Wednesday, July 22, 2009

ಸಂಪ್ರದಾಯ ಎನ್ನುವ ಸರಪಳಿಗೆ ಹೊಸತೊಂದು ಮುತ್ತು

ಒಂದರ ಹಿಂದೊಂದರಂತೆ ಸರ್ಕಾರಿ ಕಾರುಗಳು ತಿರುವು ಮುರುವಿನ ಕಚ್ಚಾ ರಸ್ತೆಯಲ್ಲಿ …..ಬೆಳಗಿನ ಜಾವ 6.45 ಕ್ಕೆ ಬಂದು ನಿಂತಾಗ ಸುತ್ತಲ ಗ್ರಾಮಸ್ಥರು…… ಎನ್ನುತ್ತದೆ ಉಡುಪಿಯ ಆಚಾರರು ಮೊದಲ ಬಾರಿಗೆ ಸ್ವರ್ಣ ನದಿಗೆ ಬಾಗಿನ ಅರ್ಪಿಸಿದುದರ ಬಗೆಗೆ ಇಂದಿನ ಪ್ರಜಾವಾಣಿ ಪತ್ರಿಕೆ ಮುಖಪುಟ ವರದಿ. ನಮ್ಮಲ್ಲಿ ಬಾಗಿನ ಎಂದು ತಲೆಕೆರೆದುಕೊಳ್ಳುತ್ತಿರುವಾಗ ನೆನಪಾಯಿತು ಹಿಂದೆ ನಡೆದ ಒಂದು ಘಟನೆ.

ದೂರದ ಜರ್ಮನಿಯಲ್ಲಿ ಪರಿಚಯವಾದ ಯುವಗೆಳೆಯ ಕ್ರಿಶ್ಚನ್ ಒಂದು ದಿನ ಬೆನ್ನ ಚೀಲ ಸಮೇತ ನಮ್ಮಲ್ಲಿಗೆ ಬಂದರು. ಮರುದಿನ ನನ್ನ ಅಪ್ತ ವರ್ಗದಲ್ಲೊಂದು ಮದುವೆ. ಮದುವೆ ಮನೆಯವರ ಅನುಮತಿ ಪಡೆದು ಇವರನ್ನೂ ಕರೆದೊಯ್ದೆ. ಇಂಗ್ಲೀಶ್ ಸಲೀಸಾಗಿ ಮಾತನಾಡುತ್ತಿದ್ದ ಕಾರಣ ಕ್ರಿಶ್ಚನ್ ಅಲ್ಲಿ ಎಲ್ಲರೊಂದಿಗೆ ಬೆರೆತರು.  ಸಂಸ್ಕೃತ  ಶ್ಲೋಕ  ಹೇಳುವ  ಸಂಪ್ರದಾಯ  ಇರುವ    ಊಟದ ವೇಳೆಯಲ್ಲಿ  ಇವರು   ಜರ್ಮನ್ ಪದ್ಯ ಹೇಳಿ ಎಲ್ಲರನ್ನೂ ರಂಜಿಸಿದರು.

ಮದುವೆ ಮನೆಯಿಂದ ಹೊರಡುವ ಮುಂಚೆ  ಕ್ರಿಶ್ಚನ್ ನನ್ನನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮಲ್ಲಿ good morning, good evening  ಇಲ್ಲ ಎಂದು ನೀನು ಹೇಳಿದೆ. ಅಂತಹ ಸಂಪ್ರದಾಯ ಇದೆ ಎಂದು ಇವರು ಹೇಳುತ್ತಾರೆ ಎನ್ನುತ್ತಾ  ಅಲ್ಲಿದ್ದ  ಬ್ರಹ್ಮಚಾರಿ ಬಜರಂಗಿಯೊಬ್ಬರನ್ನು ತೋರಿಸಿದರು. ನನಗೆ ಮೈ ಪರಚಿಕೊಳ್ಳುವ ಅನುಭವ. ಇವರಲ್ಲಿ ಕೇಳಿದೆ  ಮಹಾರಾಯರೇ, ನಮ್ಮಲ್ಲಿ ಆ ಸಂಪ್ರದಾಯ ಇಲ್ವಲ್ಲ.  ಆಗ ಚಡ್ಡಿ  ಸರದಾರರು   ಉತ್ತರಿಸಿದರು  ಯಾಕಿಲ್ಲ.  ಶುಭ್ ದಿನ್, ಶುಭ್ ರಾತ್ …………

