Tuesday, December 16, 2008

ಗ್ರಾಮೀಣ ಪ್ರದೇಶಗಳಿಗೆ ಸೌರ ವಿದ್ಯುತ್ ಉತ್ಪಾದನಾ ಅವಕಾಶ

ಮೊನ್ನೆ ಇಂದನ ಉಳಿತಾಯ ದಿನಾಚರಣೆ ಅಂಗವಾಗಿ ವಿದ್ಯುತ್ ಮಂತ್ರಿಗಳು ಸೌರ ವಿದ್ಯುತ್ ಗೆ ಬೆಂಬಲ ಎಂದು ಬರೆದು ಕೊಟ್ಟಿರುವುದನ್ನು ಓದಿದರು. ನಮ್ಮಲ್ಲಿ ಮುಂದಿನ ಹತ್ತು ವರುಷಗಳ  ಮಟ್ಟಿಗೆ   ಸೌರ ವಿದ್ಯುತ್ ಖರೀದಿ ಕ್ರಯ ಹದಿನೈದು ರೂಪಾಯಿ ಎಂದು ವಿದ್ಯುತ್ ಪ್ರಾಧಿಕಾರ ಹಾಗೂ ಸರಕಾರ ನಿರ್ಣಯಿಸಿದೆ ಎನ್ನುವುದು ಕೇಂದ್ರ ಸರಕಾರದ  ಹಳೆಯ   ಸುದ್ದಿ. ಈ ಹಿನ್ನೆಲೆಯಲ್ಲಿ ಕಿರು (?) ವಿದ್ಯುತ್ ಉತ್ಪಾದಕನಾಗಿ ನಾನು ನನ್ನ ನಾಲ್ಕು ಅನಿಸಿಕೆಗಳ ಇಲ್ಲಿ ಹಂಚಿಕೊಳ್ಳುತ್ತೇನೆ.

ನಮ್ಮಲ್ಲಿ  ಹಿಂದೆ ಪಂಪಿನೊಡನೆ ಪಡಕೊಂಡ ಸೌರ ಫಲಕಗಳಿಂದ ಸಿಗುವ ವಿದ್ಯುತ್ ಪೂರ್ತಿ ಬಳಕೆಯಾಗುತ್ತಿಲ್ಲ. ಹೆಚ್ಚುವರಿ ಸುಮಾರು ಹತ್ತು ಯುನಿಟ್ ಗಳನ್ನು ನಾನು ಮಾರಬಹುದು. ಅವರ ಹೇಳಿಕೆಯಂತೆ ದಿನಕ್ಕೆ ಸುಮಾರು ನೂರ ಐವತ್ತು ರೂಪಾಯಿ ಮೌಲ್ಯ ಸಿಗಬಹುದು. ಆದರೆ ನಾನು ಹಿಂದೊಮ್ಮೆ ಬರೆದಂತೆ ನಾವು ಜಾಲಕ್ಕೆ ಹಾಯಿಸ ಬೇಕಾದರೆ ಅದರಲ್ಲಿ ವಿದ್ಯುತ್ ಇರಲೇಬೇಕು. ಸಮೀಪದ ಅವರ ಉಪಕೇಂದ್ರಕ್ಕೆ ಪ್ರತ್ಯೇಕ ತಂತಿ ಎಳೆಯುವಷ್ಟು ನಮ್ಮಲ್ಲಿ ಉತ್ಪಾದನೆಯಾಗುವುದಿಲ್ಲ. ಬರುವ ವರ್ಷದಿಂದ 24 ಘಂಟೆ ವಿದ್ಯುತ್ ಎನ್ನುವ ಆಶ್ವಾಸನೆಯ ಹಿನ್ನೆಲೆಯಲ್ಲಿ ಈ ಬಗೆಗೊಂದು ಚರ್ಚೆ.

ಜಾಲಕ್ಕೆ ಹರಿವಿನ ಬಗೆಗೆ ಎರಡು ವಿಧಗಳು ಪ್ರಪಂಚದ ವಿವಿದೆಡೆ ಚಾಲ್ತಿಯಲ್ಲಿದೆ. ಒಂದು ನಮ್ಮ ಮನೆಯ ಮಾಪಕ  ನಾವು ವಿದ್ಯುತ್ ಹರಿಸುವಾಗ ಹಿಂದಕ್ಕೆ ತಿರುಗುವಂತೆ ಮಾಡುವುದು. ಆಗ ನಮ್ಮ ವಿದ್ಯುತ್ ಖರೀದಿ ಹಾಗೂ ಮಾರಾಟ ಕ್ರಯ ಒಂದೇ ಆಗುತ್ತದೆ. ಹಾಗಾದರೆ ಆ ಸಂದರ್ಬದಲ್ಲಿ ನಮ್ಮ ಬಂಡವಾಳಕ್ಕೆ ಶ್ರಮಕ್ಕೆ ಯೋಗ್ಯ ಪ್ರತಿಫಲ ಸಿಗದು. ವಿದ್ಯುತ್ತಿನ ದರ ನಮ್ಮಿಂದ ತುಂಬ ಹೆಚ್ಚಿರುವ ಮುಂದುವರಿದ ದೇಶಗಳಲ್ಲಿ ಇದು ಪ್ರಾಯೋಗಿಕ ಎನಿಸಬಹುದು.

ಎರಡನೇಯದು ಪ್ರತ್ಯೇಕ ಮಾಪಕ  ಹಾಕಿ ನಮ್ಮ ಹೊರಹರಿವಿನ ಲೆಕ್ಕಾಚಾರ ಮಾಡುವುದು. ಆಗ ಯುನಿಟ್ ಒಂದಕ್ಕೆ ಹದಿನೈದು ರೂಪಾಯಿ ಕೊಡುವುದಾದರೆ ನಮ್ಮ ಬಂಡವಾಳಕ್ಕೆ ಶೇಕಡಾ ಏಳರಿಂದ ಒಂಬತ್ತರ ವರೆಗೆ ಪ್ರತಿಫಲ ದೊರಕಬಹುದು. ಕಡಿಮೆ ದರದ ಬಡ್ಡಿ ಹಾಗೂ ಹೂಡಿಕೆಗೆ ಸಹಾಯದನ ಇದ್ದರೆ ಮಾತ್ರ ಇದು ಆಕರ್ಷಕವಾಗಬಹುದು.

ಜರ್ಮನಿಯಲ್ಲಿ ಕಳೆದ ವರ್ಷ ಎಂದರೆ 2007ರಲ್ಲಿಯೇ ಅಳವಡಿಸಲ್ಪಟ್ಟ   ಸೌರ  ಫಲಕಗಳ   ಮೊತ್ತ 1135 MW. ಇದರೊಂದಿಗೆ ಹೋಲಿಸಲು ನಮ್ಮ ದೇಶದಲ್ಲಿ ಈ ವರೆಗೆ ಒಟ್ಟು 120 MW ಗಳಷ್ಟು ಸೌರ ಫಲಕಗಳಿದ್ದರೆ ಅದರಲ್ಲಿ ಜಾಲಕ್ಕೆ ಸಂಪರ್ಕಿಸಿರುವುದು ಕೇವಲ 2.5 MW ಮಾತ್ರ. ಇದಕ್ಕೆ ಮುಖ್ಯ ಕಾರಣವೆಂದರೆ ಜರ್ಮನಿಯಲ್ಲಿ ಮನೆ ಮೇಲೆ ಅಳವಡಿಸಿದ ಫಲಕಗಳ ವಿದ್ಯುತ್ ಜಾಲಕ್ಕೆ ಸೇರಲು ಯುನಿಟ್ ಒಂದಕ್ಕೆ ಅಂದಾಜು ಮೂವತ್ತು ರೂಪಾಯಿ ಕೊಡುತ್ತಾರೆ. ಅಲ್ಲಿ ಸೂರ್ಯ ದರ್ಶನ ಅಪರೂಪ ಎನಿಸಿದರೂ ದರ ಸ್ಪರ್ದಾತ್ಮಕವಾಗಿರುತ್ತದೆ ಎನ್ನುವ ಕಾರಣದಿಂದ ಜನರು ಅಳವಡಿಸಲು ಆಸಕ್ತಿ ಹೊಂದುತ್ತಾರೆ. ಅದೇ ಫಲಕಗಳ ಇಲ್ಲಿ ಅಳವಡಿಸಿದರೆ ಅದರ ಎರಡು ಪಟ್ಟು ಶಕ್ತಿ ಉತ್ಪಾದಿಸಬಹುದು. ಉದಾಹರಣೆಗೆ ಒಂದು ಕಿಲೋ ಪೀಕ್ ವಾಟ್ ಫಲಕಗಳು ಉತ್ತರ ಜರ್ಮನಿಯಲ್ಲಿ ವರ್ಷಕ್ಕೆ 850 ಯುನಿಟ್ ಉತ್ಪಾದಿಸಿದರೆ ನಮ್ಮಲ್ಲಿ 1800 ಯುನಿಟ್ ಉತ್ಪಾದಿಸಬಹುದು.

ಜಾಲಕ್ಕೂ ನಮ್ಮ ಸೌರ ಫಲಕಗಳಿಗೆ ಮದ್ಯೆಯ ಪ್ರಮುಖ ಕೊಂಡಿ- ವಿಧ್ಯುತ್ ಜಾಲ ಸಂಪರ್ಕ ಇನ್ವೆರ್ಟರ್. ಪರದೇಶಗಳಲ್ಲಿ ತಯಾರಾಗುವ ಈ ಉಪಕರಣದ ಸಹಾಯದಿಂದ ನಮ್ಮಲ್ಲಿ ತಯಾರಾಗುವ ವಿದ್ಯುತ ಶಕ್ತಿಯನ್ನು ಜಾಲದೊಂದಿಗೆ ಹೊಂದಾಣಿಕೆ ಮಾಡಲು ಅವಕಾಶವಿರುತ್ತದೆ.

ಇದು ಸೌರ ವಿದ್ಯುತ್ ಫಲಕದಿಂದ ಬರುವ ಶಕ್ತಿಯ ವಿದ್ಯುದ್ಬಲ Voltage ಮತ್ತು ಪ್ರಮಾಣ Amps ಸಮತೋಲನ ಕಾಯ್ದುಕೊಂಡು ಗರೀಷ್ಟ ಉತ್ಪಾದನೆಗೆ ಪೂರಕವಾಗಿರುತ್ತದೆ. ಅನಂತರ ಅದನ್ನು ಜಾಲದಲ್ಲಿರುವಂತೆ ಉತ್ತಮ ತರಗತಿಯ sine wave ಅಲ್ಟರ್ನೇಟಿಂಗ್ ಕರೆಂಟಾಗಿ ಮಾರ್ಪಾಡಿಸುತ್ತದೆ ಹಾಗೂ ಜಾಲದ ವಿದ್ಯುತ್ ಪರೀಸ್ಥಿತಿ ಗಮನಿಸಿ ಅದಕ್ಕೆ ಅನುಗುಣವಾಗಿ ಹೆಜ್ಜೆ ಹಾಕುತ್ತದೆ. ಅಂದರೆ ಜಾಲದಲ್ಲಿ ಇರುವಿಕೆ ಖಚಿತಪಡಿಸಿಯೇ ಸಂಪರ್ಕ ಮತ್ತು ವಿದ್ಯುತ್ ಇಲ್ಲವಾದರೆ ಹರಿವು ಇಲ್ಲ ಹಾಗೂ ಜಾಲದ ಆವರ್ತನ ಚಕ್ರಕ್ಕೆ ಹೊಂದಾಣಿಕೆಯಾಗುವಂತೆ ನಿಯಂತ್ರಣ. ಜಾಲದಲ್ಲಿರುವುದಕ್ಕಿಂತ ನಮ್ಮ ತಯಾರಿ ವಿದ್ಯುತ್ತಿನ voltage ತುಸು ಹೆಚ್ಚಿರುವ ಕಾರಣ ಸಲೀಸಾಗಿ ಜಾಲಕ್ಕೆ ಹರಿಯುತ್ತದೆ.

ಇವು ದುಬಾರಿ. ನನ್ನ ಸೌರ ಫಲಕಗಳ ವಿದ್ಯುತ್ತನ್ನು ಜಾಲಕ್ಕೆ ಹಾಯಿಸಲು  1500 watts grid- tie inverter ಗೆ ಅಂದಾಜು ನಮ್ಮ ದೇಶದಲ್ಲಿ ಒಂದು ಕಾಲು ಲಕ್ಷ ರೂಪಾಯಿ ಬೆಲೆಯುಂಟು. ಬೆಲೆ ಕೇಳಿ ಹುಬ್ಬೇರಿಸಬೇಡಿ. ಮಾಮೂಲಿ ಇನ್ವರ್ಟರ್ ಗಳಲ್ಲಿ ತಯಾರಾಗುವ ವಿಧ್ಯುತ್ ಗುಣ ಮಟ್ಟದ ಪ್ರಶ್ನೆಯಾಗಲಿ ಜಾಲದ ಆವರ್ತನಕ್ಕೆ ಹೊಂದಾಣಿಕೆಯಾಗುವ ಪ್ರಶ್ನೆಯಾಗಲಿ ಇರುವುದಿಲ್ಲ.

ಪ್ರಥಮವಾಗಿ ನಮ್ಮ ಉಪಯೋಗಕ್ಕೆ ಉಳಿದದ್ದು ಸಮಾಜಕ್ಕೆ ಎನ್ನುವ ನೆಲೆಯಲ್ಲಿ ಸೌರ ಫಲಕಗಳ ಅಳವಡಿಸಿಕೊಂಡು ಹಳ್ಳಿಗರು ಸೌರ ಶಕ್ತಿಯನ್ನು ಕೊಯಿಲು ಮಾಡಬಹುದು. ಮಳೆನೀರ ಕೊಯಿಲಿನಂತೆ. ದಿನದ ನಡುಬಾಗದಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇರುವಾಗ ಗರಿಷ್ಟ ಉತ್ಪಾದನೆ. ಕೃಷಿಕರಿಗೆ ಸರಿಯಾದ ಅವಕಾಶ ಕಲ್ಪಿಸಿದರೆ ಇದೊಂದು ಉತ್ತಮ ವ್ಯವಹಾರವೂ ಆಗಬಹುದು.

ಹಳ್ಳಿಗಳಲ್ಲಾದರೆ ಹೆಚ್ಚು ಬೆಳಕು ಸಂಗ್ರಹಿಸುವ ಅವಕಾಶ. ಜತೆಯಲ್ಲಿ ಬೇಕಾದಷ್ಟು ಜಾಗ ಇರುತ್ತದೆ. ಪಟ್ಟಣಗಳಲ್ಲಿ ಎಲ್ಲೆಲ್ಲೂ ನೆರಳು. ಅವು ಚೆನ್ನಾಗಿ ಕೆಲಸ ಮಾಡಲು ಫಲಕಗಳನ್ನು ಸೂರ್ಯನೆಡೆಗೆ ತಿರುಗಿಸಲೂ ಸಮಯಾವಕಾಶ ಹಳ್ಳಿಗರಿಗೆ ಇರುತ್ತದೆ. ಸೂರ್ಯ ದೇವನ ಚಲನೆ ಅನುಸರಿಸುತ್ತಾ ಹೋದರೆ ಶೇಕಡಾ 25 ರಷ್ಟು ಅಧಿಕ ಶಕ್ತಿಯನ್ನು ಬಾಚಿಕೊಳ್ಳಬಹುದಾಗಿದ್ದು ಇದಕ್ಕಾಗಿ ಫಲಕಗಳ ಕೈಯಿಂದಲೇ ತಿರುಗಿಸಲು ಸಾದ್ಯ. ಈ ಕೆಲಸಕ್ಕೆ ಹೆಚ್ಚು ಕುಶಲತೆಯ ಅಗತ್ಯವೂ ಇರುವುದಿಲ್ಲ.

ಕಲ್ಲಿದ್ದಲು ದಹಿಸಿ ಉತ್ಪಾದಿಸುವ ವಿದ್ಯುತ್ ಹೋಲಿಸಿದರೆ ಸೌರ ವಿದ್ಯುತ್ ನಿಂದ ಗಾಳಿ ಹಾಗೂ ನೀರಿನ ಮಲೀನತೆ ಇಲ್ಲ. ಈಗ ನಾನು ಕೊಡ ಬಹುದಾದ ಕನಿಷ್ಟ ವರ್ಷಕ್ಕೆ 2500 ಯುನಿಟ್ ಲೆಕ್ಕಕ್ಕೆ ತೆಗೆದುಕೊಂಡರೂ ತುಂಗಭದ್ರಾ ನದಿಯ 6500 ಲೀಟರ್ ನೀರ ಬಳಕೆಯನ್ನು ತಪ್ಪಿಸುತ್ತದೆ.   ನನ್ನ ಕೃಷಿ ಮತ್ತು ಮನೆ ಉಪಯೋಗದ ಒಟ್ಟು  ವಿದ್ಯುತ್   ಬಳಕೆಯೂ ವರ್ಷಕ್ಕೆ ಎರಡೂವರೆ ಸಾವಿರದಿಂದ ಮೂರು ಸಾವಿರ ಯುನಿಟ್.   

ನನ್ನಲಿರುವ  ಸೌರ ಫಲಕಗಳ  ಮೌಲ್ಯ  ಸುಮಾರು  ನಾಲ್ಕುವರೆ  ಲಕ್ಷ  ರೂಪಾಯಿ.    ಸೌರ ಫಲಕಗಳಿಗೆ 25 ವರ್ಷ ಆಶ್ವಾಸನೆ ಕೊಡಬಹುದು. ಪರದೇಶಿ ನಿರ್ಮಿತ ಈ inverter ಗಳಿಗೆ ಏಳರಿಂದ ಹತ್ತು ವರ್ಷ ಆಶ್ವಾಸನೆ ತಯಾರಕರು ಕೊಡುತ್ತಾರೆ. ಸರಕಾರ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಕೊಟ್ಟರೆ ಖಂಡಿತ ಇವುಗಳು ಜನಪ್ರಿಯವಾಗಬಹುದು.  ಆಗ  ಶ್ರೀ ನಾಗೇಶ  ಹೆಗಡೆಯವರು  ಹೇಳಿದಂತೆ  ವಿದ್ಯುತ್  ಹಿಮ್ಮೊಗ  ಹರಿಯುವುದು. 

ಇದು ಲೆಕ್ಕಾಚಾರ ಬರೇ ಸಾದ್ಯತೆಗಳ ಬಗೆಗೆ ಚರ್ಚೆ ಹೊರತು ವ್ಯವಹಾರಿಕ ಅಲ್ಲ. ಸರಕಾರ ಸದ್ಯಕ್ಕೆ ಕೆಂಪು ಚಾಪೆ ಹಾಸಿದ್ದು ಕೋಟ್ಯಾದಿಪತಿಗಳಿಗೆ ಮಾತ್ರ.   ಸಣ್ಣ ಉತ್ಪಾದಕರನ್ನು ಅವರು   ಪರಿಗಣಿಸುವುದಿಲ್ಲ. ಖಜಾನೆಯಲ್ಲಿ ಕಾಸೂ ಇಲ್ಲ.

Wednesday, December 10, 2008

ಅಂತೂ ಕೈಗೆ ಸಿಕ್ಕಿತು ನ್ಯಾಯಾಲಯ ತೀರ್ಪು

ರಿಲಿಯನ್ಸ್ ಸ್ಥಾವರವಾಣಿಯ ಕಳಪೆ ಗುಣಮಟ್ಟದ ಸೇವೆಗೆ ಅವರನ್ನು ಗ್ರಾಹಕ ನ್ಯಾಯಾಲಯಕ್ಕೆ ಒಯ್ದ ಸಂಗತಿ ಮೊದಲು ಬರೆದಿದ್ದೆ. ಕೊನೆಗೂ ಗ್ರಾಹಕ ನ್ಯಾಯಾಲಯದಿಂದ ನವೆಂಬರ್ ೧೪ ರಂದು ತೀರ್ಪು ಕೊಡಲ್ಪಟ್ಟಿತು. ಅನಂತರ ಇಪ್ಪತ್ತು ದಿನಗಳು ಕಳೆದು ಅಂತರ್ಜಾಲದಲ್ಲಿ ಲಬ್ಯವಾಯಿತು. ಇಲ್ಲಿದೆ ಸಂಪರ್ಕ ಕೊಂಡಿ.

http://cms.nic.in/ncdrcrep/judgement/18542167-07--14.11.08.htm

ಈ ಹೋರಾಟದ ಬಗೆಗೆ ಬರೆಯುವುದಾದರೆ ನಾನು ಈ ಬಗ್ಗೆ ಹತ್ತಕ್ಕೂ ಹೆಚ್ಚು ಬಾರಿ ನನ್ನ ಮನೆಯಿಂದ   ೫೦ ಕಿಮಿ ದೂರಲ್ಲಿರುವ  ಮಂಗಳೂರಿಗೆ ಹೋಗುವುದು ಅಗತ್ಯವಾಗಿತ್ತು. ನನ್ನ ಆರೋಗ್ಯದ ಬಗೆಗೆ ಅವರು ಅಲ್ಲಗಳೆಯಲು ಜಿಲ್ಲಾ ಆರೋಗ್ಯದಿಕಾರಿಗಳ ಪ್ರಮಾಣ ಪತ್ರ ಒದಗಿಸಿದ್ದೇನೆ. ಅವರು ನನ್ನ ದೂರುಗಳಿಗೆ ಸ್ಪಂದಿಸಲಿಲ್ಲ ಎನ್ನುವುದಕ್ಕೂ ಸಾಕಷ್ಟು ರುಜುವಾತು ಒದಗಿಸಿದ್ದೇನೆ. ಹತ್ತ್ತಕ್ಕೂ ಹೆಚ್ಚು e mail ಪಡಿಯಚ್ಚುಗಳು. ಅಸಂಖ್ಯ ದೂರವಾಣಿ ಕರೆಗಳು. ಇವೆಲ್ಲವೂ ಖರ್ಚಿನ ಬಾಬುಗಳು. ಕೊನೆಗೆ ಪರಿಹಾರದ ಮೊತ್ತ ನಾನು ಮಾಡಿದ ಖರ್ಚಿನ ಅರ್ಧ ಭಾಗವನ್ನೂ ತುಂಬಿ ಕೊಡದಿರುವುದು ವಿಷಾದನೀಯ.

ಕೆಲವೊಮ್ಮೆ ಪರಿಹಾರ ತೃಪ್ತಿಕರ ಎನಿಸುವುದಿಲ್ಲ. ತಪ್ಪು ರುಜುವಾತು ಪಡಿಸಿದಲ್ಲಿ ಕೂಡ ಸರಿಯಾದ ಪರಿಹಾರ ದೊರಕುವುದಿಲ್ಲ ಎಂದರೆ ಗ್ರಾಹಕರು ಏಕೆ ನ್ಯಾಯಾಲಯಕ್ಕೆ ಹೋಗುತ್ತಾರೆ ? ಇದು ಎಂತಹ ಸಂದೇಶ ರವಾನಿಸುತ್ತದೆ. ಯೋಚಿಸಿದರೆ ಈ ಗ್ರಾಹಕ ನ್ಯಾಯಾಲಯಕ್ಕೆ ದೂರು ಒಯ್ಯುವುದು ಎಂದರೆ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದಂತೆ. ಸೇವಾ ನ್ಯೂನತೆ ಸರಿಪಡಿಸಿಕೊಳ್ಳುವ ಒತ್ತಡ ಸದಾ ಸೇವೆ ಕೊಡುವವರ ಮೇಲಿರಬೇಕು. ಇಲ್ಲವಾದರೆ ಅವರು ನಡೆದದ್ದೇ ದಾರಿ.

ಲಕ್ಷಕ್ಕೊಬ್ಬ  ಗ್ರಾಹಕರು  ಇವರನ್ನು   ನ್ಯಾಯಾಲಯಕ್ಕೆ   ಕರೆದೊಯ್ಯುವುದು. ಮುಖ್ಯ  ಕಾರಣ  ರುಜುವಾತು ಸಂಗ್ರಹ   ಕಷ್ಟ.   ಅಲ್ಲೂ    ಬರೇ ಪುಡಿಗಾಸು ಪರಿಹಾರ ಕೊಡುವುದಾದರೆ ಆ ಕಂಪೇನಿಗಳಿಗೆ ತಿದ್ದಿಕೊಳ್ಳುವ ಅಗತ್ಯವೇ ಇರುವುದಿಲ್ಲ. ದೂರವಾಣಿ ಬಳಕೆದಾರ ಅಪೇಕ್ಷಿಸದ ಹಾಗೂ ಉಪಯೋಗಿಸದ ಸೇವೆಗೆ ಉದಾಹರಣೆ ಸಂಗೀತದ ಕಾಲ್ ಟ್ಯೂನ್ ಜೋತಿಷ್ಯ ಶಾಸ್ತ್ರ ಕ್ರಿಕೆಟು ಸುದ್ದಿ ಇತ್ಯಾದಿಗಳಿಗೆ ಹಣ ವರ್ಗಾವಣೆಯಾಗುವುದು ಸಾಮಾನ್ಯ ಎಂಬಂತಾಗಿದೆ. ಸಲೀಸಾಗಿ ಇಂತ ಕ್ಷೌರಕ್ಕೆ  ಕುಳ್ಳಿರುಸುತ್ತಾರೆ.   ನಂತರ ಇದರಿಂದ ಪಾರಾಗುವ ಬಗೆಗೆ ಅವರ ಗ್ರಾಹಕ ಸೇವಾ ಸಿಬಂದಿಗಳಲ್ಲೂ ಸ್ಪಷ್ಟ ಉತ್ತರವಿರುವುದಿಲ್ಲ.

ನಾವು ದಿನವೊಂದರಲ್ಲಿ ಕಾಣುವ ಅನ್ಯಾಯ ಅನಾಚಾರದ ಬೆನ್ನಟ್ಟಲು ಈ ಜೀವಮಾನವೇ ಸಾಲದು. ನಮ್ಮ ಹಳ್ಳಿ ರಸ್ತೆಯಲ್ಲಿ ಕೇರಳಕ್ಕೆ ಕಾನೂನು ಬಾಹಿರವಾಗಿ ಮರಳು ಸಾಗಿಸುವ ಲಾರಿಗಳು ಪುನಃ ಪ್ರತ್ಯಕ್ಷವಾಗಿವೆ. ಯಾರೂ ಮಾತನಾಡುತ್ತಿಲ್ಲ. ದೆಹಲಿಯಿಂದ ಬಂದ ಕೋಟಿ ರೂಪಾಯಿ ನುಂಗಿದ ನಮ್ಮ ಹಳ್ಳಿ ರಸ್ತೆಯಲ್ಲಿ ಆರು ತಿಂಗಳಲ್ಲೇ  ಹೊಂಡಗಳು ಕಾಣಲು ಪ್ರಾರಂಬವಾಗಿವೆ. ಎಲ್ಲರೂ ಸುಮ್ಮನಿದ್ದಾರೆ. ನಾಲ್ಕಾರು ಬಿಎಸೆನೆಲ್ ಟವರ್ ಗಳು ಹತ್ತು ಕಿಮಿಯೊಳಗಿದ್ದು ಒಮ್ಮೊಮ್ಮೆ ನಿಲುಕುವುದಾದರೂ ನಮ್ಮ ಮೊಬೈಲ್ ತರಂಗ ಸೂಚನೆ ದಿನದ ಹೆಚ್ಚಿನ ಬಾಗ ತೋರಿಸುವುದು ಶೂನ್ಯ. ಪಟ್ಟಣದ ಅಂಗಡಿಗೆ ಹೋದರೆ ಅಲ್ಲಿ ಕಂಪ್ಯುಟರ್ ಬಳಸಿ ಹೊಸ ರೀತಿಯ ಟೋಪಿ ಹಾಕಿಸ್ಕೊಳ್ಳುವ ಅವಕಾಶ. ಎಲ್ಲ ತೇರಿಗೆಗಳು ಸೇರಿದ ಮಾರಾಟ ದರಕ್ಕೆ ವಾಟ್ ಸೇರಿಸುವುದು ಮೇಲ್ನೋಟಕ್ಕೆ ನಮಗೆ ಗೊತ್ತಾಗದ ವಿಚಾರ.

ಶ್ರೀ ಶಿವರಾಮ ಕಾರಂತರು ಹೇಳಿದಂತೆ ಸಾಮಾನು ಕದ್ದರೂ ಕಳ್ಳ ಸಮಯ ಕದ್ದರೂ ಕಳ್ಳ. ಹೀಗೆ ಸೇವಾ ನ್ಯೂನತೆ ಮತ್ತು ಭ್ರಷ್ಟಾಚಾರ ಎರಡೂ ಸಮಾಜಕ್ಕೆ ದ್ರೋಹವೇ.     ಈ   ತರಹದ  ಹೋರಾಟ  ಎಂದರೆ  ಒಂದು  ರೀತಿಯಲ್ಲಿ  ಪ್ರವಾಹದ  ವಿರುದ್ದ  ಈಜುವುದು.  ಬೇರೆ   ಕೆಲಸ  ಇಲ್ಲವೇ  ಎಂಬ  ಮೂದಲಿಕೆ  ಕೇಳಲು  ನಾವು ತಯಾರಿರಬೇಕಾಗುತ್ತದೆ.   ಎಲ್ಲರೂ ಅವರಿವರು ಸರಿ ಮಾಡಲೆಂದು ಪ್ರತಿಭಟಿಸಲೆಂದು ಕಾಯುತ್ತಾರೆ. ಇದು ಬೆಕ್ಕಿಗೆ ಗಂಟೆ ಯಾರು ಕಟ್ಟುವುದು ಎನ್ನುವಂತಹ ಸಮಸ್ಯೆ.

