Monday, June 29, 2009

ಗಾಂಧಿ ಕುಟುಂಬದಲ್ಲಿ ಕೊಲೆ ಮತ್ತು ಸಿಂಧ್ಯರ ಸೋಲು

೧೯೮೪ರಲ್ಲಿ ಲೋಕಸಭೆ ಚುನಾವಣೆಗೆ ನಿಂತಾಗ ಇಂದಿರಾ ಗಾಂಧಿ ಕೊಲೆಯಾಯಿತು.  ಅನುಕಂಪದ ಅಲೆಯಿಂದಾಗಿ ನಾನು ಸೋತೆ. ೧೯೮೯ರಲ್ಲಿ ಲೋಕಸಭೆಗೆ ಸ್ಪರ್ಢಿಸಿದೆ. ರಾಜೀವ ಗಾಂಧಿ ಕೊಲೆಯಾಗಿ ಕಾಂಗ್ರೇಸು ಪರ ಅನುಕಂಪದ ಅಲೆಯಲ್ಲಿ ನಾನು ಸೋತೆ ಎಂದು ಇಂದಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ಮಾಜಿ ಮಂತ್ರಿ ಪಿ ಜಿ ಅರ್ ಸಿಂಧ್ಯ ಹೇಳಿಕೊಂಡಿದ್ದಾರೆ.  ಅನಂತರ ನಾನು  ಲೋಕ ಸಭೆಗೆ  ಸ್ಪರ್ಧಿಸಲಿಲ್ಲ  ಎಂದೂ  ಹೇಳಿದ್ದಾರೆ.

೧೯೮೧ ಮತ್ತು ೧೯೯೫ ರ ಘಟನೆಗಳ ಗಮನಿಸಿ.

೧೯೮೧ರಲ್ಲಿ
ಇಂಗ್ಲೇಂಡಿನ ಯುವರಾಜ ಚಾರ್ಲ್ಸ್ ವಿವಾಹ
ಯುರೋಪಿನ ಕಾಲ್ಚೆಂಡು ಆಟದಲ್ಲಿ ಇಂಗ್ಲೇಂಡ್ ವಿಜಯ
ಆಶಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು
ದರ್ಮಗುರು ಪೋಪರ ಮರಣ.

೧೯೯೫ರಲ್ಲಿ
ಇಂಗ್ಲೇಂಡಿನ ಯುವರಾಜ ಚಾರ್ಲ್ಸ್ ವಿವಾಹ
ಯುರೋಪಿನ ಕಾಲ್ಚೆಂಡು ಆಟದಲ್ಲಿ ಇಂಗ್ಲೇಂಡ್ ವಿಜಯ
ಆಶಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು
ದರ್ಮಗುರು ಪೋಪರಿಗೆ ಗಂಡೇಟು

ಹಾಗೆ ಇನ್ನು ಇಂಗ್ಲೇಂಡಿನ ಯುವರಾಜ ಚಾರ್ಲ್ಸ್ ಮದುವೆಯಾಗುವ ಆಲೋಚನೆ ಮಾಡಿದರೆ ಪೋಪರಿಗೆ ತಿಳಿಸಬೇಕೆನ್ನುವ ಮಾತು ಚಾಲ್ತಿಯಲ್ಲಿದೆ. ಹಾಗೆ ನಮ್ಮ ಸಿಂಧ್ಯ ರು ಪುನಹ ಲೋಕಸಭೆಗೆ ಸ್ಪರ್ದಿಸುವುದಾದರೆ ಸೊನಿಯಾ ರಾಹುಲರಿಗೆ ತಿಳಿಸಬೇಕು ಎನ್ನೋಣವೇ |

Friday, June 26, 2009

ಮತವಂಚನೆಯಲ್ಲಿ ಹೊಸ ದಾಖಲೆ ಇರಾನಿನಲ್ಲಿ

ಇತ್ತೀಚೆಗೆ ಇರಾನಿನನಲ್ಲಿ ನಡೆದ ಚುನಾವಣೆ ಯಶಸ್ವಿಯಾಗಿ   ಅದು  ನಡೆದ ರೀತಿ ಜಗತ್ತಿನಲ್ಲಿ ಗಮನಸೆಳೆದಿದೆ. ಈ ಸಲ ಲೆಕ್ಕಾಚಾರ ತಪ್ಪಿದ  ಲಾಲೂ ಪಸ್ವಾನರು ನಮ್ಮ ಕಮುನಿಸ್ಟ್ ನಾಯಕರೊಂದಿಗೆ ಹೋಗಿ ಇದನ್ನು ಅಭ್ಯಸಿಸಲಿದ್ದಾರೆ ಮತ್ತು  ಗೌಡಜ್ಜನ ಪರವಾಗಿ ಕುರಾಮಸ್ವಾಮಿ  ಈ ಪಟಲಾಂನಲ್ಲಿ     ಹೋಗುವ ಸಾದ್ಯತೆ ಹೆಚ್ಚಿದೆ   ಎನ್ನುವ ಸುದ್ದಿ ಕುಹಕವಾದರೂ  ಅಲ್ಲಿ ನಡೆದ ಗೋಲ್ ಮಾಲ್ ಗಮನ ಸೆಳೆಯುವಂತಿದೆ.

ಇರಾನಿನ ಮತದಾನದ ಬಗೆಗೆ ನನಗೆ ಬಹುಕಾಲದಿಂದ ಅಭಿಮಾನ. ಅವರ ಸಂವಿದಾನ ಸರಿಯಾಗಿ ಅರ್ಥಮಾಡಿಕೊಳ್ಳಲು ನಾನು ರಾಜ್ಯಶಾಸ್ತ್ರ ವಿದ್ಯಾರ್ಥಿಯಲ್ಲ. ದಾರ್ಮಿಕ ಮಾರ್ಗದರ್ಶಕ ಎಂಬ ಪ್ರಶ್ನಾತೀತ ನಾಯಕರಲ್ಲಿ ಅಧಿಕಾರ ಕೇಂದ್ರಿಕೃತವಾಗಿದೆ. ಅದುದರಿಂದ ಈ ಅಯ್ಕೆಯಾದ ಅದ್ಯಕ್ಷರಿಗೆ ಸಿಮಿತ ಅದಿಕಾರ. ಸರಳವಾಗಿ ನಾನು ಕಂಡಂತೆ ಇಲ್ಲಿ ಗೆಲ್ಲಬೇಕಾದರೆ ಶೇಕಡ ಐವತ್ತು ಮತ ಗಳಿಸಲೇ ಬೇಕು. ಇಲ್ಲವಾದರೆ ಹೆಚ್ಚು ಮತ ಪಡೆದ ಇಬ್ಬರು ಅಬ್ಯರ್ಥಿಗಳು ಕಣದಲ್ಲಿದ್ದು ಮರುಮತದಾನ. ಕಳೆದ ಬಾರಿ ಅಂದರೆ ನಾಲ್ಕು ವರ್ಷ ಹಿಂದೆ ಸುಮಾರು ಶೇಕಡ ಇಪ್ಪತ್ತರಷ್ಟು ಮತ ಪಡೆದ ಅಭ್ಯರ್ಥಿಗಳ ಮದ್ಯೆ ಮರುಮತದಾನವಾಗಿ ಒಬ್ಬರು ಶೇಕಡ ಅರುವತ್ತು ಮತ ಪಡೆದು ಗೆದ್ದರು. ಆ ಸಲ ಶೇಕಡಾ ಅರುವತ್ತು ಮತದಾರರು ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸಲ ಶೇಕಡ ಎಂಬತ್ತೈದು ಮತದಾರರು ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಮತಗಳನ್ನು ಎಣಿಕೆ ಮಾಡುವುದು ಕೈ ಎಣಿಕೆಯೇ ಆದೂ ಮತದಾನ ಮುಗಿದ ಎರಡು ಘಂಟೆಯೊಳಗೆ ಸರಕಾರಿ ಸುದ್ದಿ ಸಂಸ್ಥೆಯಿಂದ ಫಲಿತಾಂಶದ ಸುಳಿವು ಕರಾರುವಕ್ಕಾಗಿ ಕೊಡಲು ಸಾದ್ಯ ಆಗಿದೆ. ಹಾಲಿ ಆದ್ಯಕ್ಷರಿಗೆ ಅಹ್ಮದಿನೆಜಾದ್
ಅವರಿಗೆ ಶೇಕಡ 69 ಮತ ಮತ್ತು ವಿರೋದಿ ಅಭ್ಯರ್ಥಿ ಮುಸಾವಿಗೆ 28 ಮಾತ್ರವೆನ್ನುವ ಖಚಿತ ಲೆಕ್ಕಾಚಾರ.

ಇರಾನಿನ ಒಂದು ವಿಶೇಷ ಎಂದರೆ ನಿಗದಿತ ಮತಕೇಂದ್ರಕ್ಕೆ ಹೋಗಬೇಕಾಗಿಲ್ಲ. ಗುರುತುಪತ್ರ ತೋರಿಸಿ ಎಲ್ಲಿಯೂ ಮತದಾನ ಮಾಡಬಹುದು. ಈ ವಿಚಾರವನ್ನು ಆಡಳಿತರೂಡರು ಚೆನ್ನಾಗಿ ಉಪಯೋಗಿಸಿದಂತಿದೆ. 5೦ ಪುಟ್ಟ ಊರುಗಳಲ್ಲಿ ಅಲ್ಲಿನ ಜನಸಂಖ್ಯೆಯಿಂದ ಮೂವತ್ತು ಲಕ್ಷಕ್ಕೂ ಹೆಚ್ಚು ಮತಗಳು ಪೆಟ್ಟಿಗೆಯೊಳಗೆ ಬಿದ್ದಿದೆ. ಆದರೆ ಅವುಗಳು ಜನರು ಪ್ರವಾಸಿಗಳು ಬೇಟಿ ನೀಡುವ ಊರುಗಳೇ ಅಲ್ಲವಂತೆ. ಒಂದು ಹೋಲಿಕೆಯೆಂದರೆ ನಮ್ಮಲ್ಲೂ ಚುನಾವಣೆ ತೆರೆಮರೆಯ ಆಟಗಳು ನಡೆಯುವುದು ಇಂತಹ ಪ್ರತ್ಯೇಕವಾಗಿರುವ ಗಮನಸೆಳೆಯದ ದೂರದ ಮತೆಗಟ್ಟೆಗಳಲ್ಲಿಯೇ.

