Sunday, March 29, 2009

ನಾವೂ ವಿದ್ಯುದ್ದೀಪಗಳ ಆರಿಸಿದೆವು.

ನಿನ್ನೆ ರಾತ್ರಿ ನಾವೂ ಒಂದು ಘಂಟೆ ಸರಕಾರಿ ವಿದ್ಯುತ್ ಜಾಲದಿಂದ ಸಂಪರ್ಕ ಕಡಿದುಕೊಂಡೆವು. ಕತ್ತಲಿನಲ್ಲಿ ಕೂರಲಿಲ್ಲ. ಮೇಣದ ಬತ್ತಿ ಉರಿಸಲೂ ಇಲ್ಲ. ಸೌರ ದೀಪಗಳ ಉರಿಸಿದೆವು.

ದೀಪ ಆರಿಸಿ ಲಕ್ಷಾಂತರ ಮೇಣದ ಬತ್ತಿ ಉರಿಸಿದರೂ ವಾತಾವರಣ ಮಲೀನತೆ ಉಂಟಾಗುತ್ತದೆ. ನಮ್ಮಲ್ಲಿ ವಿದ್ಯುತ್ ತಯಾರಿ ಹಿಂದಿರುವ ಮಲೀನತೆ ಬಗೆಗೆ ಖಚಿತವಾದ ಮಾಹಿತಿ ಲಬ್ಯವಾಗದಿದ್ದರೂ ಮೇಣದಬತ್ತಿಯಿಂದ ಸಿಎಫ್ಎಲ್ ಬಳಕೆ ಉತ್ತಮ ಎನಿಸುತ್ತದೆ.

ಅತಿ ಹೆಚ್ಚು ವಿದ್ಯುತ್ ಬೇಡಿಕೆ ಇರುವ ಸಂಜೆ ಏಳರಿಂದ ಒಂಬತ್ತರ ವರೆಗೆ ದಿನವೂ ನನಗೆ ಜಾಲದಿಂದ ಸಂಪರ್ಕ ಕಡಿದುಕೊಳ್ಳುವ ಆಸೆ. ರಾತ್ರಿ ವಿದ್ಯುತ್ ಖಾತರಿ ಪೊರೈಕೆ ಇದ್ದರೆ ಖಂಡಿತ ಮಾಡುತ್ತೇನೆ. ತಾಂತ್ರಿಕ ವೈಫಲ್ಯಗಳಾದರೆ ಗ್ರಾಮೀಣ ಫೀಡರ್ ಗಳನ್ನು ರಾತ್ರಿ ಸರಿಪಡಿಸುವುದಿಲ್ಲ. ಮರುದಿನ ಬೆಳಗ್ಗೆ ಏಳಕ್ಕೆ ವಿದ್ಯುತ್ ಪೊರೈಕೆ. ಹಾಗಾಗಿ ಇರುವ ದಾಸ್ತಾನು ಹೆಚ್ಚಿನ ಬಾಗ ಖಾಲಿ ಮಾಡಿಕೊಳ್ಳುವುದು ಮೂರ್ಖತನ ಎನಿಸುತ್ತದೆ. ಹಾಗೆ ರಾತ್ರಿಯಿಡೀ ವಿದ್ಯುತ್ ಪೊರೈಕೆ ಇದ್ದರೆ ನನಗೆ ಶೇಖರಿಸಿಟ್ಟ ವಿದ್ಯುತ್ ವ್ಯರ್ಥವಾಯಿತಲ್ಲ ಎನ್ನುವ ಬಾವನೆ ದಿನವೂ ಬೆಳಗ್ಗೆ ಆವರಿಸಿಕೊಳ್ಳುತ್ತದೆ.

ಹಗಲು ನಮಗೆ ವಿದ್ಯುತ್ ಕೊರತೆ ಬಾದಿಸುವುದೇ ಇಲ್ಲ. ದಿನಕ್ಕೆ ಆರು ಘಂಟೆಯ ಕಡಿತ ನಮಗೆ ಯಾವುದೇ ಪರಿಣಾಮ ಬೀಳುವುದಿಲ್ಲ. ಈಗ ಇದನ್ನು ನಾನು ಕುಟ್ಟುತ್ತಿರುವುದೂ ಸೂರ್ಯದೇವನ ಕೃಪೆಯಿಂದ. ನಮಗೆ ವಿದ್ಯುತ್ ಮದ್ಯಾಹ್ನದ ನಂತರ.
ನಮ್ಮಲ್ಲಿ ಕೆಲವರು ಉಪವಾಸ ಮಾಡುತ್ತಾರೆ. ಅಂದು ಅನ್ನ ಊಟಮಾಡುವುದು ನಿಶಿದ್ದ. ಇತರ ನಿರ್ಬಂಧ ಇಲ್ಲದ ಕಾರಣ ಗೋದಿ ಇತ್ಯಾದಿಗಳಿಂದ ತಯಾರಿಸಿದ ತಿಂಡಿತಿನಿಸುಗಳನ್ನು ಹಣ್ಣು ಹಂಪಲುಗಳನ್ನು ಹೆಚ್ಚಾಗಿಯೇ ಬಕ್ಷಿಸುತ್ತಾರೆ. ದೀಪ ಆರಿಸುವ ಬಗೆಯೂ ಹೀಗಾದರೆ ಮೊಂಬತ್ತಿ ಉಪಯೋಗ ಹೆಚ್ಚಾದರೆ ಇದರಿಂದ ಯಾವುದೇ ಪ್ರಯೋಜನ ಇರುವುದಿಲ್ಲ.

ಬರುವ  ವರ್ಷ  ಮೇಲ್ಕಾಣಿಸಿದ  ಅಸ್ಟ್ರೇಲಿಯಾದ  ಸಿಡ್ನಿ   ಪಟ್ಟಣದಂತೆ ನಮ್ಮೂರ  ಪಟ್ಟಣಗಳೂ   ದೀಪವಾರಿಸಲಿ  ಎಂದು  ಹಾರೈಸೋಣ. 43 ಲಕ್ಷ  ಜನಸಂಖ್ಯೆಯ  ಈ  ಪಟ್ಟಣದಲ್ಲಿ  ಅರ್ಧಕ್ಕೂ  ಹೆಚ್ಚು  ಜನ  ದೀಪವಾರಿಸಿದ್ದರಂತೆ.   ಜನರಲ್ಲಿ    ಅರಿವು ಮೂಡಿಸಲು   ಈ  ಆಚರಣೆ  ಸಹಾಯಕ. 