Monday, December 08, 2008

ಪಾಕಿಸ್ತಾನದ ಅಂಕಣಕಾರ ಕೋವಸ್ ಜೀ


ಈಗ ಸುಮಾರು ಎರಡು ವರ್ಷಗಳಿಂದ ನಾನು ಭಾನುವಾರ ಬೆಳಗ್ಗೆ ಇ ಅಂಚೆ ಜತೆಗೆ ಮೊದಲು ಕ್ಲಿಕ್ಕಿಸುವ ಕೊಂಡಿ ಕರಾಚಿಯ ಡಾನ್ ಪತ್ರಿಕೆಯ ಕೋವಸ್ ಜೀ ಅವರ ಅಂಕಣ. ಇಳಿ ವಯಸ್ಸಿನಲ್ಲೂ ಅವರು ಕರಾಚಿಯ ಭೂಗಳ್ಳರ, ಅಧಿಕಾರಿಗಳ ಹಾಗೂ ಮುಲ್ಲಾಗಳ ಜತೆಗಿನ ಹೋರಾಟವನ್ನು ಅಂಕಣದಲ್ಲಿ ರಂಗುರಂಗಾಗಿ ವಿವರಿಸುತ್ತಾರೆ. ರಾಜಕಾರಣ, ವಾಣಿಜ್ಯ ಕಾನೂನು ವಿಚಾರಗಳ ಚೆನ್ನಾಗಿ ಮಂಡಿಸುತ್ತಾರೆ. ಆಂಗ್ಲ ಬಾಷಾ ಪ್ರಬುತ್ವ ಚೆನ್ನಾಗಿದೆ. ಪ್ರಾಯುಷ: ಪಾಕಿಸ್ತಾನದಲ್ಲೇ ಹೆಚ್ಚು ನಿರ್ಭೀತ ಅಂಕಣಕಾರ ಎಂದರೂ ಸರಿ

http://www.dawn.com/weekly/cowas/cowas.htm


ಈ ವಾರದ ಅಂಕಣದಲ್ಲಿ ಮುಂಬಯಿಯಲ್ಲಿ ಭಯೋತ್ಪಾದಕರು ಕಾರ್ಯನಿರತರಾಗಿದ್ದಾಗ ಯಾರೋ ಪೋಕರಿಗಳು ಪಾಕಿಸ್ಥಾನದ ಅದ್ಯಕ್ಷರಿಗೆ ಬಾರತದ ವಿದೇಶ ಮಂತ್ರಿ ಪ್ರಣವ್ ಮುಖರ್ಜಿ ಹೆಸರಿನಲ್ಲಿ ಪಾಕಿಸ್ಥಾನವನ್ನು ನೋಡಿಕೊಳ್ಳುತ್ತೇವೆ ಎಂದು ಫೋನಿಸಿದ್ದು ವಿವರಿಸಿದ್ದಾರೆ. ಜರ್ದಾರಿ ಬೆಸ್ತು ಬಿದ್ದು ಮಂತ್ರಿಗಳ ಮಿಲಿಟರಿ ಅದಿಕಾರಿಗಳನ್ನೆಲ್ಲ ಒಟ್ಟು ಸೇರಿಸಿ ಸೇನೆಯನ್ನು ಬಾರತದ ಗಡಿಗೆ ರವಾನಿಸುವ ಬಗೆಗೆ ಮಾತನಾಡಿದ್ದು ಎಲ್ಲವನ್ನೂ ಚೆನ್ನಾಗಿ ಬರೆದಿದ್ದಾರೆ.

ಕೊನೆಗೆ ಅಮೇರಿಕದ ರೈಸಮ್ಮ ಮಧ್ಯರಾತ್ರಿಯಲ್ಲಿ ಕಾಲ್ ಮಾಡಿ ಮಲಗಿದ್ದ ನಮ್ಮ ಮಂತ್ರಿ ಪ್ರಣವ್ ಮುಖರ್ಜಿಯವರನ್ನು ವಿಚಾರಿಸಿದಾಗ ಅವರು ಆ ರೀತಿ ಬೆದರಿಸಿಲ್ಲವಷ್ಟೆ ಅಲ್ಲ, ಅವರು ಜರ್ದಾರಿಗೆ ಫೋನ್ ಸಹ ಮಾಡಿಲ್ಲ ಎನ್ನುವುದು ತಿಳಿದುಬಂತು. ವಾರ ಕಳೆಯುವ ವರೆಗೆ ನಮ್ಮ ಮಾದ್ಯಮದವರಿಗೂ ಇದು ಯಾರದೋ ಕಿತಾಪತಿ ಎಂದು ಅರಿವು ಆಗಿರಲಿಲ್ಲ. ಅಂತೂ ಕೊನೆಗೆ ಎಲ್ಲರಿಗೂ ನಿರಾಳ.

ಕಳೆದ ಬಾರಿ ನಾಲ್ಕು ವರ್ಷ ಹಿಂದೆ ಮುಶಾರಫ್ ಬಂದಾಗ ಅವರ ತಂಡದಲ್ಲಿ ಒಬ್ಬ ವಯೋವೃದ್ದ ಪತ್ರಿಕಾ ಅಂಕಣಕಾರರಿದ್ದರು. ನಮ್ಮ ಪತ್ರಿಕೆಯಲ್ಲಿ ಕಾಣ ಸಿಕ್ಕಿದ ಅವರ ಸಂದರ್ಶನದಲ್ಲಿ ಅವರಾಡಿದ ಮಾತು ನನ್ನ ಗಮನ ಸೆಳೆದಿದ್ದವು. ಕೋವಸ್ ಜೀ  ಪಾರ್ಸಿ ಜನಾಂಗಕ್ಕೆ ಸೇರಿದ್ದು ಭುಟ್ಟೊ ರಾಷ್ಟ್ರೀಕರಣಗೊಳಿಸಿದ ಹಡಗು ಸಂಸ್ಥೆಯ ಯಜಮಾನರಾಗಿದ್ದರಂತೆ.  ಕೊನೆಗೆ ಗೂಗ್ಲಿಂಗ್ ಮಾಡಿ ಅವರ ಅಂಕಣ ಹುಡುಕಿ ಓದಲಾರಾಂಬಿಸಿದೆ.

ಒಂದು ಅಂಕಣದಲ್ಲಿ  ಇತಿಹಾಸದ  ಪುಟ  ತೆರೆದಿಟ್ಟಿದ್ದಾರೆ. .   ಮಾಜಿ ಮಿಲಿಟರಿ ಮುಖ್ಯಸ್ತನಾಗಿದ್ದ ಅಂದಿನ ಅಧ್ಯಕ್ಷರಿಗೆ ಇಡೀ ದೇಶದಲ್ಲಿ ಒಂದೇ ದಿನ ಹಬ್ಬಗಳ ಆಚರಿಸುವ ಆಲೋಚನೆ ಬಂತು. ಆದರೆ ಕೆಲವು ಮುಲ್ಲಾಗಳಿಗೆ ಅದು ಸಮ್ಮತಿ ಇರಲಿಲ್ಲ. ಚಂದ್ರ ಕಾಣಬೇಕಲ್ಲ ??. ಈ ಹಕ್ಕು ಬಿಟ್ಟು ಕೊಡಲು ಅವರು ತಯಾರಿರಲಿಲ್ಲ. ಹಾಗೆ ಒಂದು ಮುಖ್ಯ ಪಟ್ಟಣ, ಪೇಶಾವರ ಅಂತ ನನ್ನ ನೆನಪು – ಅಲ್ಲಿನ ಧರ್ಮ ಗುರುಗಳಿಗೆ ಚಂದ್ರನನ್ನು ತೋರಿಸುವ ಜವಾಬ್ದಾರಿಯನ್ನು ಅಲ್ಲಿನ ಮಿಲಿಟರಿ ಕಮಾಂಡರಿಗೆ ಅಧ್ಯಕ್ಷರು ವಹಿಸಿದರು. ಸೇನಾ ಶಿಬಿರದ  ಹೊರಗಿನ  ಮೈದಾನಿನಲ್ಲಿ  ನಡೆದ    ಅವರ ಸಂಬಾಷಣೆ ಈ ರೀತಿಯಾಗಿತ್ತಂತೆ.

ಚಾಂದ್ ದೇಖಾ ?
ನಹೀ ದೇಖಾ

ಅಗ ಮಿಲಿಟರಿ ಅಧಿಕಾರಿ ಬಲತ್ಕಾರವಾಗಿ ಈ ಮುಲ್ಲಾನ ಅರ್ಧ ಸುತ್ತು ತಿರುಗಿಸಿ ಕೇಳಿದರಂತೆ.

ಕಂಟೋನ್ಮೆಟ್ ದೇಖಾ ?
ಹಾಂ ದೇಖಾ

ಪುನಹ ರಭಸವಾಗಿ ಚಂದ್ರನೆಡೆಗೆ ತಿರುಗಿಸಿ ಕೇಳಿದರಂತೆ.

ಚಾಂದ್ ದೇಖಾ ?
ಹಾಂ ದೇಖಾ

ಅ ವರುಷ ಮೊದಲ ಬಾರಿಗೆ ಇಡೀ ಪಾಕಿಸ್ಥಾನದಲ್ಲಿ ಹಬ್ಬ ಒಂದೇ ದಿನ ಆಚರಿಸಲ್ಪಟ್ಟಿತು. ಆ ಅದ್ಯಕ್ಷರ   ಅಧಿಕಾರ ಮುಗಿದ ನಂತರ ನಾಯಿ ಬಾಲ ಡೊಂಕು ಎನ್ನುವಂತೆ ವಿವಿದ ಊರುಗಳ ಮುಲ್ಲಾಗಳಿಗೆ ಬೇರೆ ಬೇರೆ ದಿನ ಚಂದ್ರ ಗೋಚರಿಸಲು ಪ್ರಾರಂಬವಾಯಿತಂತೆ.  ಕ್ಷಮಿಸಿ. ಆ ಸಂಪರ್ಕ ಕೊಂಡಿ ತಕ್ಷಣ ಲಬ್ಯವಾಗುತ್ತಿಲ್ಲ.

ಅವರು ಅಮೇರಿಕದ ಸುಪ್ರೀಂ ಕೋರ್ಟನ್ನು ಸಂದರ್ಶಿಸಿದ ಅದರ ಕಾರ್ಯವೆಸಗುವುದರ ಬಗೆಗೆ ಬರೆದಿದ್ದಾರೆ. ಆ ಕೋಂಡಿ ಇಲ್ಲಿದೆ.

http://www.dawn.com/weekly/cowas/20070411.htm

Friday, December 05, 2008

ರಕ್ಷಣೆಯ ನೆಪದಲ್ಲೊಂದು ದುಬಾರಿ ಯೋಜನೆ

ನಿನ್ನೆಯ ಪತ್ರಿಕೆಯಲ್ಲಿ ಒಂದು ಸುದ್ದಿ ಅಂದರೆ ಸರಕಾರಿ ಪ್ರಕಟನೆ ನನ್ನ ಗಮನ ಸೆಳೆಯಿತು. ೨೦ ಕೋಟಿ ರೂಪಾಯಿ ವೆಚ್ಚದಲ್ಲಿ ೩೦೦೦ ಮೀನುಗಾರಿಕಾ ದೋಣಿಗಳಿಗೆ ಜಿಪಿಎಸ್ ಅಳವಡಿಕೆಗೆ ಕೇಂದ್ರ ಸರಕಾರಕ್ಕೆ ಅಹವಾಲು. ಪಾಕಿಸ್ತಾನದ ಬಯೋತ್ಪಾದಕರಿಗೆ   ಸಮುದ್ರದಲ್ಲಿ  ಮುಂಬಯಿಗೆ    ದಾರಿ ತೋರಲು ಉಪಯೋಗಿಸಿದ ಕಾರಣ ಜಿಪಿಎಸ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.



ನಮ್ಮ ಮೊಬೈಲ್ ಪೋನ್ ಗಾತ್ರದ ಈ ಉಪಕರಣ ನಿಜಕ್ಕೂ ಅದ್ಬುತ ಸಾದನ. ಅಮೇರಿಕ ಇದಕ್ಕಾಗಿ ಹಾರಿಸಿರುವ ೨೪ ಉಪಗ್ರಹಗಳಲ್ಲಿ ಅಲ್ಲಿಗೆ ಕಾಣುವ ಎರಡು ಯಾ ಮೂರು ಉಪಗ್ರಹಗಳಿಂದ ಬರುವ ಸಂಕೇತವನ್ನು ಉಪಯೋಗಿಸಿ ಇದು ನಾವಿರುವ ಸ್ಥಳದ ಅಕ್ಷಾಂಶ ರೆಖಾಂಶವನ್ನು ನಿಖರವಾಗಿ ಹೇಳುತ್ತದೆ. ಇಪ್ಪತ್ತು ಅಡಿ ವ್ಯತ್ಯಾಸವ ಸಹಾ ಇದರಲ್ಲಿ ಲೆಕ್ಕಕ್ಕೆ ಸಿಗುವುದು. ನಾವಿಕರಿಗೆ ಪೋಲಿಸರಿಗೆ ಕಾಡು ಉಳಿಸಲು ಅಗ್ನಿ ನಿಯಂತ್ರಣಕ್ಕೆ ಎಲ್ಲಕ್ಕೂ ಸಹಾಯವಾಗಬಲ್ಲ ಸಾದನ.

ವರ್ಷದ ಹಿಂದೆ ಸಕಲೇಶಪುರ ಹತ್ತಿರ ಕಾಡು ನುಗ್ಗಿದ ಸಾಫ್ಟ್ ವೇರ್ ತಂತ್ರಜ್ನರು ಅನಿರೀಕ್ಷಿತವಾಗಿ ಮಳೆಗಾಲ ಪ್ರಾರಂಬವಾಗಿ ದಿಕ್ಕಿನ ಪ್ರಜ್ನೆ ತಪ್ಪಿ ವಾಪಾಸು ಬರಲು ಸಾದ್ಯವಾಗದೆ ಮೃತ ಪಟ್ಟಿದ್ದರು. ಗೋವಾ ಕರ್ನಾಟಕ ಗಡಿಯಲ್ಲಿ ಉದುರಿದ ನೌಕಾದಳದ ಹೆಲಿಕಾಫ್ಟರಿನಲ್ಲಿ ಬದುಕುಳಿದ ವ್ಯಕ್ತಿ ಮೊಬೈಲ್ ಪೋನ್ ಮೂಲಕ ಸುದ್ದಿ ಹೇಳಿದರೂ ಕಾಡಿನ ಮದ್ಯೆ ಇದ್ದ ಅವರನ್ನು ಹುಡುಕಲು ಸಾದ್ಯವಾಗಿರಲಿಲ್ಲ. ಎರಡೂ ಸನ್ನಿವೇಶದಲ್ಲಿ ಸರಳ ಜಿಪಿಎಸ್ ಸಾದನ ಜೀವ ಉಳಿಸುತಿತ್ತು.

ಕಳೆದ ವರ್ಷ ನಾನು ವಿಚಾರಿಸುವಾಗ ಸುಮಾರು ನಾಲ್ಕು ಸಾವಿರ ರೂಪಾಯಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಬ್ಯವಿರುವ ಇದು ನಮ್ಮೂರು ತಲಪುವಾಗ ಒಂಬತ್ತು ಸಾವಿರವಾಗುತ್ತದೆ ಎಂದು ತಿಳಿದು ಬಂತು. ವಿಪರೀತ ಸುಂಕ (basic 30 % + ) ಮತ್ತು ಸ್ಪರ್ದಾತ್ಮಕವಲ್ಲದ ಸಣ್ಣ ಮಾರುಕಟ್ಟೆಯಿಂದಾಗಿ ಹೆಚ್ಚು ದುಬಾರಿಯೆನಿಸುತ್ತದೆ. ಸರಕಾರ   ಅಮದು   ಸುಂಕ  ಕಡಿಮೆ ಮಾಡಿ   ಈ  ಉಪಕರಣ   ಜನರ  ಕೈಗೆಟಕುವಂತೆ  ಮಾಡಿದರೆ   ತುಂಬಾ  ಉಪಕಾರವಿದೆ. 

ಈ ಸರಳ ಸಾದನ ದೊಡ್ಡ ಸಂಖ್ಯೆಯಲ್ಲಿ ತರಿಸಿದರೆ ಹೆಚ್ಚೆಂದರೆ ಹತ್ತು ಸಾವಿರ ರೂಪಾಯಿ ಖರ್ಚಾಗಬಹುದು. ಅಂದರೆ ಕೋಟಿ ರೂಪಾಯಿಗೆ ಸಾವಿರ ಉಪಕರಣಗಳು ಸಿಗುತ್ತವೆ. ಮೂರು ಸಾವಿರ ಉಪಕರಣಗಳಿಗೆ ಮೂರು ಕೋಟಿ ರೂಪಾಯಿ ಸಾಕು. ದೋಣಿ ಎಲ್ಲಿದೆಯೆಂದು ಗುರುತಿಸಲು ಅಳವಡಿಸುವಂತಹದಕ್ಕೂ ಅಷ್ಟು ಖರ್ಚಿಲ್ಲ. ಒಂದಕ್ಕೆ ಹದಿನೈದು ಸಾವಿರ ಮಿಗದು. ಇವರ ಇಪ್ಪತ್ತು ಕೋಟಿ ಲೆಕ್ಕಾಚಾರದಲ್ಲಿ ಜೇಬಿಗಿಳಿಸುವ ಮೊತ್ತವೇ ಹೆಚ್ಚಿನ ಪಾಲು ಎನಿಸುತ್ತದೆ.

ಒಮ್ಮೆ ಇತಿಹಾಸದ ಕ್ಲಾಸಿನಲ್ಲಿ ಮೇಡಂ ಕೇಳಿದರಂತೆ. ನಾನು ಎಲ್ಲಿದ್ದೆ ಅಂದರೆ ಎಲ್ಲಿಯವರೆಗೆ ಪಾಠ ತಲಪಿದೆಯೆಂದು. ಕೊನೆ ಬೆಂಚಿನ ಯಜಮಾನರ ಉತ್ತರ ಬಂತು ಅಕ್ಬರನ ಶಯನ ಕೋಣೆಯಲ್ಲಿ, ಮೇಡಂ.

ಅಂದ  ಹಾಗೆ    ಯಾರಾದರೂ ನಮಗೆ ಎಲ್ಲಿದ್ದಿಯ ? ಎಂದು ಮೊಬೈಲಿಗೆ ಫೋನಿಸಿದರೆ ನಾವು ಮುಖ್ಯ ರಸ್ತೆ ಅದ್ರಾಮ ಬ್ಯಾರಿಯ ತರಕಾರಿ ಅಂಗಡಿಯ ……..ಅನ್ನಬೇಕಾಗಿಲ್ಲ.      ಉತ್ತರ 13.210320 ಪೂರ್ವ 73.45213 ಅಂದರಾಯಿತು.

Tuesday, December 02, 2008

ಹೀಗೊಂದು ಸಂಪ್ರದಾಯ

ಕೆಲವೊಂದು ಸಂಪ್ರದಾಯಗಳು ಬಲೇ ಮಜವಾಗಿರುತ್ತದೆ. ತಿಥಿ ಮಾಡುವಾಗ ಬೆಕ್ಕನ್ನು ಕಟ್ಟಿ ಹಾಕುವ ಹಾಗೆ. ಹಲವಾರು ದೇಶ ಸುತ್ತಾಡಿದ ನನಗೆ ಇವುಗಳ ಬಗೆಗೆ ಕುತೂಹಲ ಆಸಕ್ತಿ. ನಮ್ಮನ್ನು ನಾವು ಸೂಚಿಸಲು ಎದೆ ತೋರಿಸಿದರೆ ಜಪಾನಿನಲ್ಲಿ ಮೂಗಿಗೆ ಬೊಟ್ಟು ಮಾಡುವರೆಂದು ಅಸ್ಪಷ್ಟವಾದ ನೆನಪು. ಒಂದು ಸಮಾಜದಲ್ಲಿ ಸಹಜ ಎನ್ನಿಸುವ ವಿಚಾರ ಇನ್ನೊಂದೆಡೆ ಮನನೋಯಿಸುವ ಅಶ್ಲೀಲ ನಡುವಳಿಕೆ ಆಗಲೂಬಹುದು. ಸಂಪ್ರದಾಯಗಳ ಬಗೆಗೆ ಕುತೂಹಲಕ್ಕೆ ಅದೂ ಒಂದು ಕಾರಣ.


ರಷ್ಯದಲ್ಲಿ ಗಗನಯಾತ್ರಿಗಳು ಅವರ ಗಗನ ನೌಕೆ ಏರುವ ಮೊದಲು ಅವರನ್ನು ಅಲ್ಲಿಗೆ ಕರೆತಂದ ಬಸ್ಸಿನ ಗಾಲಿಗೆ ಮೂತ್ರ ಮಾಡುವುದು ಕಳೆದ ನಲುವತ್ತು ವರ್ಷಗಳಿಂದ ಆಚರಣೆಯಲ್ಲಿರುವ ಸಂಪ್ರದಾಯವಂತೆ. ಇತ್ತೀಚೆಗೆ ಆಕಾಶಕ್ಕೆ ಹಾರಿದ ಯಾತ್ರಿಗಳ ಅಪರೂಪದ ಚಿತ್ರ ಇಲ್ಲಿದೆ.

ಹಲವು ದಶಕಗಳ ಹಿಂದೆ ಸ್ನೇಹಿತರಲ್ಲಿನ    ಮದುವೆಯಲ್ಲಿ    ನಮ್ಮ ಪೋಕರಿ ಪಟಲಾಂ ಮದುವೆ ಚಿತ್ರಣಕ್ಕೆ ನೇಮಿಸಲಾಗಿತ್ತು. ಇವರು  ಸಿಕ್ಕ  ಅವಕಾಶ  ಚೆನ್ನಾಗಿ   ಉಪಯೋಗಿಸಿಕೊಂಡರು.  ಈ ಗೆಳೆಯರು ಅಂಟಿಸಿ ಕೊಟ್ಟ ಅಲ್ಬಂನಲ್ಲಿ ಮೊದಲ ಚಿತ್ರ ಗಂಡಿನ ಕಡೆ ಗಂಡಸರು ಛತ್ರದ ಬಳಿ ಬಸ್ಸಿನಿಂದಿಳಿದು ಸಾಲಾಗಿ ನಿಂತು  ಆವರಣ  ಗೋಡೆಗೆ   ಮೂತ್ರ ಮಾಡುವ ಚಿತ್ರವಾಗಿತ್ತು.  ಮುಜುಗರದಿಂದ ಹೆಣ್ಣಿನ ಮನೆಯವರೆಲ್ಲರೂ ನಮ್ಮ ಹುಡುಗರಿಗೆ ಚೆನ್ನಾಗಿ ಉಗಿದರು.

Monday, November 24, 2008

ವಿದ್ಯುತ್ ಮತ್ತು ಈ ವರ್ಷದ ಬೆಳೆ ??????

ಮಳೆಗಾಲ ಕಳೆದು ಪುನಹ ಬೇಸಿಗೆ ಸಮೀಪಿಸುತ್ತಿದೆ. ಪ್ರತಿ ವರ್ಷದಂತೆ ಈ ಸಲವೂ ಗ್ರಾಮೀಣ ವಿದ್ಯುತ್ ಸರಬರಾಜು ಮಟ್ಟಿಗೆ ಹೊಸ ವೇಳಾಪಟ್ಟಿ. ಈಗ ಬೆಳಗಿನ ಪಾಳಿಯಲ್ಲಿ ಬೆಳಗ್ಗೆ ಐದರಿಂದ ಹನ್ನೊಂದರ ವರೆಗೆ ಆರು ಘಂಟೆ ವಿದ್ಯುತ್ ಪೊರೈಕೆ. ಬೆಳಗಿನ ಐದು ಎಂದರೆ ಬೆಳಕು ಹರಿಯಲು   ಇನ್ನೂ ಹೊತ್ತಿದೆಯೆನ್ನುವುದು ಅನ್ನುವುದು ಬೇರೆ ವಿಚಾರ.

ವಿದ್ಯುತ್ ಪೊರೈಕೆ ಕಡಿತವನ್ನು ಕಳೆದ ಇಪ್ಪತೈದು ವರ್ಷಗಳಿಂದ ಕಾಣುತ್ತಿದ್ದೇನೆ. ಬೇಸಗೆಯಲ್ಲಿ ನೀರಾವರಿ ನಿರ್ವಹಣೆಗಾಗಿ ಬೆಳಗಿನ ಜಾವದ ವರೆಗೆ ನಿದ್ದೆಗೆಟ್ಟು ತೋಟದಲ್ಲೆಲ್ಲಾ ಓಡಾಡುತ್ತಾ ಮದ್ಯಂತರದಲ್ಲಿ ಓದುತ್ತಾ ಕೂತಿರುತ್ತಿದ್ದೆ. ಜೂನ್ ತಿಂಗಳಲ್ಲಿ ಮಳೆಗಾಲ ಸುರುವಾದರೂ ನನಗೆ ರಾತ್ರಿ ಹತ್ತಕ್ಕೆ ನಿದ್ರಿಸಲು ಸಾದ್ಯವಾಗಲು ಎರಡು ತಿಂಗಳು ಬೇಕಾಗುತಿತ್ತು.

ಕಳೆದ ಇಪ್ಪತ್ತು ವರ್ಷಗಳ ಗಮನಿಸಿದರೆ ರೈತರಿಗೆ ಹಗಲು ನಾಲ್ಕಾರು ಘಂಟೆ ಕೊಡುವ ವಿದ್ಯುತ್ ಬೆಳಗ್ಗೆ ಅಥವಾ ಮಧ್ಯಾಹ್ನ ನಂತರ ಎಂದು ವಿಭಾಗಿಸುತ್ತಾರೆ. ನಮಗೆ ಬೆಳಗಿನ ವಿದ್ಯುತ್ ಎಂದಾದರೆ ಬೆಳಗಿನ ಜಾವ ಐದರಿಂದ ಹತ್ತು ಘಂಟೆ ಮದ್ಯೆ ಪ್ರಾರಂಬವಾಗುವುದು ಹಾಗೂ ಮೂರರಿಂದ ಆರು ಘಂಟೆ ಅವದಿ.

ಎರಡು ಕಾರಣಗಳನ್ನೂ ಅನುಸರಿಸಿ ನಮ್ಮ ಅನುಕೂಲಕ್ಕೆ ತಕ್ಕಂತೆ ನಾವು ಪ್ರತಿ ವರ್ಷವೂ ನೀರಾವರಿ ಕೊಳವೆ ಜಾಲ, ನಿಯಂತ್ರಣ ಗೇಟು ವಾಲ್ವ್ ಸೇರಿಸುತ್ತಾ ಬದಲಾಯಿಸುತ್ತಾ ಬಂದಿದ್ದೇವೆ. ನೀರಾವರಿ ಪ್ರಾರಂಬಿಸುವ ಸಮಯದಲ್ಲಿ ಈ ದೊಂಬರಾಟ ಪ್ರತಿ ವರ್ಷವೂ ಅನಿವಾರ್ಯ ಎಂಬಂತಾಗಿದೆ. ಇದರ ಬದಲಿಗೆ ಐದು ವರ್ಷಕ್ಕೆ ಖಾಯಂ ವೇಳಾಪಟ್ಟಿ ಕೊಟ್ಟರೆ ಉತ್ತಮ.

ಕೊರತೆ ಇರುವುದು ವಿದ್ಯುತ್ ಅಲ್ಲ, ರಾಜಕೀಯ ಇಚ್ಚಾ ಶಕ್ತಿ ಎಂಬ ವಿಚಾರ ಈಗಾಗಲೇ ಸಾಬೀತಾಗಿದೆ. ಹಣಕಾಸು ಸರಿದೂಗಿಸುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿರುವುದರಿಂದ ಕಡಿಮೆ ಆದಾಯ ಎನ್ನುವ ನೆಲೆಯಲ್ಲಿ ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ಪೊರೈಸಲು ಅವರ ವರ್ಗಕ್ಕೆ ಆಸಕ್ತಿ ಕಡಿಮೆ. ಎಲ್ಲ ಸಮಸ್ಯೆಗಳಿಗೂ ಈ ದಾನಶೂರ ರಾಜಕಾರಣಿಗಳೇ ಕಾರಣ.

ನೀರಾವರಿಯೆಂದರೆ ಗಿಡ ಮರದ ಬೇರು ಪ್ರದೇಶ ಒಮ್ಮೆಗೆ ಸಂಪೂರ್ಣ ಒದ್ದೆಯಾಗಬೇಕು. ಎರಡು ಘಂಟೆ ನೀರಾವರಿ ಬಯಸುವ ಬೆಳೆಗೆ ಬೆಳಗ್ಗೆ ಒಂದು ಮತ್ತು ಸಂಜೆ ಒಂದು ಸೇರಿಸಿದರೆ ಎರಡು ಘಂಟೆ ಎನ್ನುವಂತಿಲ್ಲ. ಎರಡು ಬಾರಿಯೂ ಅದು ಬೇರು ಪ್ರದೇಶದ ಮೇಲಿನ ಅರ್ಧ ಬಾಗ ಮಾತ್ರ ತೋಯಿಸಿ ನೀರಾವರಿ ಅಪೂರ್ಣ ಎನಿಸಿಕೊಳ್ಳುತ್ತದೆ.

