Friday, November 27, 2009

ಕಡಲ ತೀರದ ಸದಾಸಂ ಪ್ರವಾಸಕ್ಕೆ ತಯಾರಿ

ಒಮ್ಮೆ ಕಡಲ ತೀರಕ್ಕೆ ಸದಾಸಂ ತೆಗೆದುಕೊಂಡು ಹೋದ ನಂತರ ಮುಂದಿನ ಸವಾಲಿಗೆ ವಿಕಿಮಾಪಿಯ ಭೂಪಟದಲ್ಲಿ ಅವಕಾಶ ಹುಡುಕುತ್ತಿದ್ದೆ. ಪಣಂಬೂರಿನ ಬಂದರು ದಾಟಿದರೆ ಮೂಲ್ಕಿಯಲ್ಲಿ ಮಾತ್ರ ಅಡಚಣೆ. ನಂದಿನಿ ಶಾಂಬವಿ ನದಿಗಳು ಜತೆಯಾಗಿ ಸಮುದ್ರ ಸೇರುವ ಮೂಲ್ಕಿ ಅಳಿವೆ ಬಾಗಿಲನ್ನು ದೋಣಿಯಲ್ಲಿ ದಾಟಲು ಸಾದ್ಯವಾದರೆ ಮುಂದೆ ಮಲ್ಪೆ ವರೆಗೆ ತೊಂದರೆಯಿಲ್ಲ     ಸುಮಾರು ಐವತ್ತು ಕಿಲೋಮೀಟರ್  ಸವಾರಿಗೆ  ಸಿಗುತ್ತದೆ.  ಹೆದ್ದಾರಿಯಲ್ಲಿ ನಮಗೆ ಸಿಗುವ ಹಲವು ನದಿಗಳು ಜತೆ ಸೇರಿ ಮೂಲ್ಕಿ ಮಲ್ಪೆಯಲ್ಲಿ ಸಮುದ್ರ ಸೇರುತ್ತದೆ. ಹಾಗಾದರೆ ಈ ತೀರದಲ್ಲಿ ಮಕ್ಕಳೊಂದಿಗೆ ಹೋದರೆ ಎಂದು ಕನಸು ಕಟ್ಟಲು ಪ್ರಾರಂಬ. ದೈಹಿಕವಾಗಿ ದುರ್ಬಲನಾದ ನನಗೆ ಪಕ್ಕದ ಮನೆಯ ಅನಿಲ್ ಕುಮಾರ್ ಮೇಲುಸ್ತುವಾರಿಯಾಗಿ ಬಂದರೆ ಸಹಾಯವಾದೀತು ಎಂದು ಅಲೋಚಿಸಿದೆ. .

ನಮ್ಮಲ್ಲಿ ಇಂತಹ ಪ್ರಯಾಣಗಳ ರೂಪಿಸುವುದು ಸುಲಭವಲ್ಲ. ಇದೊಂದು ಸವೆಯದ ದಾರಿ. ಅದುದರಿಂದ ಜಾಗ್ರತೆಯಿಂದ ಮುಟ್ಟಿಮುಟ್ಟಿ ಸಾಗಬೇಕಾಯಿತು. ಗಡಿ ಪ್ರದೇಶದಿಂದ ಹಾಗೂ ಕಡಲತೀರದಿಂದ ಇನ್ನೂರು ಕಿಮಿ ವರೆಗೆ ನಿರ್ಬಂದಿತ ಪ್ರದೇಶವೆಂದು ಪರಿಗಣನೆ. ಇತ್ತೀಚಿನ ವರೆಗೆ ಭೂಪಟ ಸಂಪಾದಿಸುವುದು ಸಾಹಸದ ವಿಚಾರವಾಗಿತ್ತು. ಆರೋಹಣ ಪರ್ವತಾರೋಹಿಗಳ ತಂಡಕ್ಕಾಗಿ ಅಶೋಕವರ್ಧನರು   ಒಂದು ಸರಕಾರಿ ಭೂಪಟ ಪಡಕೊಳ್ಳಲು ಮಾಡಿದ ಪ್ರಯತ್ನಗಳು ದಾಖಲಾರ್ಹ. ಈಗ ಆಕಾಶ ಚಿತ್ರ ಲಬ್ಯವಾಗುವ ಕಾರಣ ಪರವಾಗಿಲ್ಲ.

