Thursday, June 04, 2009
ಏನಿದು, ವಾಸ್ತವ ನೀರು ?
ನೀರು ಸರಕು ಉತ್ಪಾದನೆಗೆ ಅನಿವಾರ್ಯ ಕಚ್ಚಾವಸ್ತು. ಕೈಗಾರಿಕೆಯ ಯಾ ಕೃಷಿಯ ಉತ್ಪನ್ನ ತಯಾರಾಗಲು ಬೇಕಾಗುವ ಒಟ್ಟು ನೀರನ್ನು ವಾಸ್ತವ ನೀರು ಎನ್ನುತ್ತಾರೆ. ಉದಾಹರಣೆಗೆ, ಒಂದು ಕಿಲೋ ಅಕ್ಕಿ ಬೆಳೆಸಲು ಸುಮಾರು ಎರಡು ಸಾವಿರದ ಏಳು ನೂರು ಲೀಟರ್ ನೀರು ಖರ್ಚಾಗುತ್ತದೆ. ಇದೆಲ್ಲವೂ ನೇರ ಕಣ್ಣಿಗೆ ಕಾಣುವುದಿಲ್ಲ.
ಪ್ರತಿಯೊಂದು ವ್ಯವಹಾರವೂ ನೀರನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉಪಯೋಗಿಸುತ್ತದೆ. ಒಂದು ಲೀಟರ್ ಪಾನೀಯ, ಸೋಡ, ಹಾಲು ಯಾ ಮದ್ಯ ತಯಾರಿಗೆ ಉತ್ಪಾದನಾ ಸ್ಥಳದಲ್ಲಿ ಮೂರುನಾಲ್ಕು ಲೀಟರ್ ನೀರು ಮಾತ್ರ ಸಾಕು ಅನಿಸಬಹುದು. ಆದರೆ ಅದರ ಕಚ್ಚಾವಸ್ತುಗಳಿಗೆ - ಉದಾ: ಸಕ್ಕರೆಗೆ ಕಬ್ಬು ಬೆಳೆಸಲು ಬಹಳಷ್ಟು ನೀರು ಬೇಕಲ್ಲಾ? ಅದೇ ರೀತಿ ಬಟ್ಟೆ ಉದ್ಯಮಕ್ಕೆ ಬೇಕಾದ ಹತ್ತಿ ಬೆಳೆಯಲು ತುಂಬ ನೀರು ಅಗತ್ಯ.
ನೀರ ಹೆಜ್ಜೆ ಎನ್ನುವುದು ಒಬ್ಬ ವ್ಯಕ್ತಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉಪಯೋಗಿಸುವ ನೀರಿನ ಪ್ರಮಾಣದ ಅಳತೆಗೋಲು. ನೇರ ಬಳಸಿದ ಹಾಗೂ ದಿನಾವಶ್ಯ ವಸ್ತುಗಳ ಉತ್ಪಾದನೆಗೆ ತಗಲಿದ ನೀರಿನ ಒಟ್ಟು ಮೊತ್ತ. ಧಾರಾಳ ನೀರು ಬಳಸಿದವನ ನೀರ ಹೆಜ್ಜೆ ದೊಡ್ಡದು. ಪಾತ್ರೆ ತೊಳೆದ ನೀರನ್ನು ತರಕಾರಿ ಗಿಡಕ್ಕೆ ಉಣಿಸುವ ಗೃಹಿಣಿಯ ನೀರ ಹೆಜ್ಜೆ ಚಿಕ್ಕದು.
ನಮ್ಮ ಮನೆಯ ನಾಲ್ಕು ಜನ ದಿನಕ್ಕೆ ೭೦೦ ಲೀಟರ್ ನೀರು ಬಳಸುತ್ತೇವೆ. ಆದರೆ ಪರೋಕ್ಷ ಉಪಯೋಗ ಇದರ ಬಹುಪಟ್ಟು. ಒಂದು ಲೋಟ ಚಹಾಕ್ಕೆ ಒಂದು ಲೋಟ ನೀರಷ್ಟೇ ಸಾಕು ಎನ್ನುವುದು ತಪ್ಪು ಕಲ್ಪನೆ. ಇದರ ಹಿಂದೆ ೧೪೦ ಲೀಟರ್ ನೀರು ಬಳಕೆ ಆಗಿರುತ್ತದೆ ಎನ್ನುತ್ತಾರೆ ತಜ್ಞರು. ಚಹಾ ಬೆಳೆಸಿ ಸಂಸ್ಕರಿಸಿ ಪೊಟ್ಟಣ ಕಟ್ಟಿ ನಮ್ಮಲ್ಲಿಗೆ ತಲಪಿಸುವಾಗ ಅಷ್ಟು ನೀರು ಖರ್ಚು ಆಗುತ್ತದೆಯಂತೆ. ಹೀಗೆ ಬೆಳಗಿನ ಚಾ ಕುಡಿದಾಗಲೇ ನಮ್ಮ ಪರೋಕ್ಷ ಬಳಕೆ ನೇರ ಬಳಕೆಯನ್ನು ಮೀರತೊಡಗುತ್ತದೆ.