ನಮ್ಮ ಪ್ರದೇಶದ ಅಡಿಕೆತೋಟದಲ್ಲಿ ಋತುಮಾನ ಅನುಸರಿಸಿ ಅನುಭವದಿಂದ ನಿಗದಿ ಪಡಿಸಿ ಐದರಿಂದ ಏಳು ದಿನದ ಅವದಿಯಲ್ಲಿ ಸರ್ತಿಗೆ ಒಂದರಿಂದ ಮೂರು ಘಂಟೆ ಸ್ಪ್ರಿಂಕ್ಲರ್ ಚಾಲೂ ಮಾಡುವವರು ಇದ್ದಾರೆ. ಒಮ್ಮೆಗೆ ಐದು ಘಂಟೆ ವಿದ್ಯುತ್ ಎಂದರೆ ನಾವು ಎರಡು ಸಲ ಹರಿವು ಬದಲಾಯಿಸಿ ಸರ್ತಿಗೆ ಎರಡೂವರೆ ಘಂಟೆ ನೀರು ಹಾಕುವ ಅಬ್ಯಾಸ ಮಾಡಿಕೊಂಡಿದ್ದೆವು. ಅರು ಘಂಟೆ ಎಂದರೆ ಎರಡು ಘಂಟೆ ಗುಣಿಸು ಮೂರು ಆಗುವುದರ ಬದಲು ಸರ್ತಿಗೆ ಮೂರು ಘಂಟೆ ಆಗಿದೆ. ಪ್ರತಿ ವರ್ಷ ಬದಲಾಗುವ ಈ ಹೊಸ ವೇಳಾಪಟ್ಟಿಯ ಕಾರಣದಿಂದಾಗಿ ಹಾಗೂ ನಮ್ಮ ಸೋಮಾರಿತನದಿಂದಾಗಿ ನೀರು ಹಾಗೂ ವಿದ್ಯುತ್ ಶೇಕಡ ಹತ್ತರಿಂದ ಇಪ್ಪತ್ತರಷ್ಟು     ಪೋಲಾಗುವ ಸಾದ್ಯತೆಗಳಿವೆ.

ಫ್ರಾನ್ಸಿನ ಪ್ಯಾರಿಸ್ ಪಕ್ಕದ ಊರೊಂದರಲ್ಲಿ ಜನನ ಪ್ರಮಾಣ ಸಮೀಪದ ಉಳಿದ ಊರಿಗಿಂತ ಗಣನೀಯವಾಗಿ ಹೆಚ್ಚಿತ್ತು. ಅದಕ್ಕೆ ಕಾರಣ ಹುಡುಕಲು ಹೋದವರಲ್ಲಿ ಅಲ್ಲಿನ ಊರ ಗಣ್ಯರು ಕಾರಣ ಬೆಳಗ್ಗೆ 4.40 ರ ರೈಲು ಎಂದರಂತೆ. ಸಮೀಕ್ಷೆಗೆ ಹೋದವರಿಗೆ ಈ ಮಾತು ಅರ್ಥವಾಗಲಿಲ್ಲ. ಆಗ ಊರವರು ವಿವರಣೆ ಕೊಟ್ಟರು. ಊರ ಮದ್ಯೆ ಸೀಟಿ ಊದುತ್ತಾ ಸಾಗುವ ಬೆಳಗಿನ ಜಾವದ ರೈಲು ಊರವರನ್ನೆಲ್ಲ ಎಬ್ಬಿಸುತ್ತದೆ. ಹಾಸಿಗೆ ಬಿಟ್ಟೇಳಲು ಆಗ ಬೇಗ ಎನಿಸುತ್ತದೆ. ನಿದ್ರೆ ಬಾರದ ಜನರೆಲ್ಲ ಮಿಲನ ಮಹೋತ್ಸವದಲ್ಲಿ ತೊಡಗಿಸಿಕೊಳ್ಳುತ್ತಾರೆ.

ನಮ್ಮಲ್ಲಿ  ಕೃಷಿಕರು   ಈ ವರ್ಷ ಬೆಳಗಿನ ಐದು ಘಂಟೆಗೆ ಒಮ್ಮೆ ಪಂಪ್ ಚಾಲೂ ಮಾಡಲು ಏಳುವುದು ಅನಿವಾರ್ಯ. ಆದರೆ ಮದ್ಯಾಹ್ನ ಅನಂತರದ ವಿದ್ಯುತ್ ಅನ್ನುವ ದಿನಗಳಲ್ಲಿ ಉಳಿದ ಕಸುಬಿನವರಿಗೂ ಬೆಳಗ್ಗೆ ಐದು ಘಂಟೆಗೆ ಬೀಸಣಿಕೆ  ನಿಂತು ಎಚ್ಚರವಾಗುದರ ಮಟ್ಟಿಗೆ ವಿನಾಯತಿಯಿಲ್ಲ.

ಅನಂತರ ……….. .............ಕಾಲವೇ ಉತ್ತರಿಸಬಲ್ಲ ಪ್ರಶ್ನೆ.

Friday, November 21, 2008

ಗ್ರಾಹಕ ನ್ಯಾಯಾಲಯದಲ್ಲಿ ಉಗಿಸಿಕೊಂಡ ರಿಲಿಯನ್ಸ್ ಪೋನ್

ಅಂತೂ ಗೆದ್ದದ್ದು ನಾವೇ. ಇತ್ತೀಚೆಗೆ ನಾನೊಂದು ಕದನದಲ್ಲಿ ತೊಡಗಿಸಿಕೊಂಡಿದ್ದೆ.ಕಳಪೆ ಗುಣಮಟ್ಟದ ಸೇವೆಗೆ ರಿಲಿಯನ್ಸ್ ದೂರಸಂಪರ್ಕ ಸಂಸ್ಥೆಯನ್ನು ಗ್ರಾಹಕ ನ್ಯಾಯಾಲಯಕ್ಕೆ ಅನಿವಾರ್ಯವಾಗಿ ಎಳೆಯಬೇಕಾಯಿತು.  ಮೂರು ತಿಂಗಳಿನಿಂದ ವಾಯಿದೆಯಾಗುತ್ತಿದ್ದ  ತೀರ್ಪು ಕೊನೆಗೂ  ಹೊರಬಂದಿದೆ.


ನನ್ನ ಮನೆಯ ದೂರವಾಣಿ ಕಾಡಿನ ಮದ್ಯೆ ಸರಿಗೆ ಬರುವ ಕಾರಣ ಅಗಾಗ ಹಾಳಾಗುತಿತ್ತು. ನನ್ನ ದೈಹಿಕ ಸಮಸ್ಯೆ ಹಾಗೂ ಹಳ್ಳಿಯಲ್ಲಿ ವಾಸವಾಗಿರುವ ಕಾರಣ ನಂಬಲರ್ಹ ಇನ್ನೊಂದು ದೂರವಾಣಿ ತುರ್ತು ಅಗತ್ಯಕ್ಕೆ ಇರಲಿ ಎಂದು ರಿಲಿಯನ್ಸ್ ಸ್ಥಾವರವಾಣಿ ಪಡಕೊಂಡೆ.

ರಿಲಿಯನ್ಸ್ ದೂರವಾಣಿಯದು ಅತ್ಯಾದುನಿಕ ಸಂಪೂರ್ಣ ಯಂತ್ರವೇ ನಿಯಂತ್ರಿಸುವ ಜಾಲ. ಎರಡು ತಿಂಗಳ ಉತ್ತಮ ಸೇವೆ. ಒಮ್ಮೆ ತೆರ ಬೇಕಾದ ಮೊತ್ತ  ಮತ್ತು ಹಣ ಕಟ್ಟಲು ಕೊನೆಯ ದಿನಾಂಕ ಎರಡನ್ನೂ ನಮೂದಿಸದ ಬಿಲ್ ನನ್ನ ಕೈಸೇರಿತು. ಬಿಲ್ಲಿನ ಮೊತ್ತಕ್ಕಿಂತ ಹೆಚ್ಚು ನನ್ನ ಹಣ ಅವರಲ್ಲಿದ್ದ ಕಾರಣ ನಾನು ಸುಮ್ಮನಿದ್ದೆ.

ಹತ್ತು ದಿನ ಕಳೆದು . ರಿಲಿಯನ್ಸ್ ಕಛೇರಿಯಿಂದ ಹಣ ಕಟ್ಟಲು ಆದೇಶಿಸುವ ಹಾಗೂ ಸಂಪರ್ಕ ಕಡಿತ ಸೂಚಿಸುವ ಕರೆಗಳನ್ನು ಮಾಡಿದರು. ಆಗ ನಾನು ನನ್ನ ಹಣ ನಿಮ್ಮಲ್ಲುಂಟು. ಯಾವುದೇ ಬಾಕಿ ಇಲ್ಲ. ದಯವಿಟ್ಟು ಕಡಿತಮಾಡಬೇಡಿ. ಅಗತ್ಯವಿದ್ದರೆ ಪಟ್ಟಣಕ್ಕೆ ಹೋದಾಗ ಖಂಡಿತ ಕಟ್ಟುತ್ತೇನೆ ಎಂದು ಪರಿಪರಿಯಾಗಿ ವಿನಂತಿಸಿದೆ. ಆದರೂ ಸಂಪರ್ಕ ಕಡಿತಗೊಂಡಿತು. ಒಂದು ವಾರ ಬಳಿಕ ಹಣ ಕಟ್ಟಿ ಸಂಪರ್ಕಕ್ಕೆ ಜೀವ ತುಂಬಿದೆ.

ತೆರೆಮರೆಯಲ್ಲಿ ಆದದ್ದೇನು ಅಂದರೆ ನನ್ನ ಹಣ ಮತ್ತು ಜೀವಾವದಿ ಅವದಿ ಅರ್ಜಿ ಬಾಕಿಯಿಟ್ಟು ಬಿಲ್ ಮಾಡಿದ್ದು. ಅನಂತರ ಆ ಅರ್ಜಿಯನ್ನು ಅಂಗೀಕರಿಸಿ ಹಣ ವರ್ಗಾಯಿಸಿದಾಗ ನನ್ನ ಖಾತೆಯಲ್ಲಿ ಕನಿಷ್ಟ ಠೇವಣಿಯಲ್ಲಿ ಕೊರತೆ ಕಂಪ್ಯುಟರಿಗೆ ಕಂಡಂತಾಯಿತು. ಸಂಪರ್ಕ ಕಡಿಯುವಾಗಲೂ ನನ್ನ ಖಾತೆಯಲ್ಲಿ ಹಣ ಕೊರತೆ ಇರಲಿಲ್ಲ. ಆದರೂ ಯಂತ್ರಕ್ಕೆ ಒದಗಿಸಿದ ಮಾನದಂಡಗಳ ಅನುಸರಿಸಿ ಅದು ನನ್ನ ಬಾಕಿದಾರ ಎಂದು ಪರಿಗಣಿಸಿ ಸಂಪರ್ಕಕ್ಕೆ ಕತ್ತರಿ ಪ್ರಯೋಗವಾಯಿತು.

ಕಛೇರಿಗಳಲ್ಲಿ ಗ್ರಾಹಕ ಸಂಪರ್ಕ ಸ್ಥಾನಗಳಲ್ಲಿ ಒರಟು ವರ್ತನೆಯ ಬೇಜವಾಬ್ದಾರಿ ವ್ಯಕ್ತಿಗಳ ನೇಮಿಸುತ್ತಿರುವುದೂ ಸಮಸ್ಯೆಗೆ ಕಾರಣಗಳಲ್ಲೊಂದು.  ಗೆಳೆಯ   ದಿನಕರ್ ಹೇಳುವಂತೆ ಹಲವರಿಗೆ ಅವರ ಚೆಲುವಿಗೆ ಕೆಲಸ ಸಿಕ್ಕಿರುತ್ತದೆ ಹೊರತು ವ್ಯವಹಾರಿಕ ಕುಶಲತೆಗೆ ಅಲ್ಲ. ಬಾಲ ನೋಡಿ ಕುದುರೆ ಕೊಂಡುಕೊಂಡಂತೆ.  ಪರಿಣಾಮ ನಾವು ಪಡ್ಚ ಆಗುವುದು.

ಕಂಪ್ಯುಟರ್ ಕಕ್ಕುವ ಮಾಹಿತಿಯನ್ನು ವಿಷ್ಲೇಸಿಸುವ ಸಾಮರ್ಥ್ಯ ಇವರಿಗೆ ಇಲ್ಲದೆ ತೊಂದರೆ ಉಳಿದುಕೊಳ್ಳುತ್ತದೆ. ಡಾಕ್ಟ್ರೆ ನಾನಿನ್ನೂ ಸತ್ತಿಲ್ಲ, ಬದುಕಿದ್ದೇನೆ ಎನ್ನುವ ರೋಗಿಯ ಮಾತಿಗೆ ನೀನು ಬದುಕಿದ್ದಿ ಅಂತ ನಾನು ಹೇಳಬೇಕು ಎಂದು ಡಾಕ್ಟ್ರು ಹೇಳಿದಂತೆ ಇವರ ಪ್ರತಿಕ್ರಿಯೆ.  ಕಂಪ್ಯುಟರ್ ತಂತ್ರಾಂಶ ಬರೆಯುವಾಗ ಹಾಗೂ ಮಾಹಿತಿ ಉಣಿಸುವಾಗ ಬಹಳ ಜಾಗ್ರತೆ ವಹಿಸಿರುತ್ತಾರೆ. ಸಂಬಾವ್ಯ ಅಡಚಣೆಗಳನ್ನೆಲ್ಲ ಊಹಿಸಿ ಪರಿಹಾರ ರೂಪಿಸಿರುತ್ತಾರೆ. ಆದರೂ ಕೆಲವು ತಪ್ಪುಗಳು ನುಸುಳುತ್ತವೆ. ಜವಾಬ್ದಾರಿ ಕುರ್ಚಿಯಲ್ಲಿರುವವರಿಗೆ ಗೊತ್ತಾದರೆ ಇಂತಹ ಸಮಸ್ಯಯ ಜಾಡು ಹಿಡಿದು ಹಿಂಬಾಲಿಸಿ ಸರಿಪಡಿಸುತ್ತಾರೆ. . ತಕ್ಷಣ ತಮ್ಮ ಹಿರಿಯ ಅದಿಕಾರಿಗಳ ಸಂಪರ್ಕಿಸುವಂತಹ ಪರ್ಯಾಯೊಪಾಯಗಳ ಕೈಗೊಳ್ಳುವ ಬದಲು ಗ್ರಾಹಕರನ್ನು ರೇಗುವುದು ಸುಲಭದ ದಾರಿ.

ವಾರಕ್ಕೊಮ್ಮೆ ಇ-ಮೈಲ್ ನೆನಪೋಲೆ ರವಾನಿಸುತ್ತಿದ್ದೆ. ಪ್ರತಿ ಸಲ ದೂರು ದಾಖಲಾದಾಗಲೂ ಸ್ವಿಕೃತ ಉತ್ತರದೊಂದಿಗೆ ಕ್ರಮ ಸಂಖ್ಯೆ ಸಿಗುತ್ತಿತ್ತು. ಜತೆಯಲ್ಲಿ ನಮ್ಮ ತಂತ್ರಜ್ನರು ನಿಮ್ಮ ಸಮಸ್ಯೆ ವಿಚಾರದಲ್ಲಿ ಕಾರ್ಯನಿರತರಾಗಿದ್ದಾರೆ ಎನ್ನುವ ಸಮಜಾಯಿಷಿ. ಒಮ್ಮೆ ನಿಮ್ಮ ತಂತ್ರಜ್ನರು ಮಂಗಳೂರಿನಿಂದ ತೆವಳಿಕೊಂಡು ಬಂದರೂ ಈಗಾಗಲೇ ತಲಪಬೇಕಾಗಿತ್ತು ಎನ್ನುವ ನನ್ನ ಪತ್ರಕ್ಕೂ ಸಿಕ್ಕಿದ್ದು ಕ್ರಮ ಸಂಖ್ಯೆ ಮಾತ್ರ.

ನಿಸ್ತಂತು ದೂರವಾಣಿ ಸಂಪರ್ಕ ನಿರ್ದಿಷ್ಟ ವಿಳಾಸಕ್ಕೆಂದು ಕೊಡಲ್ಪಡುತ್ತದೆ. ಅದನ್ನು ತಾಲೂಕಿನೊಳಗೆ ಜಾಗ ಬದಲಾಯಿಸಿದರೂ ಸಮಸ್ಯೆ ಇಲ್ಲ. ಕಂಪೇನಿಯವರು ಆಚೆ ಈಚೆ ತಾಲೂಕಿನಲ್ಲಿ ಹೊಸ ಹೊಸ ಹೆಚ್ಚು ಶಕ್ತಿಯುತವಾದ ಟವರ್ ಹಾಕಿದಾಗ ನನ್ನ ದೂರವಾಣಿ ಸ್ಥಬ್ದವಾಗುತಿತ್ತು. ಸರಿಪಡಿಸಲು ಸರಳ ವಿಷಯವಾದ ನನ್ನ ದೂರವಾಣಿಗೆ ಹೊಸ ಸಂಖ್ಯೆ ಕೊಡಲು ಹಲವು ಬಾರಿ ದೊರು ಕೊಟ್ಟರೂ ಸಹಾ   ಎರಡು ಸಲವೂ  ಒಂದೂವರೆ ತಿಂಗಳು ತೆಗೆದುಕೊಂಡು ಸತಾಯಿಸಿದಾಗ ನಾನು ತಾಳ್ಮೆ ಕಳಕೊಂಡೆ. ಹೀಗೆ ಮುನ್ನೂರು ದಿನದಲ್ಲಿ ನೂರು ದಿನಕ್ಕೊ ಹೆಚ್ಚು ಸೇವೆ ವಂಚಿತ ಗ್ರಾಹಕನಾಗಿ ನಾನು ಕಾನೂನಿಗೆ ಶರಣಾದೆ.

ದಾಖಲೆಗಳ ಸಮೇತ ನ್ಯಾಯವಾದಿ ಶ್ರಿ ದರ್ಬೆ ಈಶ್ವರ ಭಟ್ಟರು ನನ್ನ ಪರವಾಗಿ ಸಮರ್ಥವಾಗಿ ವಾದಿಸಿದರು ಹಾಗೂ ನ್ಯಾಯಾಲಯ ನಾನು ಹಾಜರುಪಡಿಸಿದ ದಾಖಲೆಗಳ ಪರಿಶೀಲಿಸಿ ನಮ್ಮ   ವಾದವನ್ನು ಪುರಸ್ಕರಿಸಿತು. ಇಷ್ಟೆಲ್ಲ  ಆದರೂ  ನನಗೆ  ಸಿಕ್ಕಿದ್ದು  ಜುಜುಬಿ  ಪರಿಹಾರ.        ಈಗ    ಶಸ್ತ್ರ ಕ್ರಿಯೆ   ಯಶಸ್ವಿ  ಮತ್ತು  ರೋಗಿ  ಸತ್ತ  ಎನ್ನುವ  ಅನುಭವ.

ದಕ್ಷಿಣ  ಕನ್ನಡ   ಜಿಲ್ಲಾ ಗ್ರಾಹಕ ವೇದಿಕೆ    ಈ ರಿಲಯನ್ಸ್ ಸಂಸ್ಥೆಯ ಸೇವಾ ನ್ಯೊನತೆಗಾಗಿ ಎರಡು  ಸಾವಿರ   ರೊಪಾಯಿ ಪರಿಹಾರ ಒಂದು  ಸಾವಿರ     ರೂಪಾಯಿ ನ್ಯಾಯಾಲಯ ವೆಚ್ಚ ನೀಡುವಂತೆ ತೀರ್ಪು ನೀಡಿತು.    ಹೆಚ್ಚಿನ  ವಿವರಗಳು  ಇನ್ನೂ  ಅಲಭ್ಯ.  ನಾನು  ಇದಕ್ಕೆ  ಮಾಡಿದ  ಒದ್ದಾಟ   ಹಾಗೂ  ನನ್ನ  ಅಭಿಪ್ರಾಯ    ಇನ್ನೊಮ್ಮೆ  ಬರೆಯುವೆ.

ಟೆಲಿಫೋನ್ ವಿಚಾರದಲ್ಲಿ ತಿಂಗಳುಗಟ್ಟಲೆ ಸತಾಯಿಸಿದಂತಹ ನನ್ನ ಅನುಭವಕ್ಕೆ ಹೋಲುವಂತಹ ಕಥೆ ಇಂಗ್ಲೇಂಡಿನಿಂದಲೂ ಬಂದಿದೆ. ಮನೆಯವರಿಗೆ ಸ್ಟ್ರೋಕ್ ಆದ ಕ್ಷಣದಲ್ಲೇ ಗ್ರಾಮೀಣ ಪ್ರದೇಶದ ಆ ದೂರವಾಣಿ ಸಂಪರ್ಕ ಕತ್ತರಿಸಲ್ಪಟ್ಟಿದೆ. ವಿಷಯ ಅರಿತ ದೂರದಲ್ಲಿರುವ ಮಗಳಿಂದ ದೂರವಾಣಿ ಕಛೇರಿಗೆ ಹಲವಾರು ಕರೆಗಳು. ಒಂದಂತೂ 80 ನಿಮಿಷದ ದೀರ್ಘ ಹಾಗೂ ನಿಷ್ಪ್ರಯೋಜಕ ಸಂಬಾಷಣೆ. ಅಂತೂ 40 ಘಂಟೆಗಳ ಅನಂತರ ಸಂಪರ್ಕ. ಅನಂತರ ಗುಣಮುಖಗೊಳ್ಳುತ್ತಿದ್ದ ರೋಗಿಗೆ ತಪ್ಪೊಪ್ಪಿಗೆಗಳ ಸುರಿಮಳೆ. ಗ್ರಾಹಕರ ಬಗೆಗಿನ ಕಾಳಜಿ ಹೆಚ್ಚಿರುವ ಇಂಗ್ಲೇಂಡಿನಲ್ಲಿ ಹೀಗಾದರೆ ನಮ್ಮಲ್ಲಿ ??? ನಾನು ಹೇಳಲಿಚ್ಚಿಸಿದ ಈ ಗ್ರಾಹಕ ಮತ್ತು ಸೇವೆ ಪೊರೈಸುವವರ ನಡುವಿನ ವಿಚಾರವನ್ನು ಇಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ.

ಎರಡೆರಡ್ಲಿ ನಾಲ್ಕು ಎನ್ನುವ ಲೆಕ್ಕದಲ್ಲಿ ಕಂಪ್ಯುಟರ್ ತಪ್ಪುವುದಿಲ್ಲ. ಕಂಪ್ಯುಟರ್ ಕೊಡ ತಪ್ಪಿ ಬೀಳಬಹುದೆನ್ನುವ ನನ್ನ ಅನುಭವಗಳಲ್ಲಿ ಸಮಸ್ಯೆ ಇರುವುದು ತಂತ್ರಾಂಶದಲ್ಲಿರುವ ಅಂದಿನ ವರೆಗೆ ಗುರುತಿಸಲ್ಪಡದ ಹುಳುಕು. ಮುಂದೆ ಕಂಪ್ಯುಟರ್ ಅವಲಂಬನೆ ಹೆಚ್ಚಿದಂತೆ ಇಂತಹ ತೊಂದರೆ ಆಗಾಗ ಮರುಕಳಿಸಬಹುದು. ಮಾಮೂಲಿ ರೀತಿಯ ಸಮಸ್ಯೆಗಳ ನಿವಾರಣೆಗೆ ನಿರ್ದಿಷ್ಟ ವ್ಯವಸ್ತೆ ಚೆನ್ನಾಗಿ ಕೆಲಸ ಮಾಡುತ್ತದೆ. ಈ ರೀತಿ ಅನಿರೀಕ್ಷಿತವಾಗಿ ತಲೆ ಚಚ್ಚಿಕೊಳ್ಳುವಂತಹ ಸಮಸ್ಯೆಗಳು ಎದುರಾಗಬಹುದೆಂಬ ತಿಳುವಳಿಕೆ ನಮ್ಮಲ್ಲಿದ್ದರೆ ಪರಿಹಾರ ಕಾಣುವುದು ಸುಲಬವೆನ್ನುವ ನೆಲೆಯಲ್ಲಿ ಈ ಬರಹ ಬರೆದಿದ್ದೇನೆ.

ದೂರವಾಣಿ  ದೈತ್ಯನೊಂದಿಗೆ   ನಡೆದ    ಈ  ಹೋರಾಟಕ್ಕೆ    ನಮ್ಮ   ಕುಟುಂಬ ವೈದ್ಯರಾದ   ಡಾ| ಕೆ. ಜಿ. ಭಟ್ ಅವರು ಕೊಟ್ಟ   ಮಾರ್ಗದರ್ಶನ   ನೈತಿಕ  ಬೆಂಬಲವನ್ನೂ  ಸ್ಮರಿಸಿಕೊಳ್ಳುತ್ತೇನೆ.     . ಈ ಅನುಭವ ನಿಮಗೂ ಆಗಬಹುದು ಎನ್ನುವ ವಿಚಾರ ನೆನಪಿರಲಿ.

Sunday, November 16, 2008

ಜಿಹಾದಿಗಳ ಕೂಟಕ್ಕೆ ಹೆಂಗಸರು

ನಿನ್ನೆಯ ಕನ್ನಡ ಪ್ರಭ ಏಳನೆಯ ಪುಟದ ಸುದ್ದಿ ಓದುವಾಗ ನಿಜಕ್ಕೂ ಗಾಬರಿಯಾಗುತ್ತದೆ. ಬಯೋತ್ಪಾದನೆ ಎಲ್ಲೆಡೆ ವ್ಯಾಪಿಸಿ ಈಗ ನಮ್ಮ ಹಿತ್ತಿಲಿಗೂ ತಲಪಿದೆ. ಅದೊಂದು ಮೆದುಳನ್ನು ಕಿತ್ತು ಹಾಕಿ ಮನುಷ್ಯರನ್ನು ವಿವೇಚನೆ ಇಲ್ಲದ ಯಂತ್ರಮಾನವರನ್ನಾಗಿ ಮಾಡುವ ಏಕಮುಖ ದಾರಿ.  ಜಿಹಾದಿಗಳಿಗಾಗಿ ನಮ್ಮ ಆಸುಪಾಸಿನಲ್ಲಿ ಈಗಾಗಲೇ ಹುಡುಗರನ್ನು ಸೇರಿಸಿಕೊಂಡು ತರಬೇತಿಗೆ ಕಳುಹಿಸಿದ್ದು ಹಳೇಯ ಸುದ್ದಿ. ಈಗ ಹೆಂಗಸರನ್ನೂ ವಿದ್ವಂಸಕ ಕೃತ್ಯ ನಡೆಸಲು ತರಬೇತಿ ಕೊಡುವುದು ಇನ್ನೂ ಹೆಚ್ಚು ಗಂಬೀರ ವಿಚಾರ.


ಅಮೇರಿಕದಲ್ಲಿ ಎಲ್ಲರೂ ತಮ್ಮ ಸರಹದ್ದಿನಲ್ಲಿ ಕಣ್ಣಿಡುವ ವ್ಯವಸ್ಥೆಯಿರುತ್ತದೆ. ಅಪರಿಚಿತ ವ್ಯಕ್ತಿ ಸಂಶಯಾಸ್ಪದ ವರ್ತನೆ ಕಂಡರೆ ತಕ್ಷಣ ಪೋಲೀಸರ ಗಮನಕ್ಕೆ ತರುತ್ತಾರೆ. ಎಲ್ಲರೂ ತಮ್ಮ ಬಡಾವಣೆ ರಕ್ಷಣಾ ಕಾರ್ಯದಲ್ಲಿ ಪಾಲುದಾರರೇ. ಜತೆಯಲ್ಲಿ ಈ ಬಡಾವಣೆಯಲ್ಲಿ neighborhood watch ಉಂಟೆನ್ನುವ ಫಲಕಗಳ ನೋಡಿದಾಗ ಜನ ತನ್ನ ಗಮನಿಸಿದರೆ ಎಂದು ಅಪರಾದಿಯನ್ನು ಗಲಿಬಿಲಿಗೊಳಿಸುತ್ತವೆ. ಆದರೂ ನಾಳೆ ಬಾಂಬು ಹಾಕುವವನನ್ನು ಇಂದು ಅಪರಾಧಿಯೆಂದು ಪರಿಗಣಿಸುವಂತಿಲ್ಲ . ಯುರೋಪಿನಲ್ಲಿ ಹುಡುಗನೊಬ್ಬ ಅಸ್ತ್ರಗಳೊಂದಿಗೆ ತನ್ನ ಚಿತ್ರ ಅಂತರ್ಜಾಲದಲ್ಲಿ ಹಾಕಿಕೊಂಡ ವಿಚಾರ ಅಕಸ್ಮಾತಾಗಿ ಪೋಲೀಸರ ಗಮನಕ್ಕೆ ಬಂದು ಅವರು ಅವನನ್ನು ಕರೆಸಿ ತನಿಖೆ ಮಾಡಿದರು. ಮರು ದಿನ ಆ ಹುಡುಗ ಹತ್ತು ಸಹಪಾಠಿಗಳ ಕೊಂದು ಆತ್ಮಹತ್ಯೆ ಮಾಡಿಕೊಂಡ.