ಈ ಪ್ರವಾಸಕ್ಕೆ ಅಡಿಪಾಯ ಹಾಕಲು ಘಂಟೆಗಟ್ಟಲೆ ಕಂಪ್ಯುಟರ್ ಮುಂದೆ ವಿಕಿಮಾಪಿಯ ನೋಡುತ್ತಾ ಕೂತಿದ್ದೇನೆ. ಕ್ರಮ ಬದ್ದವಾಗಿ ಕೆಲಸ ಮಾಡಲು ಚಿತ್ರಗಳಿಗೆ ಕ್ರಮಾಂಕ ಕೊಡುವುದರಲ್ಲಿ ಜಾಗ್ರತೆ ಬೇಕು. ನಡುವೆ ಅಂತರ ಉಳಿಯದಂತೆ ಒಂದರ ಕೊನೆಯಿಂದ ಮತ್ತೊಂದರ ಪ್ರಾರಂಬ ಅನ್ನುವಂತೆ ವ್ಯವಸ್ತೆಗೊಳಿಸಿದೆ. ಮೊದಲು ಗೂಗಲ್ ಭೂಪಟಕ್ಕೆ ಒಂದು ಎರಡು ಎಂದು ಕ್ರಮಾಂಕ ಕೊಟ್ಟೆ. ಕಂಪ್ಯುಟರ್ ಗುರುತಿಸುವಾಗ 1,10,11,12,13,....19,2,20,21,22.... ಎನ್ನುವಂತಹ ಸಮಸ್ಯೆ ಎದುರಾಯಿತು. ಅಲ್ಲಿ ಎರಡು ಬಾರಿ ಎಡವಿದ ನಂತರ ಕೊನೆಗೆ ಸ್ಥಳದ ಅಕ್ಷಾಂಶವ ಅನುಸರಿಸಿ ಉದಾಹರಣೆಗೆ ಅಕ್ಷಾಂಶ ೧೩.೩೪೫೬ ದ ನಕ್ಷೆಗೆ ೧೩೩೪೫೬ ಎಂಬ ಸಂಖ್ಯೆ ಕೊಟ್ಟ ನಂತರ ಕೆಲಸ ಸಲೀಸು. ಈ ಪ್ರವಾಸಕ್ಕಾಗಿ ನೂರಾರು ಚಿತ್ರಗಳ ನಕಲು ಮಾಡಿಕೊಂಡಿದ್ದೇನೆ.

ಎಲ್ಲೆಲ್ಲಿ ಕಡಲತೀರದಲ್ಲಿ ರಸ್ತೆ ಉಂಟು ಎನ್ನುವುದನ್ನು ಗುರುತಿಸುವುದು ಮುಂದಿನ ಹೆಜ್ಜೆ. ಅನುಭವ ಕೊರತೆಯಿಂದಾಗಿ ಮಕ್ಕಳನ್ನು ಒಬ್ಬಂಟಿಯಾಗಿ ಬಹು ದೂರ ಕಳಿಸುವಂತಿರಲಿಲ್ಲ. ಕಡಲ ತೀರದಲ್ಲಿಯೇ ರಸ್ತೆ ಇದ್ದರೆ ಚಿಕ್ಕವ ಸುನಿಲ ಸ್ವಲ್ಪ ದೂರವಾದರೆ ದೊಡ್ಡವ ಅನಿಲ ಎಂದು ತೀರ್ಮಾನಿಸಿದೆ. ಜತೆಯಲ್ಲಿ ಸಾಗುವ ಸಹಾಯಕ ವಾಹನ ಒಮ್ನಿಯನ್ನು ಆತ್ಮೀಯರಾದ ಅನಿಲ್ ಕುಮಾರ ಓಡಿಸುವುದಕ್ಕೆ ಒಪ್ಪಿದ ಕಾರಣ ನನಗೆ   ಯೋಜನೆ ರೂಪಿಸಲು ಸಹಾಯವಾಯಿತು.