ಇತ್ತೀಚೆಗೆ ಫಿನ್ ಲಾಂಡಿನ ಒಂದು ಆಹಾರೋತ್ಪನ್ನ ಸಂಸ್ಥೆ ತನ್ನ ಪೊಟ್ಟಣದಲ್ಲಿ ಪರೋಕ್ಷವಾಗಿ ಉಪಯೋಗಿಸಲ್ಪಟ್ಟ ವಾಸ್ತವ ನೀರಿನ ಪ್ರಮಾಣವನ್ನು ನಮೂದಿಸಲು ಪ್ರಾರಂಬಿಸಿದೆ. ಆಹಾರದಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ಪೊಟ್ಟಣದ ಮೇಲೆ ನಮೂದಿಸುವ ಪರಿಪಾಠ ಅಲ್ಲಿ ಈಗಾಗಲೇ ಜಾರಿಯಲ್ಲಿದೆ. ಇದೊಂದು ನೀರಿನ ಪರೋಕ್ಷ ಉಪಯೋಗವನ್ನು ಗುರುತಿಸುವ ಒಂದು ಸಕಾರಾತ್ಮಕ ಹೆಜ್ಜೆ.
ವಾಸ್ತವ ನೀರಿನ ಈ ಪರಿಕಲ್ಪನೆಯನ್ನು ಲಂಡನಿನ ಪ್ರೊ ಜಾನ್ ಅಂತೋನಿ ಆಲನ್ ೧೯೯೩ರಲ್ಲಿ ಚಹಾದ ಉದಾಹರಣೆಯೊಂದಿಗೆ ಮಂಡಿಸಿದರು. ಇದಕ್ಕೆ ಅವರಿಗೆ ಕಳೆದ ವರ್ಷ ಸ್ಟಾಕ್ಹೋಮ್ ನೀರಿನ ಪ್ರಶಸ್ತಿ ಕೊಟ್ಟರು. ಎಪ್ಪತ್ತೈದು ಲಕ್ಷ ರೂಪಾಯಿ ನಗದನ್ನೂ ಹೊಂದಿದ ಇದು ನೀರಿಗೆ ಸಂಬಂಧಪಟ್ಟ ಅತಿ ದೊಡ್ಡ ಬಹುಮಾನ.
ಜಲಲಭ್ಯತೆ ಹೆಚ್ಚು ಇರುವ ಜಾಗಗಳಲ್ಲಿ ಅವಶ್ಯಕತೆಯೂ ಹೆಚ್ಚಿರಬೇಕೆಂದಿಲ್ಲ. ಬರಪೀಡಿತ ದೇಶ ಹೆಚ್ಚು ನೀರು ಬೇಡುವ ಬೆಳೆಗಳನ್ನು ಆಮದಿಸಿಕೊಳ್ಳಬಹುದು. ತನ್ನ ನೀರಿನ ಸಂಪತ್ತಿನ ಮೇಲಿನ ಒತ್ತಡ ಕಡಿಮೆ ಮಾಡುವ ಈ ಹೆಜ್ಜೆಯನ್ನು ವಾಸ್ತವ ನೀರಿನ ಅಮದು ಎನ್ನಬಹುದು.
ಜನ ಬಳಸುವ ನೀರಿನಲ್ಲಿ ಸಿಂಹಪಾಲು ಅಹಾರ ಉತ್ಪಾದನೆಗೆ ಮೀಸಲು. ಆಹಾರ ಭದ್ರತೆ ವಿಚಾರದಲ್ಲಿ ನೀರು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ನೀರಿಗಾಗಿ ಕಚ್ಚಾಡುವ ಬದಲು ಗಡಿಯಾಚೆಗೆ ಆಹಾರದ ಸಾಗಾಟ ಈ ಕೊರತೆಯನ್ನು ಬಹುಪಾಲು ತುಂಬಲು ಸಾಧ್ಯ ಎನ್ನುವುದು ಜನರ ಅರಿವಿಗೆ ಬಾರದ ವಿಚಾರ.