ಪವಿತ್ರ ಗ್ರಂಥಗಳಲ್ಲಿ ಬರೆದಿರುದಕ್ಕೂ ಅವರ ಆಚರಣೆಗೂ ಯಾವುದೇ ಹೋಲಿಕೆ ಇರುವುದಿಲ್ಲ. ತಾವು ಮಹಾನ್ ಸಾಹಸಿ ಎನ್ನುವ ಭ್ರಮೆಗೆ ಒಳಗಾಗಿರುವ ಇವರ ನಂಬಿಕೆ ಪ್ರಕಾರ ಆತ್ಮಾಹುತಿ ಮಾಡಿಕೊಂಡ ಗಂಡಸರಿಗೆ ಸ್ವರ್ಗದಲ್ಲಿ ದೇವರು ಇವರ ಸೇವೆಗಾಗಿ ಒಬ್ಬೊಬ್ಬರಿಗೂ ಎಪ್ಪತ್ತೆರಡು ಕನ್ಯೆಯರ ಒದಗಿಸುತ್ತಾರೆ ಎನ್ನುವ ನಂಬಿಕೆ. ಈ  ಗಂಡಸರಿಗೆ ಎಪ್ಪತ್ತೆರಡು ಕುಮಾರಿಯರೊಂದಿಗೆ ಶಾಶ್ವತವಾಗಿ ವಿಹರಿಸಲು ಸಿಗುತ್ತಾರೆ ಎನ್ನುವ ಜಿಹಾದಿ ಕರಪತ್ರಗಳ ಓದಿದ ಹೆಣ್ಣು ಮಾನವ ಬಾಂಬರ್ ಮೌಲವಿಯವರಲ್ಲಿ ಕೇಳುತ್ತಾಳೆ - ಆಚೆ ಲೋಕದಲ್ಲಿ ನನ್ನ ಸೇವೆಗೆ ಎಪ್ಪತ್ತೆರಡು  ಕುಮಾರರು ಸಿಗುವರೋ. ಪ್ರಶ್ನೆ ಉಚಿತವಾದುದು. ಅನಿರೀಕ್ಷಿತ ಪ್ರಶ್ನೆಗೆ ಬಿನ್ ಲಾಡನ್ ತತ್ತರಿಸಿದನಂತೆ.


ಮುಸ್ಲಿಂ ಸಮಾಜ ಸ್ವಲ್ಪ ಎಚ್ಚರಗೊಡಿರುವುದು ಸ್ವಾಗತಾರ್ಹ. ಒಮ್ಮೆ ಸೃಷ್ಟಿಯಾದ ದರ್ಮಾಂಧ ತನಗೆ ಕರೆ ಬರುವ ವರೆಗೆ ಮಾಮೂಲಿ ಜೀವನ ನಡೆಸುತ್ತಾನೆ. ಸಮಾಜದವರಿಗಲ್ಲ ಸ್ವಂತ ಮನೆಯವರಿಗೆ ಸಹಾ ಈ ಸ್ಪೋಟಿಸಲು ಸಿದ್ದವಾದ ಬಾಂಬು ಗುರುತಿಸುವುದು  ಅಸಾದ್ಯ. ಸಹಚರರು ಸಿಕ್ಕಿ ಬಿದ್ದಾಗ ಮಾತ್ರ ಸುಳಿವು ಸಮಾಜಕ್ಕೆ ಪೋಲೀಸರಿಗೆ ದೊರಕುವುದು. . ನಮ್ಮ ರಾಜಕಾರಣಿಗಳು ಬುದ್ದಿ ಜೀವಿಗಳು  ಮಾನವ ಹಕ್ಕು ಕಾರ್ಯಕರ್ತರು    ಅ   ಸಮಾಜವನ್ನು    ಸರಿದಾರಿಯಲ್ಲಿ   ಸಾಗಲು ಬಿಡಲಾರರು ಅನ್ನಿಸುತ್ತದೆ.   ಸಮಾಜ ಜಾಗ್ರತಾವಸ್ಥೆಯಲ್ಲಿ ಇದ್ದರೆ ಕೆಲವು ಸಮಸ್ಯೆಗಳ ಪರಿಹಾರ ಸಿಗಬಹುದೇನೊ ?

ನಮ್ಮ   ಬುದ್ದಿಜೀವಿಗಳ ಬಗೆಗೆ   ರವಿಯವರ http://kannadathinktank.blogspot.com/     ದಲ್ಲಿರುವ ಅಣಕ ನೆನಪಾಗುತ್ತಿದೆ. ಒಬ್ಬ ಬುದ್ದಿಜೀವಿ ತನ್ನ ಮಿತ್ರರೊಂದಿಗೆ ಸಂಜೆಯ ಚರ್ಚಾಕೂಟವನ್ನು ಮುಗಿಸಿಕೊಂಡು ಮನೆಗೆ ಬಂದಾಗ ಅಘಾತವೊಂದು ಕಾದಿತ್ತು. ಅವನ ಹೆಂಡತಿ ’ಆಯ್ಯೋ ಈ ದಿನ ಯಾವನೋ ಮನೆಗೆ ನುಗ್ಗಿ ನನ್ನನ್ನು ಹಾಳು ಮಾಡಿಬಿಟ್ಟ’ ಎಂದು ಗೋಳಾಡಿದಳು. ಅದನ್ನು ಕೇಳಿದ ಬುದ್ದಿಜೀವಿ ಕೋಪಗೊಂಡು "ಯಾರವನು? ಹೇಗಿದ್ದ?" ಎಂದು ತನ್ನ ಹೆಂಡತಿಯನ್ನು ಕೇಳಿದ. ಅದಕ್ಕವಳು "ಮುಲ್ಲಾ ತರಹದ ಟೋಪಿ ಮತ್ತು ಕುರ್ತಾ ಹಾಕಿದ್ದ. ಗಡ್ಡ ಬಿಟ್ಟಿದ್ದ. ಸುನ್ನತಿ ಅಂತಾರಲ್ಲ ಅದು ಕೂಡಾ ಆಗಿತ್ತೆನಿಸಿತು. ಬಹುಶಃ ಸಾಬರವನೇನೋ" ಎಂದಳು. ಅದಾಗಲೇ ಅಲ್ಲಿದ್ದ ಪೊಲೀಸರನ್ನು, ಸುದ್ದಿಗಾರರನ್ನು ಗಮನಿಸಿದ್ದ ಬುದ್ದಿಜೀವಿಯ ಬುದ್ದಿ ಜಾಗೃತಗೊಂಡಿತ್ತು! ಕೂಡಲೇ ಬುದ್ದಿಜೀವಿ "ಛೇ, ಛೇ, ನಿತ್ಯವೂ ಗೋಮಾಂಸವನ್ನು ತಿನ್ನುವ ಅವನು ಹಸುವಿನಂತೆಯೇ ಸಾಧುವಾಗಿರುತ್ತಾನೆ. ಬಹುಶಃ ಈ ದಿನ ಅವನು ಹೋರಿಯ ಮಾಂಸವನ್ನು ತಿಂದಿರಬೇಕು. ಆ ಹೋರಿಯ ಮಾಂಸವೇ ಅವನಿಂದ ಈ ಕೃತ್ಯವನ್ನು ಮಾಡಿಸಿದೆ. ನಿಜದಲ್ಲಿ ಅವನು ಮುಗ್ಧ! ಹಾಗಾಗಿ ಈ ಕೃತ್ಯವನ್ನೆಸಗಿದವನನ್ನು ಕ್ಷಮಿಸಿದ್ದೇನೆ. ಅದೇ ಒಬ್ಬ ಪುಳ್ಚಾರೀ ಬ್ರಾಹ್ಮಣ ಈ ಕೃತ್ಯಕ್ಕೆ ಕೈಹಾಕಿದ್ದರೆ ಅದು ಅವನು ಜಾಗೃತ ಮನಸ್ಸಿನಿಂದಲೇ ಮಾಡಿದ ಹೇಯ ಕೃತ್ಯವಾಗಿರುತ್ತದೆ. ಅಂತಹವರು ಘೋರ ಶಿಕ್ಷೆಗೆ ಅರ್ಹರು" ಎನ್ನುತ್ತ ಪೊಲೀಸರಿಗೆ ಕೇಸಿನ ಅಗತ್ಯವಿಲ್ಲವೆಂದೂ ಮತ್ತು ಸುದ್ದಿಗಾರರಿಗೆ ದಯವಿಟ್ಟು ಈ ಸುದ್ದಿಯನ್ನು ಆದಷ್ಟೂ ಮುಂದಿನ ಪುಟಗಳಲ್ಲಿ ಹಾಕಿರೆಂದೂ ಭಿನ್ನವಿಸುತ್ತ ವಿಶಾಲ ಹೃದಯವನ್ನು ಮೆರೆದರು!

Saturday, November 01, 2008

ಅನಿರೀಕ್ಷಿತವಾಗಿ ಸಿಕ್ಕ ನೋಟಿನ ಕಥೆ

ಸ್ವಿಟ್ಸರ್ ಲಾಂಡಿನಲ್ಲಿ ರೈಲು ನಿಲ್ದಾಣದಲ್ಲಿ ವಿದೇಶಿ ವಿನಿಮಯ ವ್ಯವಹಾರ ಅಂದರೆ ಹಣ ಪರಿವರ್ತನೆ ಸೌಲಬ್ಯ ಇರುತ್ತದೆ. ಹಾಗೆ ಇನ್ನೇನು ಜರ್ಮನಿ ಗಡಿಯೊಳಗೆ ದಾಟುತ್ತೇನೆ ಅನ್ನುವಾಗ ಅಲ್ಲಿದ್ದ ರೈಲು ನಿಲ್ದಾಣಕ್ಕೆ ನುಗ್ಗಿದೆ. ನನ್ನಲ್ಲಿರುವ ಸ್ವಿಸ್ ಹಣ, ಪರಿವರ್ತನ ಶುಲ್ಕ ಮತ್ತು ಅಪೇಕ್ಷಿಸುವ ಜರ್ಮನಿಯ ಹಣದ  ಮೊತ್ತ, ಹೀಗೆ  ಎಲ್ಲ    ಲೆಕ್ಕಾಚಾರವನ್ನು ಹಣದ ಜತೆ  ರೈಲು ನಿಲ್ದಾಣದ   ಕಿಟಿಕಿಯ  ಎದುರಿದ್ದ     ಆ ಕಾರಕೂನರ     ಮುಂದಿಟ್ಟೆ. 

ನನ್ನ ವರ್ತನೆಗೆ ಅವರು  ಆಶ್ಚರ್ಯಚಕಿತರಾಗಿ ನನ್ನನ್ನು ನೋಡಿದರು.    ಪ್ರಾಯುಷ:    ಈ ರೀತಿಯ ಕರಾರುವಕ್ಕಾದ   ವ್ಯವಹಾರ ಅವರಿಗೆ   ಹೊಸದು.   ಅದೊಂದು  ಬಹಳ   ದೊಡ್ಡ  ಮೊತ್ತವಾಗಿರಲಿಲ್ಲ.    ಆಗ ನಾನು ನನ್ನ ಕಥೆ ಚುಟುಕಾಗಿ ಹೇಳಿದೆ. ಬಾರತದಿಂದ ಬಂದದ್ದು,   ಸೈಕಲಿಸುತ್ತಿದ್ದೇನೆ, ಗಡಿ ದಾಟಿದ ನಂತರ ಚಿಲ್ಲರೆ ನಾಣ್ಯಗಳನ್ನು ಬಾಂಕಿನವರು ಪಡಕೊಳ್ಳುವುದಿಲ್ಲ, ನಾನು ನೆನಪಿಗೋಸ್ಕರ ಸ್ವಲ್ಪ ಚಿಲ್ಲರೆ ಕೊಂಡೊಯ್ಯುತ್ತೇನೆ, ಹೆಚ್ಚು ಕೊಂಡೊಯ್ಯಲು ನನಗೆ ಹೊರಲು ಕಷ್ಟ ಮತ್ತು ಅಷ್ಟು ಹಣವೂ ನನಗೆ ಅಮೂಲ್ಯ ಎಂದು ನನ್ನ ವಿಚಾರ ಅವನ ಮುಂದಿಟ್ಟೆ. ವ್ಯವಹಾರ ಮುಗಿಯಿತು. ಹೊರ ಬಂದು ಸೈಕಲೇರಿದೆ.

ಜರ್ಮನಿ ಗಡಿ ಸಮೀಪಿಸುವಾಗ ಪಕ್ಕದಲ್ಲೊಂದು ಕಾರು ನಿದಾನಿಸಿತು. ಅದರಲ್ಲಿದ್ದ ಇಬ್ಬರು ಐವತ್ತು ದಾಟಿದ ಮಹಿಳೆಯರಲ್ಲಿ ಒಬ್ಬರು ಒಂದು ನೋಟನ್ನು ನನ್ನೆಡೆಗೆ ಚಾಚಿದರು. ನಾನು ಅರ್ಥವಾಗದೆ ಗಲಿಬಿಲಿಗೊಂಡಾಗ ಅವರು ಭಾನ್ ಹೋಫ್ ಅಂದರೆ  ಜರ್ಮನ್  ಬಾಷೆಯಲ್ಲಿ    ರೈಲು ನಿಲ್ದಾಣ ಎಂದು   ಹೇಳುತ್ತಾ       ಹಿಂಬದಿಗೆ ಕೈ ಸನ್ನೆ ಮಾಡಿದರು. ಆಗ ಚಿತ್ರ ಸ್ಪಷ್ಟವಾಯಿತು. ಇವರೂ ಆಗ  ರೈಲು ನಿಲ್ದಾಣದಲ್ಲಿದ್ದರು.  ನಾನು  ಈಚೆ  ಬಂದ  ನಂತರ  ಅಲ್ಲಿ   ನನ್ನ   ಬಗೆಗೆ   ಮಾತುಕಥೆಯಾಗಿರಲೂ  ಬಹುದು.    ನನ್ನ ಸಂಬಾಷಣೆ ಕೇಳಿ ಸಹಾಯ ಮಾಡುವ ಮನಸ್ಸಾಗಿ ಈ ಹಣದ ನೋಟನ್ನು ನನ್ನೆಡೆಗೆ ಚಾಚಿದ್ದರು. ನೋಟು ನನ್ನ ಕೈ ಸೇರಿತು ಎಂದಾಕ್ಷಣ ವೇಗ ಹೆಚ್ಚಿಸಿ ಹೊರಟು ಹೋದರು.


ಅನಿರೀಕ್ಷಿತ ಕಡೆಯಿಂದ ನಮಗೆ ಸಿಗುವ ಸಹಾಯದ ಬಗೆಗೆ ಇದೊಂದು ಉತ್ತಮ ಉದಾಹರಣೆ. ಈ ಘಟನೆಯ ನೆನಪಿಗಾಗಿ ನೋಟನ್ನು ಜೋಪಾನವಾಗಿರಿಸಿದ್ದೇನೆ.   ನನ್ನ  ಪ್ರವಾಸ  ಸುಗಮವಾಗಿ  ನೆರವೇರಲು  ಇಂತಹ  ಹಲವಾರು  ಮನಸ್ಸುಗಳೇ  ಕಾರಣ.   ಅಂದ  ಹಾಗೆ  ಪ್ರವಾಸ  ಕೊನೆಯಾಗುವಾಗ    ನನ್ನಲ್ಲಿ  ಹಲವು  ದೇಶಗಳ   ಸುಮಾರು  ಅರ್ಧ ಕಿಲೊ  ನಾಣ್ಯಗಳು  ಶೇಖರವಾಗಿತ್ತು.

Sunday, October 12, 2008

ಪವಾಡ ನಿರತ ಕ್ರೈಸ್ತ ಸಂತರೂ ದರ್ಮಗುರುಗಳೂ

ಅಲ್ಫಾನ್ಸೊಮ್ಮ ಅವರು ಅಂತೂ ಸಂತರಾಗಲಿದ್ದಾರೆ. ಸದ್ಯದಲ್ಲಿ ಲೋಕ ಸಭೆ ಚುನಾವಣೆ.  ಆಡಳಿತ  ನಡೆಸುತ್ತಿರುವ  ಕಾಂಗ್ರೇಸ್  ಪಕ್ಷದಿಂದ     ಕ್ರೈಸ್ತರ ಓಲೈಕೆ ವೇಗವರ್ದಿಸಲು    ಪ್ರಾರಂಬ.  ನಮ್ಮ ಜಾತ್ಯಾತೀತ ಸರಕಾರ ಅವರ ಹೆಸರಿನಲ್ಲೊಂದು ನಾಣ್ಯ ಬಿಡುಗಡೆ ಮಾಡುವ ಆಶ್ವಾಸನೆ. ಲೋಕಸಭೆ ಚುನಾವಣೆ ಅನಂತರದ ಬಿಡುಗಡೆ ನಿರ್ದಾರಿತ ದಿನ ಆಶ್ವಾಸನೆ   ಕೊಟ್ಟ   ಚಿದಂಬರಂ ಅದಿಕಾರದಲ್ಲಿರುವುದು ಸಂಶಯ.  ಅದೇನು  ಮುಖ್ಯ  ಅಲ್ಲ, ಬಿಡಿ. 

ಈಗ ಪತ್ರಿಕೆ ಬಿಡಿಸಿದರೆ ಅರುವತ್ತು ವರ್ಷ ಹಿಂದೆ ಸತ್ತ ಅಲ್ಫಾನ್ಸೊಮ್ಮನ ಸಂತ ಪದವಿಯದೇ ಕಥೆ. ಸಂತರೆನಿಸಬೇಕಾದರೆ ಪವಾಡ ನಡೆದಿರಬೇಕು. ಅದಕ್ಕೆ   ಪ್ರಾರ್ಥನೆ ಅನಂತರ ಅಂಗವಿಕಲ ಮಗು ನಡೆದಾಡಲು ಪ್ರಾರಂಬಿಸಿದ  ಘಟನೆ  ಮೂವತ್ತೈದು ವರ್ಷ ಹಿಂದೆ ನಡೆದಿದೆ ಎನ್ನಲಾದ ಒಂದು ಕಟ್ಟು ಕಥೆ ತಯಾರು. ಈ ಅಲ್ಫಾನ್ಸೊಮ್ಮ ಸತ್ತು ಇಪ್ಪತೈದು ವರ್ಷ ಕಳೆದ ನಂತರ ನಡೆಸಿದ ಪವಾಡ. ನಿಜಕ್ಕೂ ಅದ್ಬುತ.

ಈ   ಓಟದಲ್ಲಿ ಅಲ್ಫಾನ್ಸೊಮ್ಮ ಮೊದಲಿಗಳಾಗಿ ಇನ್ನೂ ಹಲವಾರು ಜನ  ಬಾರತದ  ಮೂಲದವರು   ಸಾಲಿನಲ್ಲಿದ್ದಾರಂತೆ.  ಪವಾಡಗಳ ಪಟ್ಟಿ ಭಲೇ ಮಜವಾಗಿದೆ. ಪಾದ್ರಿಯ ಗೋರಿಯಲ್ಲಿ ಪ್ರಾರ್ಥಿಸಿದ  ವ್ಯಕ್ತಿಯೊಬ್ಬನ   ಗಿಡ್ಡವಾಗಿದ್ದ ಎಡ ಕಾಲು ಬಲ ಕಾಲಿಗೆ ಸಮಾನವಾಗಿ ಬೆಳೆಯಿತಂತೆ. ತೆರೆಸಮ್ಮ ಒಂದು ರೋಗಿಯ ಕಾನ್ಸರ್ ನಿವಾರಿಸಿದ ಪ್ರತೀತಿ. ಆದರೆ ಒಮ್ಮೆ ತೆರೆಸಮ್ಮ ಇದ್ದ ವಿಮಾನ ಟಾಂಜಾನಿಯದಲ್ಲಿ    ಅಪಘಾತವಾಗಿ  ಸಹ ಪ್ರಯಾಣಿಕರಲ್ಲಿ   ಆರು ಜನ ಸತ್ತಿರುವುದು ಅವರು ಸಂತರಾಗುವುದಕ್ಕೆ ಬಾಧಕವಲ್ಲ.

ಮಂಗಳೂರಿನ ಹೆಸರಾಂತ ಕ್ರೈಸ್ತ ಅಸ್ಪತ್ರೆಯ ವೈದ್ಯರು ಇನ್ನು ಚಿಕಿತ್ಸೆ ನಿಶ್ಪ್ರಯೋಜಕವೆಂದು ಕಾನ್ಸರ್ ಪೀಡಿತ ಕ್ರೈಸ್ತ ಹೆಂಗಸನ್ನು ಸಾವನ್ನು ಕಾಯಲೆಂದು ಮನೆಗೆ ಕಳುಹಿಸಿದ್ದರು. ಕಾಸರಗೋಡಿನ  ತಜ್ನ   ವೈದ್ಯ ಡಾ. ಸತ್ಯಶಂಕರ್ ಅವರು ಕೊನೆ ಪ್ರಯತ್ನವೆಂದು ಗೋಮೂತ್ರ ಅರ್ಕ ಕೊಟ್ಟು ಕಾಯಿಲೆ ಗುಣಪಡಿಸಿದ ಸ್ಪಷ್ಟ ದಾಖಲೆಗಳಿವೆ. ಕ್ಷಮಿಸಿ. ಕ್ರೈಸ್ತರೇತರ ಪವಾಡ ಕ್ರೈಸ್ತ ಮತ ಒಪ್ಪುವುದಿಲ್ಲ.

ಇವೆಲ್ಲ ಬರೆಯಲು ಕಾರಣ ಇತ್ತೀಚೆಗೆ ಮಂಗಳೂರಿನ ಸುತ್ತ ಮುತ್ತ ಕೋಮು ಗಲಭೆ. ಯಾರು ಯಾರೋ ಬಂದರು.  ಬೆಂಗಳೂರಿನಿಂದ  ಬಂದರು,  ದೆಹಲಿಯಿಂದಲೂ ಬಂದರು.    ಛೇ ಛೇ ಎಂದರು. ಪತ್ರಿಕಾಗೋಷ್ಟಿ ನಡೆಸಿದರು. ಟಿವಿ ಕೆಮರಕ್ಕೂ ಮುಖ ಒಡ್ಡಿದರು. ಕ್ರಿಯೆಯನ್ನು  ಸಂಪೂರ್ಣ  ನಿರ್ಲಕ್ಷಿಸಿ ಪ್ರತಿಕ್ರಿಯೆ ಮೇಲೆ ಹೆಚ್ಚಿನ ಗಮನ ಹರಿಸಲಾಯಿತು.  ರೋಮಿನಲ್ಲೂ,   ಅಮೇರಿಕದಲ್ಲೂ  ಪ್ರತಿದ್ವನಿ  ಕೇಳಿಸಿತು. 


ತೆರೆಮರೆ ಅವಲೋಕಿಸುವುದಾದರೆ ಕ್ರೈಸ್ತ ದರ್ಮಗುರುಗಳ ನಿಷ್ಕ್ರೀಯತೆಯಿಂದಾಗಿ   ಪರೀಸ್ಥಿತಿ ಅಷ್ಟು ಗಂಬೀರವಾಯಿತು. ಅನಾವಶ್ಯಕ ಹುಲಿ ಬಂತು ಹುಲಿ ಎಂದು ಘಂಟೆ ಬಾರಿಸಿದರು.  ಜನ ಸೇರಿಸಿದ ಸಂದರ್ಬದಲ್ಲಿ  ಇವರು   ಹೊಣೆಗಾರಿಕೆಯಿಂದ ವರ್ತಿಸಲಿಲ್ಲ.   ಸಮಾಜಬಾಂದವರಿಗೆ ಸತ್ಯಸಂಗತಿ ತಿಳಿಯಪಡಿಸಿ ಜವಾಬ್ದಾರಿಯಿಂದ ವರ್ತಿಸುತ್ತಿದ್ದರೆ   ಮಂಗಳೂರಿನಲ್ಲಿ ಗಲಭೆ ನಡೆಯುತ್ತಲೇ ಇರಲಿಲ್ಲ. ಇದೊಂದು ಕ್ರೈಸ್ತ ರಾಜಕಾರಣ ಪ್ರಾಯೋಜಿತ ನಾಟಕ ಎಂದರೂ ಸೈ.

ನ್ಯೂ ಯೋರ್ಕ್ ನಲ್ಲಿ ಎರಡು ಕಟ್ಟಡಗಳಿಗೆ ವಿಮಾನ ಡಿಕ್ಕಿ ಹೊಡೆದ ನಂತರವೂ   ಅಲ್ಲಿನ  ದೊರೆ   ಬುಷ್ ಬಾಲವಾಡಿ ಮಕ್ಕಳಿಗೆ ಹೇಳುತ್ತಿದ್ದ ಕಥೆಯನ್ನು ಮುಂದುವರಿಸಿದಂತಿತ್ತು ಇವರ ವರ್ತನೆ.

ಹಿಂದೆ ನಮ್ಮ ಪುಡಿ ಕಾಂಗ್ರೇಸಿಗರು ಚುನಾವಣೆ ಗೆಲ್ಲಲು ಪ್ರತಿ ಸಲವೂ ಕೋಮು ಗಲಭೆಯಾಗಿ ಕೆಲವು ಬ್ಯಾರಿಗಳಾದರೂ ಸಾಯಬೇಕು  ಪೆಟ್ಟು   ತಿನ್ನಬೇಕು   ಎನ್ನುತ್ತಿದ್ದರು.   ಈಗ  ಅವರ  ವರ್ತನೆ   ಪೊರ್ಬುಗಳ     ಎತ್ತಿಕಟ್ಟುವಂತಿದೆ. ಈ  ರಾಜಕೀಯ   ಆಟವನ್ನು  ಕ್ರೈಸ್ತ ಸಮುದಾಯ  ಪ್ರತಿಭಟಿಸುವ ಬದಲು ಜತೆಯಲ್ಲಿ ಹೆಜ್ಜೆ ಹಾಕಿದೆ.   ಇದು  ಈ   ಪರಿಸರದಲ್ಲಿಯೇ  ವಾಸಿಸುವ   ಸಾಮಾನ್ಯ ಹಿಂದುಗಳಿಗೆ ನೋವು  ಮುಜುಗರ    ಉಂಟುಮಾಡುವುದೆಂದು ಅವರು ಅರಿಯಬೇಕಾಗಿತ್ತು.  .

ಭಾರತವು     ಕ್ರೈಸ್ತ     ಸಂತರು ನಡೆದಂತಹ ಪುಣ್ಯ ಬೂಮಿ.   ಮೇರಾ ಭಾರತ್ ಮಹಾನ್

Friday, October 10, 2008

ತೂಗುಸೇತುವೆ ಮಂಗಗಳಿಗಂತೆ

ಜಾಂಬೊ (ಕಿನ್ಯಾದ ಸ್ವಾಹಿಲಿ ಬಾಷೆಯಲ್ಲಿ ನಮಸ್ಕಾರ)

ಆಫ್ರಿಕದ ಕಿನ್ಯಾದಲ್ಲೊಂದು ಹೊಸ ಪ್ರಯೋಗ. ಮಂಗಗಳಿಗಾಗಿ ತೂಗುಸೇತುವೆ. ಹಿಂದೆ ರಾಮಾಯಣ ಕಾಲದಲ್ಲಿ ಹನುಮಂತ ಸಮುದ್ರವನ್ನು ಲಂಗಿಸಿದ್ದರೂ ಈಗಿನ ಕೋತಿಗಳಿಗೆ ಆ ಕೌಶಲ್ಯವಿಲ್ಲ.    ಕಾಡಿನಲ್ಲಿರುವ ರಸ್ತೆಗಳು ಪ್ರಾಣಿಗಳ ಸಂಚಾರಕ್ಕೊಂದು ಸವಾಲು. ಹೆಚ್ಚಿನ ಕಡೆ ಗಮನವಿಡಿ ಫಲಕಗಳು ಮಾತ್ರ ಕಂಡುಬರುತ್ತವೆ. ಪರಿಣಾಮ ಸಾವಿರಾರು ಪ್ರಾಣಿಗಳ ಸಾವು.

ತೂಗು ಸೇತುವೆ ಎಂದಾಕ್ಷಣ ನಮಗೆ ನೆನಪಾಗುವುದು ನೂರಾರು ಸೇತುವೆಗಳ ಸರದಾರ ಸುಳ್ಯದ ಗಿರೀಶ್ ಬಾರದ್ವಜರ ಹೆಸರು. ಇದು ಗಿರೀಶರ ಸೇತುವೆಯೂ ಅಲ್ಲ, ಹೊಳೆಯನ್ನು ದಾಟಲು ಹಳ್ಳಿಗರು ಉಪಯೋಗಿಸುವುದೂ ಅಲ್ಲ. ಕಿನ್ಯಾದಲ್ಲಿ ಬಹಳ ವಾಹನ ಸಂದಣಿ ಇರುವ ಹೆದ್ದಾರಿಯಲ್ಲಿ ಮಂಗಗಳ ಉಪಯೋಗಕ್ಕಾಗಿಯೇ ನಿರ್ಮಾಣವಾದ ಆಕಾಶ ಮಾರ್ಗ.