ದೇಶದಾದ್ಯಂತ ಏಕರೀತಿಯಲ್ಲಿ ಮತದಾನವಾಗುವುದು ಅಸಂಬವ. ನಮ್ಮಲ್ಲಿ ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿಸುತ್ತಿನಲ್ಲೂ ಬಹುಮತ ಬದಲಾವಣೆ ಆಗುತ್ತಲೇ ಇತ್ತು. ಅದರೆ ಅಲ್ಲಿ ಪ್ರತಿ ಸುತ್ತಿನಲ್ಲೂ ಹಾಲಿ ಅದ್ಯಕ್ಷರಾದ  ಅಹ್ಮದಿನೆಜಾದ್ ಶೇಕಡಾ ಎಪ್ಪತ್ತರಷ್ಟು ಮತಗಳನ್ನು ಉದ್ದಕ್ಕೂ ಪಡೆದುದು ಅದ್ಬುತವೇ ಸರಿ. ನಾಲ್ಕು ಕೋಟಿ ಮತಗಳ ಎಣಿಕೆ ಮುಂದುವರಿಯುತ್ತಿರುವಾಗ ಮತಗಳಗಳ ಶೇಕಡವಾರು ಲೆಕ್ಕಾಚಾರ ಬದಲಾಗಲೇ ಇಲ್ಲ.

ಸಮಾನ್ಯವಾಗಿ ಮತಗಳ ಎಣಿಕೆ ಮಾಡುವಾಗ ವಿವಿದ ಅಭ್ಯರ್ತಿಗಳ ಮತ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ.
ಪ್ರಾಯುಷ ಪ್ರಪಂಚದಲ್ಲೇ ಮೊದಲ ಬಾರಿ ಒಬ್ಬರು ಅಭ್ಯರ್ಥಿ ಇರಾನಿನಲ್ಲಿ ಹಿನ್ನೆಡೆ ಅನುಭವಿಸಿದ್ದಾರೆ. ಬೆಳಗ್ಗೆ 09:47ಕ್ಕೆ 633,048 ಮತಪಡೆದಿದ್ದ ಮೋಹ್ಸಿನ್ ರಾಜಿ ಮಧ್ಯಾಹ್ನ 13:53 ಕ್ಕಾಗುವಾಗ 587,913 ಪಡೆದಿದ್ದಾರೆಂದು ವರದಿಯಾಗಿದೆ.

ಅಂತೂ ಚುನಾವಣೆ ಇತಿಹಾಸದಲ್ಲಿಯೇ ಹೊಸ ಮೈಲುಗಲ್ಲು.    ಅಲ್ಲಿನ   ಜನರು  ಈಗ   ಕೇಳುತ್ತಿರುವ  ಪ್ರಶ್ನೆ  ನನ್ನ  ಮತ ಏನಾಯಿತು ??

Monday, June 22, 2009

ಪಾಕಿಸ್ಥಾನದವರಿಗೆ ಈಗ ಜರ್ದಾರಿಯವರನ್ನು ಉಗಿಯೋದು ದುಬಾರಿ

ಪಾಕಿಸ್ತಾನದಲ್ಲಿ ಮಾತನಾಡಿಕೊಳ್ಳುತ್ತಿದ್ದಾರಂತೆ - ಈಗ ಜರ್ದಾರಿನ ಉಗಿಯೊದು ಸಹಾ ದುಬಾರಿಯಾಗಿಬಿಟ್ಟಿದೆ. ವಿಷಯ ಏನು ಎಂದರೆ ಜರ್ದಾರಿ ಜೋಕುಗಳ ನಿಯಂತ್ರಿಸಲು ಇಪ್ಪತ್ತು ಪೈಸೆ ಪ್ರತಿ ಸಂಚಾರವಾಣಿ ಸಂದೇಶಕ್ಕೆ ತೇರಿಗೆ ವಿದಿಸಲ್ಪಟ್ಟಿದೆ.

ನಮ್ಮಲ್ಲಿರುವ ಸರ್ದಾಜಿ ಜೋಕುಗಳೆಲ್ಲ ಪಾಕಿಸ್ಥಾನದಲ್ಲಿ ಜರ್ದಾರಿ ಜೋಕುಗಳಾಗಿ ಪರಿವರ್ತನೆ ಹೊಂದಿವೆ. ಸರ್ವಾದಿಕಾರಿಗಳ ಮೇಲೆ ಜೋಕು ಪ್ರಯೋಗ ಎಲ್ಲ ಕಮುನಿಸ್ಟ್ ದೇಶಗಳಲ್ಲೂ ಮಾಮೂಲು. ಪರೋಕ್ಷವಾಗಿ ಕುಟುಕುವುದರಿಂದ ಶಿಕ್ಷೆಗೆ ಒಳಪಡುವುದಿಲ್ಲ.

ಸಂಚಾರವಾಣಿ ಉಪಯೋಗದ ಮಟ್ಟಿಗೆ ಜಗತ್ತಿನಲ್ಲಿ ಐದನೇಯ ಸ್ಥಾನದಲ್ಲಿರುವ ಪಾಕಿಸ್ಥಾನದಲ್ಲಿ
ಸರಕಾರ ಬಹಳ ಸಮಯದಿಂದ ಈ ಜರ್ದಾರಿ ಜೋಕುಗಳ ನಿಯಂತ್ರಣಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಜೈಲಿಗೆ ಹಾಕುತ್ತೇವೆ ಎಂದು ಬೆದರಿಸುತ್ತಲೂ ಇದೆ.
ಯಾವ ರೀತಿಯಲ್ಲಿ ಹಿಡಿಯಲು ಸಾದ್ಯವಾಗಬಹುದೆಂಬ ಸುಳಿವು ಮಾತ್ರ ಅವರಿಗೆ ಇನ್ನೂ ಸಿಕ್ಕಿಲ್ಲ.

ಅದುದರಿಂದ SMSಗಳಿಗೆ ತೇರಿಗೆ ಹಾಕಿದರೆ ಅನ್ನುವ ಆಲೋಚನೆ ಬಂದು ಈಗ ಪ್ರತಿ SMSಗಳಿಗೆ 20 ಪೈಸೆ ತೇರಿಗೆ ವಿದಿಸಲ್ಪಡುತ್ತಿದೆ. ಅದರೆ ಬರೇ ಜರ್ದಾರಿ ಜೋಕುಗಳು ಮಾತ್ರವಲ್ಲ ಎಲ್ಲ ಸಂದೇಶಗಳಿಗೂ ಈ ತೇರಿಗೆ ವಿದಿಸಲ್ಪಡುವುದು ಬಡಜನತೆಗೆ ನಂಗಲಾರದ ತುತ್ತು ಅನ್ನುತ್ತದೆ ಅಲ್ಲಿನ ಪತ್ರಿಕೆಗಳು.

ಕಳೆದ ವರ್ಷ ಅಮೇರಿಕದ ಚುನಾವಣೆ ಸಮಯದಲ್ಲಿ ಸಾರ ಪಾಲಿನ್ ಳನ್ನು ಜರ್ದಾರಿ ಅಪ್ಪಿಕೊಂಡಾಗ ಈ ಜೋಕ್ ಗಳ ಸಂಚಾರ  ಜೋರಾಗಿತ್ತಂತೆ.   ಅಲ್ಲಿಂದ ಹೆಕ್ಕಿದ ಒಂದು ನಗೆಹನಿ

Just imagine Sarah Palin divorces her current husband and marries Asif Zardari.
Then Palin becomes Vice President of USA.
Then Zardari kills Palin, changes the Will which henceforth says, ‘Zardari will become the President of USA if I die.’
And eventually Zardari becomes President of USA six months after Palin’s death.
And Bilawal changes his name to Bilawal Palin-Zardari

ನಂತರದ   ಸೆರ್ಪಡೆ : ಜುಲೈ ೨೦ರ  ಕನ್ನಡ  ಪ್ರಭ

Sunday, June 21, 2009

ಸ್ವದೇಶಿ ಪರದೇಶಿ ವಿಮಾನಯಾನ ಸಂಸ್ಥ ಅಧಿಕಾರಿಗಳ ಬಿನ್ನ ವರ್ತನೆ.


ಏರ್ ಇಂಡಿಯಾದಲ್ಲಿ ಹಣದ ಇಕ್ಕಟ್ಟು. ಹಿರಿಯ ಅಧಿಕಾರಿಗಳು ಜುಲೈ ತಿಂಗಳ ಸಂಬಳ ತ್ಯಾಗಕ್ಕೆ ತಯಾರಾಗಿ ಎಂದಿದೆ ಆಡಳಿತ. ಹಾಗೆ ನೆನಪಾಯಿತು ಒಂದು ಈ ಸಂಸ್ಥೆಯ ಹಿರಿಯ ಅಧಿಕಾರಿಯೊಂದಿಗೆ ಸಂವಾದ - ಒಂದು ಹಳೆಯ ಅನುಭವ.

ನನ್ನ ಸೈಕಲ್ ಪ್ರವಾಸದ ಅಂಗ
ವಾಗಿ ಬೇರೆ ಬೇರೆ ವಿಮಾನ ಸಂಸ್ಥೆಗಳ ಇಬ್ಬರು ಅಧಿಕಾರಿಗಳಲ್ಲಿ ಮಾತನಾಡಿದ್ದೆ. ಇಬ್ಬರಲ್ಲೂ ಒಂದೇ ಬಗೆಯ ಕೋರಿಕೆ ಮಾಡಿದ್ದೆ. ಇಬ್ಬರೂ ಬಹಳ ಬಿನ್ನವಾಗಿ ವರ್ತಿಸಿದ್ದರು. Air Indiaದ ಹಿರಿಯ ಅಧಿಕಾರಿ ನಕಾರಾತ್ಮಕವಾಗಿ ವರ್ತಿಸಿದ್ದರೆ ಇನ್ನೊಂದರ China Airlinesನ ಕಿರಿಯ ಅಧಿಕಾರಿ ನನ್ನ ಅಗತ್ಯಕ್ಕೆ ಸ್ಪಂದಿಸಿದ್ದರು. ನಮ್ಮ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಸರಕಾರಿ ಕಛೇರಿಯಂತೆ ಕೆಲಸಮಾಡುತ್ತದೆ ಅಂದರೂ ಸರಿ.

