ಮಂಗಳೂರಿನಲ್ಲಿ ಬೆನ್ನೆಲುಬು ತಜ್ನ ಡಾ ಮಹೇಶರು ಇದ್ದಾರೆ. ಹೋಗಿ ಕಾಣೆಂದು ನಮ್ಮವರ ಒತ್ತಡ. ಅಂತೂ ಕಳೆದ ತಿಂಗಳು ಹೋಗಿ ಬೇಟಿಯಾದೆ. ಹದಿನಾಲ್ಕು ವರ್ಷ ಅನಂತರ ತಜ್ನ ವೈದ್ಯರ ಪರೀಕ್ಷಾ ಮೇಜಿನ ಮೇಲೆ ಮಲಗಿದ್ದೆ. ಹೊಸ ತಂತ್ರಜ್ನಾನ ತರಬೇತಿಗಳಿಂದ ಡಾಕ್ಟರ್ ನನ್ನ ಸಮಸ್ಯೆ ಪರಿಹರಿಸಬಹುದೆಂದು ಕಾತರನಾಗಿದ್ದೆ. ನನ್ನ ಹಳೆಯ ದಾಖಲೆಗಳನ್ನೆಲ್ಲ moneyಪಾಲದ ಆಸ್ಪತ್ರೆ ತಿಂದು ಹಾಕಿದ ಕಾರಣ ಸಮಸ್ಯೆಯ ಹಿನ್ನೆಲೆ ಬಗೆಗೆ ಯಾವ ಸುಳಿವೂ ವೈದ್ಯರಿಗೆ ದೊರಕುವಂತಿರಲಿಲ್ಲ. ಹಾಗಾಗಿ MRI ಮಾಡಿಸಿಕೊಂಡು ಬರಲು ಸೂಚಿಸಿದರು.
ಹದಿನಾರು ವರ್ಷ ಹಿಂದೆ ಯಾಂತ್ರಿಕ – ನೇಲುವ- ರೆಕ್ಕೆಯಲ್ಲಿ ಹಕ್ಕಿಯಂತೆ ಹಾರುವಾಗ ಯಾಂತ್ರಿಕ ಸಮಸ್ಯೆ ಜತೆಗೆ ಮಾನಸಿಕ ಗೊಂದಲದಿಂದಾಗಿ ನೆಲಕ್ಕೆ ಅಪ್ಪಳಿಸಿದೆ. ಬೆನ್ನೆಲುಬಿನ ಕೆಳಗಿನ ಬಾಗ ಜಜ್ಜಿ ಹೋದಂತಾಗಿದೆ, ಉಶಾರಾಗುತ್ತಾನೆ ಎಂದರು ಮೊದಲು ಚಿಕಿತ್ಸೆ ನೀಡಿದ ಮಂಗಳೂರ ಎಲುಬು ತಜ್ನ ಡಾ ಶಾಂತಾರಾಮ ಶೆಟ್ಟಿ. ಮೂರು ವಾರವಾದರೂ ಗುಣವಾಗುವ ಚಿಹ್ನೆ ಕಾಣದೆ ನನ್ನ ಮಣಿಪಾಲಕ್ಕೆ ಕರೆದೊಯ್ದರು. ಅಲ್ಲಿ ಕೈಗೊಂಡ ಪರೀಕ್ಷೆಗಳು ಜಜ್ಜಿ ಹೋದುದರ ಖಚಿತಪಡಿಸಿದವು.
ಬೆನ್ನುಲುಬಿನ ಒಳಗೆ ಕೆಳತುದಿಯಲ್ಲಿರುವ ನರದ ಜಾಲಕ್ಕೆ ಲಾಟಿನ್ ಬಾಷೆಯಲ್ಲಿ cauda equina ಕುದುರೆ ಬಾಲ ಎಂದು ಕರೀತಾರೆ. ಒಂದಷ್ಟು ದಾರಗಳ ಮುಷ್ಟಿಯಲ್ಲಿ ಹಿಡಿದಂತೆ. ಈ ಕುದುರೆ ಬಾಲ ಜಜ್ಜಿ ಹೋದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ನನಗೆ ಈ ಜಾಗಕ್ಕೆ ಪೆಟ್ಟು ಬಿದ್ದು ದೇಹದ ಕೆಳಗಿನ ಬಾಗದ ನಿಯಂತ್ರಣದ wiring junction box ಪುಡಿ ಪುಡಿ.