ಅಫ್ರಿಕದ ಪೂರ್ವ ಕರಾವಳಿಯಲ್ಲಿರುವ ಕಿನ್ಯಾ ದೇಶದ ಎರಡನೇಯ ಮುಖ್ಯ ಪಟ್ಟಣ ಮೊಂಬಸ. ಇದು ಪ್ರಮುಖ ಬಂದರು ಮತ್ತು ಪ್ರವಾಸಿ ತಾಣ. ಪಕ್ಕದಲ್ಲಿಯೇ ಡಿಯಾನಿ ಸಮುದ್ರ ತೀರ. ಅಲ್ಲಿ ಸಮುದ್ರ ತಟದಲ್ಲಿಯೇ ಹಲವಾರು ಹೋಟೇಲುಗಳಿದ್ದು ಪ್ರವಾಸೋದ್ಯಮ ಪ್ರಮುಖ ವ್ಯವಹಾರ. ಇಪ್ಪತ್ತ ನಾಲ್ಕು  ವರ್ಷ ಹಿಂದೆ     ವಿದ್ಯುತ್ ಗುತ್ತಿಗೆದಾರರ ಜತೆಗೆ ಕೆಲಸ ಮಾಡುತ್ತಿದ್ದ  ಗೆಳೆಯ ಶೇಖರ್ ಜತೆ ನಾನು ಈ ಪ್ರದೇಶಕ್ಕೆ ಬೇಟಿ ಇತ್ತಿದ್ದೆ.


ಕಿನ್ಯಾದ ಅತ್ಯಂತ ಸುಂದರ ಅಂಗೋಲನ್ ಕೊಲೊಬಸ್ ಮಂಗಗಳು ಈ ಕಾಡಿನಲ್ಲಿ ಮಾತ್ರ ಕಾಣ ಸಿಗುವಂತದ್ದು. ಈಗ ಇಲ್ಲಿ ಬರೇ ೩೦೦ ಮಂಗಗಳು ಉಳಿದುಕೊಂಡಿವೆ.    ಈ  ಅವನತಿಯ   ಅಂಚಿನಲ್ಲಿರುವ   ಮಂಗಗಳು ರಸ್ತೆ ದಾಟುವಾಗ ವಾಹನದಡಿಯಲ್ಲಿ ಸಿಲುಕಿ ಸಾಯುವುದು   ಅಲ್ಲಿನವರಿಗೆ ನುಂಗಲಾರದ ತುತ್ತು.   ಜನರಿಗೆ ಇವುಗಳ ಬಗೆಗೆ ಅರಿವು ಮೂಡಿಸುವುದು, ಅಲ್ಲಲ್ಲಿ ರಸ್ತೆ ಫಲಕ ಅಳವಡಿಕೆ – ಹೀಗೆ ಹಲವಾರು ಪ್ರಯೋಗಗಳ ನಂತರ ತಯಾರಾಯಿತು ಈ ಆಕಾಶ ಸೇತುವೆ ಯೋಜನೆ.

ಅಲ್ಲಿ ಮೊರು ಪ್ರಬೇದದ ಮಂಗಗಳು ಕಾಣಸಿಗುತ್ತವಂತೆ. ನಾಚಿಕೆ ಹಾಗೂ ಬೆದರು ಸ್ವಾಬಾವದ ಈ ಅಂಗೋಲನ್ ಕೊಲಬಸ್ ಮಂಗಗಳು ಮೊದಲು ಈ ಸೇತುವೆಗಳಿಂದ ದೂರವಿದ್ದವು. ಇತರ ಎರಡು ಜಾತಿಗಳ ಮಂಗಗಳು ಮೊದಲು ಕುತೂಹಲ ಮತ್ತು ಅಗತ್ಯಕ್ಕೆ ಈ ಸೇತುವೆ ಉಪಯೋಗಿಸಿದವು. ಕ್ರಮೇಣ ಇತರ ಮಂಗಗಳ ಮೇಲ್ಪಂಕ್ತಿ ಅನುಸರಿಸಿ ಈ ಆಕಾಶ ಸೇತುವೆಯ ಉಪಯೋಗಕ್ಕೆ ಕೊಲಬಸ್ ಮಂಗಗಳೂ ಸುರುಮಾಡಿದವು. ಈಗ ವಾಹನದಡಿಗೆ ಸಿಕ್ಕಿ ಸಾಯುವ ಮಂಗಗಳ ಸಂಖ್ಯೆ ನಗಣ್ಯ.    ಸುಮಾರು ಇಪ್ಪತ್ತು ಸಾವಿರ ರೂಪಾಯಿ   ಖರ್ಚಿನಲ್ಲಿ ಒಂದೇ ದಿನದಲ್ಲಿ ಸೇತುವೆ ತಯಾರು. ಈಗ ಅಲ್ಲಿ  ಇಂತಹ   ಇಪ್ಪತ್ತ ಮೂರು ಸೇತುವೆಗಳಿವೆಯಂತೆ.

ಎಲ್ಲ ಮಂಗಗಳೂ ಈ ಮಾದರಿ ಉಪಯೋಗಿಸುವುದಿಲ್ಲವಂತೆ. ಪಕ್ಕದ ದ್ವೀಪ ಜಾಂಜಿಬಾರಿನಲ್ಲಿ ಈ ಪ್ರಯೋಗ ಸಂಪೂರ್ಣ ವಿಫಲ. ಅಲ್ಲಿನ ಬಿನ್ನ ಉಪಜಾತಿಯ ಕೊಲೊಬಸ್ ಮಂಗಗಳು ಆಕಾಶ ಸೇತುವೆಗಳ ಉಪಯೋಗ ಕಲಿಯಲೇ ಇಲ್ಲ.  ಮಂಗಗಳಲ್ಲೂ ಪೆದ್ದು ಜಾತಿಯವು ಇದೆ ಎಂದಾಯಿತು.

Thursday, October 02, 2008

ಗೊಬ್ಬರದ ರಾಶಿಯಲ್ಲಿ ಕಾರ್ಯ ನಿರತ ಹಂದಿಗಳು

ಅಮೇರಿಕದಲ್ಲಿರುವ ಗೆಳೆಯ ಎರಿಕ್ ಬೇಸಾಯಕ್ಕಾಗಿ ಕುದುರೆಗಳ ಸಾಕುವ ಸಾವಯುವ ರೈತ. ಈ ಕುದುರೆ ಗೊಬ್ಬರದ ಕಂಪೋಸ್ಟ್ ರಾಶಿಯನ್ನು ಅಗಾಗ ತಿರುವಿ ಹಾಕುವ ಕೆಲಸವನ್ನು ಎರಡು ಹಂದಿಗಳಿಗೆ ವಹಿಸಿಕೊಟ್ಟಿದ್ದಾನೆ.  ಈ  ಕೆಲಸವನ್ನು ಅಲ್ಲಿನ ರೈತರು  ಸಾಮಾನ್ಯವಾಗಿ    ಇಂತಹ ಯಂತ್ರ ಮೂಲಕ ಮಾಡುತ್ತಾರೆ.


ಎರಿಕ್ ನಮ್ಮ ಸಬ್ಬಲಿನಂತಹ ಚೂಪಾದ ಉಪಕರಣದಲ್ಲಿ ಗೊಬ್ಬರದ ರಾಶಿಯಲ್ಲಿ ತೂತು ಮಾಡಿ ಅದರಲ್ಲಿ ಜೋಳದ ಕಾಳುಗಳ ಸುರಿಯುತ್ತಾನೆ. ಈ ಕಾಳುಗಳ ತಿನ್ನುವ ಆಸೆಯಲ್ಲಿ ಹಂದಿಗಳು ಇಡೀ ರಾಶಿಯನ್ನು ಅಡಿಮೇಲು ಮಾಡುತ್ತವೆ. ಈ ಮಾದರಿಯನ್ನು   ಸಲಾಟಿನ್ ಎಂಬ ರೈತನ ಅವಿಷ್ಕಾರ   ಎನ್ನುತ್ತಿದ್ದ ಎರಿಕ್.  ಕೆಲವು ಬಾರಿ    ನಾಲ್ಕು  ಅಡಿ  ಆಳದ  ವರೆಗೆ  ಅಗೆಯುವ  ಕಾರ್ಯನಿರತ  ಹಂದಿಗಳ  ಬಾಲ   ಮಾತ್ರ  ಗೋಚರಿಸುತ್ತದೆ   ಎನ್ನುವರು  ಸಲಾಟಿನ್. 

ನಾನೂ ಹಲವು ಸಲ ಹಂದಿ ಆವರಣ ಹೊಕ್ಕು ಈ ಜೋಳ ಕಾಳನ್ನು ಅಡಗಿಸುವ ಕೆಲಸ ಮಾಡಿದ್ದೇನೆ. ಹಂದಿಗಳ ವರ್ತನೆ ಹೆಚ್ಚೇನು ಅರಿಯದ ನನಗೆ ಅವು ನನ್ನಿಂದಲೇ ಕಸಿದುಕೊಳ್ಳುವುದೋ ಎನ್ನುವ ಸಂಶಯ. ನಾವು ತೂತು ಮಾಡಿ ಅಡಗಿಸಿ ಹೊರಬರುವ ವರೆಗೆ ತಾಳ್ಮೆಯಿಂದ ಕಾಯುವ ಹಂದಿಗಳು ನಂತರ ರಾಶಿ ಅಡಿಮೇಲು ಮಾಡುವ ಕೆಲಸಕ್ಕೆ ಸುರುಮಾಡುತ್ತವೆ.




ಅಲ್ಲಿ ತೀರಾ ಬಡವರಿಗೆಂದು ಸೂಪ್ ಕಿಚನ್ ಎನ್ನುವ ದರ್ಮಾರ್ಥ ಊಟ ಮತ್ತು ರಾತ್ರಿ ಉಳಿಯುವ ವ್ಯವಸ್ಥೆ ಚರ್ಚು ಮತ್ತು ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತವೆ. ಹಲವು ತಿಂಗಳು ಸಾಕಿದ ಈ ಹಂದಿಗಳನ್ನು ಎರಿಕ್ ಅವರಿಗೆ ದಾನ ಮಾಡುತ್ತಾನೆ. ಇವರಿಗೆ ಹಂದಿ ಸಾಕಣೆಯಲ್ಲಿ ಕೈಗೊಡಿಸುವ ಅಂಗಡಿಯೊಂದು ಹಂದಿಗಳಿಗೆ ಹಾಕಲೆಂದು ವಾಯಿದೆ ದಾಟಿದ ಹಾಲು ಇತ್ಯಾದಿಯನ್ನು ದರ್ಮಾರ್ಥವಾಗಿ ಕೊಡುತ್ತದೆ.

ಹಂದಿ ಸಾಕಣೆಯಲ್ಲಿ ಸಿಮೆಂಟು ನೆಲದ ಮೇಲೆ ಮತ್ತು ಗೊಬ್ಬರದ ಮೇಲೆ ಎರಡು ವಿದಾನಗಳನ್ನೂ ಅನುಸರಿಸುವವರಿದ್ದಾರೆ. ಯುರೋಪಿನ ಫಾರ್ಮು ಒಂದರಲ್ಲಿ ಸಿಕ್ಕ ಗೆಳೆಯ ಹೇಳಿದ ಮಾತು pig is the only animal that is born toilet trained ಕೇಳಿ ನನಗೆ   ಮೊದಲು   ಆಶ್ಚರ್ಯವಾಗಿತ್ತು.   ಬುದ್ದಿಯೂ ಚುರುಕು. ನಾವು ಗಲೀಜು ಪ್ರಾಣಿ ಎನ್ನುವ   ಹಂದಿ   ಸಿಮೆಂಟು ನೆಲದ ಮೇಲೆ ಸಾಕಿದರೆ ಆವರಣದ ಒಂದು ಮೂಲೆಯಲ್ಲಿ ಮಾತ್ರ ಗಲೀಜು ಮಾಡುತ್ತದೆ. ಸಾಕಣೆ ಸುಲಭ  ಎನ್ನುತ್ತಾರೆ  ಅನುಭವಿಗಳು.

ಈ ಸಲದ ಅಡಿಕೆಪತ್ರಿಕೆಯಲ್ಲಿ ಹಂದಿ ಹಾಗೂ ದನಗಳ ಸಾಕುವ ರೈತರ    ಬಗೆಗೆ ಲೇಖನ ಕಂಡಾಗ ಇವೆಲ್ಲ ನೆನಪಾಯಿತು. ಆದರೆ ಈಗ ಎಲ್ಲರೂ ದ್ರವರೂಪ  ಗೊಬ್ಬರ ತೋಟಕ್ಕೆ ಹರಿಸುವ ಕಾರಣ    ಈ ಮಾದರಿ ನಮಗೆ ಪ್ರಾಯೋಗಿಕವಲ್ಲ.

Wednesday, October 01, 2008

ನೀರ ನೆಮ್ಮದಿ ಕೊಡುವ ಮಳೆನೀರಿನ ಬ್ಯಾಂಕು

ಕುಡಿಯುವ ನೀರಿಗಾಗಿ ಒತ್ತಡ ಹಾಗೂ ಮಳೆ ನೀರು ಕೊಯಿಲಿನ ಆಸಕ್ತಿ ಎರಡೂ ಸೇರಿ ನಮ್ಮಲ್ಲೊಂದು ಮಳೆ ನೀರ ಶೇಖರಣೆ ಟಾಂಕ್ ಮೂರು ವರ್ಷ ಹಿಂದೆ ನಿರ್ಮಾಣವಾಯಿತು.


ನಮ್ಮಲ್ಲಿ ಮಳೆರಹಿತ ದಿನಗಳು ೨೨೦ ಮೀರುವುದಿಲ್ಲ. ನಮ್ಮ   ಕರಾವಳಿ  ಪ್ರದೇಶದ  ಒಂದು ಸಾಮಾನ್ಯ ಕುಟುಂಬಕ್ಕೆ ಹತ್ತರಿಂದ ಹದಿನೈದು ಸಾವಿರ ಲೀಟರ್ ನೀರಿನ ಟಾಂಕ್ ದಾರಾಳ ಸಾಕು. ಆದರೆ ಅಂದಿನ ಪರಿಸ್ಥಿತಿ ನಮ್ಮನ್ನು ನಲುವತ್ತು ಸಾವಿರ ಲೀಟರ್ ದಾಸ್ತಾನಿನ ಟಾಂಕಿಗೆ ಒತ್ತಡ ಹಾಕಿತು.


ಸೌರ  ವಿದ್ಯುತ್  ಚಾಲನೆಯನ್ನು  ಅಳವಿಡಿಸಿರುವ  ನಮ್ಮ   ವ್ಯವಸ್ಥೆಯಿಂದಾಗಿ ಮನೆ  ಬಳಕೆ  ನೀರಿನ  ಮತ್ತು  ಬೆಳಕಿನ  ಮಟ್ಟಿಗೆ  ನಾವು  ಸಂಪೂರ್ಣ  ಸ್ವಾವಲಂಬಿಗಳೆಂದರೂ  ಸರಿಯೇ.    ಈ ನಮ್ಮ ಅನುಭವಗಳ ಅಡಿಕೆ ಪತ್ರಿಕೆ ಅಕ್ಟೋಬರ್ ೨೦೦೮ ಸಂಚಿಕೆಯಲ್ಲಿ ಪ್ರಕಟಿಸಿದ್ದು   ಅದನ್ನು  ನಿಮ್ಮ    ಮುಂದಿಡುತ್ತಿದ್ದೇನೆ.

Wednesday, September 24, 2008

ಹೀಗೊಂದು ಸೌರ ಶಕ್ತಿ ಚಾಲಿತ ಶೀತಕ



 ಸೌರಶಾಖವನ್ನೇಕೆ   ನಮ್ಮ   ಶೀತಕ   ಅನುಸರಿಸ ಬಾರದೆನ್ನುವ ಯೋಚನೆ ನನಗೆ ಮೊದಲು ಬಂದಿತ್ತು.  ಸೀಮೆ ಎಣ್ಣೆ ದೀಪ ಉರಿಸಿ ತಂಪಾಗಿಸುವ ಪುರಾತನ ಕಾಲದ ಫ್ರಿಡ್ಜ್ ಗಳು ಬಹಳ ಹಿಂದೆ ನೋಡಿದ್ದೆ. ಸುಮಾರು ನಲುವತ್ತು ವರ್ಷ ಹಿಂದೆ ಯಂತ್ರ ಚಾಲಿತ ಫ್ರಿಡ್ಜ್ ಗಳು ಬರುವ ವರೆಗೆ ಅವುಗಳು ಜನಪ್ರಿಯವಾಗಿದ್ದವು. ಕ್ರಮೇಣ ಅವುಗಳ ತಯಾರಿ ನಿಂತು ಅವುಗಳೆಲ್ಲ ಮೂಲೆ ಪಾಲಾದವು.

ಇದರ  ತಂತ್ರಜ್ನಾನ   ಹೊಸತಲ್ಲ.  ಇಂದಿನ    ಫ್ರಿಡ್ಜುಗಳು  ತುಂಬಾ  ವಿದ್ಯುತ್  ಅಪೇಕ್ಷಿಸುವ  ಯಂತ್ರಾವಲಂಬಿಯಾಗಿದೆ.  ಯಂತ್ರದ  ಮೂಲಕ  ಒತ್ತಡ  ಹೆಚ್ಚಿಸುವ  ಬದಲಿಗೆ  ಶಾಖ ಮೂಲಕ  ಹೆಚ್ಚಿಸುವ  ಕ್ರಿಯೆ  ಸರಳ.   ನೂರು  ವರ್ಷ ಹಿಂದೆ  ಅಗ್ಗದ  ಪೆಟ್ರೋಲ್   ವಿದ್ಯುತ್  ವಾಹನ  ಅವಿಶ್ಕಾರ  ತಡೆಗಟ್ಟಿದಂತೆ  ನಲುವತ್ತು  ವರ್ಷ    ಹಿಂದೆ  ಅಗ್ಗದ  ವಿದ್ಯುತ್  ಈ  ಸರಳ  ಶೀತಕಗಳನ್ನು  ಮಾರುಕಟ್ಟೆಯಿಂದ  ಓಡಿಸಿತು  ಅನ್ನಬಹುದು. 

ಇತ್ತೀಚೆಗೆ    ಅಮೇರಿಕದ ಸಾನ್ ಜೋಸ್ ವಿಶ್ವವಿದ್ಯಾಲಯದ ಚುರುಕು ಮೆದುಳುಗಳೆಲ್ಲ ಸೇರಿ ಇಂತಹ ಸೂರ್ಯನ ಶಾಖ ಬಳಸಿ ಮಂಜುಗಡ್ಡೆ ತಯಾರಿಸುವ ಯಂತ್ರ ರೂಪಿಸುವುದರಲ್ಲಿ ಸಫಲರಾಗಿದ್ದಾರೆ. ಯಾವುದೇ ಚಲಿಸುವ ಬಾಗಗಳಿಲ್ಲದ ಅದು ಬರೇ ಒಂದು ರಸಾಯನಿಕ ಕ್ರಿಯೆಯಲ್ಲಿ ಮಂಜುಗಡ್ಡೆ ಉತ್ಪಾದನೆ ಮಾಡುತ್ತದೆ.

ಉಬ್ಬಿನ ಪ್ರತಿಫಲಿಸುವ ಹಲಗೆಯನ್ನು ಉಪಯೋಗಿಸಿ ಬೆಳಕು ಮತ್ತು ಶಾಖವನ್ನು ಕೊಳವೆ ಮೇಲೆ ಕೇಂದ್ರೀಕರಿಸುವುದರಿಂದ ಇದರಲ್ಲಿ ತುಂಬಿಸಿರುವ ದ್ರಾವಣ ಅನಿಲ ರೂಪಕ್ಕೆ ಪರಿವರ್ತನೆಯಾಗುತ್ತದೆ. ಸೂರ್ಯ ಮುಳುಗಿದ ನಂತರ ಒತ್ತಡದ ವ್ಯತ್ಯಾಸದಿಂದಾಗಿ ಈ ಅನಿಲ ರೂಪ ವಿಪರೀತ ಶಾಖವನ್ನು ಕಳಕೊಳ್ಳುವ ಮೂಲಕ ತಣ್ಣಗಾಗಿಸಿ ಇದರಲ್ಲಿ ಸುಮಾರು ಆರು  ಕಿಲೊ ಐಸ್ ತಯಾರಾಗುತ್ತದೆ. ಈ ದ್ರವ  ತಣ್ಣಗಾಗುವಾಗ   ೧೦೪  ಡಿಗ್ರಿ ಫಾರಿನ್ ಹೀಟ್ ಅಂದರೆ ಸುಮಾರು ೪೦ ಡಿಗ್ರಿ ಸೆಂಟಿಗ್ರೇಡ್ ದಾಟಿದ ನಂತರ  ವೇಗವಾಗಿ ಶಾಖವನ್ನು ಕಳಕೊಳ್ಳುವ ಕಾರಣ ಇದು ಉಷ್ಣವಲಯದಲ್ಲೂ ಕೆಲಸ ಮಾಡಲು ಸಾದ್ಯ. ಯಾವುದೇ ಚಲಿಸುವ ಬಾಗಗಳಿಲ್ಲದ ಕಾರಣ ಹಾಳಾಗುವ ಸಾದ್ಯತೆಗಳು ಅತ್ಯಲ್ಪ.   ಪೈಪು ತೂತಾಗದಂತೆ ನೋಡಿಕೊಂಡರೆ ಸೈ.


ಮನೆಯಲ್ಲಿ ಆಹಾರ ಪದಾರ್ಥಗಳ ಮತ್ತು ವೈದ್ಯಕೀಯ ಲಸಿಕೆಗಳ ಮದ್ದುಗಳ ಬಹುಕಾಲ ಇಟ್ಟುಕೊಳ್ಳಲು ಇದು ಸಹಾಯ ಆಗಬಹುದು. ವಿದ್ಯುತ್ ಶಕ್ತಿ ಲಬ್ಯವಾಗದ ಸ್ಥಳಗಳಲ್ಲೂ ಇದು ಚೆನ್ನಾಗಿ ಕೆಲಸ ಮಾಡಬಲ್ಲದು. ನಮ್ಮಲ್ಲಿರುವಂತೆ ದಿನಕ್ಕೆ ಎಂಟು ಘಂಟೆ ವಿದ್ಯುತ್ ಕಡಿತ ಇರುವಲ್ಲಿಗೂ   ಬಹಳ   ಉಪಯುಕ್ತ.    ವಿಪರ್ಯಾಸ ಎಂದರೆ ನಮ್ಮಂತೆ ಹಳ್ಳಿಗರ ಮನೆಯಲ್ಲಿ ಅತಿ ಹೆಚ್ಚು ವಿದ್ಯುತ್ ಬಳಸುವುದು ಶೀತಕವೇ.   ಇದಿಲ್ಲವಾದರೆ  ನಾವು  ಮನೆ ಬಳಕೆ    ವಿದ್ಯುತ್  ಮಟ್ಟಿಗೆ   ಸ್ವಾವಲಂಬಿಗಳು.

Saturday, September 20, 2008

ಸಾಗಾಣಿಕೆ ಅನುಕೂಲ ಸೈಕಲುಗಳು


ನಮ್ಮಲ್ಲಿ  ಯಾಕಿಲ್ಲ  ಎನ್ನುವ   ಪಟ್ಟಿಗೆ  ಸೇರಿಸುವಂತಹ   ವಸ್ತು   ಸಾಗಾಣಿಕೆ  ಸೈಕಲುಗಳು.      ಬಾರತದಲ್ಲಿ    ಇಂದು ಕೆಲವು ಕೋಟಿ ರೂಪಾಯಿ ಕ್ರಯದ  ವಿಲಾಸಿ   ಕಾರುಗಳು  ಮತ್ತು   ನೂರಾರು ಬಗೆಯ    ದ್ವಿಚಕ್ರ ವಾಹನಗಳು ನಮ್ಮ ಮಾರುಕಟ್ಟೆಯಲ್ಲಿಸಿಗುತ್ತದೆ.      ಆದರೆ ಹಲವಾರು ಉಪಯುಕ್ತ    ಸರಳ   ಮಾದರಿಗಳು ನಮ್ಮಲ್ಲಿ ಮುಖತೋರಿಸಲೇ ಇಲ್ಲ.    ಗ್ರಾಮೀಣ ಪ್ರದೇಶದಲ್ಲಿ ಉಪಯುಕ್ತ ಎನಿಸಬಹುದಾದ ಸಕಲ ದಾರಿ ಸಂಚಾರಿ ಸದಾಸಂ ಮತ್ತು   ಈ  ಹಿಂಬಾಗ  ಉದ್ದವಾದ  ಸೈಕಲುಗಳು   ಉತ್ತಮ  ಉದಾಹರಣೆ. 

ಸೈಕಲು    ತಯಾರಿ    ಬಗೆಗಿನ ವಿಚಾರಗಳೆಲ್ಲ ನಮ್ಮ ದೇಶದಲ್ಲಿ ನಿಂತ ನೀರಾಗಿದೆ. ಲುದಿಯಾನದಲ್ಲೂ ಮದ್ರಾಸಿನಲ್ಲೂ ಇರುವ ನಮ್ಮ ಸೈಕಲ್ ತಯಾರಕರು ಬ್ರಿಟೀಷರು ಬಿಟ್ಟು ಹೋದ ಅಚ್ಚಿನಲ್ಲೇ ಇಂದಿಗೂ   ಸೈಕಲುಗಳ ತಯಾರಿಸಿ ಮಾರುತ್ತಿದ್ದಾರೆ.    ಗಾತ್ರದಲ್ಲಿ ವಿವಿದತೆ ಕಂಡುಬಂದರೂ    ವಿನ್ಯಾಸದಲ್ಲಿ ಇಲ್ಲವೇ ಇಲ್ಲ.  ಇಷ್ಟೊಂದು  ಸರಳ ಬದಲಾವಣೆ  ನಮ್ಮ  ತಯಾರಕರು  ಅಳವಡಿಸಿಲ್ಲ  ಎನ್ನುವಾಗ   ಅಸಹಾಯಕ     ಹತಾಶೆ  ಬಾವನೆ  ಮೂಡುತ್ತದೆ. 

ಒಂದಷ್ಟು ತಂತ್ರಾಂಶದಲ್ಲಿ ಕೆಲಸ ಮಾಡುವ ಆಸಕ್ತ ಹುಡುಗರು ಪರದೇಶಗಳಿಂದ ಹಗುರವಾದ ಅತ್ಯಾದುನಿಕ ಸೈಕಲ್ ತರಿಸಿ ಮಾರಾಟ ಮಾಡಿ ಹೊಸ ನೀರ ಹರಿವಿಗೆ ಪ್ರಯತ್ನಿಸುತ್ತಿದ್ದಾರೆ ಆಂದರೂ ಸಹಾ ಅವರ ಪ್ರಬಾವ ಪಟ್ಟಣಗಳಿಗೆ ಸಿಮಿತ. ಆ ದುಬಾರಿ ಸೈಕಲುಗಳು ಹಳ್ಳಿಗರ ಜನಸಾಮಾನ್ಯರ ಕೈಗೆಟಕುವಂತೆಯೂ ಇಲ್ಲ.


ನಮಗೆ    ಉಪಯೋಗವಾಗಬಹುದಾದ   ಸೈಕಲುಗಳು  ಎಲ್ಲೋ  ತಯಾರಾಗುತ್ತದೆ  ಎನ್ನುವುದು  ಸಂತಸದ  ಸುದ್ದಿ.    ಪರದೇಶಗಳಲ್ಲಿ ಅಮೇರಿಕದಿಂದ ಹಿಡಿದು   ಅಫ್ರಿಕದ  ವರೆಗೆ ಹೊಸ ತರದ ಸಾಗಾಣಿಕೆ ಸೈಕಲುಗಳ ಅವಿಷ್ಕರಣೆ ಹಾಗೂ ಉಪಯೋಗ ಸಾಗಿದೆ.   ಈ ಸೈಕಲುಗಳು  ಆಸನದ  ಹಿಂದಿನ  ಬಾಗ    ಸ್ವಲ್ಪ   ಉದ್ದವಾಗಿದ್ದು ಹೆಚ್ಚು ಸಾಮಾನು ಹಾಕಲು ಉಪಯುಕ್ತ.     ಕಬ್ಬಿಣದ ಕೊಳವೆಗಳ ಬದಲಿಗೆ ಬಿದುರಿನ ಕೋಲುಗಳ ಉಪಯೋಗಿಸುವುದರಲ್ಲೂ    ಆಫ್ರಿಕದಲ್ಲಿ     ಸಫಲರಾಗಿದ್ದಾರೆ.  


ಈ  ಮಾದರಿ  ಹೊಸ    ಸೈಕಲುಗಳು ತಯಾರಿಗೆ  ಹೆಚ್ಚು  ಕಬ್ಬಿಣದ  ಕೊಳವೆಗಳ  ಉಪಯೋಗದಿಂದ   ಇನ್ನೂರು ರೂಪಾಯಿ ದುಬಾರಿ    ಆಗಬಹುದು.    ನಮ್ಮಲ್ಲಿ     ಸಂಪ್ರದಾಯಿಕ  ಸೈಕಲು  ಮಾರುಕಟ್ಟೆ   ದೊಡ್ಡ  ತಯಾರಕರ  ಹಿಡಿತದಲ್ಲಿದೆ.  ಇದು  ಅಂತರ್ಜಾಲದಲ್ಲಿ  ಮಾರಾಟ  ಆಗುವ  ಸಾಮಾನು  ಅಲ್ಲ.    ಇವುಗಳಲ್ಲಿ ಹೆಚ್ಚು ಸಾಮಾನು ಕೊಂಡೊಯ್ಯಬಹುದು.   ಇನ್ನೂರು  ಕಿಲೊ  ಸಾಮಾನು  ಅಥವಾ  ಮೊರು  ಜನ  ಹೊರುವ  ಮಾದರಿಗಳಿವೆಯಂತೆ.     ಸೈಕಲುಗಳ ಉಪಯೋಗಿಸುವ ಸಣ್ಣ ವ್ಯಾಪಾರಿಗಳು ವಿತರಕರು ನಿತ್ಯವೂ ಉಪಯೋಗಿಸುವವರು  ಹಲವರು   ಪುಟ್ಟ ದ್ವಿಚಕ್ರಕ್ಕೆ ಬಡತಿ ಹೊಂದಿದ್ದರಾದರೂ ಇನ್ನೂ ಸಾಕಷ್ಟು ಜನ ಸೈಕಲಿಗೆ ಅಂಟಿಕೊಂಡಿದ್ದಾರೆ.     ಅವರಿಗೆಲ್ಲ ಈ ಸೈಕಲುಗಳು ನಮ್ಮಲ್ಲೂ     ಜೋಡಣೆಯಾದರೆ ಬಹಳ ಉಪಯೋಗವಾಗಬಹುದು.