ಇಂತಹ ಪ್ರವಾಸಕ್ಕೆ GPS ಸಲಕರಣೆ ಬಹಳ ಉಪಕಾರಿ. ಈ ಬಗೆಗೆ ವರುಷದ ಹಿಂದೆ ಬ್ಲೋಗ್ ಬರಹ ಬರೆದಿದ್ದೆ.  ಜಿಪಿಎಸ್
ಉಪಯೋಗಿಸುತ್ತಿರುವ ಶಿರಸಿಯ ಬಾಲು ಹೆಗ್ಡೆಯವರಲ್ಲಿ ಇ-ಪತ್ರ ಮೂಲಕ ವಿಚಾರಿಸಿದೆ. ಹೊರದೇಶದಲ್ಲಿದ್ದ ಅವರು ತಕ್ಷಣ ಉತ್ತರಿಸಿದರೂ ಬೆಂಗಳೂರಿನಿಂದ ತರಿಸುವುದು ಸುಲಭವಲ್ಲ ಮತ್ತು ಒಂದು ಮಳೆಗೆ ಒಂದು ಕೊಡೆ ಕೊಂಡಂತಾಗುವುದೋ ಎನ್ನುವ ಗೊಂದಲದಲ್ಲಿ ಈ ಪ್ರವಾಸದ ಮಟ್ಟಿಗೆ ಅದರ ಆಸೆ ಬಿಟ್ಟೆ. ಅರ್ಥಹೀನ ತೇರಿಗೆಯಿಂದಾಗಿ ನಮಗೆ ತೀರಾ ದುಬಾರಿಯೆನಿಸುವ ಉಪಕರಣ.  ಗುಜರಾತಿನಲ್ಲಿ ಕಳೆದ ವರ್ಷ ಇಬ್ಬರು ಜಿಪಿಎಸ್ ಉಪಯೋಗಿಸಿ ನಮ್ಮ ಅರ್ಥಹೀನ ಕಾನೂನುಗಳಿಗೆ ಸಿಲುಕಿ ಜೈಲುವಾಸ ಅನುಬವಿಸಿದ್ದಾರೆ.  

ಮೂಲ್ಕಿಯಲ್ಲಿ ಹೊಳೆ ದಾಟಲು ಸಾದ್ಯವಾಗುವುದಾದರೆ ಪಣಂಬೂರಿನಿಂದ ಇಲ್ಲವಾದರೆ ಪ್ರಾರಂಬ ಬಪ್ಪನಾಡಿನಲ್ಲಿ ಹೊಳೆಯ ಆಚೆ ಕಡೆಯಿಂದ ಎಂದು ನಿರ್ದರಿಸಿದ್ದೆ. ಸದಾಸಂ ಎರಡು ಬಾರಿ ವ್ಯಾನಿಗೆ ಹಾಕಿ ತೆಗೆಯುವುದು ಶ್ರಮದಾಯಕ. ನಾನು ದೈಹಿಕವಾಗಿ ದುರ್ಬಲನಾದುದರಿಂದ ನನಗೆ ಈ ಹೆಚ್ಚಿನ ಶ್ರಮದಾಯಕ ಕೆಲಸ ಎಳೆದು ಹಾಕಿಕೊಳ್ಳಲು ಆಸಕ್ತಿ ಇರಲಿಲ್ಲ.

ಹೊಳೆದಾಟುವ ಬಗ್ಗೆ ವಿಚಾರಿಸುತ್ತಿರುವಾಗ ಅಶೋಕವರ್ಧನರು ರೋಹಿತ್ ರಾವ್ ಅವರ ಸಂಚಾರವಾಣಿ ಸಂಖ್ಯೆ ಕೊಟ್ಟು ಅವರಲ್ಲಿ ವಿಚಾರಿಸು ಎಂದರು. ರೋಹಿತರು ಎರಡು ಬಾರಿ ನೂರ ಐವತ್ತಕ್ಕೂ ಮಿಕ್ಕಿ ಸ್ಕೌಟ್ ಮಕ್ಕಳ ಸೈನ್ಯವನ್ನು ಮಂಗಳೂರಿನಿಂದ ಮಲ್ಪೆ ತನಕ ಕಾಲ್ನಡುಗೆಯಲ್ಲಿ ಮುನ್ನಡೆಸಿದ ಅನುಭವ ಇರುವಂತಹವರು. ಬೇಟಿಯಾದಾಗ ರೊಹಿತ್ ಅವರು ಸಹಕರಿಸಲು ಒಪ್ಪಿಕೊಂಡರು ಮಾತ್ರವಲ್ಲ ಅಂದು ಕೆಮರ ಹಾಗೂ ಜಿಪಿಎಸ್ ಸಮೇತ ಹಾಜರಿರುತ್ತೇನೆ ಅಂದರು.

