ಎಪ್ಪತ್ತರ ದಶಕದಲ್ಲಿ ೧೨೦೦ ಹುಲಿಗಳು ಮಾತ್ರ ಬಾರತದ ಕಾಡುಗಳಲ್ಲಿ ಉಳಿದುಕೊಂಡಿದ್ದವು. ಇಪ್ಪತ್ತು ವರ್ಷದಲ್ಲಿ ಅದು ೩೫೦೦ ಕ್ಕೇರಿದರೂ ನಂತರದ ಇಪ್ಪತ್ತು ವರ್ಷಗಳಲ್ಲಿ ಬಹಳಷ್ಟು ಕುಸಿದಿದೆ. ೨೦೦೮ರ ಹುಲಿಗಣತಿ ಪ್ರಕಾರ ಬರೇ ೧೪೧೧ ಹುಲಿಗಳು ಉಳಿದುಕೊಂಡಿವೆ. ಇದರಲ್ಲಿ ಕೃತಕವಾಗಿ ನಿರ್ಮಿಸಲ್ಪಟ್ಟ ಕಾಲಿನ ಅಚ್ಚುಗಳೂ ಸೇರಿವೆ. ಕೆಲವು ರಕ್ಷಿತಾರಣ್ಯದಲ್ಲಿ (?) ಸಂಪೂರ್ಣ ಕಾಣೆಯಾಗಿದೆ. ಹುಲಿಗಳು ಬೇಟೆಗಾರರಿಗೆ ಆಹುತಿಯಾಗುವುದು ಅಧಿಕಾರಿಗಳ ನಿರ್ವಹಣಾ ವೈಫಲ್ಯ ಹೊರತು ನೈಸರ್ಗಿಕ ಕಾರಣಗಳಲ್ಲ.
ಈಗ ಬಾರತ, ಚೀನಾ ಮತ್ತು ಸೈಬೀರಿಯಾದಲ್ಲಿ ಹುಲಿಗಳು ನಿರ್ನಾಮವಾಗುತ್ತಿದ್ದರೆ ಅಮೇರಿಕದಲ್ಲಿ ಅದೊಂದು ಬಹು ಬೇಡಿಕೆಯ ಅಹಂಕಾರದ, ಪ್ರತಿಷ್ಠೆಯ ವಸ್ತುವಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಇಂದು ಅಮೇರಿಕದಲ್ಲಿ ಹನ್ನೆರಡು ಸಾವಿರ ಹುಲಿಗಳಿವೆ.. ಆದರೆ ಇಡೀ ಜಗತ್ತಿನ ಕಾಡುಗಳಲ್ಲಿ ಹುಡುಕಿದರೆ ಇದರ ಅರ್ಧದಷ್ಟೂ ಇಲ್ಲ. ಇಪ್ಪತೈದು ಸಾವಿರ ರೂಪಾಯಿ ಕೊಟ್ಟರೆ ಕಿತ್ತಳೆ ಬಣ್ಣದ ಹುಲಿ ಮರಿಯನ್ನು ಖರೀದಿಸಬಹುದು. ಹೌದು. ಅಮೇರಿಕದ ಟೆಕ್ಸಾಸ್ ಪ್ರಾಂತ್ಯದಲ್ಲಿ ಹುಲಿ ಮರಿ ಖರೀದಿ ಕಾನೂನುಬದ್ದವಾಗಿರುತ್ತದೆ.