Sunday, September 14, 2008

ಕೋಲ ಎಂಬ ಬಣ್ಣದ ನೀರು ನಮ್ಮಲ್ಲಿ ಹಾಲಿಗಿಂತಲೂ ಬಲು ದುಬಾರಿ

ಅಂತೂ ಇಂತೂ ಹಾಲಿಗೆ ಖರೀದಿ ದರ ಎರಡು ರೂಪಾಯಿ ಏರಿಕೆ. ನೂರು ದಿನ ಯಶಸ್ವಿ ಆಡಳಿತ ನಡೆಸಿದವರ ಕೊಡುಗೆ.  ಸರಕಾರದ  ಪರವಾಗಿ  ಮಾತನಾಡಲು  ಹಕ್ಕಿರುವ     ಶೋಭಕ್ಕನಿಂದಾದ   ಘೋಷಣೆ ಮೇಲ್ನೋಟಕ್ಕೆ ಅವರು ವೈಯುಕ್ತಿಕವಾಗಿ ಕೊಡುತ್ತಾರೊ ಎನ್ನುವ ಅನುಮಾನ. ಮನೆಯ ಹೆಂಗಸರ ಹೆಸರಿಗೆ ಬಾಂಕ್ ಖಾತೆ ಎನ್ನುವ ವಿನೂತನ ಬಳಸು ದಾರಿಯ ಪರಿಣಾಮ ಹೊಸತಾದ ಮರಕೋತಿ ಅಟದ ಪ್ರಾರಂಬ.  ರೇವಣ್ಣನವರ    ಹಾಲು ಮಹಾಮಂಡಲಿಗೆ ಬೆಲೆ ಏರಿಸುವ ಹಕ್ಕಿಲ್ಲವೆಂದು ಯೆಡ್ಯುರಪ್ಪನ ಗುಟುರು.    ಹೀಗೆಲ್ಲ    ಒಟ್ಟಿನಲ್ಲಿ ಗೊಂದಲಾಮಯವಾಗಿತ್ತು.   
                                                      
ನನ್ನ ಬ್ಲೋಗ್ ಬರಹ   ಅಮೇರಿಕದಲ್ಲಿ ಹಾಲು ಕುಡಿದ್ರಾ ಯೆಡ್ಯುರಪ್ಪ      ಸ್ವಲ್ಪ ಬದಲಾವಣೆ ಮಾಡಿ ಕನ್ನಡ ಪ್ರಭಕ್ಕೆ ಕಳುಹಿಸಿದ್ದೆ.    ಅದು ಗುರುವಾರ ೧೧ ಸೆಪ್ಟೆಂಬರ್ ಸಂಚಿಕೆಯಲ್ಲಿ ಚಿತ್ರ ಸಮೇತ ಪ್ರಕಟವಾಗಿದೆ.  ಅರ್ಥಪೂರ್ಣ  ವ್ಯಂಗ್ಯ ಚಿತ್ರ  ಬರೆದವರಿಗೂ  ಬರಹದ  ತಿರುಳು ಹೆಕ್ಕಿ  ಪ್ರಕಟಿಸಿದ  ಸಂಪಾದಕ ವರ್ಗಕ್ಕೂ  ನಾನು  ಕೃತಜ್ನ.    ಇಲ್ಲಿ  ಅಸ್ಪಷ್ಟವಾದರೆ  ಅದನ್ನು     http://www.kannadaprabha.com/pdf/1192008/6.pdf    ಪುಟದಲ್ಲಿ  ಓದಬಹುದು.   ಹಾಲಿನ  ಕ್ರಯದ  ಬಗೆಗೆ ಸರಿಯಾದ  ಮಾಹಿತಿ  ಸಿಕ್ಕ  ನಂತರ  ಈ   ಎರಡನೇಯ  ಬಾಗ  ಹಾಕುವುದೆಂದು  ವಿಳಂಬಿಸಿದೆ. 

  ಸ್ಥಳೀಯ  ಸಹಕಾರಿ  ಸಂಘದ  ಮೂಲಕವೇ  ಈ  ಎರಡು  ರೂಪಾಯಿ  ತಲಪಿಸುವುದೆಂದು  ಸರಕಾರದ   ತೀರ್ಮಾನವೆಂದು  ಇತ್ತೀಚಿನ  ಪತ್ರಿಕಾ  ವರದಿ.  ಬಾಂಕ್  ಖಾತೆಯ  ಕನಸಿಲ್ಲಿದ್ದ   ಮಹೀಳೆಯರಿಗೆಲ್ಲ   ಅಶಾಭಂಗ.    ಈ  ಕೊಡುಗೆಯ ಹಿಂದೆ  ತಾನಿರುವೆಂದು  ರೇವಣ್ಣ  ಬಿಂಬಿಸಿದರೆ  ಎಂದು  ಯೆಡ್ಯು  ಗುಮಾನಿ.  ಈಗ  ನಮ್ಮ   ಸಮಾಜದಲ್ಲಿ   ಎಲ್ಲವೂ  ರಾಜಕೀಯಮಯ.    ಸಹೋದರಿಯ  ಸಮಸ್ಯೆ  ಪರಿಹಾರದ  ಹೆಗ್ಗಳಿಕೆ  ಸದಾಶಿವನಿಗೆ  ಸಿಕ್ಕರೆ  ಎಂದು  ಹಿರಿಯಣ್ಣ   ಹುಳಿ ಹಿಂಡಿದ  ಉದಾಹರಣೆ ನಮ್ಮೂರಲ್ಲಿದೆ.    


ಪ್ರಜಾವಾಣಿಯ  ಚಿತ್ರಕಾರ  ಮಹಮದ್  ಅವರು  ಈ  ಸಮಸ್ಯೆಯ  ಅರ್ಥಪೂರ್ಣವಾಗಿ  ಚಿತ್ರಿಸಿದ್ದಾರೆ.     ಶಿಕಾರಿಪುರ  ಅಕ್ಕಿ  ಮಿಲ್ಲಿನ  ಅಳಿಯನಾದ  ಯೆಡ್ಯುಗೆ   ಪಶು ಆಹಾರದ  ಒಂದು ಪ್ರಮುಖ ಅಂಶವಾದ    ಅಕ್ಕಿ  ತೌಡಿನ  ಬೆಲೆ ಈಗ ಗೊತ್ತಿಲ್ಲವೋ  ಏನೊ.  ಒಟ್ಟಿನಲ್ಲಿ    ಇವರ ರಾಜಕೀಯ ಆಟದಲ್ಲಿ  ರೈತರು  ಪುಡಿಯಾಗಲಿದ್ದಾರೆ.

Saturday, September 13, 2008

ಕರೆಯುತ್ತಿದ್ದಾರೆ ಶೌಚಾಲಯಕ್ಕೆ


ಜಪಾನಿನಲ್ಲಿ ಕಳೆದ ಶತಮಾನದ ವರೆಗೂ ರೈತರು ರಸ್ತೆ ಪಕ್ಕದಲ್ಲಿ ಶೌಚಾಲಯ ನಿರ್ಮಿಸುತ್ತಿದ್ದರಂತೆ. ನಮ್ಮಲ್ಲಿ ಖಾಸಗಿ ಬಸ್ಸುಗಳಿಗೆ ಜನರನ್ನು ಕರೆಯುವಂತೆ ಕರೆಯುತ್ತಿದ್ದರೋ ಎನ್ನುವುದು ಖಚಿತವಲ್ಲವಾದರೂ ಉಪಯೋಗಿಸಿದರೆ ಖಂಡಿತ ಸಂತೋಷ ಪಡುತ್ತಿದ್ದರಂತೆ.

ನನ್ನ ಸೈಕಲ್ ಪ್ರವಾಸದ ಮೊದಲು ಹಲವಾರು ದೇಶಗಳ ಬಗೆಗೆ ಪ್ರವಾಸಿ ಮಾಹಿತಿ   ಸಂಗ್ರಹಿಸಿದ್ದೆ. ಅಲ್ಲಿರುವಾಗ ಕೃಷಿ  ಸಂಬಂದಿತ  ವಿಚಾರಗಳ    ಬಗೆಗೂ ಕಣ್ಣಿಡುತ್ತಿದ್ದೆ. ಜಪಾನು ಸಾವಿರಾರು ವರ್ಷಗಳಿಂದ ಒಂದೇ ಜಾಗದಲ್ಲಿ ನಿರಂತರವಾಗಿ ಕೃಷಿ ಕೈಕೊಳ್ಳುತ್ತಿರುವ ದೇಶವಾದುದರಿಂದ ಅವರದು ಫಲವತ್ತತೆ ಉಳಿಕೊಳ್ಳುವ ಮಾದರಿ ಎನ್ನುವುದು ಸ್ಪಷ್ಟ. ಈ ದಾರಿ ಬದಿಯ ಶೌಚಾಲಯಗಳು ದಾರಿಹೋಕರಿಗೆ ಉಪಯೋಗ ಎನ್ನುವುದಕ್ಕಿಂತ ಹೆಚ್ಚು ತಮಗೆ ಗೊಬ್ಬರ ಸಿಗಲಿ ಎನ್ನುವ ಸ್ವಾರ್ಥ ಚಿಂತನೆ. ಹಾಗೆಯೇ ಮನೆಗೆ ಬಂದ ಅತಿಥಿಗಳು ತಮ್ಮ ಶೌಚಾಲಯ ಉಪಯೋಗಿಸದೆ ಇದ್ದರೆ ಸಿಟ್ಟೆ ಬರುತ್ತಿತ್ತಂತೆ.   ನಮ್ಮಲ್ಲಿ ಈಗ ಸೆಗಣಿ ಕುರಿ ಕೋಳಿ ಗೊಬ್ಬರ ಲಾರಿಯಲ್ಲಿ ಸಾಗಿಸುವಂತೆ ಮಲವನ್ನು ಪಟ್ಟಣಗಳಿಂದ ಗಾಡಿಯಲ್ಲಿ ತುಂಬಿ ಸಾಗಿಸುತ್ತಿದ್ದರು.  ಸಿರಿವಂತರ ಆಹಾರದಲ್ಲಿ ಹೆಚ್ಚು ಪೊಷಕಾಂಶ ಎನ್ನುವ ನೆಲೆಯಲ್ಲಿ ಹೆಚ್ಚಿನ ಮೌಲ್ಯ.

ಪ್ರಯಾಣ ಮಾಡುತ್ತೀರಾ ? ಸಂತೋಷ, ಒಮ್ಮೆ ಶೌಚಾಲಯಕ್ಕೆ ಹೋಗಿ ಬನ್ನಿ ಎನ್ನುವ ಮಾತು ಈಗ ಸ್ವೇಡನಿನಲ್ಲಿ  ವ್ಯಾಪಕವಾಗಿ   ಕೇಳಿ ಬರುತ್ತಿದೆ. ಈಗ ಸ್ವೇಡನ್ ದೇಶದ ಹಲವು ಮುನಿಸಿಪಾಲಿಟಿಗಳು ಕೊಳಚೆಯಿಂದ ಅನಿಲ ಉತ್ಪಾದನೆ ಕೈಗೊಳ್ಳುತ್ತಿದೆಯೆಂದು ಇತ್ತೀಚಿನ ಸುದ್ದಿ. ಅಲ್ಲಿನ ಕಾರು ಬಸ್ಸುಗಳ ಮಾತ್ರವಲ್ಲ ರೈಲುಗಾಡಿಯನ್ನು ಸಹಾ ಈ ಅನಿಲ ಚಲಿಸುವಂತೆ ಮಾಡುತ್ತವೆ. ನೈಸರ್ಗಿಕ ಅನಿಲದಿಂದ ಚಲಿಸುವ ವಾಹನಗಳು ಯಾವುದೇ ಬದಲಾವಣೆ ಇಲ್ಲದೆ ಈ ಕೊಳಚೆ ಗಾಸ್ ಬಳಸಬಹುದು.
                                                                              
ಕೆಲವೆಡೆ ನೈಸರ್ಗಿಕ ಅನಿಲವನ್ನು ಗ್ರಾಹಕರಿಗೆ ಕೊಂಡೊಯ್ಯುವ ಕೊಳವೆಯನ್ನೇ ಬಳಕೆ. ಗಾಸ್ ಪಂಪಿನಲ್ಲಿ ಒತ್ತಡೀಕರಿಸಿ ಕಾರಿನಲ್ಲಿರುವ ಜಾಡಿಗೆ ತುಂಬುತ್ತಾರೆ. ಒಂದು ಕಾರು ಪಂಪಿನಲ್ಲಿ ಗಾಸ್ ತುಂಬಿಸಿತು ಎಂದಾಕ್ಷಣ ಅಷ್ಟೇ ಗಾಸ್ ಕೊಳವೆ ಜಾಲಕ್ಕೆ ಸೇರಿಸುತ್ತಾರೆ. ವಾಹನ ಬಳಸುವ ಇಂದನವನ್ನು ಪೂರ್ತಿ ಕೊಳಚೆಯಿಂದ ತಯಾರಾದ ಗಾಸ್ ತುಂಬಿಕೊಡಲೆಂಬ ಚಿಂತನೆ.

ಪ್ರತಿಯೊಬ್ಬರು ಇಡೀ ವರ್ಷದಲ್ಲಿ ಫ್ಲುಷ್ ಮಾಡೋದರಲ್ಲಿ ಉತ್ಪತ್ತಿಯಾದ ಗಾಸ್ ಸುಮಾರು ೧೨೦ ಕಿಲೋಮೀಟರ್ ನಮ್ಮ ಹಡಗಿನಂತಹ ಕಾರುಗಳು ಓಡಿಸಲು ಸಾಕು ಎಂದು ಅಲ್ಲಿನ ಅಬಿಯಂತರರು ಹೇಳುತ್ತಾರೆ. ಮೇಲ್ನೋಟಕ್ಕೆ ನಮ್ಮ ಪುಟ್ಟ ಕಾರುಗಳು ಇನ್ನೂರು ಕಿಲೋಮೀಟರ್ ಚಲಿಸಬಹುದು ಅನ್ನಿಸುತ್ತದೆ. ಕಾರಿನ ಹೊಗೆ ನಳಿಗೆ ಉಗುಳುವುದು ವಾಸನೆರಹಿತ ಕಡಿಮೆ ಮಲೀನತೆಯ ಹೊಗೆ. ಸ್ಥಳೀಯ ಇಂದನ, ಕಡಿಮೆ ಮಲೀನತೆ, ಹೀಗೆ ಹಲವು ಉಪಯೋಗ. ಉಳಿಕೆ ವಸ್ತುವನ್ನು ಗೊಬ್ಬರವಾಗಿ ಬಳಕೆ.

ನಾಲ್ಕು ಜನರಿರುವ ನಮ್ಮ ಮನೆಯಲ್ಲಿ ವರ್ಷಕ್ಕೆ ಎಂಟು ನೂರರಿಂದ ಸಾವಿರ ಕಿಲೋಮೀಟರ್ ಕಾರು ಓಡಿಸುವಷ್ಟು ಗಾಸ್ ನಿರೀಕ್ಷಿಸಬಹುದು. ಒತ್ತಡೀಕರಿಸುವುದು ಇಂದಿನ ದಿನಗಳಲ್ಲಿ ದುಬಾರಿ. ನಮ್ಮಲ್ಲಿ ಕಣ್ಣೆದುರು ಪೋಲಾಗುವ ಇನ್ನೊಂದು ಇಂದನ ಮೂಲವಾದ ಸೌರ ವಿದ್ಯುತ್ ಸೇರಿಸಿದರೆ ಓಡಾಟದ ಮಟ್ಟಿಗೆ ಖಂಡಿತ ಸಂಪೂರ್ಣ ಸ್ವಾವಲಂಬನೆಗೆ ಸಾದ್ಯ.  ಸದ್ಯಕ್ಕೆ ವಿಚಾರ ಲೆಕ್ಕಾಚಾರಕ್ಕೆ ಸಿಮಿತ. ಇದರ   ವಿವರಗಳು  ಇನ್ನೊಮ್ಮೆ.

Saturday, September 06, 2008

ಪರದೇಶದಲ್ಲಿ ರೂಪಾಯಿ ಲೆಕ್ಕಾಚಾರ

ವಾರಗಳ   ಹಿಂದೆ  ಓದಿದ   ಆಗಸ್ತು  ೧೪ರ    ವಿಜಯ ಕರ್ನಾಟಕದ ಅಂಕಣದಲ್ಲಿ  ಪ್ರಕಟವಾದ   ವಿಶ್ವೇಶ್ವರ ಭಟ್ಟರ ಲೇಖನದಲ್ಲೊಂದು ವಾಕ್ಯ ಮನಸಿಗೆ ಕಿರಿಕಿರಿ ಉಂಟು ಮಾಡುತ್ತಲೇ  ಇದೆ.  ಈ    ವಾಕ್ಯ ಬಾರತೀಯರ ಮನೋಬಾವವನ್ನು ಮೂದಲಿಸುವಂತಿದೆ.   ಅಲ್ಲಿನ  ವಾತಾವರಣ   ಖರ್ಚಿಗೆ   ಪ್ರರೇಪಿಸುತ್ತದೆ.   ರೂಪಾಯಿ  ಲೆಕ್ಕ  ಬೇಡ  ಎನ್ನುವ  ಈ ಮಾತು ನನಗೆ   ಹೊಸತಲ್ಲ. ಪರದೇಶಗಳಲ್ಲಿ ಹಲವು ಬಾರಿ    ಹೇಳಿಸಿಕೊಂಡಿದ್ದೇನೆ.   ಅದುದರಿಂದ ಇನ್ನೊಂದು ಮುಖ ಪರಿಚಯಿಸಲು ಪ್ರಯತ್ನಿಸುವೆ.


ಇದೊಂದು ಪರಂಪರೆಯ ಮಾತು. ಮೂಲ ಹೀಗಿದ್ದಿರಬಹುದು. ವಿದ್ಯೆಗೋ ಕೆಲಸಕ್ಕೊ ನಂತರ ಹೋದವರಿಗೆ ಮೊದಲಿಗರ ಹಿತವಚನ. ಖರ್ಚಿನ ಮೇಲೆ ಬಹಳ ಯೋಚನೆ ಬೇಡ , ಉಪವಾಸ ಇರಬೇಡ ಎನ್ನುವ ತಾತ್ಪರ್ಯ. ಕ್ರಮೇಣ ಹಿರಿ ಗುರುಗಳ ಕಾಲದಲ್ಲಿ ಪ್ರವಚನ ಸಮಯದಲ್ಲಿ ಬೆಕ್ಕನ್ನು ಪಾತ್ರೆಯಡಿ ಮುಚ್ಚಿಡಲಾಗುತಿತ್ತು ಎನ್ನುವ ಆಚರಣೆಯ ಅನುಕರಣೆ ಎಂಬಂತಾಗಿದೆ. ಈಗಂತೂ ಹೋದ ಪ್ರತಿಯೊಬ್ಬನೂ ಕೇಳುವುದು ಕಡ್ಡಾಯ.

ಗೆಳೆಯರು ಸಂಬಂದಿಕರು  ಅಲ್ಲಿನ  ಅತಿಥೇಯರು    ದೊಡ್ದ ಮನಸ್ಸು ಮಾಡುವುದು ಬೇರೆ ನಮ್ಮ ವೈಯುಕ್ತಿಕ ಖರ್ಚಿಗೆ ನಾವಾಗಿ ಅವರಿವರಲ್ಲಿ ಕೈಯೊಡ್ಡುವುದು ಬೇರೆ. ಬಾರತದ ಹೊರಗೆ ಮುಕ್ಕಾಲು ಆದಾಯ ಇಲ್ಲವಾದಲ್ಲಿ ಪ್ರತಿ ಪೈಸವನ್ನೂ ನಾವು ಲೆಕ್ಕ ಮಾಡುವುದೇ ಸರಿ. ಇದರರ್ಥ ಲೇಖನದಲ್ಲಿ ಕಾಣುವ ನಮ್ಮವರು ಮಾಡಬಹುದಾದ ಚೌಕಾಶಿಯನ್ನು ಒಪ್ಪುತ್ತೇನೆ ಎಂದಲ್ಲ. ವಿದ್ಯೆಗೋ ಕೆಲಸದ ಪ್ರಯುಕ್ತವೋ ಮೊದಲು ಹೋದ ಶ್ರೀಯುತ ಭಟ್ರಿಗೆ ಅಲ್ಲಿ ಹಣ ದಾರಾಳ ಖರ್ಚು ಮಾಡುವ ಅಗತ್ಯ ಅವಕಾಶ ಇದ್ದಿರಬಹುದು. ಅದುದರಿಂದ ಆ ದೋರಣೆ ಸಮಂಜಸ ಎನಿಸುತ್ತದೆ.

ನಾನು ಇಪ್ಪತ್ತೆರಡು ವರ್ಷ ಹಿಂದೆ ಸೈಕಲು ಪ್ರವಾಸದ ಬಾಗವಾಗಿ ರೋಮ್ ಪಟ್ಟಣದಲ್ಲಿ ಯುವ ಹಾಸ್ಟೇಲಿಗೆ ಹೋದೆ. ದಿನಕ್ಕೆ ಹತ್ತು ಸಾವಿರ ಲಿರಾ ಎಂದರು. ನಾನು ಅಂದಿನ ವರೆಗೆ ಸಾವಿರ ಮಿಕ್ಕಿದ ಹಣ ಅಪ್ಪನ ಅನುಮೋದನೆ ಇಲ್ಲದೆ ಖರ್ಚು ಮಾಡಿದ್ದಿರಲಿಲ್ಲ. ಅಲೋಚನೆ ಮಾಡಿದರೆ ಅದು ನೂರು ರೂಪಾಯಿ ಚಿಲ್ಲರೆ. ಆದರೆ ಮೊದಲು ಕೇಳುವಾಗ ನಿಜಕ್ಕೂ ಗಲಿಬಿಲಿ. ಅಂದು ನಮಗೆ  ಕಾನೂನು  ಪ್ರಕಾರ   ಕೊಂಡೊಯ್ಯಲು ಅವಕಾಶ ಇದ್ದುದು ಐದು ನೂರು ಡಾಲರ್ ಗುಣಿಸು ಹನ್ನೆರಡು ಅಂದರೆ ಕೇವಲ ಆರು ಸಾವಿರ ರೂಪಾಯಿ ಮಾತ್ರ. ಇಂದಿನಂತೆ ನಾಲ್ಕು ಲಕ್ಷ ರೂಪಾಯಿ ಮೌಲ್ಯ ಪರದೇಶಕ್ಕೆ ಸಲೀಸಾಗಿ ಕೊಂಡೊಯ್ಯುವಂತಿರಲಿಲ್ಲ. ಸ್ವಾಬಾವಿಕವಾಗಿ ಪೈಸ ಪೈಸವನ್ನೂ ಲೆಕ್ಕಿಸುವ ಅಗತ್ಯ.  ನಾನು  ವಾಪಾಸು  ಬರುವಾಗ  ನನ್ನಲ್ಲಿ  ಉಳಿದುದು  ಚಿಲ್ಲರೆ  ಹಣ.    ದುಂದು ವೆಚ್ಚ  ಮಾಡಿದರೆ  ಊರು  ತಲಪುತ್ತಿರಲಿಲ್ಲ. 

ಈ  ಹಣ   ಪರಿವರ್ತನಾ ವಿಚಾರಕ್ಕೆ   ಇನ್ನೊಂದು  ಮುಖವಿದೆ.     ಇತ್ತೀಚೆಗೆ ಎರಡು ಲಕ್ಷ ಚಿಲ್ಲರೆ ವಿಮಾನಕ್ಕೆ ಸುರಿದು ನಮ್ಮವರು ಬಂದಿದ್ದರು ಅಮೇರಿಕದಿಂದ.   ಸಹೋದರಿಯ ಬೇಟಿಗೆ ಬೆಂಗಳೂರಿಗೆ  ಹೋಗಲು ಕೆಲವು  ಸಾವಿರ ಖರ್ಚು  ಆಗಬಹುದು   ಎಂದು ಮನಬಿಚ್ಚಿ ಗೊಂದಲದಿಂದ ಮಾತಾಡಿದರು ವರ್ಷಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿ ಮಿಕ್ಕಿ ಸಂಪಾದಿಸುವ ಈ ಅಮೇರಿಕದ ಕುಳ.  ಕೊನೆಗೂ ಅಷ್ಟು ಖರ್ಚಿಗೆ ಮನಸೊಪ್ಪಲಿಲ್ಲ.  ಅವರ ಇಲ್ಲಿನ ವರ್ತನೆಯನ್ನು ಶ್ರಿ ಭಟ್ಟರು ಪ್ರಶ್ನಿಸುವುದು  ಹೆಚ್ಚು   ಉಚಿತ   ಹೊರತು ಅಲ್ಲಿ ನಮ್ಮ ವರ್ತನೆಯನ್ನಲ್ಲವೆಂದು ಅನಿಸುತ್ತದೆ.  ಬಾರತದಲ್ಲಿ  ಹೆಚ್ಚೆಂದರೆ  ವರ್ಷಕ್ಕೆ ಒಂದೆರಡು ಲಕ್ಷ ರೂಪಾಯಿ ಸಂಪಾದಿಸುವ ಬೂಪ ಸ್ವಾಬಿಮಾನ ಉಳಿಸಿಕೊಂಡು ಅಮೇರಿಕದಲ್ಲೊ ಯುರೋಪಿನಲ್ಲೊ ದಾರಾಳ ಖರ್ಚು ಮಾಡುವಂತಿಲ್ಲ.

ಅವರು ಲೇಖನದಲ್ಲಿ ಬರೆದಂತಹ ಇಲ್ಲಿಗೆ ಬರುವ ಪ್ರತಿ ಪ್ರವಾಸಿಯೂ ಆ ದೇಶದ ರಾಯಬಾರಿ ಎಂಬ ಪರದೇಶಿಯರ ಮಾತಿಗೆ ಅನುಗುಣವಾಗಿ ನಡೆದುಕೊಂಡಿದ್ದೇನೆ ಎಂದು ನಾನು ದೈರ್ಯವಾಗಿ ಹೇಳಬಲ್ಲೆ. ನನ್ನಂತೆ ನೂರಾರು ಜನ  ಬಾರತೀಯರು  ಎಲ್ಲೂ ಅನುಚಿತವಾಗಿ ನಡೆದುಕೊಂಡಿರಲಿಕಿಲ್ಲ. ಲೇಖನದಲ್ಲೊಂದು ದುಂದು ಖರ್ಚಿಗೆ ಪ್ರೆರಣೆಯೊ ಎನಿಸುವ ಮಾತು ಮಾತ್ರ ನನಗೆ ಸರಿ ಕಾಣಲಿಲ್ಲ.   ಮೊದಲ  ಬಾರಿಗೆ  ಸಮುದ್ರದಾಟುವವರು  ಈ  ಲೇಖನದಲ್ಲಿರುವ     ವಾಕ್ಯಗಳ  ಅಕ್ಷರವನ್ನೂ   ಬಿಡದೆ   ಓದಿ  ಚಿಂತಿತರಾಗುವ    ಸಾದ್ಯತೆ  ಕಂಡು  ಬರೆಯೋಣ  ಅನಿಸಿತು.

Monday, September 01, 2008

ಅಮೇರಿಕದಲ್ಲಿ ಹಾಲು ಕುಡಿದ್ರಾ ಯಡ್ಯುರಪ್ಪ

ಇತ್ತೀಚೆಗೆ ಬೆಲೆ ಏರಿಕೆ ಪ್ರಬಾವ ಎಲ್ಲ ವಲಯದಲ್ಲೂ ಕಂಡುಬರುತ್ತಿದೆ. ಆಡಳಿತ ಪಕ್ಷದ ಪ್ರಣಾಳಿಕೆ ಪ್ರಕಾರ ಹಾಲಿನ ಬೆಲೆ ಎರಡು ರೂಪಾಯಿ ಏರಿಕೆಯ ಆಶ್ವಾಸನೆ ನೀಡಲಾಗಿತ್ತು. ಬಳಕೆದಾರರಿಗೆ ಈ ಹೊರೆ ವರ್ಗಾಯಿಸಲು ಚಿಂತನೆ ನಡೆಸಿ ಅವರು ಬೇಸರ ಪಟ್ಟುಕೊಂಡಾರು ಎಂದು ತಡೆ ಹಿಡಿಯಲಾಗಿದೆ. ಈ ಏರಿಕೆ ಆಡಳಿತ ಪಕ್ಷದ ಕೊಡುಗೆಯಲ್ಲ ಏರುತ್ತಿರುವ ಸಾಕಣೆ ಖರ್ಚನ್ನು ಸರಿದೂಗಿಸುವ ರೈತನ ಹಕ್ಕಿನ ಹಣ. ಈಗ ಹಾಲು ಉತ್ಪಾದನೆಯ ಖರ್ಚು ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ರೈತನ ಕೊಬ್ಬು ಕರಗುತ್ತಲೇ ಇದೆ.  