ವಿಮಾನ ಪ್ರಯಾಣ ಟಿಕೇಟು ದ್ವಿಮುಖಯಾನವಾದರೆ ಅಗ್ಗ. ಆದರೆ ಹೋದ ದಾರಿಯಲ್ಲಿಂದಲೇ ಬರಬೇಕೆಂಬ ನಿರ್ಬಂದ. ತ್ರಿಕೋನಾಕಾರದ ಪಯಣವಾದರೆ ಪೂರ್ವ ನಿರ್ದೇಶಿತ ದಾರಿಯಲ್ಲಿಯೇ ಪಯಣ. ವಿಮಾನದಿಂದ ಇಳಿದಲ್ಲಿಂದಲೇ ಹತ್ತಬೇಕು. ಜತೆಗೆ ಹೊರಹೋಗುವ ಅಥವಾ ಊರು ತಲಪುವ ಟಿಕೇಟು ತೋರಿಸದಿದ್ದರೆ ಯಾವ ದೇಶದವರೂ ನಮ್ಮನ್ನು ಒಳಕ್ಕೆ ಬಿಡುವುದಿಲ್ಲ. ಹೀಗೆ ವಾಪಾಸು ಬರುವ ಟಿಕೇಟು ಅನಿವಾರ್ಯ. ಎಲ್ಲ ದೇಶದವರಿಗೂ ಈ ವ್ಯಕ್ತಿ ನಮ್ಮಲ್ಲಿ ಉಳಕೊಳ್ಳುತ್ತಾನೋ ಅನ್ನುವ ಸಂಶಯ. ಹೀಗೆಲ್ಲ ಸಮಸ್ಯೆಗಳು.

ಸ್ವಾಮಿ. ನಾನು ಆಫ್ರಿಕದಿಂದ ಯುರೋಪಿಗೆ ಸೈಕಲಿನಲ್ಲಿ ಪ್ರವಾಸ ಮಾಡುವವನಿದ್ದೇನೆ. ನಾನು ವಿಮಾನದಿಂದ ಇಳಿದಲ್ಲಿಯೇ ಪುನಹ ಹತ್ತುವುದಿಲ್ಲವಾದುದರಿಂದ ಮಾರುಕಟ್ಟೆಯಲ್ಲಿರುವ ಯಾವ ಮಾಮೂಲಿ ಕೊಡುಗೆಗಳೂ ನನಗೆ ಹೊಂದುವುದಿಲ್ಲ. ಹಾಗಾಗಿ ಬಾರತದಿಂದ ಆಫ್ರಿಕಕ್ಕೂ ವಾಪಾಸು ಯೂರೊಪಿನಿಂದ ಬಾರತಕ್ಕೂ ಬರುವಂತಹ ಟಿಕೇಟು ಅವಕಾಶ ಮಾಡಿಕೊಡಬೇಕು ಎಂದು ನನ್ನ ಬಿನ್ನಹ Air India ಸಾರ್ವಜನಿಕ ಸಂಪರ್ಕಾದಿಕಾರಿ ಬರ್ಗಾವೋಂಕರ್ ಅವರಲ್ಲಿ ಅವರ ಏಳನೇಯ ಅಂತಸ್ತಿನಲ್ಲಿರುವ ಕಛೇರಿಯಲ್ಲಿ ಅರಿಕೆ ಮಾಡಿಕೊಂಡೆ.

ನನ್ನ ಬಜೇಟು ಮೀರಿದೆ, ಕೆಲಸ ಹೋಗಬಹುದು ಏನೆಲ್ಲ ಅಸಂಬದ್ದ ಅರ್ಥಹೀನ ಮಾತುಗಳನ್ನು ಅ ಹಿರಿಯ ಅಧಿಕಾರಿ ಹೇಳಿದ.

ನಾನು ದರ್ಮಾರ್ಥ ಕೊಡುಗೆ ಅಪೇಕ್ಷಿಸುತ್ತಿಲ್ಲ. ಪ್ರಯಾಣಕ್ಕಾಗುವ ಹಣ ಕೊಡುತ್ತೇನೆ. ವಾಪಾಸು ಬರುವಾಗ ನನಗೆ ಇನ್ನೊಂದು ಸ್ಥಳದಿಂದ ಹತ್ತುವ ಅವಕಾಶ ಮಾತ್ರ ನಾನು ಅಪೇಕ್ಷಿಸುವುದು. ಏನು ಹೇಳಿದರೂ ಅರ್ಥವಾಗುವ ಸ್ಥಿತಿಯಲ್ಲಿ ಅವರಿರಲಿಲ್ಲ.

 
ಮೇಲಾಗಿ ಸಂಪರ್ಕಕ್ಕೆ ಬಂದವರಿಗೆ ನಾನು ಹಂಚುವ ನನ್ನ ಪುಟ್ಟ ವಿಳಾಸ ಚೀಟಿಯಲ್ಲಿ ನಿಮ್ಮ ಸಹಾಯವನ್ನು ಸೂಚಿಸುವೆ ಎಂದೂ ಹೇಳಿದೆ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲವೆಂದು ಹೊರಬಂದೆ. ಕೆಳಬಂದಾಗ ನನಗೆ ಅ ಕಛೇರಿಗೆ ದಾರಿ ತೋರಿಸಿದವರು ಹೇಳಿದರು. There are many wrong people at wrong places in Air India.

ಈಜಿಪ್ಟ್ ಎರ್ ಸಂಸ್ಥೆಯ ಎಜನ್ಸಿಯವರು ನನಗೆ ಮುಂಬಯಿ ನೈರೋಬಿ ಲಂಡನ್ ಮುಂಬಯಿ ತ್ರಿಕೋನ ಪ್ರಯಾಣ ಟಿಕೇಟು ಒದಗಿಸಿದರು. ತಮಾಷೆ ಎಂದರೆ ಮೊದಲ ಎರಡು ಹಂತ ಅಂದರೆ ಮುಂಬಯಿ ನೈರೊಬಿ ಮತ್ತು ನೈರೋಬಿ ಲಂಡನ್ ಮಾರ್ಗದಲ್ಲಿ ಅವರ ವಿಮಾನ ಹಾರುತ್ತಿರಲಿಲ್ಲ. ಹಾಗೆ ನೈರೋಬಿಗೆ ಕೆನ್ಯಾ ವಿಮಾನದಲ್ಲಿ ಹಾರುತ್ತಿಯಾ ಅಲ್ಲ ಎರ್ ಇಂಡಿಯಾದಲ್ಲೋ ಎಂದು ಅವರು ಕೇಳಿದಾಗ ಕೆನ್ಯಾ ವಿಮಾನವೇ ಇರಲೆಂದು ಹೇಳಿದೆ. ಅಷ್ಟರ ಮಟ್ಟಿಗೆ ಏರ್ ಇಂಡಿಯ ಬಗೆಗೆ ಜುಗುಪ್ಸೆ ಉಂಟಾಗಿತ್ತು.

ಟೋಕಿಯೊವಿನ ಹಾನೆಡ ನಿಲ್ದಾಣದಲ್ಲಿ ಇಳಿದಾಕ್ಷಣ ಅಲ್ಲಿರುವ ಚೀನಾ (ಟೈವಾನ್) ವಿಮಾನಯಾನ ಸಂಸ್ಥೆಯ ಕಛೇರಿಗೆ ನುಗ್ಗಿದೆ. ಅಲ್ಲಿ ಅಧಿಕಾರಿಯೊಬ್ಬರು ಸಹಾಯಕಿಯೊಂದಿಗೆ ಇದ್ದರು. ಇಬ್ಬರಿಗೂ ಇಂಗ್ಲೀಷ್ ಜ್ನಾನ ಅಷ್ಟಕಷ್ಟೇ. ನಾನು ಇಲ್ಲಿಂದ 900 ಕಿಮಿ ದೂರದ ಮಟ್ಸುಯಾಮಕ್ಕೆ ಸೈಕಲಿಸಲಿದ್ದೇನೆ. ವಾಪಾಸು ಇಲ್ಲಿಗೆ ಬರುವ ಬದಲಿಗೆ ಅಲ್ಲಿಗೆ ಹತ್ತಿರವಿರುವ ಫುಕೋಕದಲ್ಲಿ ವಿಮಾನ ಏರಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡೆ.

ಅವರು ಮೊದಲು ಸಾದ್ಯವಿಲ್ಲ ನಿನ್ನಲ್ಲಿರುವುದು ಯಾವುದೇ ಬದಲಾವಣೆಗೆ ಅಸ್ಪದವಿಲ್ಲದಿರುವ ಕಡೇ ದರ್ಜೆ ITX ಟೀಕೇಟು ಎಂದರೂ ನಂತರ ನನ್ನ ಸಮಸ್ಯೆ ಅರ್ಥ ಮಾಡಿಕೊಂಡರು.  ಯಾವುದೇ  ದಾಕ್ಷಿಣ್ಯಕ್ಕೆ  ಒಳಪಡದಿದ್ದರೂ  ನನ್ನ ಕೇಳಿಕೆ ಪ್ರಕಾರ ಅಸ್ಪದವನ್ನಿತ್ತರು. ಹಾಗೆ   ಸಾವಿರ  ಕಿಮಿ ಸೈಕಲಿಸುವುದು ಉಳಿತಾಯವಾದ   ನಾನು ಫುಕೋಕ ಪಟ್ಟಣದಿಂದ ಇಪ್ಪತ್ತು ದಿನಗಳ ಅನಂತರ ಹಾರಿ ಪ್ರಯಾಣ ಮುಂದುವರಿಸಿದೆ.

ಸಂಬಳ ಕೊಡಲು ಇವರಲ್ಲಿ ಯಾಕೆ ದುಡ್ಡಿಲ್ಲವೆಂದು ಕಲ್ಪಿಸಿಕೊಳ್ಳಲು ಸಾದ್ಯವಾಗುತ್ತದೆ. ಕಳಪೆ ಸೇವೆ ಅನ್ನಬೇಕಾಗುತ್ತದೆ.  



