ಹಣದುಬ್ಬರ ಎನ್ನುವ ವಿಷ ನಮ್ಮ ಜೀವನವನ್ನು ಹಾಳುಮಾಡುತ್ತದೆ. ಹಣವು ಬೆಲೆ ಕಳಕೊಂಡಂತೆ ನಮಗೆ ನ್ಯಾಯವಾದ ಪ್ರತಿಫಲ ದೊರಕಿತೋ ಎನ್ನುವ ಗೊಂದಲ ಉಂಟುಮಾಡುತ್ತದೆ. ಜನರಲ್ಲಿ ಹೆಚ್ಚಿನ ಅಪೇಕ್ಷೆ ಮೂಡುತ್ತದೆ. ಉದ್ಯೋಗಿಗಳು ಮುಷ್ಕರ ಹೂಡುತ್ತಾರೆ. ಈ ರೀತಿ ರೂಪಾಯಿ ಬೆಲೆ ಕಳೆದುಕೊಳ್ಳಲು ನಮ್ಮಲ್ಲಿರುವ ಭ್ರಷ್ಟ ವ್ಯವಸ್ಥೆಯ ಚುಕ್ಕಾಣಿ ಹಿಡಿದ ಗಾಂಧಿ ಟೋಪಿಯ ಅಸಮರ್ಥ ರಾಜಕಾರಣಿಗಳೇ ಕಾರಣ.
ನಾನು ಅಮೇರಿಕದಲ್ಲಿ ಸೈಕಲಿಸುವಾಗ ಮೊದಲ ಹತ್ತು ದಿನಗಳಲ್ಲಿ ನಿರೀಕ್ಷಿತ ವೇಗದಲ್ಲಿಯೇ ಮುಂದುವರಿದಿದ್ದೆ. ಆಗ ಪೆನ್ಸಿಲ್ವಾನಿಯಾ ರಾಜ್ಯದಲ್ಲಿ ಸಿಕ್ಕ ಸಾವಯುವ ಕೃಷಿಕರಾದ ಎರಿಕ್ ಆನ್ ದಂಪತಿಗಳಲ್ಲಿ ಒಂದು ವಾರ ಕಳೆದದ್ದು ನಾನು ವೇಳಾಪಟ್ಟಿಯಲ್ಲಿ ಹಿಂದೆ ಬೀಳಲು ಕಾರಣವಾಯಿತು. ಅವರು ನೆರೆಯ ಆಮೀಷ ಜನರೊಂದಿಗೆ ಉತ್ತಮ ಸಂಬಂದ ಹೊಂದಿದ್ದ ಕಾರಣ ದಿನ ಹೋದದ್ದೆ ಅರಿವಾಗಲಿಲ್ಲ.
ನನ್ನ ಅಬ್ಯಾಸ ಎಂದರೆ ಮುಂದಿರುವ ಸಮಸ್ಯೆಯನ್ನು ಮೊದಲು ಬ್ರೆಡ್ ತುಂಡುಮಾಡುವ ಹಾಗೆ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡುವುದು ಅಂದರೆ ಗುರಿಯನ್ನು ಹಂಚಿಹಾಕುವುದು. ನನ್ನ ಮುಂದಿರುವ ಪಯಣ ನ್ಯೂ ಯೊರ್ಕನಿಂದ ಲಾಸ್ ಎಂಜಲಸ್ ಪಟ್ಟಣಕ್ಕಿರುವ ಮೂರು ಸಾವಿರ ಚಿಲ್ಲರೆ ಮೈಲು ಬಾಗಿಸು ನನಗೆ ಲಭ್ಯವಿರುವ ನೂರು ದಿನ ಅಂದರೆ ಸರಾಸರಿ ದಿನಕ್ಕೆ ನಲುವತ್ತು ಮೈಲು ಕ್ರಮಿಸಲೇ ಬೇಕಾಗಿತ್ತು.