ಚಿತ್ರ ಕೃಪೆ : National Geographic Society

Sunday, March 22, 2009

ಅಡಿಕೆ ಹಾಳೆಯ ಬಗೆಗೆ

ಮಾನ್ಯ  ಶ್ರೀವತ್ಸ ಜೋಷಿಯವರು  ಈ ವಾರದ ವಿಜಯ ಕರ್ನಾಟಕದ ಅಂಕಣವನ್ನು    ಅಡಿಕೆ ಹಾಳೆಯಲ್ಲೇ ಉಣಬಡಿಸಿದ್ದಾರೆ. ಒಂದಷ್ಟು ಕಡೆ ಅಡಿಕೆ ಹಾಳೆ ಹಿಡಿದುಕೊಂಡು ಓಡಾಡಿದ ನನ್ನನ್ನೂ ಉಲ್ಲೇಖಿಸಿದ್ದಾರೆ. Thank you, Mr Srivathsa Joshi.

http://www.vijaykarnatakaepaper.com/epaper/pdf/2009/03/22/20090322a_008101001.jpg

ಅಡಿಕೆ ಹಾಳೆಗೆ ವಿಶ್ವ ಮಟ್ಟದ ಪ್ರಚಾರ ಸಿಗುವುದು ಸ್ವಾಗತಾರ್ಹ. ಆದರೆ ಈಗ ಹೆಚ್ಚಿನ ಕೃಷಿಕರಿಗೆ ಇಂದಿನ ಕೂಲಿಯಾಳುಗಳ ಕೊರತೆಯಿಂದಾಗಿ ಹಾಳೆಯನ್ನು ಬಿಡಿ ಅಡಿಕೆಯನ್ನು ತೋಟದಿಂದ ಮನೆಗೆ ತರುವುದೇ ಸಾಹಸ.


ಅಡಿಕೆ ಕೊಯಿಲಾದ ನಂತರ ಕನಿಷ್ಟ ಮೂವತ್ತು ಬಿಸಿಲು ತೋರಿಸಿ ಒಳ ಹಾಕಿದರೆ ನಾವು ಗೆದ್ದಂತೆ. ಒಂದೆಡೆ ವಿಪರೀತ ಸೆಕೆಯೊಂದಿಗೆ ವಿದ್ಯುತ್ ಕಣ್ಣುಮುಚ್ಚಾಲೆ, ನೀರಿನ ಪರದಾಟ. ಈಗೆಲ್ಲ   ಸಂಜೆಗಾಗುವಾಗ ದೂರದಲ್ಲಿ ಗುಡುಗು ಕೇಳಿದರೆ ಅಂಗಳದಲ್ಲಿರುವ ಅಡಿಕೆ ನೆನಪಿಸಿಕೊಂಡ ನಮ್ಮ ಎದೆ ಬಡಿತ ಪಕ್ಕದಲ್ಲಿರುವವರಿಗೂ ಕೇಳಿಸುತ್ತದೆ. ನಮ್ಮಲ್ಲಂತೂ ಬಾಕಿಯಾದ ಕೆಲಸದ ರಾಶಿ ನೋಡುವಾಗ ಮೂರ್ಛೆ  ಹೋಗುವುದು ಮಾತ್ರ ಬಾಕಿ. Paralysis by analysis ಅಂತಾರಲ್ಲ ಹಾಗೆ.   ಹಾಳೆಯನ್ನೂ  ಸಹಾ   ಇದೇ  ಸಮಯದಲ್ಲಿ  ಶೇಖರಿಸಬೇಕು.  

ವ್ಯಾಪಾರ ವ್ಯವಹಾರದಲ್ಲಾದರೆ ಇಂತಹ ಸಮಸ್ಯೆಗೆ Queuing theory ಪರಿಹಾರ ಬೊಟ್ಟುಮಾಡುತ್ತದೆ. ಸರಳವಾದ ಉದಾಹರಣೆ ಎಂದರೆ ಒಂದು ಸರ್ವಸರಕು ಮಳಿಗೆಯಲ್ಲಿ ಪಟ್ಟಿ ಮಾಡಿಸಿ ಹಣಕೊಡುವಲ್ಲಿ ಸರತಿಯ ಸಾಲು. ಪ್ರತಿ ನಿಮಿಷಕ್ಕೆ ಎಷ್ಟು ಗಿರಾಕಿ ವ್ಯಾಪಾರ ಮುಗಿಸುತ್ತಾರೆ ಮತ್ತು ಒಬ್ಬ ಕಾರಕೂನ ಎಷ್ಟು ಗಿರಾಕಿಗಳ ನಿಬಾಯಿಸಬಲ್ಲ ಎನ್ನುವ ವಿಚಾರದಲ್ಲಿ ಉತ್ತರ ದೊರಕಿಸಿಕೊಂಡು ಬೇಕಾದಷ್ಟು ಕಾರಕೂನರ ನೇಮಿಸಿ ಅನಗತ್ಯ ಸರತಿಯ ಸಾಲು ಉದ್ದವಾಗುವುದನ್ನು ತಪ್ಪಿಸಲು ಸಹಕರಿಸುತ್ತದೆ. ಆದರೆ ನಮ್ಮಲ್ಲಿ ಉತ್ತರವಿದ್ದರೂ ಕೂಲಿಯಾಳುಗಳೇ ಕಾಣಿಸದಿದ್ದರೆ ………..

ಇಂದು ಅಡಿಕೆ ಹಾಳೆಗೆ ರೈತರಿಗೆ ಸಿಗುವ ಐವತ್ತು ಪೈಸೆ  ಪರಿಗಣಿಸಿದರೆ    ಸಿಮಿತ  ಸಂಖ್ಯೆಯಲ್ಲಿ    ಸಿಗುವ   ದುಬಾರಿ ಕೃಷಿ   ಕಾರ್ಮಿಕರಿಂದಾಗಿ ಹಾಗೂ ಹಾಳೆಯೊಂದಿಗೆ   ಜಮೀನಿನಿಂದ ಹೊರ ಕಳುಹಿಸುವ ಪೋಷಕಾಂಶಗಳಿಂದಾಗಿ  ಲಾಭದಾಯಕವಲ್ಲ. ರೈತರು ನಷ್ಟವಾದರೂ ದನ ಸಾಕುತ್ತಾರೆ ಟೊಮೆಟೊ ಬೆಳೆಯುತ್ತಾರೆ. ಹಾಗೆಯೇ ಇದೊಂದು ನಗದು ಹಣದ ಮೂಲ.

ಕೃಷಿಕನ  ಮಟ್ಟಿಗೆ    ಅಡಿಕೆ ಮರದ ಹಾಳೆಯೂ ತ್ಯಾಜ್ಯವಲ್ಲ. ಅಡಿಕೆ ಮರಕ್ಕೆ  ಅಗತ್ಯವಿರುವ   ಸಾಕಷ್ಟು ಪೋಶಕಾಂಶವನ್ನು  ಹೊಂದಿದೆ.   ಉಪಯೋಗದ ಬಗೆಗೆ ಶ್ರೀ ಜೋಷಿಯವರೂ ಬೆಳಕು ಚೆಲ್ಲಿದ್ದಾರೆ. ಯಾವ ತ್ಯಾಜ್ಯವನ್ನೂ ನಾವು ತೋಟದಿಂದ ಹೊರಗೆ ಸಾಗಿಸದಿದ್ದರೆ ಅಡಿಕೆ ಮರಕ್ಕೆ ಬೇರೆ ಗೊಬ್ಬರ ಉಣಿಸುವುದು ಬೇಡ. ನಮಗೆ ಪೂರ್ತಿ ತ್ಯಾಜ್ಯವನ್ನು ಬುಡಕ್ಕೆ ಹಾಕಲು ಸಾದ್ಯವಾಗುತ್ತಿಲ್ಲ. ಅದುದರಿಂದ ಗೊಬ್ಬರ ಅವಲಂಬನೆ ಅನಿವಾರ್ಯವಾಗುತ್ತದೆ.
ಶ್ರೀ ಜೋಷಿಯವರು   ಹಾರೈಸಿದಂತೆ  ಬರಾಕ್  ಒಬಾಮರ  ಮಕ್ಕಳು  ಜಾರುಬಂಡಿಯಲ್ಲಿ  ಆಡಲು  ನೂಡಲ್ಸ್  ತಿನ್ನಲು  ನಮ್ಮೂರಿನಿಂದ   ಹೋದ   ಅಡಿಕೆಹಾಳೆ ತಟ್ಟೆಯನ್ನೇ  ಉಪಯೋಗಿಸಲೆಂದು   ಆಶಿಸೋಣ.