Friday, June 12, 2009

ತೆಂಗಿನೆಣ್ಣೆ ಹಿಂಡಲು ಮಾಂಸಹಾರಿ ವಿಧಾನ

ಸೇವಾಗ್ರಾಮದ ಗಾಂಧಿ ಆಶ್ರಮ science for villages ಎನ್ನುವ ಪಾಕ್ಷಿಕ ಪ್ರಕಟಿಸುತಿತ್ತು. ನಾನು ಅದರ ಖಾಯಂ ಓದುಗನಾಗಿದ್ದೆ. ಹಲವು ಕೂತೂಹಲಕರ ಪ್ರಯೋಗಗಳು  ಅದರಲ್ಲಿ  ಇದ್ದವು.   ಇಪ್ಪತ್ತೋಂದು ವರ್ಷ ಹಿಂದೆ ಎಪ್ರಿಲ್ 1988 ರ ಸಂಚಿಕೆಯಲ್ಲಿ ಇಂಡೋನೇಶ್ಯದಲ್ಲಿ ಚಲಾವಣೆ ಇರುವ ತೆಂಗಿನ ಕಾಯಿಯಿಂದ ಎಣ್ಣೆ ಬೇರ್ಪಡಿಸುವ ವಿಧಾನ ಪ್ರಕಟವಾಗಿತ್ತು. ಪತ್ರಿಕೆ  ರದ್ದಿಗೆ ಸೇರುವಾಗ ಒಂದು ಪ್ರತಿ ಇರಲೆಂದು ಇಟ್ಟುಕೊಂಡೆ. ಜಗತ್ತಿನಲ್ಲಿ  ಒಂದೆಡೆ  ತೆಂಗಿನಕಾಯಿ  ಬೆಳೆಯುವಲ್ಲಿ   ಇಂತಹ ವಿಧಾನ ಚಾಲ್ತಿಯಲ್ಲಿತ್ತು ಎನ್ನುವ ವಿಚಾರ ಹಂಚಿಕೊಳ್ಳುತ್ತಿದ್ದೇನೆ ಹೊರತು ಇದು ಪ್ರಾಯೋಗಿಕ ಎಂದಲ್ಲ.



ಸರಳವಾಗಿ  ಹೇಳುವುದಾದರೆ   ನದಿಯಲ್ಲಿರುವ ಏಡಿಯನ್ನು ಹಿಡಿದು ಅದರ ಚಿಪ್ಪನ್ನು ಬೇರ್ಪಡಿಸಿ ಪುಡಿಮಾಡಬೇಕಂತೆ. ಅನಂತರ ಅದನ್ನು ತೆಂಗಿನ ತುರಿಯೊಂದಿಗೆ ಮಿಶ್ರ ಮಾಡಿ ಒಂದು ರಾತ್ರಿ ಬಿಡಬೇಕು. ಮರುದಿನ ಬೆಳಗಾಗುವಾಗ ಅ ಮಿಶ್ರಣ ಕೆಂಬಣ್ಣದ ತೈಲಮಯವಾಗಿರುತ್ತದೆ. ಪ್ಲಾಸ್ಟೀಕ್ ಹಾಳೆಯಲ್ಲಿ ಮೂರುನಾಲ್ಕು ಘಂಟೆ ಒಣಗಿಸಿ ಎಣ್ಣೆ ಹಿಂಡಬೇಕು ಅನ್ನುತ್ತದೆ ಲೇಖನ. ವಿವರಕ್ಕೆ ಮೂಲ ಲೇಖನವನ್ನು ಜತೆಗಿರಿಸಿದ್ದೇನೆ. ಈಗ virgin coconut oil ಎನ್ನುವ ಹೊಸ ಸ್ವರೂಪವೂ ನಮ್ಮ ಮುಂದಿದೆ. ಈ ಎಣ್ಣೆ ಯಾವ ವರ್ಗಕ್ಕೆ ಸೇರಿದ್ದೆಂದು ದಯವಿಟ್ಟು ಪ್ರಶ್ನಿಸಬೇಡಿ. ನನಗೂ ಗೊತ್ತಿಲ್ಲ.ಇದು  ಸೇರುವುದು   ಸಸ್ಯಹಾರಕ್ಕೋ   ಮಾಂಸಹಾರಕ್ಕೋ   ಅನ್ನುವುದು  ಸಹಾ  ಗೊತ್ತಿಲ್ಲ.

Sunday, June 07, 2009

ಇಂಡಿಯನ್ ಅಂದರೆ ಅಮೇರಿಕದಲ್ಲಿ ಬಾರತೀಯನಲ್ಲ, ಆದರೆ

ಅಮೇರಿಕದ ಮಿಸೂರಿ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ಒಮ್ಮೆ ಪರಿಚಿತ ಡೇನಿಯಲ್ ಜಿಮ್ಮರ್ ಮಾನ್ ಅವರ ಜತೆ ಅವರ ಕುದುರೆ ಗಾಡಿಯಲ್ಲಿ ಕುಳಿತು ಓಡಾಡುತ್ತಿದ್ದೆ. ಮೆನೊನೈಟ್ ಎಂಬ ವಿಶಿಷ್ಟ ಪಂಗಡಕ್ಕೆ ಸೇರಿದ ಅವರು ಮೂಲ ಗುಂಪು ಆಮೀಷರಿಂದ ಹೆಚ್ಚು ಉದಾರವಾದಿಗಳು. ಡೇನಿಯಲ್ ಅವರ ಮಗಳು ಅಳಿಯ ಒಂದು ಸೈಕಲ್ ಅಂಗಡಿ ಇಟ್ಟಿದ್ದರಿಂದ ನನಗೆ ಅವರ ಪರಿಚಯವಾಗಿ ಅವರ ಪರಿಸರದಲ್ಲಿ ನಾಲ್ಕು ದಿನ ಉಳಕೊಂಡಿದ್ದೆ.

ಉಳಿದ ಕೃಷಿಕರಿಂದ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಈ ಪಂಗಡದ ಬೆಗೆಗೆ ಕೂತೂಹಲ ಬಾರತ ಬಿಡುವ ಮೊದಲೇ ಉಂಟಾಗಿತ್ತು. ನಾನು ಅವರ ಜತೆಯಲ್ಲಿದ್ದ ಅನುಭವ ಕಥೆ   ಅಮಿಷಕ್ಕೆ  ಒಳಗಾಗದ  ಆಮಿಷ್  ಜನಾಂಗ  ಎಂಬ  ತಲೆಬರಹದೊಂದಿಗೆ   ಸುಧಾ ವಾರ ಪತ್ರಿಕೆ ಮುಖಪುಟ ಲೇಖನವಾಗಿ 1987ರಲ್ಲಿ ಪ್ರಕಟಿಸಿತ್ತು.

ಹಾಗೆ ದಾರಿಯಲ್ಲಿ ಸಿಕ್ಕವರಲ್ಲಿ ಡೇನಿಯಲ್ ನನ್ನ ಪರಿಚಯ ಹೇಳಿದರು. ಇವ ಇಂಡಿಯನ್ ಎಂದಾಗ ಆ ಅಮಾಯಕ ವ್ಯಕ್ತಿ ಅಂದರೆ ಯಾವ ಪಂಗಡಕ್ಕೆ ಸೇರಿದವನು ಎಂದಾಗ ನನಗೆ ಗಲಿಬಿಲಿ. ಅವರು ನನ್ನನ್ನು ಅಮೇರಿಕದ ಮೂಲನಿವಾಸಿ ಎಂದುಕೊಂಡಿದ್ದರು. ಅಮೇರಿಕದಲ್ಲಿ ಬಾರತ ಎಂಬ ದೇಶ ಇದೆ ಎನ್ನುವ ಕಲ್ಪನೆ ಇಲ್ಲದವರು ಸಾಕಷ್ಟು ಜನ ಇದ್ದಾರೆ ಅನ್ನುವುದು ಸೋಜಿಗದ ಸಂಗತಿ.


ಇಂದಿನ ಕನ್ನಡ ಪ್ರಭದ ಏಳನೇಯ ಪುಟದಲ್ಲಿ ಪೆರು ಹಿಂಸೆ 25 ಬಾರತಿಯರ ಸಾವು ಎಂದಾಗ ಕುತೂಹಲದಿಂದ ಓದಿದೆ. ಅವರು ಪೆರುವಿನ ಮೂಲನಿವಾಸಿಯರನ್ನು ಇಂಗ್ಲೀಷಿನಲ್ಲಿ ಇಂಡಿಯನ್ ಎಂದು ಬರೆದುದು ಬಾಷಾಂತರವಾಗುವಾಗ ಬಾರತೀಯ ಎಂದಾಗಿದೆ. ಪ್ರಾಯುಷ ಬಾಷಾಂತರಿಸಿದ ಪತ್ರಿಕೆ ಉದ್ಯೋಗಿಗೆ ಇಂಡಿಯನ್ ಎಂದರೆ ಅಲ್ಲಿನ ಮೂಲನಿವಾಸಿ ಎಂದು ಅರ್ಥವಾಗಲಿಲ್ಲ. ಈ ತಪ್ಪು ಕಲ್ಪನೆಯಿಂದಾಗಿ ನನಗೆ ಇದಕ್ಕೆ ಹೋಲುವ ಹಳೆಯ ಅನುಭವ ನೆನಪಾಯಿತು. ಅಂದು ನಾನು  ಅಲ್ಲಿ  ಅಮೇರಿಕದ    ಮೂಲನಿವಾಸಿಯಾಗಿದ್ದೆ.  ಇಂದು  ಅವರು  ಬಾರತೀಯರಾಗಿದ್ದಾರೆ.

Saturday, June 06, 2009

ಅಲ್ಪಸಂಖ್ಯಾತರಿಂದ ಆರಿಸಲ್ಪಟ್ಟ ದೊರೆಗಳು.