ಇಂದಿನ ವೈದ್ಯಕೀಯ ಸಲಹೆ ಪ್ರಕಾರ ಸಮಸ್ಯೆ ಪರಿಹಾರಕ್ಕಾಗಿ ಹಾಗೂ ಶಾಶ್ವತ ಹಾನಿ ತಡೆಗಟ್ಟಲು ತಕ್ಷಣ ಶಸ್ತ್ರ ಚಿಕಿತ್ಸೆ ಮಾಡುವುದೇ ಉತ್ತಮ. ತಕ್ಷಣ ಚಿಕಿತ್ಸೆ ಲಬ್ಯವಾದರೂ ಸಮಸ್ಯೆ ಕೆಲವು ಮಟ್ಟಿಗೆ ಉಳಿದುಕೊಳ್ಳಬಹುದು. ತೊಡೆ ಮತ್ತು ಲೈಂಗಿಕ ಅಂಗಗಳ ಮರಗಟ್ಟುವಿಕೆ, ಕಾಲುಗಳ ಹಾಗೂ ಮಲಮೂತ್ರ ನಿಯಂತ್ರಣ ಕಳಕೊಳ್ಳುವುದು ಇವೆಲ್ಲ ಸಾಮಾನ್ಯ ಲಕ್ಷಣಗಳು ಎನ್ನುತ್ತದೆ ವೈದ್ಯಕೀಯ ಮಾಹಿತಿ ಪತ್ರಗಳು. ಪುಣ್ಯವಶಾತ್ ನನ್ನ ಸಮಸ್ಯೆಗಳು ಹೆಚ್ಚು ಗಂಬೀರವಾಗಿರಲಿಲ್ಲ.
ನಾಲ್ಕು ತಿಂಗಳು ಮಲಗಿ ನಂತರ ಎದ್ದು ಓಡಾಡಲು ಪ್ರಾರಂಬಿಸಿದೆ. ಅಷ್ಟರಲ್ಲಿ ಹೆಚ್ಚು ದೂರ ನಡೆಯುವುದು ಗುಡ್ಡವೇರುವುದು ಇತ್ಯಾದಿ ಸಿಮಿತವಾದರೂ ಮಲಮೂತ್ರನಿಯಂತ್ರಣ ಬಹಳಷ್ಟು ಚೇತರಿಸಿಕೊಂಡ ಕಾರಣ ನಿತ್ಯ ಓಡಾಟಕ್ಕೆ ಸಾದ್ಯವಾಯಿತು. ದೇಹದ ಬಹು ಬಾಗ ಸ್ಪರ್ಶಜ್ನಾವಿಲ್ಲವಾದರೆ ಬೆನ್ನು ಸದಾ ನೋಯುತಿತ್ತು. ಚಳಿ ಸೆಕೆ ಎರಡೂ ಸಹಿಸಲು ಕಷ್ಟವಾಗುತಿತ್ತು.
ಎರಡು ವರ್ಷ ಕಳೆಯುವಾಗ ವಿಪರೀತ ಬೆನ್ನು ಸೆಳಿತ ಪ್ರಾರಂಬ. ಸೂಜಿಯಲ್ಲಿ ಚುಚ್ಚುವ ಅನುಭವ. ಆ ಜಾಗವನ್ನು ಉಜ್ಜಿದರೂ ಪರಿಹಾರ ಶೂನ್ಯ. ಇಂತಹ ಅಪಘಾತದಲ್ಲಿ ನಂತರ ಚಿಗುರುವ ಸಮಸ್ಯೆ Syringomyelia ಅನ್ನುವ ಕಂಟಕ ನನ್ನನ್ನು ಬಾದಿಸುತಿತ್ತು. ಬೆನ್ನೊಳಗೆ ಸುಮಾರು ೩೫೦ ಮಿಲಿ ಲೀಟರ್ cerebrospinal fluid ದ್ರವ ಇರುವುದಂತೆ. ಇದರ ಚಲನೆಗೆ ಅಡ್ಡಿಯಾಗುವ cyst ಬೆಳವಣಿಗೆ ಉಂಟಾಗಿತ್ತು. ಈ cyst ಬೆಳವಣಿಕೆ ಬೆನ್ನುಲುಬು ಪುಡಿಯಾದವರಿಗೆ ಕ್ರಮೇಣ ಕಾಣಿಸಿಕೊಳ್ಳುವುದಿದೆಯಂತೆ. ಬೆನ್ನುಲುಬಿನೊಳಗಿನ ದ್ರವ ಉತ್ಪತ್ತಿ ಹಾಗೂ ಹೀರಿಕೊಳ್ಳುವ ಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇದು ಬೆನ್ನೆಲುಬಿಗೆ ಹಲವು ರೀತಿಯ ಸೇವೆಗಳ ನಿರ್ವಹಿಸುತ್ತದೆ. ಅದರ ಸಂಚಾರಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ಹೋದರೆ ಮರಣಾಂತಿಕವಾಗ ಬಹುದಾದ ತಡೆಯುಂಟಾಗಿತ್ತು. http://en.wikipedia.org/wiki/Syringomyelia
ಇದು ಶಾರ್ಟ್ ಸರ್ಕಿಟ್ ಆದಂತೆ ಎಂದು ಸರಳವಾಗಿ ವಿವರಿಸಿದ ನರ ಶಸ್ತ್ರಚಿಕಿತ್ಸಕ ಡಾ ರಾಜ ಬೆನ್ನೆಲುಬಿನೊಳಗೆ ದ್ರವ ಸಂಚಾರ ಸುಗಮವಾಗಲು ಒಂದು ಕೊಳವೆಯನ್ನು ತುರುಕಿಸಿದ್ದರು. ಆಗ ಬಾಧಿಸುತ್ತಿದ್ದ ಬೆನ್ನಿನಲ್ಲಿ ಸೂಜಿ ಚುಚ್ಚುವಂತಾದ ವಿಪರೀತ ನೋವಿಗೆ ತಕ್ಷಣ ಪರಿಹಾರ ದೊರಕಿತ್ತು.