ಅಮೇರಿಕದಲ್ಲಿ ಹೇಗೆ ಇಷ್ಟೋಂದು ಹುಲಿಗಳು ಎನ್ನುವ ಪ್ರಶ್ನೆ ಸ್ವಾಭಾವಿಕ. ಅಲ್ಲಿ ಇತ್ತೀಚಿನ ವರೆಗೆ
ಹುಲಿ ಮರಿ ವ್ಯವಹಾರ ಲಾಭದಾಯಕ. ವರ್ಷಕ್ಕೆ ಎರಡು ಬಾರಿ ಎಂಟು ಮರಿ ಹಾಕುವ ಹುಲಿಮರಿಗಳು - ಬಿಳಿ ಬಣ್ಣವಾದರೆ ಸಾಕಿದವನಿಗೆ ಮೂವತ್ತು ಲಕ್ಷ ರೂಪಾಯಿ ತರಬಲ್ಲದು. ಈ ಹುಲಿಮರಿಗಳನ್ನು ದೇಶಾದ್ಯಂತ ಪ್ರದರ್ಶನಕ್ಕೆ ಕೊಂಡು ಹೋಗುವ ಚಿಕ್ಕ ಪುಟ್ಟ ಸಂಸ್ಥೆಗಳಿವೆ. ಹುಲಿಮರಿಯೊಂದಿಗೆ ಅಂದರೆ ಅದನ್ನು ಅಪ್ಪಿಕೊಳ್ಳುವ ಬಾವಚಿತ್ರಕ್ಕೆ ಕೇವಲ ಒಂದು ಸಾವಿರ ರೂಪಾಯಿ. ಅಲ್ಲಿನ ಕಾನೂನು ಪ್ರಕಾರ ಆರು ತಿಂಗಳಿಂದ ಹೆಚ್ಚು ಪ್ರಾಯದ ಮರಿಗಳನ್ನು ಇದಕ್ಕೆ ಉಪಯೋಗಿಸುವಂತಿಲ್ಲ. ಅವು ಮನುಷ್ಯರಿಗೆ ಅಪಾಯಕಾರಿಯಾಗಬಹುದು. ಆಗ ಈ ಸಾವಿರಾರು ಜನರೊಂದಿಗೆ ಪೋಟೊ ತೆಗಿಸಿಕೊಂಡ ಮರಿ ಹುಲಿಯನ್ನು ಬಿಸಾಕಿ ಇನ್ನೊಂದು ಪುಟ್ಟ ಮರಿಯನ್ನು ಪಡಕೊಳ್ಳುತ್ತಾರೆ. ಟೆಕ್ಸಾಸಿನಲ್ಲಿ ಸುಮಾರು ಇಪ್ಪತ್ತು ಜನ ಇಂತಹ ದೊಂಬರಾಟದವರಿದ್ದಾರೆ.
ಕ್ರಿಸ್ಮಸ್ ಹಬ್ಬಕ್ಕೆ ಮಕ್ಕಳಿಗೆ ಪುಟಾಮಿ ಬೆಕ್ಕಿನ ಮರಿ ಎನ್ನುವ ಚಟ ಇಂದು ಹುಲಿಮರಿ ಎನ್ನುವ ವರೆಗೆ ತಲಪಿದೆ. ನಿಜ, ಪುಟಾಣಿ ಹುಲಿ ಮರಿಗಳು ಚಂದ ಕಾಣುತ್ತವೆ. ಆದರೆ ೩೦೦ ಕಿಲೊ ತೂಗಿ ದಿನಕ್ಕೆ ಹತ್ತು ಕಿಲೊ ಆಹಾರ ಅಂದರೆ ಮಾಂಸ ಅಪೇಕ್ಷಿಸುವಾಗ ಯಜಮಾನ ಸುಸ್ತಾಗುತ್ತಾನೆ. ಇಂದು ಮೃಗಾಲಯಗಳು ಹುಲಿಯನ್ನು ದಾನ ಮಾಡುತ್ತೇನೆ ಎಂದರೆ no thanks ಎನ್ನುತ್ತಿವೆ. ಬೇಡವಾದ ಹುಲಿಗಳು ನೆಲಮಾಳಿಗೆಯಲ್ಲಿ ಕಟ್ಟಿ ಹಾಕಲ್ಪಟ್ಟಿವೆ, ಪುಟ್ಟಬೋನಿನಲ್ಲಿ ಸೊರಗುತ್ತಿವೆ, ರಸ್ತೆಯಲ್ಲಿ ಅಡ್ಡಾಡುತ್ತಿವೆ. ವಾಹನದ ಅಡಿಗೆ ಸಿಕ್ಕ ಹುಲಿಗಳ ಉದಾಹರಣೆ ಇದೆ.