 ಮೊನ್ನೆ  ಭಾನುವಾರ   ಪಕ್ಕದ  ಊರು  ವಿಟ್ಲಕ್ಕೆ  ಹೋಗಿದ್ದೆ.   ವಾಪಾಸಾಗುವಾಗ   ಹೊಸ  ಸಂಸದರ  ವಿಜಯಯಾತ್ರೆ.  ಸುಮಾರು  ಮುಕ್ಕಾಲು  ಘಂಟೆ  ರಸ್ತೆ  ನಿಲುಗಡೆಯಾಗಿ  ನನ್ನ  ವಿಳಂಬಿಸಿದ  ಈ  ಯಾತ್ರೆಯ  ಔಚಿತ್ಯವನ್ನು  ಯೋಚಿಸಹತ್ತಿದೆ.   ಜನಸಂಖ್ಯೆಯ  ಶೇಕಡ ಅರುವತ್ತು  ಮಾತ್ರ  ಮತದಾರರು,  ಅದರಲ್ಲಿ  ಶೇಕಡ ಅರುವತ್ತು  ಮತದಾನ  ಮಾಡುವವರು, ಅದರಲ್ಲಿ  ಶೇಕಡ  ನಲುವತ್ತೋ  ನಲುವತ್ತೈದೊ   ಮತ  ಪಡೆದು   ಗೆದ್ದ  ಅಭ್ಯರ್ಥಿ  ವಿಜಯಿ  ಎನಿಸಿಕೊಳ್ಳುತ್ತಾನೆ.    ಅಂದರೆ   ಸುಮಾರು  ಶೇಕಡ  ಹದಿನೈದರಿಂದ  ಇಪ್ಪತ್ತು  ಜನರಿಂದ  ಅನುಮೋದಿಸಲ್ಪಟ್ಟ  ವ್ಯಕ್ತಿಯ ವಿಜಯಯಾತ್ರೆ   ಅವನ  ಬೆಂಬಲಿಸದಿರುವ    ಬಹುಸಂಖ್ಯಾತರಿಗೆ  ತೊಂದರೆ  ಕೊಡುವುದು  ಸರಿಯೋ ?     ಸಂಜೆ  ಅಂದಿನ  ವಿಜಯ ಕರ್ನಾಟಕ    ಓದುವಾಗ  ಕಂಡ  ಚಿತ್ರ   ನನ್ನ  ಚಿಂತನೆಯನ್ನು  ಅನುಮೋದಿಸಿದಂತಾಯಿತು. 
 

ಈಗೀಗ ಚುನಾವಣೆ ಬರೇ ಅರ್ಥಹೀನವಾಗಿದೆ. ಈಗ ಪ್ರತಿಯೊಂದು ಚುನಾವಣೆಯಲ್ಲಿ ಮತಗಟ್ಟೆಗೆ ಬರುವ ಮತದಾರರ ಸಂಖ್ಯೆ ಕುಸಿಯುತ್ತಲೇ ಇದೆ. ನೂರ ನಲುವತ್ತೈದು ಜನಪ್ರತಿನಿಧಿಗಳು ಶೇಖಡ ಇಪ್ಪತ್ತಕ್ಕೂ ಕಡಿಮೆ ಕ್ಷೇತ್ರದ ಮತದಾರರ ಬೆಂಬಲ ಪಡಕೊಂಡು ಲೋಕ ಸಭೆ ಪ್ರವೇಶಿಸಿದ್ದಾರೆ. ಇವರಲ್ಲಿ ವಿಶಿಷ್ಟ ಸ್ಥಾನ ಪಡೆದವರು ಬೀಹಾರದ ಕಮಲ ಪಕ್ಷದ ಸಂಸದ ಭೋಲ ಸಿಂಗ್. ಸುಮಾರು ಇಪ್ಪತ್ತೈದುಲಕ್ಷ ಜನಸಂಖ್ಯೆ ಇರುವ ಬೀಹಾರದ ನಾವಾಡ ಕ್ಷೇತ್ರದಿಂದ ಗೆದ್ದ ಭೋಲ ಸಿಂಗ್ ಪಡಕೊಂಡ ಮತ ಕೇವಲ ಒಂದು ಲಕ್ಷ ಮೂವತ್ತು ಸಾವಿರ. ಯಾಕೆ ಮತದಾರರು ಮತದಾನದಲ್ಲಿ ಪಾಲ್ಗೊಳ್ಳುತ್ತಿಲ್ಲವೆನ್ನುವುದು ಎಲ್ಲ ದೇಶಗಳಲ್ಲೂ ಯಕ್ಷ ಪ್ರಶ್ನೆ.

ಅಮೇರಿಕದ ಬಾಗವಾದ ಹೊನೊಲುಲುವಿನಲ್ಲಿ ಕಡೆದ ವಾರ ಸ್ಥಳೀಯ ಸಂಸ್ಥೆ ಮತದಾನ ನಡೆಯಿತು. ಜನರ ಅನುಕೂಲಕ್ಕಾಗಿ ಪೋನ್ ಅಥವಾ ಅಂತರ್ಜಾಲ ಮೂಲಕ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಈ ಹೊಸ ಬಗೆಯ ಮತದಾನಕ್ಕೆ ಆರ್ಥಿಕ ಕಾರಣವೂ ಇದ್ದು ಸುಮಾರು ಐವತ್ತು ಲಕ್ಷ ರೂಪಾಯಿ ಉಳಿತಾಯವಾಗಿತ್ತು ಅನ್ನುತ್ತಾರೆ ಅಲ್ಲಿನ ಅಧಿಕಾರಿಗಳು. ಎಲ್ಲ ಮತದಾರರಿಗೂ ಅಂಚೆ ಮೂಲಕ ಮಾಹಿತಿ ಜತೆಗೆ ಅವರ ಗುಪ್ತ ಕ್ರಮಾಂಕವನ್ನು ತಲಪಿಸಲಾಗಿತ್ತು. ಪರಿಣಾಮ ಮಾತ್ರ ನಿರಾಶದಾಯಕ. ಬರೇ ಏಳು ಸಾವಿರ ಜನ ಮತದಾನ ಮಾಡಿದ್ದರು. 

 

ಜನ ಪ್ರತಿನಿಧಿಗಳ ಕೆಲಸ ಸುಲಭ ಎಂದು ನಾನು ಹೇಳುತ್ತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲಲು ಅರ್ಥಹೀನ ಕೊಡುಗೆಗಳನ್ನೆಲ್ಲ ಘೋಷಿಸಿ ಜನರ ಅಪೇಕ್ಷೆಗಳ ಹೆಚ್ಚಿಸಿದ್ದಾರೆ. ಜನರ ಅಪೇಕ್ಷೆ ಅನ್ನುವಾಗ ಗಮನ ಸೆಳೆಯುವ ಸುದ್ದಿ – ಸರಕಾರವೇ ಮಕ್ಕಳನ್ನು ಸಾಕಬೇಕು ಅನ್ನುತ್ತಿದ್ದಾನೆ ಒಬ್ಬ ಅಮೇರಿಕನ್. ಅಲ್ಲೊಬ್ಬ ಹನ್ನೊಂದು ವರ್ಷದಲ್ಲಿ 11 ಹೆಂಗಸರಲ್ಲಿ ಪಡೆದ ತನ್ನ 21 ಮಕ್ಕಳನ್ನು ಸಾಕಲು ಹಣವಿಲ್ಲ ಸರಕಾರ ಸಾಕಬೇಕು. ಅವನಿಗೀಗ ಬರೇ 29 ವರ್ಷವಾಗಿದ್ದು ಮಕ್ಕಳು ಸಾಕು ಎನಿಸಿದೆಯಂತೆ.  

Friday, June 05, 2009

ರಾಜ್ಯ ಗ್ರಾಹಕರ ವೇದಿಕೆಗೊಂದು ನಿಷ್ಪ್ರಯೋಜಕ ಯಾತ್ರೆ.

ನನ್ನ ರಿಲಿಯನ್ಸ್ ಫೋನಿನ ಸಮಸ್ಯೆ ತೀರಾ ಗೊಜಲಾಗಿತ್ತು. ನನ್ನ ದೂರವಾಣಿಯ ಸಮಸ್ಯೆಯನ್ನು ಅವರು ಕೊಟ್ಟ ಹಿಂಸೆಯನ್ನೂ ಮಂಗಳೂರಿನ ಗ್ರಾಹಕ  ನ್ಯಾಯಾಲಯ ಗುರುತಿಸಿದರೂ ಅವರಿಗೂ ಸಂಪೂರ್ಣ ಚಿತ್ರಣ ದೊರಕಿರಲಿಲ್ಲ. ಹೊಸ ಟವರ್ ಹಾಕಿದಾಗೆಲ್ಲ  ತಾಂತ್ರಿಕ  ಸಮಸ್ಯೆಗಳಿಂದಾಗಿ    ನನ್ನ ದೂರವಾಣಿ ಸ್ಥಬ್ದವಾಗುವುದನ್ನೂ ಅವರು ತಿಂಗಳುಗಟ್ಟಲೆ ಪರಿಹಾರ ಕೈಗೊಳ್ಳದಿರುವುದನ್ನೂ ಗುರುತಿಸಿತ್ತು. ಅದುದರಿಂದ ರಿಲಿಯನ್ಸ್  ಕಂಪೇನಿ  ಎರಡು ಸಾವಿರ ದಂಡ ಹಾಗೂ ಒಂದು ಸಾವಿರ ಕೋರ್ಟು ಖರ್ಚು ಕೊಡಬೇಕೆಂದು ತೀರ್ಮಾನಿಸಿತು.