ಮೊದಲು ಜಜ್ಜಿದಲ್ಲಿಯೇ ಕತ್ತರಿಸುತ್ತೇನೆ ಎಂದು ಹೇಳಿದವರು ಚಿಕಿತ್ಸೆ ಅನಂತರ ಅಲ್ಲಿ ಗಾಯ ಗುಣಮುಖವಾದ ಕಾರಣ ಮೇಲಿನ ಎಲುಬನ್ನು ಕತ್ತರಿಸಿದೆ ಎಂದಾಗ ನನಗೆ ಉಳಿದ ಸಮಸ್ಯೆಗಳಿಗೆ ಪರಿಹಾರ ಇಲ್ಲವಲ್ಲವೆಂದು ಬೇಸರ ನಿರಾಶೆ ಉಂಟಾಗಿತ್ತು.
ಬದಿಯಿಂದ ನೋಡಿದರೆ ಬೆನ್ನೆಲುಬು ಬಹುಮಹಡಿ ಕಾರ್ ಪಾರ್ಕಿನಂತೆ ಕಾಣುತ್ತದೆ. ಬೆನ್ನುಲುಬಿನಲ್ಲಿ ಒಂದರ ಮೇಲೊಂದು ಪೇರಿಸಿರುವಂತೆ ಕಾಣುವ 33 ಎಲುಬುಗಳಿವೆ. ಚೀಟಿ ಅಂಟಿಸದ ಕಾರಣ ದಾರಿ ತಪ್ಪುವುದು ಅಸಾದ್ಯವೇನಲ್ಲ. ಎಲ್ಲವು ಫಕ್ಕನೆ ಒಂದೇ ರೀತಿ ಕಾಣುವ ಕಾರಣ ಡಾ ರಾಜ ಅವರಿಗೆ ದಾರಿ ತಪ್ಪಿತೋ ? ಇರಲಾರದು ಅನ್ನಿಸುತ್ತದೆ ನನ್ನ ಚಿಕಿತ್ಸೆ ಮಾಡಿದ್ದು ಕೆಳಗಿನಿಂದ ಐದನೇಯ ಅಲ್ಲ ಅರನೇಯ ಮಹಡಿಯಲ್ಲಿ.
ಈ MRI ತೀರಾ ಕೆಟ್ಟ ಅನುಭವ. ಬೆಂಚೊಂದರಲ್ಲಿ ಮಲಗಿಸಿ ಯಂತ್ರದ ಕೊಳವೆಯಾಕಾರದ ಬಾಗದೊಳಗೆ ತಳ್ಳುತ್ತಾರೆ. ಅಲುಗಾಡದೆ ಮುಕ್ಕಾಲು ಘಂಟೆ ಮಲಗಿರಬೇಕು. ನನಗೆ ಹತ್ತು ನಿಮಿಷವೂ ಅಲುಗಾಡದೆ ಕೂರಲೂ ಮಲಗಲೂ ಸಾದ್ಯವಾಗುವುದಿಲ್ಲ. ರಾತ್ರಿ ಎಚ್ಚರವಾಗುವಾಗೆಲ್ಲ ಅಲುಗಾಡದೆ ಮಲಗಿದ ಕಾರಣ ವಿಪರೀತ ನೋವು. ಈ MRI ಯಂತ್ರ ಹೊರಡಿಸುವ ವಿಚಿತ್ರ ವಿಕಾರ ಕಿವಿಗುಟ್ಟುವ ಹಲವು ರೀತಿಯ ಶಬ್ದ ಮನಸ್ಸು ಕೇಂದ್ರಿಕರಿಸಲು ಸ್ವಲ್ಪ ಸಹಾಯ ಮಾಡಿತು.