ಪ್ರಪಂಚದ ಉಳಿದೆಡೆ ಹಾಲು ಎಷ್ಟಕ್ಕೆ ಮಾರಲ್ಪಡುತ್ತದೆ ಎಂದು ಗಮನಿಸಲು  ಈಗ   ಯಡ್ಯುರಪ್ಪನಿರುವ    ಅಮೇರಿಕದಲ್ಲಿ ಗ್ರಾಹಕರಿಗೆ ಹಾಲಿನ ಬೆಲೆ ಸುಮಾರು ಲೀಟರೊಂದಕ್ಕೆ ನಲುವತ್ತು ರೂಪಾಯಿ ದಾಟಿದೆ ಎಂಬ ವಿಚಾರ ಕಂಡು ಬಂತು .

ನಾನೂ     ಗೊಬ್ಬರದ ಆಸೆಯಲ್ಲಿ ದನ ಸಾಕುವ ಮತ್ತು   ನಮ್ಮೂರ ಹಾಲಿನ ಸೊಸೈಟಿಗೆ   ಹಾಲು  ಹಾಕುವ   ಮೊರ್ಖ.   ಅವರು ಮಾರುವ ಹಿಂಡಿಗಳನ್ನು ಮಾತ್ರ  ಬಳಸುವುದಿಲ್ಲ. ಪಟ್ಟಣದಲ್ಲಿ ಸಿಗುವ ಸಿದ್ದ ಪಶು ಆಹಾರವನ್ನು ನಾನು ತಿರಸ್ಕರಿಸುವುದಕ್ಕೆ ಕಾರಣ ವಿಷಪೊರಿತ ಹತ್ತಿ ಬೀಜದ ಹಿಂಡಿ ಹಾಗೂ  ಅಗ್ಗದ   ಪ್ರೊಟೀನ್  ಎಂದು  ಬಳಸುವ   ಯುರಿಯಾ.  ಇವೆರಡನ್ನೂ ನಮ್ಮಲ್ಲಿ ಪಶು ಆಹಾರದಲ್ಲಿ ದಾರಾಳ ಬಳಸುತ್ತಾರೆ. ಹನ್ನೆರಡು ವರ್ಷಗಳಿಂದ ನಾನು ರಾಗಿ ಹುಡಿ, ಜೋಳದ ಹುಡಿ, ಗೋದಿ ಬೂಸ, ಎಳ್ಳಿಂಡಿ ಇತ್ಯಾದಿಗಳನ್ನು ತಂದು ಮಿಶ್ರಣ ಮಾಡಿ ಬಳಸುತ್ತೇವೆ. ಎಂಟಾಣೆಯಿಂದ ಒಂದು ರೊಪಾಯಿ ಕಿಲೋವೊಂದಕ್ಕೆ ಹೆಚ್ಚುವರಿ ಖರ್ಚು. ಸಾಕಣೆ ದುಬಾರಿಯಾದರೂ ಹಸುಗಳ ಆರೋಗ್ಯದ ಮಟ್ಟಿಗೆ ಉತ್ತಮ ಫಲಿತಾಂಶ.

ಎರಡು ವರ್ಷ ಹಿಂದಿನ  ವರೆಗೆ  ಹಲವು  ವರ್ಷಗಳ  ಕಾಲ    ನನ್ನಲ್ಲಿ ಹಿಂಡಿ ಮಿಶ್ರಣಕ್ಕೆ ಅಂದಾಜು ಎಂಟು ರೂಪಾಯಿ ತಗಲುತಿದ್ದು ಈಗ ಇದು ಹದಿಮೂರರನ್ನು ದಾಟಿದೆ. ಒಂದು ಲೀಟರ್ ಹಾಲಿಗೆ ಸರಿಸುಮಾರು ಅರ್ಧ ಕಿಲೊ ಹಿಂಡಿ ಅಗತ್ಯವೆಂದು ಪರಿಗಣಿಸಬಹುದು. ಹಾಗಾಗಿ ಈಗಿನ ಲೀಟರೊಂದಕ್ಕೆ ಎರಡು ರೂಪಾಯಿ ಹೆಚ್ಚಳ ಹಿಂಡಿಯ ಕ್ರಯ ಹೆಚ್ಚಳವನ್ನೂ ತುಂಬಿಕೊಡದು. ಆದರೆ ಹಸು ಸಾಕಣೆಗೆ ಇತರ ಖರ್ಚುಗಳೂ ಇರುತ್ತವೆ. ಕೆಲಸಗಾರರನ್ನು ಹಳ್ಳಿಗಳಲ್ಲಿ ಹುಡುಕುವುದೇ ಸಾಹಸ.

ಒಂದು ವರ್ಷ ಹಿಂದೆ ಬಾರತದಲ್ಲಿ ಬಹಳ ಬದಲಾವಣೆಗಳಾಗುತ್ತಿವೆ ಎನ್ನುವ ಲೇಖನ ಹಿಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಬರೆದ ಅಮೇರಿಕದಲ್ಲಿ ರಾಯಬಾರಿ ಕಛೇರಿಯ ಅಧಿಕಾರಿಗೆ ನಾನು ಪ್ರಯೋಜನವಾಗುತ್ತಿರುವುದು ಪಟ್ಟಣಗಳಿಗೆ ಎಂದು ಅವರ ಬರಹದ ತಿರುಳನ್ನು ಪ್ರಶ್ನಿಸಿ ಪತ್ರಿಸಿದ್ದೆ. ಅದಕ್ಕವರು ಬದಲಾವಣೆಯನ್ನು ಅಮುಲ್ ಮಾದರಿ ಹಾಲಿನ ಕ್ರಾಂತಿ ಹಳ್ಳಿಗಳ ತಲಪಿದೆ ಎಂದು ಉದಾಹರಿಸಿ ಉತ್ತರಿಸಿದರು. ಪ್ರತ್ಯುತ್ತರವಾಗಿ ಹಾಲಿನ ಸೊಸೈಟಿಯಿಂದ ಪ್ರಯೋಜನ ಪಟ್ಟಣಿಗರಿಗೆ ಬೆಳಗಿನ ಲೋಟದ ಚಾ-ಕ್ಕೆ ಬೆರೆಸಲು ಕಡಿಮೆ ದರದ ಹಾಲು ಸಿಗಲು ಹೊರತು ಹಳ್ಳಿಗರ ಉದ್ದಾರಕ್ಕೆ ಖಂಡಿತ ಅಲ್ಲವೆಂದಿದ್ದೆ.

ಆಹಾರವನ್ನಾಗಿ ಇದೇ ಹಿಂಡಿ ಉಪಯೋಗಿಸಿ ಸಾಕುವ ಕೋಳಿಗಳ ಉತ್ಪನ್ನಗಳಿಗೆ ಜಾಗತಿಕ ವಿದ್ಯಮಾನಗಳ ಅನುಸರಿಸಿ ಶೇಕಡಾ ಐವತ್ತರಷ್ಟು ಕ್ರಯ ಏರಿದೆ. ಆದರೆ ಹಾಲಿಗೆ  ಶೇಕಡಾ  ಹದಿನೈದರ  ಇನ್ನೂ  ಕಾರ್ಯಗತವಾಗದ    ಆಶ್ವಾಸನೆ  ಮಾತ್ರ. ಮುಖ್ಯವಾದ ಕಾರಣ ಹಾಲು ಪೊರೈಕೆ ನಿಲ್ಲಿಸಿ ಪ್ರತಿಭಟಿಸುವ ಚೈತನ್ಯ ಮತ್ತು ಒಗ್ಗಟ್ಟು ಹೈನುಗಾರರಲ್ಲಿ ಇಲ್ಲ. ನಮ್ಮಲ್ಲಿ ರೈತರ ಸೇವೆ ಹೆಸರಿನಲ್ಲಿ ಹಾಲಿನ ಸೊಸೈಟಿ ಎಂಬ ಸರಕಾರಿ ಕೃಪಾಪೋಷಿತ ಸಂಸ್ಥೆ ಹಾಲಿನ ಮಾರುಕಟ್ಟೆಯಲ್ಲಿ ಸ್ಪರ್ದೆಯನ್ನು ಅವಕಾಶವನ್ನೀಯದೆ ರೈತರ ಶೋಷಣೆ ಮಾಡುತ್ತದೆ.

ಜರ್ಮನಿಯಲ್ಲಿ   ಇಂದು   ಹಾಲಿಗಿಂತ ಬೀರು ಅಗ್ಗ.  ನಮ್ಮಲ್ಲಿ ಕೋಲ ಎಂಬ ಬಣ್ಣದ ನೀರು ಸಹಾ ಹಾಲಿಗಿಂತಲೂ ದುಬಾರಿ.   ಇತರ ದೇಶಗಳ  ಸ್ಪರ್ದಾತ್ಮಕ ಮಾರುಕಟ್ಟೆಯಲ್ಲಿ ಹಾಲಿನ ಬೆಲೆ ಹಾಲೂಡುವ ದನಗಳ ಸಂಖ್ಯೆಯನ್ನು ನಿರ್ದರಿಸುತ್ತದೆ. ಮಾಂಸದ ಬೆಲೆ ಏರಿದರೆ ತತ್ಕಾಲಿಕವಾಗಿ ಹಾಲಿನ ಪೊರೈಕೆ ಕಡಿಮೆಯಾಗುವುದುಂಟು. ನಮ್ಮಲ್ಲಿರುವಂತೆ ಹನ್ನೆರಡು    ರೂಪಾಯಿಗೆ ಮಾರಲು ರಾಜಕೀಯ ಕಾರಣಗಳಿಂದಾಗಿ ರೈತನ ಮೇಲೆ ಒತ್ತಡ ಇದ್ದರೆ ಹಾಲು ಅಲ್ಲಿನ ಮಾರುಕಟ್ಟೆಯಿಂದಲೇ ಮಾಯವಾಗುವುದು ಖಚಿತ.

Friday, August 22, 2008

ಇಂಗು ತಿಂದು ಮಂಗನಾದ ಜಾರ್ಜ್

ಈಗ ಅದುನಿಕ ತಂತ್ರಜ್ನಾನದಿಂದಾಗಿ ಪ್ರಪಂಚದಲ್ಲಿ ನಡೆಯುತ್ತಿರುವ ಎಲ್ಲವನ್ನೂ ಬಲ್ಲೆವು ಅನ್ನುವ ಭ್ರಮೆ ನಮ್ಮದು. ಎಷ್ಟೋ ವಿಚಾರಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಯುರೋಪಿನಲ್ಲಿರುವ ಜಾರ್ಜಿಯ ಎಂಬ ಪುಟ್ಟ ರಾಷ್ಟ್ರವನ್ನು ತನ್ನ ನೆರೆಯಲ್ಲಿರುವ ರಷ್ಯಾದ ವಿರುದ್ದ ಗುಟ್ಟಾಗಿ ಅಮೇರಿಕ ಹಾಗೂ   ಇಸ್ರೇಲ್  ಜತೆಗೂಡಿ   ಎತ್ತಿಕಟ್ಟುತ್ತಿದೆ.  ಇವೆರಡು ದೇಶಗಳು ಜಾರ್ಜಿಯಾ ಓಲೈಕೆಗೂ ಕಾರಣ ತೈಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ. ಇವರೊಳಗಿನ  ಗೆಳೆತನ   ಎಲ್ಲಿನ ವರೆಗೆಂದರೆ ಇರಾಕಿನಲ್ಲೂ ಅಮೇರಿಕ ಮತ್ತು ಇಂಗ್ಲೇಡಿನ ನಂತರದ ದೊಡ್ಡ ಗಾತ್ರದ ಸೇನೆ ಈ  ಪುಟ್ಟ    ಜಾರ್ಜಿಯ  ದೇಶದ್ದು.

ಮೊನ್ನೆ ಚೀನಾದಲ್ಲಿ ಒಲಂಪಿಕ್ ಉದ್ಘಾಟನಾ ಸಮಾರಂಬವನ್ನು ಪ್ರಪಂಚವೇ ಮೈಮರೆತು ನೋಡುತ್ತಿದ್ದಾಗ ಜಾರ್ಜಿಯ ಒಂದು ಸೇನಾ ಕಾರ್ಯಾಚರಣೆ ನಡೆಸಿತು. ಬಹುತೇಕ ರಷ್ಯನ್ ಮೂಲದ ಜನರಿರುವ ಪ್ರದೇಶವನ್ನು  ಬಲತ್ಕಾರವಾಗಿ  ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿತು. ಸಾವಿರಾರು   ಜನರನ್ನು ಕೊಂದಿತು. ಕೆಲವು ಸಾವಿರ ನಾಗರಿಕರು ಜೀವ ಉಳಿಸಿಕೊಳ್ಳಲು ರಷ್ಯಕ್ಕೆ ಓಡಿ ಹೋದರು. ಕೂಡಲೇ ಎಚ್ಚೆತ್ತ ರಷ್ಯ ತಮ್ಮವರ ಸಹಾಯಕ್ಕೆ ಪೂರ್ಣ  ಪ್ರಮಾಣದ  ಸೇನೆ ಕಳುಹಿಸಿತು.

ರಾಜ ಕುಮಾರ್ ಸತ್ತ ದಿನದ ಗಲಬೆಯಲ್ಲಿ ತಮ್ಮ ಕೈವಾಡವಿರಲು ತಾವು ಮನೆ ಹೊರಡಲೇ ಇಲ್ಲ ನಮ್ಮ ಡುಮ್ಮ ಸಿಂಗರು ಅಂದು ಹೇಳಿದರಲ್ಲ, ಹಾಗೆ ಈ ದಿನ ಜಾರ್ಜ್ ಬುಷ್ ನಿರಾತಂಕವಾಗಿ     ಚೀನಾದಲ್ಲಿದ್ದರು.   ಕೆಲವು ದಿನ ಅವರು ಮತ್ತು ಅವರ ಸಹಾಯಕರು ಈ   ಯುದ್ದ   ವಿಚಾರದಲ್ಲಿ ತೆಪ್ಪಗಿದ್ದರು. ಏನೂ ಹೆದರಿಕೊಬೇಡಿ ಜತೆಯಲ್ಲಿ ನಾನಿದ್ದೇನೆ ಎಂದು  ಮೊದಲು   ಅಲ್ಲಿನ  ಅದ್ಯಕ್ಷರಿಗೆ    ಮಿಲಿಟರಿ ಕಾರ್ಯಾಚರಣೆ  ಮಾಡಲು   ಹರಸಿದ ನಮ್ಮ ಜಾರ್ಜ್    ಆ  ವೇಳೆಗೆ


ವಾರ ಕಳೆದಾಗ ಜಾರ್ಜಿಯಾ ದೇಶದ ಅದ್ಯಕ್ಷನ ಪರೀಸ್ಥಿತಿ ಕೈಲಾಗದವ ಮೈ ಪರಚಿಸಿಕೊಂಡ ಎಂಬತಾಯಿತು. ಅಲ್ಲಿನ ಮಿಲಿಟರಿಯು ಪೂರ್ತಿ ಪುಡಿಯಾದ ನಂತರ ಸುಮ್ಮನಿರುವುದು ಸರಿಯಲ್ಲ ಅನ್ನಿಸಿದ ಅಮೇರಿಕದ ಜಾರ್ಜ್ ಅವರಿಂದ ರಷ್ಯದ ಪುಟಿನ್ ಅವರಿಗೆ ಫೋನ್. ಏನಯ್ಯಾ , ಒಂದು ಸ್ವತಂತ್ರ ಗಣರಾಜ್ಯವನ್ನು ಅತಿಕ್ರಮಿಸಿದರೆ ........ ಎನ್ನಲು ಆ ಕಡೆಯಿಂದ  ಹಾ ಹಾ      ಜೋಕ್ ಚೆನ್ನಾಗಿದೆ   ಜಾರ್ಜ್   ಎನ್ನುವ ಉತ್ತರ ಬಂತಂತೆ. ಇತ್ತೀಚೆಗೆ ವರೆಗೆ ಸ್ವತಂತ್ರ ದೇಶಗಳಾಗಿದ್ದ ಇರಾಕ್ ಹಾಗೂ ಅಫ್ಘಾನಿಸ್ಥಾನಿನಲ್ಲಿ ಇನ್ನೂ ಕಾರ್ಯಾಚರಣೆ ನಡೆಸುತ್ತಿರುವ ಆಮೇರಿಕಕ್ಕೆ ಹೇಳುವ ನೈತಿಕ ಹಕ್ಕು ??

ಮಾದ್ಯಮದ ಮೇಲಿನ ನಿಯಂತ್ರಣದಿಂದಾಗಿ ಅಮೇರಿಕದ ಹಲವಾರು ಕಿತಾಪತಿಗಳು ಅರ್ಧ ಸತ್ಯಗಳು ಬೆಳಕು ಕಾಣುವುದೇ ಇಲ್ಲ. ರಷ್ಯಾದ ಪ್ರವ್ಡಾ ಪತ್ರಿಕೆಯ ಈ ಜಾರ್ಜ್  ಬುಷ್ ಸಾಹೇಬನಿಗೆ   ಬರೆದ   ಕುಹಕ ಪತ್ರ ಓದಿ ನೋಡಿ.

Tuesday, August 19, 2008

ಫುಕುವೋಕರನ್ನು ನಾ ಕಂಡಂತೆ


ನಿನ್ನೆ ಬೆಳಗ್ಗೆ ನನ್ನ ಸಂಚಾರವಾಣಿಗೆ ಪೈಲೂರರಿಂದ ಒಂದು ಸುದ್ದಿ ಬಂತು. ೯೫ ವರ್ಷ ವಯಸ್ಸಾಗಿದ್ದ ಫುಕುವೋಕರು ಎರಡು ದಿನ ಹಿಂದೆ ಹೋಗಿ ಬಿಟ್ಟರಂತೆ. ಓದಿದ ತಕ್ಷಣ ನನ್ನ ಮನಸ್ಸು ಇಪ್ಪತ್ತೆರಡು ವರ್ಷ ಹಿಂದಕ್ಕೋಡಿತು.

ನಾನು ಫುಕುವೋಕರ ಒಂದು ಹುಲ್ಲಿನ ಕ್ರಾಂತಿ ಓದುವಾಗ ನನ್ನ ಸೈಕಲು ಯಾತ್ರೆಯ ತಯಾರಿಯಲ್ಲಿದ್ದೆ. ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಷೆ ಓದಿ ಅಂಚೆ ಮೂಲಕ ಪುಸ್ತಕವನ್ನು ತರಿಸಿ ಓದಿದೆ. ಬಹಳ ಪ್ರಬಾವಿತನಾದೆ ಎನ್ನಬಹುದು. ಆಗ ವರ್ಷದೊಳಗೆ ಅವರನ್ನು ಕಾಣುತ್ತೇನೆ ಎಂದು ಕನಿಸಿನಲ್ಲೂ ಯೋಚಿಸಿರಲಿಲ್ಲ. ಅಫ್ರಿಕಾ ಮೂಲಕ ಯೋರೋಪ್ ಮತ್ತು ವಾಪಾಸು ಎನ್ನುವುದು ನನ್ನ ಮೂಲ ಯೋಜನೆಯಾಗಿತ್ತು.

ಜಪಾನಿನ ಟೋಕಿಯೊದಲ್ಲಿ ಬಂದಿಳಿದಾಗ ಅವರ ಪುಸ್ತಕದಲ್ಲಿ ಹಿಂದೆ ಓದಿದ ಮತ್ಸುಯಾಮ ಪಟ್ಟಣದ ಸಮುದ್ರ ತೀರ ಎಂದಷ್ಟೆ ಸುಳಿವು. ಆದರೂ ಒಂಬೈನೂರು ಕಿಲೋಮೀಟರ್ ಸೈಕಲ್ ತುಳಿದು ಮತ್ಸುಯಾಮ ತಲಪಿ ವಿಚಾರಿದಾಗ ಅವರ ವಾಸ್ತವ್ಯ ಪಟ್ಟಣದ ಹೊರವಲಯದ ಇಯೋ ಎಂಬ ಊರೆಂದು ತಿಳಿಯಿತು. ಅಂತೂ ಹೋಗಿ ಬಾಗಿಲು ತಟ್ಟಿದೆ. ಎದುರಿಗೊಂಡರು.

ಹೆಚ್ಚೇನು ಮಾತುಕಥೆಯ ಮೊದಲೇ ತಮ್ಮ ಸೈಕಲು ಏರಿ ಹಿಂಬಾಲಿಸಲು ಹೇಳಿದರು. ಸುಮಾರು ಎರಡು ಕಿಮಿ ದೂರದ ಗುಡ್ಡದ ಬುಡದಲ್ಲಿ ಸೈಕಲನ್ನು ಗೋಡೆಗೆ ಒರಗಿಸಿದರು. ಮುಂದಿನದು ಕಾಲು ನಡುಗೆ. ಅಲ್ಲಿ ಹಲವು ಕುಟೀರಗಳು. ಆವಾಗ ಅವರ ಗುರುಕುಲ ಬರಿದಾಗಿತ್ತು. ಹಾಗಾಗಿ ನಾನು ಏಕಾಂಗಿಯಾಗಿ ವಾಸ್ತವ್ಯ.

ಆ ವರ್ಷ ಅವರು ಬತ್ತ ಬಿತ್ತನೆ ಅನಂತರ ಅಮೇರಿಕಕ್ಕೆ ಹೋಗಿದ್ದರಂತೆ. ಹಾಗಾಗಿ ನಿರ್ವಹಣೆ ಇಲ್ಲದೆ ಗದ್ದೆ ತುಂಬಾ ಕಳೆಗಳಿದ್ದವು. ಫಸಲು ನಿರ್ಣಯಿಸಲು ಕಷ್ಟ ಎನ್ನುವಂತಿತ್ತು. ಗುಡ್ಡದಲ್ಲಿ ಮಾತ್ರ ಕಿತ್ತಳೆ ಮರಗಳ ನಡುವೆ ನಾವು ಅಗೆದಲ್ಲೆಲ್ಲ ಮೂಲಂಗಿ ಲಬಿಸುತ್ತಿದ್ದವು. ಪಾತ್ರೆ ತೊಳೆಯುವಲ್ಲಿ ನೀರು ನಿಲ್ಲುವುದರ ತಪ್ಪಿಸಲು ಕಾಲುವೆ ಮಾಡಿದಾಗ ಅಡುಗೆಗೆ ದಾರಾಳ ಮೂಲಂಗಿ ಲಬಿಸಿತು.  ಅವರ  ಮಿಶ್ರ   ಕೃಷಿಯಲ್ಲಿ   ಒಟ್ಟು   ಬೆಳೆ  ಖಂಡಿತ  ಹೆಚ್ಚು.        ಆಗ ಜತೆಗೆ ಒಬ್ಬ ಇಂಗ್ಲೀಷ್ ಬಲ್ಲ ಜಪಾನಿನ ಯುವಕನಿದ್ದನೆಂದು ನೆನಪು.

ದೀಪದ ಅಡಿಯಲ್ಲಿ ಕತ್ತಲೆ ಎನ್ನುವಂತೆ ಮಗ ಮಸಾತೊ ಆಗ ದಾರಾಳ ರಸಾಯನಿಕಗಳನ್ನು ಬಳಸುತ್ತಿದ್ದ. ಇನ್ನು ರಸಾಯನಿಕಕ್ಕೆ ವಿದಾಯ ಎಂದು ಇಂದು ಆಶ್ವಾಸನೆ ಕೊಟ್ಟಿದ್ದಾನೆ ಎಂದು ಫುಕುವೋಕರು ಅಲ್ಲಿಗೆ ಬಂದ ಮಹಿಳೆಯೊಬ್ಬರಲ್ಲಿ ಹೇಳಿಕೊಂಡಿದ್ದರು. ಆ ಬಗ್ಗೆ ಅವರಿಗೆ ನೋವಿದ್ದಂತೆ ಕಂಡಿತು.

ಪ್ರತ್ಯೇಕವಾಗಿ ಕೃಷಿ ಮಾಡುತ್ತಿದ್ದ ಅವರ ಮಗ ಮಸಾತೋ ಅವರ ಜತೆ ಅವರ ತೋಟಕ್ಕೆ ಹೋಗಿದ್ದೆ. ಅಲ್ಲಿ ಖಾಲಿ ಇದ್ದ ಯಂತ್ರ ಚಲಾಯಿಸಿ ಬಲಗೈ ಹೆಬ್ಬೆರಳು ತುಂಡಾಗಿ ಏಕಲವ್ಯ ಗುರುದಕ್ಷಿಣೆ ಸಲ್ಲಿಸಿದಂತಾಯಿತು ನನ್ನ ಕಥೆ. ಯಂತ್ರ ಚಾಲಿತ ಗರಗಸದಲ್ಲಿ ಪುಟ್ಟದೊಂದು ಅಪಘಾತವಾಗಿ ಆ ಬೆರಳಿನ ಹೊಲಿಗೆ ತೆಗೆಯುವ ವರೆಗೆ ನಾನು ಅಲ್ಲಿರಬೇಕಾಯಿತು.

ಅವರ ಹೆಚ್ಚಿನ ಅಲೋಚನೆಗಳಿಗೆ ನಾನು ಒಪ್ಪಿದರೂ ಪಶು ಸಂಗೋಪನೆ ಅಂದರೆ ಕೋಳಿ ಹಸುಗಳಿಗೆ ಮೇವು ಕೊಡುವುದರ ವಿರೋದಿಸುವ ಅವರ ವಾದ ಒಪ್ಪಲು ಸಾದ್ಯವಿಲ್ಲ. ದನ ಸಾಕಿದುದರಿಂದ ಬಾರತ ಮರುಬೂಮಿಯಾಯಿತು ಎಂದು ಬರೆದ ಅವರೊಡನೆ ಈ ಬಗ್ಗೆ ಚರ್ಚಿಸಲು ಆಸಕ್ತಿಯಿದ್ದರೂ ಸಾದ್ಯವಾಗಿರಲಿಲ್ಲ.

ಬಾರತಕ್ಕೆ ಬೇಟಿ ಕೊಡಲೂ ಅವರಿಗೆ ಬಹಳ ಆಸಕ್ತಿ ಇತ್ತು. ಈ ವಿಚಾರ ನಾನು ಬಾರತದಲ್ಲಿ ಅವರ ಪುಸ್ತಕ ಪ್ರಕಟಿಸಿದವರನ್ನೂ ಸೇರಿದಂತೆ ಹಲವರಲ್ಲಿ ಪ್ರಸ್ತಾಪಿಸಿದ್ದೆ. ಕೊನೆಗೆ ಅವರನ್ನು ಬಾರತಕ್ಕೆ ಬರಮಾಡಿಕೊಂಡದ್ದು ಸಾವಯುವ ವಲಯದಲ್ಲಿ ಹೆಚ್ಚು ಗುರುತಿಸಿಕೊಳ್ಳದ ಕಲಕತ್ತಾ ಮೂಲದವರಾದುದರಿಂದ ನನಗೆ ಮಾಹಿತಿ ದೊರಕುವಾಗ ಬಹಳ ತಡವಾಗಿತ್ತು. ಬೆಂಗಳೂರಿಗೆ  ಬಂದ  ಅವರನ್ನು   ಬೇಟಿಯಾಗುವ ಅವಕಾಶ ತಪ್ಪಿ ಹೋಗಿತ್ತು.

ಅವರು ಬರೇ ಕೃಷಿ ಚಿಂತಕರಲ್ಲ   ಅವರೊಂದು ಬಹುಮುಖ ಪ್ರತಿಭೆ.   ಕೃಷಿ ಬಗೆಗೆ ಮಾತ್ರವಲ್ಲ ತತ್ವಜ್ನಾನದ ಪುಸ್ತಕಗಳನ್ನೂ ಬರೆದಿದ್ದರು. . ಜಪಾನಿ ಬಾಷೆಯಲ್ಲಿ ಅವರು ಬರೆದ ತತ್ವಶಾಸ್ತ್ರ ಪುಸ್ತಕ  ಅಲ್ಲಿನ   ಪದವಿ ತರಗತಿಗೆ ಪಠ್ಯ ಪುಸ್ತಕವಾಗಿತ್ತಂತೆ. ಅದರ ಇಂಗ್ಲೀಷ್ ಪ್ರಕಟನೆಗೆ ಅವರು ಉತ್ಸುಕರಾಗಿದ್ದರೂ ಅವರ ಇಂಗ್ಲೀಷ್ ಪ್ರಕಾಶಕರಿಗೆ ಅದು ಮಾರಾಟವಾಗುವ ದೈರ್ಯ ಇದ್ದಂತಿರಲಿಲ್ಲ.    ಬಿಡುವಿನಲ್ಲಿ ನಮ್ಮ ಚುಟುಕಿನ ಜಪಾನಿ ರೂಪವಾದ ಹೈಕು ಬರೆಯುತ್ತಿದ್ದರು. ನಾನು ನಾವು ಕೊಳೆರೋಗಕ್ಕೆ ಬೊರ್ಡೋ ದ್ರಾವಣ ಸಿಂಪಡಿವುದಾಗಿ ಹೇಳಿದಾಗ ಪರವಾಗಿಲ್ಲ ಎಂದಿದ್ದರು.