ನನ್ನ ಹಣ ಇರುವಾಗಲೇ ರಿಲಿಯನ್ಸ್  ಕಂಪೇನಿ  ಉದ್ದೇಶಪೂರ್ವಕವಾಗಿ ಸಂಪರ್ಕ ಕಡಿತ ಮಾಡಿದ್ದನ್ನು ಗುರುತಿಸಿರಲಿಲ್ಲ. ಈ ಸಮಸ್ಯೆಗೆ   ಅವರ  ದೋಶಪೂರಿತ   ಕಂಪ್ಯೂಟರ್ ತಂತ್ರಾಂಶ   ಹಾಗೂ  ಹೊಣೆ ಅರಿಯದ   ಉದ್ಯೋಗಿಗಳೇ  ಕಾರಣ.   ಜುಲೈ ತಿಂಗಳಿನಲ್ಲೂ ಜತೆಗಿರುವ ಆಗಸ್ತ್ ಬಿಲ್ಲಿನಂತೆ ಕಟ್ಟಬೇಕಾದ ಮೊತ್ತ ಹಾಗೂ ಕೊನೆಯ ದಿನಾಂಕ ನಮೂದಿಸದ ಬಿಲ್ ಬಂದಿತ್ತು. ಕೊನೆಗೆ  ಇದ್ದಕ್ಕಿದ್ದಂತೆಯೇ  148 ರೂಪಾಯಿ ಕಟ್ಟಿ ಎಂದು ದೂರವಾಣಿ ಅದೇಶ ಮಾತ್ರವಲ್ಲ  ನನ್ನ   ಸಂಪರ್ಕವನ್ನು    ಕತ್ತರಿಸಿಯೇ ಬಿಟ್ಟರು.  ನಾನು  ಬಾಕಿ  ಉಳಿಸಿಕೊಂಡಿಲ್ಲವೆಂದು  ಸ್ಪಷ್ಟವಾಗಿಯೇ   ಹೇಳಿದ್ದೆ.   ನಾನು 200 ರೂಪಾಯಿ ಕಟ್ಟಿದ ನಂತರ ಸಂಪರ್ಕ ಸರಿಪಡಿಸಿದರು.  ಯಾವುದೇ ರೀತಿ  ಲೆಕ್ಕ  ಮಾಡಿದರೂ  ಈ  148 ರೂಪಾಯಿ  ಒಪ್ಪುವಂತಿರಲಿಲ್ಲ.




ಈ  ಉದ್ದೇಶಪೂರ್ವಕ  ಸಂಪರ್ಕ   ಕಡಿತದ  ರುಜುವಾತಾಗಿ     ರಿಲಿಯನ್ಸ್  ಕಂಪೇನಿ  ಕಳುಹಿಸಿದ  SMS  ದಾಖಲಿಸಿದ  ವಿಡಿಯೋ ಅಂದರೆ ಹೆಚ್ಚಿನ ಸಾಕ್ಷಿ ಸಮೇತ ಬೆಂಗಳೂರಿನಲ್ಲಿರುವ ರಾಜ್ಯ ವೇದಿಕೆಗೆ ಮೇಲ್ಮನವಿ ಸಲ್ಲಿಸಿದೆ. ಮಂಗಳೂರಿನಲ್ಲಿ ತೀರ್ಪಿನ ಕಾಪಿ ಸಿಗುವಾಗಲೇ ವಿಳಂಬ.  ತೀರ್ಪು  ಅಂತರ್ಜಾಲದಲ್ಲಿ  ಲಭ್ಯವಾಗುವಾಗಲೇ  ಇಪ್ಪತ್ತು  ದಿನ  ಕಳೆದಿತ್ತು.    ಜತೆಗೆ ನಾನಿರುವ ಹಳ್ಳಿಯಿಂದ ಮಂಗಳೂರಿಗೆ ಹೋಗಲು ಸಮಸ್ಯೆ. ಈ ವಿಳಂಬವನ್ನು ಕ್ಷಮಿಸಿ ನನ್ನ ಮೇಲ್ಮನವಿ ಪರಿಗಣಿಸಲು ಕೋರಿ ಅರ್ಜಿ ಹಾಕಿದ್ದೆ. ಅರ್ಜಿ ಹಾಕಿದ ನಂತರ ಸಿಕ್ಕ ಸ್ನೇಹಿತರು ರಾಜ್ಯ ಗ್ರಾಹಕ   ವೇದಿಕೆಯ ಬರೇ ಕಳಪೆ ಫಲಿತಾಂಶವನ್ನು ತಿಳಿಸಿದರೂ ನಾನು ಅಶಾವಾದಿಯಾಗಿದ್ದೆ.

ಮೇಲ್ಮನವಿಗೆ 69 ದಿನ ವಿಳಂಬವಾದ ನಿಮ್ಮ ಅರ್ಜಿ ಪರಿಗಣಿಸಲು ಸಾದ್ಯವಿಲ್ಲ.  ನಿಮಗೆ ಸಿಕ್ಕ  ಪರಿಹಾರ ಸಾಕೆಂದು ತೀರ್ಮಾನಿಸಿದ್ದೇವೆ.  ಎಂದು  ತೀರ್ಪಿನ ಪ್ರತಿ   ನನಗೆ  ಇತ್ತೀಚೆಗೆ   ದೊರಕಿತು. ಉದ್ದೇಶಪೂರ್ವ ಕಡಿತವು  ತಾಂತ್ರಿಕ ತೊಂದರೆಯಿಂದ ಬಿನ್ನ  ಎಂದು  ರಾಜ್ಯ ವೇದಿಕೆಗೆ ಅರ್ಥವಾಗಲಿಲ್ಲ.     ಜಿಲ್ಲಾ ವೇದಿಕೆಯಲ್ಲಿ ನಿಮಗೆ ದೊರೆತ ಪರಿಹಾರ ನ್ಯಾಯಬದ್ದವಾಗಿರುವ ಕಾರಣ ಪುನಹ ಪರಿಶೀಲನೆ ಅಗತ್ಯವಿಲ್ಲ ಎಂದು ಮಾರ್ಚು 5 ರಂದು ನ್ಯಾಯಮೂರ್ತಿ ಚಂದ್ರಶೇಖರಯ್ಯನವರ ಅದ್ಯಕ್ಷತೆಯ ಪೀಠ ಕೊಟ್ಟ  ತೀರ್ಪಿನ ಕಾಪಿ 72 ದಿನ ವಿಳಂಬವಾಗಿ ಅಂಚೆಗೆ ಹಾಕಲ್ಪಟ್ಟಿತು.
 

ತಮಾಷೆ ಎಂದರೆ ಆ ಲಕೋಟೆಯಲ್ಲಿ ಮುದ್ರಿಸಲ್ಪಟ್ಟ ದ್ಯೇಯವಾಕ್ಯ  ನನಗೆ  ಇದನ್ನು  ಓದಿ  ಹೇಗೆ ಪ್ರತಿಕ್ರಿಯಿಸುವುದೆಂದು ಅರ್ಥವಾಗುತ್ತಿಲ್ಲ. .


ನಮ್ಮ ಹಕ್ಕುಗಳ ಕಾಯಬೇಕಾದವರೇ ನಿರ್ಲಕ್ಷಿಸಿದರೆ ಯಾರಲ್ಲಿ ಹೇಳುವುದು ? ಈಗ ನಾನು ರಾಜ್ಯ ಗ್ರಾಹಕ ವೇದಿಕೆಯ   ಕಾರ್ಯ  ವೈಖಿರಿ  ಪ್ರತಿಭಟಿಸಲೋ ಅಲ್ಲ ಮೂಲ ಸಮಸ್ಯೆ ರಿಲಿಯನ್ಸ್ ಬಗ್ಗೆ ದೆಹಲಿಯಲ್ಲಿರುವ ಗ್ರಾಹಕ ರಾಷ್ಟ್ರೀಯ ವೇದಿಕೆಯ ಸಂಪರ್ಕಿಸಲೋ ಅನ್ನುವ ಗೊಂದಲದಲ್ಲಿದ್ದೇನೆ. ಆದರೆ ಇಷ್ಟು ಹಣ ದಂಡ ಮಾಡಿದ್ದು ಸಾಕು ಎನ್ನುವ ಹಿತೈಷಿಗಳ ಮಾತನ್ನೂ ಮೀರುವಂತಿಲ್ಲ.

ಈಗ ಬಂದ ಸುದ್ದಿ ಪ್ರಕಾರ ನ್ಯಾಯಮೂರ್ತಿ ಚಂದ್ರಶೇಖರಯ್ಯ ನಿವೃತ್ತಿಯಾಗಿದಾರೆ. ಹೊಸತಾಗಿ ನ್ಯಾಯಮೂರ್ತಿ ಕೆ. ರಾಮಣ್ಣ ಅವರು ನೇಮಕಗೊಂಡಿದ್ದಾರೆ. ಅಂತೂ ಗ್ರಾಹಕರು ಬಚಾವ್ ಅನಿಸಿತು. 17,130 ರಲ್ಲಿ 16,710 ಸಮಸ್ಯೆಗಳ ಪರಿಹರಿಸಿದ್ದೇವೆ ಅಂದರೆ ಶೇಕಡಾ 97 ಅನ್ನುತ್ತಾರೆ ನಿವೃತ್ತಿಯ ದಿನ ನ್ಯಾಯಮೂರ್ತಿ ಚಂದ್ರಶೇಖರಯ್ಯ. ಎಲ್ಲವನ್ನೂ ನನ್ನ ಕಡತ ವಿಲೆವಾರಿ ಮಾಡಿದಂತೆ ಮಾಡಿದ್ದಾರೆ ಅಂತಾದರೆ  ....................  ಇಂತಹ ತೀರ್ಪುಗಳಿಂದ ರಿಲಯನ್ಸ್ ನಂತಹ   ಕಂಪೇನಿಗಳು ಕೋಟಿಗಟ್ಟಲೆ   ಬಾಚಿ ಮೂರು ಸಾವಿರ ಪರಿಹಾರ ಕೊಟ್ಟು ನಿರಾಂತಕವಾಗಿರುತ್ತದೆ.

ಗ್ರಾಹಕ ನ್ಯಾಯಾಲಯ ಈ   ರೀತಿಯ  ದೋರಣೆ ಹೊಂದಿದ್ದರೆ  ನಾವು  ಗ್ರಾಹಕ  ನ್ಯಾಯಾಲಯ ಬಾಗಿಲು  ತಟ್ಟುವುದೇ  ಮೂರ್ಖತನವಾಗುತ್ತದೆ.    ನ್ಯಾಯ  ಬಹಳ  ದುಬಾರಿಯೆನಿಸುತ್ತದೆ.   ಈ ಬಗೆಗೆ   ನಾವು  ಮಾಡುವ  ಖರ್ಚಿನ  ಶೇಕಡ ಹದಿನೈದು   ಸಹಾ  ತುಂಬಿ ಕೊಡದ   ಇವರ  ಚಿಲ್ಲರೆ  ಪರಿಹಾರ ಯಾವ  ಪ್ರಯೋಜನವೂ  ಇಲ್ಲ.  ಇದರಿಂದ  ಜನರಿಗೆ  ತಪ್ಪು  ಸಂದೇಶ  ರವಾನೆಯಾಗುತ್ತದೆಯೆಂದು  ಅವರು  ಅರ್ಥ ಮಾಡಿಕೊಳ್ಳಬೇಕು.   ಬಿಡಿ.  ಅವರಿಗೆ  ಸರಕಾರದಿಂದ  ಸಂಬಳ  ಬರುತ್ತದೆ.
 