ಯುರೋಪಿನಲ್ಲಿ ನನಗೆ ಸಿಕ್ಕ ಹಲವು ಮಿತ್ರರು ತಮ್ಮ ಪರಂಪರೆಗೆ ಅಮೇರಿಕದ ಪ್ರಭಾವದಿಂದ ಹಾಳಾಗುತ್ತಿದೆ ಎನ್ನುವ ಕಾಳಜಿ ಸ್ಪಷ್ಟವಾಗಿ ವ್ಯಕ್ತ ಪಡಿಸಿದ್ದರು. ಆದರೆ ನಾವು ನಮ್ಮ ಪರಂಪರೆಗಳ ಬಿಸಾಕಿ ಹೊಸತನಕ್ಕೆ ಹೊಂದಿಕೊಳ್ಳಲು ಯಾವಾಗಲೂ ತಯಾರು.

ಮೈಸೂರ ಅರಸರು ಮಾಡುತ್ತಿದ್ದ ಆಯುಧ ಪೂಜೆ ವಾಹನ ಗಾರೇಜುಗಳ ಬೆನ್ನೇರಿ ನಮ್ಮೂರಿಗೂ ಕಾಲಿಟ್ಟಿತು. ಮಹಾರಾಷ್ಟ್ರದಲ್ಲಿ ಮೊದಲು ಪ್ರಾರಂಬವಾಗಿ ನಮ್ಮಲ್ಲಿಗೆ ಕಾಲಿಟ್ಟ ಸತ್ಯನಾರಾಯಣ ಪೂಜೆಗೆ ಒಟ್ಟು ಇತಿಹಾಸ ನೂರು ವರ್ಷಗಳಷ್ಟು ಎಂದು ಶ್ರೀ ಸಂಜಯ ಹಾವನೂರರು ಸುಧಾದಲ್ಲಿ ಸಂಶೋಧನಾ ಬರಹ ಹಿಂದೊಮ್ಮೆ ಬರೆದಿದ್ದರು. ಮೊದಲಿಗೆ ನಮ್ಮಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಏರ್ಪಡಿಸಿದವರು ಪರಿವಾರದವರೇ. ಕಾರಣಾಂತರಗಳಿಂದ ಮುಖ್ಯವಾಗಿ ಜಾತಿ ಮತ ಮೀರಿ ಎಲ್ಲರೂ ಪಾಲ್ಗೊಳ್ಳುವ ಅವಕಾಶ ಇರುವುದರಿಂದ ಅದು ವ್ಯಾಪಕ ಪ್ರಚಾರಕ್ಕೆ ಬಂತು.

 ಈಗ ಕರಾವಳಿ ಪ್ರದೇಶಕ್ಕೆ ಹೊಸತಾಗಿ ಸೆರ್ಪಡೆಯಾಗುತ್ತಿರುವ ಸಂಪ್ರದಾಯ ಹೊಳೆಗೆ ಬಾಗೀನ ಅರ್ಪಣೆ. ಉಡುಪಿಯ ಆಚಾರರು ಸ್ವರ್ಣ ನದಿಗೆ ಬಾಗಿನ ಅರ್ಪಿಸಿ ಮೇಲ್ಪಂಕ್ತಿ ಹಾಕಿ ಉಳಿದ ತುಂಡು ಪುಡಾರಿಗಳಿಗೆ ತೋಡು ಕಣಿಗಳಿಗೆ ಬಾಗಿನ ಅರ್ಪಿಸುವ ಅನಿವಾರ್ಯತೆ ಉಂಟು ಮಾಡಿದ್ದಾರೆ. ನಾವೊಂದು ಮಹತ್ವದ ಮಾದರಿ ಕಾರ್ಯಕ್ರಮ ನಡೆಸಿದ್ದೇವೆ. ಪ್ರತಿ ವರ್ಷ ಸರಕಾರ ಇದನ್ನು ನಡೆಸಿಕೊಂಡು ಬರಬೇಕೆಂದು ಶಾಸಕ ರಘುಪತಿ ಭಟ್ ಸುದ್ದಿಗೋಷ್ಟಿಯಲ್ಲಿ ಅಪ್ಪಣೆ  ಕೊಡಿಸಿದ್ದಾರೆ. ಅದೊಂದು ಮಹಾ ಸಾದನೆ ಎನ್ನುವಂತೆ ಅಚಾರರು ತಮ್ಮ ಬ್ಲೋಗಿನಲ್ಲೂ ಹಾಕಿಕೊಂಡಿದ್ದಾರೆ.  