ಅಮೇರಿಕ ಸೇರುವ ಮೊದಲೇ ಲಾಸ್ ಎಂಜಲಸ್ ನಿಂದ ಹೊರಡುವ ವಿಮಾನದಲ್ಲಿ ಸ್ಥಳ ಕಾದಿರಿಸಲಾಗಿದ್ದು ನೂರು ದಿನಗಳಲ್ಲಿ ನಾನು ಅಮೇರಿಕ ಬಿಡಲೇ ಬೇಕಾಗಿತ್ತು. ಆಸಕ್ತಿ ಇರುವ ಏನನ್ನೂ ನೋಡದೆ ಬರೇ ಸೈಕಲಿಸುವುದರಲ್ಲಿ ನನಗೆ ಅರ್ಥ ಕಾಣಲಿಲ್ಲ. ಎರಿಕ್ ಸಹಾಯದಿಂದ ಎಲ್ಲ ಪರ್ಯಾಯಗಳ ಆಲೋಚಿಸಿ ಕೊನೆಗೆ ವಿಮಾ ಪಾಲಿಸಿಯಂತೆ ಖರೀದಿಸಿದ್ದು ಚಾಲನೆ ನಮಗೆ ಬಿಡಿ ಎನ್ನುವ ದ್ಯೇಯವಾಕ್ಯ ಹೊಂದಿರುವ ಗ್ರೆಹೌಂಡ್ ಕಂಪೇನಿ ಬಸ್ಸು ಟಿಕೇಟು. ಹಾಗೆ ಹಲವು ಬಾರಿ ಸೈಕಲು ಮತ್ತು ನಾನು ಬಸ್ಸೇರಿದ್ದು ಪರವಾಗಿಲ್ಲ ಇನ್ನು ಸೈಕಲಿಸಬಹುದು ಎಂದು ಅನಿಸಿದ ಕೂಡಲೇ ಬಸ್ಸಿಂದಿಳಿಯುತ್ತಿದ್ದೆ. ಆಗ ಅಂದರೆ 1985ರಲ್ಲಿ ನಾನು ಟಿಕೇಟಿಗೆ ಕೊಟ್ಟ ಒಟ್ಟು ಮೊತ್ತ 119 ಡಾಲರ್ ಗಳು.
ಹನ್ನೆರಡು ವರ್ಷ ಅನಂತರ ಹಳೆಯ ಗೆಳೆಯರ ಕಂಡು ಬರೋಣ ಎಂದು ಅಮೇರಿಕಕ್ಕೆ ಹಾರಿದೆ. ಆಗ ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿಗೆ ನಾನು ಕೊಟ್ಟ ಹಣ 132 ಡಾಲರ್. ಈಗ ಪುನಹ ಹನ್ನೆರಡು ವರ್ಷಗಳಾಗಿದ್ದು ಕುತೂಹಲದಿಂದ ಪ್ರಯಾಣದ ದರದಲ್ಲಾಗಿರುವ ಬದಲಾವಣೆಯನ್ನು ಜಾಲದಲ್ಲಿ ನೋಡಿದೆ. ಇಂದು 2009ರಲ್ಲಿ ಅದೇ ಪ್ರಯಾಣಕ್ಕೆ ಗರೀಷ್ಟ ಇನ್ನೂರ ನಲುವತ್ತು ಡಾಲರ್. ಮುಂಗಡವಾಗಿ ಪಡಕೊಂಡ ಟಿಕೇಟಿಗೆ ಬಹಳ ರಿಯಾಯತಿ ಇದ್ದರೂ ಈ ಬರಹದಲ್ಲಿ ನಾಲ್ಕು ಕಡೆಗಳಲ್ಲಿ ತೋರಿಸುವ ದರಗಳು ಅವುಗಳನ್ನು ಹೊರತು ಪಡಿಸಿದೆ.
ಎಪ್ಪತೈದು ವರ್ಷ ಹಿಂದೆ 1934ರಲ್ಲಿಯೇ ಇದು 32.5 ಡಾಲರ್ ಆಗಿತ್ತೆಂದು ಪತ್ರಿಕಾ ಪ್ರಕಟನೆ ಹೇಳುತ್ತದೆ. ಅಂದರೆ 75 ವರ್ಷದಲ್ಲಿ ಇದು ಬರೇ ಏಳು ಪಾಲು ಹೆಚ್ಚಾಗಿದೆ. ನಮಗೆಲ್ಲ ನಿಜಕ್ಕೂ ಆಶ್ಚರ್ಯಕರವಾದ ವಿಚಾರ.