ಜಾಗತಿಕ ಆಹಾರ ಸಾಗಾಟ ಪರೋಕ್ಷವಾಗಿ ಜಲಸಮೃದ್ಧ ಹಾಗೂ ಕೊರತೆ ಪ್ರದೇಶಗಳ ಸೂಚನೆ ಕೊಡುತ್ತದೆ. ಆಹಾರ ಸಾಗಾಟವೆಂದರೆ ನೀರು ಸಾಗಿಸಿದಂತೆಯೇ. ಇದರಿಂದಾಗಿ ಇಂದು ಹಲವು ಒಣಪ್ರದೇಶದ ಜನರಿಗೆ ಉಣ್ಣಲು ಸಾಧ್ಯವಾಗುತ್ತದೆ. ಈಗೀಗ ಕೊಡುವವರಿಗಿಂತ ಪಡಕೊಳ್ಳುವವರ ಪ್ರಮಾಣ ತುಂಬಾ ಹೆಚ್ಚಿದೆ. ಈ ಸಮತೋಲನ ತಪ್ಪುತ್ತಿರುವುದು ಕಳವಳಕಾರಿ.
ಪ್ರತಿ ಕಿಲೋ ಅಕ್ಕಿ ಮತ್ತು ಗೋಧಿ ರಪ್ತು ಎಂದರೆ ಅನುಕ್ರಮವಾಗಿ ೨೭೦೦ ಮತ್ತು ೧೨೦೦ ಲೀಟರ್ ನೀರಿನ ನಿರ್ಯಾತವೇ. ಅಕ್ಕಿ ಮತ್ತು ಗೋಧಿ ಹೆಚ್ಚು ನೀರು ಬಳಸುವ ಬೆಳೆಗಳಾಗಿದ್ದು ರೈತರು ಪುಕ್ಕಟೆ ವಿದ್ಯುತ್ ಬಳಸಿ ಸಾವಿರ ಅಡಿ ಆಳದಲ್ಲಿರುವ ಅಂತರ್ಜಲ ಅತಿಯಾಗಿ ಬಳಸುತ್ತಿದ್ದಾರೆ. ಇಂದು ಪಂಜಾಬಿಗೆ ದೇಶಕ್ಕೆ ಆಹಾರ ಬೆಳೆಸುವುದಕ್ಕೆ ತನ್ನ ನೈಸರ್ಗಿಕ ಸಂಪನ್ಮೂಲ ಬಲಿಯಾಗಿದೆ ಎನ್ನುವ ಅರಿವು ಮೂಡುತ್ತಿದೆ.
ಒರಿಸ್ಸಾದಲ್ಲಿ ಭೀಕರ ಬರಗಾಲದಿಂದ ಜನ ಸಾಯುತ್ತಿರುವಾಗಲೂ ೮೦೦ ಮಿ.ಮೀ. ಮಳೆಯಾಗಿತ್ತು. ತಲಾ ೩೩೦ ಕಿಲೊ ಆಹಾರ ಕಾಳಹಂದಿ ಜಿಲ್ಲೆಯಲ್ಲೇ ಬೆಳೆದಿದ್ದರು. (ದೇಶದ ತಲಾ ಸರಾಸರಿ ಆಹಾರೋತ್ಪನ್ನ ೨೦೦ ಕಿಲೋ) ಆದರೆ ಉತ್ಪಾದನೆಯ ಬಹುಪಾಲನ್ನು ಸರಕಾರ ಹಾಗೂ ವ್ಯಾಪಾರಿಗಳು ಸೇರಿ ರಫ್ತು ಮಾಡಿದ್ದರು. ಸ್ಥಳೀಯ ಅಗತ್ಯದ ಕಾಲುಭಾಗವಷ್ಟೇ ಅಲ್ಲಿ ಉಳಿದಿತ್ತು. ಇದೊಂದು ವಾಸ್ತವ ನೀರು ರಫ್ತಿನ ಕಹಿ ಉದಾಹರಣೆ.
ಕಾಲಿಗೆ ಚಪ್ಪಲಿ ಹಾಕುವ ಬದಲು ರಸ್ತೆಗೆ ಚರ್ಮ ಹೊದೆಸುವ ಚಂದಮಾಮದ ಕಥೆಯಂತಹವು ನಮ್ಮಲ್ಲಿ ಸಾಕಷ್ಟು ನಡೆಯುತ್ತವೆ. ಗಂಗಾನದಿಯ ನೀರು ತರುವುದೂ ಅವುಗಳಲ್ಲೊಂದು. ಒಂದು ನೀರ ಪಾತ್ರದಿಂದ ಇನ್ನೊಂದಕ್ಕೆ ಸಾಗಿಸುವುದರ ಬದಲು ಬೆಳೆ ಸಾಗಾಣಿಕೆ ಸುಲಭ ಎಂದು ತಜ್ಞರು ಬೊಟ್ಟು ಮಾಡುತ್ತಾರೆ. ಆದರೂ ಈ ಬೃಹತ್ ಯೋಜನೆಗಳ ಆಸೆ ಜನಮನದಿಂದ ಮರೆಯಾಗಿಲ್ಲ.