Thursday, March 19, 2009

ತಾಲಿಬಾನಿಗಳನ್ನು ಪ್ರೀತಿಸುವ ಮಾದ್ಯಮ

ಮುಂಬಯಿಯ ಭಯೋತ್ಪಾದನೆ ಜತೆಗೆ ಮಂಗಳೂರಿನ ಪಬ್ ದಾಳಿ, ಚಾಪ್ಲಿನ್ ವಿಗ್ರಹ ಚರ್ಚೆ ಇಂದು ಜೋರಾಗಿ ಕೇಳುವುದರಿಂದ ನನ್ನ ಮನಸಿನಲ್ಲಿರುವುದರ ದಾಖಲಾತಿಗೆ ಪ್ರೇರಣೆಯಾಯಿತು. ಮಾದ್ಯಮಗಳು ನಮಗೆ ನೈಜ ಚಿತ್ರಣ ತೋರುವುದಿಲ್ಲವೆಂದು ನನ್ನ ಚಿಕ್ಕಂದಿನಲ್ಲೇ ಅನಿಸಿಕೆಯಾಗಿತ್ತು.


ತೆರೆ ಮರೆಯ ನೈಜ ಚಿತ್ರಣ ನೋಡಿ ಬರೋಣವೆಂದು ನಾನು ಸೈಕಲು ಸಮೇತ ದೀರ್ಘ ಪ್ರವಾಸ ಕೈಗೊಂಡದ್ದು, ಪ್ರವಾಸ ನನ್ನ ಅನಿಸಿಕೆಯನ್ನು ಅನುಮೋದಿಸಿದೆ. ಹಲವು ವಿಚಾರಗಳಲ್ಲಿ ಬಾರತದಲ್ಲಿ ಕೂತ ನಮ್ಮ ಕಲ್ಪನೆಗೂ ನೈಜ ಸ್ಥಿತಿಗೂ ಬಹಳಷ್ಟು ವ್ಯತ್ಯಾಸ ಇರುತ್ತದೆ. ಭಾರತದ     ಮಟ್ಟಿಗೆ .ಪರದೇಶದವರ ಅನಿಸಿಕೆಯೂ ಬಿನ್ನವಾಗಿಲ್ಲ. ಅಮೇರಿಕದಲ್ಲಿ ಅಸಮಧಾನಗೊಂಡಲ್ಲಿ ನಿನ್ನ ಪತ್ನಿಯನ್ನು ಬೆಂಕಿಗಾಹುತಿ ಮಾಡುತ್ತೀಯ ಎನ್ನುವ ಪ್ರಶ್ನೆ ಹಲವು ಬಾರಿ ಎದುರಿಸಿದ್ದೇನೆ. ಅವರ ತಿಳುವಳಿಕೆ ಪ್ರಕಾರ  ಬಾರತದಲ್ಲಿ ಪತ್ನಿಗೆ ಬೆಂಕಿ ಹಾಕಿ ಸುಡುವುದು ಮಾಮೂಲಿ ಅನ್ನುವ ಚಿತ್ರಣ.

ಮಂಗಳೂರಿನ ಪಬ್ ದಾಳಿಗೆ ಸಿಕ್ಕ ಅಂತರಾಷ್ಟ್ರೀಯ ಪ್ರಚಾರ ಕಾಣುತ್ತಿರುವಾಗ ನಿಜಕ್ಕೂ ಮೈ ಪರಚಿಕೊಳ್ಳುವಂತಾಗಿದೆ. ಇದು “ಈ ಕಲ್ಚರ್ ಪೊಲೀಸಿಂಗ್ಗೆ ನಾಗರಿಕ ಸಮಾಜದ ಧಿಕ್ಕಾರ” ಎಂಬ ತಲೆಬರಹದೊಂದಿಗೆ ಅಂತರಾಷ್ಟ್ರೀಯ ಮಟ್ಟದ ಸುದ್ದಿಯಾಯಿತು. ಹಿಂದೂ ತಾಲಿಬಾನ್ಗಳು, ಹಿಂದೂ ಮೂಲಭೂತವಾದಿಗಳು ಎಂದೆಲ್ಲಾ ದೊಡ್ಡ ಚರ್ಚೆಯೇ ನಡೆಯಿತು. ನಮ್ಮೂರ ಮಾನ ಪೂರಾ ಹರಾಜಾಯಿತು.

ಇವರಲ್ಲಿರುವ ಒಂದು ನಿಮಿಷದ ತುಣುಕನ್ನು Gobbels ಮಾದರಿಯಲ್ಲಿ ಪದೇ ಪದೆ ಪ್ರದರ್ಶಿಸಿ ನಮ್ಮ ಮನಸ್ಸಿಗೆ ತಪ್ಪು ಕಲ್ಪನೆ ತುಂಬಿಸಿದರು. ಒಂದು ದೃಶ್ಯ ಮಾದ್ಯಮ ( ಶುದ್ದ ವ್ಯಾಪಾರಿ ದೋರಣೆಯ Toi -let group  ಎಂದು   ಕರೆಯಲ್ಪಡುವ  Times Of  India ) ಮತ್ತು ವಾನರ ಸೇನೆಯ ಮದ್ಯೆ ಇದ್ದ ಹಳೆಯ ದ್ವೇಷ ಊರ ಹಾಗೂ ದೇಶದ ಮರ್ಯಾದೆಯನ್ನೇ ತೆಗೆಯಿತು. ಮಾಧ್ಯಮಗಳು ಯಾವ ರೀತಿ ಒಂದು ವಿಷಯದ ಮೇಲೆ ಪ್ರಭಾವ ಬೀರಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ನಮ್ಮೂರು ಅಪಾಯಕಾರಿ ಎನ್ನುವ ತಪ್ಪು ಚಿತ್ರಣ ವ್ಯವಹಾರ ಪ್ರವಾಸೋದ್ಯಮಗಳಿಗೆ ಹಿನ್ನೆಡೆ ತರುವುದು ಖಚಿತ. ಇತರ ನಾಗರಿಕ ಸಮಾಜದ ದೃಶ್ಯ ಮಾದ್ಯಮಗಳ ಮನಸ್ಥಿತಿ ಇಷ್ಟು ಹೊಲಸಲ್ಲ ಎಂದು ಖಚಿತವಾಗಿ ಹೇಳಬಹುದು.