ನನ್ನ MRI ಚಿತ್ರವನ್ನು ನೋಡಿದ ಡಾ ಮಹೇಶರು ಹದಿನಾಲ್ಕು ವರ್ಷದಿಂದ ನನ್ನ ಬೆನ್ನೆಲುಬಿನೊಳಗೆ ಕುಳಿತ ಕೊಳವೆ ಪೂರ್ತಿ ಬ್ಲೋಕ್ ಆಗಿದೆ ಎಂದಾಗ ನನಗೆ ಆಘಾತವಾಯಿತು. ಪಡ್ಚ ಅನ್ನಿಸಿತು. ನನ್ನ ಸೋದರತ್ತೆ ಗಂಡ ಹಿರಿಯ ವೈದ್ಯ ಡಾ ಗೋವಿಂದ ಭಟ್ ಅವರು ಆಗಲೇ ಈ ಕೊಳವೆ ಎಷ್ಟು ವರ್ಷ ಬಾಳುವಿಕೆ ಎನ್ನುವ ಪ್ರಶ್ನೆ ಹಾಕಿದ್ದರು. ಈಗ ಗುಜರಿಯಾಗಿದೆಯಂತೆ ಎಂದು ಹೇಳೋಣವೆಂದರೆ ಅವರು ನಮ್ಮೊಂದಿಗಿಲ್ಲ.
ಅಪಘಾತವಾದ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಬಹುದಾದ ಮಾಡಬೇಕಾದ case. ಈಗ ಏನು ಮಾಡುವಂತಿಲ್ಲ. ಮುಟ್ಟುವುದೂ ಅಪಾಯಕಾರಿಯಾಗಬಹುದೆಂದು ವಿವರಿಸಿ ವೈದ್ಯರು ನನ್ನ ಬೀಳ್ಕೊಟ್ಟರು. ಈ ತರುಣ ವೈದ್ಯರು ಆಂದು ನನಗೆ ಸಿಕ್ಕಿದ್ದರೆ ಅಥವಾ ನನ್ನ ಅಪಘಾತ ಕೆಲವು ವರ್ಷ ವಿಳಂಬಿಸಿದ್ದರೆ ಅನ್ನುವ ಅಲೋಚನೆ ಮನದಲ್ಲಿ ಮೂಡಿತು.
ಕಳ್ಳರ ಸಂತೆ ಕಥೆ ನೆನಪಾಯಿತು. ಕಥಾನಾಯಕ ಶುಂಠಿಯ ಪ್ರಿಯತಮೆ ಅವನಿಗಿಂತ ದೊಡ್ಡೋಳು. ಪರಿಹಾರವಾಗಿ ಒಂದು ವರ್ಷ ಕಾಯೋಣ ಆಗ ನಾನೊಂದು ವರ್ಷ ದೊಡ್ಡೋನಾಗ್ತೀನಿ. ನಂತರ ಮದುವೆಯಾಗೋಣ ಅಂದಿದ್ದ ಶುಂಠಿ.
Sunday, April 05, 2009
Subscribe to:
Post Comments (Atom)
3 comments:
ಇಷ್ಟೆಲ್ಲ ಸಂಕಷ್ಟಗಳ ನಡುವೆಯೂ ಬದುಕಿನ ಬಗ್ಗೆ ನಿರಾಶೆಗೊಳ್ಳದೆ, ಅನುಭವಗಳಿಗೆ ಪ್ರೀತಿಯಿಂದಲೇ ತೆರೆದುಕೊಳ್ಳುವ ನಿಮ್ಮ ಸ್ವಭಾವ...ಶಹಬ್ಭಾಶ್!
ಅನುಭವ ಹಂಚಿಕೊಂಡರೆ ಇಂತಹ ಸಮಸ್ಯೆ ಬಂದವರಿಗೆ ಪ್ರಯೋಜನ ಇದೆ ಅನ್ನಿಸಿತು.
Over the counter ಮದ್ದಿನ ವಿವರ ಹಂಚಿಕೊಂಡಂತೆ.
ಸದಾ ಬಾದಿಸುವ ನೋವಿನಿಂದ ಮನಸ್ಸನ್ನು ಬೇರೆಡೆಗೆ ಹಾಯಿಸಲು ಏನಾದರು ಮಾಡುತ್ತಲೇ ಇರುತ್ತೇನೆ. ಅದರಲ್ಲೊಂದು ಈ ಬ್ಲೋಗ್ ಬರಹ
ನಿಮ್ಮ ಸದಾಶಯಗಳಿಗೆ ಕೃತಜ್ನತೆಗಳು.
Post a Comment