ಪ್ರತಿ ಕಿಲೋ ಬೆಳೆಯಲು ಬೇಕಾಗುವ ನೀರು (ಲೀ.ಗಳಲ್ಲಿ)
ಬಟಾಟೆ ೧೬೦
ಹಾಲು ೯೦೦
ಗೋಧಿ ೧೨೦೦
ಕೋಳಿ ಮಾಂಸ ೨೮೦೦
ಹಂದಿ ಮಾಂಸ ೫೯೦೦
ದನದ ಮಾಂಸ ೧೬೦೦೦
ಸ್ಥೂಲ ಲೆಕ್ಕಾಚಾರ ಪ್ರಕಾರ ಒಂದು ಕಿಲೋ ಅಡಿಕೆಗೆ ಕನಿಷ್ಟ ೨೫೦೦ ಲೀಟರ್ ಬಳಸುತ್ತೇವೆ. . ನೀರ ಹೆಜ್ಜೆಯ ಅರಿವು ಜಾಗ್ರತ ಮನಸ್ಸಿಗೆ ಕಾರಣವಾಗಿ ಅನಾವಶ್ಯಕ ಪೋಲು ನಿಲ್ಲಿಸಬಹುದು.
ಚೀನಾದ ಪ್ರತಿ ಪ್ರಜೆ ವರ್ಷಕ್ಕೆ ೭೭೫ ಸಾವಿರ ಲೀಟರ್ ನೀರು ಉಪಯೋಗಿಸಿದರೆ ಅದರಲ್ಲಿ ಶೇಕಡಾ ೩ ನೀರ ಹೆಜ್ಜೆ ಮಾತ್ರ ದೇಶದ ಹೊರಗೆ. ಆದರೆ ಜಪಾನೀಯರ ವರ್ಷದ ತಲಾ ೧೧೦೦ ಸಾವಿರ ಲೀಟರಿನಲ್ಲಿ ಶೇಕಡ ೬೦ ನೀರ ಹೆಜ್ಜೆ ದೇಶದ ಹೊರಗಿದೆ. ಅದರಲ್ಲಿ ಬಹುಪಾಲು ಗೋಮಾಂಸದ ರೂಪದಲ್ಲಿ ಜಪಾನಿಗೆ ಅಮದಾಗುತ್ತದೆ.
ಅಮೆರಿಕದ ಪ್ರಜೆ ಮಾಂಸಾಹಾರ ಬಿಟ್ಟು ಸಂಪೂರ್ಣ ಸಸ್ಯಾಹಾರಿಯಾದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರತಿದಿನ ೨೫೦೦ ಲೀಟರ್ ನೀರು ಉಳಿತಾಯ ಆಗಬಹುದಂತೆ. ಮಾಂಸಾಹಾರಪ್ರಧಾನವಾದ ಅವರ ಅಹಾರದ ಪ್ರಮಾಣ ಮತ್ತು ನೀರ ಹೆಜ್ಜೆ ಎರಡೂ ದೊಡ್ಡದು.
ನೀರು ಧಾರಾಳ ಇರುವಲ್ಲಿ ಹೆಚ್ಚು ನೀರು ಬಯಸುವ ಬೆಳೆ, ಕೈಗಾರಿಕಾ ಉತ್ಪನ್ನ ತಯಾರಿಯನ್ನು ಬೆಂಬಲಿಸಿ ಅವುಗಳನ್ನು ನೀರು ಕೊರತೆಯ ಪ್ರದೇಶಗಳಿಗೆ ಸಾಗಿಸಬಹುದು. ಇದರಿಂದ ಪ್ರಾಂತೀಯ/ ರಾಷ್ಟ್ರೀಯ ಶಾಂತಿಪಾಲನೆಗೆ ಸಹಾಯವಾಗಬಹುದು.
ಅಲ್ಲಿಂದ ಇಲ್ಲಿಂದ ಕತ್ತರಿಸಿದ ಚಿತ್ರಗಳ ಹೊರತುಪಡಿಸಿದ ಈ ಬರಹದ ಹೆಚ್ಚಿನ ಭಾಗ ಜೂನ್ ೨೦೦೯ರ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾಗಿದೆ.
Labels:
adike patrike,
consumer,
food
Subscribe to:
Post Comments (Atom)
1 comment:
Good information on water awareness, Thank you
Post a Comment