ಪದ್ಯಹೇಳುತ್ತಿದ್ದ ದೀ| ಮೈಕಲ್ ಜಾಕ್ಸನ್ ಗುದ್ದುಗಾರ ಮೈಕ್ ಟೈಸನ್ ಇವರೆಲ್ಲ ಹುಲಿ ಒಡೆಯರಾಗಿದ್ದವರು. ಕೆಲವು ವರ್ಷ ಹಿಂದೆ ಟಾರ್ಜನ್ ಪಾತ್ರದ ನಟನ ಹುಲಿ ತಪ್ಪಿಸಿಕೊಂಡು ಇಪ್ಪತ್ತಾರು ಗಂಟೆ ಸತಾಯಿಸಿ ಕೊನೆಗೆ ಗುಂಡಿಗೆ ಎದೆಯೊಡ್ಡಿತು. ಹಲವು ಮಾದಕ ವಸ್ತು ಕಳ್ಳಸಾಗಾಣಿಕೆಗಾರರಿಗೆ ಹುಲಿಗಳೇ ಕಾವಲು ನಾಯಿಗಳು. ಅಂತಹ ಕಳ್ಳಸಾಗಾಣಿಕೆದಾರರಿಂದ ಜಪ್ತಿಯಾದ ಹುಲಿ ಸಿಂಹ ಮತ್ತು ಕರಡಿ ಮರಿಗಳು ಜತೆಯಾಗಿಯೇ ಬೆಳೆದವು. ಒಂದೇ ಆವರಣದಲ್ಲಿ ವಾಸಿಸುವ ಎಂಟು ವರ್ಷದ ಈ ತ್ರಿಮೂರ್ತಿಗಳು ಭಾರಿ ದೋಸ್ತಿಗಳು.
ಅಮೇರಿಕದಲ್ಲಿ ಈ ಅನಾಥ ಪ್ರಾಣಿಗಳ ಸಾಕಲು ಹಲವು ಖಾಸಗಿ ಅಭಯದಾಮಗಳಿವೆ. ಇದೊಂದು ರೀತಿಯಲ್ಲಿ ವೃದ್ದಾಶ್ರಮಗಳೆನ್ನಬಹುದು. ಅವು ಬದುಕಿರುವ ವರೆಗೆ ಸಾಕುತ್ತಾರೆ. ಕೊಲ್ಲುವುದಿಲ್ಲ, ಮರಿ ಹಾಕಿಸುವುದಿಲ್ಲ, ಖರೀದಿ ಮಾರಾಟ ಯಾವುದೂ ಅಲ್ಲಿ ನಡೆಯುವುದಿಲ್ಲ. ಇಂತಹ ಒಂದು ಅಭಯದಾಮದವರು ನಾವು ವರ್ಷಕ್ಕೆ ೧೫೦ ಕ್ಕೂ ಮಿಕ್ಕಿ ಪ್ರಾಣಿಗಳ ತಿರಸ್ಕರಿಸುತ್ತೇವೆ. ಪ್ರಾಣಿಗಳ ಜತೆಗೆ ಅದನ್ನು ಪ್ರೀತಿಯಿಂದ ಸಾಕಿದವರ ಧನ ಸಹಾಯ ಅಪೇಕ್ಷಿಸುತ್ತೇವೆ ಅಂತಹ ಪ್ರಾಣಿಗಳ ಅವುಗಳ ಕೊನೆಗಾಲದ ವರೆಗೆ ಸಾಕುತ್ತೇವೆ ಎನ್ನುತ್ತಾರೆ.
ಬಿಳಿ ಹುಲಿ ಮರಿಗೆ ಬೇಡಿಕೆ ಹೆಚ್ಚು. ಎಲ್ಲವೂ ಸುಮಾರು ಐವತ್ತು ವರ್ಷ ಹಿಂದೆ ಅಮೇರಿಕಕ್ಕೆ ತಂದ ಬಿಳಿ ಹುಲಿಯೊಂದರ ಸಂತತಿ. ಹತ್ತಿರದ ಸಂಬಂಧದಲ್ಲೇ ಬೆಳೆಸಿದ ಸಂಬಂಧ ಎನ್ನುವ ಇವುಗಳಿಗೆ ಅನುವಂಶಿಕ ಆರೋಗ್ಯ ಸಮಸ್ಯೆಗಳು ಹೆಚ್ಚು. ಮೆಳ್ಳೆಗಣ್ಣಿನ ಚಿತ್ರದಲ್ಲಿರುವ ಬಿಳಿ ಹುಲಿಯೂ ಅನುವಂಶಿಕ ತೊಂದರೆಗಳ ಅನುಭವಿಸುತ್ತದೆ. ಕುರುಡುತನ, ಕಿಡ್ನಿ ಸಮಸ್ಯೆ ಇತ್ಯಾದಿ ಸಾಮಾನ್ಯವಾಗುತ್ತಿದೆಯಂತೆ. ಆನುವಂಶಿಕ ತೊಂದರೆ ಇರಬಹುದಾದ ಈ ಹುಲಿಗಳಲ್ಲಿ ಮರಿ ಹಾಕಿಸುವಂತಿಲ್ಲ. ಮನುಷ್ಯನ ಹೆದರಿಕೆ ಇರದ ಮತ್ತು ಕಾಡಿನ ನಡುವಳಿಕೆ ಅರಿಯದ ಇವುಗಳನ್ನು ಸಂಪೂರ್ಣ ಕಾಡು ಪ್ರಾಣಿಯನ್ನಾಗಿ ಮಾಡುವುದು ಕಷ್ಟ. ಆದರೆ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಸ್ಥಳಾಂತರ ಮಾಡುವ ಬದಲು ಪ್ರವಾಸಿಗಳಿಗೆ ತೋರಿಸಲು ಇವುಗಳು ಸಾಕು. ಆಹಾರ ಹಾಕುತ್ತಾ ಇದ್ದರಾಯಿತು.