ಮುಂಬಯಿ ಮಾತ್ರವಲ್ಲ ಜಗತ್ತನ್ನೇ ತುದಿಗಾಲಿನಲ್ಲಿರಿಸಿದ ಇನ್ನೂರಕ್ಕೂ ಹೆಚ್ಚು ಜನ ಜೀವ ಕಳಕೊಂಡಿರುವ ಭಯೋತ್ಪಾದನೆ ಕೃತ್ಯವನ್ನೂ ಮಂಗಳೂರಿನ ಚಿಲ್ಲರೆ ಘಟನೆಯನ್ನು ಹೋಲಿಸುವುದು ಮೂರ್ಖತೆಯ ಪರಮಾವದಿ. ಆದರೆ ಲೋಕಸಭಾ ಚುನಾವಣೆಗಳು ಹತ್ತಿರ ಬರುತ್ತಿರುವಾಗ ಪರೀಸ್ತಿತಿ ಕದಡುವ ಅನಿವಾರ್ಯತೆ ರಾಜಕಾರಣಿಗಳಿಗೂ ಇದೆ. ಇದಕ್ಕಿಂತ ಎಷ್ಟೋ ಘೋರವಾದ ಘಟನೆಗಳು ಮರೆಮಾಚುವಂತಾಗಿ ಮಾದ್ಯಮಗಳು ಹೇಳುವುದೆಲ್ಲ ಅರ್ಧ ಸತ್ಯ ಎಂಬಂತಾಗಿದೆ.

Speed ಆಂಗ್ಲ ಬಾಷೆಯ ಸಿನೇಮದಲ್ಲಿ ಖಳನಾಯಕ ಟಿವಿ ಮೂಲಕ ಪರೀಸ್ಥಿತಿ ಅವಲೋಕಿಸುತ್ತಿದ್ದಾನೆ ಎಂದರಿತ ಪೋಲೀಸರು ಹಳೇ ರೀಲನ್ನೇ ಪುನಹ ಬಿಡಲು ಟಿವಿಯವರಿಗೆ ಹೇಳಿದರು. ಆಗ ಖಳನಾಯಕ ಮೂರ್ಖನಾಗುವ ಸನ್ನಿವೇಶವನ್ನು ನಾವು ನೋಡುತ್ತೇವೆ. ಏನನ್ನು ಬಿತ್ತರಿಸಬಹುದು ಎನ್ನುವ ಪಾಠ ನಮ್ಮ ಟಿವಿ ಕಂಪೇನಿಯವರಿಗೆ ಮುಂಬಯಿ ದಾಳಿ ಸಮಯದಲ್ಲಿ ತಡವಾಗಿಯಾದರೂ ಪೋಲೀಸರು ಮಾಡಬೇಕಾಯಿತು.

ನಾನು ಚಾಪ್ಲಿನ್ ವಿಗ್ರಹವನ್ನು ವಿರೋಧಿ ಎಂದರೆ ನಾನು ಮತಾಂಧ ಎನಿಸುಕೊಳ್ಳುವ ಪರಿಸ್ಥಿತಿ ಇತ್ತೀಚೆಗೆ ಬೆಳೆದು ಬಂದಿರುವುದು ಆತಂಕಕಾರಿ ಬೆಳವಣಿಗೆ.  ಅಭಿಪ್ರಾಯಗಳು ಕೇವಲ    ಕಪ್ಪು-ಬಿಳುಪಿನಲ್ಲಿ ಇರಬೇಕು. ಒಂದೋ ಈ ಪಕ್ಷ ಇಲ್ಲಾ ಆ ಪಕ್ಷ ಎನ್ನುವಂಥಾ ಮನೋಭಾವ ನಮ್ಮಲ್ಲಿ ಬೆಳೆದು ಬಂದಿದೆ ಇತ್ತೀಚೆಗೆ. ಮೂರನೆಯ ದೃಷ್ಟಿ ಕೋನ ಎನ್ನುವುದು ಇಲ್ಲದಂತೆ ಆಗಿದೆ.    ಕಳೆದ ಚುನಾವಣೆಯಲ್ಲಿ ನಿರಾಕರಣ ಮತ ಹಾಕುವಾಗ ಮತಗಟ್ಟೆಯಲ್ಲಿ ಕೂತಿದ್ದ ಕೈ ಕಮಲ ತೆಂಗಿನ ಕಾಯಿ ಪಕ್ಷದ ಯುವಕರು ಜತೆಯಾಗಿಯೇ ಕೆಕ್ಕರಿಸಿ ನೋಡಿದರು. ಇವನು ನಮ್ಮವನಲ್ಲ ಎನ್ನುವ ಭಾವನೆ ಸ್ಪಷ್ಟವಾಗಿತ್ತು.

ಚಾಪ್ಲಿನ್  ವಿಚಾರದಲ್ಲಿಯೂ  ಅಲ್ಲಿನ ಗ್ರಾಮಸ್ಥರಲ್ಲಿ ಹೆಚ್ಚಿನವರಿಗೆ ಚಾಪ್ಲಿನ್ ಹೆಸರು ಜಾತಿ ಎರಡೂ ಗೊತ್ತಿರಲಿಲ್ಲವಂತೆ. ಅವರು ಇದನ್ನು ಅವನ ಜಾತಿ ಧರ್ಮದ ನೆಲೆಯಲ್ಲಿ ನೋಡಿರಲಿಲ್ಲ. ನಮ್ಮ ದೇವಸ್ಥಾನಕ್ಕೆ ತೊಂದರೆಯಾಗಬಹುದು, ಬೇರೆಡೆ ಮಾಡಿ ಅಂತಲೇ ಸಲಹೆ ಮಾಡಿದ್ದಾರಂತೆ. ಈ ಸುದ್ದಿಗೆ ಜಾತಿ-ಧರ್ಮದ ವಿಷವನ್ನು ಯಾರೋ ಸೇರಿಸಿ ಗರಂ ಮಾಡಿದರು.

ಪಬ್ ಧಾಳಿಯ ಸಮಯದಲ್ಲಿ ಹೊಡೆದದ್ದು ತಪ್ಪು ಎಂದರೆ ಕುಡಿತದ ಬೆಂಬಲಿಗರೋ ಎನ್ನುವ ಪ್ರಶ್ನೆ ಕೇಳುತ್ತಾರೆ. ಕುಡಿತ ಸರಿಯಲ್ಲ ಎಂದು ಹೇಳಿದರೆ ನೀವು ರಾಮಸೇನೆಯ ಬೆಂಬಲಿಗರೋ ಎಂದು ಎದುರಿನವರು ನಮ್ಮನ್ನು ಕೇಳದೆಯೇ ಪರಿಗಣಿಸುತ್ತಾರೆ. ಇಂದಿನ ಯುದ್ಧ ಸನ್ನಿವೇಶದಲ್ಲಿ ಬುಷ್ ಹೇಳಿದಂತೆ ನೀನು ವೈರಿ ಪಕ್ಷದವನೋ ಇಲ್ಲ ಮಿತ್ರ ಪಕ್ಷದವನೋ? ಇದೆರಡಕ್ಕೂ ಸೇರಿಲ್ಲ ಎಂದಾದರೆ ನಿನಗೆ ಅಸ್ತಿತ್ವವೇ ಇಲ್ಲ ಎನ್ನುತ್ತದೆ ಇಂದು  ಕಾಣಿಸಿಕೊಳ್ಳುವ ಪ್ರಕರಣಗಳು. ಗಮನಿಸಿ, ಯಾವ  ಪಕ್ಷಕ್ಕೂ  ಸೇರದ  ಬಹುಸಂಖ್ಯಾತರು  ಲೆಕ್ಕದಿಂದ  ಹೊರಗೆ  ಎನ್ನುವಂತಾಗುತ್ತಾರೆ. 