ಹೋಲಿಸಿ ನೋಡುವಾಗ 1967ರಲ್ಲಿ ನಾನು ಮೈಸೂರಿನ ವಸತಿ ಶಾಲೆಯಲ್ಲಿದ್ದಾಗ ನಮ್ಮೂರಿನಿಂದ ಮೈಸೂರಿಗೆ ದೊಡ್ಡವರಿಗೆ ಐದು ರೂಪಾಯಿ ಇದ್ದ ನೆನಪು. ಈಗ ಅರೆ ಸುಖಾಸಿನ ಬಸ್ಸಿನಲ್ಲಿ ಮೈಸೂರಿಗೆ ಇನ್ನೂರು ರೂಪಾಯಿ ದಾಟಿದೆ. ಅಂದರೆ ನಲುವತ್ತೆರಡು ವರ್ಷದಲ್ಲಿ ನಲುವತ್ತು ಪಾಲು ಹೆಚ್ಚಳ. ದಿಕ್ಕು ತಪ್ಪಿಸುವ ಹೊಲಸು ರಾಜಕೀಯದಲ್ಲಿ ಸಮಾಜಕ್ಕೆ ಸೋಲು.
ಹೋಲಿಕೆಗೆ ಕನಿಷ್ಟ ವೇತನ ಇನ್ನೊಂದು ಉತ್ತಮ ಮಾನದಂಡ. ಅಮೇರಿಕದಲ್ಲಿ ಕಳೆದ ತಿಂಗಳು ಘಂಟೆಗೆ ಏಳು ಕಾಲು ಡಾಲರ್ ತಲಪಿದ ಕನಿಷ್ಟ ವೇತನ ಇಪ್ಪತ್ತ ನಾಲ್ಕು ವರ್ಷ ಹಿಂದೆ ನಾಲ್ಕು ಡಾಲರ್ ಆಗಿತ್ತು. ಅದರಲ್ಲೂ ಒಂದು ಡಾಲರ್ ನಲುವತ್ತು ಸೆಂಟ್ಸ್ ಕಳೆದ ಎರಡು ವರ್ಷಗಳಲ್ಲಿ ಏರಿದ್ದು. ನಮ್ಮಲ್ಲಿ ಇದೇ ಅವದಿಯಲ್ಲಿ ಕೆಲಸಗಾರರ ವೇತನ ಕನಿಷ್ಟ ಹತ್ತು ಪಟ್ಟು ಹೆಚ್ಚಿದೆ.
ಸಮಯ ಹೋದಂತೆ ನಮ್ಮ ರೂಪಾಯಿ ದುರ್ಬಲವಾಗುತ್ತಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ. ನಾನು ಅಂದು ಪ್ರವಾಸ ಕೈಗೊಂಡಾಗ ನಮಗೆ ವಿದೇಶಿ ವಿನಿಮಯ 520 ಡಾಲರ್ ಸಿಕ್ಕಿತ್ತು. ಐದುನೂರು ಬಾಂಕಿನಲ್ಲಿ ಮತ್ತು ಇಪ್ಪತ್ತು ವಿಮಾನ ನಿಲ್ದಾಣದಲ್ಲಿ. ಆಗ ದರ ಸುಮಾರು ಹನ್ನೆರಡುವರೆ ರೂಪಾಯಿ ಇದ್ದು ಸ್ವಲ್ಪ ಹೆಚ್ಚಿಗೆ ವಿನಿಮಯವನ್ನು ಮುಂಬಯಿಯ ಕಡಲತೀರದ ಕೋಟೆ ಪ್ರದೇಶದ ಗೂಡಂಗಡಿಯಲ್ಲಿ ಡಾಲರೊಂದಕ್ಕೆ ಇಪ್ಪತ್ತು ಪೈಸೆ ಹೆಚ್ಚು ಕೊಟ್ಟು ಖರೀದಿಸಿದ್ದೆ. ಇಪ್ಪತ್ತ ನಾಲ್ಕು ವರ್ಷ ಅನಂತರ ಇಂದು ಡಾಲರ್ ಎಂದರೆ ನಲವತ್ತೆಂಟು ರೂಪಾಯಿ.
Wednesday, August 05, 2009
Subscribe to:
Post Comments (Atom)
No comments:
Post a Comment