ನನ್ನ ಪ್ರವಾಸದಲ್ಲೊಂದು ಕೊಂಡಿಯಾದ ಮತ್ತು ನಂತರದ ಹಲವು ಪ್ರಯೋಗಗಳಿಗೆ ಸ್ಪೂರ್ತಿಯಾದ ಅಗಲಿದ ಈ ಹಿರಿಯ ಚೇತನಕ್ಕೆ ನನ್ನ ನಮನಗಳು.

Tuesday, August 12, 2008

ಸುಧಾ ಹೇಳಿದ ನನ್ನ ಪ್ರವಾಸ ಕಥನ

                                                                           
ಸೈಕಲ್  ಒಂದು  ಸ್ವಾವಲಂಬನೆಯ  ಪ್ರತೀಕ.   ಸೈಕಲ್ ಸವಾರನಾದ     ನನಗೆ ಸಾದ್ಯವಾದಷ್ಟು ಸ್ವಾವಲಂಬನೆಯ ಹಂಬಲ.     ಹಿಂದೆ ಹಲವಾರು ಜನ ಪರದೇಶದ ಯಾತ್ರಿಕರು ಅವರ ಪ್ರವಾಸದ ಖರ್ಚನ್ನು ವಿವಿದ ರೀತಿಯಲ್ಲಿ ಸಂಪಾದಿಸಿಕೊಂಡ ವಿಚಾರ ಪುಸ್ತಕಗಳಲ್ಲಿ ಪತ್ರಿಕೆಗಳಲ್ಲಿ ಓದಿದ್ದೆ. ಪತ್ರಿಕೆಗಳಿಗೆ ಪ್ರವಾಸ ಕಥನ ಬರೆದು ಆ ಹಣದಲ್ಲೇ ಪ್ರವಾಸದ ಖರ್ಚು ಸುದಾರಿಸಿದವರು ಇದ್ದಾರೆ. ಯಾರಾದರೂ ಕೈಗಾರಿಕೆಗಳೋ ವ್ಯಾಪಾರಸ್ಥರೋ ಪ್ರಾಯೋಜಕರು ಸಿಕ್ಕರೆ ಅವರು ಪ್ರವಾಸದ ಒಂದಂಶ ಖರ್ಚು ಬರಿಸುವುದೂ ಉಂಟು.  ಆದರೆ ಯಾರೂ ತಮಗೆ ಪ್ರಯೋಜನ ಇಲ್ಲದೆ ಸಹಾಯ ಮಾಡುವುದಿಲ್ಲವೆಂದು ಮನಗಂಡಿದ್ದೆ. ಆಗ ನಮ್ಮಲ್ಲಿ ವಿದೇಶಿ ವಿನಿಮಯ ಕಾನೂನುಗಳು ಕಠೀಣವಾಗಿದ್ದ ಕಾಲ. ಹಾಗಾಗಿ ಇಲ್ಲಿಂದ ಹಣದ ವ್ಯವಸ್ಥೆ ಕಷ್ಟವೆಂದು ಕ್ರಮೇಣ ನನಗೆ ಅರ್ಥವಾಯಿತು.
                                                                             

ನನ್ನ ಪ್ರವಾಸದ ಖರ್ಚು ಯಾವ್ಯಾವ ರೀತಿಯಲ್ಲಿ ಉಳಿಸಬಹುದು ಅಥವಾ ಸಂಪಾದಿಸಬಹುದೆಂಬ ಆಲೋಚನೆಯಲ್ಲಿ ಮುಳುಗಿದ್ದೆ. ಆ ಸಮಯದಲ್ಲಿ ಶ್ರೀ ಪಡ್ರೆಯವರನ್ನು ಸಂಪರ್ಕಿಸಿ ಪ್ರವಾಸ ಕಥೆಯನ್ನು ವಾರಪತ್ರಿಕೆಗಳಿಗೆ ಮಾರಿ ಹಣ ಸಂಪಾದಿಸುವ ಸಾದ್ಯತೆಗಳ ಬಗ್ಗೆ ಚರ್ಚಿಸಿದ್ದೆ.  ನಾನು ಲೇಖನ ಹಾಗೂ ಚಿತ್ರಗಳ ಕಳುಹಿಸಿದರೂ ಪತ್ರಿಕೆಯವರು ಹಣವನ್ನು ನೇರವಾಗಿ ಪರದೇಶದಲ್ಲಿ ಪ್ರಯಾಣಿಸುತ್ತಿರುವ ನನಗೆ ಕಳುಹಿಸುವ ಸಾದ್ಯತೆ ಇಲ್ಲ. ಮೇಲಾಗಿ ನಮ್ಮ ಪತ್ರಿಕೆಗಳು ಕೊಡುವ ಚಿಲ್ಲರೆ ಸಂಬಾವನೆಗೋಸ್ಕರ ಅವರ ಹಿಂದೆ ಹೋಗುವುದು ವ್ಯರ್ಥ ಎಂದು ಕೊನೆಗೆ ತೀರ್ಮಾನಿಸಿದೆ. ಪರದೇಶದಲ್ಲಿರುವಾಗ ನನ್ನಲಿರುವ ಪ್ರತಿ ರೂಪಾಯಿಯೂ ಅಮೂಲ್ಯ ಆಗಿರುವಾಗ  ಪತ್ರಿಕೆಗಳಿಗೋಸ್ಕರ ಶ್ರಮ ಮತ್ತು ಹಣ ಎರಡೂ ಖರ್ಚು ಮಾಡುವುದರಲ್ಲಿ ಪ್ರಯೋಜನವಿಲ್ಲವೆಂದು ಅನ್ನಿಸಿತು.
                                                                                       
ಅನಂತರದ  ಒಂದು ವರುಷದ ಪ್ರವಾಸ ಮುಗಿಸಿ ಊರಿಗೆ ಬಂದ ನಾನು ನನ್ನ ಪಾಡಿಗೆ ಓಡಾಡಿಕೊಂಡಿದ್ದೆ. . ನಾನು ವಾಪಾಸಾದ ಸುಳಿವು ಸಿಕ್ಕ ಶ್ರೀ ಪಡ್ರೆಯವರು ನಮ್ಮಲ್ಲಿಗೆ ಬಂದು ಈ ಲೇಖನ ಬರೆದು ಸುಧಾಕ್ಕೆ ಕಳುಹಿಸಿದರು. ನನಗೆ ಆಗ ಬಾಯಿ ತೆರೆಯಲೂ ಅಳುಕು. ಕಾರಣ  ಹಲವಾರು ಜನ ದಕ್ಷಿಣ ಬಾರತದ ಅದರಲ್ಲೂ ಕರ್ನಾಟಕದ ಹುಡುಗರು ಸೈಕಲು ಪ್ರವಾಸದ ನೆಪದಲ್ಲಿ ಯುರೋಪ್ ಅಮೇರಿಕಕ್ಕೆ ಹೋಗಿ ಅಲ್ಲಿ ಉಳಕೊಂಡ ಉದಾಹರಣೆ ಕೇಳಿದ್ದೆ ಹಾಗೂ ಕುರುಹುಗಳ ಕಂಡಿದ್ದೆ. ಅದರಿಂದಾಗಿ ಅನಂತರ ನನ್ನಂತಹವರು ಹೋದಲ್ಲೆಲ್ಲ ಸಂಶಯ ದೃಷ್ಟಿ ಎದುರಿಸಬೇಕಾಗುತ್ತದೆ. ನಾನು ವಾಪಾಸು ಬಾರತಕ್ಕೆ ಹೋಗುವವ ಎಂದರೆ ಯಾರೂ ನಂಬದ ಪರೀಸ್ಥಿತಿಯನ್ನು  ಅವರು  ಉಂಟುಮಾಡಿದ್ದರು. ಹಾಗಾಗಿ ನನ್ನ ಹೆಜ್ಜೆ ಅನುಸರಿಸಿ ಇನ್ನಷ್ಟು ಜನ ಉತ್ತಮ ಬವಿಷ್ಯ ಅರಸಿಕೊಂಡು ಹೋಗುವವರು ಸೈಕಲ್ ನೆಪವಾಗಿಸುವುದು ನನಗೆ ನಿಜಕ್ಕೂ ಬೇಡವಾಗಿತ್ತು.
ಹೋದಲ್ಲೆಲ್ಲ ಅಲ್ಲಿನ ಜನ ಅಪರಿಚಿತನಾದ ನನಗೆ ಕೊಟ್ಟ ಅತಿಥಿ ಸತ್ಕಾರದಿಂದಾಗಿ
ಪ್ರಪಂಚದಲ್ಲಿ ಎಲ್ಲೆಡೆ ನಮಗಿನ್ನೂ ಪರಿಚಯವಾಗದ ಗೆಳೆಯರಿದ್ದಾರೆ
ಎನ್ನುವ ಮಾತನ್ನು  ಒಬ್ಬ  ಬಾರತೀಯನಾಗಿ   ಕನ್ನಡಿಗನಾಗಿ   ನಮ್ಮವರ ಎದುರು ಹೇಳುವ ಕರ್ತವ್ಯ ನನಗಿದೆಯೆಂದೂ ಅನಿಸುತಿತ್ತು.   ಹೀಗೆ   ಸುಧಾ ನನ್ನ ಪ್ರವಾಸದ ಬಗೆಗೊಂದು ಶ್ರೀಪಡ್ರೆಯವರ ಸಚಿತ್ರ ಲೇಖನ ಪ್ರಕಟಿಸಿತು.
                                                                                
ಈ    ಲೇಖನದಿಂದಾಗಿ  ಊರ ಪರವೂರ ಹಲವಾರು ಜನ ನನ್ನ ಗುರುತಿಸಿದರು. 6ನೇಯ ತರಗತಿಯ ಗಣಿತ ಪಠ್ಯಪುಸ್ತಕದಲ್ಲಿ ಸರಾಸರಿಗೆ ಉದಾಹರಣೆ ಕೊಡುವಾಗ ಗೋವಿಂದ ಬಟ್ ಸೈಕಲಿಸಿದ್ದು ದಿನಕ್ಕೆ ಸರಾಸರಿ 80 ಕಿಲೋಮೀಟರ್ ಎಂದಿತು. ಬಲಗೈ ಹಬ್ಬೆರಳಿನ ತುದಿ ಅಂಶ ಜಪಾನಿನಲ್ಲಿ ತುಂಡಾಗಿ ಉಳಿದ ಸುದ್ದಿ ನಾನು ನೈಸರ್ಗಿಕ ಕೃಷಿಕ ಫುಕೋಕರನ್ನು ಕಂಡು ಬಂದಿರುವುದನ್ನು ಸಾರಿತು. ಜನರ ಗಮನ ನನ್ನ ಮೇಲೆ ಬಿದ್ದು ಸಾಕಷ್ಟು ತೊಂದರೆಯನ್ನೂ ಅನುಬವಿಸಿದ್ದೇನೆ. ನೋಡಲೆಂದು ಪಡಕೊಂಡ ಫೋಟೊಗಳನ್ನು ಕೈಚಳಕದಲ್ಲಿ ಎದುರೆದುರೇ ಜೇಬಿಗಿಳಿಸಿದವರಿದ್ದಾರೆ. . ಓದಲೆಂದು ಕೊಂಡುಹೋದ ಸಾವಯುವ ಕೃಷಿ ಪುಸ್ತಕಗಳ  ನಾನು ಪುನ: ಕಂಡಿಲ್ಲ.  ಈ  ಪ್ರವಾಸದಿಂದ  ನನ್ನ    ದೃಷ್ಟಿಕೋನ  ವಿಶಾಲವಾಯಿತು  ಮತ್ತು    ನಾನು  ಈಗ  ಪ್ರಪಂಚದ ಹಲವು  ಮೂಲೆಗಳಲ್ಲಿ  ವೈಯುಕ್ತಿಕವಾಗಿ  ಬಲ್ಲ  ಗೆಳೆಯರಿದ್ದಾರೆ  ಎನ್ನಬಹುದು. 

Saturday, August 09, 2008

ಕೈದಿಗಳ ಗೂಡಿನಲ್ಲಿ ಕೂಡಿಡುವ ಅಮೇರಿಕದ ಸೇನೆ

ಹಲವಾರು ಡೈರಿ ಪಾರ್ಮ್ ಗಳನ್ನು ಯುರೋಪಿನಲ್ಲಿ ಸಂದರ್ಶಿಸಿದ ನನಗೆ ಗಂಡು ಕರುಗಳ ವಿಧಿ ಬಗ್ಗೆ ಕುತೂಹಲ. ಅವರಲ್ಲಿ ಪ್ರಶ್ನಿಸಲು ಅದನ್ನು ವಾರಕ್ಕೊಮ್ಮೆ ಬರುವ ಗಂಡುಕರು ಸಾಕುವವರಿಗೆ   ಆ  ವಾರ  ಹುಟ್ಟಿದ   ಕೊಡುತ್ತೇವೆ ಎನ್ನುವ ಉತ್ತರ ಸಿಗುತಿತ್ತು. ಕೊನೆಗೆ ನೆದರ್ ಲಾಂಡ್ ನಲ್ಲಿ ಈ ಗಂಡು ಕರುಗಳ ಉಳಿಕೆ ಜೀವನ ಕಣ್ಣಾರೆ ಕಾಣುವ ಅವಕಾಶ ದೊರಕಿತು.

ಅದು ನಿಜಕ್ಕೂ ಘೋರವಾದ ಚಿತ್ರ. ಅವುಗಳನ್ನು ಅಲುಗಾಡಲೂ ಸಾದ್ಯವಿಲ್ಲದ ಪೆಟ್ಟಿಗೆಗಳಲ್ಲಿ ಕೂಡಿಡುತ್ತಾರೆ. ಅನಾವಶ್ಯಕ ಕಾಲಾಡಿಸಿ ಕೊಬ್ಬು ಕರಗಿಸುವುದು ಬೇಡವೆಂದು ಸಾಕುವವರ ಉದ್ದೇಶ. ಕೋಳಿ ಸಾಕಣೆಯಲ್ಲೂ ಇದೇ ಚಿತ್ರ ಕಂಡರೂ ಕೋಳಿಗಳೊಂದಿಗೆ ಬಾವನಾತ್ಮಕ ಸಂಬಂದ ನಮಗೆ ಇರುವುದಿಲ್ಲ. ಕರುಗಳ ಉಳಿಕೆ ಜೀವನ ಇಂತಹ ಗೂಡಿನಲ್ಲಿ ನಿಂತುಕೊಂಡು ತಿನ್ನುವುದು ಸಗಣಿ ಹಾಕುವುದಷ್ಟೇ ಕೆಲಸ.     ಕರುಗಳ  ಕಣ್ಣಲ್ಲಿ  ಕಾಣುವ  ನೋವು, ಕೆಲವು ಕ್ಷಣ ಕೇಳಿದ  ರೋದನೆ ತಿಂಗಳುಗಟ್ಟಲೆ ಮನಸ್ಸಿನಿಂದ ಮಾಸದು.

ಇರಾಕಿನಲ್ಲಿ ಅಮೇರಿಕದ ಸೇನೆಯೂ ಕೈದಿಗಳನ್ನು ಇಂತಹ ಮೂರಡಿ ಉದ್ದ ಮೂರಡಿ ಅಗಲದ  ಹಾಗೂ   ಆರಡಿ  ಎತ್ತರದ    ಅಲುಗಾಡಲೂ ಸಾದ್ಯವಿಲ್ಲದಂತಹ ಚಿಕ್ಕ ಗೂಡಿನಲ್ಲಿ ನಿಲ್ಲಿಸುವ ಕ್ರೂರ ಸುದ್ದಿ ಇದೀಗ ಬೆಳಕಿಗೆ ಬಂದಿದೆ. ಸುದ್ದಿ ಬೆಳಕಿಗೆ ಬಂದ ನಂತರ ಸಂದರ್ಶನವೊಂದರಲ್ಲಿ ಅಂತಹ ಕ್ರೂರ ಸನ್ನಿವೇಷ ಎನಿಲ್ಲ, ಹೆಚ್ಚೆಂದರೆ ಒಮ್ಮೆಗೆ ಹನ್ನೆರಡು ಘಂಟೆ ನಿಲ್ಲಿಸಲಾಗುತ್ತದೆ ಹಾಗೂ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಈ ಪಂಜರಗಳ ಗಮನಿಸಲಾಗುತ್ತದೆ ಎನ್ನುವ ಸಮರ್ಥನೆ ನೀಡಲಾಗಿದೆ.

ಅಮೇರಿಕದವರೊಬ್ಬರು ಮಾಹಿತಿ ಹಕ್ಕಿನಲ್ಲಿ ಕೋರಿದ ಪ್ರಕಾರ ಸೇನೆ ಅಂತಹ ಆದರೆ ಅದಕ್ಕಿಂತ ದೊಡ್ಡ ಪೆಟ್ಟಿಗೆಗಳ ಕೆಲವು ಅಸ್ಪಷ್ಟ ಬಾವಚಿತ್ರಗಳ ಇತ್ತೀಚೆಗೆ ಕಳುಹಿಸಿಕೊಟ್ಟಿದೆ.  ಅಮೇರಿಕದ  ಈ  ಕೃತ್ಯ  ಖಂಡನೀಯ.  ಆದರೆ  ಈ  ಕೈದಿಗಳ  ಪರೀಸ್ಥಿತಿ  ಪಶ್ಚಿಮದ  ದೇಶದಲ್ಲಿ    ಜನಿಸುವ     ಗಂಡುಕರುಗಳಿಗೆ   ಬಿನ್ನವಲ್ಲ    ಅನ್ನಿಸುತ್ತದೆ.   .

Tuesday, August 05, 2008

ವಿದ್ಯುತ್ ಬಳಕೆಯ ಗಮನಿಸಲು

ನಾವು ವಾಹನಕ್ಕೆ ಮೀಟರ್ ಅಳವಡಿಸುತ್ತೇವೆ. ಪ್ರಯಾಣಿಸುವಾಗ ಆಗಾಗ ಅದರ ಮೇಲೆ ಗಮನಿಸುತ್ತೇವೆ. ವೇಗ ಹೆಚ್ಚಾಯಿತು ಎನ್ನಿಸುವಾಗ ನಿದಾನಿಸುತ್ತೇವೆ. ಪೆಟ್ರೊಲ್ ಮೈಲೇಜಿನ ಬಗೆಗೆ ಕಣ್ಣಿಡುತ್ತೇವೆ.


ಇದೇ ರೀತಿಯ ಕಾಳಜಿ ನಮ್ಮ ವಿದ್ಯುತ್ ಉಪಯೋಗದ ಬಗೆಗೆ ನಾವು ತೋರಿಸುವುದಿಲ್ಲ. ತೋರಿಸಲು ಸಾದ್ಯವಾಗುವುದೂ ಇಲ್ಲ. ವಿದ್ಯುತ್ ಅಳೆಯುವ ಹತ್ಯಾರುಗಳೂ ನಮ್ಮಲ್ಲಿ ಹುಡುಕುವುದೇ ಕಷ್ಟ.   ಬಳಕೆ ಬಗೆಗೆ ನಮಗೆ ಈಗ ಚಿತ್ರಣ ಸಿಗುವುದು ವಿದ್ಯುತ್ ಮಾಪಕ ಓದುವವರು ಬಂದು ಬಿಲ್ ಕೊಡುವಾಗಲೇ. ಬದಲಾಗಿ  ಉಪಯೋಗದ  ಬಗ್ಗೆ  ಕ್ಷಣ ಕ್ಷಣಕ್ಕೂ ಚಿತ್ರಣ ಸಿಕ್ಕರೆ ಖಂಡಿತ ಉಳಿತಾಯ ಸಾದ್ಯ.

ಈ ಮದ್ಯೆ ನಾನು ಅಮೇರಿಕದಲ್ಲಿ ಸಿಗುವ ಒಂದು ಮೀಟರ್ ಬಗ್ಗೆ ಕುಶಿ ಪಟ್ಟು ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ. ಇದು ಎರಡು ಹಂತದಲ್ಲಿ ಅಬಿವೃದ್ದಿ ಹೊಂದಿದ ಸಲಕರಣೆ ಎನ್ನಬಹುದು. ಮೊದಲಿಗೆ ನೇರವಾಗಿ ಲೈನಿಗೆ ಸಿಕ್ಕಿಸುವ ಒಂದು ಮೀಟರ್ ಬಂತು. ಅದು ಹೆಚ್ಚು ಸುದಾರಣೆಗೊಂಡ ನಮ್ಮಲ್ಲಿರುವ ಅಂಪ್ಸ್-ಮೀಟರಿಗೆ ಹೋಲಿಸಬಹುದು.

ಎರಡನೇಯ ತಲೆಮಾರಿನ ಸುದಾರಣೆಯಲ್ಲಿ  ಮೇಲಿನ ಚಿತ್ರದಲ್ಲಿರುವಂತೆ  ನಿಮ್ಮ ಮೀಟರ್ ಮೇಲೆ    ಒಂದು ಚಿಕ್ಕ ಮಾಹಿತಿ ಸಂಗ್ರಾಹಕ ಮತ್ತು ಮನೆಯಲ್ಲಿ ಅನುಕೂಲವಿರುವಲ್ಲಿ ಅಳವಡಿಸುವ ಕೆಳಗಿನ  ಚಿತ್ರದಲ್ಲಿರುವಂತಹ   ಡಿಸ್ ಪ್ಲೆ.   ಕಾರ್ಡ್ ಲೆಸ್ ಪೋನ್ ಕೆಲಸ ಮಾಡುವಂತೆ ಸಂಗ್ರಾಹಕದಿಂದ ಮಾಹಿತಿ ನಿರಂತರವಾಗಿ ಹರಿದು ಬರುತ್ತದೆ. ಇದನ್ನು ನಮಗೆ ಅನುಕೂಲವಾಗುವ ಗೋಡೆಯಲ್ಲಿ ಅಳವಡಿಸಬಹುದು, ಮೇಜಿನ ಮೇಲೆ ಇಡಬಹುದು.  ಒಮ್ಮೆ ಇದನ್ನು ನೋಡಲು ನಾವು ಆ ಕ್ಷಣ ಉಪಯೋಗಿಸುವ ವಿದ್ಯುತ್ ಘಂಟೆಗೆ ಎಷ್ಟು ಹಣವಾಗುತ್ತದೆ ಎನ್ನುವುದನ್ನೊ ಅದು ಸ್ಪಷ್ಟವಾಗಿ ತೋರಿಸುತ್ತದೆ. ಸ್ವಾಬಾವಿಕವಾಗಿ   ಪೋಲಾಗುವಲ್ಲಿ   ಬ್ರೇಕ್  ಹಾಕಲು  ಅರಿವು ಹಾಗೂ   ಪ್ರೇರಣೆ  ದೊರಕುತ್ತದೆ. 

ಅಮೇರಿಕದಲ್ಲಿ ಇದರ ಬೆಲೆ ಸುಮಾರು ಐದು ಮುಕ್ಕಾಲು ಸಾವಿರ ರೂಪಾಯಿ ಅನ್ನಬಹುದು ( USD 135) ಅಲ್ಲಾದರೆ ಉಳಿತಾಯವೇ ಈ ಹಣವನ್ನು ದುಡಿದುಕೊಡುತ್ತದಂತೆ.  ನಮ್ಮಲ್ಲೂ   ಇದು  ಕೈಗೆಟಕುವ  ಬೆಲೆಗೆ   ಬೇಗನೆ  ಸಿಗುವಂತಾಗಲಿ. 

ವಿವರಗಳಿಗೆ : http://fivepercent.us/2008/07/28/cent-a-meter-centometer-or-power-cost-meter-pays-for-itself/

Saturday, August 02, 2008

ರಾಮರ ಸೇತುವೆಯೋ, ಅಲ್ಲಲ್ಲ

ಚಿತ್ರದಲ್ಲಿ ಕಾಣುವುದು ಶ್ರಿ ರಾಮಚಂದ್ರನೂ ವಾನರ ಸೇನೆಯೂ ಕಟ್ಟಿದ ರಾಮರ ಸೇತುವೆಯೋ ? ದೂರದಲ್ಲಿ ಕಾಣುವುದು ಶ್ರಿ ಲಂಕೆಯೋ ? ಸೇತುವೆ ಮೇಲಿರುವುದು ಪಿರಬಾಕರನ ಅನುಯಾಯಿ ತಮಿಳು ಹುಲಿಗಳೋ ? ಸುಗ್ರೀವನ ವಾನರ ಸೇನೆಯೋ ? ಪ್ರಶ್ನೆಗಳೆಲ್ಲ ನಿಮ್ಮ ಮನಸಿನಲ್ಲಿ ಮೂಡಿರಬಹುದು. ಕಾಂಗ್ರೇಸಿನವರು ಇದು ಸತ್ಯ ಚಿತ್ರವಲ್ಲ, ಹಿಂದುತ್ವದವರ ಪಿತೂರಿ ಅಂಶ ಎನ್ನಬಹುದು.   ಈಗ ರಾಮರ ಸೇತುವೆ ವಿವಾದ ಸುಪ್ರಿಮ್ ಕೋರ್ಟ್ನನಲ್ಲಿದ್ದು ಕೆಂದ್ರ ಸರಕಾರ ದಿನಕ್ಕೊಂದು ನಮೂನೆಯ ವಾದ ಮಂಡಿಸುತ್ತಿದೆ. ಸಂಪೂರ್ಣ ಗೊಂದಲಮಯವಾದ ಈ ವಿವಾದದ ಮದ್ಯೆ ಈ ವಿಷಯಕ್ಕೆ ಹೋಲಿಕೆಯ ನನಗೆ ಕಂಡ  ಒಂದು ನೈಸರ್ಗಿಕ ಉದಾಹರಣೆ.

ಇದು ದಕ್ಷಿಣ ಕೊರಿಯಾದ ಜಿಂಡೊ ಎಂಬಲ್ಲಿ ಕಂಡು ಬರುವ ನೈಸರ್ಗಿಕ ಮರಳ ದಾರಿ.  ಸುಮಾರು ಎರಡು ಮುಕ್ಕಾಲು ಕಿಲೋಮೀಟರ್ ಉದ್ದದ ಈ ಸೇತುವೆ  ದಾರಿ   ವರುಷಕ್ಕೆ ಒಂದೆರಡು ಬಾರಿ ಸಮುದ್ರದಿಂದ ಮೇಲೇಳುತ್ತದೆ.   ಜ್ಯೋತಿಷಿಗಳೂ   ವಿಜ್ನಾನಿಗಳೂ    ಸಮುದ್ರದ  ಇಳಿತವನ್ನು   ಮೊದಲೇ      ನಿರ್ಣಯಿಸುತ್ತಾರಂತೆ.    ಅಲೆಗಳ ಮಟ್ಟ ಕೆಳಗಿರುವ ಸುಮಾರು ಒಂದು ಘಂಟೆ ಸಮಯ ಈ ದಾರಿಯಲ್ಲಿ ನಡೆಯುತ್ತಾ ಆಚೆ ದಡ ತಲಪಬಹುದು.   ಇದೊಂದು ಹಬ್ಬವನ್ನಾಗಿ   ಅವರೀಗ    ಆಚರಿಸುತ್ತಾರೆ.  ಮೊಸೆಸ್ ಪವಾಡ ಎಂದು ಕರೆಯಲ್ಪಡುವ ಈ  ವರ್ಷ   ಎಪ್ರಿಲ್   17 ಕ್ಕೆ  ನಡೆದ   ಈ   ಹಬ್ಬಕ್ಕೆ ಪ್ರಪಂಚದ ಹಲವು ಮೂಲೆಗಳಿಂದ ಜನ ದಾವಿಸಿ ಬರುವರಂತೆ.

ಇಂದು  ಕಾಣಸಿಗುವ  ಕುರುಹುಗಳ    ಗಮನಿಸಿದರೆ ಎರಡು ಮೂರು ಶತಮಾನಗಳ ಹಿಂದೆ ಬಾರತ ಮತ್ತು ಲಂಕೆಯ ಮದ್ಯೆ ಈ  ರೀತಿಯ ದಾರಿ   ಖಂಡಿತ    ಇದ್ದಿರಬಹುದು. ನಮ್ಮ  ಪೂರ್ವಿಕರು  ನಡೆದು  ಶ್ರಿಲಂಕೆಗೆ  ಹೋದರು  ಎಂದು  ಇತಿಹಾಸದ ಪುಟ  ತೆರೆದಿಡುವ  ತಮಿಳರಿದ್ದಾರಂತೆ.     ಕ್ರಮೇಣ    ಪ್ರಕೃತಿಕ ಕಾರಣಗಳಿಗೆ ಈ  ಬಾರತಕ್ಕೆ  ಶ್ರಿಲಂಕವನ್ನು  ಲಿಂಕಿಸುವ  ಈ    ಶ್ರಿ ರಾಮಚಂದ್ರ ರಾಜ ರಸ್ತೆ ಸಮುದ್ರ ಪಾಲಾಗಿರಬಹುದು.    ರಾಜಕೀಯ ಕಾರಣಗಳಿಂದ ವಿಷಯ ಎಷ್ಟು ಗೊಜಲಾಗಿದೆ ಎಂದರೆ  ಎಲ್ಲರೂ  ಒಪ್ಪುವಂತಹ    ಸತ್ಯ ಸಂಗತಿ ಮುಂದಿನ ದಿನಗಳಲ್ಲಿ ಹೊರಬರಲು ಸಾದ್ಯವೇ ಇಲ್ಲ  ಎನ್ನುವುದು  ಖಚಿತ.  .