ಮೊದಲು ಈ ಪ್ರವಾಸದ ವಿಚಾರ ಹೆಚ್ಚು ಗೆಳೆಯರಲ್ಲಿ ಹಂಚಿಕೊಳ್ಳಲಿಲ್ಲ. ಸಿಮಿತ ಆರೊಗ್ಯದ ಕಾರಣ ನನಗೆ ಗಮನವಿಟ್ಟು ಕಾರ್ಯ ನಿರ್ವಹಿಸಲು ಬಹಳ ಕಷ್ಟವಾಗುತ್ತದೆ. ಅದುದರಿಂದ ಜನರ ಸಂತೆಯಲ್ಲಿ ಗಮನ ಕೈಕೊಡುವುದರ ಇಷ್ಟಪಡುವುದಿಲ್ಲ. ಯಂತ್ರ ಹಾಗೂ ಮಕ್ಕಳ ಮೇಲೆ ಸಂಪೂರ್ಣ ಗಮನವಿಡಲು ನನ್ನ ತಯಾರಿ ಕೆಲವರಿಗೆ ಮಾತ್ರ ತಿಳಿಸಿದ್ದೆ.

ಸಮುದ್ರತೀರದಲ್ಲಿ ಸವಾರಿ ಮಾಡುವಾಗ ತೆರೆಗಳು ತೇವಗೊಳಿಸಿದ ಮರಳಿನಲ್ಲಿ ಸವಾರಿ ಉತ್ತಮ. ಅಲ್ಲಿ ಚಕ್ರಕ್ಕೆ ಗಟ್ಟಿ ತಳ ಸಿಕ್ಕುವ ಕಾರಣ ಸವಾರಿ ಸುಲಭ ಹಾಗೂ ವೇಗವಾಗಿ ಸಾಗಬಹುದು. ಇಂದನ ಖರ್ಚು ಕಡಿಮೆ. ಒದ್ದೆ ಮರಳಿನಲ್ಲಿ ಸವಾರಿ ಸುಲಭ ಎನ್ನುವುದು ಎಲ್ಲಾ ಸಮುದ್ರ ತೀರದಲ್ಲಿ ಸೈಕಲಿಸಿದವರಿಗೂ ತಿಳಿದ ವಿಚಾರ. ಆದರೆ ನಿರಂತರವಾಗಿ ತೆರೆಗಳ ಮೇಲೆ ವಾರೆ ಕಣ್ಣಿಡುತ್ತಾ ಇರಬೇಕಾಗುತ್ತದೆ. ನನ್ನ ತಯಾರಿ ಎಂದರೆ ಸಾದ್ಯವಾದಷ್ಟು comprehensive ಆಗಿ ಚಿಂತಿಸುತ್ತೇನೆ. ಹಾಗೆ ಮಕ್ಕಳಿಗೆ ರಕ್ಷಣಾ ಕವಚ life jacket ಬೇಕಾ ? ಎನ್ನುವ ಪ್ರಶ್ನೆ ಉಂಟಾಗಿತ್ತು. ಬೇಡ, ಅಗತ್ಯವಿಲ್ಲ ಎಂದರು ರೋಹಿತ್. ಈ ತೆರೆಗಳ ಮೇಲೆ ಕಣ್ಣಿಡುವ ವಿಚಾರದಲ್ಲಿ ಕೊನೆ ಹಂತದಲ್ಲಿ ಸೋತವನು ನಾನೇ.

ಸದಾಸಂ ಚೈನಿಗೆ ಕಳೆದ ಸಲ ಕಡಲ ತೀರಕ್ಕೆ ಹೋಗಿ ಬಂದ ನಂತರ ಶಂಕರಣ್ಣನ ಕಾರ್ ವೀಲ್ಸ್ ನಲ್ಲಿ ಡೀಸಲ್ ಸ್ನಾನ ಮಾಡಿಸಿ ಅನಂತರ ಒತ್ತಡದ ಗಾಳಿ ಹಿಡಿದು ಒಣಗಿಸಿದ್ದೆವು. ಈ ಸಲ ಹೋಗುವ ಮೊದಲು ಏನು ಮಾಡಲಿ ಎಂದಾಗ ಎಣ್ಣೆ ಲೇಪನೆ ಬೇಡ ಎಂದರು ಶಂಕರಣ್ಣ. ಅದನ್ನು ಬಿಗಿ ಪಡಿಸುವ ಬಗೆಗೆ ಮೋಹನರಲ್ಲಿ ಮಾತನಾಡುವಾಗ ಸದ್ಯಕ್ಕೆ ಹೀಗೆ ಇರಲಿ, ಮರಳು ಸಂದಿನಲ್ಲಿ ಸೇರಿ ಬಿಗಿಯಾಗಬಹುದು ಎಂದವರು ಹೇಳಿದರು. ದಂಡಯಾತ್ರೆ ಮರುದಿನ ಸದಾಸಂ ಚಕ್ರಗಳನ್ನು ಎತ್ತಿ ನೋಡುವಾಗ ಚೈನ್ ಬಹಳ ಬಿಗಿಯಾದದ್ದು ಕಂಡು ಬಂತು. ಮೊದಲು ಹೆಚ್ಚು ಬಿಗಿಪಡಿಸಿದ್ದರೆ ತುಂಡಾಗುವ ಸಾದ್ಯತೆ ಇದ್ದಿರಬಹುದು.