ಇಂದಿನ ಇತಿಹಾಸದ ದಾಖಲಾತಿ ಮಾಡುವ ಮಾದ್ಯಮದವರು ಜವಾಬ್ದಾರಿಯುತ ಸ್ಥಾನದಲ್ಲಿರುವ ಅರ್ಥ ಮಾದಿಕೊಳ್ಳಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವುದು, ಸಾಮಾಜಿಕ ಸಾಮರಸ್ಯ ಕೆಡದಂತೆ ನೋಡಿಕೊಳ್ಳುವುದು ಮಾಧ್ಯಮಗಳ ಧರ್ಮ. ಸಮಾಜದ ಏಕತೆಗೆ ಭಂಗ ಬಾರದಂತೆ ವರ್ತಿಸುವುದು, ಜನರ ಭಾವನೆಗೆ ಧಕ್ಕೆಯಾಗದಂತೆ ಕಾಳಜಿ ವಹಿಸುವುದು ಅವುಗಳ ಕರ್ತವ್ಯವೂ ಹೌದು. ಇವರ ಸೇವೆ ಸಮಾಜಕ್ಕೊಂದು ಮುಂದುವರಿದ ಶಿಕ್ಷಣ. ಆದರೆ ಮಾದ್ಯಮ ಎಡವಿದರೆ ಎಲ್ಲೆಲ್ಲೂ ತಪ್ಪು ಅಭಿಪ್ರಾಯಗಳು ಮೂಡುತ್ತದೆ.

ಬ್ರೇಕಿಂಗ್ ನ್ಯೂಸ್ ಆವಾಂತರಗಳಲ್ಲಿ ಈಗಾಗಲೇ ದೃಶ್ಯ ಮಾಧ್ಯಮಗಳ ವಸ್ತುನಿಷ್ಠತೆಗೆ, ಅದರ ವಿಶ್ವಾಸಾರ್ಹತೆಗೆ ಸಂಶಯ ಉಂಟಾಗಿದೆ. ಮುಂದೆ ಅಂತರ್ಜಾಲ ಇನ್ನೂ ವಿಸ್ತಾರಗೊಂಡಂತೆ ಪತ್ರಿಕಾ ಪ್ರಪಂಚ ಸೋಲುತ್ತಾ ಹೋಗುವ ಲಕ್ಷಣಗಳು ಗೋಚರಿಸುತ್ತವೆ. ಹಲವು ಪತ್ರಿಕೆಗಳು ಈಗಲೇ ವರದಿಗಾರರನ್ನು ಮನೆಗೆ ಕಳುಹಿಸಿದೆ. ಪರಿಸ್ಥಿತಿ ಇನ್ನೂ ಗಂಬೀರವಾಗುತ್ತಿದೆ. ಮುಂದೆ ಸುದ್ದಿ ಎನ್ನುವುದರ ಬದಲು ಜಾಹಿರಾತುಗಳು ಮಾತ್ರ ಉಳಿದುಕೊಳ್ಳುತ್ತವೆ.

Tuesday, March 17, 2009

ಪತ್ರಿಕೆ ಎಂದರೆ ಕರಿ ಹಲಗೆ

ತಿಂಗಳ ಹಿಂದೆ ಅಡಿಕೆ ಪತ್ರಿಕೆ ಒಂದು ಪ್ರಶ್ನೆ ಹಾಕಿತ್ತು.   ಬ್ಲೋಗ್  ರೈತರಿಗೆ  ಗ್ರಾಮೀಣ ಜನರಿಗೆ  ಸಹಾಯಕವೇ ? ಆ  ಸಂಚಿಕೆಯ   ಸಂಪಾದಕೀಯ  ಹಾಗೂ  ಬರಹಗಳು   ಈ  ವಿಚಾರ  ಸಾಕಷ್ಟು   ಚರ್ಚೆ  ನಡೆಸಿದ್ದವು.    ಹೀಗೆ ಮಾದ್ಯಮ, ಸಂಪರ್ಕ, ಬ್ಲೋಗ್ ಇತ್ಯಾದಿಗಳು ಕಳೆದ ಒಂದು ತಿಂಗಳಿನಿಂದ ತಲೆ ತಿನ್ನುತ್ತಲೇ ಇರುವಾಗ    ಅಫ್ರಿಕದಿಂದ   ಒಂದು  ಯಶಸ್ವಿ ಪ್ರಯೋಗದ ಬಗೆಗೆ ಓದಿದೆ.  ಇದೊಂದು  ಕಂಪ್ಯುಟರ್  ಅವಲಂಬಿಸದ  ಬ್ಲೋಗ್.


ಮೇಲಿನ  ಚಿತ್ರದಲ್ಲಿ   ಅವರ  ಪತ್ರಿಕೆಯೊಂದಿಗೆ ಸಂಪಾದಕರು ನಿಂತಿದ್ದಾರೆ.  ಪಶ್ಚಿಮ ಆಫ್ರಿಕದಲ್ಲಿ ಪತ್ರಿಕೆ ಕೊಳ್ಳಲು ಚೈತನ್ಯವಿರದವರಿಗೆ ಅವರದೇ ಬಾಷೆಯಲ್ಲಿ ಸುದ್ದಿ ತಲಪಿಸುವ ಪ್ರಯತ್ನ ಈ Daily Talk ನಿತ್ಯ ಮಾತು. ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆಯಂತೆ ಎನ್ನುವುದು ಈ ಮಾದರಿಯ ಬಗ್ಗೆ ಕುತೂಹಲ ಕೆರಳಿಸುತ್ತದೆ. ಚಾಪೆ ಕುರ್ಚಿ ಈಸಿಚೈರ್ ಎನ್ನುವ ನಮ್ಮ ಯಕ್ಷಗಾನ ಪ್ರದರ್ಶನದಂತೆ ತಳಕ್ಕೆ ಐದು, ಬದಿಯಲ್ಲಿ ಪ್ರಕಟಿಸಿದರೆ ಹತ್ತು ಮತ್ತು ಮುಖ್ಯ ಪುಟದಲ್ಲಿ ಇಪ್ಪತ್ತೈದು ನಮ್ಮ ಜಾಹಿರಾತು ದರಗಳು ಎನ್ನುವ ಈ ಪತ್ರಿಕೆಗೆ (?) ತೇಲುತ್ತಾ ಇರುವಷ್ಟು ಜಾಹಿರಾತು ಬೆಂಬಲವಿರುತ್ತದೆ.