ಇಪ್ಪತೈದು ವರ್ಷ ಹಿಂದೆ ಬೆಂಗಳೂರಿನಲ್ಲೊಂದು ಸಂಚಾರಿ ಪೋಲಿಸರಿಂದ ನನ್ನ ಮೇಲೊಂದು ಚಿಲ್ಲರೆ ಕೇಸ್. ಆಗ ಒಬ್ಬ ಸಹೃದಯಿ ಪೋಲಿಸ್ ಪೇದೆ ಹೇಳಿದ ಮಾತು  – ನ್ಯಾಯಾಲಯ ತೀರ್ಮಾನಿಸಿದ ದಂಡವನ್ನು  ತೆಪ್ಪಗೆ ಕಟ್ಟಿ  ಹೋಗಿ. ನೀವು ತಪ್ಪು  ಮಾಡದೆಯೇ  ಇರಬಹುದು.  ಹಾಗೆಂದು  Contest ಮಾಡಿದರೆ ನಮಗೇನು ಕಷ್ಟವಿಲ್ಲ. ಸರಕಾರ ನಮ್ಮ ಓಡಾಟಕ್ಕೆ ಸಂಬಳ ಕೊಡುತ್ತದೆ. ನೀವು  ಮಾತ್ರ  ಜೇಬಿನಿಂದ   ನಿಮ್ಮ  ಹಣ   ಖರ್ಚು ಮಾಡಬೇಕು.

Thursday, June 04, 2009

ಏನಿದು, ವಾಸ್ತವ ನೀರು ?


ನೀರು ಸರಕು ಉತ್ಪಾದನೆಗೆ ಅನಿವಾರ್ಯ ಕಚ್ಚಾವಸ್ತು. ಕೈಗಾರಿಕೆಯ ಯಾ ಕೃಷಿಯ ಉತ್ಪನ್ನ ತಯಾರಾಗಲು ಬೇಕಾಗುವ ಒಟ್ಟು ನೀರನ್ನು ವಾಸ್ತವ ನೀರು ಎನ್ನುತ್ತಾರೆ. ಉದಾಹರಣೆಗೆ, ಒಂದು ಕಿಲೋ ಅಕ್ಕಿ ಬೆಳೆಸಲು ಸುಮಾರು ಎರಡು ಸಾವಿರದ ಏಳು ನೂರು ಲೀಟರ್ ನೀರು ಖರ್ಚಾಗುತ್ತದೆ. ಇದೆಲ್ಲವೂ ನೇರ ಕಣ್ಣಿಗೆ ಕಾಣುವುದಿಲ್ಲ.

ಪ್ರತಿಯೊಂದು ವ್ಯವಹಾರವೂ ನೀರನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉಪಯೋಗಿಸುತ್ತದೆ. ಒಂದು ಲೀಟರ್ ಪಾನೀಯ, ಸೋಡ, ಹಾಲು ಯಾ ಮದ್ಯ ತಯಾರಿಗೆ ಉತ್ಪಾದನಾ ಸ್ಥಳದಲ್ಲಿ ಮೂರುನಾಲ್ಕು ಲೀಟರ್ ನೀರು ಮಾತ್ರ ಸಾಕು ಅನಿಸಬಹುದು. ಆದರೆ ಅದರ ಕಚ್ಚಾವಸ್ತುಗಳಿಗೆ - ಉದಾ: ಸಕ್ಕರೆಗೆ ಕಬ್ಬು ಬೆಳೆಸಲು ಬಹಳಷ್ಟು ನೀರು ಬೇಕಲ್ಲಾ? ಅದೇ ರೀತಿ ಬಟ್ಟೆ ಉದ್ಯಮಕ್ಕೆ ಬೇಕಾದ ಹತ್ತಿ ಬೆಳೆಯಲು ತುಂಬ ನೀರು ಅಗತ್ಯ.

 ನೀರ ಹೆಜ್ಜೆ ಎನ್ನುವುದು ಒಬ್ಬ ವ್ಯಕ್ತಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉಪಯೋಗಿಸುವ ನೀರಿನ ಪ್ರಮಾಣದ ಅಳತೆಗೋಲು. ನೇರ ಬಳಸಿದ ಹಾಗೂ ದಿನಾವಶ್ಯ ವಸ್ತುಗಳ ಉತ್ಪಾದನೆಗೆ ತಗಲಿದ ನೀರಿನ ಒಟ್ಟು ಮೊತ್ತ. ಧಾರಾಳ ನೀರು ಬಳಸಿದವನ ನೀರ ಹೆಜ್ಜೆ ದೊಡ್ಡದು. ಪಾತ್ರೆ ತೊಳೆದ ನೀರನ್ನು ತರಕಾರಿ ಗಿಡಕ್ಕೆ ಉಣಿಸುವ ಗೃಹಿಣಿಯ ನೀರ ಹೆಜ್ಜೆ ಚಿಕ್ಕದು.

ನಮ್ಮ ಮನೆಯ ನಾಲ್ಕು ಜನ ದಿನಕ್ಕೆ ೭೦೦ ಲೀಟರ್ ನೀರು ಬಳಸುತ್ತೇವೆ. ಆದರೆ ಪರೋಕ್ಷ ಉಪಯೋಗ ಇದರ ಬಹುಪಟ್ಟು. ಒಂದು ಲೋಟ ಚಹಾಕ್ಕೆ ಒಂದು ಲೋಟ ನೀರಷ್ಟೇ ಸಾಕು ಎನ್ನುವುದು ತಪ್ಪು ಕಲ್ಪನೆ. ಇದರ ಹಿಂದೆ ೧೪೦ ಲೀಟರ್ ನೀರು ಬಳಕೆ ಆಗಿರುತ್ತದೆ ಎನ್ನುತ್ತಾರೆ ತಜ್ಞರು. ಚಹಾ ಬೆಳೆಸಿ ಸಂಸ್ಕರಿಸಿ ಪೊಟ್ಟಣ ಕಟ್ಟಿ ನಮ್ಮಲ್ಲಿಗೆ ತಲಪಿಸುವಾಗ ಅಷ್ಟು ನೀರು ಖರ್ಚು ಆಗುತ್ತದೆಯಂತೆ. ಹೀಗೆ ಬೆಳಗಿನ  ಚಾ ಕುಡಿದಾಗಲೇ  ನಮ್ಮ ಪರೋಕ್ಷ ಬಳಕೆ ನೇರ ಬಳಕೆಯನ್ನು  ಮೀರತೊಡಗುತ್ತದೆ.

ಇತ್ತೀಚೆಗೆ  ಫಿನ್ ಲಾಂಡಿನ  ಒಂದು  ಆಹಾರೋತ್ಪನ್ನ  ಸಂಸ್ಥೆ   ತನ್ನ  ಪೊಟ್ಟಣದಲ್ಲಿ  ಪರೋಕ್ಷವಾಗಿ  ಉಪಯೋಗಿಸಲ್ಪಟ್ಟ  ವಾಸ್ತವ   ನೀರಿನ ಪ್ರಮಾಣವನ್ನು  ನಮೂದಿಸಲು  ಪ್ರಾರಂಬಿಸಿದೆ. ಆಹಾರದಲ್ಲಿರುವ  ಪೋಷಕಾಂಶಗಳ  ಪ್ರಮಾಣವನ್ನು  ಪೊಟ್ಟಣದ  ಮೇಲೆ    ನಮೂದಿಸುವ  ಪರಿಪಾಠ  ಅಲ್ಲಿ   ಈಗಾಗಲೇ  ಜಾರಿಯಲ್ಲಿದೆ.     ಇದೊಂದು   ನೀರಿನ  ಪರೋಕ್ಷ ಉಪಯೋಗವನ್ನು    ಗುರುತಿಸುವ  ಒಂದು  ಸಕಾರಾತ್ಮಕ  ಹೆಜ್ಜೆ.



ವಾಸ್ತವ ನೀರಿನ ಈ ಪರಿಕಲ್ಪನೆಯನ್ನು ಲಂಡನಿನ ಪ್ರೊ ಜಾನ್ ಅಂತೋನಿ ಆಲನ್ ೧೯೯೩ರಲ್ಲಿ ಚಹಾದ ಉದಾಹರಣೆಯೊಂದಿಗೆ ಮಂಡಿಸಿದರು. ಇದಕ್ಕೆ ಅವರಿಗೆ ಕಳೆದ ವರ್ಷ ಸ್ಟಾಕ್ಹೋಮ್ ನೀರಿನ ಪ್ರಶಸ್ತಿ ಕೊಟ್ಟರು. ಎಪ್ಪತ್ತೈದು ಲಕ್ಷ ರೂಪಾಯಿ ನಗದನ್ನೂ ಹೊಂದಿದ ಇದು ನೀರಿಗೆ ಸಂಬಂಧಪಟ್ಟ ಅತಿ ದೊಡ್ಡ ಬಹುಮಾನ.

ಜಲಲಭ್ಯತೆ ಹೆಚ್ಚು ಇರುವ ಜಾಗಗಳಲ್ಲಿ ಅವಶ್ಯಕತೆಯೂ ಹೆಚ್ಚಿರಬೇಕೆಂದಿಲ್ಲ. ಬರಪೀಡಿತ ದೇಶ ಹೆಚ್ಚು ನೀರು ಬೇಡುವ ಬೆಳೆಗಳನ್ನು ಆಮದಿಸಿಕೊಳ್ಳಬಹುದು. ತನ್ನ ನೀರಿನ ಸಂಪತ್ತಿನ ಮೇಲಿನ ಒತ್ತಡ ಕಡಿಮೆ ಮಾಡುವ ಈ ಹೆಜ್ಜೆಯನ್ನು ವಾಸ್ತವ ನೀರಿನ ಅಮದು ಎನ್ನಬಹುದು.