ಪ್ರವಾಸಕ್ಕೆ ದಿನ ನಿಶ್ಚಯಿಸುವಾಗ ಮರುದಿನ ಮಕ್ಕಳಿಗೆ ರಜೆ ಇರಬೇಕು ಎಂದು ತೀರ್ಮಾನಿಸಿದ್ದೆ. ಹಾಗೆ ೨೮ರ ಬಕ್ರಿದ್ ರಜಾ ದಿನ ಹೋದರೆ ಮರುದಿನ ರವಿವಾರ ಮಕ್ಕಳಿಗೆ  ಶಾಲೆಗೆ ರಜೆ ಮಾಡದೆ   ಸುದಾರಿಸಿಕೊಳ್ಳಲು ಸಾದ್ಯವೆಂದು ಆಲೋಚನೆಯಾಗಿತ್ತು. ಮುಸ್ಲಿಮರ ಹಬ್ಬದ ರಜೆ ಯಾವತ್ತೂ ಅನಿಶ್ಚಿತ. ಚಂದ್ರ ಕಾಣಬೇಕು....... ಈ ಮದ್ಯೆ ಅಶೋಕವರ್ಧನರು ಒಂದು ಕಾರ್ಯಕ್ರಮದ ಸುಳಿವು ಕೊಟ್ಟಾಗ ನಮ್ಮ ಪ್ರವಾಸ ಹಿಂದೂಡಲ್ಪಟ್ಟಿತು. ೨೨ರಂದು ಹೋಗಿ ಬಂದರೆ ಮರುದಿನ ಮಕ್ಕಳಿಗೆ ಷಷ್ಠಿ ರಜೆ ಇತ್ತು  ಅನ್ನುವ ಕಾರಣದಿಂದ  ೨೨ ರವಿವಾರದಂದೇ  ಹೊರಟೆವು.   ಕೊನೆಗೆ ಬಕ್ರಿದ್ ಲೆಕ್ಕದ ಮಕ್ಕಳ ರಜೆಯೂ ಒಂದು ದಿನ ಹಿಂದೂಡಲ್ಪಟ್ಟು ಅಕಸ್ಮಾತ್ ನಾವು ೨೮ ರಂದು ನಿಗದಿ ಪಡಿಸಿದ್ದರೆ ಸಮಯ ಹೊಂದಾಣಿಕೆಯಾಗದೆ ರದ್ದಾಗುವ ಸಾದ್ಯತೆ ಇತ್ತು.

ರೋಹಿತ್ ಅವರು ಬೆಳಗ್ಗೆ ಬೇಗ ಪ್ರಾರಂಬಿಸುವ ಅನಿವಾರ್ಯತೆ ಒತ್ತಿ ಹೇಳಿದ್ದರು. ಬಿಸಿಲಿನ ಹೊಡೆತಕ್ಕೆ ನಾವು ತತ್ತರಿಸುವ ಕಾರಣ ಬಿಸಿಲೇರುವ ಮೊದಲೇ ಸುರುಮಾಡುವುದು ಮಾತ್ರವಲ್ಲ ಸಾಕಷ್ಟು ಕ್ರಮಿಸ ಬೇಕು ಎಂದಿದ್ದರು. ಹಾಗೆ ಬೆಳಗ್ಗೆ ನಾಲ್ಕು ಮುಕ್ಕಾಲಿಗೆ ಮನೆಯಿಂದ ಹೊರಟೆವು. ನೇರ ಮಂಗಳೂರಿನ ದಾರಿ ಹೊಂಡಗುಂಡಿ ತುಂಬಿದ ಕಾರಣ ಹತ್ತು ಕಿಮಿ ಹೆಚ್ಚಿನ ಮುಡಿಪು ಮೂಲಕದ ಬಳಸು ದಾರಿಯಲ್ಲಿ ಸಾಗಿದೆವು. ನಮ್ಮಲ್ಲಿಂದ ಸುಮಾರು ಅರುವತ್ತು ಕಿಮಿ ದೂರದ ಕೂಳೂರು ಮುಟ್ಟಿ ರೋಹಿತರಿಗೆ ಸಂದೇಶ ಕಳುಹಿಸಿದೆ. ಈಗ  ಹೋಟೇಲಿನಲ್ಲಿದ್ದೇವೆ. ಇಪ್ಪತ್ತು ನಿಮಿಷದಲ್ಲಿ ಕಡಲ ತೀರದಲ್ಲಿರುತ್ತೇವೆ.