ಸಂಪಾದಕ Alfred Sirleaf ಪಟ್ಟಣದ ಪ್ರಮುಖ ರಸ್ತೆಯಲ್ಲಿ ಕರಿಹಲಗೆಯಲ್ಲಿ ಬರೆಯುವ ಸುದ್ದಿಯೇ ಪತ್ರಿಕೆ. ವಿದ್ಯುತ್ ಅವಲಂಬನೆ ಇಲ್ಲದ ತೀರಾ ಸರಳವಾದ ವ್ಯವಸ್ತೆ. ಊರ ಪರಊರ ಗೆಳೆಯರು ಇವರ ಸಂಚಾರವಾಣಿಗೆ ಸುದ್ದಿಯನ್ನು ಕಳುಹಿಸುತ್ತಲೇ ಇರುತ್ತಾರೆ. ದಿನವೊಂದಕ್ಕೆ  ಆ  ದಾರಿಯಾಗಿ  ಓಡಾಡುವ   ಹತ್ತು ಸಾವಿರ ಜನ ಓದುಗರು. ಪತ್ರಿಕೆ ಓದುವವರೆಲ್ಲರೂ   ಅಕ್ಷರ ಜ್ನಾನ ಇರುವವರಲ್ಲ. ಈ ಅನಕ್ಷರಸ್ತರಿಗೆ ತಲಪಲು ಸಂಕೇತಗಳ ಚಿತ್ರಗಳ ಉಪಯೋಗ ದಾರಾಳ.

ನನಗೆ ಈ ವಿಚಾರ ಪ್ರಾಮುಖ್ಯ ಎನಿಸಲು ಇನ್ನೊಂದು ಕಾರಣವೆಂದರೆ ಪಕ್ಕದ Guinea Bissau ಎಂಬ ಹದಿನಾರು ಲಕ್ಷ ಜನಸಂಖ್ಯೆಯ ದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ಪತ್ರಿಕೆಗಳಿಂದ ಸುದ್ದಿ ಪೊರೈಕೆ ಇಲ್ಲ. ದೇಶದ ಐದು ನಿಯತಕಾಲಿಕಗಳು ಮುದ್ರಣ ಕಾಗದ ಕೊರತೆಯಿಂದ ಮುಚ್ಚಿವೆ. ನಾವು ನೆದರ್ಲಾಂಡಿನಲ್ಲಿ ಖರೀದಿಸುತ್ತಿದ್ದ ಮಾಲು ಈಗ  ಅಲ್ಲಿನ  ಮಾರುಕಟ್ಟೆಯಲ್ಲಿ ಇಲ್ಲ. ಬೇರೆ ಮೂಲಗಳಿಂದ ಪಡೆಯಲು ನಮಗೆ ಆರ್ಥಿಕ ಚೈತನ್ಯವಿಲ್ಲ ಎನ್ನುತ್ತಾರೆ ಪತ್ರಿಕಾ ಮುದ್ರಕರು.

ಗೋಡೆ ಬರಹ ನಮಗೇನು ಹೊಸತಲ್ಲ. ವಿಟ್ಲದ ಅಡಿಕೆ ವ್ಯಾಪಾರಿಯೊಬ್ಬರು ರಸ್ತೆಗೆ ಕಾಣುವಂತೆಯೇ ಅಂಗಡಿಯ ಗೋಡೆಯಲ್ಲಿ   ಕರಿಬಣ್ಣ   ಬಳಿದು   ಅದರಲ್ಲಿ   ದಿನದ ಅಡಿಕೆ ಖರೀದಿ ದರ ಬರೆಯುತ್ತಿದ್ದರು. ಅಲ್ಲಿ ದಾಟುವಾಗ ಗೋಡೆಯ ಮೇಲೊಮ್ಮೆ ನಮ್ಮ ಕಣ್ಣುಗಳು ಹಾಯ್ದು ಮಾಹಿತಿಯನ್ನು ಹೀರಿಕೊಳ್ಳುತ್ತಿತ್ತು.  ಈಗ ಈ ಪ್ರಯೋಗ ನಿಂತಿದೆ.

ಇಂದು SMS ಅಗ್ಗವಾಗಿದೆ.   ಆದರೆ   ತಲಪುವ ಸಾದ್ಯತೆ ಮಾತ್ರ ೫೦:೫೦ ಅನ್ನಬಹುದು.   ಶಾಲೆಗೆ ಇಂದು ರಜೆ, ಹಳೆ ಅಡಿಕೆಗೆ ೧೦೩, ತರಕಾರಿ ಅಗ್ಗ- ಟೊಮೆಟೊ ಆರು, ಸೊಸೈಟಿಯಲ್ಲಿ ಸುಫಲ ಲಬ್ಯ  ಇಂತಹ ಸುದ್ದಿ ಹಾಗೂ ಎಚ್ಚರಿಸುವ SMS ಕಳಿಸುವ ವ್ಯವಸ್ಥೆ    ಪ್ರಾಯೋಗಿಕ  ಎನಿಸಲೂ   ಬಹುದು.

ಈ  ಮದ್ಯೆ ಊರ ಸುದ್ದಿ  ಹಂಚುವ   ವಿಚಾರವನ್ನು    ನಾನು  ನನ್ನ   ಇ-ಪತ್ರದಲ್ಲಿ  ಬರೆದ  ಗೆಳೆಯರಿಗೆ  ವಿವರಿಸಲು  ಒಂದು  ತಾತ್ಕಾಲಿಕ  ಮಾದರಿಯನ್ನು  ಸಿದ್ದಪಡಿಸಿದೆ.  ಹಲವಾರು   ಮಾಹಿತಿ  ಹಂಚುವ   ಸಾದ್ಯತೆಗಳು.  ಗೆಲ್ಲುವ  ಕುದುರೆಯನ್ನು  ಕಾಲವೇ    ನಿರ್ದರಿಸುವುದು.

Sunday, March 08, 2009

ಮಣ್ಣಿನೊಳಗಿನ ಬಾಂಧವ್ಯ

ತೆರೆ  ಸರಿಸಿ  ನೋಡಿದರೆ    ಮಣ್ಣಿನೊಳಗಿನ   ವಿವಿದ  ಖನಿಜಾಂಶಗಳ ನಡುವಿನ  ಸಂಬಂದ  ಗೋಚರವಾಗುತ್ತದೆ. ಎಲ್ಲವೂ  ಪರಸ್ಪರ  ಬಾಂದವ್ಯ  ಹೊಂದಿರುತ್ತದೆ.  ಸಾವಯುವ  ಕೃಷಿಗೆ  ಈ  ಅರಿವು  ಸಹಾಯಕ.

ಸಾವಯುವ ಕೃಷಿಯ ಕಲ್ಪನೆಯಲ್ಲಿ ನಾವು ಪೋಷಿಸುವುದು ಮಣ್ಣನ್ನು ಹೊರತು ಬೆಳೆಯನ್ನಲ್ಲ,. ಮಣ್ಣಿನ ಫಲವತ್ತತೆಯ ಮಟ್ಟ ಕಾಯ್ದುಕೊಂಡಲ್ಲಿ ಅದು ಬೆಳೆಗೆ ಅಗತ್ಯವಿರುವಾಗ ಅಗತ್ಯದ ಪೋಷಕಾಂಶಗಳ ಬಿಡುಗಡೆ ಮಾಡುತ್ತದೆ. ಸಮಸ್ಯೆ ಬಂದಾಗ ಕಾರಣ ಹಿಡಿದು ಸರಿಪಡಿಸುವುದು ಸೂಕ್ತ ಹೊರತು ಲಕ್ಷಣ ನೋಡಿ ಗಡಿಬಿಡಿ ಮಾಡುವುದಲ್ಲ.