ಪರದೇಶದಿಂದ ತಂದು ಸಾಕುವುದು ಹೊಸ ವಿಚಾರವಲ್ಲ. ಈಗ ಬನ್ನೇರುಘಟ್ಟ ಉದ್ಯಾನದಲ್ಲಿರುವ ಹುಲಿಗಳೆಲ್ಲವೂ ಯುರೊಪಿನಲ್ಲಿ ಸಾಕುಪ್ರಾಣಿಗಳಾಗಿದ್ದವು. ಅದೇ ರೀತಿಯಲ್ಲಿ ಪನ್ನ ಪಾರ್ಕಿನಲ್ಲಿ ಹುಲಿಗಳು ನೀರ್ನಾಮ ಹೊಂದಿದ್ದರೆ ಒಂದು ತನ್ನದೇ ತಿರುಗಾಟದ ವಲಯ ಹೊಂದಿದ್ದ ಹುಲಿಯನ್ನು ಹಿಡಿದು ಇನ್ನೊಂದು ಕಡೆ ಬಿಡುವುದರ ಬದಲು ಬಿಸಾಕು ದರದಲ್ಲಿ ಅಮೇರಿಕದಲ್ಲಿ ಸಿಗುವ ಅನಾಥ ಹುಲಿಯನ್ನು ಅಲ್ಲಿ ಬಿಡಬಹುದಾಗಿತ್ತು. ಅಂದರೆ ಒಂದು ಉದ್ಯಾನವನದಿಂದ ಇನ್ನೊಂದಕ್ಕೆ ಸ್ಥಳಾಂತರಿಸುವ ಬದಲು ಅಮೇರಿಕದಿಂದ ಅನಾಥ ಹುಲಿಗಳನ್ನು ತಂದು ಬಿಟ್ಟರೆ ಉತ್ತಮ ಪರಿಹಾರವಾಗಬಹುದು. ಒಂದುವರೆ ಕೋಟಿ ಎರಡು ಹುಲಿಗಳ ಸ್ಥಳಾಂತರಕ್ಕೆ ಖರ್ಚು ಮಾಡುವ ಸರಕಾರ ಈ ಅನಾಥ ಹುಲಿಗಳ ತರಿಸಿ ಸಾಕಬಹುದು.
ಬಾರತ ಹಾಗೂ ಇನ್ನಿತರ ಚೀನಾದ ಆಸುಪಾಸಿನ ದೇಶಗಳಿಗೆ ಈ ಅನಾಥ ಹುಲಿಗಳ ಸ್ಥಳಾಂತರಗೊಳಿಸಿದರೆ ಕಾಡಿನಲ್ಲಿರುವ ಹುಲಿಗಳು ಉಳಿಯಬಹುದು. ಹುಲಿ ಕಳ್ಳಸಾಗಾಣಿಕೆಯ ಮೂಲವೇ ಚೀನಾದಲ್ಲಿರುವ ಅಪಾರ ಬೇಡಿಕೆ. ಏಕಚಕ್ರಾಪುರದವರು ಬಕಾಸುರನೊಂದಿಗೆ ಮಾಡಿಕೊಂಡ ಒಪ್ಪಂದದಂತೆ ನಮ್ಮ ಹುಲಿಕಳ್ಳರಿಗೂ ವರ್ಷಕ್ಕೆ ನಾಲ್ಕು ಕೊಡುತ್ತೇವೆ ಅನ್ನಬಹುದು. ಮತದಾರರಾದ ಅವರೂ ಬದುಕಬೇಕಲ್ಲಾ | ಜೈರಾಮ ಎಲ್ಲಿದ್ದಿಯಾ ಮಹರಾಯ ? ನಮ್ಮಲ್ಲಿ ಹುಲಿ ಕೊಂದವರಿಗೆ ಕಾನೂನು ಒಳಪಡುವುದಕ್ಕೆ ಶಿಕ್ಷೆಯಾಗುವುದಕ್ಕೆ ಜಾತಿ ಪ್ರಶ್ನೆ ಎದುರಾಗುತ್ತದೆ.