ನನಗೆ ರೋಹಿತರು ಬರುವ ಮೊದಲೇ ಸದಾಸಂ ಇಳಿಸಿ ಚಾಲನೆ ಮಾಡುವ ತವಕ. ಸ್ವಲ್ಪ diversion ಇದ್ದರೂ ನನ್ನ ಏಕಾಗ್ರತೆ ಬಂಗವಾಗುವ ಕಾರಣ  ಅವರೆಲ್ಲ ಸೇರುವ ಮೊದಲೇ   ಸಂಪೂರ್ಣ ಗಮನವಿಟ್ಟು ಸದಾಸಂ ಪ್ರಯಾಣಕ್ಕೆ ಅಣಿಗೊಳಿಸುವುದು  ಉತ್ತಮ ಅಂದುಕೊಂಡಿದ್ದೆ. ಪಣಂಬೂರು ಕಡಲತೀರದ ವಾಹನ   ನಿಲುಗಡೆ ಪ್ರದೇಶದಲ್ಲಿ ಇದನ್ನು ಇಳಿಸಿದೆವು.

ಹಿಂದಿನ ಸಂಜೆ ವಾಹನಕ್ಕೆ ಏರಿಸುವ ಮೊದಲು ಸ್ವಲ್ಪ ನೀರು ಹಾಕಿ ತೊಳೆದದ್ದು ಸಮಸ್ಯೆ ಉಂಟುಮಾಡಿತು. ಚಾಲನೆ ಸಾದ್ಯವಾದರೂ ಎಂಜಿನ್ ತುಂಬಾ ಎಗರಾಡುತಿತ್ತು. ರೋಹಿತರ ಗೆಳೆಯ ನಿಬಿಶರು ತಂತ್ರಜ್ನರ ಸಂಪರ್ಕಿಸಿದರು. ಅವರು ಬಂದವರೇ ಎರಡೇ ನಿಮಿಷದಲ್ಲಿ CD Unit ತೊಂದರೆ ಎಂದರು. ನಾನು ಹಿಡಿದುಕೊಂಡು ಹೋದ ಬಿಡಿಬಾಗಗಳಲ್ಲಿ ಇದು ಸಹಾ ಇದ್ದ ಕಾರಣ ತಕ್ಷಣ ಬದಲಾಯಿಸಿ ಸಮಸ್ಯೆ ಪರಿಹರಿಸಿಕೊಂಡೆವು. ತಂತ್ರಜ್ನರು ಶುಲ್ಕ ಪಡಕೊಳ್ಳಲು ಒಪ್ಪದೆ ತಮ್ಮ ಬುಲ್ಲೆಟ್ ಹತ್ತಿ ಹೊರಟುಹೋದರು.



2 comments:

S.M. PEJATHAYA said...

ಗೋವಿಂದರೇ!
ಮೊದಲ ಭಾಗದ ನಿರೂಪಣೆ ಚೆನ್ನಾಗಿ ಬರೆದಿದ್ದೀರಾ!
ಅಭಿನಂದನೆಗಳು

- ಪೆಜಾತ್ತಾಯ

ಎಚ್. ಸುಂದರ ರಾವ್ said...

ಗೋವಿಂದಣ್ಣ
ಅನಿಲನ ಅನುಭವ ಅಮೋಘ! ನೆಲಬಾಂಬಿನಿಂದ ಕಾಂಗರೂ ಮರಿ ಅಭಿ ಬಚಾವಾದದ್ದೂ ಒಳ್ಳೆಯದಾಗಿದೆ. ನಿಮ್ಮೆಲ್ಲರ ಸಾಹಸ ಬುಡದಿಂದ ತಲೆಯವರೆಗೆ ಖುಷಿಯಲ್ಲಿ ಓದಿದೆ.