ಸಮೂಹದಲ್ಲಿ ಜನರು ವರ್ತಿಸುವ ಬಗ್ಗೆ ನಾನು ಗಮನಿಸಿದ್ದೇನೆ. ಮಣ್ಣಿನಲ್ಲಿರುವ ವಿವಿದ ಖನಿಜಾಂಶಗಳ ವರ್ತನೆಗೆ ಇಲ್ಲೊಂದು ಹೋಲಿಕೆ. ಗುಂಪಿನಲ್ಲಿ ಪ್ರತಿಯೊಬ್ಬರ ವರ್ತನೆಯೂ ಅಲ್ಲಿರುವ ಇತರರ ಇರುವನ್ನು ಅವಲಂಬಿಸಿರುತ್ತದೆ. ಜನರ  ಗುಂಪಿನಲ್ಲಿ ವೆಂಕಟನ ಸ್ವರ ಜೋರಾಗಿದೆ ಎಂದರೆ ದೇವಕಿ ಜತೆಗಿರಬೇಕು ಮತ್ತು ಸ್ವರ ಮಾಮೂಲಿಗಿಂತ ಕ್ಷೀಣ ಎಂದರೆ ಮಹಾಬಲ ಗುಂಪಿನಲ್ಲಿರಬಹುದೆನ್ನುವ ತೀರ್ಮಾನಕ್ಕೆ ಬರಬಹುದು. ಇದೇ ರೀತಿ ಮಣ್ಣಿನಲ್ಲಿ ಪೋಷಕಾಂಶಗಳ ವರ್ತನೆ ಇರಬಹುದಾದ ಇತರ ಖನಿಜಾಂಶಗಳನ್ನು ಅವಲಂಬಿಸಿದೆ. ಕೆಲವು ಪೋಷಕಾಂಶಗಳ ನಡುವಿನ ಸಂಬಂದ  ಸಾದ್ಯವಾದಷ್ಟು ಸರಳವಾಗಿ ಕೋಷ್ಟಕದಲ್ಲಿ ಕಾಣಿಸಿದ್ದೇನೆ.

ನಮ್ಮ ಕರಾವಳಿ ಪ್ರದೇಶದಲ್ಲಿ ಮಣ್ಣಿನಲ್ಲಿ ಕಾಲ್ಸಿಯಂ ಇದ್ದರೂ ಅದು ಅಲುಮೀನು ಮತ್ತು ಕಭ್ಭಿಣದ ಅಂಶಗಳೊಂದಿಗೆ ಸಂಯುಕ್ತವಾಗಿ ಬೆಳೆಗೆ ಸಿಗುವುದಿಲ್ಲ. . ಇದರ ಪರಿಣಾಮ ನಮ್ಮ ದನಗಳು ಎಲುಬು ಬೆಳೆಯದೆ ಮಲೆನಾಡು ಗಿಡ್ಡ ಎನಿಸಿಕೊಂಡಿವೆ.

ಎಡಗಡೆಯಲ್ಲಿ ಕಾಣಿಸಿರುವ ಪೋಷಕಾಂಶಗಳ ಸಾಂದ್ರತೆ ಹೆಚ್ಚು ಆಥವಾ ಕಡಿಮೆ ಇದ್ದರೆ
ಮೇಲಿನ ಸಾಲಿನಲ್ಲಿ ಕಾಣಿಸಿರುವ ಅಂಶಗಳ ಕೊರತೆ ಗೋಚರಿಸುತ್ತದೆ.


ಪೊಟಾಷ್ ಬೆಳೆಗೆ ಸಿಗುವ ವಿಚಾರವನ್ನು ಸಾರಜನಕ, ರಂಜಕ, ಮೆಗ್ನಿಸಿಯಂ, ಬೊರಾನ್, ಸೋಡಿಯಂ ಮತ್ತು ಕ್ಲೋರಿನ್ ಅಂಶಗಳ ಸಾಂದ್ರತೆ ನಿಯಂತ್ರಿಸುತ್ತವೆ. ಇವುಗಳ ಪ್ರಮಾಣ ಹೆಚ್ಚಿದ್ದಲ್ಲಿ ಬೆಳೆಗಳ ಮಟ್ಟಿಗೆ ಪೊಟಾಷ್ ಕನ್ನಡಿಯೊಳಗಿನ ಗಂಟಾಗುತ್ತದೆ. ಇಲ್ಲಿ ಸ್ವಾರ್ಥ ಹಿತಾಸಕ್ತಿಗಳಿಂದ ದಿಕ್ಕು ತಪ್ಪಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತದೆ. ಇಂದು ಕಡಿಮೆ ಬೆಲೆಯ ಮತ್ತು ಅತಿ ಹೆಚ್ಚು ಮಾರಾಟವಾಗುವ ಮುರಿಟ್ ಆಫ್ ಪೊಟಾಷ್ ರಸಾಯನಿಕ ಗೊಬ್ಬರ ಕ್ಲೋರಿನ್ ಮತ್ತು ಪೊಟಾಸಿಯಂ ಒಳಗೊಂಡಿದ್ದು ಸಮಸ್ಯೆ ಇರುವುದು ಈ ಮಿಶ್ರಣದಲ್ಲೇ. ಲಕ್ಷಣ ನೋಡಿ ರೈತರು ಮತ್ತೂ ಹೆಚ್ಚು ಗೊಬ್ಬರ ಹಾಕುತ್ತಾರೆ. ಇದೊಂದು ವಿಷ ವರ್ತುಲ.

ಸಾವಯುವ ಕೃಷಿಯಲ್ಲಿ ಈ ಖನಿಜಾಂಶಗಳ ನಿಬಾಯಿಸುವುದು ಹೆಚ್ಚು ಸರಳ ಏಕೆಂದರೆ ಅಲ್ಲಿ ಮಣ್ಣಿನ ಫಲವತ್ತತೆ ಕಾಪಾಡಲು ಹೆಚ್ಚಿನ ಗಮನ ಕೊಡಲಾಗುತ್ತದೆ. ಜೀವನದಲ್ಲೂ   ಕೆಲವೊಂದು  ಸನ್ನಿವೇಶದಲ್ಲಿ  ನಾವು   ಸಮಸ್ಯೆಯನ್ನೇ   ಪರಿಹಾರ  ಎಂದು ಕಲ್ಪಿಸಿಕೊಂಡಿರುತ್ತೇವೆ.    ಲಕ್ಷಣದ ಬದಲಿಗೆ ಕಾರಣವ ಹುಡುಕಿ ನೋಡಿ ಪರಿಹಾರ ಕೈಗೊಳ್ಳುವುದೇ    ಉತ್ತಮ.