1 comment:

ಆಕ್ರೋಶ ವರ್ಜನ said...

ರಾಮ್ ರಾಮ್ ಗೋವಿಂದಜೀ

ಮನೆಯಲ್ಲಿ ಅಂತಾರಾಷ್ಟ್ರೀಯ affairs ಇಟ್ಟುಕೊಂಡು ಸಾರ್ವಜನಿಕದಲ್ಲಿ ಸನಾತನೀ ಭಾರತೀಯ ವೇಷ ತೊಟ್ಟುಕೊಂಡು ಅಧಿಕಾರ ನಡೆಸುವುದು ಇಂದು ಪಕ್ಷಾತೀತವಾಗಿದೆ. ಇವನ್ನು ಪ್ರಶ್ನಿಸುವ, ವಿಮರ್ಶಿಸುವ ತಾಕತ್ತನ್ನು ನಮ್ಮೆಲ್ಲಾ ಮಾಧ್ಯಮಗಳು ಕಳೆದುಕೊಂಡಿವೆ. ಕನಿಷ್ಠ ಬ್ಲಾಗಿನಲ್ಲಾದರೂ ತೋಡಿಕೊಳ್ಳುವ safety valveನ್ನು ಚೆನ್ನಾಗಿ ಬಳಸಿಕೊಂಡದ್ದಕ್ಕೆ ನಿನಗೆ ಅಭಿನಂದನೆ ಹೇಳಲೋ ನಮ್ಮ ಸಾಮಾಜಿಕ ಭವಿಷ್ಯದ ಕರಾಳ ಚಿತ್ರಣ ನೆನೆಸಿ ವಿಷಾದಿಸಲೋ ಮೂಕನಾಗಿದ್ದೇನೆ. ಗುರುನಾನಕ್, ಬುದ್ಧ ಇತ್ಯಾದಿ ಜಯಂತಿಗಳಿಗೆ ರಾಷ್ಟ್ರವ್ಯಾಪೀ ರಜೆ ಘೋಷಿಸುವಲ್ಲಿಂದ ತೊಡಗಿ, ರಕ್ಷಾಬಂಧನ್, ಗುರುಪೂರ್ಣಿಮೆ, ಸಂತೋಷಿಮಾ ಒಂದೊಂದೂ ನಮ್ಮನ್ನು ರಾಷ್ಟ್ರವಾಗಿ ಒಂದು ಎಂಬ ಭ್ರಮೆಯಲ್ಲಿ ಪ್ರಾದೇಶಿಕವಾಗಿ, ವೈಯಕ್ತಿಕವಾಗಿ ನಮ್ಮನ್ನು ಅಸಿಂಧು ಮಾಡುತ್ತಲೇ ಇವೆ. ಆ ಲೆಕ್ಕದಲ್ಲಿ ಗೋರಿಗಳಿಗೆ, ವರ್ಷಪೂರ್ತಿ ಕಾಕೋಚ್ಛಿಷ್ಟ ಪೂಜಿತ ವಿಗ್ರಹಗಳಿಗೆ, ಏನಿಲ್ಲವಾದರೂ ಆ ಕ್ಷಣಕ್ಕೆ ಸಜ್ಜುಗೊಳಿಸಿದ ಚಿತ್ರಪಟಗಳಿಗೆ ‘ಭಾವಪೂರ್ಣ ನಮನಗೈಯುವ’ ಮನಮೋಹನಸೊಂಗ್ಜೀ ಮುಂಚೂಣಿಯಲ್ಲಿ ದಿಲ್ಲಿ ಪೆರೇಡ್ ನಾಳೆ ಭಾಕ್ರಾನಂಗಲ್ಲಿನಲ್ಲಿ ಬಾಗಿನ ಅರ್ಪಿಸುವುದನ್ನು ಕಾದಿರುತ್ತೇನೆ.

ಆಕ್ರೋಶ ವರ್ಜನ