ಜನ ಬಳಸುವ ನೀರಿನಲ್ಲಿ ಸಿಂಹಪಾಲು ಅಹಾರ ಉತ್ಪಾದನೆಗೆ ಮೀಸಲು. ಆಹಾರ ಭದ್ರತೆ ವಿಚಾರದಲ್ಲಿ ನೀರು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ನೀರಿಗಾಗಿ ಕಚ್ಚಾಡುವ ಬದಲು ಗಡಿಯಾಚೆಗೆ ಆಹಾರದ ಸಾಗಾಟ ಈ ಕೊರತೆಯನ್ನು ಬಹುಪಾಲು ತುಂಬಲು ಸಾಧ್ಯ ಎನ್ನುವುದು ಜನರ ಅರಿವಿಗೆ ಬಾರದ ವಿಚಾರ.

ಜಾಗತಿಕ ಆಹಾರ ಸಾಗಾಟ ಪರೋಕ್ಷವಾಗಿ ಜಲಸಮೃದ್ಧ ಹಾಗೂ ಕೊರತೆ ಪ್ರದೇಶಗಳ ಸೂಚನೆ ಕೊಡುತ್ತದೆ. ಆಹಾರ ಸಾಗಾಟವೆಂದರೆ ನೀರು ಸಾಗಿಸಿದಂತೆಯೇ. ಇದರಿಂದಾಗಿ ಇಂದು ಹಲವು ಒಣಪ್ರದೇಶದ ಜನರಿಗೆ ಉಣ್ಣಲು ಸಾಧ್ಯವಾಗುತ್ತದೆ. ಈಗೀಗ ಕೊಡುವವರಿಗಿಂತ ಪಡಕೊಳ್ಳುವವರ ಪ್ರಮಾಣ ತುಂಬಾ ಹೆಚ್ಚಿದೆ. ಈ ಸಮತೋಲನ ತಪ್ಪುತ್ತಿರುವುದು ಕಳವಳಕಾರಿ.

ಪ್ರತಿ ಕಿಲೋ ಅಕ್ಕಿ ಮತ್ತು ಗೋಧಿ ರಪ್ತು ಎಂದರೆ ಅನುಕ್ರಮವಾಗಿ ೨೭೦೦ ಮತ್ತು ೧೨೦೦ ಲೀಟರ್ ನೀರಿನ ನಿರ್ಯಾತವೇ. ಅಕ್ಕಿ ಮತ್ತು ಗೋಧಿ ಹೆಚ್ಚು ನೀರು ಬಳಸುವ ಬೆಳೆಗಳಾಗಿದ್ದು ರೈತರು ಪುಕ್ಕಟೆ ವಿದ್ಯುತ್ ಬಳಸಿ ಸಾವಿರ ಅಡಿ ಆಳದಲ್ಲಿರುವ ಅಂತರ್ಜಲ ಅತಿಯಾಗಿ ಬಳಸುತ್ತಿದ್ದಾರೆ. ಇಂದು ಪಂಜಾಬಿಗೆ ದೇಶಕ್ಕೆ ಆಹಾರ ಬೆಳೆಸುವುದಕ್ಕೆ ತನ್ನ ನೈಸರ್ಗಿಕ ಸಂಪನ್ಮೂಲ ಬಲಿಯಾಗಿದೆ ಎನ್ನುವ ಅರಿವು ಮೂಡುತ್ತಿದೆ.

ಒರಿಸ್ಸಾದಲ್ಲಿ ಭೀಕರ ಬರಗಾಲದಿಂದ ಜನ ಸಾಯುತ್ತಿರುವಾಗಲೂ ೮೦೦ ಮಿ.ಮೀ. ಮಳೆಯಾಗಿತ್ತು. ತಲಾ ೩೩೦ ಕಿಲೊ ಆಹಾರ ಕಾಳಹಂದಿ ಜಿಲ್ಲೆಯಲ್ಲೇ ಬೆಳೆದಿದ್ದರು. (ದೇಶದ ತಲಾ ಸರಾಸರಿ ಆಹಾರೋತ್ಪನ್ನ ೨೦೦ ಕಿಲೋ) ಆದರೆ ಉತ್ಪಾದನೆಯ ಬಹುಪಾಲನ್ನು ಸರಕಾರ ಹಾಗೂ ವ್ಯಾಪಾರಿಗಳು ಸೇರಿ ರಫ್ತು ಮಾಡಿದ್ದರು. ಸ್ಥಳೀಯ ಅಗತ್ಯದ ಕಾಲುಭಾಗವಷ್ಟೇ ಅಲ್ಲಿ ಉಳಿದಿತ್ತು. ಇದೊಂದು ವಾಸ್ತವ ನೀರು ರಫ್ತಿನ ಕಹಿ ಉದಾಹರಣೆ.

ಕಾಲಿಗೆ ಚಪ್ಪಲಿ ಹಾಕುವ ಬದಲು ರಸ್ತೆಗೆ ಚರ್ಮ ಹೊದೆಸುವ ಚಂದಮಾಮದ ಕಥೆಯಂತಹವು ನಮ್ಮಲ್ಲಿ ಸಾಕಷ್ಟು ನಡೆಯುತ್ತವೆ. ಗಂಗಾನದಿಯ ನೀರು ತರುವುದೂ ಅವುಗಳಲ್ಲೊಂದು. ಒಂದು ನೀರ ಪಾತ್ರದಿಂದ ಇನ್ನೊಂದಕ್ಕೆ ಸಾಗಿಸುವುದರ ಬದಲು ಬೆಳೆ ಸಾಗಾಣಿಕೆ ಸುಲಭ ಎಂದು ತಜ್ಞರು ಬೊಟ್ಟು ಮಾಡುತ್ತಾರೆ. ಆದರೂ ಈ ಬೃಹತ್ ಯೋಜನೆಗಳ ಆಸೆ ಜನಮನದಿಂದ ಮರೆಯಾಗಿಲ್ಲ.

ಪ್ರತಿ ಕಿಲೋ ಬೆಳೆಯಲು ಬೇಕಾಗುವ ನೀರು (ಲೀ.ಗಳಲ್ಲಿ)

ಬಟಾಟೆ ೧೬೦
ಹಾಲು ೯೦೦
ಗೋಧಿ ೧೨೦೦
ಕೋಳಿ ಮಾಂಸ ೨೮೦೦
ಹಂದಿ ಮಾಂಸ ೫೯೦೦
ದನದ ಮಾಂಸ ೧೬೦೦೦

ಸ್ಥೂಲ ಲೆಕ್ಕಾಚಾರ ಪ್ರಕಾರ ಒಂದು ಕಿಲೋ ಅಡಿಕೆಗೆ ಕನಿಷ್ಟ ೨೫೦೦ ಲೀಟರ್ ಬಳಸುತ್ತೇವೆ. . ನೀರ ಹೆಜ್ಜೆಯ ಅರಿವು ಜಾಗ್ರತ ಮನಸ್ಸಿಗೆ ಕಾರಣವಾಗಿ ಅನಾವಶ್ಯಕ ಪೋಲು ನಿಲ್ಲಿಸಬಹುದು.

ಚೀನಾದ ಪ್ರತಿ ಪ್ರಜೆ ವರ್ಷಕ್ಕೆ ೭೭೫ ಸಾವಿರ ಲೀಟರ್ ನೀರು ಉಪಯೋಗಿಸಿದರೆ ಅದರಲ್ಲಿ ಶೇಕಡಾ ೩ ನೀರ ಹೆಜ್ಜೆ ಮಾತ್ರ ದೇಶದ ಹೊರಗೆ. ಆದರೆ ಜಪಾನೀಯರ ವರ್ಷದ ತಲಾ ೧೧೦೦ ಸಾವಿರ ಲೀಟರಿನಲ್ಲಿ ಶೇಕಡ ೬೦ ನೀರ ಹೆಜ್ಜೆ ದೇಶದ ಹೊರಗಿದೆ. ಅದರಲ್ಲಿ  ಬಹುಪಾಲು ಗೋಮಾಂಸದ ರೂಪದಲ್ಲಿ  ಜಪಾನಿಗೆ   ಅಮದಾಗುತ್ತದೆ.  

ಅಮೆರಿಕದ ಪ್ರಜೆ ಮಾಂಸಾಹಾರ ಬಿಟ್ಟು ಸಂಪೂರ್ಣ ಸಸ್ಯಾಹಾರಿಯಾದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರತಿದಿನ ೨೫೦೦ ಲೀಟರ್ ನೀರು ಉಳಿತಾಯ ಆಗಬಹುದಂತೆ. ಮಾಂಸಾಹಾರಪ್ರಧಾನವಾದ ಅವರ ಅಹಾರದ ಪ್ರಮಾಣ ಮತ್ತು ನೀರ ಹೆಜ್ಜೆ ಎರಡೂ ದೊಡ್ಡದು.

ನೀರು ಧಾರಾಳ ಇರುವಲ್ಲಿ ಹೆಚ್ಚು ನೀರು ಬಯಸುವ ಬೆಳೆ, ಕೈಗಾರಿಕಾ ಉತ್ಪನ್ನ ತಯಾರಿಯನ್ನು ಬೆಂಬಲಿಸಿ ಅವುಗಳನ್ನು ನೀರು ಕೊರತೆಯ ಪ್ರದೇಶಗಳಿಗೆ ಸಾಗಿಸಬಹುದು. ಇದರಿಂದ ಪ್ರಾಂತೀಯ/ ರಾಷ್ಟ್ರೀಯ ಶಾಂತಿಪಾಲನೆಗೆ ಸಹಾಯವಾಗಬಹುದು.

ಅಲ್ಲಿಂದ ಇಲ್ಲಿಂದ ಕತ್ತರಿಸಿದ ಚಿತ್ರಗಳ ಹೊರತುಪಡಿಸಿದ ಈ ಬರಹದ  ಹೆಚ್ಚಿನ  ಭಾಗ  ಜೂನ್  ೨೦೦೯ರ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾಗಿದೆ.