ಇಂದು ಸಂಜೀವ್ ನಂದ ಎಂಬ ಒಳ್ಳೆಯ ಹುಡುಗ ಜೈಲಿನಿಂದ ಬಿಡುಗಡೆಯಾದ. ಹತ್ತು ವರ್ಷ ಹಿಂದೆ ಮೂವರು ಪೋಲಿಸರೂ ಸೇರಿದಂತೆ ಆರು ಜನರ ಕಾರಿನ ಅಡಿಗೆ ಹಾಕಿ ಕೊಂದ ಸಂಜೀವ ನಂದನಿಗೆ ಕೆಳಗಿನ ನ್ಯಾಯಾಲಯ ವಿಧಿಸಿದ್ದ ಐದು ವರ್ಷ ಸಜೆಯಲ್ಲಿ ಎರಡು ವರ್ಷ ಜೈಲಿನಲ್ಲಿದ್ದರೆ ಸಾಕು ಎಂದು ದೆಹಲಿ ಉಚ್ಚ ನ್ಯಾಯಾಲಯ ಇತ್ತೀಚೆಗೆ ತೀರ್ಪು ಕೊಟ್ಟಿದೆ. ಅವನ ಒಳ್ಳೆಯ ನಡತೆ ನೋಡಿ ಅ ಎರಡು ವರ್ಷ ಕಾರಾಗೃಹ ಶಿಕ್ಷೆಯಲ್ಲೂ ಮೂರು ತಿಂಗಳು ಮಾಫಿ.
ನಮ್ಮಲ್ಲಿ ರಸ್ತೆಯಲ್ಲಿ ವೇಗದ ಮಿತಿ ತಪ್ಪಿ ಗಾಡಿ ಓಡಿಸಿದರೆ ದಾರಿ ಹೋಕರನ್ನು ಯಮಪುರಿಗೆ ಅಟ್ಟಿದರೆ ಚಿಲ್ಲರೆ ದಂಡ ಕಟ್ಟಿ ಬಚಾವಾಗಬಹುದು. ಕೋಟಿಗಟ್ಟಲೆ ರೂಪಾಯಿಯ ಕಾರನ್ನು ವಾಯುವೇಗದಲ್ಲಿ ಓಡಿಸಿ ರಸ್ತೆಯಲ್ಲಿರುವವರನ್ನು ಕೊಲ್ಲುವ ಸಂಜೀವ ನಂದ ಸಲ್ಮನ್ ಖಾನ್ ಅವರಂತವರಿಗೆ ಆದಾಯ ಅಂತಸ್ತಿಗೆ ತಕ್ಕಂತೆ ದಂಡವಾಗ ಬೇಕು. ಫಿನ್ ಲಾಂಡ್ ದೇಶದಲ್ಲಿ ಮಿತಿ ತಪ್ಪಿ ಓಡಿಸಿದರೆ ಅವರವರ ಸಾಮರ್ಥ್ಯ ಅನುಗುಣವಾಗಿ ದಂಡಕಟ್ಟಲೇ ಬೇಕು.
ಇತ್ತೀಚೆಗೆ ಫಿನ್ ಲಾಂಡಿನ ಹಣವಂತ ಜರಿ ಬಾರ್ ಎಂಬಾತ ಕಾರು ವೇಗವಾಗಿ ಓಡಿಸಿದ್ದಕ್ಕೆ ಕಟ್ಟಿದ ದಂಡ ಕೇವಲ ಒಂದು ಲಕ್ಷ ನಲುವತ್ತೊಂದು ಸಾವಿರ ಡಾಲರ್ ಅಂದರೆ ಸುಮಾರು ಅರುವತ್ತೈದು ಲಕ್ಷ ರೂಪಾಯಿ ದಂಡ. ಅವನು ಮಾಡಿದ ತಪ್ಪು ವೇಗದ ಮಿತಿ ಅರುವತ್ತು ಕಿಮಿ ಇದ್ದಲ್ಲಿ ಎಂಬತ್ತ ಎರಡು ಕಿಮಿ ಯಲ್ಲಿ ಕಾರು ಓಡಿಸಿದ್ದು.
ವೇಗ ಇಪ್ಪತ್ತು ಕಿಮಿ ಹೆಚ್ಚಾದರೆ ನಿಗದಿತ ಫೈನ್. ಅವನ ವೇಗ ಎಂಬತ್ತು ಕಿಮಿ ಒಳಗಿದ್ದರೆ ಆರು ಸಾವಿರ ರೂಪಾಯಿ ಕಟ್ಟಿದರೆ ಸಾಕಿತ್ತು. ಆದರೆ ಮುತ್ತೂ ಹೆಚ್ಚಿನ ಎರಡು ಕಿಮಿ ಅಂದರೆ ಆತನ ಹನ್ನೆರಡು ದಿನದ ಆದಾಯವನ್ನು ಡಂಡ ಕಟ್ಟಬೇಕಾಯಿತು. ಮುಂಚಿನ ವರ್ಷ ತನ್ನ ಕಂಪೇನಿಯ ಒಂದಂಶ ಮಾರಿದ ಕಾರಣ ಅವನ ದಿನದ ಆದಾಯ ಐದೂವರೆ ಲಕ್ಷವಾಗಿತ್ತು. ಅಲ್ಲಿನ ತೇರಿಗೆ ಲೆಕ್ಕಾಚಾರ ಪಾರದರ್ಶಕ ಮತ್ತು ಸಾರ್ವಜನಿಕರಿಗೆ ಲಭ್ಯ. ನಮ್ಮಲ್ಲಿರುವಂತೆ ಅಧಿಕಾರಿಗಳ ತೆರೆಮರೆಯ ಆಟ ಅಲ್ಲಿಲ್ಲವಂತೆ.
ಎಂಟು ವರ್ಷ ಹಿಂದೆ ನೋಕಿಯ ದೂರವಾಣಿ ಕಂಪೇನಿಯ ಯಜಮಾನ ಪೆಕ್ಕ ಆಲ ಪೀಟಿಲ ವೇಗದ ಮಿತಿ ಮೀರಿ ಸಿಕ್ಕಿಬಿದ್ದು ಸುಮಾರು ಹದಿನೈದು ಲಕ್ಷ ದಂಡ ಕಟ್ಟಬೇಕಾಗಿ ಬಂದಿತ್ತು. ೧೯೯೯ರ ಅವನ ಆದಾಯ ನಾಲ್ಕು ಮಿಲಿಯ ಡಾಲರ್ ಎನ್ನುವ ನೆಲೆಯಲ್ಲಿ ದಂಡ ಲೆಕ್ಕ ಹಾಕಲಾಗಿತ್ತು. ನಮ್ಮಲ್ಲೂ ಇಂತಹ ಕಾನೂನು ಬಂದರೆ ಚೆನ್ನಾಗಿರುತ್ತದೆ.
Saturday, August 22, 2009
Subscribe to:
Post Comments (Atom)
No comments:
Post a Comment