ಮೂರು ತಿಂಗಳ ಹಿಂದೆ ನಮ್ಮ ಪರಿಸರ ಸಚಿವರು ಹುಲಿ ಸಂತತಿ ರಕ್ಷಣೆಯ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಸಾರುವ ಉದ್ದೇಶದಿಂದ 2010ನೇ ಇಸವಿಯನ್ನು ಭಾರತ ಅಂತರರಾಷ್ಟ್ರೀಯ ಹುಲಿ ವರ್ಷವಾಗಿ ಆಚರಿಸಲಿದೆ ಎಂದು ಅಪ್ಪಣೆ ಕೊಡಿಸಿದ್ದಾರೆ. ಮುಂದಿನ ವರ್ಷ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ವರ್ಷಾಚರಣೆಗೆ ವಿದ್ಯುಕ್ತ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಅದೇ ವರ್ಷ ನವೆಂಬರ್ನಲ್ಲಿ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ. ವಿಶ್ವದ ಶೇ60ರಷ್ಟು ಹುಲಿಗಳು ಭಾರತದಲ್ಲಿದ್ದು ವರ್ಷಾಚರಣೆಗೆ ಭಾರತದ ನಾಯಕತ್ವವೇ ಸಮಂಜಸ ಎಂದು ಜೈರಾಂ ರಮೇಶ್ ತಿಳಿಸಿದ್ದಾರೆ. ಹುಲಿ ಸಂರಕ್ಷಣೆಗೆ ಭಾರತ ಕೈಗೊಂಡಷ್ಟು ಕ್ರಮಗಳನ್ನು ಬೇರಾವುದೇ ದೇಶ ಕೈಗೊಂಡಿಲ್ಲ ಎಂದು ರಾಜಕಾರಣಿ ರಮೇಶ್ ತಿಳಿಸಿದ್ದಾರೆ.
ಪ್ರಾಣಿಗಳಲ್ಲಿ ದಾರಿ ಹುಡುಕುವ ಸಾಮರ್ಥ್ಯ ಅಪಾರ. ಅರುವತ್ತು ವರ್ಷ ಹಿಂದಿನ ನನ್ನ ಹಿರಿಯರ ಅನುಭವ. ಆಗ ನನ್ನ ತಂದೆ ಪಟ್ಟಣದಲ್ಲಿ ವಕೀಲರಾಗಿ ಕೆಲಸಮಾಡುತ್ತಿದ್ದರು. ಪಟ್ಟಣದಲಿರುವ ಅವರ ವಸತಿಗೆ ಒಂದು ಹಾಲು ಕರೆಯುವ ಎಮ್ಮೆ ಹಳ್ಳಿಮನೆಯಿಂದ ತರುತ್ತಿದ್ದರು. ಅದು ಬತ್ತಿದ ನಂತರ ಮತ್ತೊಂದು ಎಮ್ಮೆ ತರುತ್ತಿದ್ದರಂತೆ. ಒಮ್ಮೆ ಹಳ್ಳಿಮನೆಯಲ್ಲಿ ಮೇಯಲು ಬಿಟ್ಟ ಮುಂಚಿನ ದಿನ ಹಳ್ಳಿಗೆ ಬಂದ ಎಮ್ಮೆ ಸಂಗಾತಿಗಳನ್ನೆಲ್ಲ ಕರಕೊಂಡು ಮೂವತ್ತು ಕಿಮಿ ದೂರದ ಪಟ್ಟಣಕ್ಕೆ ಬಂದಾಗ ಪಟ್ಟಣದ ಮನೆಯಲ್ಲಿ ಅವನ್ನು ಕಟ್ಟಿಹಾಕಲು ಹಗ್ಗವಿಲ್ಲ, ಹಾಲು ಕರೆಯಲು ಪಾತ್ರೆಯಿಲ್ಲ. ಹಳ್ಳಿಯಲ್ಲಿ ಬೆಳಗಿನ ಚಾ ಕುಡಿಯಲೂ ಸಹಾ ಹಾಲಿಲ್ಲ ಎನ್ನುವ ಸನ್ನಿವೇಶವಾಗಿತ್ತಂತೆ.