Thursday, March 05, 2009

ಎಲ್ಲರಿಗೂ ಕೃತಜ್ನತೆಗಳು

ಕೃಷಿಕ ಪರ  ಮಾಸಿಕವಾದ      ಅಡಿಕೆ ಪತ್ರಿಕೆ ೨೦೦೯ ಮಾರ್ಚ್ ತಿಂಗಳ ಸಂಚಿಕೆಯಲ್ಲಿ ಬ್ಲೋಗ್ ಬಗ್ಗೆ ಒಂದು ಮಾಹಿತಿ ಲೇಖನ ಪ್ರಕಟಿಸಿ ಬ್ಲೋಗಿಗರ ಅಬಿಪ್ರಾಯ ಕೇಳಿತು. ಈ ಐದು ಜನ ಕಹಳೆ ಊದುವವರ ಪಟ್ಟಿಯಲ್ಲಿ ನಾನು ಒಬ್ಬನಾಗಿದ್ದೆ. ಹೀಗೆ ಪ್ರಕಟಿಸಿದ್ದಕ್ಕೆ ವಂದನಾರ್ಪಣೆ ಸಮಂಜಸ ಎನಿಸಿತಾದರೂ ನಾನು ಹಿಂದೆ ಕಾರಣಾಂತರದಿಂದ ಹಲವರಿಗೆ ಕೃತಜ್ನತೆ ಸಮರ್ಪಿಸದೆ ಇದ್ದುದೂ ನೆನಪಾಯಿತು.


ಅಡಿಕೆ ಪತ್ರಿಕೆಯಿಂದ ಎರಡು ಪ್ರಶ್ನೆಗಳು ಕೇಳಲ್ಪಟ್ಟಿತ್ತು. *ಬ್ಲೋಗಿನಲ್ಲಿ ನೀವು ಕಂಡ ಅನುಕೂಲತೆ/ಪ್ರಯೋಜನಗಳು * ನಿಮ್ಮ ಅಭಿಪ್ರಾಯದಂತೆ ಕೃಷಿ /ಗ್ರಾಮೀಣ ಸಮುದಾಯಗಳಿಗೆ ಬ್ಲೋಗ್ ಗಳು ಹೇಗೆಲ್ಲ ಪ್ರಯೋಜನವಾಗಬಹುದು


ನಾನು ಬ್ಲೋಗ್ ಬರೆಯಲು ಆರಂಬಿಸಿದುದೂ ಅಕಸ್ಮಿಕ. ಆತ್ಮೀಯವಾಗಿರುತ್ತದೆಂದು ಕನ್ನಡದಲ್ಲಿ ಇ- ಪತ್ರಿಸಿದರೆ ಜತೆಯಲ್ಲಿಯೇ fonts ಕಳುಹಿಸಬೇಕಾಯಿತು.  ನಂತರ ಹೆಚ್ಚಿನವರಿಗೆ Unicode ನಲ್ಲಿಯೇ ಬರೆಯಲು ಆರಂಬಿಸಿದೆ. ಮುಂದಿನ ಹೆಜ್ಜೆಯಾಗಿ   ಬ್ಲೋಗ್ ಉಗಮವಾಯಿತು. ಇದೆಲ್ಲ  ಕಳೆದ   ಒಂದು  ವರ್ಷದ    ಬೆಳವಣಿಗೆ. 

ನನ್ನ   ಈ ತಾಣಕ್ಕೆ ನಿರ್ಣಾಯಕ ತಿರುವು ಸಿಕ್ಕಿದ್ದು ಫುಕೋಕ ಅವರು ತೀರಿಹೋದ ಸಂದರ್ಬದಲ್ಲಿ. ಫುಕೋಕರ   ಬಗೆಗಿನ ಶ್ರೀಶಂ ಬ್ಲೋಗ್ ಬರಹ ಬಗ್ಗೆ ಅವರಿಗೆ ಬರೆದ ಸಮಜಾಯಿಷಿಯನ್ನು ಸ್ವಲ್ಪ ಮಾಹಿತಿ ಸೇರಿಸಿ ಇಲ್ಲೂ ಪ್ರಕಟಿಸಿದೆ. ಅದು ಅನಿರೀಕ್ಷಿತವಾಗಿ ಹಲವರ ಗಮನ ಸೆಳೆಯಿತು. ಅವಧಿ  ನನ್ನ   ಫುಕೋಕ   ಪುಟವನ್ನು ಪ್ರಕಟಿಸಿತು. ಹಾಗೆ ಸಾಕಷ್ಟು ಪ್ರತಿಕ್ರಿಯೆ ಬರಲು ಪ್ರಾರಂಬವಾಯಿತು.  ನಾನು  ಗಂಬೀರವಾಗಿ  ಪರಿಗಣಿಸದ   ಈ ಬ್ಲೋಗ್  ಬರವಣಿಕೆ ತ್ಯಜಿಸುವ ಆಲೋಚನೆ ಮುಂದೂಡಲ್ಪಟ್ಟಿತು.

ಕನ್ನಡ ಪ್ರಭ ಹಾಗೂ ಕೆಂಡಸಂಪಿಗೆ ನನ್ನ ಬ್ಲೋಗ್ ಬಗ್ಗೆ ಬೊಟ್ಟುಮಾಡಿದವು. ಹಲವಾರು ಗೆಳೆಯರು ಪ್ರತಿಕ್ರಿಯೆ ರವಾನಿಸಿದರು. ಕೆಲವು ಬ್ಲೋಗಿಗರು ತಮ್ಮ ಪುಟದಲ್ಲಿ ನನ್ನ ಸಂಪರ್ಕ ಕೊಂಡಿಯ ಕಾಣಿಸಿದರು.  ಹೀಗೆ  ಓದುಗರ ಸಂಖ್ಯೆ  ಏರಿತು. 

thanks ಎನ್ನಲು ಮನಸಿರಲಿಲ್ಲವೆಂದಲ್ಲ. ನಿಧಾನವೇ ಪ್ರಧಾನ ಎನ್ನುವ ತಂತಿರಹಿತ ದೂರವಾಣಿ ಸಂಪರ್ಕ, ಆಗಾಗ ಮುಷ್ಕರ ಹೂಡುವ ಮುದಿಯಾದ ಕಂಪ್ಯುಟರ್ ಹಾಗೂ ಏರುಪೇರಾಗುತ್ತಲೇ ಇರುವ ಆರೋಗ್ಯ ಎಲ್ಲವೂ ಸವಾಲಾಗಿ ಅಡ್ಡಬರುತಿತ್ತು.

ಏಳನೇಯ ತರಗತಿಯ ನಂತರ ಕನ್ನಡವನ್ನು    ಕಲಿಯದ ನನಗೆ ಬಾಷೆಯ ಬಗೆಗೆ ಅಳುಕು. ಸಾದ್ಯವಾದಷ್ಟು ಮಾಹಿತಿ ನಿಖರ ಬಾಷೆ ಸ್ವಚ್ಚವಾಗಿರಬೇಕೆಂಬ ಸ್ವ-ನಿರ್ಬಂದವೂ ನಿದಾನಿಸಲು ಕಾರಣ.  ಹೀಗೆ   ಬರಹ ಅಂತಿಮಗೊಳ್ಳುವುದೇ ಇಲ್ಲ. ಹಳತಾದ ಕಾರಣ ಬರಹಗಳ ಬಿಸಾಕುವುದೂ ಉಂಟು.

ನನಗೆ ಪತ್ರಿಸಿದವರು, ಪ್ರತಿಕ್ರಿಯೆ ಇಲ್ಲಿಯೇ ವ್ಯಕ್ತ ಪಡಿಸಿದವರು ಪುಟ ತಿರುವಿ ಕ್ರಮಾಂಕ ಮುಂದಕ್ಕೆ ತಳ್ಳಿದವರು ಎಲ್ಲರಿಗೂ ನಾನು ಅಭಾರಿ.