯ ತರಗತಿಯ ವಿಧ್ಯಾರ್ಥಿ. ನಮ್ಮನ್ನು ಸುತ್ತು ಮುತ್ತಲಿನ ಪ್ರವಾಸಕ್ಕೆ ಕರೆದೊಯ್ದಿದ್ದರು. ಚಾಮುಂಡಿ ಬೆಟ್ಟದಲ್ಲಿ ನಮ್ಮ ಬಸ್ಸು ಮಹಿಷಾಸುರ ವಿಗ್ರಹದ ಪಕ್ಕದಲ್ಲಿ ನಿಂತಿತ್ತು. ಆಗ ವಿಗ್ರಹದ ಸುತ್ತು ಆವರಣ ಬೇಲಿ ಇರಲಿಲ್ಲ. ಬಸ್ಸಿನ ಒಳಗಿನಿಂದ ವಿಗ್ರಹ ನಮ್ಮ ಕೈ ಎಟಕಿನಲ್ಲಿತ್ತು. ನಮ್ಮ ಪುಟ್ಟ ಹುಡುಗರು ಏನೋ ಸ್ವಲ್ಪ ಕೈಚಳಕ ತೋರಿಸಿದ್ದರು. ಉಳಿ ಸುತ್ತಿಗೆಯೇನೂ ನಮ್ಮಲ್ಲಿರಲಿಲ್ಲವಾದ ಕಾರಣ ಪರಮಾವದಿ ಎಂದರೆ ಬಣ್ಣ ಮಾಸಿರಬಹುದು ಹೊರತು ಶಾಶ್ವತ ಹಾನಿಯಾಗಲು ಸಾದ್ಯವಿಲ್ಲ.

ರಜೆಯಲ್ಲಿ ಊರಿಗೆ ಬಂದಾಗ ಸಂಬದಿಕರ ಮನೆಯಲ್ಲಿ ಸಮಪ್ರಾಯದ ಹುಡುಗನಲ್ಲಿ ಈ ಕಥೆ ಹೇಳಿದೆ. ಕಥೆ ದೂರದಲ್ಲಿದ್ದು ಕೇಳಿಸಿಕೊಂಡ ಹಿರಿಯ ಸಂಬಂದಿ दस नंबरि ಗೆ ಸ್ವಲ್ಪ sadism ಮನೋಭಾವ. ನನ್ನಿಂದ ತಲೆಯೇ ಕಡಿದಿದ್ದಾರೆ ಅನ್ನುವಂತಹ ಉತ್ರೇಷ್ಟೆಯ ಮಾತು ಹೊರಡಿಸಿದರು. ತಿಳಿವಳಿಕೆಯಿಲ್ಲದ ಹತ್ತು ವರ್ಷದ ನಾನು ಹಳ್ಳಕ್ಕೆ ಬಿದ್ದೆ. ನಂತರ ಎಲ್ಲರೂ ಸೇರಿ ಅವಮಾನಕರವಾಗಿ ಗೇಲಿ ಮಾಡಿದ್ದು ಮುಖಭಂಗ ಮಾಡಿದ್ದೂ ನನಗೆ ಎಂದೂ ಮರೆಯದ ಕೆಟ್ಟ ಅನುಭವ.

ಕೆಲವು ವರುಷಗಳ ನಂತರ ನಾನಾಗ ದ್ವಿ ಚಕ್ರ ಚಲಾವಣೆ ಸುರು ಮಾಡಿದ್ದೆ. ಅವರು ನನ್ನಲ್ಲಿ ಪಟ್ಟಣದಿಂದ ಬರುವಾಗ ಸಿಗರೇಟು ತರಲು ಹೇಳಿದ್ದರು. ಎರಡು ಮೂರು ಅಂಗಡಿಯಲ್ಲಿ ವಿಚಾರಿಸಿದರೂ ಅವರಿಗೆ ಬೇಕಾದ್ದು ಸಿಕ್ಕಿರಲಿಲ್ಲ. ಬಂದಾಕ್ಷಣ ನಿಮ್ಮ ಸಿಗರೇಟು ಸಿಗಲಿಲ್ಲವೆಂದು ಹೇಳಿ ಚೆನ್ನಾಗಿ ಉಗಿಸಿಕೊಂಡೆ. ಅವರ ಚಟಕ್ಕಾಗಿ ಮಕ್ಕಳಲ್ಲಿ ಸಿಗರೇಟು ತರಿಸುವುದು ತಪ್ಪೆಂದು ಅವರಿಗೆ ಅನಿಸಬೇಕಾಗಿತ್ತು. ಆಗ ಜತೆಯಲ್ಲಿದ್ದ ಪಶು ವೈದ್ಯರು ನನ್ನ ಸಹಾಯಕ್ಕೆ ದಾವಿಸಿ ಅವನು ಸಿಗರೇಟು ಸೇದುವುದಿಲ್ಲ ಎಂದಾಗ दस नंबरि ಮುಖ ಹುಳಿ ಹಿಂಡಿದಂತಾಗಿತ್ತು.

ನಾನು  ಹಲವು  ವರ್ಷಗಳಿಂದ  ಬೇಟಿ ಮಾಡದ   दस नंबरि ಈಗ ಸಿಗರೇಟು ಸೇದುವುದೂ ಇಲ್ಲವಂತೆ  ಮತ್ತು Number Ten ಗುರುತಿನ ಸಿಗರೇಟು ಮಾರುಕಟ್ಟೆಯಲ್ಲಿ ಸಿಗುವುದೂ ಇಲ್ಲ.

No comments: